Stri Parva: Chapter 11

ಸ್ತ್ರೀ ಪರ್ವ

೧೧

ಹಸ್ತಿನಾಪುರದಿಂದ ಧೃತರಾಷ್ಟ್ರನು ರಣಭೂಮಿಯ ಕಡೆ ಬರುತ್ತಿದ್ದಾನೆಂದು ತಿಳಿದ ಯುಧಿಷ್ಠಿರನು ತಮ್ಮಂದಿರು, ಕೃಷ್ಣ, ಸಾತ್ಯಕಿ, ದ್ರೌಪದಿ ಮತ್ತು ಇತರ ಸ್ತ್ರೀಯರೊಡನೆ ಹೊರಟು ಮಾರ್ಗದಲ್ಲಿ ಧೃತರಾಷ್ಟ್ರನನ್ನು ಕಂಡು ನಮಸ್ಕರಿಸಿದುದು (೧-೧೦). ಕೃಷ್ಣನು ಲೋಹದ ಪ್ರತಿಮೆಯನ್ನು ಮುಂದಿಟ್ಟು ಭೀಮಸೇನನನ್ನು ಧೃತರಾಷ್ಟ್ರನ ಅಪ್ಪುಗೆಯಿಂದ ವಿನಾಶಹೊಂದದಂತೆ ರಕ್ಷಿಸಿದುದು (೧೧-೩೦).

Image result for dhritarashtra embraces bhima11011001 ವೈಶಂಪಾಯನ ಉವಾಚ

11011001a ಹತೇಷು ಸರ್ವಸೈನ್ಯೇಷು ಧರ್ಮರಾಜೋ ಯುಧಿಷ್ಠಿರಃ|

11011001c ಶುಶ್ರುವೇ ಪಿತರಂ ವೃದ್ಧಂ ನಿರ್ಯಾತಂ ಗಜಸಾಹ್ವಯಾತ್||

ವೈಶಂಪಾಯನನು ಹೇಳಿದನು: “ಸರ್ವಸೇನೆಗಳೂ ಹತಗೊಳ್ಳಲು ಧರ್ಮರಾಜ ಯುಧಿಷ್ಠಿರನು ತನ್ನ ವೃದ್ಧ ದೊಡ್ಡಪ್ಪನು ಹಸ್ತಿನಾಪುರದಿಂದ ಹೊರಟಿರುವನೆಂದು ಕೇಳಿದನು.

11011002a ಸೋಽಭ್ಯಯಾತ್ಪುತ್ರಶೋಕಾರ್ತಃ ಪುತ್ರಶೋಕಪರಿಪ್ಲುತಮ್|

11011002c ಶೋಚಮಾನೋ ಮಹಾರಾಜ ಭ್ರಾತೃಭಿಃ ಸಹಿತಸ್ತದಾ||

ಆ ಪುತ್ರಶೋಕಾರ್ತನು ಪುತ್ರಶೋಕದಲ್ಲಿ ಮುಳುಗಿ ಶೋಕಿಸುತ್ತಿದ್ದ ಮಹಾರಾಜನನ್ನು ನೋಡಲು ಭ್ರಾತೃಗಳೊಂದಿಗೆ ಹೊರಟನು.

11011003a ಅನ್ವೀಯಮಾನೋ ವೀರೇಣ ದಾಶಾರ್ಹೇಣ ಮಹಾತ್ಮನಾ|

11011003c ಯುಯುಧಾನೇನ ಚ ತಥಾ ತಥೈವ ಚ ಯುಯುತ್ಸುನಾ||

ಮಹಾತ್ಮ ವೀರ ದಾಶಾರ್ಹನೂ, ಯುಯುಧಾನ ಮತ್ತು ಯುಯುತ್ಸುವೂ ಅವನನ್ನು ಹಿಂಬಾಲಿಸಿದರು.

