Udyoga Parva: Chapter 105

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೦೫

ಕೇಳಿದ ಗುರುದಕ್ಷಿಣೆಯನ್ನು ಹೇಗೆ ತರಬಲ್ಲೆ ಎಂದು ಉದ್ವಿಗ್ನನಾದ ಗಾಲವನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿ ವಿಷ್ಣುವಿನ ಮೊರೆಹೊಗಲು, ಗರುಡನು ಬಂದು ನಿನ್ನನ್ನು ಎಲ್ಲಿ ಬೇಕಾದರಲ್ಲಿಗೆ ಕರೆದುಕೊಂಡು ಹೋಗಿ ಸಹಾಯಮಾಡುತ್ತೇನೆಂದು ಹೇಳಿದುದು (೧-೧೯).

05105001 ನಾರದ ಉವಾಚ|

05105001a ಏವಮುಕ್ತಸ್ತದಾ ತೇನ ವಿಶ್ವಾಮಿತ್ರೇಣ ಧೀಮತಾ|

05105001c ನಾಸ್ತೇ ನ ಶೇತೇ ನಾಹಾರಂ ಕುರುತೇ ಗಾಲವಸ್ತದಾ||

ನಾರದನು ಹೇಳಿದನು: “ಧೀಮತ ವಿಶ್ವಾಮಿತ್ರನು ಹೀಗೆ ಹೇಳಲು ಗಾಲವನಿಗೆ ನಿಲ್ಲಲೂ, ಮಲಗಲೂ, ಊಟಮಾಡಲೂ ಆಗಲಿಲ್ಲ.

05105002a ತ್ವಗಸ್ಥಿಭೂತೋ ಹರಿಣಶ್ಚಿಂತಾಶೋಕಪರಾಯಣಃ|

05105002c ಶೋಚಮಾನೋಽತಿಮಾತ್ರಂ ಸ ದಹ್ಯಮಾನಶ್ಚ ಮನ್ಯುನಾ||

ಅವನು ಸ್ವಲ್ಪವೇ ಸಮಯದಲ್ಲಿ ಚಿಂತಾಶೋಕಪರಾಯಣನಾಗಿ ಹಳದಿಯಾಗಿ, ಶೋಕಿಸುತ್ತ ಸಿಟ್ಟಿನಿಂದ ಉರಿಯುತ್ತಾ ಅಸ್ತಿಯಂತಾದನು.

05105003a ಕುತಃ ಪುಷ್ಟಾನಿ ಮಿತ್ರಾಣಿ ಕುತೋಽರ್ಥಾಃ ಸಂಚಯಃ ಕುತಃ|

05105003c ಹಯಾನಾಂ ಚಂದ್ರಶುಭ್ರಾಣಾಂ ಶತಾನ್ಯಷ್ಟೌ ಕುತೋ ಮಮ||

“ಶ್ರೀಮಂತ ಮಿತ್ರರನ್ನು ಎಲ್ಲಿ ಹುಡುಕಲಿ? ಹಣವನ್ನು ಎಲ್ಲಿಂದ ತರಲಿ? ಉಳಿತಾಯವಾದರೂ ಎಲ್ಲಿದೆ? ಚಂದ್ರನಂತೆ ಬಿಳುಪಾದ ಎಂಟುನೂರು ಕುದುರೆಗಳನ್ನು ನಾನು ಎಲ್ಲಿಂದ ತರಲಿ?

05105004a ಕುತೋ ಮೇ ಭೋಜನಶ್ರದ್ಧಾ ಸುಖಶ್ರದ್ಧಾ ಕುತಶ್ಚ ಮೇ|

05105004c ಶ್ರದ್ಧಾ ಮೇ ಜೀವಿತಸ್ಯಾಪಿ ಚಿನ್ನಾ ಕಿಂ ಜೀವಿತೇನ ಮೇ||

ನನಗೆ ಊಟದಲ್ಲಿ ಆಸಕ್ತಿ ಎಲ್ಲಿದೆ? ನನಗೆ ಸುಖದಲ್ಲಿ ಆಸಕ್ತಿ ಎಲ್ಲಿದೆ? ಜೀವನದಲ್ಲಿಯೇ ನನಗೆ ಶ್ರದ್ಧೆ ಎಲ್ಲಿದೆ? ನಾನಿನ್ನು ಏಕೆ ಜೀವಿಸಿರಬೇಕು?

