Stri Parva: Chapter 12

ಸ್ತ್ರೀ ಪರ್ವ

೧೨

ಕೃಷ್ಣ-ಧೃತರಾಷ್ಟ್ರರ ಸಂವಾದ (೧-೧೫).

11012001 ವೈಶಂಪಾಯನ ಉವಾಚ

11012001a ತತ ಏನಮುಪಾತಿಷ್ಠನ್ ಶೌಚಾರ್ಥಂ ಪರಿಚಾರಕಾಃ|

11012001c ಕೃತಶೌಚಂ ಪುನಶ್ಚೈನಂ ಪ್ರೋವಾಚ ಮಧುಸೂದನಃ||

ವೈಶಂಪಾಯನನು ಹೇಳಿದನು: “ಆಗ ಶೌಚಕ್ಕಾಗಿ ಅವನನ್ನು ಅವನ ಪರಿಚಾರಕರು ಮೇಲೆತ್ತಿದರು. ಅವನು ಶೌಚವನ್ನು ಮಾಡಿದ ನಂತರ ಮಧುಸೂದನನು ಪುನಃ ಇದನ್ನು ಹೇಳಿದನು:

11012002a ರಾಜನ್ನಧೀತಾ ವೇದಾಸ್ತೇ ಶಾಸ್ತ್ರಾಣಿ ವಿವಿಧಾನಿ ಚ|

11012002c ಶ್ರುತಾನಿ ಚ ಪುರಾಣಾನಿ ರಾಜಧರ್ಮಾಶ್ಚ ಕೇವಲಾಃ||

“ರಾಜನ್! ನೀನು ವೇದಗಳನ್ನೂ ವಿವಿಧ ಶಾಸ್ತ್ರಗಳನ್ನು ಅಧ್ಯಯನ ಮಾಡಿರುವೆ. ಪುರಾಣಗಳನ್ನೂ ರಾಜಧರ್ಮಗಳನ್ನೂ ಕೇಳಿರುವೆ.

11012003a ಏವಂ ವಿದ್ವಾನ್ಮಹಾಪ್ರಾಜ್ಞ ನಾಕಾರ್ಷೀರ್ವಚನಂ ತದಾ|

11012003c ಪಾಂಡವಾನಧಿಕಾನ್ಜಾನನ್ಬಲೇ ಶೌರ್ಯೇ ಚ ಕೌರವ||

ಮಹಾಪ್ರಾಜ್ಞ! ಕೌರವ! ಈ ರೀತಿ ವಿಧ್ವಾಂಸನಾಗಿರುವ ನೀನು ಬಲ ಮತ್ತು ಶೌರ್ಯಗಳಲ್ಲಿ ಪಾಂಡವರು ಅಧಿಕರೆಂದು ತಿಳಿದೂ ಆಗ ಋಷಿಗಳ ವಚನವನ್ನು ಕೇಳಲಿಲ್ಲ.

11012004a ರಾಜಾ ಹಿ ಯಃ ಸ್ಥಿರಪ್ರಜ್ಞಃ ಸ್ವಯಂ ದೋಷಾನವೇಕ್ಷತೇ|

11012004c ದೇಶಕಾಲವಿಭಾಗಂ ಚ ಪರಂ ಶ್ರೇಯಃ ಸ ವಿಂದತಿ||

ಯಾವ ರಾಜನು ಸ್ಥಿರಪ್ರಜ್ಞನಾಗಿದ್ದುಕೊಂಡು ದೇಶ-ಕಾಲಗಳಿಗೆ ತಕ್ಕಂತೆ ತನ್ನ ದೋಷಗಳನ್ನು ತಾನೇ ಅರಿತುಕೊಳ್ಳುತ್ತಾನೋ ಅವನಿಗೆ ಪರಮ ಶ್ರೇಯಸ್ಸುಂಟಾಗುತ್ತದೆ.

11012005a ಉಚ್ಯಮಾನಂ ಚ ಯಃ ಶ್ರೇಯೋ ಗೃಹ್ಣೀತೇ ನೋ ಹಿತಾಹಿತೇ|

11012005c ಆಪದಂ ಸಮನುಪ್ರಾಪ್ಯ ಸ ಶೋಚತ್ಯನಯೇ ಸ್ಥಿತಃ||

ಶ್ರೇಯಮಾತುಗಳನ್ನು ಹೇಳುತ್ತಿದ್ದರೂ ಅವುಗಳ ಹಿತಾಹಿತವನ್ನು ಗಮನಿಸದೇ ಗ್ರಹಣಮಾಡದಿರುವವನು ಅನ್ಯಾಯಮಾರ್ಗದಲ್ಲಿ ನಡೆದು ಆಪತ್ತನ್ನು ಪಡೆದು ಮುಂದೆ ಶೋಕಿಸುತ್ತಾನೆ.

