Stri Parva: Chapter 15

ಸ್ತ್ರೀ ಪರ್ವ

೧೫

ತನಗೆ ನಮಸ್ಕರಿಸಲು ಬಾಗಿದ್ದ ಯುಧಿಷ್ಠಿರನ ಅಂಗುಷ್ಠಗಳನ್ನು ತನ್ನ ಕಣ್ಪಟ್ಟಿಯ ಸಂಧಿಯಿಂದ ಗಾಂಧಾರಿಯು ನೋಡಲು ಅವನ ಅಂಗುಷ್ಠಗಳು ವಿಕಾರರೂಪವನ್ನು ತಾಳಿದುದು (೧-೮). ಕುಂತಿಯು ತನ್ನ ಮಕ್ಕಳು ಮತ್ತು ದ್ರೌಪದಿಯನ್ನು ಸಂದರ್ಶಿಸಿ ರೋದಿಸಿ, ಅವರನ್ನು ಸಂತವಿಸಿದುದು (೯-೧೪). ಗಾಂಧಾರಿಯೂ ದ್ರೌಪದಿಯನ್ನು ಸಂತವಿಸಿದುದು (೧೫-೨೦).

 11015001 ವೈಶಂಪಾಯನ ಉವಾಚ

11015001a ಏವಮುಕ್ತ್ವಾ ತು ಗಾಂಧಾರೀ ಯುಧಿಷ್ಠಿರಮಪೃಚ್ಚತ|

11015001c ಕ್ವ ಸ ರಾಜೇತಿ ಸಕ್ರೋಧಾ ಪುತ್ರಪೌತ್ರವಧಾರ್ದಿತಾ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಮಕ್ಕಳು-ಮೊಮ್ಮಕ್ಕಳ ವಧೆಯಿಂದ ಪೀಡಿತಳಾಗಿದ್ದ ಗಾಂಧಾರಿಯು ಕ್ರೋಧದಿಂದ “ಆ ರಾಜನೆಲ್ಲಿ?” ಎಂದು ಯುಧಿಷ್ಠಿರನನ್ನು ಕೇಳಿದಳು.

11015002a ತಾಮಭ್ಯಗಚ್ಚದ್ರಾಜೇಂದ್ರೋ ವೇಪಮಾನಃ ಕೃತಾಂಜಲಿಃ|

11015002c ಯುಧಿಷ್ಠಿರ ಇದಂ ಚೈನಾಂ ಮಧುರಂ ವಾಕ್ಯಮಬ್ರವೀತ್||

ರಾಜೇಂದ್ರ ಯುಧಿಷ್ಠಿರನು ಕೈಮುಗಿದು ನಡುಗುತ್ತಾ ಅವಳ ಬಳಿಹೋಗಿ ಈ ಮಧುರ ಮಾತನ್ನಾಡಿದನು:

11015003a ಪುತ್ರಹಂತಾ ನೃಶಂಸೋಽಹಂ ತವ ದೇವಿ ಯುಧಿಷ್ಠಿರಃ|

11015003c ಶಾಪಾರ್ಹಃ ಪೃಥಿವೀನಾಶೇ ಹೇತುಭೂತಃ ಶಪಸ್ವ ಮಾಮ್||

“ದೇವೀ! ನಿನ್ನ ಪುತ್ರರನ್ನು ವಧಿಸಿದ ಮಹಾಕ್ರೂರಿ ಯುಧಿಷ್ಠಿರನು ನಾನು. ಪೃಥ್ವಿಯ ವಿನಾಶಕ್ಕೆ ಕಾರಣನಾಗಿರುವ ನಾನು ಶಾಪಾರ್ಹನಾಗಿದ್ದೇನೆ. ನನ್ನನ್ನು ಶಪಿಸು!

