Udyoga Parva: Chapter 101

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೦೧

ನಾರದನು ವಾಸುಕಿಯ ಭೋಗವತೀ ಪುರವನ್ನು ಮಾತಲಿಗೆ ತೋರಿಸಿದುದು (೧-೧೬). ಅಲ್ಲಿ ಆರ್ಯಕನ ಪಕ್ಕದಲ್ಲಿ ನಿಂತಿದ್ದ ಯುವಕನನ್ನು ನೋಡಿ ಮಾತಲಿಯು ಅವನು ತನ್ನ ಅಳಿಯನಾಗಬಹುದೆಂದು ಯೋಚಿಸಿದುದು (೧೭-೨೨). ಅವನು ಸುಮುಖನೆನ್ನುವ ನಾಗರಾಜನೆಂದೂ, ಅವನ ತಂದೆಯನ್ನು ಗರುಡನು ಸಂಹರಿಸಿದ್ದನೆಂದೂ ನಾರದನು ಮಾತಲಿಗೆ ಹೇಳುವುದು (೨೩-೨೬).

05101001 ನಾರದ ಉವಾಚ|

05101001a ಇಯಂ ಭೋಗವತೀ ನಾಮ ಪುರೀ ವಾಸುಕಿಪಾಲಿತಾ|

05101001c ಯಾದೃಶೀ ದೇವರಾಜಸ್ಯ ಪುರೀವರ್ಯಾಮರಾವತೀ||

ನಾರದನು ಹೇಳಿದನು: “ಇದು ವಾಸುಕಿಯಿಂದ ಪಾಲಿಸಲ್ಪಟ್ಟ ಭೋಗವತೀ ಎಂಬ ಹೆಸರಿನ ಪುರಿ. ಇದು ದೇವರಾಜನ ಅಮರಾವತಿಯಂತಿದೆ.

05101002a ಏಷ ಶೇಷಃ ಸ್ಥಿತೋ ನಾಗೋ ಯೇನೇಯಂ ಧಾರ್ಯತೇ ಸದಾ|

05101002c ತಪಸಾ ಲೋಕಮುಖ್ಯೇನ ಪ್ರಭಾವಮಹತಾ ಮಹೀ||

ಮಹಾ ತಪಸ್ಸಿನ ಪ್ರಭಾವದಿಂದ ಸದಾ ಮಹಿಯನ್ನು ಎತ್ತಿಹಿಡಿದಿರುವ ಲೋಕಮುಖ್ಯ ಶೇಷನಾಗನು ಇಲ್ಲಿದ್ದಾನೆ.

05101003a ಶ್ವೇತೋಚ್ಚಯನಿಭಾಕಾರೋ ನಾನಾವಿಧವಿಭೂಷಣಃ|

05101003c ಸಹಸ್ರಂ ಧಾರಯನ್ಮೂರ್ಧ್ನಾಂ ಜ್ವಾಲಾಜಿಹ್ವೋ ಮಹಾಬಲಃ||

ಶ್ವೇತಪರ್ವತದ ಆಕಾರದಲ್ಲಿರುವ, ನಾನಾವಿಧ ವಿಭೂಷಣನಾದ ಆ ಮಹಾಬಲನು ಸಹಸ್ರ ಮುಖಗಳನ್ನೂ ಜ್ವಲಿಸುವ ನಾಲಿಗೆಗಳನ್ನೂ ಧರಿಸಿದ್ದಾನೆ.

05101004a ಇಹ ನಾನಾವಿಧಾಕಾರಾ ನಾನಾವಿಧವಿಭೂಷಣಾಃ|

05101004c ಸುರಸಾಯಾಃ ಸುತಾ ನಾಗಾ ನಿವಸಂತಿ ಗತವ್ಯಥಾಃ||

ಇಲ್ಲಿ ನಾನಾವಿಧ ಆಕಾರಗಳ, ನಾನಾವಿಧ ವಿಭೂಷಿತರಾದ ನಾಗಿಣಿ ಸುರಸೆಯ ಮಕ್ಕಳು ನಿಶ್ಚಿಂತರಾಗಿ ವಾಸಿಸುತ್ತಿದ್ದಾರೆ.

