Stri Parva: Chapter 22

ಸ್ತ್ರೀ ಪರ್ವ

೨೨

ಹತನಾಗಿ ಬಿದ್ದಿದ್ದ ಜಯದ್ರಥನ ಬಳಿ ರೋದಿಸುತ್ತಿದ್ದ ದುಃಶಲೆಯನ್ನು ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (೧-೧೮).

11022001 ಗಾಂಧಾರ್ಯುವಾಚ

11022001a ಆವಂತ್ಯಂ ಭೀಮಸೇನೇನ ಭಕ್ಷಯಂತಿ ನಿಪಾತಿತಮ್|

11022001c ಗೃಧ್ರಗೋಮಾಯವಃ ಶೂರಂ ಬಹುಬಂಧುಮಬಂಧುವತ್||

ಗಾಂಧಾರಿಯು ಹೇಳಿದಳು: “ಭೀಮಸೇನನು ಕೆಳಗುರುಳಿಸಿದ ಅವಂತಿಯ ಶೂರನನ್ನು, ಅನೇಕ ಬಂಧುಗಳಿದ್ದರೂ ಬಂಧುಗಳ್ಯಾರೂ ಇಲ್ಲವೇನೋ ಎಂಬಂತೆ, ಹದ್ದು-ನರಿಗಳು ತಿನ್ನುತ್ತಿವೆ.

11022002a ತಂ ಪಶ್ಯ ಕದನಂ ಕೃತ್ವಾ ಶತ್ರೂಣಾಂ ಮಧುಸೂದನ|

11022002c ಶಯಾನಂ ವೀರಶಯನೇ ರುಧಿರೇಣ ಸಮುಕ್ಷಿತಮ್||

ಮಧುಸೂದನ! ಶತ್ರುಗಳೊಡನೆ ಕದನವಾಡಿ ರಕ್ತದಿಂದ ತೋಯ್ದುಹೋಗಿ ವೀರಶಯ್ಯೆಯಲ್ಲಿ ಮಲಗಿರುವ ಅವನನ್ನು ನೋಡು!

11022003a ತಂ ಸೃಗಾಲಾಶ್ಚ ಕಂಕಾಶ್ಚ ಕ್ರವ್ಯಾದಾಶ್ಚ ಪೃಥಗ್ವಿಧಾಃ|

11022003c ತೇನ ತೇನ ವಿಕರ್ಷಂತಿ ಪಶ್ಯ ಕಾಲಸ್ಯ ಪರ್ಯಯಮ್||

ಅವನನ್ನು ತೋಳಗಳೂ, ಹದ್ದುಗಳೂ, ಇತರ ಮಾಂಸಾಹಾರೀ ಪ್ರಾಣಿಗಳೂ ಎಳೆದು ತಿನ್ನುತ್ತಿವೆ. ಕಾಲದ ವೈಪರೀತ್ಯವನ್ನಾದರೂ ನೋಡು!

11022004a ಶಯಾನಂ ವೀರಶಯನೇ ವೀರಮಾಕ್ರಂದಸಾರಿಣಮ್|

11022004c ಆವಂತ್ಯಮಭಿತೋ ನಾರ್ಯೋ ರುದತ್ಯಃ ಪರ್ಯುಪಾಸತೇ||

ವೀರತನದಿಂದ ಯುದ್ಧಮಾಡಿ ವೀರಶಯನದಲ್ಲಿ ಮಲಗಿರುವ ಅವಂತಿದೇಶದ ರಾಜನನ್ನು ಅವನ ಪತ್ನಿಯರು ರೋದಿಸುತ್ತಾ ಸುತ್ತುವರೆದಿದ್ದಾರೆ.