11011004a ತಮನ್ವಗಾತ್ಸುದುಃಖಾರ್ತಾ ದ್ರೌಪದೀ ಶೋಕಕರ್ಶಿತಾ|

11011004c ಸಹ ಪಾಂಚಾಲಯೋಷಿದ್ಭಿರ್ಯಾಸ್ತತ್ರಾಸನ್ಸಮಾಗತಾಃ||

ಅಲ್ಲಿ ಬಂದು ಸೇರಿದ್ದ ಅತೀವ ದುಃಖಾರ್ತಳೂ ಶೋಕಕರ್ಶಿತಳೂ ಆಗಿದ್ದ ದ್ರೌಪದಿಯು ಪಾಂಚಾಲ ಸಖಿಯರೊಂದಿಗೆ ಅವರನ್ನು ಅನುಸರಿಸಿದಳು.

11011005a ಸ ಗಂಗಾಮನು ವೃಂದಾನಿ ಸ್ತ್ರೀಣಾಂ ಭರತಸತ್ತಮ|

11011005c ಕುರರೀಣಾಮಿವಾರ್ತಾನಾಂ ಕ್ರೋಶಂತೀನಾಂ ದದರ್ಶ ಹ||

ಭರತಸತ್ತಮ! ಅವನು ಗಂಗಾನದೀ ತೀರದಲ್ಲಿ ಕುರರೀ ಪಕ್ಷಿಗಳಂತೆ ಕೂಗಿಕೊಳ್ಳುತ್ತಾ ರೋದಿಸುತ್ತಿದ್ದ ಕುರುಸ್ತ್ರೀಯರ ಗುಂಪುಗಳನ್ನು ಕಂಡನು.

11011006a ತಾಭಿಃ ಪರಿವೃತೋ ರಾಜಾ ರುದತೀಭಿಃ ಸಹಸ್ರಶಃ|

11011006c ಊರ್ಧ್ವಬಾಹುಭಿರಾರ್ತಾಭಿರ್ಬ್ರುವತೀಭಿಃ ಪ್ರಿಯಾಪ್ರಿಯೇ||

ಪ್ರಿಯ ಮತ್ತು ಅಪ್ರಿಯ ಮಾತುಗಳನ್ನಾಡುತ್ತಾ ತೋಳುಗಳನ್ನು ಮೇಲೆತ್ತಿ ಬಹಳವಾಗಿ ಆರ್ತನಾದಗೈದು ರೋದಿಸುತ್ತಿದ್ದ ಸಹಸ್ರಾರು ಸ್ತ್ರೀಯರು ರಾಜಾ ಯುಧಿಷ್ಠಿರನನ್ನು ಮುತ್ತಿಕೊಂಡರು.

11011007a ಕ್ವ ನು ಧರ್ಮಜ್ಞತಾ ರಾಜ್ಞಃ ಕ್ವ ನು ಸಾದ್ಯಾನೃಶಂಸತಾ|

11011007c ಯದಾವಧೀತ್ಪಿತೄನ್ಭ್ರಾತೄನ್ಗುರೂನ್ಪುತ್ರಾನ್ಸಖೀನಪಿ||

“ಪಿತೃಗಳನ್ನೂ, ಭ್ರಾತೃಗಳನ್ನೂ, ಗುರುಗಳನ್ನೂ, ಪುತ್ರರನ್ನೂ, ಸ್ನೇಹಿತರನ್ನೂ ವಧಿಗೀಡುಮಾಡಿದ ರಾಜನ ಆ ಧರ್ಮಜ್ಞತೆ, ದಯೆ ಮತ್ತು ಅಹಿಂಸೆಗಳು ಈಗ ಎಲ್ಲಿಹೋದವು?

