Stri Parva: Chapter 16

ಸ್ತ್ರೀ ಪರ್ವ

೧೬

ಗಾಂಧಾರಿಯು ವ್ಯಾಸನು ದಯಪಾಲಿಸಿದ ದಿವ್ಯ ದೃಷ್ಟಿಯಿಂದ ರಣರಂಗವನ್ನು ನೋಡಿದುದು (೧-೧೭). ಗಾಂಧಾರಿಯು ರಣರಂಗವನ್ನು ಕೃಷ್ಣನಿಗೆ ತೋರಿಸಿ ರೋದಿಸಿದುದು (೧೮-೫೯).

Image result for dhritarashtra embraces bhima11016001 ವೈಶಂಪಾಯನ ಉವಾಚ

11016001a ಏವಮುಕ್ತ್ವಾ ತು ಗಾಂಧಾರೀ ಕುರೂಣಾಮಾವಿಕರ್ತನಮ್|

11016001c ಅಪಶ್ಯತ್ತತ್ರ ತಿಷ್ಠಂತೀ ಸರ್ವಂ ದಿವ್ಯೇನ ಚಕ್ಷುಷಾ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಗಾಂಧಾರಿಯು ನಿಂತಲ್ಲಿಂದಲೇ ತನ್ನ ದಿವ್ಯ ದೃಷ್ಟಿಯಿಂದ ಕುರುಗಳ ವಿನಾಶಸ್ಥಳವೆಲ್ಲವನ್ನೂ ನೋಡಿದಳು.

11016002a ಪತಿವ್ರತಾ ಮಹಾಭಾಗಾ ಸಮಾನವ್ರತಚಾರಿಣೀ|

11016002c ಉಗ್ರೇಣ ತಪಸಾ ಯುಕ್ತಾ ಸತತಂ ಸತ್ಯವಾದಿನೀ||

11016003a ವರದಾನೇನ ಕೃಷ್ಣಸ್ಯ ಮಹರ್ಷೇಃ ಪುಣ್ಯಕರ್ಮಣಃ|

11016003c ದಿವ್ಯಜ್ಞಾನಬಲೋಪೇತಾ ವಿವಿಧಂ ಪರ್ಯದೇವಯತ್||

ಆ ಸಮಾನವ್ರತಚಾರಿಣೀ, ಪ್ರತಿವ್ರತೆ, ಮಹಾಭಾಗೆ ಸತ್ಯವಾದಿನಿಯು ಸತತವೂ ಉಗ್ರ ತಪೋನಿರತಳಾಗಿದ್ದು, ಪುಣ್ಯಕರ್ಮಿ ಮಹರ್ಷಿ ಕೃಷ್ಣನ ವರದಾನದಿಂದ ಪಡೆದ ದಿವ್ಯಜ್ಞಾನದ ಬಲವನ್ನು ಪಡೆದು ವಿವಿಧ ರೀತಿಗಳಲ್ಲಿ ಶೋಕಿಸಿದಳು.

11016004a ದದರ್ಶ ಸಾ ಬುದ್ಧಿಮತೀ ದೂರಾದಪಿ ಯಥಾಂತಿಕೇ|

11016004c ರಣಾಜಿರಂ ನೃವೀರಾಣಾಮದ್ಭುತಂ ಲೋಮಹರ್ಷಣಮ್||

ಅಷ್ಟು ದೂರದಿಂದ ಕೂಡ ಆ ಬುದ್ಧಿಮತಿಯು ಅತಿ ಹತ್ತಿರದಿಂದಲೋ ಎಂಬಂತೆ ನರವೀರರ ಲೋಮಹರ್ಷಣ ರಣಭೂಮಿಯನ್ನು ನೋಡಿದಳು.

11016005a ಅಸ್ಥಿಕೇಶಪರಿಸ್ತೀರ್ಣಂ ಶೋಣಿತೌಘಪರಿಪ್ಲುತಮ್|

11016005c ಶರೀರೈರ್ಬಹುಸಾಹಸ್ರೈರ್ವಿನಿಕೀರ್ಣಂ ಸಮಂತತಃ||

ರಣಭೂಮಿಯು ಮೂಳೆಗಳಿಂದಲೂ, ತಲೆಗೂದಲುಗಳಿಂದಲೂ ವ್ಯಾಪ್ತವಾಗಿತ್ತು. ರಕ್ತದಿಂದ ತುಂಬಿಹೋಗಿತ್ತು. ಅನೇಕ ಸಾವಿರ ಶರೀರಗಳು ಎಲ್ಲಕಡೆ ಚದುರಿಹೋಗಿದ್ದವು.

11016006a ಗಜಾಶ್ವರಥಯೋಧಾನಾಮಾವೃತಂ ರುಧಿರಾವಿಲೈಃ|

11016006c ಶರೀರೈರಶಿರಸ್ಕೈಶ್ಚ ವಿದೇಹೈಶ್ಚ ಶಿರೋಗಣೈಃ||

ರಕ್ತಸಿಕ್ತವಾಗಿದ್ದ ಆನೆ-ಕುದುರೆ-ರಥ ಮತ್ತು ಯೋಧರ ತಲೆಗಳಿಲ್ಲದ ಶರೀರಗಳಿಂದಲೂ, ಶರೀರಗಳಿಲ್ಲದ ತಲೆಗಳಿಂದಲೂ ರಣಭೂಮಿಯು ಮುಚ್ಚಿಹೋಗಿತ್ತು.

11016007a ಗಜಾಶ್ವನರವೀರಾಣಾಂ ನಿಃಸತ್ತ್ವೈರಭಿಸಂವೃತಮ್|

11016007c ಸೃಗಾಲಬಡಕಾಕೋಲಕಂಕಕಾಕನಿಷೇವಿತಮ್||

ಆನೆ, ಕುದುರೆ ಮತ್ತು ನರವೀರರ ಹೆಣಗಳಿಂದ ತುಂಬಿಹೋಗಿದ್ದ ಆ ರಣರಂಗದಲ್ಲಿ ನರಿ-ಬಕಪಕ್ಷಿ-ಕಾಗೆ-ಗೂಬೆ ಮತ್ತು ರಣಹದ್ದುಗಳು ಸಂಚರಿಸುತ್ತಿದ್ದವು.

