Udyoga Parva: Chapter 108

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೦೮

ಗರುಡನು ಗಾಲವನಿಗೆ ಪಶ್ಚಿಮ ದಿಕ್ಕನ್ನು ವರ್ಣಿಸಿದುದು (೧-೨೧).

05108001 ಸುಪರ್ಣ ಉವಾಚ|

05108001a ಇಯಂ ದಿಗ್ದಯಿತಾ ರಾಜ್ಞೋ ವರುಣಸ್ಯ ತು ಗೋಪತೇಃ|

05108001c ಸದಾ ಸಲಿಲರಾಜಸ್ಯ ಪ್ರತಿಷ್ಠಾ ಚಾದಿರೇವ ಚ||

ಸುಪರ್ಣನು ಹೇಳಿದನು: “ಇದು ಗೋಪತಿ ವರುಣ ರಾಜನ ದಿಕ್ಕು. ಸಲಿಲರಾಜನು ಸದಾ ಇಲ್ಲಿಯೇ ಪ್ರತಿಷ್ಠನಾಗಿದ್ದಾನೆ.

05108002a ಅತ್ರ ಪಶ್ಚಾದಹಃ ಸೂರ್ಯೋ ವಿಸರ್ಜಯತಿ ಭಾಃ ಸ್ವಯಂ|

05108002c ಪಶ್ಚಿಮೇತ್ಯಭಿವಿಖ್ಯಾತಾ ದಿಗಿಯಂ ದ್ವಿಜಸತ್ತಮ||

ದ್ವಿಜಸತ್ತಮ! ದಿನದ ಪಶ್ಚಾತ್ ಸೂರ್ಯನು ಸ್ವಯಂ ಕಿರಣಗಳನ್ನು ಅಲ್ಲಿ ವಿಸರ್ಜಿಸುವುದರಿಂದ ಈ ದಿಕ್ಕು ಪಶ್ಚಿಮವೆಂದು ವಿಖ್ಯಾತವಾಗಿದೆ.

05108003a ಯಾದಸಾಮತ್ರ ರಾಜ್ಯೇನ ಸಲಿಲಸ್ಯ ಚ ಗುಪ್ತಯೇ|

05108003c ಕಶ್ಯಪೋ ಭಗವಾನ್ದೇವೋ ವರುಣಂ ಸ್ಮಾಭ್ಯಷೇಚಯತ್||

ಜಲಚರರ ಮತ್ತು ಸಲಿಲಗಳ ರಕ್ಷಣೆಗಾಗಿ ಭಗವಾನ್ ಕಶ್ಯಪ ದೇವನು ವರುಣನನ್ನು ಇಲ್ಲಿ ಅಭಿಷೇಕಿಸಿದನು.

05108004a ಅತ್ರ ಪೀತ್ವಾ ಸಮಸ್ತಾನ್ವೈ ವರುಣಸ್ಯ ರಸಾಂಸ್ತು ಷಟ್|

05108004c ಜಾಯತೇ ತರುಣಃ ಸೋಮಃ ಶುಕ್ಲಸ್ಯಾದೌ ತಮಿಸ್ರಹಾ||

ಅಲ್ಲಿ ವರುಣನ ಎಲ್ಲ ಆರು ರಸಗಳನ್ನು ಕುಡಿದು ತಮಸ್ಸನ್ನು ಕಳೆಯುವ ಸೋಮನು ಶುಕ್ಲಪಕ್ಷದ ಆದಿಯಲ್ಲಿ ತರುಣನಾಗಿ ಹುಟ್ಟುತ್ತಾನೆ.

05108005a ಅತ್ರ ಪಶ್ಚಾತ್ಕೃತಾ ದೈತ್ಯಾ ವಾಯುನಾ ಸಮ್ಯತಾಸ್ತದಾ|

05108005c ನಿಃಶ್ವಸಂತೋ ಮಹಾನಾಗೈರರ್ದಿತಾಃ ಸುಷುಪುರ್ದ್ವಿಜ||

ಈ ದಿಕ್ಕಿನಲ್ಲಿ ದೈತ್ಯರು ವಾಯುವಿನಿಂದ ಕಟ್ಟಿ ಎಸೆಯಲ್ಪಟ್ಟಿದ್ದರು. ದ್ವಿಜ! ಆ ಭಿರುಗಾಳಿಗೆ ಸಿಲುಕಿ ನಿಟ್ಟುಸಿರು ಬಿಡುತ್ತಾ ಅವರು ಇಲ್ಲಿಯೇ ನಿದ್ದೆ ಮಾಡಿದರು.

