Stri Parva: Chapter 18

ಸ್ತ್ರೀ ಪರ್ವ

೧೮

ರೋದಿಸುತ್ತಿರುವ ತನ್ನ ಸೊಸೆಯಂದಿರನ್ನು ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (೧-೧೮). ಗಾಂಧಾರಿಯು ಹತನಾಗಿ ಬಿದ್ದಿದ್ದ ದುಃಶಾಸನನನ್ನು ಕೃಷ್ಣನಿಗೆ ತೋರಿಸಿ ವಿಲಪಿಸಿದುದು (೧೯-೨೮).

11018001 ಗಾಂಧಾರ್ಯುವಾಚ

11018001a ಪಶ್ಯ ಮಾಧವ ಪುತ್ರಾನ್ಮೇ ಶತಸಂಖ್ಯಾನ್ಜಿತಕ್ಲಮಾನ್|

11018001c ಗದಯಾ ಭೀಮಸೇನೇನ ಭೂಯಿಷ್ಠಂ ನಿಹತಾನ್ರಣೇ||

ಗಾಂಧಾರಿಯು ಹೇಳಿದಳು: “ಮಾಧವ! ಆಯಾಸವೇ ಇಲ್ಲದೇ ಯುದ್ಧಮಾಡುತ್ತಿದ್ದ ನನ್ನ ನೂರು ಮಕ್ಕಳು ರಣದಲ್ಲಿ ಭೀಮಸೇನನ ಗದೆಯಿಂದ ಹತರಾಗಿರುವುದನ್ನು ನೋಡು!

11018002a ಇದಂ ದುಃಖತರಂ ಮೇಽದ್ಯ ಯದಿಮಾ ಮುಕ್ತಮೂರ್ಧಜಾಃ|

11018002c ಹತಪುತ್ರಾ ರಣೇ ಬಾಲಾಃ ಪರಿಧಾವಂತಿ ಮೇ ಸ್ನುಷಾಃ||

ನನ್ನ ಬಾಲ ಸೊಸೆಯರು ಪುತ್ರರನ್ನು ಕಳೆದುಕೊಂಡು ಕೂದಲುಗಳನ್ನು ಕೆದರಿಕೊಂಡು ರಣದಲ್ಲಿ ಓಡಾಡುತ್ತಿರುವುದಕ್ಕಿಂತಲೂ ಹೆಚ್ಚಿನ ದುಃಖವು ಇಂದು ಯಾವುದಿದೆ?

11018003a ಪ್ರಾಸಾದತಲಚಾರಿಣ್ಯಶ್ಚರಣೈರ್ಭೂಷಣಾನ್ವಿತೈಃ|

11018003c ಆಪನ್ನಾ ಯತ್ ಸ್ಪೃಶಂತೀಮಾ ರುಧಿರಾರ್ದ್ರಾಂ ವಸುಂಧರಾಮ್||

ಭೂಷಣಗಳಿಂದ ಅಲಂಕೃತ ಕಾಲ್ನಡುಗೆಯಲ್ಲಿ ಅರಮನೆಯ ನೆಲವನ್ನು ಸ್ಪರ್ಷಿಸುತ್ತಿದ್ದ ಅವರು ರಕ್ತದಿಂದ ನೆನೆದಿರುವ ಭೂಮಿಯನ್ನು ಅದೇ ಕಾಲುಗಳಿಂದ ಸ್ಪರ್ಷಿಸುತ್ತಿದ್ದಾರೆ!

11018004a ಗೃಧ್ರಾನುತ್ಸಾರಯಂತ್ಯಶ್ಚ ಗೋಮಾಯೂನ್ವಾಯಸಾಂಸ್ತಥಾ|

11018004c ಶೋಕೇನಾರ್ತಾ ವಿಘೂರ್ಣಂತ್ಯೋ ಮತ್ತಾ ಇವ ಚರಂತ್ಯುತ||

ಶೋಕದಿಂದ ಆರ್ತರಾಗಿ ಅವರು ಅಮಲೇರಿದ ಸ್ತ್ರೀಯರಂತೆ ತೂರಾಡುತ್ತಾ ಹದ್ದು-ನರಿ-ಕಾಗೆಗಳನ್ನು ಬಹಳ ಕಷ್ಟದಿಂದ ಓಡಿಸುತ್ತಿದ್ದಾರೆ!