11011008a ಘಾತಯಿತ್ವಾ ಕಥಂ ದ್ರೋಣಂ ಭೀಷ್ಮಂ ಚಾಪಿ ಪಿತಾಮಹಮ್|

11011008c ಮನಸ್ತೇಽಭೂನ್ಮಹಾಬಾಹೋ ಹತ್ವಾ ಚಾಪಿ ಜಯದ್ರಥಮ್||

ಮಹಾಬಾಹೋ! ದ್ರೋಣ, ಪಿತಾಮಹ ಭೀಷ್ಮ ಮತ್ತು ಜಯದ್ರಥರನ್ನು ಸಂಹರಿಸಿ ನಿನ್ನ ಮನಸ್ಸು ಈಗ ಹೇಗಿದೆ?

11011009a ಕಿಂ ನು ರಾಜ್ಯೇನ ತೇ ಕಾರ್ಯಂ ಪಿತೄನ್ಭ್ರಾತೄನಪಶ್ಯತಃ|

11011009c ಅಭಿಮನ್ಯುಂ ಚ ದುರ್ಧರ್ಷಂ ದ್ರೌಪದೇಯಾಂಶ್ಚ ಭಾರತ||

ಭಾರತ! ಪಿತೃಗಳನ್ನೂ, ಭ್ರಾತೃಗಳನ್ನೂ, ದುರ್ಧರ್ಷ ಅಭಿಮನ್ಯುವನ್ನೂ ಮತ್ತು ದ್ರೌಪದೇಯರನ್ನು ಇನ್ನು ನೋಡಲಿಕ್ಕಾಗದಿರುವಾಗ ಈ ರಾಜ್ಯವನ್ನಿಟ್ಟುಕೊಂಡು ನೀನು ಏನು ಮಾಡುವೆ?”

11011010a ಅತೀತ್ಯ ತಾ ಮಹಾಬಾಹುಃ ಕ್ರೋಶಂತೀಃ ಕುರರೀರಿವ|

11011010c ವವಂದೇ ಪಿತರಂ ಜ್ಯೇಷ್ಠಂ ಧರ್ಮರಾಜೋ ಯುಧಿಷ್ಠಿರಃ||

ಕುರರೀ ಪಕ್ಷಿಗಳಂತೆ ಅಳುತ್ತಿರುವ ಆ ಸ್ತ್ರೀಯರನ್ನು ಸರಿಸಿ ಮುಂದೆಹೋಗಿ ಮಹಾಬಾಹು ಧರ್ಮರಾಜ ಯುಧಿಷ್ಠಿರನು ತನ್ನ ದೊಡ್ಡಪ್ಪನಿಗೆ ವಂದಿಸಿದನು.

11011011a ತತೋಽಭಿವಾದ್ಯ ಪಿತರಂ ಧರ್ಮೇಣಾಮಿತ್ರಕರ್ಶನಾಃ|

11011011c ನ್ಯವೇದಯಂತ ನಾಮಾನಿ ಪಾಂಡವಾಸ್ತೇಽಪಿ ಸರ್ವಶಃ||

ಆಗ ಆ ಅಮಿತ್ರಕರ್ಶನ ಪಾಂಡವರೆಲ್ಲರೂ ತಮ್ಮ ತಮ್ಮ ನಾಮಧೇಯಗಳನ್ನು ಹೇಳಿಕೊಂಡು ದೊಡ್ಡಪ್ಪನಿಗೆ ನಮಸ್ಕರಿಸಿದರು.

11011012a ತಮಾತ್ಮಜಾಂತಕರಣಂ ಪಿತಾ ಪುತ್ರವಧಾರ್ದಿತಃ|

11011012c ಅಪ್ರೀಯಮಾಣಃ ಶೋಕಾರ್ತಃ ಪಾಂಡವಂ ಪರಿಷಸ್ವಜೇ||

ಪುತ್ರವಧೆಯಿಂದ ಪೀಡಿತನಾಗಿ ಶೋಕಾರ್ತನಾಗಿದ್ದ ಆ ತಂದೆಯು ಅಂತಃಕರಣದಲ್ಲಿ ಪ್ರೀತಿಸದಿದ್ದರೂ ಪಾಂಡವನನ್ನು ಆಲಂಗಿಸಿದನು.