05108006a ಅತ್ರ ಸೂರ್ಯಂ ಪ್ರಣಯಿನಂ ಪ್ರತಿಗೃಹ್ಣಾತಿ ಪರ್ವತಃ|

05108006c ಅಸ್ತೋ ನಾಮ ಯತಃ ಸಂಧ್ಯಾ ಪಶ್ಚಿಮಾ ಪ್ರತಿಸರ್ಪತಿ||

ಅಲ್ಲಿ ಸಾಯಂಕಾಲದ ಸಂಧ್ಯಾ ಸಮಯವನ್ನು ಒದಗಿಸುವ ಅಸ್ತ ಎಂಬ ಹೆಸರಿನ ಪರ್ವತವು ಸೂರ್ಯನನ್ನು ಪ್ರಣಯಿಸಿ ಸ್ವೀಕರಿಸುತ್ತದೆ.

05108007a ಅತೋ ರಾತ್ರಿಶ್ಚ ನಿದ್ರಾ ಚ ನಿರ್ಗತಾ ದಿವಸಕ್ಷಯೇ|

05108007c ಜಾಯತೇ ಜೀವಲೋಕಸ್ಯ ಹರ್ತುಮರ್ಧಮಿವಾಯುಷಃ||

ದಿವಸವು ಕಳೆದು ಹೋದಾಗ ಅಲ್ಲಿ ರಾತ್ರಿ ಮತ್ತು ನಿದ್ದೆಗಳು ಜೀವಲೋಕದ ಅರ್ಧ ಆಯುಸ್ಸನ್ನು ಕದಿಯಲು ಪಸರಿಸುತ್ತವೆ.

05108008a ಅತ್ರ ದೇವೀಂ ದಿತಿಂ ಸುಪ್ತಾಮಾತ್ಮಪ್ರಸವಧಾರಿಣೀಂ|

05108008c ವಿಗರ್ಭಾಮಕರೋಚ್ಚಕ್ರೋ ಯತ್ರ ಜಾತೋ ಮರುದ್ಗಣಃ||

ಅಲ್ಲಿ ಗರ್ಭವನ್ನು ಧರಿಸಿ ಮಲಗಿದ್ದ ದಿತಿ ದೇವಿಯ ಗರ್ಭವನ್ನು ಶಕ್ರನು ವಿಭಜನೆ ಮಾಡಿದನು ಮತ್ತು ಅವುಗಳಿಂದ ಮರುದ್ಗಣರು ಜನಿಸಿದರು.

05108009a ಅತ್ರ ಮೂಲಂ ಹಿಮವತೋ ಮಂದರಂ ಯಾತಿ ಶಾಶ್ವತಂ|

05108009c ಅಪಿ ವರ್ಷಸಹಸ್ರೇಣ ನ ಚಾಸ್ಯಾಂತೋಽಧಿಗಮ್ಯತೇ||

ಅಲ್ಲಿ ಹಿಮವತ್ ಪರ್ವತದ ಬೇರುಗಳು ಮಂದರ ಪರ್ವತದ ವರೆಗೂ ಶಾಶ್ವತವಾಗಿ ಪಸರಿಸಿವೆ. ಸಾವಿರ ವರ್ಷಗಳು ಪ್ರಯಾಣಿಸಿದರೂ ಈ ಬೇರುಗಳ ಕೊನೆಯನ್ನು ತಲುಪಲಾರೆವು.

05108010a ಅತ್ರ ಕಾಂಚನಶೈಲಸ್ಯ ಕಾಂಚನಾಂಬುವಹಸ್ಯ ಚ|

05108010c ಉದಧೇಸ್ತೀರಮಾಸಾದ್ಯ ಸುರಭಿಃ ಕ್ಷರತೇ ಪಯಃ||

ಅಲ್ಲಿ ಕಾಂಚನಶೈಲದ ಕಾಂಚನ ಸರೋವರದ ತೀರವನ್ನು ಸೇರಿ ಸುರಭಿಯು ಹಾಲನ್ನು ಸುರಿಸಿದಳು.