11018005a ಏಷಾನ್ಯಾ ತ್ವನವದ್ಯಾಂಗೀ ಕರಸಂಮಿತಮಧ್ಯಮಾ|

11018005c ಘೋರಂ ತದ್ವೈಶಸಂ ದೃಷ್ಟ್ವಾ ನಿಪತತ್ಯತಿದುಃಖಿತಾ||

ತೆಳು ಸೊಂಟದ ನನ್ನ ಇನ್ನೊಬ್ಬ ಸೊಸೆಯು ಈ ಘೋರ ವಿನಾಶವನ್ನು ನೋಡಿ ಅತ್ಯಂತ ದುಃಖಿತಳಾಗಿ ಇಗೋ ಕೆಳಗೆ ಬೀಳುತ್ತಿದ್ದಾಳೆ!

11018006a ದೃಷ್ಟ್ವಾ ಮೇ ಪಾರ್ಥಿವಸುತಾಮೇತಾಂ ಲಕ್ಷ್ಮಣಮಾತರಮ್|

11018006c ರಾಜಪುತ್ರೀಂ ಮಹಾಬಾಹೋ ಮನೋ ನ ವ್ಯುಪಶಾಮ್ಯತಿ||

ಮಹಾಬಾಹೋ! ರಾಜಪುತ್ರಿ, ಲಕ್ಷ್ಮಣನ ತಾಯಿ, ಪಾರ್ಥಿವಸುತೆಯನ್ನು ನೋಡಿ ನನ್ನ ಮನಸ್ಸು ಶಾಂತವಾಗುತ್ತಿಲ್ಲ!

11018007a ಭ್ರಾತೄಂಶ್ಚಾನ್ಯಾಃ ಪತೀಂಶ್ಚಾನ್ಯಾಃ ಪುತ್ರಾಂಶ್ಚ ನಿಹತಾನ್ಭುವಿ|

11018007c ದೃಷ್ಟ್ವಾ ಪರಿಪತಂತ್ಯೇತಾಃ ಪ್ರಗೃಹ್ಯ ಸುಭುಜಾ ಭುಜಾನ್||

ಹತರಾಗಿ ಭೂಮಿಯ ಮೇಲೆ ಬಿದ್ದಿರುವ ಸಹೋದರರನ್ನು, ಇನ್ನು ಕೆಲವರು ಪತಿಗಳನ್ನು ಮತ್ತು ಇನ್ನು ಕೆಲವರು ಪುತ್ರರನ್ನು ನೋಡಿ ತಮ್ಮ ಸುಂದರ ಬಾಹುಗಳನ್ನು ಮೇಲೆತ್ತಿ ಪರಿತಪಿಸುತ್ತಿದ್ದಾರೆ!

11018008a ಮಧ್ಯಮಾನಾಂ ತು ನಾರೀಣಾಂ ವೃದ್ಧಾನಾಂ ಚಾಪರಾಜಿತ|

11018008c ಆಕ್ರಂದಂ ಹತಬಂಧೂನಾಂ ದಾರುಣೇ ವೈಶಸೇ ಶೃಣು||

ಅಪರಾಜಿತ! ಬಂಧುಗಳು ಹತರಾಗಿರುವುದನ್ನು ನೋಡಿ ದಾರುಣವಾಗಿ ಕಷ್ಟದಿಂದ ರೋದಿಸುತ್ತಿರುವ ಮಧ್ಯವಯಸ್ಸಿನ ಮತ್ತು ವೃದ್ಧ ನಾರಿಯರ ಆಕ್ರಂದವನ್ನು ಕೇಳು!

11018009a ರಥನೀಡಾನಿ ದೇಹಾಂಶ್ಚ ಹತಾನಾಂ ಗಜವಾಜಿನಾಮ್|

11018009c ಆಶ್ರಿತಾಃ ಶ್ರಮಮೋಹಾರ್ತಾಃ ಸ್ಥಿತಾಃ ಪಶ್ಯ ಮಹಾಬಲ||

ಮಹಾಬಲ! ಶ್ರಮದಿಂದ ಬಳಲಿದ ಆ ಸ್ತ್ರೀಯರು ರಥದ ನೊಗಗಳನ್ನೂ, ಸತ್ತುಹೋದ ಆನೆ-ಕುದುರೆಗಳ ದೇಹವನ್ನೂ ಆಶ್ರಯಿಸಿ ನಿಂತಿರುವುದನ್ನು ನೋಡು!