05105005a ಅಹಂ ಪಾರಂ ಸಮುದ್ರಸ್ಯ ಪೃಥಿವ್ಯಾ ವಾ ಪರಂ ಪರಾತ್|

05105005c ಗತ್ವಾತ್ಮಾನಂ ವಿಮುಂಚಾಮಿ ಕಿಂ ಫಲಂ ಜೀವಿತೇನ ಮೇ||

ಸಮುದ್ರದ ಆಚೆ ಹೋಗಿ ಅಥವಾ ಭೂಮಿಯ ತುದಿಗೆ ಹೋಗಿ ನನ್ನನ್ನು ಮುಕ್ತಗೊಳಿಸುತ್ತೇನೆ. ನಾನು ಜೀವಿಸಿ ಏನು ಪ್ರಯೋಜನ?

05105006a ಅಧನಸ್ಯಾಕೃತಾರ್ಥಸ್ಯ ತ್ಯಕ್ತಸ್ಯ ವಿವಿಧೈಃ ಫಲೈಃ|

05105006c ಋಣಂ ಧಾರಯಮಾಣಸ್ಯ ಕುತಃ ಸುಖಮನೀಹಯಾ||

ಧನವಿಲ್ಲದವನಿಗೆ, ಹಣವನ್ನು ಸಂಪಾದಿಸದವನಿಗೆ, ವಿವಿಧ ಫಲಗಳಿಂದ ವಂಚಿತನಾದವನಿಗೆ, ಸಾಲವನ್ನು ಹೊತ್ತಿರುವವನಿಗೆ ಸುಖವು ಎಲ್ಲಿಂದ ಬರುತ್ತದೆ?

05105007a ಸುಹೃದಾಂ ಹಿ ಧನಂ ಭುಕ್ತ್ವಾ ಕೃತ್ವಾ ಪ್ರಣಯಮೀಪ್ಸಿತಂ|

05105007c ಪ್ರತಿಕರ್ತುಮಶಕ್ತಸ್ಯ ಜೀವಿತಾನ್ಮರಣಂ ವರಂ||

ಸುಹೃದಯರು ಪ್ರೀತಿಯಿಂದ ನೀಡಿದ ಸಹಾಯಧನವನ್ನು ಬಳಸಿ ಅದನ್ನು ಹಿಂದಿರುಗಿಸಲು ಅಶಕ್ತನಾದವನಿಗೆ ಜೀವಿಸಿರುವುದಕ್ಕಿಂತ ಸಾಯುವುದೇ ಮೇಲು.

05105008a ಪ್ರತಿಶ್ರುತ್ಯ ಕರಿಷ್ಯೇತಿ ಕರ್ತವ್ಯಂ ತದಕುರ್ವತಃ|

05105008c ಮಿಥ್ಯಾವಚನದಗ್ಧಸ್ಯ ಇಷ್ಟಾಪೂರ್ತಂ ಪ್ರಣಶ್ಯತಿ||

ಮಾಡುತ್ತೇನೆ ಎಂದು ಹೇಳಿ ಕರ್ತವ್ಯವನ್ನು ಮಾಡದೇ ಇದ್ದವನು ಸುಳ್ಳುಹೇಳಿದುದಕ್ಕೆ ಉರಿದು ಸಂಪೂರ್ಣವಾಗಿ ನಾಶಹೊಂದುತ್ತಾನೆ.

05105009a ನ ರೂಪಮನೃತಸ್ಯಾಸ್ತಿ ನಾನೃತಸ್ಯಾಸ್ತಿ ಸಂತತಿಃ|

05105009c ನಾನೃತಸ್ಯಾಧಿಪತ್ಯಂ ಚ ಕುತ ಏವ ಗತಿಃ ಶುಭಾ||

ಸುಳ್ಳುಹೇಳಿದವನಿಗೆ ರೂಪವಿರುವುದಿಲ್ಲ, ಸುಳ್ಳುಹೇಳಿದವನಿಗೆ ಸಂತತಿಯಿರುವುದಿಲ್ಲ, ಸುಳ್ಳುಹೇಳಿದವನಿಗೆ ಅಧಿಕಾರವಿರುವುದಿಲ್ಲ. ಶುಭ ಗತಿಯಾದರೂ ಎಲ್ಲಿರುತ್ತದೆ?

05105010a ಕುತಃ ಕೃತಘ್ನಸ್ಯ ಯಶಃ ಕುತಃ ಸ್ಥಾನಂ ಕುತಃ ಸುಖಂ|

05105010c ಅಶ್ರದ್ಧೇಯಃ ಕೃತಘ್ನೋ ಹಿ ಕೃತಘ್ನೇ ನಾಸ್ತಿ ನಿಷ್ಕೃತಿಃ||

ಕೃತಘ್ನನಿಗೆ ಯಶಸ್ಸು ಎಲ್ಲಿ ಸಿಗುತ್ತದೆ? ಸ್ಥಾನವೆಲ್ಲಿ? ಸುಖವೆಲ್ಲಿ? ಅಶ್ರದ್ಧೆಯುಳ್ಳವನು ಕೃತಘ್ನನೇ ಸರಿ. ಕೃತಘ್ನನಿಗೆ ಮೋಕ್ಷವಿಲ್ಲ.

