Stri Parva: Chapter 17

ಸ್ತ್ರೀ ಪರ್ವ

೧೭

ರಣರಂಗದಲ್ಲಿ ಹತನಾಗಿ ಬಿದ್ದಿದ್ದ ದುರ್ಯೋಧನನ್ನು ನೋಡಿ ಗಾಂಧಾರಿಯು ಕೃಷ್ಣನಿಗೆ ಹೇಳಿಕೊಳ್ಳುತ್ತಾ ರೋದಿಸಿದುದು (೧-೩೦).

Image result for dhritarashtra embraces bhima11017001 ವೈಶಂಪಾಯನ ಉವಾಚ

11017001a ತತೋ ದುರ್ಯೋಧನಂ ದೃಷ್ಟ್ವಾ ಗಾಂಧಾರೀ ಶೋಕಕರ್ಶಿತಾ|

11017001c ಸಹಸಾ ನ್ಯಪತದ್ಭೂಮೌ ಚಿನ್ನೇವ ಕದಲೀ ವನೇ||

ವೈಶಂಪಾಯನನು ಹೇಳಿದನು: “ದುರ್ಯೋಧನನನ್ನು ನೋಡಿ ಶೋಕಕರ್ಶಿತಳಾದ ಗಾಂಧಾರಿಯು ವನದಲ್ಲಿ ಕಡಿದುಬಿದ್ದ ಬಾಳೆಯ ಮರದಂತೆ ದೊಪ್ಪನೆ ಭೂಮಿಯ ಮೇಲೆ ಬಿದ್ದಳು.

11017002a ಸಾ ತು ಲಬ್ಧ್ವಾ ಪುನಃ ಸಂಜ್ಞಾಂ ವಿಕ್ರುಶ್ಯ ಚ ಪುನಃ ಪುನಃ|

11017002c ದುರ್ಯೋಧನಮಭಿಪ್ರೇಕ್ಷ್ಯ ಶಯಾನಂ ರುಧಿರೋಕ್ಷಿತಮ್||

11017003a ಪರಿಷ್ವಜ್ಯ ಚ ಗಾಂಧಾರೀ ಕೃಪಣಂ ಪರ್ಯದೇವಯತ್|

ಪುನಃ ಎಚ್ಚರಗೊಂಡು ರಕ್ತದಿಂದ ತೋಯ್ದುಹೋಗಿ ಮಲಗಿದ್ದ ದುರ್ಯೋಧನನನ್ನು ನೋಡಿ ಪುನಃ ಪುನಃ ಗಟ್ಟಿಯಾಗಿ ಅಳುತ್ತಾ ದೀನ ಗಾಂಧಾರಿಯು ಅವನನ್ನು ಆಲಂಗಿಸಿ ದೈನ್ಯದಿಂದ ಶೋಕಿಸಿದಳು.

11017003c ಹಾ ಹಾ ಪುತ್ರೇತಿ ಶೋಕಾರ್ತಾ ವಿಲಲಾಪಾಕುಲೇಂದ್ರಿಯಾ||

11017004a ಸುಗೂಢಜತ್ರು ವಿಪುಲಂ ಹಾರನಿಷ್ಕನಿಷೇವಿತಮ್|

11017004c ವಾರಿಣಾ ನೇತ್ರಜೇನೋರಃ ಸಿಂಚಂತೀ ಶೋಕತಾಪಿತಾ|

11017004e ಸಮೀಪಸ್ಥಂ ಹೃಷೀಕೇಶಮಿದಂ ವಚನಮಬ್ರವೀತ್||

“ಹಾ ಹಾ ಪುತ್ರ!” ಎಂದು ಕೂಗಿಕೊಳ್ಳುತ್ತಾ ಶೋಕಾರ್ತಳಾಗಿ ಇಂದ್ರಿಯಗಳು ವ್ಯಾಕುಲವಾಗಿದ್ದ ಅವಳು ತನ್ನ ಕಣ್ಣೀರಿನಿಂದ ವಿಶಾಲವೂ ದಷ್ಟಪುಷ್ಟವೂ ಚಿನ್ನದ ಹಾರದಿಂದ ಶುಶೋಭಿತವೂ ಆಗಿದ್ದ ದುರ್ಯೋಧನನ ವಕ್ಷಸ್ಥಳವನ್ನು ನೆನೆಯಿಸುತ್ತಾ ಸಮೀಪದಲ್ಲಿದ್ದ ಹೃಷೀಕೇಶನಿಗೆ ಈ ಮಾತನ್ನಾಡಿದಳು:

11017005a ಉಪಸ್ಥಿತೇಽಸ್ಮಿನ್ಸಂಗ್ರಾಮೇ ಜ್ಞಾತೀನಾಂ ಸಂಕ್ಷಯೇ ವಿಭೋ|

11017005c ಮಾಮಯಂ ಪ್ರಾಹ ವಾರ್ಷ್ಣೇಯ ಪ್ರಾಂಜಲಿರ್ನೃಪಸತ್ತಮಃ|

11017005e ಅಸ್ಮಿನ್ ಜ್ಞಾತಿಸಮುದ್ಧರ್ಷೇ ಜಯಮಂಬಾ ಬ್ರವೀತು ಮೇ||

“ವಿಭೋ! ವಾರ್ಷ್ಣೇಯ! ಜ್ಞಾತಿಗಳ ವಿನಾಶಕಾರೀ ಈ ಸಂಗ್ರಾಮವು ಸನ್ನಿಹಿತವಾಗಿದ್ದಾಗ ಈ ನೃಪಸತ್ತಮನು ಕೈಮುಗಿದು “ಅಮ್ಮಾ! ಜ್ಞಾತಿಗಳ ನಡುವೆ ನಡೆಯುವ ಈ ಯುದ್ಧದಲ್ಲಿ ನನಗೆ ಜಯವಾಗಲೆಂದು ಹೇಳು!” ಎಂದು ನನ್ನಲ್ಲಿ ಕೇಳಿಕೊಂಡಿದ್ದನು!

11017006a ಇತ್ಯುಕ್ತೇ ಜಾನತೀ ಸರ್ವಮಹಂ ಸ್ವಂ ವ್ಯಸನಾಗಮಮ್|

11017006c ಅಬ್ರುವಂ ಪುರುಷವ್ಯಾಘ್ರ ಯತೋ ಧರ್ಮಸ್ತತೋ ಜಯಃ||

ಮುಂದೆ ನನಗೇ ಬರಲಿರುವ ದುಃಖವನ್ನು ಅರಿತುಕೊಂಡಿದ್ದ ನಾನು “ಪುರುಷವ್ಯಾಘ್ರ! ಧರ್ಮವಿರುವಲ್ಲಿಯೇ ಜಯವೂ ಇರುತ್ತದೆ!” ಎಂದು ಹೇಳಿದ್ದೆ.