11016008a ರಕ್ಷಸಾಂ ಪುರುಷಾದಾನಾಂ ಮೋದನಂ ಕುರರಾಕುಲಮ್|

11016008c ಅಶಿವಾಭಿಃ ಶಿವಾಭಿಶ್ಚ ನಾದಿತಂ ಗೃಧ್ರಸೇವಿತಮ್||

ನರಭಕ್ಷಕ ರಾಕ್ಷಸರು ಅಲ್ಲಿ ವಿನೋದಿಸುತ್ತಿದ್ದರು. ಅಮಂಗಳಕರವಾಗಿ ಕೂಗುತ್ತಿದ್ದ ನರಿಗಳು, ಕಡಲಹದ್ದುಗಳು ಮತ್ತು ರಣಹದ್ದುಗಳಿಂದ ಅದು ತುಂಬಿಹೋಗಿತ್ತು.

11016009a ತತೋ ವ್ಯಾಸಾಭ್ಯನುಜ್ಞಾತೋ ಧೃತರಾಷ್ಟ್ರೋ ಮಹೀಪತಿಃ|

11016009c ಪಾಂಡುಪುತ್ರಾಶ್ಚ ತೇ ಸರ್ವೇ ಯುಧಿಷ್ಠಿರಪುರೋಗಮಾಃ||

11016010a ವಾಸುದೇವಂ ಪುರಸ್ಕೃತ್ಯ ಹತಬಂಧುಂ ಚ ಪಾರ್ಥಿವಮ್|

11016010c ಕುರುಸ್ತ್ರಿಯಃ ಸಮಾಸಾದ್ಯ ಜಗ್ಮುರಾಯೋಧನಂ ಪ್ರತಿ||

ಅನಂತರ ಮಹೀಪತಿ ಧೃತರಾಷ್ಟ್ರನು ವ್ಯಾಸನ ಅನುಜ್ಞೆಯನ್ನು ಪಡೆದನು. ಯುಧಿಷ್ಠಿರನನೇ ಮೊದಲಾದ ಪಾಂಡುಪುತ್ರರೆಲ್ಲರೂ ಬಂಧುಗಳನ್ನು ಕಳೆದುಕೊಂಡ ರಾಜ ಮತ್ತು ವಾಸುದೇವನನ್ನು ಮುಂದೆಮಾಡಿಕೊಂಡು, ಕುರುಸ್ತ್ರೀಯರನ್ನು ಜೊತೆಯಲ್ಲಿ ಕರೆದುಕೊಂಡು, ರಣರಂಗದ ಕಡೆ ಹೊರಟರು.

11016011a ಸಮಾಸಾದ್ಯ ಕುರುಕ್ಷೇತ್ರಂ ತಾಃ ಸ್ತ್ರಿಯೋ ನಿಹತೇಶ್ವರಾಃ|

11016011c ಅಪಶ್ಯಂತ ಹತಾಂಸ್ತತ್ರ ಪುತ್ರಾನ್ಭ್ರಾತೄನ್ಪಿತೄನ್ಪತೀನ್||

ಕುರುಕ್ಷೇತ್ರವನ್ನು ತಲುಪಿ ಪತಿಗಳನ್ನು ಕಳೆದುಕೊಂಡಿದ್ದ ಆ ಸ್ತ್ರೀಯರು ಅಲ್ಲಿ ಹತರಾಗಿದ್ದ ಪುತ್ರರನ್ನೂ, ಸಹೋದರರನ್ನೂ, ಪಿತೃಗಳನ್ನೂ, ಪತಿಗಳನ್ನೂ ಕಂಡರು.

11016012a ಕ್ರವ್ಯಾದೈರ್ಭಕ್ಷ್ಯಮಾಣಾನ್ವೈ ಗೋಮಾಯುಬಡವಾಯಸೈಃ|

11016012c ಭೂತೈಃ ಪಿಶಾಚೈ ರಕ್ಷೋಭಿರ್ವಿವಿಧೈಶ್ಚ ನಿಶಾಚರೈಃ||

11016013a ರುದ್ರಾಕ್ರೀಡನಿಭಂ ದೃಷ್ಟ್ವಾ ತದಾ ವಿಶಸನಂ ಸ್ತ್ರಿಯಃ|

11016013c ಮಹಾರ್ಹೇಭ್ಯೋಽಥ ಯಾನೇಭ್ಯೋ ವಿಕ್ರೋಶಂತ್ಯೋ ನಿಪೇತಿರೇ||

ಮಾಂಸಾಹಾರಿ ನರಿ, ಕಾಗೆ, ಭೂತ, ಪಿಶಾಚಿ, ರಾಕ್ಷಸರೇ ಮೊದಲಾದ ವಿವಿಧ ನಿಶಾಚರರು ಭಕ್ಷಿಸುತ್ತಿದ್ದ, ರುದ್ರನ ಕ್ರೀಡಾಂಗಣದಂತೆ ತೋರುತ್ತಿದ್ದ ಆ ರಣಭೂಮಿಯನ್ನು ನೋಡಿ ದುಃಖಿತರಾದ ಸ್ತ್ರೀಯರು ಕೂಗುತ್ತಾ ಅತ್ಯಮೂಲ್ಯ ರಥಗಳಿಂದ ಕೆಳಗೆ ಬಿದ್ದರು.

11016014a ಅದೃಷ್ಟಪೂರ್ವಂ ಪಶ್ಯಂತ್ಯೋ ದುಃಖಾರ್ತಾ ಭರತಸ್ತ್ರಿಯಃ|

11016014c ಶರೀರೇಷ್ವಸ್ಖಲನ್ನನ್ಯಾ ನ್ಯಪತಂಶ್ಚಾಪರಾ ಭುವಿ||

ಹಿಂದೆಂದೂ ಇಂಥದ್ದನ್ನು ನೋಡಿರದ ದುಃಖಾರ್ತ ಭರತಸ್ತ್ರೀಯರು ಅಲ್ಲಿದ್ದ ಶರೀರಗಳ ಮೇಲೆಯೇ ಬಿದ್ದರು. ಅನ್ಯರು ನೆಲದಮೇಲೆ ಬಿದ್ದರು.

11016015a ಶ್ರಾಂತಾನಾಂ ಚಾಪ್ಯನಾಥಾನಾಂ ನಾಸೀತ್ಕಾ ಚನ ಚೇತನಾ|

11016015c ಪಾಂಚಾಲಕುರುಯೋಷಾಣಾಂ ಕೃಪಣಂ ತದಭೂನ್ಮಹತ್||

ಅನಾಥರಾಗಿ ಬಳಲಿದ್ದ ಅವರಲ್ಲಿ ಚೇತನವೇ ಇರಲಿಲ್ಲ. ಪಾಂಚಾಲ-ಕುರುಸ್ತ್ರೀಯರು ಆಗ ಅತ್ಯಂತ ದೀನರಾಗಿದ್ದರು.