05101005a ಮಣಿಸ್ವಸ್ತಿಕಚಕ್ರಾಂಕಾಃ ಕಮಂಡಲುಕಲಕ್ಷಣಾಃ|

05101005c ಸಹಸ್ರಸಂಖ್ಯಾ ಬಲಿನಃ ಸರ್ವೇ ರೌದ್ರಾಃ ಸ್ವಭಾವತಃ||

ಸಹಸ್ರಸಂಖ್ಯೆಗಳಲ್ಲಿರುವ ಅವರೆಲ್ಲರೂ ಮಣಿ-ಸ್ವಸ್ತಿಕ-ಚಕ್ರದ ಚಿಹ್ನೆಗಳನ್ನುಳ್ಳವರು, ಕಮಂಡಲುಕ ಲಕ್ಷಣರು, ಬಲಶಾಲಿಗಳು ಮತ್ತು ಸ್ವಭಾವತಃ ರೌದ್ರರು.

05101006a ಸಹಸ್ರಶಿರಸಃ ಕೇ ಚಿತ್ಕೇ ಚಿತ್ಪಂಚಶತಾನನಾಃ|

05101006c ಶತಶೀರ್ಷಾಸ್ತಥಾ ಕೇ ಚಿತ್ಕೇ ಚಿತ್ತ್ರಿಶಿರಸೋಽಪಿ ಚ||

ಕೆಲವರಿಗೆ ಸಾವಿರತಲೆಗಳಿವೆ, ಕೆಲವರಿಗೆ ಐದು ಮುಖಗಳಿವೆ, ಕೆಲವರಿಗೆ ನೂರು ಶೀರ್ಷಗಳಿವೆ, ಇನ್ನು ಕೆಲವರಿಗೆ ಮೂರು ಶಿರಗಳಿವೆ.

05101007a ದ್ವಿಪಂಚಶಿರಸಃ ಕೇ ಚಿತ್ಕೇ ಚಿತ್ಸಪ್ತಮುಖಾಸ್ತಥಾ|

05101007c ಮಹಾಭೋಗಾ ಮಹಾಕಾಯಾಃ ಪರ್ವತಾಭೋಗಭೋಗಿನಃ||

ಕೆಲವರಿಗೆ ಹತ್ತು ತಲೆಗಳಿದ್ದರೆ ಕೆಲವರಿಗೆ ಏಳು ಮುಖಗಳಿವೆ. ಆ ಮಹಾಭೋಗರು ಭೂಮಿಯಲ್ಲಿ ಪಸರಿಸುವ ಪರ್ವತದಂತೆ ಮಹಾಕಾಯವುಳ್ಳವರು.

05101008a ಬಹೂನೀಹ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ|

05101008c ನಾಗಾನಾಮೇಕವಂಶಾನಾಂ ಯಥಾಶ್ರೇಷ್ಠಾಂಸ್ತು ಮೇ ಶೃಣು||

ಅವರು ಸಹಸ್ರ, ಪ್ರಯುತ, ಅರ್ಬುದ ಸಂಖ್ಯೆಯಲ್ಲಿದ್ದಾರೆ. ಒಂದೇ ವಂಶದ ನಾಗಗಳು ಅನೇಕ. ಅವರಲ್ಲಿ ಶ್ರೇಷ್ಠರಾದವರನ್ನು ನನ್ನಿಂದ ಕೇಳು.

