Stri Parva: Chapter 3

ಸ್ತ್ರೀಪರ್ವ: ವಿಶೋಕ ಪರ್ವ

ವಿದುರನು ಧೃತರಾಷ್ಟ್ರನನ್ನು ತತ್ತ್ವಯುಕ್ತ ಮಾತುಗಳಿಂದ ಸಂತವಿಸಿದುದು (೧-೧೭).

11003001 ಧೃತರಾಷ್ಟ್ರ ಉವಾಚ

11003001a ಸುಭಾಷಿತೈರ್ಮಹಾಪ್ರಾಜ್ಞ ಶೋಕೋಽಯಂ ವಿಗತೋ ಮಮ|

11003001c ಭುಯ ಏವ ತು ವಾಕ್ಯಾನಿ ಶ್ರೋತುಮಿಚ್ಚಾಮಿ ತತ್ತ್ವತಃ||

ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ! ಈ ಸುಭಾಷಿತಗಳಿಂದ ನನ್ನ ಶೋಕವು ದೂರವಾಗುತ್ತಿದೆ. ಇನ್ನೂ ಇಂತಹ ತತ್ತ್ವಯುಕ್ತ ಮಾತುಗಳನ್ನು ಕೇಳಬಯಸುತ್ತೇನೆ.

11003002a ಅನಿಷ್ಟಾನಾಂ ಚ ಸಂಸರ್ಗಾದಿಷ್ಟಾನಾಂ ಚ ವಿವರ್ಜನಾತ್|

11003002c ಕಥಂ ಹಿ ಮಾನಸೈರ್ದುಃಖೈಃ ಪ್ರಮುಚ್ಯಂತೇಽತ್ರ ಪಂಡಿತಾಃ||

ಇಷ್ಟವಿಲ್ಲದವುಗಳ ಸಂಸರ್ಗದಿಂದಲೂ ಮತ್ತು ಇಷ್ಟವಾದವುಗಳ ತೊಗಲಿಕೆಯಿಂದಲೂ ಉಂಟಾಗುವ ಮಾನಸಿಕ ದುಃಖಗಳಿಂದ ಪಂಡಿತರು ಹೇಗೆ ಬಿಡುಗಡೆ ಹೊಂದುತ್ತಾರೆ?”

11003003 ವಿದುರ ಉವಾಚ

11003003a ಯತೋ ಯತೋ ಮನೋ ದುಃಖಾತ್ಸುಖಾದ್ವಾಪಿ ಪ್ರಮುಚ್ಯತೇ|

11003003c ತತಸ್ತತಃ ಶಮಂ ಲಬ್ಧ್ವಾ ಸುಗತಿಂ ವಿಂದತೇ ಬುಧಃ||

ಯಾವ-ಯಾವ ಸಾಧನಗಳಿಂದ ಮನಸ್ಸು ದುಃಖ-ಸುಖಗಳಿಂದ ಮುಕ್ತವಾಗುವುದೋ ಆಯಾ ಸಾಧನಗಳನ್ನು ಬಳಸಿ ಮನಸ್ಸನ್ನು ಶಾಂತಗೊಳಿಸಿ ತಿಳಿದವರು ಸುಗತಿಯನ್ನು ಹೊಂದುತ್ತಾರೆ.

11003004a ಅಶಾಶ್ವತಮಿದಂ ಸರ್ವಂ ಚಿಂತ್ಯಮಾನಂ ನರರ್ಷಭ|

11003004c ಕದಲೀಸಂನಿಭೋ ಲೋಕಃ ಸಾರೋ ಹ್ಯಸ್ಯ ನ ವಿದ್ಯತೇ||

ನರರ್ಷಭ! ಆಲೋಚಿಸಿದರೆ ಇವೆಲ್ಲವೂ ಅಶಾಶ್ವತವು. ಬಾಳೆಯ ದಿಂಡಿನಂತೆ ಈ ಲೋಕವು ಸಾರವಿಲ್ಲದ್ದು.