11016016a ದುಃಖೋಪಹತಚಿತ್ತಾಭಿಃ ಸಮಂತಾದನುನಾದಿತಮ್|

11016016c ದೃಷ್ಟ್ವಾಯೋಧನಮತ್ಯುಗ್ರಂ ಧರ್ಮಜ್ಞಾ ಸುಬಲಾತ್ಮಜಾ||

11016017a ತತಃ ಸಾ ಪುಂಡರೀಕಾಕ್ಷಮಾಮಂತ್ರ್ಯ ಪುರುಷೋತ್ತಮಮ್|

11016017c ಕುರೂಣಾಂ ವೈಶಸಂ ದೃಷ್ಟ್ವಾ ದುಃಖಾದ್ವಚನಮಬ್ರವೀತ್||

ದುಃಖದಿಂದ ಬುದ್ಧಿಕಳೆದುಕೊಂಡು ಕೂಗುತ್ತಿರುವವರ ಧ್ವನಿಯು ಸುತ್ತಲೂ ಕೇಳಿಬರುತ್ತಿರಲು, ಅತಿ ಉಗ್ರವಾಗಿದ್ದ ಆ ರಣಭೂಮಿಯನ್ನು ನೋಡಿ, ಕುರುಗಳ ಆ ಮಹಾಸಂಹಾರವನ್ನು ಕಂಡು ಧರ್ಮಜ್ಞೆ ಸುಬಲಾತ್ಮಜೆಯು ಪುರುಷೋತ್ತಮ ಪುಂಡರೀಕಾಕ್ಷನನ್ನು ಕರೆದು ದುಃಖದಿಂದ ಹೀಗೆ ಹೇಳಿದಳು:

11016018a ಪಶ್ಯೈತಾಃ ಪುಂಡರೀಕಾಕ್ಷ ಸ್ನುಷಾ ಮೇ ನಿಹತೇಶ್ವರಾಃ|

11016018c ಪ್ರಕೀರ್ಣಕೇಶಾಃ ಕ್ರೋಶಂತೀಃ ಕುರರೀರಿವ ಮಾಧವ||

“ಪುಂಡರೀಕಾಕ್ಷ! ಮಾಧವ! ಪತಿಗಳನ್ನು ಕಳೆದುಕೊಂಡ ನನ್ನ ಸೊಸೆಯಂದಿರು ತಲೆಗೂದಲುಗಳನ್ನು ಕೆದರಿಕೊಂಡು ಕಡಲಹದ್ದುಗಳಂತೆ ಚೀರುತ್ತಿರುವುದನ್ನು ನೋಡು!

11016019a ಅಮೂಸ್ತ್ವಭಿಸಮಾಗಮ್ಯ ಸ್ಮರಂತ್ಯೋ ಭರತರ್ಷಭಾನ್|

11016019c ಪೃಥಗೇವಾಭ್ಯಧಾವಂತ ಪುತ್ರಾನ್ಭ್ರಾತೄನ್ಪಿತೄನ್ಪತೀನ್||

ಇವರು ಆ ಭರತರ್ಷಭರನ್ನು ಸ್ಮರಿಸಿಕೊಳ್ಳುತ್ತಾ ಅವರ ಪುತ್ರರು, ಸಹೋದರರು, ಪಿತೃಗಳು ಮತ್ತು ಪತಿಗಳನ್ನು ಹುಡುಕುತ್ತಾ ಒಬ್ಬೊಬ್ಬರು ಒಂದೊಂದು ಕಡೆ ಓಡಿಹೋಗುತ್ತಿದ್ದಾರೆ!

11016020a ವೀರಸೂಭಿರ್ಮಹಾಬಾಹೋ ಹತಪುತ್ರಾಭಿರಾವೃತಮ್|

11016020c ಕ್ವ ಚಿಚ್ಚ ವೀರಪತ್ನೀಭಿರ್ಹತವೀರಾಭಿರಾಕುಲಮ್||

ಮಹಾಬಾಹೋ! ಪುತ್ರರನ್ನು ಕಳೆದುಕೊಂಡ ವೀರಮಾತೆಯರಿಂದಲೂ ವೀರಪತಿಯರನ್ನು ಕಳೆದುಕೊಂಡ ವೀರಪತ್ನಿಯರಿಂದಲೂ ಈ ರಣಭೂಮಿಯು ತುಂಬಿಹೋಗಿದೆ!

11016021a ಶೋಭಿತಂ ಪುರುಷವ್ಯಾಘ್ರೈರ್ಭೀಷ್ಮಕರ್ಣಾಭಿಮನ್ಯುಭಿಃ|

11016021c ದ್ರೋಣದ್ರುಪದಶಲ್ಯೈಶ್ಚ ಜ್ವಲದ್ಭಿರಿವ ಪಾವಕೈಃ||

ಪ್ರಜ್ವಲಿಸುವ ಪಾವಕರಂತಿರುವ ಭೀಷ್ಮ-ಕರ್ಣ-ಅಭಿಮನ್ಯು-ದ್ರೋಣ-ದ್ರುಪದ-ಶಲ ಮೊದಲಾದ ಪುರುಷವ್ಯಾಘ್ರರಿಂದ ರಣಭೂಮಿಯು ಶೋಭಿಸುತ್ತಿದೆ.

11016022a ಕಾಂಚನೈಃ ಕವಚೈರ್ನಿಷ್ಕೈರ್ಮಣಿಭಿಶ್ಚ ಮಹಾತ್ಮನಾಮ್|

11016022c ಅಂಗದೈರ್ಹಸ್ತಕೇಯೂರೈಃ ಸ್ರಗ್ಭಿಶ್ಚ ಸಮಲಂಕೃತಮ್||

ಮಹಾತ್ಮರ ಕಾಂಚನ ಕವಚಗಳಿಂದಲೂ, ಮಣಿಗಳ ಹಾರಗಳಿಂದಲೂ, ಅಂಗದ-ಹಸ್ತ ಕೇಯೂರಗಳಿಂದಲೂ, ಮಾಲೆಗಳಿಂದಲೂ ರಣಭೂಮಿಯು ಸಮಲಂಕೃತವಾಗಿದೆ.