11018010a ಅನ್ಯಾ ಚಾಪಹೃತಂ ಕಾಯಾಚ್ಚಾರುಕುಂಡಲಮುನ್ನಸಮ್|

11018010c ಸ್ವಸ್ಯ ಬಂಧೋಃ ಶಿರಃ ಕೃಷ್ಣ ಗೃಹೀತ್ವಾ ಪಶ್ಯ ತಿಷ್ಠತಿ||

ಕೃಷ್ಣ! ಇನ್ನೊಬ್ಬಳು ಶರೀರದಿಂದ ತುಂಡಾಗಿರುವ ಸುಂದರ ಕುಂಡಲಗಳನ್ನು ಧರಿಸಿದ್ದ ತನ್ನ ಬಂಧುವಿನ ಶಿರವನ್ನು ಹಿಡಿದು ನಿಂತಿರುವುದನ್ನು ನೋಡು!

11018011a ಪೂರ್ವಜಾತಿಕೃತಂ ಪಾಪಂ ಮನ್ಯೇ ನಾಲ್ಪಮಿವಾನಘ|

11018011c ಏತಾಭಿರನವದ್ಯಾಭಿರ್ಮಯಾ ಚೈವಾಲ್ಪಮೇಧಯಾ||

ಅನಘ! ಹಿಂದಿನ ಜನ್ಮದಲ್ಲಿ ನಾನು ಮಾಡಿದ ಪಾಪಗಳು ಅಲ್ಪವಾಗಿರಲಾರದು. ಆದುದರಿಂದಲೇ ಮಂದಬುದ್ಧಿಯುಳ್ಳ ನಾನು ಇಂತಹ ಕೀಳು ಪರಿಸ್ಥಿತಿಗೆ ಇಳಿದಿದ್ದೇನೆ!

11018012a ತದಿದಂ ಧರ್ಮರಾಜೇನ ಯಾತಿತಂ ನೋ ಜನಾರ್ದನ|

11018012c ನ ಹಿ ನಾಶೋಽಸ್ತಿ ವಾರ್ಷ್ಣೇಯ ಕರ್ಮಣೋಃ ಶುಭಪಾಪಯೋಃ||

ಜನಾರ್ದನ! ಅದಕ್ಕಾಗಿಯೇ ಧರ್ಮರಾಜನು ನಮಗೆ ಈ ನೋವನ್ನಿತ್ತಿದ್ದಾನೆ! ವಾರ್ಷ್ಣೇಯ! ಶುಭ-ಪಾಪ ಕರ್ಮಗಳು ಎಂದೂ (ಫಲವನ್ನು ಕೊಡದೇ) ನಾಶವಾಗುವುದಿಲ್ಲ!

11018013a ಪ್ರತ್ಯಗ್ರವಯಸಃ ಪಶ್ಯ ದರ್ಶನೀಯಕುಚೋದರಾಃ|

11018013c ಕುಲೇಷು ಜಾತಾ ಹ್ರೀಮತ್ಯಃ ಕೃಷ್ಣಪಕ್ಷಾಕ್ಷಿಮೂರ್ಧಜಾಃ||

11018014a ಹಂಸಗದ್ಗದಭಾಷಿಣ್ಯೋ ದುಃಖಶೋಕಪ್ರಮೋಹಿತಾಃ|

11018014c ಸಾರಸ್ಯ ಇವ ವಾಶಂತ್ಯಃ ಪತಿತಾಃ ಪಶ್ಯ ಮಾಧವ||

ಮಾಧವ! ಇನ್ನೂ ಹೆಚ್ಚು ವಯಸ್ಸಾಗಿರದ, ಸುಂದರ ಮುಖ-ಕುಚಗಳುಳ್ಳ, ಸತ್ಕುಲಪ್ರಸೂತೆಯರಾದ, ಲಜ್ಜಾಶೀಲರಾದ, ಕಪ್ಪು ರೆಪ್ಪೆ-ಕಣ್ಣುಗಳುಳ್ಳ, ಹಂಸಪಕ್ಷಿಗಳಂತೆ ಗದ್ಗದಸ್ವರದಲ್ಲಿ ಕೂಗುತ್ತಿರುವ, ದುಃಖಶೋಕಗಳಿಂದ ಮೂರ್ಛಿತರಾಗಿ ಸಾರಸ ಪಕ್ಷಿಗಳಂತೆ ರೋದಿಸುತ್ತಾ ಬೀಳುತ್ತಿರುವವರನ್ನು ನೋಡು!