11022005a ಪ್ರಾತಿಪೀಯಂ ಮಹೇಷ್ವಾಸಂ ಹತಂ ಭಲ್ಲೇನ ಬಾಹ್ಲಿಕಮ್|

11022005c ಪ್ರಸುಪ್ತಮಿವ ಶಾರ್ದೂಲಂ ಪಶ್ಯ ಕೃಷ್ಣ ಮನಸ್ವಿನಮ್||

ಕೃಷ್ಣ! ಪ್ರತೀಪನ ಮಗ ಮಹೇಷ್ವಾಸ ಮನಸ್ವಿ ಬಾಹ್ಲಿಕನು ಭಲ್ಲದಿಂದ ಹತನಾಗಿ ಸಿಂಹದಂತೆ ಮಲಗಿರುವುದನ್ನು ನೋಡು!

11022006a ಅತೀವ ಮುಖವರ್ಣೋಽಸ್ಯ ನಿಹತಸ್ಯಾಪಿ ಶೋಭತೇ|

11022006c ಸೋಮಸ್ಯೇವಾಭಿಪೂರ್ಣಸ್ಯ ಪೌರ್ಣಮಾಸ್ಯಾಂ ಸಮುದ್ಯತಃ||

ಹತನಾಗಿದ್ದರೂ ಇವನ ಮುಖದ ಬಣ್ಣವು ಹುಣ್ಣಿಮೆಯಲ್ಲಿ ಉದಯಿಸುತ್ತಿರುವ ಪೂರ್ಣಚಂದ್ರನಂತೆ ಶೋಭಿಸುತ್ತಿದೆ.

11022007a ಪುತ್ರಶೋಕಾಭಿತಪ್ತೇನ ಪ್ರತಿಜ್ಞಾಂ ಪರಿರಕ್ಷತಾ|

11022007c ಪಾಕಶಾಸನಿನಾ ಸಂಖ್ಯೇ ವಾರ್ದ್ಧಕ್ಷತ್ರಿರ್ನಿಪಾತಿತಃ||

ಪುತ್ರಶೋಕದಿಂದ ಸಂತಪ್ತನಾಗಿದ್ದ ಪಾಕಶಾಸನನ ಮಗನು ಪ್ರತಿಜ್ಞೆಯನ್ನು ಪಾಲಿಸುತ್ತಾ ಯುದ್ಧದಲ್ಲಿ ವೃದ್ಧಕ್ಷತ್ರನ ಮಗ ಜಯದ್ರಥನನ್ನು ಕೆಳಗುರುಳಿಸಿದನು.

11022008a ಏಕಾದಶ ಚಮೂರ್ಜಿತ್ವಾ ರಕ್ಷ್ಯಮಾಣಂ ಮಹಾತ್ಮನಾ|

11022008c ಸತ್ಯಂ ಚಿಕೀರ್ಷತಾ ಪಶ್ಯ ಹತಮೇನಂ ಜಯದ್ರಥಮ್||

ಪ್ರತಿಜ್ಞೆಯನ್ನು ಸತ್ಯವನ್ನಾಗಿಸಲು ಮಹಾತ್ಮ ಅರ್ಜುನನು ಜಯದ್ರಥನನ್ನು ರಕ್ಷಿಸುತ್ತಿದ್ದ ಹನ್ನೊಂದು ಅಕ್ಷೌಹಿಣೀ ಸೇನೆಗಳನ್ನೂ ಗೆದ್ದು ಅವನನ್ನು ಸಂಹರಿಸಿದುದನ್ನು ನೋಡು!

11022009a ಸಿಂಧುಸೌವೀರಭರ್ತಾರಂ ದರ್ಪಪೂರ್ಣಂ ಮನಸ್ವಿನಮ್|

11022009c ಭಕ್ಷಯಂತಿ ಶಿವಾ ಗೃಧ್ರಾ ಜನಾರ್ದನ ಜಯದ್ರಥಮ್||

ಜನಾರ್ದನ! ಸಿಂಧುಸೌವೀರರ ರಾಜ, ದರ್ಪದಿಂದ ತುಂಬಿದ್ದ, ಮನಸ್ವಿ ಜಯದ್ರಥನನ್ನು ಹದ್ದು-ನರಿಗಳು ತಿನ್ನುತ್ತಿವೆ!

