Svargarohana Parva: Chapter 4

ಸ್ವರ್ಗಾರೋಹಣ ಪರ್ವ

ಸ್ವರ್ಗದಲ್ಲಿ ಯುಧಿಷ್ಠಿರನು ತನ್ನ ಸಹೋದರರು, ಸುಹೃದರು ಮತ್ತು ದ್ರೌಪದಿಯು ತಮ್ಮ ತಮ್ಮ ಸ್ಥಾನಗಳನ್ನು ಸೇರಿರುವುದನ್ನು ನೋಡಿದುದು (೧-೧೯).

18004001 ವೈಶಂಪಾಯನ ಉವಾಚ|

18004001a ತತೋ ಯುಧಿಷ್ಠಿರೋ ರಾಜಾ ದೇವೈಃ ಸರ್ಷಿಮರುದ್ಗಣೈಃ|

18004001c ಪೂಜ್ಯಮಾನೋ ಯಯೌ ತತ್ರ ಯತ್ರ ತೇ ಕುರುಪುಂಗವಾಃ||

ವೈಶಂಪಾಯನನು ಹೇಳಿದನು: “ಅನಂತರ ರಾಜಾ ಯುಧಿಷ್ಠಿರನು ದೇವತೆಗಳು ಮತ್ತು ಋಷಿ-ಮರುದ್ಗಣಗಳಿಂದ ಪೂಜ್ಯನಾಗಿ ಆ ಕುರುಪುಂಗವರು ಇದ್ದಲ್ಲಿಗೆ ಬಂದನು.

18004002a ದದರ್ಶ ತತ್ರ ಗೋವಿಂದಂ ಬ್ರಾಹ್ಮೇಣ ವಪುಷಾನ್ವಿತಮ್|

18004002c ತೇನೈವ ದೃಷ್ಟಪೂರ್ವೇಣ ಸಾದೃಶ್ಯೇನೋಪಸೂಚಿತಮ್||

ಅಲ್ಲಿ ಅವನು ಬ್ರಾಹ್ಮೀ ತೇಜಸ್ಸಿನ ದೇಹವನ್ನು ಧರಿಸಿದ್ದ ಗೋವಿಂದನನ್ನು ನೋಡಿದನು. ಅವನು ಹಿಂದೆ ನೋಡಿದ್ದ ರೂಪದಲ್ಲಿಯೇ ಇದ್ದುದರಿಂದ ಗುರುತಿಸಲ್ಪಟ್ಟನು.

18004003a ದೀಪ್ಯಮಾನಂ ಸ್ವವಪುಷಾ ದಿವ್ಯೈರಸ್ತ್ರೈರುಪಸ್ಥಿತಮ್|

18004003c ಚಕ್ರಪ್ರಭೃತಿಭಿರ್ಘೋರೈರ್ದಿವ್ಯೈಃ ಪುರುಷವಿಗ್ರಹೈಃ|

18004003e ಉಪಾಸ್ಯಮಾನಂ ವೀರೇಣ ಫಲ್ಗುನೇನ ಸುವರ್ಚಸಾ||

ಅವನು ತನ್ನದೇ ದೇಹದ ಕಾಂತಿಯಿಂದ ಬೆಳಗುತ್ತಿದ್ದನು. ಚಕ್ರವೇ ಮೊದಲಾದ ಘೋರ ದಿವ್ಯ ಆಯುಧಗಳು ಪುರುಷಸ್ವರೂಪದಲ್ಲಿ ಅವನ ಸೇವೆಗೈಯುತ್ತಿದ್ದವು. ವೀರ ಸುವರ್ಚಸ ಫಲ್ಗುನನು ಅವನ ಸೇವೆಯಲ್ಲಿ ನಿಂತಿದ್ದನು.

18004004a ಅಪರಸ್ಮಿನ್ನಥೋದ್ದೇಶೇ ಕರ್ಣಂ ಶಸ್ತ್ರಭೃತಾಂ ವರಮ್|

18004004c ದ್ವಾದಶಾದಿತ್ಯಸಹಿತಂ ದದರ್ಶ ಕುರುನಂದನಃ||

ಆ ಪ್ರದೇಶದ ಇನ್ನೊಂದು ಕಡೆಯಲ್ಲಿ ಕುರುನಂದನನು ದ್ವಾದಶ ಆದಿತ್ಯರ ಸಹಿತ ಕುಳಿತಿದ್ದ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ಕರ್ಣನನ್ನು ಕಂಡನು.