05108011a ಅತ್ರ ಮಧ್ಯೇ ಸಮುದ್ರಸ್ಯ ಕಬಂಧಃ ಪ್ರತಿದೃಶ್ಯತೇ|

05108011c ಸ್ವರ್ಭಾನೋಃ ಸೂರ್ಯಕಲ್ಪಸ್ಯ ಸೋಮಸೂರ್ಯೌ ಜಿಘಾಂಸತಃ||

ಅಲ್ಲಿ ಸಮುದ್ರದ ಮಧ್ಯದಲ್ಲಿ ಸೋಮ-ಸೂರ್ಯರನ್ನು ನುಂಗಲು ಕಾತರನಾಗಿರುವ ಸೂರ್ಯನಂತೆಯೇ ಇರುವ ಸ್ವರ್ಭಾನು (ರಾಹು) ವಿನ ಶಿರವಿಲ್ಲದ ದೇಹವು ಕಾಣುತ್ತದೆ.

05108012a ಸುವರ್ಣಶಿರಸೋಽಪ್ಯತ್ರ ಹರಿರೋಮ್ಣಃ ಪ್ರಗಾಯತಃ|

05108012c ಅದೃಶ್ಯಸ್ಯಾಪ್ರಮೇಯಸ್ಯ ಶ್ರೂಯತೇ ವಿಪುಲೋ ಧ್ವನಿಃ||

ಇಲ್ಲಿ ಅದೃಶ್ಯನೂ, ಅಪ್ರಮೇಯನೂ, ಹಸಿರುಬಣ್ಣದ ಕೂದಲಿರುವವನೂ ಆದ ಸುವರ್ಣಶಿರಸನು ದೊಡ್ಡ ಧ್ವನಿಯಲ್ಲಿ ವೇದಗಳನ್ನು ಹಾಡುವುದು ಕೇಳಿಬರುತ್ತದೆ.

05108013a ಅತ್ರ ಧ್ವಜವತೀ ನಾಮ ಕುಮಾರೀ ಹರಿಮೇಧಸಃ|

05108013c ಆಕಾಶೇ ತಿಷ್ಠ ತಿಷ್ಠೇತಿ ತಸ್ಥೌ ಸೂರ್ಯಸ್ಯ ಶಾಸನಾತ್||

ಅಲ್ಲಿ ಹರಿಮೇಧಸನ ಕುಮಾರಿ ಧ್ವಜವತೀ ಎಂಬ ಹೆಸರಿನವಳು “ನಿಲ್ಲು! ನಿಲ್ಲು!” ಎಂಬ ಸೂರ್ಯನ ಶಾಸನದಂತೆ ಅಲ್ಲಿಯೇ ನಿಂತುಬಿಟ್ಟಿದ್ದಾಳೆ.

05108014a ಅತ್ರ ವಾಯುಸ್ತಥಾ ವಹ್ನಿರಾಪಃ ಖಂ ಚೈವ ಗಾಲವ|

05108014c ಆಹ್ನಿಕಂ ಚೈವ ನೈಶಂ ಚ ದುಃಖಸ್ಪರ್ಶಂ ವಿಮುಂಚತಿ|

05108014e ಅತಃ ಪ್ರಭೃತಿ ಸೂರ್ಯಸ್ಯ ತಿರ್ಯಗಾವರ್ತತೇ ಗತಿಃ||

ಗಾಲವ! ಅಲ್ಲಿ ವಾಯು, ಅಗ್ನಿ, ನೀರು, ಆಕಾಶ, ದಿನ, ರಾತ್ರಿಗಳು ದುಃಖಸ್ಪರ್ಷದಿಂದ ಮುಕ್ತವಾಗುತ್ತವೆ. ಅಲ್ಲಿಂದ ಮುಂದೆ ಸೂರ್ಯನ ಗತಿಯು ವಕ್ರವಾಗುತ್ತದೆ.