05105011a ನ ಜೀವತ್ಯಧನಃ ಪಾಪಃ ಕುತಃ ಪಾಪಸ್ಯ ತಂತ್ರಣಂ|

05105011c ಪಾಪೋ ಧ್ರುವಮವಾಪ್ನೋತಿ ವಿನಾಶಂ ನಾಶಯನ್ಕೃತಂ||

ಧನವಿಲ್ಲದಿದ್ದರೆ ಜೀವವಿಲ್ಲದಂತೆ. ಆ ಪಾಪಿಗೆ ಪಾಪದ ತಂತ್ರಣವೆಲ್ಲಿ? ಆ ಪಾಪಿಯು ಮಾಡಿದುದೆಲ್ಲವನ್ನೂ ನಾಶಪಡಿಸಿ, ನಿಶ್ಚಿತವಾಗಿಯೂ ವಿನಾಶಹೊಂದುತ್ತಾನೆ.

05105012a ಸೋಽಹಂ ಪಾಪಃ ಕೃತಘ್ನಶ್ಚ ಕೃಪಣಶ್ಚಾನೃತೋಽಪಿ ಚ|

05105012c ಗುರೋರ್ಯಃ ಕೃತಕಾರ್ಯಃ ಸಂಸ್ತತ್ಕರೋಮಿ ನ ಭಾಷಿತಂ|

05105012e ಸೋಽಹಂ ಪ್ರಾಣಾನ್ವಿಮೋಕ್ಷ್ಯಾಮಿ ಕೃತ್ವಾ ಯತ್ನಮನುತ್ತಮಂ||

ನಾನೇ ಆ ಪಾಪಿ, ಕೃತಘ್ನ, ಕೃಪಣ, ಸುಳ್ಳುಬುರುಕನೆನಿಸಿಕೊಂಡು ಬಿಟ್ಟಿದ್ದೇನೆ. ಗುರುವಿನಿಂದ ನನ್ನ ಕೆಲಸಗಳನ್ನು ಮಾಡಿಸಿಕೊಂಡು ಅವನು ಹೇಳಿದಂತೆ ಮಾಡಲಿಕ್ಕಾಗುತ್ತಿಲ್ಲವಲ್ಲ! ಉತ್ತಮ ಪ್ರಯತ್ನವನ್ನು ಮಾಡಿ ನನ್ನ ಪ್ರಾಣಗಳನ್ನು ತೊರೆಯುತ್ತೇನೆ.

05105013a ಅರ್ಥನಾ ನ ಮಯಾ ಕಾ ಚಿತ್ಕೃತಪೂರ್ವಾ ದಿವೌಕಸಾಂ|

05105013c ಮಾನಯಂತಿ ಚ ಮಾಂ ಸರ್ವೇ ತ್ರಿದಶಾ ಯಜ್ಞಾಸಂಸ್ತರೇ||

ಇದಕ್ಕೂ ಮೊದಲು ದೇವತೆಗಳಿಂದ ಯಾವ ಸಂಪತ್ತನ್ನೂ ಕೇಳಿರಲಿಲ್ಲ. ಎಲ್ಲಾ ತ್ರಿದಶರೂ ಇದಕ್ಕಾಗಿಯೇ ನನ್ನನ್ನು ಯಜ್ಞಗಳಲ್ಲಿ ಗೌರವಿಸುತ್ತಾರೆ.

05105014a ಅಹಂ ತು ವಿಬುಧಶ್ರೇಷ್ಠಂ ದೇವಂ ತ್ರಿಭುವನೇಶ್ವರಂ|

05105014c ವಿಷ್ಣುಂ ಗಚ್ಚಾಮ್ಯಹಂ ಕೃಷ್ಣಂ ಗತಿಂ ಗತಿಮತಾಂ ವರಂ||

ನಾನಾದರೋ ಈಗ ವಿಬುಧಶ್ರೇಷ್ಠ, ದೇವ, ತ್ರಿಭುವನೇಶ್ವರ, ಗತಿಮತರಲ್ಲಿ ಶ್ರೇಷ್ಠ, ವಿಷ್ಣು, ಕೃಷ್ಣನ ಮೊರೆ ಹೋಗುತ್ತೇನೆ.