11018015a ಫುಲ್ಲಪದ್ಮಪ್ರಕಾಶಾನಿ ಪುಂಡರೀಕಾಕ್ಷ ಯೋಷಿತಾಮ್|

11018015c ಅನವದ್ಯಾನಿ ವಕ್ತ್ರಾಣಿ ತಪತ್ಯಸುಖರಶ್ಮಿವಾನ್||

ಪುಂಡರೀಕಾಕ್ಷ! ಅರಳಿದ ಕಮಲದ ಕಾಂತಿಯಿಂದ ಪ್ರಕಾಶಿಸುತ್ತಿರುವ ಸ್ತ್ರೀಯರ ಸುಂದರ ಮುಖಗಳನ್ನು ಸೂರ್ಯನು ತನ್ನ ಪ್ರಖರ ಕಿರಣಗಳಿಂದ ಸುಡುತ್ತಿದ್ದಾನೆ!

11018016a ಈರ್ಷೂಣಾಂ ಮಮ ಪುತ್ರಾಣಾಂ ವಾಸುದೇವಾವರೋಧನಮ್|

11018016c ಮತ್ತಮಾತಂಗದರ್ಪಾಣಾಂ ಪಶ್ಯಂತ್ಯದ್ಯ ಪೃಥಗ್ಜನಾಃ||

ವಾಸುದೇವ! ಮತ್ತ ಮಾತಂಗದ ದರ್ಪವುಳ್ಳ ನನ್ನ ಪುತ್ರರು ಅಸೂಯೆಪಟ್ಟು ಬೇರೆ ಯಾರೂ ನೋಡಬಾರದೆನ್ನುತ್ತಿದ್ದರೋ ಅವರ ಪತ್ನಿಯರನ್ನು ಇಂದು ಸಾಮಾನ್ಯ ಜನರೂ ನೋಡುತ್ತಿದ್ದಾರೆ!

11018017a ಶತಚಂದ್ರಾಣಿ ಚರ್ಮಾಣಿ ಧ್ವಜಾಂಶ್ಚಾದಿತ್ಯಸಂನಿಭಾನ್|

11018017c ರೌಕ್ಮಾಣಿ ಚೈವ ವರ್ಮಾಣಿ ನಿಷ್ಕಾನಪಿ ಚ ಕಾಂಚನಾನ್||

11018018a ಶೀರ್ಷತ್ರಾಣಾನಿ ಚೈತಾನಿ ಪುತ್ರಾಣಾಂ ಮೇ ಮಹೀತಲೇ|

11018018c ಪಶ್ಯ ದೀಪ್ತಾನಿ ಗೋವಿಂದ ಪಾವಕಾನ್ಸುಹುತಾನಿವ||

ಗೋವಿಂದ! ನೂರು ಚಂದ್ರರ ಚಿಹ್ನೆಗಳುಳ್ಳ ನನ್ನ ಪುತ್ರರ ಗುರಾಣಿಗಳು, ಆದಿತ್ಯಸನ್ನಿಭ ಧ್ವಜಗಳು, ಚಿನ್ನದ ಕವಚಗಳು, ಕಾಂಚನ ಪದಕಗಳು ಮತ್ತು ಕಿರೀಟಗಳು ಭೂಮಿಯ ಮೇಲೆ ಬಿದ್ದು ಉರಿಯುತ್ತಿರುವ ಅಗ್ನಿಯಂತೆ ಬೆಳಗುತ್ತಿರುವುದನ್ನು ನೋಡು!

11018019a ಏಷ ದುಃಶಾಸನಃ ಶೇತೇ ಶೂರೇಣಾಮಿತ್ರಘಾತಿನಾ|

11018019c ಪೀತಶೋಣಿತಸರ್ವಾಂಗೋ ಭೀಮಸೇನೇನ ಪಾತಿತಃ||

ಶತ್ರುಸೂದನ ಶೂರ ಭೀಮಸೇನನು ಸರ್ವಾಂಗಗಳಿಂದ ಸುರಿಯುತ್ತಿದ್ದ ರಕ್ತವನ್ನು ಕುಡಿದು ಕೆಳಗುರುಳಿಸಿದ ದುಃಶಾಸನನು ಇಲ್ಲಿ ಮಲಗಿದ್ದಾನೆ!