11016023a ವೀರಬಾಹುವಿಸೃಷ್ಟಾಭಿಃ ಶಕ್ತಿಭಿಃ ಪರಿಘೈರಪಿ|

11016023c ಖಡ್ಗೈಶ್ಚ ವಿಮಲೈಸ್ತೀಕ್ಷ್ಣೈಃ ಸಶರೈಶ್ಚ ಶರಾಸನೈಃ||

ವೀರರ ಬಾಹುಗಳಿಂದ ಪ್ರಯೋಗಿಸಲ್ಪಟ್ಟ ಶಕ್ತಿ, ಪರಿಘ, ವಿಮಲ ತೀಕ್ಷ್ಣ ಖಡ್ಗ, ಶರಗಳು ಮತ್ತು ಭತ್ತಳಿಕೆಗಳಿಂದ ಈ ರಣಭೂಮಿಯು ತುಂಬಿಹೋಗಿದೆ.

11016024a ಕ್ರವ್ಯಾದಸಂಘೈರ್ಮುದಿತೈಸ್ತಿಷ್ಠದ್ಭಿಃ ಸಹಿತೈಃ ಕ್ವ ಚಿತ್|

11016024c ಕ್ವ ಚಿದಾಕ್ರೀಡಮಾನೈಶ್ಚ ಶಯಾನೈರಪರೈಃ ಕ್ವ ಚಿತ್||

ಸಂತೋಷಭರಿತ ಮಾಂಸಾಶೀ ಪಕ್ಷಿಗಳು ಕೆಲವೆಡೆ ಗುಂಪುಗುಂಪಾಗಿ ನಿಂತುಕೊಂಡಿವೆ. ಕೆಲವೆಡೆ ಆಟವಾಡುತ್ತಿವೆ. ಮತ್ತು ಇನ್ನು ಕೆಲವೆಡೆ ಮಲಗಿಕೊಂಡಿವೆ!

11016025a ಏತದೇವಂವಿಧಂ ವೀರ ಸಂಪಶ್ಯಾಯೋಧನಂ ವಿಭೋ|

11016025c ಪಶ್ಯಮಾನಾ ಚ ದಹ್ಯಾಮಿ ಶೋಕೇನಾಹಂ ಜನಾರ್ದನ||

ವಿಭೋ! ಜನಾರ್ದನ! ವೀರ! ಈ ವಿಧದ ಭಯಂಕರ ರಣಭೂಮಿಯನ್ನು ನೋಡಿ ಶೋಕದಿಂದ ನಾನು ಸುಡುತ್ತಿದ್ದೇನೆ.

11016026a ಪಾಂಚಾಲಾನಾಂ ಕುರೂಣಾಂ ಚ ವಿನಾಶಂ ಮಧುಸೂದನ|

11016026c ಪಂಚಾನಾಮಿವ ಭೂತಾನಾಂ ನಾಹಂ ವಧಮಚಿಂತಯಮ್||

ಪಂಚಭೂತಗಳು ನಾಶವಾಗದಂತೆ ಪಾಂಚಲ-ಕುರುಗಳು ಹೀಗೆ ನಾಶವಾಗುತ್ತಾರೆಂದು ನಾನು ಯೋಚಿಸಿರಲಿಲ್ಲ.

11016027a ತಾನ್ಸುಪರ್ಣಾಶ್ಚ ಗೃಧ್ರಾಶ್ಚ ನಿಷ್ಕರ್ಷಂತ್ಯಸೃಗುಕ್ಷಿತಾನ್|

11016027c ನಿಗೃಹ್ಯ ಕವಚೇಷೂಗ್ರಾ ಭಕ್ಷಯಂತಿ ಸಹಸ್ರಶಃ||

ಆ ಹದ್ದುಗಳು ಮತ್ತು ಇತರ ಪಕ್ಷಿಗಳು ಸಹಸ್ರಾರು ಸಂಖ್ಯೆಗಳಲ್ಲಿ ಕುಕ್ಕಿ ಕವಚಗಳ ಸಂಧಿನಿಂದ ಎಳೆದು ಮಾಂಸವನ್ನು ಭಕ್ಷಿಸುತ್ತಿವೆ!

11016028a ಜಯದ್ರಥಸ್ಯ ಕರ್ಣಸ್ಯ ತಥೈವ ದ್ರೋಣಭೀಷ್ಮಯೋಃ|

11016028c ಅಭಿಮನ್ಯೋರ್ವಿನಾಶಂ ಚ ಕಶ್ಚಿಂತಯಿತುಮರ್ಹತಿ||

ಜಯದ್ರಥ, ಕರ್ಣ, ದ್ರೋಣ, ಭೀಷ್ಮ ಮತ್ತು ಅಭಿಮನ್ಯುವಿನ ವಿನಾಶವನ್ನು ಯಾರುತಾನೇ ಆಲೋಚಿಸಿದ್ದರು?

11016029a ಅವಧ್ಯಕಲ್ಪಾನ್ನಿಹತಾನ್ದೃಷ್ಟ್ವಾಹಂ ಮಧುಸೂದನ|

11016029c ಗೃಧ್ರಕಂಕಬಡಶ್ಯೇನಶ್ವಸೃಗಾಲಾದನೀಕೃತಾನ್||

ನಾವು ಯಾರನ್ನು ಅವಧ್ಯರೆಂದು ತಿಳಿದುಕೊಂಡಿದ್ದೆವೋ ಅವರೇ ಹತರಾಗಿ ಹದ್ದು-ಗಿಡುಗ-ನರಿ-ನಾಯಿ-ತೋಳಗಳಿಗೆ ಆಹಾರವಾಗುತ್ತಿದ್ದುದನ್ನು ನಾನು ನೋಡುತ್ತಿದ್ದೇನೆ!

11016030a ಅಮರ್ಷವಶಮಾಪನ್ನಾನ್ದುರ್ಯೋಧನವಶೇ ಸ್ಥಿತಾನ್|

11016030c ಪಶ್ಯೇಮಾನ್ಪುರುಷವ್ಯಾಘ್ರಾನ್ಸಂಶಾಂತಾನ್ಪಾವಕಾನಿವ||

ದುರ್ಯೋಧನನ ವಶದಲ್ಲಿ ಬಂದು ಕೋಪಪರವಶರಾಗಿದ್ದ ಪುರುಷವ್ಯಾಘ್ರರು ಆರಿಹೋದ ಅಗ್ನಿಯಂತೆ ತಣ್ಣಗಾಗಿರುವುದನ್ನು ನೋಡು!