11003005a ಗೃಹಾಣ್ಯೇವ ಹಿ ಮರ್ತ್ಯಾನಾಮಾಹುರ್ದೇಹಾನಿ ಪಂಡಿತಾಃ|

11003005c ಕಾಲೇನ ವಿನಿಯುಜ್ಯಂತೇ ಸತ್ತ್ವಮೇಕಂ ತು ಶೋಭನಮ್||

ಮರ್ತ್ಯರ ದೇಹಗಳು ಮನೆಗಳಂತೆ ಎಂದು ಪಂಡಿತರು ಹೇಳುತ್ತಾರೆ. ಕಾಲಾಂತರದಲ್ಲಿ ನಷ್ಟವಾಗಿಹೋಗುತ್ತದೆ. ಆದರೆ ಅದರೊಳಗಿರುವ ಶೋಭಿಸುವ ಸತ್ತ್ವವೊಂದೇ ಉಳಿದುಕೊಳ್ಳುತ್ತದೆ.

11003006a ಯಥಾ ಜೀರ್ಣಮಜೀರ್ಣಂ ವಾ ವಸ್ತ್ರಂ ತ್ಯಕ್ತ್ವಾ ತು ವೈ ನರ|

11003006c ಅನ್ಯದ್ರ್ರೋಚಯತೇ ವಸ್ತ್ರಮೇವಂ ದೇಹಾಃ ಶರೀರಿಣಾಮ್||

ಮನುಷ್ಯನು ಹೇಗೆ ಉಟ್ಟಿದ ವಸ್ತ್ರವು ಹಳೆಯದಾಗಿರಲಿ ಅಥವಾ ಹಳೆಯದಾಗದೇ ಇರಲಿ ಬೇರೊಂದನ್ನು ಬಯಸುತ್ತಾನೋ ಹಾಗೆ ಶರೀರಗಳಲ್ಲಿರುವುದೂ ಹೊಸ ದೇಹಗಳನ್ನು ಬಯಸುತ್ತದೆ.

11003007a ವೈಚಿತ್ರವೀರ್ಯ ವಾಸಂ ಹಿ ದುಃಖಂ ವಾ ಯದಿ ವಾ ಸುಖಮ್|

11003007c ಪ್ರಾಪ್ನುವಂತೀಹ ಭೂತಾನಿ ಸ್ವಕೃತೇನೈವ ಕರ್ಮಣಾ||

ವೈಚಿತ್ರವೀರ್ಯ! ಭೂತಗಳು ಸುಖ ಅಥವಾ ದುಃಖಗಳನ್ನು ತಾವೇ ಮಾಡಿದ ಕರ್ಮಗಳಿಂದ ಪಡೆಯುತ್ತವೆ.

11003008a ಕರ್ಮಣಾ ಪ್ರಾಪ್ಯತೇ ಸ್ವರ್ಗಂ ಸುಖಂ ದುಃಖಂ ಚ ಭಾರತ|

11003008c ತತೋ ವಹತಿ ತಂ ಭಾರಮವಶಃ ಸ್ವವಶೋಽಪಿ ವಾ||

ಭಾರತ! ಕರ್ಮಗಳಿಂದಲೇ ಸ್ವರ್ಗ, ಸುಖ ಮತ್ತು ದುಃಖಗಳು ದೊರೆಯುತ್ತವೆ. ಸ್ವಾಧೀನನಾಗಿರಲಿ ಅಥವಾ ಪರಾಧೀನನಾಗಿರಲಿ ಮನುಷ್ಯನು ಅವುಗಳ ಭಾರವನ್ನು ಹೊರಲೇ ಬೇಕಾಗುತ್ತದೆ.