11011013a ಧರ್ಮರಾಜಂ ಪರಿಷ್ವಜ್ಯ ಸಾಂತ್ವಯಿತ್ವಾ ಚ ಭಾರತ|

11011013c ದುಷ್ಟಾತ್ಮಾ ಭೀಮಮನ್ವೈಚ್ಚದ್ದಿಧಕ್ಷುರಿವ ಪಾವಕಃ||

ಭಾರತ! ಧರ್ಮರಾಜನನ್ನು ಬಿಗಿದಪ್ಪಿ ಸಂತವಿಸಿದ ಆ ದುಷ್ಟಾತ್ಮನು ಭಸ್ಮೀಭೂತನನ್ನಾಗಿಸುವ ಪಾವಕನಂತೆ ಭೀಮನನ್ನು ಆಲಂಗಿಸಲು ಬಯಸಿದನು.

11011014a ಸ ಕೋಪಪಾವಕಸ್ತಸ್ಯ ಶೋಕವಾಯುಸಮೀರಿತಃ|

11011014c ಭೀಮಸೇನಮಯಂ ದಾವಂ ದಿಧಕ್ಷುರಿವ ದೃಶ್ಯತೇ||

ಶೋಕವೆಂಬ ವಾಯುವಿನಿಂದ ಭುಗಿಲೆದ್ದ ಅವನ ಕೋಪಾಗ್ನಿಯು ಭೀಮಸೇನನನ್ನು ಸುಟ್ಟುಬಿಡುತ್ತದೆಯೋ ಎನ್ನುವಂತೆ ಕಾಣುತ್ತಿತ್ತು.

11011015a ತಸ್ಯ ಸಂಕಲ್ಪಮಾಜ್ಞಾಯ ಭೀಮಂ ಪ್ರತ್ಯಶುಭಂ ಹರಿಃ|

11011015c ಭೀಮಮಾಕ್ಷಿಪ್ಯ ಪಾಣಿಭ್ಯಾಂ ಪ್ರದದೌ ಭೀಮಮಾಯಸಮ್||

ಅವನ ಸಂಕಲ್ಪವನ್ನು ತಿಳಿದ ಹರಿಯು ಕೈಗಳಿಂದ ಭೀಮನನ್ನು ಹಿಂದಕ್ಕೆಳೆದುಕೊಂಡು ಭೀಮನ ಆಕಾರದ ಲೋಹದ ಮೂರ್ತಿಯೊಂದನ್ನು ಮುಂದಿಟ್ಟನು.

11011016a ಪ್ರಾಗೇವ ತು ಮಹಾಬುದ್ಧಿರ್ಬುದ್ಧ್ವಾ ತಸ್ಯೇಂಗಿತಂ ಹರಿಃ|

11011016c ಸಂವಿಧಾನಂ ಮಹಾಪ್ರಾಜ್ಞಸ್ತತ್ರ ಚಕ್ರೇ ಜನಾರ್ದನಃ||

ಮೊದಲೇ ಅವನ ಇಂಗಿತವನ್ನು ಅರಿತಿದ್ದ ಮಹಾಬುದ್ಧಿ ಮಹಾಪ್ರಾಜ್ಞ ಹರಿ ಜನಾರ್ದನನು ಅದರ ವ್ಯವಸ್ಥೆಯನ್ನು ಮಾಡಿದ್ದನು.

11011017a ತಂ ತು ಗೃಹ್ಯೈವ ಪಾಣಿಭ್ಯಾಂ ಭೀಮಸೇನಮಯಸ್ಮಯಮ್|

11011017c ಬಭಂಜ ಬಲವಾನ್ರಾಜಾ ಮನ್ಯಮಾನೋ ವೃಕೋದರಮ್||

ವೃಕೋದರನೆಂದು ತಿಳಿದು ಭೀಮಸೇನನ ಆ ಲೋಹದ ಮೂರ್ತಿಯನ್ನು ತೋಳುಗಳಿಂದ ಹಿಡಿಯುತ್ತಲೇ ಆ ಬಲವಾನ್ ರಾಜನು ಅದನ್ನು ಪುಡಿಪುಡಿ ಮಾಡಿದನು.