11016031a ಶಯನಾನ್ಯುಚಿತಾಃ ಸರ್ವೇ ಮೃದೂನಿ ವಿಮಲಾನಿ ಚ|

11016031c ವಿಪನ್ನಾಸ್ತೇಽದ್ಯ ವಸುಧಾಂ ವಿವೃತಾಮಧಿಶೇರತೇ||

ಮೃದು-ಶುಭ್ರ ಹಾಸಿಗೆಗಳ ಮೇಲೆ ಮಲಗಲು ಯೋಗ್ಯರಾದ ಎಲ್ಲರೂ ಇಂದು ಹತರಾಗಿ ನೆಲದ ಮೇಲೆ ಮಲಗಿದ್ದಾರೆ!

11016032a ಬಂದಿಭಿಃ ಸತತಂ ಕಾಲೇ ಸ್ತುವದ್ಭಿರಭಿನಂದಿತಾಃ|

11016032c ಶಿವಾನಾಮಶಿವಾ ಘೋರಾಃ ಶೃಣ್ವಂತಿ ವಿವಿಧಾ ಗಿರಃ||

ಹಿಂದೆ ಸತತವೂ ವಂದಿ-ಮಾಗಧರಿಂದ ಸ್ತುತಿಸಲ್ಪಡುತ್ತಿದ್ದ ಅನಿಂದಿತರು ಈಗ ನರಿಗಳ ವಿವಿಧ ಅಮಂಗಳಕರ, ಘೋರ ಶಬ್ಧಗಳನ್ನು ಕೇಳುತ್ತಿದ್ದಾರೆ!

11016033a ಯೇ ಪುರಾ ಶೇರತೇ ವೀರಾಃ ಶಯನೇಷು ಯಶಸ್ವಿನಃ|

11016033c ಚಂದನಾಗುರುದಿಗ್ಧಾಂಗಾಸ್ತೇಽದ್ಯ ಪಾಂಸುಷು ಶೇರತೇ||

ಹಿಂದೆ ಚಂದನ-ಅಗರು ಮುಂತಾದವುಗಳನ್ನು ಲೇಪಿಸಿಕೊಂಡು ಹಾಸಿಗೆಯ ಮೇಲೆ ಮಲಗುತ್ತಿದ್ದ ಈ ಯಶಸ್ವೀ ವೀರರು ಇಂದು ಕೆಸರಿನಲ್ಲಿ ಮಲಗಿದ್ದಾರೆ!

11016034a ತೇಷಾಮಾಭರಣಾನ್ಯೇತೇ ಗೃಧ್ರಗೋಮಾಯುವಾಯಸಾಃ|

11016034c ಆಕ್ಷಿಪಂತ್ಯಶಿವಾ ಘೋರಾ ವಿನದಂತಃ ಪುನಃ ಪುನಃ||

ಹದ್ದು-ನರಿ-ಕಾಗೆಗಳು ಅವರ ಆಭರಣಗಳನ್ನು ಕಿತ್ತು ಎಸೆಯುತ್ತಾ ಅಶುಭವಾಗಿ ಮತ್ತು ಘೋರವಾಗಿ ಪುನಃ ಪುನಃ ಕೂಗುತ್ತಿವೆ!

11016035a ಚಾಪಾನಿ ವಿಶಿಖಾನ್ಪೀತಾನ್ನಿಸ್ತ್ರಿಂಶಾನ್ವಿಮಲಾ ಗದಾಃ|

11016035c ಯುದ್ಧಾಭಿಮಾನಿನಃ ಪ್ರೀತಾ ಜೀವಂತ ಇವ ಬಿಭ್ರತಿ||

ಆ ಯುದ್ಧಾಭಿಮಾನಿಗಳು ಪ್ರೀತಿಯಿಂದ ಹಿಡಿದಿರುವ ಬಿಲ್ಲುಗಳು, ಪೀತಲ ನಿಶಿತ ವಿಶಿಖಗಳು, ಮತ್ತು ವಿಮಲ ಗದೆಗಳು ಇನ್ನೂ ಜೀವಂತವಾಗಿಯೆವೋ ಎಂಬಂತೆ ಹೊಳೆಯುತ್ತಿವೆ.

11016036a ಸುರೂಪವರ್ಣಾ ಬಹವಃ ಕ್ರವ್ಯಾದೈರವಘಟ್ಟಿತಾಃ|

11016036c ಋಷಭಪ್ರತಿರೂಪಾಕ್ಷಾಃ ಶೇರತೇ ಹರಿತಸ್ರಜಃ||

ಸುಂದರ ರೂಪ ವರ್ಣಗಳ ಇನ್ನೂ ಮಾಸಿರದ ಮಾಲೆಗಳನ್ನು ತೊಟ್ಟ ಗೂಳಿಗಳ ಕಣ್ಣುಗಳಂಥಹ ಕಣ್ಣುಗಳಿದ್ದ ಅನೇಕರನ್ನು ಕ್ರವ್ಯಾದಗಳು ಛಿದ್ರ-ವಿಛಿದ್ರ ಮಾಡುತ್ತಿವೆ. 

11016037a ಅಪರೇ ಪುನರಾಲಿಂಗ್ಯ ಗದಾಃ ಪರಿಘಬಾಹವಃ|

11016037c ಶೇರತೇಽಭಿಮುಖಾಃ ಶೂರಾ ದಯಿತಾ ಇವ ಯೋಷಿತಃ||

ಪರಿಘದಂಥಹ ಬಾಹುಗಳುಳ್ಳ ಇತರರು ಪ್ರೇಯಸಿಯನ್ನು ತಬ್ಬಿಕೊಂಡಿರುವವರಂತೆ ಗದೆಯನ್ನೇ ತಬ್ಬಿಕೊಂಡು ಮುಖವನ್ನು ಕೆಳಗೆಮಾಡಿಕೊಂಡು ಮಲಗಿದ್ದಾರೆ.

11016038a ಬಿಭ್ರತಃ ಕವಚಾನ್ಯನ್ಯೇ ವಿಮಲಾನ್ಯಾಯುಧಾನಿ ಚ|

11016038c ನ ಧರ್ಷಯಂತಿ ಕ್ರವ್ಯಾದಾ ಜೀವಂತೀತಿ ಜನಾರ್ದನ||

ಜನಾರ್ದನ! ಅನ್ಯರು ವಿಮಲ ಆಯುಧ-ಕವಚಗಳಿಂದ ಹೊಳೆಯುತ್ತಿರುವುದರಿಂದ ಅವರು ಜೀವಂತವಾಗಿರುವರೆಂದು ಭಾವಿಸಿ ಕ್ರವ್ಯಾದಗಳು ಅವರನ್ನು ತಿನ್ನುತ್ತಿಲ್ಲ!