11015004a ನ ಹಿ ಮೇ ಜೀವಿತೇನಾರ್ಥೋ ನ ರಾಜ್ಯೇನ ಧನೇನ ವಾ|

11015004c ತಾದೃಶಾನ್ಸುಹೃದೋ ಹತ್ವಾ ಮೂಢಸ್ಯಾಸ್ಯ ಸುಹೃದ್ದ್ರುಹಃ||

ಸುಹೃದರಿಗೆ ದ್ರೋಹವನ್ನೆಸಗಿ ಅಂಥಹ ಸುಹೃದರನ್ನು ಸಂಹರಿಸಿದ ಈ ಮೂಢನಿಗೆ ಜೀವದಲ್ಲಾಗಲೀ, ರಾಜ್ಯದಲ್ಲಾಗಲೀ ಅಥವಾ ಧನದಲ್ಲಾಗಲೀ ಆಗಬೇಕಾದುದೇನೂ ಇಲ್ಲ!”

11015005a ತಮೇವಂವಾದಿನಂ ಭೀತಂ ಸಂನಿಕರ್ಷಗತಂ ತದಾ|

11015005c ನೋವಾಚ ಕಿಂ ಚಿದ್ಗಾಂಧಾರೀ ನಿಃಶ್ವಾಸಪರಮಾ ಭೃಶಮ್||

ಹತ್ತಿರದಲ್ಲಿಯೇ ಭೀತನಾಗಿ ನಿಂತಿದ್ದ ಆ ಅನಿಂದಿತನಿಗೆ ಸುದೀರ್ಘವಾಗಿ ನಿಟ್ಟುಸಿರು ಬಿಡುತ್ತಿದ್ದ ಗಾಂಧಾರಿಯು ಏನನ್ನೂ ಹೇಳಲಿಲ್ಲ.

11015006a ತಸ್ಯಾವನತದೇಹಸ್ಯ ಪಾದಯೋರ್ನಿಪತಿಷ್ಯತಃ|

11015006c ಯುಧಿಷ್ಠಿರಸ್ಯ ನೃಪತೇರ್ಧರ್ಮಜ್ಞಾ ಧರ್ಮದರ್ಶಿನೀ||

11015006e ಅಂಗುಲ್ಯಗ್ರಾಣಿ ದದೃಶೇ ದೇವೀ ಪಟ್ಟಾಂತರೇಣ ಸಾ||

11015007a ತತಃ ಸ ಕುನಕೀಭೂತೋ ದರ್ಶನೀಯನಖೋ ನೃಪಃ|

ನೃಪತಿ ಯುಧಿಷ್ಠಿರನು ದೇಹವನ್ನು ಬಗ್ಗಿಸಿ ಅವಳ ಪಾದಗಳಲ್ಲಿ ಬೀಳುವುದರಲ್ಲಿದ್ದಾಗ ಧರ್ಮಜ್ಞಾ ಧರ್ಮದರ್ಶಿನೀ ದೇವೀ ಗಾಂಧರಿಯು ತನ್ನ ಕಣ್ಣಿಗೆ ಕಟ್ಟಿದ್ದ ಪಟ್ಟಿಯ ಸಂಧಿಯಿಂದ ಅವನ ಬೆರಳ ತುದಿಗಳನ್ನು ನೋಡಿದಳು. ಕೂಡಲೇ ಆ ನೃಪನ ಸುಂದರ ಉಗುರುಗಳ ಬೆರಳುಗಳು ವಿಕಾರರೂಪವನ್ನು ತಾಳಿದವು.

11015007c ತಂ ದೃಷ್ಟ್ವಾ ಚಾರ್ಜುನೋಽಗಚ್ಚದ್ವಾಸುದೇವಸ್ಯ ಪೃಷ್ಠತಃ||

11015008a ಏವಂ ಸಂಚೇಷ್ಟಮಾನಾಂಸ್ತಾನಿತಶ್ಚೇತಶ್ಚ ಭಾರತ|

11015008c ಗಾಂಧಾರೀ ವಿಗತಕ್ರೋಧಾ ಸಾಂತ್ವಯಾಮಾಸ ಮಾತೃವತ್||

ಅದನ್ನು ನೋಡಿ ಅರ್ಜುನನು ವಾಸುದೇವನ ಹಿಂದೆ ಅಡಗಿಕೊಂಡನು. ಭಾರತ! ಅವರೆಲ್ಲರೂ ಕೂಡ ಹೀಗೆ ಅಲ್ಲಿಂದಿಲ್ಲಿಗೆ ಓಡಾಡತೊಡಗಿದರು. ಆಗ ಗಾಂಧಾರಿಯು ಕ್ರೋಧವನ್ನು ತೊರೆದು ತಾಯಿಯಂತೆ ಅವರನ್ನು ಸಂತವಿಸಿದಳು.