11022010a ಸಂರಕ್ಷ್ಯಮಾಣಂ ಭಾರ್ಯಾಭಿರನುರಕ್ತಾಭಿರಚ್ಯುತ|

11022010c ಭಷಂತೋ ವ್ಯಪಕರ್ಷಂತಿ ಗಹನಂ ನಿಮ್ನಮಂತಿಕಾತ್||

ಅಚ್ಯುತ! ಅವನಲ್ಲಿಯೇ ಅನುರಕ್ತರಾದ ಭಾರ್ಯೆಯರು ಅವನನ್ನು ರಕ್ಷಿಸುತ್ತಿದ್ದರೂ ಅವು ಹತ್ತಿರದಲ್ಲಿಯೇ ಅವನ ದೇಹವನ್ನು ಬಹಳ ಆಳದಿಂದಲೇ ಕಿತ್ತು ತಿನ್ನುತ್ತಿವೆ!

11022011a ತಮೇತಾಃ ಪರ್ಯುಪಾಸಂತೇ ರಕ್ಷಮಾಣಾ ಮಹಾಭುಜಮ್|

11022011c ಸಿಂಧುಸೌವೀರಗಾಂಧಾರಕಾಂಬೋಜಯವನಸ್ತ್ರಿಯಃ||

ಆ ಮಹಾಭುಜನನ್ನು ರಕ್ಷಿಸುತ್ತಾ ಸಿಂಧು-ಸೌವೀರ-ಗಾಂಧಾರ-ಕಾಂಬೋಜ-ಯವನ ಸ್ತ್ರೀಯರು ಸುತ್ತುವರೆದು ಕುಳಿತಿದ್ದಾರೆ.

11022012a ಯದಾ ಕೃಷ್ಣಾಮುಪಾದಾಯ ಪ್ರಾದ್ರವತ್ಕೇಕಯೈಃ ಸಹ|

11022012c ತದೈವ ವಧ್ಯಃ ಪಾಂಡೂನಾಂ ಜನಾರ್ದನ ಜಯದ್ರಥಃ||

ಜನಾರ್ದನ! ಕೇಕಯರೊಂದಿಗೆ ದ್ರೌಪದಿಯನ್ನು ಎತ್ತಿಕೊಂಡು ಓಡಿಹೋದಾಗಲೇ ಜಯದ್ರಥನನ್ನು ಪಾಂಡವರು ವಧಿಸಬೇಕಿತ್ತು!

11022013a ದುಃಶಲಾಂ ಮಾನಯದ್ಭಿಸ್ತು ಯದಾ ಮುಕ್ತೋ ಜಯದ್ರಥಃ|

11022013c ಕಥಮದ್ಯ ನ ತಾಂ ಕೃಷ್ಣ ಮಾನಯಂತಿ ಸ್ಮ ತೇ ಪುನಃ||

ಆಗ ದುಃಶಲೆಯನ್ನು ಗೌರವಿಸುತ್ತಾ ಜಯದ್ರಥನನ್ನು ಬಿಟ್ಟುಬಿಟ್ಟಿದ್ದರು. ಆದರೆ ಕೃಷ್ಣ! ಈಗ ಏಕೆ ಅವರು ಪುನಃ ಅವಳನ್ನು ಗೌರವಿಸಲಿಲ್ಲ?

11022014a ಸೈಷಾ ಮಮ ಸುತಾ ಬಾಲಾ ವಿಲಪಂತೀ ಸುದುಃಖಿತಾ|

11022014c ಪ್ರಮಾಪಯತಿ ಚಾತ್ಮಾನಮಾಕ್ರೋಶತಿ ಚ ಪಾಂಡವಾನ್||

ನನ್ನ ಮಗಳು ಬಾಲಕಿಯು ತುಂಬಾ ದುಃಖಿತಳಾಗಿ ವಿಲಪಿಸುತ್ತಿದ್ದಾಳೆ. ಪಾಂಡವರನ್ನು ನಿಂದಿಸುತ್ತಾ ತನ್ನ ಎದೆಯನ್ನು ಬಡಿದುಕೊಳ್ಳುತ್ತಿದ್ದಾಳೆ.