11016039a ಕ್ರವ್ಯಾದೈಃ ಕೃಷ್ಯಮಾಣಾನಾಮಪರೇಷಾಂ ಮಹಾತ್ಮನಾಮ್|

11016039c ಶಾತಕೌಂಭ್ಯಃ ಸ್ರಜಶ್ಚಿತ್ರಾ ವಿಪ್ರಕೀರ್ಣಾಃ ಸಮಂತತಃ||

ಕ್ರವ್ಯಾದಗಳಿಂದ ಎಳೆಯಲ್ಪಡುತ್ತಿರುವ ಇತರ ಮಹಾತ್ಮರ ಸುವರ್ಣಮಯ ಚಿತ್ರಿತ ಮಾಲೆಗಳು ಚೆಲ್ಲಾಪಿಲ್ಲಿಯಾಗಿ ಸುತ್ತಲೂ ಹರಡಿವೆ.

11016040a ಏತೇ ಗೋಮಾಯವೋ ಭೀಮಾ ನಿಹತಾನಾಂ ಯಶಸ್ವಿನಾಮ್|

11016040c ಕಂಠಾಂತರಗತಾನ್ ಹಾರಾನಾಕ್ಷಿಪಂತಿ ಸಹಸ್ರಶಃ||

ಹತರಾಗಿರುವ ಯಶಸ್ವಿಗಳ ಕಂಠಗಳಲ್ಲಿರುವ ಹಾರಗಳನ್ನು ಸಹಸ್ರಾರು ಭಯಂಕರ ನರಿಗಳು ಎಳೆದಾಡುತ್ತಿವೆ!

11016041a ಸರ್ವೇಷ್ವಪರರಾತ್ರೇಷು ಯಾನನಂದಂತ ಬಂದಿನಃ|

11016041c ಸ್ತುತಿಭಿಶ್ಚ ಪರಾರ್ಧ್ಯಾಭಿರುಪಚಾರೈಶ್ಚ ಶಿಕ್ಷಿತಾಃ||

11016042a ತಾನಿಮಾಃ ಪರಿದೇವಂತಿ ದುಃಖಾರ್ತಾಃ ಪರಮಾಂಗನಾಃ|

11016042c ಕೃಪಣಂ ವೃಷ್ಣಿಶಾರ್ದೂಲ ದುಃಖಶೋಕಾರ್ದಿತಾ ಭೃಶಮ್||

ವೃಷ್ಣಿಶಾರ್ದೂಲ! ಅಪರರಾತ್ರಿಗಳಲ್ಲಿಯೂ ಯಾರನ್ನು ಪ್ರಶಿಕ್ಷಿತ ಬಂದಿಗಳು ಸ್ತುತಿಗಳಿಂದಲೂ ಉತ್ತಮ ಉಪಚಾರಗಳಿಂದಲೂ ಸೇವಿಸುತ್ತಿದ್ದರೋ ಅವರನ್ನು ಇಂದು ದುಃಖಾರ್ತ ಪರಮಾಂಗನೆಯರು ಕರುಣಾಜನಕ ವಿಲಾಪಗಳಿಂದ ಸಂಸೇವಿಸುತ್ತಿದ್ದಾರೆ!

11016043a ರಕ್ತೋತ್ಪಲವನಾನೀವ ವಿಭಾಂತಿ ರುಚಿರಾಣಿ ವೈ|

11016043c ಮುಖಾನಿ ಪರಮಸ್ತ್ರೀಣಾಂ ಪರಿಶುಷ್ಕಾಣಿ ಕೇಶವ||

ಕೇಶವ! ಬಾಡಿಹೋಗಿರುವ ಈ ಪರಮಸ್ತ್ರೀಯರ ಮುಖಗಳು ಕೆಂಪು ಕಮಲದ ವನಗಳಂತೆ ಬಹಳ ಸುಂದರವಾಗಿ ಕಾಣುತ್ತಿವೆ.

11016044a ರುದಿತೋಪರತಾ ಹ್ಯೇತಾ ಧ್ಯಾಯಂತ್ಯಃ ಸಂಪರಿಪ್ಲುತಾಃ|

11016044c ಕುರುಸ್ತ್ರಿಯೋಽಭಿಗಚ್ಚಂತಿ ತೇನ ತೇನೈವ ದುಃಖಿತಾಃ||

ಕೆಲವು ಕುರುಸ್ತ್ರೀಯರು ಅಳುವುದನ್ನು ನಿಲ್ಲಿಸಿ ತಮ್ಮವರು ಎಲ್ಲಿರುವರೆಂದು ಚಿಂತಿಸಿ ಹುಡುಕುತ್ತಾ ಅವರು ಸಿಕ್ಕಿದಾಗ ಪುನಃ ದುಃಖಿತರಾಗುತ್ತಿದ್ದಾರೆ!

11016045a ಏತಾನ್ಯಾದಿತ್ಯವರ್ಣಾನಿ ತಪನೀಯನಿಭಾನಿ ಚ|

11016045c ರೋಷರೋದನತಾಮ್ರಾಣಿ ವಕ್ತ್ರಾಣಿ ಕುರುಯೋಷಿತಾಮ್||

ಸೂರ್ಯನ ಕಾಂತಿಯನ್ನೂ ಚಿನ್ನದ ಹೊಳಪನ್ನೂ ಹೊಂದಿದ್ದ ಕುರುಸ್ತ್ರೀಯರ ಮುಖಗಳು ರೋಷ-ರೋದನಗಳಿಂದಾಗಿ ಕೆಂಪಾಗಿವೆ!

11016046a ಆಸಾಮಪರಿಪೂರ್ಣಾರ್ಥಂ ನಿಶಮ್ಯ ಪರಿದೇವಿತಮ್|

11016046c ಇತರೇತರಸಂಕ್ರಂದಾನ್ನ ವಿಜಾನಂತಿ ಯೋಷಿತಃ||

ಇತರೇತರ ಸ್ತ್ರೀಯರ ರೋದನಗಳು ಎಲ್ಲ ಒಂದಾಗಿ ಯಾರು ಹೇಗೆ ರೋದಿಸುತ್ತಿದ್ದಾರೆನ್ನುವುದೂ ತಿಳಿಯುತ್ತಿಲ್ಲ!