18004005a ಅಥಾಪರಸ್ಮಿನ್ನುದ್ದೇಶೇ ಮರುದ್ಗಣವೃತಂ ಪ್ರಭುಮ್|

18004005c ಭೀಮಸೇನಮಥಾಪಶ್ಯತ್ ತೇನೈವ ವಪುಷಾನ್ವಿತಮ್||

ಆ ಪ್ರದೇಶದ ಇನ್ನೊಂದು ಕಡೆಯಲ್ಲಿ ಮರುದ್ಗಣಗಳಿಂದ ಆವೃತನಾಗಿ ತನ್ನದೇ ಶರೀರವನ್ನು ಧರಿಸಿದ್ದ ಪ್ರಭು ಭೀಮಸೇನನನ್ನು ನೋಡಿದನು.

18004006a ಅಶ್ವಿನೋಸ್ತು ತಥಾ ಸ್ಥಾನೇ ದೀಪ್ಯಮಾನೌ ಸ್ವತೇಜಸಾ|

18004006c ನಕುಲಂ ಸಹದೇವಂ ಚ ದದರ್ಶ ಕುರುನಂದನಃ||

ಹಾಗೆಯೇ ಅಶ್ವಿನಿಯರ ಸ್ಥಾನದಲ್ಲಿ ತಮ್ಮದೇ ತೇಜಸ್ಸಿನಿಂದ ಬೆಳಗುತ್ತಿರುವ ನಕುಲ-ಸಹದೇವರನ್ನೂ ಕುರುನಂದನನು ನೋಡಿದನು.

18004007a ತಥಾ ದದರ್ಶ ಪಾಂಚಾಲೀಂ ಕಮಲೋತ್ಪಲಮಾಲಿನೀಮ್|

18004007c ವಪುಷಾ ಸ್ವರ್ಗಮಾಕ್ರಮ್ಯ ತಿಷ್ಠಂತೀಮರ್ಕವರ್ಚಸಮ್||

ಹಾಗೆಯೇ ಅವನು ಕಮಲದ ಹೂವುಗಳ ಮಾಲೆಯನ್ನು ಧರಿಸಿ, ತನ್ನ ದೇಹದ ಸೂರ್ಯತೇಜಸ್ಸಿನಿಂದ ಸ್ವರ್ಗವನ್ನೇ ಬೆಳಗಿಸುತ್ತ ನಿಂತಿರುವ ಪಾಂಚಾಲಿಯನ್ನೂ ನೋಡಿದನು.

18004008a ಅಥೈನಾಂ ಸಹಸಾ ರಾಜಾ ಪ್ರಷ್ಟುಮೈಚ್ಚದ್ಯುಧಿಷ್ಠಿರಃ|

18004008c ತತೋಽಸ್ಯ ಭಗವಾನಿಂದ್ರಃ ಕಥಯಾಮಾಸ ದೇವರಾಟ್||

ಕೂಡಲೇ ಅವಳ ಕುರಿತು ತಿಳಿಯಲು ಬಯಸಿದ ರಾಜಾ ಯುಧಿಷ್ಠಿರನಿಗೆ ದೇವರಾಜ ಭಗವಾನ್ ಇಂದ್ರನು ಹೇಳತೊಡಗಿದನು:

18004009a ಶ್ರೀರೇಷಾ ದ್ರೌಪದೀರೂಪಾ ತ್ವದರ್ಥೇ ಮಾನುಷಂ ಗತಾ|

18004009c ಅಯೋನಿಜಾ ಲೋಕಕಾಂತಾ ಪುಣ್ಯಗಂಧಾ ಯುಧಿಷ್ಠಿರ||

“ಯುಧಿಷ್ಠಿರ! ನಿನಗೋಸ್ಕರವಾಗಿ ಈ ಶ್ರೀಯು ಅಯೋನಿಜೆ, ಲೋಕಕಾಂತೆ, ಪುಣ್ಯಗಂಧೀ ದ್ರೌಪದಿಯ ರೂಪವನ್ನು ತಾಳಿ ಮನುಷ್ಯಲೋಕಕ್ಕೆ ಹೋಗಿದ್ದಳು.

18004010a ದ್ರುಪದಸ್ಯ ಕುಲೇ ಜಾತಾ ಭವದ್ಭಿಶ್ಚೋಪಜೀವಿತಾ|

18004010c ರತ್ಯರ್ಥಂ ಭವತಾಂ ಹ್ಯೇಷಾ ನಿರ್ಮಿತಾ ಶೂಲಪಾಣಿನಾ||

ದ್ರುಪದನ ಕುಲದಲ್ಲಿ ಹುಟ್ಟಿ ನಿಮ್ಮೆಲ್ಲರನ್ನು ಅವಲಂಬಿಸಿದ್ದು ನಿಮ್ಮೆಲ್ಲರ ಪ್ರೀತಿಗಾಗಿ ಇದ್ದ ಇವಳನ್ನು ಶೂಲಪಾಣಿಯೇ ನಿರ್ಮಿಸಿದ್ದನು.