11011018a ನಾಗಾಯುತಬಲಪ್ರಾಣಃ ಸ ರಾಜಾ ಭೀಮಮಾಯಸಮ್|

11011018c ಭಂಕ್ತ್ವಾ ವಿಮಥಿತೋರಸ್ಕಃ ಸುಸ್ರಾವ ರುಧಿರಂ ಮುಖಾತ್||

ಹತ್ತುಸಾವಿರ ಆನೆಗಳ ಬಲವನ್ನು ಹೊಂದಿದ್ದರೂ ಭೀಮನ ಲೋಹದ ಮೂರ್ತಿಯನ್ನು ತೋಳಿನಿಂದ ಅಪ್ಪಿಕೊಂಡು ಒಡೆದು ಹಾಕಿದುದರಿಂದ ಅವನ ಮುಖದಿಂದ ರಕ್ತವು ಸೋರತೊಡಗಿತು.

11011019a ತತಃ ಪಪಾತ ಮೇದಿನ್ಯಾಂ ತಥೈವ ರುಧಿರೋಕ್ಷಿತಃ|

11011019c ಪ್ರಪುಷ್ಪಿತಾಗ್ರಶಿಖರಃ ಪಾರಿಜಾತ ಇವ ದ್ರುಮಃ||

ರಕ್ತದಿಂದ ತೋಯ್ದು ಹೋಗಿದ್ದ ಅವನು ಪುಷ್ಪಗಳಿಂದ ತುಂಬಿಹೋಗಿದ್ದ ಪಾರಿಜಾತ ವೃಕ್ಷದಂತೆ ಭೂಮಿಯ ಮೇಲೆ ಬಿದ್ದನು.

11011020a ಪರ್ಯಗೃಹ್ಣತ ತಂ ವಿದ್ವಾನ್ಸೂತೋ ಗಾವಲ್ಗಣಿಸ್ತದಾ|

11011020c ಮೈವಮಿತ್ಯಬ್ರವೀಚ್ಚೈನಂ ಶಮಯನ್ಸಾಂತ್ವಯನ್ನಿವ||

ಆಗ ವಿದ್ವಾನ್ ಸೂತ ಗಾವಲ್ಗಣಿಯು ಅವನನ್ನು ಹಿಡಿದೆತ್ತಿ ಸಂತವಿಸುತ್ತಾ, ಶಾಂತಗೊಳಿಸುತ್ತಾ “ಹೀಗೆ ಮಾಡಬಾರದಾಗಿತ್ತು!” ಎಂದು ಹೇಳಿದನು.

11011021a ಸ ತು ಕೋಪಂ ಸಮುತ್ಸೃಜ್ಯ ಗತಮನ್ಯುರ್ಮಹಾಮನಾಃ|

11011021c ಹಾ ಹಾ ಭೀಮೇತಿ ಚುಕ್ರೋಶ ಭೂಯಃ ಶೋಕಸಮನ್ವಿತಃ||

ಮಹಾಮನಸ್ವಿ ಧೃತರಾಷ್ಟ್ರನು ಕೋಪವನ್ನು ತೊರೆದು ಸಿಟ್ಟಿಲ್ಲದವನಾಗಿ “ಅಯ್ಯೋ ಭೀಮ!” ಎಂದು ಪುನಃ ಶೋಕಸಮನ್ವಿತನಾಗಿ ಕೂಗಿದನು.