05101009a ವಾಸುಕಿಸ್ತಕ್ಷಕಶ್ಚೈವ ಕರ್ಕೋಟಕಧನಂಜಯೌ|

05101009c ಕಾಲೀಯೋ ನಹುಷಶ್ಚೈವ ಕಂಬಲಾಶ್ವತರಾವುಭೌ||

05101010a ಬಾಹ್ಯಕುಂಡೋ ಮಣಿರ್ನಾಗಸ್ತಥೈವಾಪೂರಣಃ ಖಗಃ|

05101010c ವಾಮನಶ್ಚೈಲಪತ್ರಶ್ಚ ಕುಕುರಃ ಕುಕುಣಸ್ತಥಾ||

05101011a ಆರ್ಯಕೋ ನಂದಕಶ್ಚೈವ ತಥಾ ಕಲಶಪೋತಕೌ|

05101011c ಕೈಲಾಸಕಃ ಪಿಂಜರಕೋ ನಾಗಶ್ಚೈರಾವತಸ್ತಥಾ||

05101012a ಸುಮನೋಮುಖೋ ದಧಿಮುಖಃ ಶಂಖೋ ನಂದೋಪನಂದಕೌ|

05101012c ಆಪ್ತಃ ಕೋಟನಕಶ್ಚೈವ ಶಿಖೀ ನಿಷ್ಠೂರಿಕಸ್ತಥಾ||

05101013a ತಿತ್ತಿರಿರ್ಹಸ್ತಿಭದ್ರಶ್ಚ ಕುಮುದೋ ಮಾಲ್ಯಪಿಂಡಕಃ|

05101013c ದ್ವೌ ಪದ್ಮೌ ಪುಂಡರೀಕಶ್ಚ ಪುಷ್ಪೋ ಮುದ್ಗರಪರ್ಣಕಃ||

05101014a ಕರವೀರಃ ಪೀಠರಕಃ ಸಂವೃತ್ತೋ ವೃತ್ತ ಏವ ಚ|

05101014c ಪಿಂಡಾರೋ ಬಿಲ್ವಪತ್ರಶ್ಚ ಮೂಷಿಕಾದಃ ಶಿರೀಷಕಃ||

05101015a ದಿಲೀಪಃ ಶಂಖಶೀರ್ಷಶ್ಚ ಜ್ಯೋತಿಷ್ಕೋಽಥಾಪರಾಜಿತಃ|

05101015c ಕೌರವ್ಯೋ ಧೃತರಾಷ್ಟ್ರಶ್ಚ ಕುಮಾರಃ ಕುಶಕಸ್ತಥಾ||

05101016a ವಿರಜಾ ಧಾರಣಶ್ಚೈವ ಸುಬಾಹುರ್ಮುಖರೋ ಜಯಃ|

05101016c ಬಧಿರಾಂಧೌ ವಿಕುಂಡಶ್ಚ ವಿರಸಃ ಸುರಸಸ್ತಥಾ||

ವಾಸುಕಿ, ತಕ್ಷಕ, ಕರ್ಕೋಟಕ, ಧನಂಜಯ, ಕಾಲೀಯ, ನಹುಷ, ಕಂಬಲ, ಅಶ್ವತರ, ಬಾಹ್ಯಕುಂಡ, ಮಣಿರ್ನಾಗ, ಅಪೂರಣ, ಖಗ, ವಾಮನ, ಶೈಲಪತ್ರ, ಕುಕುರ, ಕುಕುಣ, ಆರ್ಯಕ, ನಂದಕ, ಕಲಶ, ಪೋತಕ, ಕೈಲಾಸಕ, ಪಿಂಜರಕ, ನಾಗ, ಐರಾವತ, ಸುಮನೋಮುಖ, ದಧಿಮುಖ, ಶಂಖ, ನಂದ, ಉಪನಂದಕ, ಆಪ್ತ, ಕೋಟಕನ, ಶಿಖೀ, ನಿಷ್ಠೂರಿಕ, ತಿತ್ತಿರಿ, ಹಸ್ತಿಭದ್ರ, ಕುಮುದ, ಮಾಲ್ಯಪಿಂಡಕ, ಇಬ್ಬರು ಪದ್ಮರು, ಪುಂಡರೀಕ, ಪುಷ್ಪ, ಮುದ್ಗರಪರ್ಣಕ, ಕರವೀರ, ಪೀಠರಕ, ಸಂವೃತ್ತ, ವೃತ್ತ, ಪಿಂಡಾರ, ಬಿಲ್ವಪತ್ರ, ಮೂಷಿಕಾದ, ಶಿರೀಷಕ, ದಿಲೀಪ, ಶಂಖಶೀರ್ಷ, ಜ್ಯೋತಿಷ್ಕ, ಅಪರಾಜಿತ, ಕೌರವ್ಯ, ಧೃತರಾಷ್ಟ್ರ, ಕುಮಾರ, ಕುಶಕ, ವಿರಜ, ಧಾರಣ, ಸುಬಾಹು, ಮುಖರ, ಜಯ, ಬಧಿರ, ಅಂಧ, ವಿಕುಂಡ, ವಿರಸ ಮತ್ತು ಸುರಸ.