11015009a ತಯಾ ತೇ ಸಮನುಜ್ಞಾತಾ ಮಾತರಂ ವೀರಮಾತರಮ್|

11015009c ಅಭ್ಯಗಚ್ಚಂತ ಸಹಿತಾಃ ಪೃಥಾಂ ಪೃಥುಲವಕ್ಷಸಃ||

ಅವಳಿಂದ ಅನುಜ್ಞೆಯನ್ನು ಪಡೆದು ಆ ವಿಶಾಲವಕ್ಷರು ಒಟ್ಟಿಗೇ ವೀರಮಾತೆ ತಾಯಿ ಪೃಥೆಯ ಬಳಿ ಹೋದರು.

11015010a ಚಿರಸ್ಯ ದೃಷ್ಟ್ವಾ ಪುತ್ರಾನ್ಸಾ ಪುತ್ರಾಧಿಭಿರಭಿಪ್ಲುತಾ|

11015010c ಬಾಷ್ಪಮಾಹಾರಯದ್ದೇವೀ ವಸ್ತ್ರೇಣಾವೃತ್ಯ ವೈ ಮುಖಮ್||

ಬಹಳ ಕಾಲದ ನಂತರ ತನ್ನ ಪುತ್ರರನ್ನು ಕಂಡು ಕುಂತೀದೇವಿಯು ಸೆರಗಿನಿಂದ ಮುಖವನ್ನು ಮುಚ್ಚಿ ಪುತ್ರರೊಂದಿಗೆ ಕಣ್ಣೀರು ಸುರಿಸಿದಳು.

11015011a ತತೋ ಬಾಷ್ಪಂ ಸಮುತ್ಸೃಜ್ಯ ಸಹ ಪುತ್ರೈಸ್ತಥಾ ಪೃಥಾ|

11015011c ಅಪಶ್ಯದೇತಾನ್ ಶಸ್ತ್ರೌಘೈರ್ಬಹುಧಾ ಪರಿವಿಕ್ಷತಾನ್||

ಅನಂತರ ಕಣ್ಣೀರನ್ನು ಒರೆಸಿಕೊಂಡು ಪೃಥೆಯು ಶಸ್ತ್ರಪ್ರಹಾರಗಳಿಂದ ಗಾಯಗೊಂಡಿದ್ದ ತನ್ನ ಪುತ್ರರನ್ನು ನೋಡಿದಳು.

11015012a ಸಾ ತಾನೇಕೈಕಶಃ ಪುತ್ರಾನ್ಸಂಸ್ಪೃಶಂತೀ ಪುನಃ ಪುನಃ|

11015012c ಅನ್ವಶೋಚಂತ ದುಃಖಾರ್ತಾ ದ್ರೌಪದೀಂ ಚ ಹತಾತ್ಮಜಾಮ್|

11015012e ರುದತೀಮಥ ಪಾಂಚಾಲೀಂ ದದರ್ಶ ಪತಿತಾಂ ಭುವಿ||

ಒಬ್ಬೊಬ್ಬರನ್ನಾಗಿ ಅವಳು ತನ್ನ ಮಕ್ಕಳನ್ನು ಪುನಃ ಪುನಃ ಮೈದಡವಿದಳು. ಅನಂತರ ಮಕ್ಕಳನ್ನು ಕಳೆದುಕೊಂಡು ದುಃಖಾರ್ತಳಾಗಿ ರೋದಿಸುತ್ತಾ ನೆಲದ ಬೇಲೆ ಬಿದ್ದಿದ್ದ ಪಾಂಚಾಲೀ ದ್ರೌಪದಿಯನ್ನು ನೋಡಿ ಶೋಕಿಸಿದಳು.