18004011a ಏತೇ ಪಂಚ ಮಹಾಭಾಗಾ ಗಂಧರ್ವಾಃ ಪಾವಕಪ್ರಭಾಃ|

18004011c ದ್ರೌಪದ್ಯಾಸ್ತನಯಾ ರಾಜನ್ಯುಷ್ಮಾಕಮಮಿತೌಜಸಃ||

ರಾಜನ್! ಈ ಐವರು ಪಾವಕ ಪ್ರಭೆಗಳುಳ್ಳ ಗಂಧರ್ವರು ಅಮಿತ ತೇಜಸ್ವಿ ನಿಮ್ಮಿಂದ ದ್ರೌಪದಿಯಲ್ಲಿ ಹುಟ್ಟಿದ ಮಕ್ಕಳು.

18004012a ಪಶ್ಯ ಗಂಧರ್ವರಾಜಾನಂ ಧೃತರಾಷ್ಟ್ರಂ ಮನೀಷಿಣಮ್|

18004012c ಏನಂ ಚ ತ್ವಂ ವಿಜಾನೀಹಿ ಭ್ರಾತರಂ ಪೂರ್ವಜಂ ಪಿತುಃ||

ಈ ಗಂಧರ್ವರಾಜನನ್ನು ನೋಡು! ಇವನು ನಿನ್ನ ತಂದೆಯ ಅಣ್ಣ ಮನೀಷಿ ಧೃತರಾಷ್ಟ್ರನೆಂದು ತಿಳಿ.

18004013a ಅಯಂ ತೇ ಪೂರ್ವಜೋ ಭ್ರಾತಾ ಕೌಂತೇಯಃ ಪಾವಕದ್ಯುತಿಃ|

18004013c ಸೂರ್ಯಪುತ್ರೋಽಗ್ರಜಃ ಶ್ರೇಷ್ಠೋ ರಾಧೇಯ ಇತಿ ವಿಶ್ರುತಃ|

18004013e ಆದಿತ್ಯಸಹಿತೋ ಯಾತಿ ಪಶ್ಯೈನಂ ಪುರುಷರ್ಷಭ||

ಇವನು ನಿನ್ನ ಮೊದಲೇ ಹುಟ್ಟಿದ ಕೌಂತೇಯ, ಅಣ್ಣ. ಪಾವಕನಂತೆ ಬೆಳಗುತ್ತಿದ್ದ ಈ ಅಗ್ರಜ ಶ್ರೇಷ್ಠ ಸೂರ್ಯಪುತ್ರನು ರಾಧೇಯನೆಂದು ವಿಖ್ಯಾತನಾಗಿದ್ದನು. ಪುರುಷರ್ಷಭ! ಆದಿತ್ಯನೊಂದಿಗೆ ಹೋಗುತ್ತಿರುವ ಇವನನ್ನು ನೋಡು!

18004014a ಸಾಧ್ಯಾನಾಮಥ ದೇವಾನಾಂ ವಸೂನಾಂ ಮರುತಾಮಪಿ|

18004014c ಗಣೇಷು ಪಶ್ಯ ರಾಜೇಂದ್ರ ವೃಷ್ಣ್ಯಂಧಕಮಹಾರಥಾನ್|

18004014e ಸಾತ್ಯಕಿಪ್ರಮುಖಾನ್ವೀರಾನ್ಭೋಜಾಂಶ್ಚೈವ ಮಹಾರಥಾನ್||

ರಾಜೇಂದ್ರ! ಈಗ ದೇವತೆಗಳ, ವಸುಗಳ ಮತ್ತು ಮರುತ್ ಗಣಗಳಲ್ಲಿ ಕುಳಿತಿರುವ ಸಾತ್ಯಕಿಯೇ ಮೊದಲಾದ ವೀರರನ್ನೂ, ಮಹಾರಥ ಭೋಜರನ್ನೂ, ವೃಷ್ಣಿ-ಅಂಧಕ ಮಹಾರಥರನ್ನೂ ನೋಡು!