11012006a ತತೋಽನ್ಯವೃತ್ತಮಾತ್ಮಾನಂ ಸಮವೇಕ್ಷಸ್ವ ಭಾರತ|

11012006c ರಾಜಂಸ್ತ್ವಂ ಹ್ಯವಿಧೇಯಾತ್ಮಾ ದುರ್ಯೋಧನವಶೇ ಸ್ಥಿತಃ||

ಭಾರತ! ಆಗ ನೀನು ವ್ಯವಹರಿಸಿದುದನ್ನು ನೀನೇ ವಿಮರ್ಶಿಸು. ರಾಜನ್! ಆಗ ನೀನು ನಿನ್ನ ಅಧೀನನಾಗಿರದೇ ದುರ್ಯೋಧನನ ವಶದಲ್ಲಿದ್ದೆ.

11012007a ಆತ್ಮಾಪರಾಧಾದಾಯಸ್ತಸ್ತತ್ಕಿಂ ಭೀಮಂ ಜಿಘಾಂಸಸಿ|

11012007c ತಸ್ಮಾತ್ಸಂಯಚ್ಚ ಕೋಪಂ ತ್ವಂ ಸ್ವಮನುಸ್ಮೃತ್ಯ ದುಷ್ಕೃತಮ್||

ನಿನ್ನದೇ ಅಪರಾಧದಿಂದ ಆದುದಕ್ಕೆ ಭೀಮಸೇನನನ್ನು ಏಕೆ ಕೊಲ್ಲಲು ಬಯಸುವೆ? ಆದುದರಿಂದ ನೀನು ಮಾಡಿದ ದುಷ್ಕೃತ್ಯಗಳನ್ನು ಸ್ಮರಿಸಿಕೊಂಡು ನಿನ್ನ ಕೋಪವನ್ನು ಹಿಡಿತದಲ್ಲಿಟ್ಟುಕೋ!

11012008a ಯಸ್ತು ತಾಂ ಸ್ಪರ್ಧಯಾ ಕ್ಷುದ್ರಃ ಪಾಂಚಾಲೀಮಾನಯತ್ಸಭಾಮ್|

11012008c ಸ ಹತೋ ಭೀಮಸೇನೇನ ವೈರಂ ಪ್ರತಿಚಿಕೀರ್ಷತಾ||

ಸ್ಪರ್ಧಾಭಾವದಿಂದ ಪಾಂಚಾಲಿಯನ್ನು ಸಭೆಗೆ ಎಳೆದುತಂದ ಆ ಕ್ಷುದ್ರನು ಭೀಮಸೇನನಿಂದ ಹತನಾಗಿ, ವೈರಕ್ಕೆ ಪ್ರತೀಕಾರವಾಯಿತು.

11012009a ಆತ್ಮನೋಽತಿಕ್ರಮಂ ಪಶ್ಯ ಪುತ್ರಸ್ಯ ಚ ದುರಾತ್ಮನಃ|

11012009c ಯದನಾಗಸಿ ಪಾಂಡೂನಾಂ ಪರಿತ್ಯಾಗಃ ಪರಂತಪ||

ಪರಂತಪ! ನಿನ್ನ ಮತ್ತು ನಿನ್ನ ಮಗ ಆ ದುರಾತ್ಮನ ಅನ್ಯಾಯಗಳನ್ನು ನೋಡು. ನಿರಪರಾಧಿಗಳಾದ ಪಾಂಡವರನ್ನು ಆಗ ನೀನು ಪರಿತ್ಯಜಿಸಿದೆ.”

11012010a ಏವಮುಕ್ತಃ ಸ ಕೃಷ್ಣೇನ ಸರ್ವಂ ಸತ್ಯಂ ಜನಾಧಿಪ|

11012010c ಉವಾಚ ದೇವಕೀಪುತ್ರಂ ಧೃತರಾಷ್ಟ್ರೋ ಮಹೀಪತಿಃ||

ಕೃಷ್ಣನಿಂದ ಹೀಗೆ ಸರ್ವ ಸತ್ಯವನ್ನೂ ಹೇಳಿಸಿಕೊಂಡ ಜನಾಧಿಪ ಮಹೀಪತಿ ಧೃತರಾಷ್ಟ್ರನು ದೇವಕೀಪುತ್ರನಿಗೆ ಇಂತೆಂದನು:

11012011a ಏವಮೇತನ್ಮಹಾಬಾಹೋ ಯಥಾ ವದಸಿ ಮಾಧವ|

11012011c ಪುತ್ರಸ್ನೇಹಸ್ತು ಧರ್ಮಾತ್ಮನ್ಧೈರ್ಯಾನ್ಮಾಂ ಸಮಚಾಲಯತ್||

“ಮಹಾಬಾಹೋ! ಮಾಧವ! ಧರ್ಮಾತ್ಮನ್! ನೀನು ಹೇಳಿದಂತೆಯೇ ನಡೆದುಹೋಯಿತು! ಪುತ್ರಸ್ನೇಹವೇ ನನ್ನ ಧೈರ್ಯವನ್ನು ಕೆಡಿಸಿತು!