05101017a ಏತೇ ಚಾನ್ಯೇ ಚ ಬಹವಃ ಕಶ್ಯಪಸ್ಯಾತ್ಮಜಾಃ ಸ್ಮೃತಾಃ|

05101017c ಮಾತಲೇ ಪಶ್ಯ ಯದ್ಯತ್ರ ಕಶ್ಚಿತ್ತೇ ರೋಚತೇ ವರಃ||

ಇವರು ಮತ್ತು ಇನ್ನೂ ಇತರ ಬಹಳಷ್ಟು ಕಶ್ಯಪನ ಮಕ್ಕಳ ಕುರಿತು ಕೇಳಿದ್ದೇವೆ. ಮಾತಲೇ! ಇಲ್ಲಿ ಯಾರಾದರೂ ವರನಾಗಿ ಇಷ್ಟವಾಗುತ್ತಾನೋ ನೋಡು!””

05101018 ಕಣ್ವ ಉವಾಚ|

05101018a ಮಾತಲಿಸ್ತ್ವೇಕಮವ್ಯಗ್ರಃ ಸತತಂ ಸಂನಿರೀಕ್ಷ್ಯ ವೈ|

05101018c ಪಪ್ರಚ್ಚ ನಾರದಂ ತತ್ರ ಪ್ರೀತಿಮಾನಿವ ಚಾಭವತ್||

ಕಣ್ವನು ಹೇಳಿದನು: “ಆಗ ಮಾತಲಿಯು ಅಲ್ಲಿದ್ದ ಓರ್ವನನ್ನು ಸತತವಾಗಿ ಏಕಾಗ್ರಚಿತ್ತನಾಗಿ ನೋಡುತ್ತಿದ್ದನು. ಅವನು ನಾರದನನ್ನು ಸಂತೋಷದಿಂದ ಕೇಳಿದನು.

05101019a ಸ್ಥಿತೋ ಯ ಏಷ ಪುರತಃ ಕೌರವ್ಯಸ್ಯಾರ್ಯಕಸ್ಯ ಚ|

05101019c ದ್ಯುತಿಮಾನ್ದರ್ಶನೀಯಶ್ಚ ಕಸ್ಯೈಷ ಕುಲನಂದನಃ||

05101020a ಕಃ ಪಿತಾ ಜನನೀ ಚಾಸ್ಯ ಕತಮಸ್ಯೈಷ ಭೋಗಿನಃ|

05101020c ವಂಶಸ್ಯ ಕಸ್ಯೈಷ ಮಹಾನ್ಕೇತುಭೂತ ಇವ ಸ್ಥಿತಃ||

“ಕೌರವ್ಯ ಆರ್ಯಕನ ಎದಿರು ನಿಂತಿರುವ ಈ ದ್ಯುತಿಮಾನ, ದರ್ಶನೀಯನು ಯಾರು? ಇವನು ಯಾವ ಕುಲನಂದನನು? ಇವನ ತಂದೆ ತಾಯಿಯರು ಯಾರು? ಇವನು ಯಾವ ನಾಗ ವಂಶದವನು? ಇವನು ಯಾವ ಮಹಾಕುಲದ ಬಾವುಟದಂತೆ ನಿಂತಿರುವನು?

05101021a ಪ್ರಣಿಧಾನೇನ ಧೈರ್ಯೇಣ ರೂಪೇಣ ವಯಸಾ ಚ ಮೇ|

05101021c ಮನಃ ಪ್ರವಿಷ್ಟೋ ದೇವರ್ಷೇ ಗುಣಕೇಶ್ಯಾಃ ಪತಿರ್ವರಃ||

ಅವನ ಬುದ್ಧಿ, ಧೈರ್ಯ, ರೂಪ, ವಯಸ್ಸಿನಿಂದ ನನ್ನ ಮನಸ್ಸು ಹರ್ಷಿತವಾಗಿದೆ. ದೇವರ್ಷೇ! ಇವನೇ ಗುಣಕೇಶಿಗೆ ಪತಿ ಮತ್ತು ವರ.”