11011022a ತಂ ವಿದಿತ್ವಾ ಗತಕ್ರೋಧಂ ಭೀಮಸೇನವಧಾರ್ದಿತಮ್|

11011022c ವಾಸುದೇವೋ ವರಃ ಪುಂಸಾಮಿದಂ ವಚನಮಬ್ರವೀತ್||

ಭೀಮಸೇನನನ್ನು ಕೊಂದೆನೆಂಬ ಕಾರಣದಿಂದ ರಾಜನು ಸಂಕಟಪಡುತ್ತಿರುವುದನ್ನೂ ಮತ್ತು ಅವನ ಕ್ರೋಧವು ಹೊರಟುಹೋದುದನ್ನೂ ನೋಡಿದ ಪುರುಷಶ್ರೇಷ್ಠ ವಾಸುದೇವನು ಇಂತೆಂದನು:

11011023a ಮಾ ಶುಚೋ ಧೃತರಾಷ್ಟ್ರ ತ್ವಂ ನೈಷ ಭೀಮಸ್ತ್ವಯಾ ಹತಃ|

11011023c ಆಯಸೀ ಪ್ರತಿಮಾ ಹ್ಯೇಷಾ ತ್ವಯಾ ರಾಜನ್ನಿಪಾತಿತಾ||

“ರಾಜನ್! ಧೃತರಾಷ್ಟ್ರ! ಶೋಕಿಸದಿರು! ನೀನು ಭೀಮನನ್ನು ಕೊಲ್ಲಲಿಲ್ಲ! ನೀನು ಕೆಳಗುರುಳಿಸಿದುದು ಒಂದು ಲೋಹದ ಪ್ರತಿಮೆ!

11011024a ತ್ವಾಂ ಕ್ರೋಧವಶಮಾಪನ್ನಂ ವಿದಿತ್ವಾ ಭರತರ್ಷಭ|

11011024c ಮಯಾಪಕೃಷ್ಟಃ ಕೌಂತೇಯೋ ಮೃತ್ಯೋರ್ದಂಷ್ಟ್ರಾಂತರಂ ಗತಃ||

ಭರತರ್ಷಭ! ನೀನು ಕ್ರೋಧವಶನಾಗಿದ್ದೀಯೆ ಎಂದು ತಿಳಿದು ನಾನು ಮೃತ್ಯುವಿನ ದವಡೆಗಳ ಮಧ್ಯೆ ಹೋಗುತ್ತಿದ್ದ ಕೌಂತೇಯ ಭೀಮನನ್ನು ಹಿಂದಕ್ಕೆಳೆದುಕೊಂಡೆನು.

11011025a ನ ಹಿ ತೇ ರಾಜಶಾರ್ದೂಲ ಬಲೇ ತುಲ್ಯೋಽಸ್ತಿ ಕಶ್ಚನ|

11011025c ಕಃ ಸಹೇತ ಮಹಾಬಾಹೋ ಬಾಹ್ವೋರ್ನಿಗ್ರಹಣಂ ನರಃ||

ರಾಜಶಾರ್ದೂಲ! ಮಹಾಬಾಹೋ! ಬಲದಲ್ಲಿ ನಿನ್ನ ಸಮಾನರು ಯಾರೂ ಇಲ್ಲ. ನಿನ್ನ ಬಾಹುಬಂಧನವನ್ನು ಯಾರು ತಾನೇ ಸಹಿಸಿಕೊಳ್ಳಬಲ್ಲರು?

11011026a ಯಥಾಂತಕಮನುಪ್ರಾಪ್ಯ ಜೀವನ್ಕಶ್ಚಿನ್ನ ಮುಚ್ಯತೇ|

11011026c ಏವಂ ಬಾಹ್ವಂತರಂ ಪ್ರಾಪ್ಯ ತವ ಜೀವೇನ್ನ ಕಶ್ಚನ||

ಯಮನ ಬಳಿಹೋದವನು ಎಂದೂ ಜೀವಂತ ಬಿಡುಗಡೆಹೊಂದದಂತೆ ನಿನ್ನ ಬಾಹುಗಳ ಮಧ್ಯೆ ಸಿಲುಕಿದವರು ಯಾರೂ ಜೀವಿತರಾಗಿರುವುದಿಲ್ಲ.