11012012a ದಿಷ್ಟ್ಯಾ ತು ಪುರುಷವ್ಯಾಘ್ರೋ ಬಲವಾನ್ಸತ್ಯವಿಕ್ರಮಃ|

11012012c ತ್ವದ್ಗುಪ್ತೋ ನಾಗಮತ್ಕೃಷ್ಣ ಭೀಮೋ ಬಾಹ್ವಂತರಂ ಮಮ||

ಕೃಷ್ಣ! ಒಳ್ಳೆಯದಾಯಿತು ನಿನ್ನಿಂದ ರಕ್ಷಿತನಾದ ಪುರುಷವ್ಯಾಘ್ರ ಬಲವಾನ್ ಸತ್ಯವಿಕ್ರಮಿ ಭೀಮನು ನನ್ನ ಬಾಹುಗಳ ಮಧ್ಯೆ ಬರಲಿಲ್ಲ!

11012013a ಇದಾನೀಂ ತ್ವಹಮೇಕಾಗ್ರೋ ಗತಮನ್ಯುರ್ಗತಜ್ವರಃ|

11012013c ಮಧ್ಯಮಂ ಪಾಂಡವಂ ವೀರಂ ಸ್ಪ್ರಷ್ಟುಮಿಚ್ಚಾಮಿ ಕೇಶವ||

ಈಗ ನಾನು ಏಕಾಗ್ರಚಿತ್ತನಾಗಿದ್ದೇನೆ. ಸಿಟ್ಟು ಹೊರಟುಹೋಗಿದೆ. ತಾಪವೂ ಇಲ್ಲವಾಗಿದೆ. ಕೇಶವ! ಮಧ್ಯಮ ಪಾಂಡವ ವೀರನನ್ನು ಮುಟ್ಟಲು ಬಯಸುತ್ತೇನೆ.

11012014a ಹತೇಷು ಪಾರ್ಥಿವೇಂದ್ರೇಷು ಪುತ್ರೇಷು ನಿಹತೇಷು ಚ|

11012014c ಪಾಂಡುಪುತ್ರೇಷು ಮೇ ಶರ್ಮ ಪ್ರೀತಿಶ್ಚಾಪ್ಯವತಿಷ್ಠತೇ||

ಪಾರ್ಥಿವೇಂದ್ರರು ಮತ್ತು ಪುತ್ರರು ಹತರಾದ ಮೇಲೆ ಪಾಂಡುಪುತ್ರರ ಮೇಲೆಯೇ ನನ್ನ ಸುಖ ಮತ್ತು ಪ್ರೀತಿಗಳು ಪ್ರತಿಷ್ಠಿತವಾಗಿರುತ್ತವೆ.”

11012015a ತತಃ ಸ ಭೀಮಂ ಚ ಧನಂಜಯಂ ಚ

         ಮಾದ್ರ್ಯಾಶ್ಚ ಪುತ್ರೌ ಪುರುಷಪ್ರವೀರೌ|

11012015c ಪಸ್ಪರ್ಶ ಗಾತ್ರೈಃ ಪ್ರರುದನ್ಸುಗಾತ್ರಾನ್

         ಆಶ್ವಾಸ್ಯ ಕಲ್ಯಾಣಮುವಾಚ ಚೈನಾನ್||

ಅನಂತರ ಅವನು ಭೀಮ, ಧನಂಜಯ, ಮತ್ತು ಪುರುಷಪ್ರವೀರ ಮಾದ್ರೀಪುತ್ರರ ಅಂಗಾಂಗಗಳನ್ನು ಮುಟ್ಟಿ ನೇವರಿಸಿದನು. ಅವರನ್ನು ಸಂತಯಿಸಿ ಮಂಗಳವಾಗಲೆಂದು ಆಶೀರ್ವಾದಿಸಿದನು.”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಧೃತರಾಷ್ಟ್ರಕೋಪವಿಮೋಚನೇ ಪಾಂಡವಪರಿಶ್ವಂಗೇ ದ್ವಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಧೃತರಾಷ್ಟ್ರಕೋಪವಿಮೋಚನೇ ಪಾಂಡವಪರಿಶ್ವಂಗ ಎನ್ನುವ ಹನ್ನೆರಡನೇ ಅಧ್ಯಾಯವು.

Comments are closed.