11003009a ಯಥಾ ಚ ಮೃನ್ಮಯಂ ಭಾಂಡಂ ಚಕ್ರಾರೂಢಂ ವಿಪದ್ಯತೇ|

11003009c ಕಿಂ ಚಿತ್ಪ್ರಕ್ರಿಯಮಾಣಂ ವಾ ಕೃತಮಾತ್ರಮಥಾಪಿ ವಾ||

11003010a ಚಿನ್ನಂ ವಾಪ್ಯವರೋಪ್ಯಂತಮವತೀರ್ಣಮಥಾಪಿ ವಾ|

11003010c ಆರ್ದ್ರಂ ವಾಪ್ಯಥ ವಾ ಶುಷ್ಕಂ ಪಚ್ಯಮಾನಮಥಾಪಿ ವಾ||

11003011a ಅವತಾರ್ಯಮಾಣಮಾಪಾಕಾದುದ್ಧೃತಂ ವಾಪಿ ಭಾರತ|

11003011c ಅಥ ವಾ ಪರಿಭುಜ್ಯಂತಮೇವಂ ದೇಹಾಃ ಶರೀರಿಣಾಮ್||

ಶರೀರವು ಮಣ್ಣಿನ ಮಡಿಕೆಯಂತೆ. ಅದನ್ನು ತಯಾರಿಸುವ ಪ್ರತಿಯೊಂದು ಹಂತದಲ್ಲಿಯೂ ಅದು ಒಡೆದುಹೋಗಬಹುದು: ಹದಮಾಡಿದ ಮಣ್ಣನ್ನು ಚಕ್ರದಮೇಲೆ ಇರಿಸಿ ಚಕ್ರವನ್ನು ಒಂದೆರಡು ಬಾರಿ ತಿರುಗಿಸುತ್ತಲೇ ಅದು ಒಡೆಯಬಹುದು. ಅರ್ಧಾಕಾರವು ಬಂದಮೇಲೆ ಅಥವಾ ಸಂಪೂರ್ಣ ಮಡಿಕೆಯ ಆಕಾರ ಬಂದಾಗ ಅಥವಾ ಮಡಿಕೆಯನ್ನು ಚಕ್ರದಿಂದ ಮೇಲೆತ್ತುವಾಗ ಅಥವಾ ಕೆಳಕ್ಕಿಡುವಾಗ ಅಥವಾ ಒಣಗಿದ ಮೇಲೂ ಅಥವಾ ಬೇಯಿಸುವಾಗಲೂ, ಬೇಯಿಸಿ ಮೇಲೆತ್ತುವಾಗ ಅಥವಾ ಕಟ್ಟಕಡೆಗೆ ಉಪಯೋಗಿಸುವಾಗಲೂ ಮಡಿಕೆಯು ಒಡೆದುಹೋಗಬಹುದು. ದೇಹಗಳೂ ಹಾಗೆಯೇ.

11003012a ಗರ್ಭಸ್ಥೋ ವಾ ಪ್ರಸೂತೋ ವಾಪ್ಯಥ ವಾ ದಿವಸಾಂತರಃ|

11003012c ಅರ್ಧಮಾಸಗತೋ ವಾಪಿ ಮಾಸಮಾತ್ರಗತೋಽಪಿ ವಾ||

11003013a ಸಂವತ್ಸರಗತೋ ವಾಪಿ ದ್ವಿಸಂವತ್ಸರ ಏವ ವಾ|

11003013c ಯೌವನಸ್ಥೋಽಪಿ ಮಧ್ಯಸ್ಥೋ ವೃದ್ಧೋ ವಾಪಿ ವಿಪದ್ಯತೇ||

ಗರ್ಭಸ್ಥನಾಗಿರುವಾಗ, ಅಥವಾ ಹುಟ್ಟುವಾಗ, ಅಥವಾ ಹುಟ್ಟಿ ಒಂದು ದಿನಸದ ನಂತರ, ಅಥವಾ ಅರ್ಧಮಾಸದಲ್ಲಿ, ಅಥವಾ ಒಂದೇ ತಿಂಗಳಿನಲ್ಲಿ, ಅಥವಾ ಒಂದು ಸಂವತ್ಸರವಾದಮೇಲೆ, ಅಥವಾ ಎರಡು ವರ್ಷಗಳಲ್ಲಿ, ಅಥವಾ ಯೌವನಾವಸ್ಥೆಯಲ್ಲಿದ್ದಾಗ ಅಥವಾ ಮಧ್ಯವಯಸ್ಸಿನಲ್ಲಿದ್ದಾಗ, ಅಥವಾ ವೃದ್ಧಾಪ್ಯದಲ್ಲಿ ಶರೀರವು ನಾಶವಾಗಬಹುದು.