18004015a ಸೋಮೇನ ಸಹಿತಂ ಪಶ್ಯ ಸೌಭದ್ರಮಪರಾಜಿತಮ್|

18004015c ಅಭಿಮನ್ಯುಂ ಮಹೇಷ್ವಾಸಂ ನಿಶಾಕರಸಮದ್ಯುತಿಮ್||

ಸೋಮನೊಂದಿಗೆ ನಿಶಾಕರನಂತೆ ಬೆಳಗುತ್ತಿರುವ ಅಪರಾಜಿತ ಸೌಭದ್ರ ಮಹೇಷ್ವಾಸ ಅಭಿಮನ್ಯುವನ್ನು ನೋಡು!

18004016a ಏಷ ಪಾಂಡುರ್ಮಹೇಷ್ವಾಸಃ ಕುಂತ್ಯಾ ಮಾದ್ರ್ಯಾ ಚ ಸಂಗತಃ|

18004016c ವಿಮಾನೇನ ಸದಾಭ್ಯೇತಿ ಪಿತಾ ತವ ಮಮಾಂತಿಕಮ್||

ಇಗೋ ಇವನು ಸದಾ ವಿಮಾನದಲ್ಲಿ ಕುಂತೀ ಮಾದ್ರಿಯರೊಡನೆ ನನ್ನಲ್ಲಿಗೆ ಬರುವ ನಿನ್ನ ತಂದೆ ಮಹೇಷ್ವಾಸ ಪಾಂಡು!

18004017a ವಸುಭಿಃ ಸಹಿತಂ ಪಶ್ಯ ಭೀಷ್ಮಂ ಶಾಂತನವಂ ನೃಪಮ್|

18004017c ದ್ರೋಣಂ ಬೃಹಸ್ಪತೇಃ ಪಾರ್ಶ್ವೇ ಗುರುಮೇನಂ ನಿಶಾಮಯ||

ವಸುಗಳೊಂದಿಗಿರುವ ಶಾಂತನವ ನೃಪ ಭೀಷ್ಮನನ್ನು ನೋಡು! ಬೃಹಸ್ಪತಿಯ ಪಕ್ಕದಲ್ಲಿರುವವನು ನಿನ್ನ ಗುರು ದ್ರೋಣನೆನ್ನುವುದನ್ನು ತಿಳಿದುಕೋ!

18004018a ಏತೇ ಚಾನ್ಯೇ ಮಹೀಪಾಲಾ ಯೋಧಾಸ್ತವ ಚ ಪಾಂಡವ|

18004018c ಗಂಧರ್ವೈಃ ಸಹಿತಾ ಯಾಂತಿ ಯಕ್ಷೈಃ ಪುಣ್ಯಜನೈಸ್ತಥಾ||

ಪಾಂಡವ! ನಿನ್ನ ಪರವಾಗಿ ಯುದ್ಧಮಾಡಿದ ಇನ್ನೂ ಇತರ ಮಹೀಪಾಲರು ಗಂಧರ್ವರು, ಯಕ್ಷರು ಮತ್ತು ಪುಣ್ಯಜನರೊಂದಿಗೆ ಸೇರಿದ್ದಾರೆ.

18004019a ಗುಹ್ಯಕಾನಾಂ ಗತಿಂ ಚಾಪಿ ಕೇ ಚಿತ್ಪ್ರಾಪ್ತಾ ನೃಸತ್ತಮಾಃ|

18004019c ತ್ಯಕ್ತ್ವಾ ದೇಹಂ ಜಿತಸ್ವರ್ಗಾಃ ಪುಣ್ಯವಾಗ್ಬುದ್ಧಿಕರ್ಮಭಿಃ||

ಇನ್ನೂ ಕೆಲವು ನರಸತ್ತಮರು ದೇಹವನ್ನು ತೊರೆದು ಪುಣ್ಯ ಮಾತು-ಯೋಚನೆ ಮತ್ತು ಕರ್ಮಗಳಿಂದ ದೊರೆಯುವ ಗುಹ್ಯಕರ ಲೋಕವನ್ನು ಸೇರಿದ್ದಾರೆ.””

ಇತಿ ಶ್ರೀಮಹಾಭಾರತೇ ಸ್ವರ್ಗಾರೋಹಣಪರ್ವಣಿ ದ್ರೌಪದ್ಯಾದಿಸ್ವಸ್ವಸ್ಥಾನಗಮನೇ ಚತುರ್ಥೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ವರ್ಗಾರೋಹಣಪರ್ವದಲ್ಲಿ ದ್ರೌಪದ್ಯಾದಿಸ್ವಸ್ವಸ್ಥಾನಗಮನ ಎನ್ನುವ ನಾಲ್ಕನೇ ಅಧ್ಯಾಯವು.

Related image

Comments are closed.