11022015a ಕಿಂ ನು ದುಃಖತರಂ ಕೃಷ್ಣ ಪರಂ ಮಮ ಭವಿಷ್ಯತಿ|

11022015c ಯತ್ಸುತಾ ವಿಧವಾ ಬಾಲಾ ಸ್ನುಷಾಶ್ಚ ನಿಹತೇಶ್ವರಾಃ||

ಕೃಷ್ಣ! ನನ್ನ ಮಗಳು ಬಾಲಕಿಯು ವಿಧವೆಯಾಗಿ ಹೋದಳು. ನನ್ನ ಸೊಸೆಯಂದಿರು ಗಂಡಂದಿರನ್ನು ಕಳೆದುಕೊಂಡರು. ನನಗೆ ಇದಕ್ಕಿಂತಲೂ ಹೆಚ್ಚಿನ ದುಃಖವು ಬೇರೆ ಯಾವುದಿದೆ?

11022016a ಅಹೋ ಧಿಗ್ದುಃಶಲಾಂ ಪಶ್ಯ ವೀತಶೋಕಭಯಾಮಿವ|

11022016c ಶಿರೋ ಭರ್ತುರನಾಸಾದ್ಯ ಧಾವಮಾನಾಮಿತಸ್ತತಃ||

ಅಯ್ಯೋ ಧಿಕ್ಕಾರವೇ! ನೋಡು! ದುಃಶಲೆಯು ತನ್ನ ಪತಿಯ ಶಿರವನ್ನು ಕಾಣದೇ ಶೋಕ-ಭಯಗಳನ್ನು ತೊರೆದಿರುವಳೋ ಎನ್ನುವಂತೆ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದಾಳೆ!

11022017a ವಾರಯಾಮಾಸ ಯಃ ಸರ್ವಾನ್ಪಾಂಡವಾನ್ಪುತ್ರಗೃದ್ಧಿನಃ|

11022017c ಸ ಹತ್ವಾ ವಿಪುಲಾಃ ಸೇನಾಃ ಸ್ವಯಂ ಮೃತ್ಯುವಶಂ ಗತಃ||

ಮಗ ಅಭಿಮನ್ಯುವನ್ನು ಅನುಸರಿಸಿಬಂದ ಎಲ್ಲ ಪಾಂಡವರನ್ನೂ ತಡೆದು, ವಿಶಾಲ ಸೇನೆಯನ್ನು ಸಂಹರಿಸಿ ಜಯದ್ರಥನು ಸ್ವಯಂ ಮೃತ್ಯುವಶನಾದನು.

11022018a ತಂ ಮತ್ತಮಿವ ಮಾತಂಗಂ ವೀರಂ ಪರಮದುರ್ಜಯಮ್|

11022018c ಪರಿವಾರ್ಯ ರುದಂತ್ಯೇತಾಃ ಸ್ತ್ರಿಯಶ್ಚಂದ್ರೋಪಮಾನನಾಃ||

ಮದಿಸಿದ ಮಾತಂಗದಂತಿರುವ, ಚಂದ್ರನಂಥಹ ಮುಖವಿದ್ದ ಆ ಪರಮದುರ್ಜಯ ವೀರನನ್ನು ಸ್ತ್ರೀಯರು ಸುತ್ತುವರೆದು ರೋದಿಸುತ್ತಿದ್ದಾರೆ!”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀವಾಕ್ಯೇ ದ್ವಾವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀವಾಕ್ಯ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.

Comments are closed.