11016047a ಏತಾ ದೀರ್ಘಮಿವೋಚ್ಚ್ವಸ್ಯ ವಿಕ್ರುಶ್ಯ ಚ ವಿಲಪ್ಯ ಚ|

11016047c ವಿಸ್ಪಂದಮಾನಾ ದುಃಖೇನ ವೀರಾ ಜಹತಿ ಜೀವಿತಮ್||

ಈರ ವೀರಸ್ತ್ರೀಯರು ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ, ಜೋರಾಗಿ ವಿಲಪಿಸುತ್ತಾ, ದುಃಖದಿಂದ ಚಡಪಡಿಸುತ್ತಾ ಕೊನೆಯಲ್ಲಿ ಜೀವವನ್ನೇ ತೊರೆಯುತ್ತಾರೆ!

11016048a ಬಹ್ವ್ಯೋ ದೃಷ್ಟ್ವಾ ಶರೀರಾಣಿ ಕ್ರೋಶಂತಿ ವಿಲಪಂತಿ ಚ|

11016048c ಪಾಣಿಭಿಶ್ಚಾಪರಾ ಘ್ನಂತಿ ಶಿರಾಂಸಿ ಮೃದುಪಾಣಯಃ||

ಅನೇಕ ಸ್ತ್ರೀಯರು ಶರೀರಗಳನ್ನು ನೋಡಿ ಜೋರಾಗಿ ಕೂಗಿ ವಿಲಪಿಸುತ್ತಿದ್ದರೆ ಇತರರು ತಮ್ಮ ಮೃದು ಕೈಗಳಿಂದ ತಲೆಯನ್ನು ಹೊಡೆದುಕೊಳ್ಳುತ್ತಿದ್ದಾರೆ.

11016049a ಶಿರೋಭಿಃ ಪತಿತೈರ್ಹಸ್ತೈಃ ಸರ್ವಾಂಗೈರ್ಯೂಥಶಃ ಕೃತೈಃ|

11016049c ಇತರೇತರಸಂಪೃಕ್ತೈರಾಕೀರ್ಣಾ ಭಾತಿ ಮೇದಿನೀ||

ಬಿದ್ದಿರುವ ಶಿರಗಳಿಂದಲೂ, ಕೈಗಳಿಂದಲೂ, ಗುಂಪು ಗುಂಪಾಗಿ ಬಿದ್ದಿರುವ ಸರ್ವಾಂಗಗಳಿಂದಲೂ ರಣಭೂಮಿಯು ಇತರೇತರರ ಅವಯವಗಳಿಂದ ತುಂಬಿಹೋಗಿರುವಂತೆ ಕಾಣುತ್ತಿದೆ.

11016050a ವಿಶಿರಸ್ಕಾನಥೋ ಕಾಯಾನ್ದೃಷ್ಟ್ವಾ ಘೋರಾಭಿನಂದಿನಃ|

11016050c ಮುಹ್ಯಂತ್ಯನುಚಿತಾ ನಾರ್ಯೋ ವಿದೇಹಾನಿ ಶಿರಾಂಸಿ ಚ||

ಶಿರಗಳಿಲ್ಲದ ಕಾಯಗಳನ್ನೂ ಶರೀರಗಳಿಲ್ಲದ ಶಿರಗಳನ್ನೂ ನೋಡಿ ಘೋರದೃಶ್ಯವನ್ನು ನೋಡಿದವರಂತೆ ನಾರಿಯರು ಮೂರ್ಛೆಹೋಗುತ್ತಿದ್ದಾರೆ.

11016051a ಶಿರಃ ಕಾಯೇನ ಸಂಧಾಯ ಪ್ರೇಕ್ಷಮಾಣಾ ವಿಚೇತಸಃ|

11016051c ಅಪಶ್ಯಂತ್ಯೋ ಪರಂ ತತ್ರ ನೇದಮಸ್ಯೇತಿ ದುಃಖಿತಾಃ||

ಶಿರವನ್ನು ಶರೀರಕ್ಕೆ ಜೋಡಿಸಿ ಅದು ಸರಿಯಾಗದೇ ತಕ್ಕ ಶಿರವು ಇಲ್ಲಿ ಕಾಣುತ್ತಿಲ್ಲವೆಂದು ಹೇಳುತ್ತಾ ಬುದ್ಧಿಕಳೆದುಕೊಂಡು ದುಃಖಿಸುತ್ತಿದ್ದಾರೆ.

11016052a ಬಾಹೂರುಚರಣಾನನ್ಯಾನ್ವಿಶಿಖೋನ್ಮಥಿತಾನ್ಪೃಥಕ್|

11016052c ಸಂದಧತ್ಯೋಽಸುಖಾವಿಷ್ಟಾ ಮೂರ್ಚಂತ್ಯೇತಾಃ ಪುನಃ ಪುನಃ||

ಕತ್ತರಿಸಿದ ಬಾಹುಗಳನ್ನೂ, ಕಾಲುಗಳನ್ನೂ ಮತ್ತು ಅನ್ಯ ಅವಯವಗಳನ್ನು ಕಷ್ಟಪಟ್ಟು ಜೋಡಿಸುತ್ತಾ ತಮ್ಮ ವ್ಯರ್ಥಪ್ರಯತ್ನಕ್ಕಾಗಿ ಪುನಃ ಪುನಃ ಮೂರ್ಛೆಹೋಗುತ್ತಿದ್ದಾರೆ.

11016053a ಉತ್ಕೃತ್ತಶಿರಸಶ್ಚಾನ್ಯಾನ್ವಿಜಗ್ಧಾನ್ಮೃಗಪಕ್ಷಿಭಿಃ|

11016053c ದೃಷ್ಟ್ವಾ ಕಾಶ್ಚಿನ್ನ ಜಾನಂತಿ ಭರ್ತೄನ್ಭರತಯೋಷಿತಃ||

ಶಿರಗಳು ಕತ್ತರಿಸಲ್ಪಟ್ಟಿರುವುದರಿಂದ ಮತ್ತು ಮೃಗ-ಪಕ್ಷಿಗಳು ಕಿತ್ತು ತಿಂದಿರುವುದರಿಂದ ಈ ಭರತಸ್ತ್ರೀಯರು ತಮ್ಮ ಪತಿಯಂದಿರು ಯಾರೆಂದೂ ಗುರುತಿಸಲಾಗುತ್ತಿಲ್ಲ!