11015013 ದ್ರೌಪದ್ಯುವಾಚ

11015013a ಆರ್ಯೇ ಪೌತ್ರಾಃ ಕ್ವ ತೇ ಸರ್ವೇ ಸೌಭದ್ರಸಹಿತಾ ಗತಾಃ|

11015013c ನ ತ್ವಾಂ ತೇಽದ್ಯಾಭಿಗಚ್ಚಂತಿ ಚಿರದೃಷ್ಟಾಂ ತಪಸ್ವಿನೀಮ್|

11015013e ಕಿಂ ನು ರಾಜ್ಯೇನ ವೈ ಕಾರ್ಯಂ ವಿಹೀನಾಯಾಃ ಸುತೈರ್ಮಮ||

ದ್ರೌಪದಿಯು ಹೇಳಿದಳು: “ಆರ್ಯೇ! ಸೌಭದ್ರ ಅಭಿಮನ್ಯು ಸಹಿತರಾಗಿ ನಿನ್ನ ಮೊಮ್ಮಕ್ಕಳೆಲ್ಲಾ ಎಲ್ಲಿ ಹೋದರು? ಬಹಳ ಕಾಲ ನೋಡದಿದ್ದ ತಪಸ್ವಿನೀ ನಿನ್ನನ್ನು ನೋಡಲು ಅವರು ಏಕೆ ಬಂದಿಲ್ಲ? ಮಕ್ಕಳನ್ನು ಕಳೆದುಕೊಂಡ ನನಗೆ ಈ ರಾಜ್ಯದಿಂದ ಏನಾಗಬೇಕಾಗಿದೆ?””

11015014 ವೈಶಂಪಾಯನ ಉವಾಚ

11015014a ತಾಂ ಸಮಾಶ್ವಾಸಯಾಮಾಸ ಪೃಥಾ ಪೃಥುಲಲೋಚನಾ|

11015014c ಉತ್ಥಾಪ್ಯ ಯಾಜ್ಞಸೇನೀಂ ತು ರುದತೀಂ ಶೋಕಕರ್ಶಿತಾಮ್||

ವೈಶಂಪಾಯನನು ಹೇಳಿದನು: “ವಿಶಾಲಲೋಚನೆ ಕುಂತಿಯು ಶೋಕಕರ್ಶಿತಳಾಗಿ ರೋದಿಸುತ್ತಿರುವ ಯಾಜ್ಞಸೇನೆಯನ್ನು ಮೇಲಕ್ಕೆತ್ತಿ ಸಮಾಧಾನಗೊಳಿಸತೊಡಗಿದಳು.

11015015a ತಯೈವ ಸಹಿತಾ ಚಾಪಿ ಪುತ್ರೈರನುಗತಾ ಪೃಥಾ|

11015015c ಅಭ್ಯಗಚ್ಚತ ಗಾಂಧಾರೀಮಾರ್ತಾಮಾರ್ತತರಾ ಸ್ವಯಮ್||

ಅವಳನ್ನೂ ತನ್ನ ಪುತ್ರರನ್ನೂ ಜೊತೆಯಲ್ಲಿ ಕರೆದುಕೊಂಡು ಪೃಥೆಯು ತನಗಿಂತಲೂ ಆರ್ತಳಾಗಿದ್ದ ಮಾತೆ ಗಾಂಧಾರಿಯ ಬಳಿ ಹೋದಳು.

11015016a ತಾಮುವಾಚಾಥ ಗಾಂಧಾರೀ ಸಹ ವಧ್ವಾ ಯಶಸ್ವಿನೀಮ್|

11015016c ಮೈವಂ ಪುತ್ರೀತಿ ಶೋಕಾರ್ತಾ ಪಶ್ಯ ಮಾಮಪಿ ದುಃಖಿತಾಮ್||

ಯಶಸ್ವಿನೀ ಕುಂತಿಯೊಡನಿದ್ದ ಸೊಸೆಗೆ ಗಾಂಧಾರಿಯು ಹೇಳಿದಳು: “ಪುತ್ರೀ! ಹೀಗೆ ಶೋಕಾರ್ತಳಾಗಬೇಡ! ದುಃಖಿತಳಾಗಿರುವ ನನ್ನನ್ನೂ ನೋಡು!