11018020a ಗದಯಾ ವೀರಘಾತಿನ್ಯಾ ಪಶ್ಯ ಮಾಧವ ಮೇ ಸುತಮ್|

11018020c ದ್ಯೂತಕ್ಲೇಶಾನನುಸ್ಮೃತ್ಯ ದ್ರೌಪದ್ಯಾ ಚೋದಿತೇನ ಚ||

ಮಾಧವ! ದ್ಯೂತದ ಸಮಯದಲ್ಲಿ ದ್ರೌಪದಿಗೆ ಕೊಟ್ಟ ಕ್ಲೇಶಗಳ ಸ್ಮರಣೆಯಿಂದ ಪ್ರೇರಿತನಾದ ವೀರಘಾತೀ ಭೀಮನ ಗದೆಯಿಂದ ಕೆಳಗುರುಳಿಸಲ್ಪಟ್ಟು ಬಿದ್ದಿರುವ ನನ್ನ ಮಗನನ್ನು ನೋಡು!

11018021a ಉಕ್ತಾ ಹ್ಯನೇನ ಪಾಂಚಾಲೀ ಸಭಾಯಾಂ ದ್ಯೂತನಿರ್ಜಿತಾ|

11018021c ಪ್ರಿಯಂ ಚಿಕೀರ್ಷತಾ ಭ್ರಾತುಃ ಕರ್ಣಸ್ಯ ಚ ಜನಾರ್ದನ||

ಜನಾರ್ದನ! ಇವನು ತನ್ನ ಅಣ್ಣ ಮತ್ತು ಕರ್ಣನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ದ್ಯೂತದಲ್ಲಿ ಸೋತ ಪಾಂಚಾಲಿಯೊಡನೆ ಸಭೆಯಲ್ಲಿ ಹೀಗೆ ಹೇಳಿದ್ದನು:

11018022a ಸಹೈವ ಸಹದೇವೇನ ನಕುಲೇನಾರ್ಜುನೇನ ಚ|

11018022c ದಾಸಭಾರ್ಯಾಸಿ ಪಾಂಚಾಲಿ ಕ್ಷಿಪ್ರಂ ಪ್ರವಿಶ ನೋ ಗೃಹಾನ್||

“ಪಾಂಚಾಲೀ! ದಾಸರಾದ ಸಹದೇವ-ನಕುಲ-ಅರ್ಜುನರ ಪತ್ನಿಯಾದ ನೀನೂ ಕೂಡ ದಾಸಿಯಂತೆ. ಆದುದರಿಂದ ಬೇಗನೇ ನೀನು ನಮ್ಮ ಮನೆಗಳನ್ನು ಪ್ರವೇಶಿಸು!”

11018023a ತತೋಽಹಮಬ್ರುವಂ ಕೃಷ್ಣ ತದಾ ದುರ್ಯೋಧನಂ ನೃಪಮ್|

11018023c ಮೃತ್ಯುಪಾಶಪರಿಕ್ಷಿಪ್ತಂ ಶಕುನಿಂ ಪುತ್ರ ವರ್ಜಯ||

ಕೃಷ್ಣ! ಆಗ ನಾನು ನೃಪ ದುರ್ಯೋಧನನಿಗೆ ಹೀಗೆ ಹೇಳಿದ್ದೆನು: “ಮಗನೇ! ಮೃತ್ಯುಪಾಶದಿಂದ ಬಂಧಿಸಲ್ಪಟ್ಟಿರುವ ಶಕುನಿಯನ್ನು ಪರಿತ್ಯಜಿಸು!

11018024a ನಿಬೋಧೈನಂ ಸುದುರ್ಬುದ್ಧಿಂ ಮಾತುಲಂ ಕಲಹಪ್ರಿಯಮ್|

11018024c ಕ್ಷಿಪ್ರಮೇನಂ ಪರಿತ್ಯಜ್ಯ ಪುತ್ರ ಶಾಮ್ಯಸ್ವ ಪಾಂಡವೈಃ||

ಈ ನಿನ್ನ ಮಾವ ದುರ್ಬುದ್ಧಿಯು ಕಲಹಪ್ರಿಯನೆನ್ನುವುದನ್ನು ತಿಳಿದುಕೋ. ಮಗನೇ! ಬೇಗನೇ ಇವನನ್ನು ಪರಿತ್ಯಜಿಸಿ ಪಾಂಡವರೊಂದಿಗೆ ಸಂಧಿಮಾಡಿಕೋ!