05101022a ಮಾತಲಿಂ ಪ್ರೀತಿಮನಸಂ ದೃಷ್ಟ್ವಾ ಸುಮುಖದರ್ಶನಾತ್|

05101022c ನಿವೇದಯಾಮಾಸ ತದಾ ಮಾಹಾತ್ಮ್ಯಂ ಜನ್ಮ ಕರ್ಮ ಚ||

ಸುಮುಖನನ್ನು ನೋಡಿ ಮಾತಲಿಯು ಸಂತೋಷಗೊಂಡಿದುದನ್ನು ಕಂಡು ನಾರದನು ಅವನ ಮಹಾತ್ಮೆ, ಜನ್ಮ-ಕರ್ಮಗಳನ್ನು ನಿವೇದಿಸಿದನು.

05101023a ಐರಾವತಕುಲೇ ಜಾತಃ ಸುಮುಖೋ ನಾಮ ನಾಗರಾಟ್|

05101023c ಆರ್ಯಕಸ್ಯ ಮತಃ ಪೌತ್ರೋ ದೌಹಿತ್ರೋ ವಾಮನಸ್ಯ ಚ||

“ಐರಾವತ ಕುಲದಲ್ಲಿ ಜನಿಸಿದ ಈ ನಾಗರಾಜನ ಹೆಸರು ಸುಮುಖ. ಆರ್ಯಕನ ಮೊಮ್ಮಗ ಮತ್ತು ವಾಮನನ ಮಗಳ ಮಗ.

05101024a ಏತಸ್ಯ ಹಿ ಪಿತಾ ನಾಗಶ್ಚಿಕುರೋ ನಾಮ ಮಾತಲೇ|

05101024c ನಚಿರಾದ್ವೈನತೇಯೇನ ಪಂಚತ್ವಮುಪಪಾದಿತಃ||

ಮಾತಲೇ! ಇವನ ತಂದೆ ಚಿಕುರ ಎಂಬ ಹೆಸರಿನ ನಾಗ. ಸ್ವಲ್ಪವೇ ಸಮಯದ ಹಿಂದೆ ಅವನು ವೈನತೇಯನಿಂದ ಪಂಚತ್ವವನ್ನು ಪಡೆದನು.”

05101025a ತತೋಽಬ್ರವೀತ್ಪ್ರೀತಮನಾ ಮಾತಲಿರ್ನಾರದಂ ವಚಃ|

05101025c ಏಷ ಮೇ ರುಚಿತಸ್ತಾತ ಜಾಮಾತಾ ಭುಜಗೋತ್ತಮಃ||

ನಾರದನ ಮಾತನ್ನು ಕೇಳಿ ಮಾತಲಿಯು ಪ್ರೀತಮನಸ್ಕನಾಗಿ “ಅಯ್ಯಾ! ಈ ಭುಜಗೋತ್ತಮನು ನನ್ನ ಅಳಿಯನಾಗಬೇಕೆಂದು ಬಯಸುತ್ತೇನೆ.

05101026a ಕ್ರಿಯತಾಮತ್ರ ಯತ್ನೋ ಹಿ ಪ್ರೀತಿಮಾನಸ್ಮ್ಯನೇನ ವೈ|

05101026c ಅಸ್ಯ ನಾಗಪತೇರ್ದಾತುಂ ಪ್ರಿಯಾಂ ದುಹಿತರಂ ಮುನೇ||

ಮುನೇ! ಅವನನ್ನೇ ಪಡೆಯಲು ಪ್ರಯತ್ನಿಸೋಣ. ಈ ನಾಗಪತಿಗೆ ನನ್ನ ಪ್ರಿಯ ಮಗಳನ್ನು ಕೊಡಲು ಬಯಸುತ್ತೇನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಏಕಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ನೂರಾಒಂದನೆಯ ಅಧ್ಯಾಯವು.

Image result for flowers against white background

Comments are closed.