11011027a ತಸ್ಮಾತ್ಪುತ್ರೇಣ ಯಾ ಸಾ ತೇ ಪ್ರತಿಮಾ ಕಾರಿತಾಯಸೀ|

11011027c ಭೀಮಸ್ಯ ಸೇಯಂ ಕೌರವ್ಯ ತವೈವೋಪಹೃತಾ ಮಯಾ||

ಕೌರವ್ಯ! ಆದುದರಿಂದ ಭೀಮಸೇನನೊಡನೆ ಯುದ್ಧದ ಅಭ್ಯಾಸಕ್ಕಾಗಿ ನಿನ್ನ ಪುತ್ರನು ಮಾಡಿಸಿಟ್ಟುಕೊಂಡಿದ್ದ ಉಕ್ಕಿನ ಪ್ರತಿಮೆಯನ್ನು ನಾನು ಅಪಹರಿಸಿದ್ದೆ.

11011028a ಪುತ್ರಶೋಕಾಭಿಸಂತಾಪಾದ್ಧರ್ಮಾದಪಹೃತಂ ಮನಃ|

11011028c ತವ ರಾಜೇಂದ್ರ ತೇನ ತ್ವಂ ಭೀಮಸೇನಂ ಜಿಘಾಂಸಸಿ||

ರಾಜೇಂದ್ರ! ಪುತ್ರಶೋಕದಿಂದ ಸಂತಪ್ತನಾದ ನಿನ್ನ ಮನಸ್ಸು ಧರ್ಮದಿಂದ ವಿಚಲಿತಗೊಂಡಿದೆ. ಆದುದರಿಂದಲೇ ನೀನು ಭೀಮಸೇನನನ್ನು ಕೊಲ್ಲಲು ಬಯಸಿದೆ.

11011029a ನ ಚ ತೇ ತತ್ ಕ್ಷಮಂ ರಾಜನ್ ಹನ್ಯಾಸ್ತ್ವಂ ಯದ್ವೃಕೋದರಮ್|

11011029c ನ ಹಿ ಪುತ್ರಾ ಮಹಾರಾಜ ಜೀವೇಯುಸ್ತೇ ಕಥಂ ಚನ||

ರಾಜನ್! ನಿನ್ನಂಥವನಿಗೆ ಅದು ಸರಿಯೆನಿಸುವುದಿಲ್ಲ! ಒಂದು ವೇಳೆ ನೀನು ವೃಕೋದರನನ್ನು ಕೊಂದಿದ್ದರೂ ನಿನ್ನ ಪುತ್ರರು ಯಾವುದೇ ಕಾರಣದಿಂದಲೂ ಜೀವಂತರಾಗಿ ಹಿಂದೆ ಬರುತ್ತಿರಲಿಲ್ಲ!

11011030a ತಸ್ಮಾದ್ಯತ್ಕೃತಮಸ್ಮಾಭಿರ್ಮನ್ಯಮಾನೈಃ ಕ್ಷಮಂ ಪ್ರತಿ|

11011030c ಅನುಮನ್ಯಸ್ವ ತತ್ಸರ್ವಂ ಮಾ ಚ ಶೋಕೇ ಮನಃ ಕೃಥಾಃ||

ಆದುದರಿಂದ ಶಾಂತಿಯ ಸಲುವಾಗಿ ನಾವು ಮಾಡಿದುದೆಲ್ಲಕ್ಕೂ ನೀನು ಅನುಮತಿನೀಡು. ವೃಥಾ ನಿನ್ನ ಮನಸ್ಸನ್ನು ಶೋಕದಲ್ಲಿ ತೊಡಗಿಸಬೇಡ!””

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಆಯಸಭೀಮಭಂಗೇ ಏಕಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಆಯಸಭೀಮಭಂಗ ಎನ್ನುವ ಹನ್ನೊಂದನೇ ಅಧ್ಯಾಯವು.

Comments are closed.