11018025a ನ ಬುಧ್ಯಸೇ ತ್ವಂ ದುರ್ಬುದ್ಧೇ ಭೀಮಸೇನಮಮರ್ಷಣಮ್|

11018025c ವಾಙ್ನಾರಾಚೈಸ್ತುದಂಸ್ತೀಕ್ಷ್ಣೈರುಲ್ಕಾಭಿರಿವ ಕುಂಜರಮ್||

ದುರ್ಬುದ್ಧೇ! ಕೋಪಿಷ್ಟ ಭೀಮಸೇನನನ್ನು ನೀನು ಅರಿತಿಲ್ಲ! ಉರಿಯುತ್ತಿರುವ ಕೊಳ್ಳಿಗಳಿಂದ ಆನೆಯನ್ನು ತಿವಿದು ಕೆರಳಿಸುವಂತೆ ನೀನು ಮಾತುಗಳೆಂಬ ತೀಕ್ಷ್ಣ ಬಾಣಗಳಿಂದ ಚುಚ್ಚುತ್ತಿರುವೆ!”

11018026a ತಾನೇಷ ರಭಸಃ ಕ್ರೂರೋ ವಾಕ್ಶಲ್ಯಾನವಧಾರಯನ್|

11018026c ಉತ್ಸಸರ್ಜ ವಿಷಂ ತೇಷು ಸರ್ಪೋ ಗೋವೃಷಭೇಷ್ವಿವ||

ರಭಸದಿಂದಾಡಿದ ಆ ಕ್ರೂರ ಮಾತಿನ ಮುಳ್ಳುಗಳನ್ನು ಸಹಿಸಿಟ್ಟುಕೊಂಡಿದ್ದ ಭೀಮಸೇನನು ಸರ್ಪವು ಗೂಳಿಗಳ ಮೇಲೆ ಹೇಗೋ ಹಾಗೆ ನನ್ನ ಮಕ್ಕಳ ಮೇಲೆ ವಿಷವನ್ನು ಕಾರಿದ್ದಾನೆ!

11018027a ಏಷ ದುಃಶಾಸನಃ ಶೇತೇ ವಿಕ್ಷಿಪ್ಯ ವಿಪುಲೌ ಭುಜೌ|

11018027c ನಿಹತೋ ಭೀಮಸೇನೇನ ಸಿಂಹೇನೇವ ಮಹರ್ಷಭಃ||

ಸಿಂಹದಿಂದ ಹತವಾದ ಮಹಾಸಲಗದಂತೆ ಭೀಮಸೇನನಿಂದ ಹತನಾದ ದುಃಶಾಸನನು ಇಗೋ ಇಲ್ಲಿ ತನ್ನ ಎರಡು ವಿಪುಲ ಭುಜಗಳನ್ನೂ ಚಾಚಿ ಮಲಗಿದ್ದಾನೆ!

11018028a ಅತ್ಯರ್ಥಮಕರೋದ್ರೌದ್ರಂ ಭೀಮಸೇನೋಽತ್ಯಮರ್ಷಣಃ|

11018028c ದುಃಶಾಸನಸ್ಯ ಯತ್ಕ್ರುದ್ಧೋಽಪಿಬಚ್ಚೋಣಿತಮಾಹವೇ||

ಅತ್ಯಂತ ಅಸಹನಶೀಲನಾದ ಭೀಮಸೇನನು ಕ್ರುದ್ಧನಾಗಿ ರಣದಲ್ಲಿ ದುಃಶಾಸನನ ರಕ್ತವನ್ನು ಕುಡಿದು ರೌದ್ರಕರ್ಮವನ್ನೇ ಎಸಗಿದನು!”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀವಾಕ್ಯೇ ಅಷ್ಟಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀವಾಕ್ಯ ಎನ್ನುವ ಹದಿನೆಂಟನೇ ಅಧ್ಯಾಯವು.

Comments are closed.