11015017a ಮನ್ಯೇ ಲೋಕವಿನಾಶೋಽಯಂ ಕಾಲಪರ್ಯಾಯಚೋದಿತಃ|

11015017c ಅವಶ್ಯಭಾವೀ ಸಂಪ್ರಾಪ್ತಃ ಸ್ವಭಾವಾಲ್ಲೋಮಹರ್ಷಣಃ||

ಈ ಲೋಕವಿನಾಶವು ಕಾಲಚಕ್ರದಿಂದ ಪ್ರಚೋದಿತವಾದುದೆಂತು ನನಗನ್ನಿಸುತ್ತದೆ. ಅವಶ್ಯವಾಗಿ ಆಗಬೇಗಾಗಿದ್ದುದು ಆಗಿಹೋಯಿತು. ಸ್ವಾಭಾವಿಕವಾಗಿಯೇ ಇದು ರೋಮಹರ್ಷಣವಾದುದು.

11015018a ಇದಂ ತತ್ಸಮನುಪ್ರಾಪ್ತಂ ವಿದುರಸ್ಯ ವಚೋ ಮಹತ್|

11015018c ಅಸಿದ್ಧಾನುನಯೇ ಕೃಷ್ಣೇ ಯದುವಾಚ ಮಹಾಮತಿಃ||

ಕೃಷ್ಣನು ಶಾಂತಿಗಾಗಿ ಬಂದಾಗ ಮಹಾಮತಿ ವಿದುರನು ಯಾವ ಮಹಾ ಮಾತುಗಳನ್ನಾಡಿದ್ದನೋ ಅದರಂತೆಯೇ ಆಗಿಹೋಯಿತು.

11015019a ತಸ್ಮಿನ್ನಪರಿಹಾರ್ಯೇಽರ್ಥೇ ವ್ಯತೀತೇ ಚ ವಿಶೇಷತಃ|

11015019c ಮಾ ಶುಚೋ ನ ಹಿ ಶೋಚ್ಯಾಸ್ತೇ ಸಂಗ್ರಾಮೇ ನಿಧನಂ ಗತಾಃ||

ಯಾವುದಕ್ಕೆ ಪರಿಹಾರವೇ ಇಲ್ಲವೋ, ಅದರಲ್ಲೂ ವಿಶೇಷವಾಗಿ ಯಾವುದು ಆಗಿ ಮುಗಿದು ಹೋಗಿದೆಯೋ ಅದರ ಕುರಿತು ಶೋಕಿಸಬೇಡ! ಸಂಗ್ರಾಮದಲ್ಲಿ ನಿಧನಹೊಂದಿದವರ ಸಲುವಾಗಿ ನೀನು ಶೋಕಿಸಬೇಕಾಗಿಲ್ಲ.

11015020a ಯಥೈವ ತ್ವಂ ತಥೈವಾಹಂ ಕೋ ವಾ ಮಾಶ್ವಾಸಯಿಷ್ಯತಿ|

11015020c ಮಮೈವ ಹ್ಯಪರಾಧೇನ ಕುಲಮಗ್ರ್ಯಂ ವಿನಾಶಿತಮ್||

ನಿನ್ನಂತೆ ನಾನೂ ಕೂಡ. ಯಾರು ಯಾರನ್ನು ಸಮಾಧಾನಗೊಳಿಸಬಲ್ಲರು? ನನ್ನ ಅಪರಾಧದಿಂದಲೇ ಈ ಉಚ್ಛ ಕುಲವು ನಾಶವಾಯಿತು.””

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಪೃಥಾಪುತ್ರದರ್ಶನೇ ಪಂಚದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಪೃಥಾಪುತ್ರದರ್ಶನ ಎನ್ನುವ ಹದಿನೈದನೇ ಅಧ್ಯಾಯವು.

Comments are closed.