11003014a ಪ್ರಾಕ್ಕರ್ಮಭಿಸ್ತು ಭೂತಾನಿ ಭವಂತಿ ನ ಭವಂತಿ ಚ|

11003014c ಏವಂ ಸಾಂಸಿದ್ಧಿಕೇ ಲೋಕೇ ಕಿಮರ್ಥಮನುತಪ್ಯಸೇ||

ಹಿಂದಿನ ಕರ್ಮಗಳಿಗನುಗುಣವಾಗಿ ಭೂತಗಳು ಇರುತ್ತವೆ ಅಥವಾ ಇಲ್ಲವಾಗುತ್ತವೆ. ಈ ರೀತಿ ಲೋಕವು ನಡೆಯುತ್ತಿರುವಾಗ ಅದರಲ್ಲಿ ಏಕೆ ಪರಿತಪಿಸುತ್ತೀಯೆ?

11003015a ಯಥಾ ಚ ಸಲಿಲೇ ರಾಜನ್ಕ್ರೀಡಾರ್ಥಮನುಸಂಚರನ್|

11003015c ಉನ್ಮಜ್ಜೇಚ್ಚ ನಿಮಜ್ಜೇಚ್ಚ ಕಿಂ ಚಿತ್ಸತ್ತ್ವಂ ನರಾಧಿಪ||

11003016a ಏವಂ ಸಂಸಾರಗಹನಾದುನ್ಮಜ್ಜನನಿಮಜ್ಜನಾತ್|

11003016c ಕರ್ಮಭೋಗೇನ ಬಧ್ಯಂತಃ ಕ್ಲಿಶ್ಯಂತೇ ಯೇಽಲ್ಪಬುದ್ಧಯಃ||

ರಾಜನ್! ನರಾಧಿಪ! ಕ್ರೀಡಾರ್ಥವಾಗಿ ನೀರಿನಲ್ಲಿ ಕೆಲವೊಮ್ಮೆ ಮುಳುಗಿ ಮತ್ತು ಕೆಲವೊಮ್ಮೆ ಮೇಲೆ ತೇಲಿ ಈಸುವಂತೆ ಈ ಗಹನ ಸಂಸಾರದಲ್ಲಿ ಮೇಲೆದ್ದುಕೊಂಡು ಅಥವಾ ಮುಳುಗಿಕೊಂಡು ಈಸುತ್ತೇವೆ. ಕರ್ಮಭೋಗಕ್ಕೆ ಬದ್ಧರಾದ ಅಲ್ಪಬುದ್ಧಿಗಳು ಇದರಿಂದ ದುಃಖಿತರಾಗುತ್ತಾರೆ.

11003017a ಯೇ ತು ಪ್ರಾಜ್ಞಾಃ ಸ್ಥಿತಾಃ ಸತ್ಯೇ ಸಂಸಾರಾಂತಗವೇಷಿಣಃ|

11003017c ಸಮಾಗಮಜ್ಞಾ ಭೂತಾನಾಂ ತೇ ಯಾಂತಿ ಪರಮಾಂ ಗತಿಮ್||

ಸತ್ಯದಲ್ಲಿಯೇ ಇದ್ದುಕೊಂಡು ಸಂಸಾರದಲ್ಲಿ ಸರ್ವ ಭೂತಗಳ ಸಮಾಗಮಗಳ ರಹಸ್ಯವನ್ನು ತಿಳಿದುಕೊಂಡಿರುವ ಪ್ರಾಜ್ಞರು ಪರಮ ಗತಿಯನ್ನು ಹೊಂದುತ್ತಾರೆ.”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ತೃತೀಯೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಮೂರನೇ ಅಧ್ಯಾಯವು.

Comments are closed.