05108015a ಅತ್ರ ಜ್ಯೋತೀಂಷಿ ಸರ್ವಾಣಿ ವಿಶಂತ್ಯಾದಿತ್ಯಮಂಡಲಂ|

05108015c ಅಷ್ಟಾವಿಂಶತಿರಾತ್ರಂ ಚ ಚಂಕ್ರಮ್ಯ ಸಹ ಭಾನುನಾ|

05108015e ನಿಷ್ಪತಂತಿ ಪುನಃ ಸೂರ್ಯಾತ್ಸೋಮಸಂಯೋಗಯೋಗತಃ||

ಅಲ್ಲಿ ಎಲ್ಲ ನಕ್ಷತ್ರಗಳೂ ಸೂರ್ಯಮಂಡಲವನ್ನು ಪ್ರವೇಶಿಸುತ್ತವೆ. ಭಾನುವಿನೊಂದಿಗೆ ಇಪ್ಪತ್ತೆಂಟು ರಾತ್ರಿಗಳನ್ನು ಕಳೆದು, ಸೂರ್ಯನ ಸಂಗವನ್ನು ತೊರೆದು ಪುನಃ ಸೋಮನ ಸಂಗದಲ್ಲಿ ಬರುತ್ತವೆ.

05108016a ಅತ್ರ ನಿತ್ಯಂ ಸ್ರವಂತೀನಾಂ ಪ್ರಭವಃ ಸಾಗರೋದಯಃ|

05108016c ಅತ್ರ ಲೋಕತ್ರಯಸ್ಯಾಪಸ್ತಿಷ್ಠಂತಿ ವರುಣಾಶ್ರಯಾಃ||

ಅಲ್ಲಿ ನಿತ್ಯವೂ ಸಾಗರವನ್ನು ಹುಡುಕಿಕೊಂಡು ಹೋಗುವ ನದಿಗಳು ಹುಟ್ಟುತ್ತವೆ. ಇಲ್ಲಿ ಮೂರು ಲೋಕಗಳ ನೀರುಗಳೂ ವರುಣನ ಆಶ್ರಯದಲ್ಲಿವೆ.

05108017a ಅತ್ರ ಪನ್ನಗರಾಜಸ್ಯಾಪ್ಯನಂತಸ್ಯ ನಿವೇಶನಂ|

05108017c ಅನಾದಿನಿಧನಸ್ಯಾತ್ರ ವಿಷ್ಣೋಃ ಸ್ಥಾನಮನುತ್ತಮಂ||

ಅಲ್ಲಿ ಪನ್ನಗರಾಜ ಅನಂತನ ಮನೆಯಿದೆ. ಅಲ್ಲಿ ಅನಾದಿನಿಧನ ವಿಷ್ಣುವಿನ ಅನುತ್ತಮ ಸ್ಥಾನವೂ ಇದೆ.

05108018a ಅತ್ರಾನಲಸಖಸ್ಯಾಪಿ ಪವನಸ್ಯ ನಿವೇಶನಂ|

05108018c ಮಹರ್ಷೇಃ ಕಶ್ಯಪಸ್ಯಾತ್ರ ಮಾರೀಚಸ್ಯ ನಿವೇಶನಂ||

ಅಲ್ಲಿ ಅನಲಸಖ ಪವನನ ಮನೆಯಿದೆ. ಅಲ್ಲಿ ಮಹರ್ಷಿ ಕಶ್ಯಪ ಮತ್ತು ಮಾರೀಚನ ನಿವೇಶನಗಳೂ ಇವೆ.

05108019a ಏಷ ತೇ ಪಶ್ಚಿಮೋ ಮಾರ್ಗೋ ದಿಗ್ದ್ವಾರೇಣ ಪ್ರಕೀರ್ತಿತಃ|

05108019c ಬ್ರೂಹಿ ಗಾಲವ ಗಚ್ಚಾವೋ ಬುದ್ಧಿಃ ಕಾ ದ್ವಿಜಸತ್ತಮ||

ಗಾಲವ! ದ್ವಿಜಸತ್ತಮ! ಇದು ಪಶ್ಚಿಮ ಮಾರ್ಗ. ಈ ದಿಕ್ಕನ್ನು ನಿನಗೆ ವರ್ಣಿಸಿದ್ದೇನೆ. ನಿನಗೆ ಎಲ್ಲಿಗೆ ಹೋಗುವ ಬುದ್ಧಿಯಿದೆ? ಹೇಳು!”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಅಷ್ಟಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಎಂಟನೆಯ ಅಧ್ಯಾಯವು.

Related image

Comments are closed.