05105015a ಭೋಗಾ ಯಸ್ಮಾತ್ಪ್ರತಿಷ್ಠಂತೇ ವ್ಯಾಪ್ಯ ಸರ್ವಾನ್ಸುರಾಸುರಾನ್|

05105015c ಪ್ರಯತೋ ದ್ರಷ್ಟುಮಿಚ್ಚಾಮಿ ಮಹಾಯೋಗಿನಮವ್ಯಯಂ||

ಯಾರಿಂದ ಸರ್ವ ಭೋಗಗಳು ಹುಟ್ಟಿ ಸುರಾಸುರರಲ್ಲಿ ವ್ಯಾಪಿಸಿಕೊಂಡಿವೆಯೋ ಆ ಮಹಾಯೋಗಿ, ಅವ್ಯಯನನ್ನು ತಲೆಬಾಗಿ ನೋಡಲು ಇಚ್ಛಿಸುತ್ತೇನೆ.”

05105016a ಏವಮುಕ್ತೇ ಸಖಾ ತಸ್ಯ ಗರುಡೋ ವಿನತಾತ್ಮಜಃ|

05105016c ದರ್ಶಯಾಮಾಸ ತಂ ಪ್ರಾಹ ಸಂಹೃಷ್ಟಃ ಪ್ರಿಯಕಾಮ್ಯಯಾ||

ಹೀಗೆ ಹೇಳಲು ಅವನ ಸಖ ವಿನತಾತ್ಮಜ ಗರುಡನು ತೋರಿಸಿಕೊಂಡನು ಮತ್ತು ಸಂತೋಷಗೊಂಡು ಅವನಿಗೆ ಹಿತವಾದುದನ್ನು ಮಾಡುವ ಆಸೆಯಿಂದ ಹೇಳಿದನು:

05105017a ಸುಹೃದ್ಭವಾನ್ಮಮ ಮತಃ ಸುಹೃದಾಂ ಚ ಮತಃ ಸುಹೃತ್|

05105017c ಈಪ್ಸಿತೇನಾಭಿಲಾಷೇಣ ಯೋಕ್ತವ್ಯೋ ವಿಭವೇ ಸತಿ||

“ನೀನು ನನ್ನ ಪ್ರಿಯ ಸಖ! ತಾನು ಸುಖದಲ್ಲಿರುವಾಗ ಸ್ನೇಹಿತನ ಆಸೆ-ಅಭಿಲಾಶೆಗಳನ್ನು ಪೂರೈಸುವುದು ಸ್ನೇಹಿತನ ಕರ್ತವ್ಯ.

05105018a ವಿಭವಶ್ಚಾಸ್ತಿ ಮೇ ವಿಪ್ರ ವಾಸವಾವರಜೋ ದ್ವಿಜ|

05105018c ಪೂರ್ವಮುಕ್ತಸ್ತ್ವದರ್ಥಂ ಚ ಕೃತಃ ಕಾಮಶ್ಚ ತೇನ ಮೇ||

ದ್ವಿಜ! ವಿಪ್ರ! ವಾಸವನ ತಮ್ಮನೇ ನನ್ನಲ್ಲಿರುವ ಸಂಪತ್ತು. ಇದಕ್ಕೂ ಮೊದಲು ನಿನಗೋಸ್ಕರ ನಾನು ಅವನಲ್ಲಿ ಮಾತನಾಡಿದ್ದೆ. ಅವನು ನನ್ನ ಬಯಕೆಯನ್ನು ಪೂರೈಸಲು ಒಪ್ಪಿಕೊಂಡಿದ್ದಾನೆ.

05105019a ಸ ಭವಾನೇತು ಗಚ್ಚಾವ ನಯಿಷ್ಯೇ ತ್ವಾಂ ಯಥಾಸುಖಂ|

05105019c ದೇಶಂ ಪಾರಂ ಪೃಥಿವ್ಯಾ ವಾ ಗಚ್ಚ ಗಾಲವ ಮಾಚಿರಂ||

ಬಾ! ನಾನು ಮತ್ತು ನೀನು ಒಟ್ಟಿಗೇ ಹೋಗೋಣ! ನಾನು ನಿನ್ನನ್ನು ಸುಖವಾಗಿ ಆಕಡೆ ಅಥವಾ ಭೂಮಿಯ ಅಂಚಿಗೆ ಕರೆದೊಯ್ಯುತ್ತೇನೆ. ಗಾಲವ! ತಡಮಾಡಬೇಡ!”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಪಂಚಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಐದನೆಯ ಅಧ್ಯಾಯವು.

Related image

Comments are closed.