11016054a ಪಾಣಿಭಿಶ್ಚಾಪರಾ ಘ್ನಂತಿ ಶಿರಾಂಸಿ ಮಧುಸೂದನ|

11016054c ಪ್ರೇಕ್ಷ್ಯ ಭ್ರಾತೄನ್ಪಿತೄನ್ಪುತ್ರಾನ್ಪತೀಂಶ್ಚ ನಿಹತಾನ್ಪರೈಃ||

ಮಧುಸೂದನ! ಅನ್ಯರು ಶತ್ರುಗಳಿಂದ ಹತರಾಗಿರುವ ಸಹೋದರರನ್ನೂ, ತಂದೆಯರನ್ನೂ, ಪುತ್ರರನ್ನೂ, ಪತಿಗಳನ್ನೂ ನೋಡಿ ಕೈಗಳಿಂದ ತಮ್ಮ ತಲೆಗಳನ್ನು ಬಡಿದುಕೊಳ್ಳುತ್ತಿದ್ದಾರೆ! 

11016055a ಬಾಹುಭಿಶ್ಚ ಸಖಡ್ಗೈಶ್ಚ ಶಿರೋಭಿಶ್ಚ ಸಕುಂಡಲೈಃ|

11016055c ಅಗಮ್ಯಕಲ್ಪಾ ಪೃಥಿವೀ ಮಾಂಸಶೋಣಿತಕರ್ದಮಾ||

ಖಡ್ಗಗಳನ್ನು ಹಿಡಿದಿರುವ ಬಾಹುಗಳಿಂದಲೂ, ಕುಂಡಲಗಳನ್ನು ಧರಿಸಿದ್ದ ಶಿರಗಳಿಂದಲೂ, ಮಾಂಸ-ರಕ್ತಗಳ ಕೆಸರಿನಿಂದ ತುಂಬಿಹೋಗಿರುವ ಈ ರಣಭೂಮಿಯಲ್ಲಿ ಓಡಾಡಲೂ ಕಷ್ಟವಾಗುತ್ತಿದೆ!

11016056a ನ ದುಃಖೇಷೂಚಿತಾಃ ಪೂರ್ವಂ ದುಃಖಂ ಗಾಹಂತ್ಯನಿಂದಿತಾಃ|

11016056c ಭ್ರಾತೃಭಿಃ ಪಿತೃಭಿಃ ಪುತ್ರೈರುಪಕೀರ್ಣಾಂ ವಸುಂಧರಾಮ್||

ಹಿಂದೆಂದೂ ಈ ವಿಧವಾದ ದುಃಖವನ್ನು ಅನುಭವಿಸಿರದಿದ್ದ ಈ ಅನಿಂದಿತೆಯರು ಸಹೋದರರು, ತಂದೆಯರು ಮತ್ತು ಪುತ್ರರಿಂದ ತುಂಬಿಹೋಗಿರುವ ಈ ವಸುಂಧರೆಯನ್ನು ನೋಡಿ ದುಃಖದಲ್ಲಿ ಮುಳುಗಿಹೋಗಿದ್ದಾರೆ!

11016057a ಯೂಥಾನೀವ ಕಿಶೋರೀಣಾಂ ಸುಕೇಶೀನಾಂ ಜನಾರ್ದನ|

11016057c ಸ್ನುಷಾಣಾಂ ಧೃತರಾಷ್ಟ್ರಸ್ಯ ಪಶ್ಯ ವೃಂದಾನ್ಯನೇಕಶಃ||

ಜನಾರ್ದನ! ಸುಂದರ ಕೇಶರಾಶಿಗಳ ಧೃತರಾಷ್ಟ್ರನ ಈ ಕಿಶೋರೀ ಸೊಸೆಯರು ಹೆಣ್ಣು ಕುದುರೆ ಮರಿಗಳ ಹಿಂಡಿನಂತೆ ಗೋಳಿಡುತ್ತಿರುವುದನ್ನು ನೋಡು!

11016058a ಅತೋ ದುಃಖತರಂ ಕಿಂ ನು ಕೇಶವ ಪ್ರತಿಭಾತಿ ಮೇ|

11016058c ಯದಿಮಾಃ ಕುರ್ವತೇ ಸರ್ವಾ ರೂಪಮುಚ್ಚಾವಚಂ ಸ್ತ್ರಿಯಃ||

ಎಲ್ಲ ಸ್ತ್ರೀಯರು ಇಲ್ಲಿಗೆ ಬಂದು ಜೋರಾಗಿ ಕೂಗಿಕೊಳ್ಳುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಕೇಶವ! ಇದಕ್ಕಿಂತಲೂ ಹೆಚ್ಚಿನ ದುಃಖವು ನನ್ನ ನೆನಪಿಗೆ ಬರುತ್ತಿಲ್ಲ!

11016059a ನೂನಮಾಚರಿತಂ ಪಾಪಂ ಮಯಾ ಪೂರ್ವೇಷು ಜನ್ಮಸು|

11016059c ಯಾ ಪಶ್ಯಾಮಿ ಹತಾನ್ಪುತ್ರಾನ್ಪೌತ್ರಾನ್ಭ್ರಾತೄಂಶ್ಚ ಕೇಶವ|

11016059e ಏವಮಾರ್ತಾ ವಿಲಪತೀ ದದರ್ಶ ನಿಹತಂ ಸುತಮ್||

ಕೇಶವ! ಹತರಾದ ಪುತ್ರರನ್ನೂ, ಪೌತ್ರರನ್ನೂ, ಸಹೋದರರನ್ನೂ ನಾನು ನೋಡುತ್ತಿದ್ದೇನೆಂದರೆ ನನ್ನ ಪೂರ್ವ ಜನ್ಮದಲ್ಲಿ ನಿಶ್ಚಯವಾಗಿಯೂ ನಾನು ಪಾಪವನ್ನೆಸಗಿರಬೇಕು!” ಹೀಗೆ ವಿಲಪಿಸುತ್ತಾ ಆರ್ತಳಾಗಿದ್ದ ಗಾಂಧಾರಿಯು ಹತನಾಗಿದ್ದ ತನ್ನ ಮಗನನ್ನು ನೋಡಿದಳು.”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಆಯೋಧನದರ್ಶನೇ ಷೋಡಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಆಯೋಧನದರ್ಶನ ಎನ್ನುವ ಹದಿನಾರನೇ ಅಧ್ಯಾಯವು.

Comments are closed.