11017007a ಯಥಾ ನ ಯುಧ್ಯಮಾನಸ್ತ್ವಂ ಸಂಪ್ರಮುಹ್ಯಸಿ ಪುತ್ರಕ|

11017007c ಧ್ರುವಂ ಶಸ್ತ್ರಜಿತಾಽಲ್ಲೋಕಾನ್ಪ್ರಾಪ್ತಾಸ್ಯಮರವದ್ವಿಭೋ||

11017008a ಇತ್ಯೇವಮಬ್ರುವಂ ಪೂರ್ವಂ ನೈನಂ ಶೋಚಾಮಿ ವೈ ಪ್ರಭೋ|

11017008c ಧೃತರಾಷ್ಟ್ರಂ ತು ಶೋಚಾಮಿ ಕೃಪಣಂ ಹತಬಾಂಧವಮ್||

“ಮಗನೇ! ಯುದ್ಧಮಾಡುತ್ತಿರುವಾಗ ಯಾವಾಗಲೂ ನೀನು ಮೋಹಗೊಳ್ಳುವುದಿಲ್ಲ. ನಿಶ್ಚಯವಾಗಿಯೂ ನೀನು ಶಸ್ತ್ರಗಳಿಂದ ಅಮರರಂತೆ ಉತ್ತಮ ಲೋಕಗಳನ್ನು ಪಡೆಯುತ್ತೀಯೆ!” ಎಂದು ಆಗಲೇ ನಾನು ಅವನಿಗೆ ಹೇಳಿದ್ದೆ. ವಿಭೋ! ಆದುದರಿಂದ ನಾನು ಅಷ್ಟೊಂದು ಶೋಕಿಸುತ್ತಿಲ್ಲ. ಆದರೆ ಬಾಂಧವರನ್ನು ಕಳೆದುಕೊಂಡು ದೀನನಾಗಿರುವ ಧೃತರಾಷ್ಟ್ರನ ಕುರಿತು ಶೋಕಿಸುತ್ತಿದ್ದೇನೆ.

11017009a ಅಮರ್ಷಣಂ ಯುಧಾಂ ಶ್ರೇಷ್ಠಂ ಕೃತಾಸ್ತ್ರಂ ಯುದ್ಧದುರ್ಮದಮ್|

11017009c ಶಯಾನಂ ವೀರಶಯನೇ ಪಶ್ಯ ಮಾಧವ ಮೇ ಸುತಮ್||

ಮಾಧವ! ವೀರ ಶಯನದಲ್ಲಿ ಮಲಗಿರುವ ಅಸಹನಶೀಲ, ಯೋದ್ಧಶ್ರೇಷ್ಠ, ಅಸ್ತ್ರವಿದ್ಯಾಪಾರಂಗತ, ಯುದ್ಧದುರ್ಮದ ನನ್ನ ಮಗನನ್ನು ನೋಡು!

11017010a ಯೋಽಯಂ ಮೂರ್ಧಾವಸಿಕ್ತಾನಾಮಗ್ರೇ ಯಾತಿ ಪರಂತಪಃ|

11017010c ಸೋಽಯಂ ಪಾಂಸುಷು ಶೇತೇಽದ್ಯ ಪಶ್ಯ ಕಾಲಸ್ಯ ಪರ್ಯಯಮ್||

ಮೂರ್ಧಾಭಿಷಿಕ್ತ ರಾಜರ ಮುಂದೆ ಮುಂದೆಯೇ ಹೋಗುತ್ತಿದ್ದ ಈ ಪರಂತಪನು ಇಂದು ಕೆಸರಿನಲ್ಲಿ ಮಲಗಿದ್ದಾನೆಂದರೆ ಕಾಲದ ವಿಪರ್ಯಾಸವನ್ನು ನೋಡು!

11017011a ಧ್ರುವಂ ದುರ್ಯೋಧನೋ ವೀರೋ ಗತಿಂ ನಸುಲಭಾಂ ಗತಃ|

11017011c ತಥಾ ಹ್ಯಭಿಮುಖಃ ಶೇತೇ ಶಯನೇ ವೀರಸೇವಿತೇ||

ವೀರರಿಗೆ ತಕ್ಕುದಾದ ಭೂಶಯ್ಯೆಯಲ್ಲಿ ಅಂಗಾತನಾಗಿಯೇ ಮಲಗಿರುವ ಈ ದುರ್ಯೋಧನನು ನಿಶ್ಚಯವಾಗಿಯೂ ಪಡೆಯಲು ಸುಲಭವಲ್ಲದ ವೀರಗತಿಯನ್ನೇ ಪಡೆದಿರುತ್ತಾನೆ.

11017012a ಯಂ ಪುರಾ ಪರ್ಯುಪಾಸೀನಾ ರಮಯಂತಿ ಮಹೀಕ್ಷಿತಃ|

11017012c ಮಹೀತಲಸ್ಥಂ ನಿಹತಂ ಗೃಧ್ರಾಸ್ತಂ ಪರ್ಯುಪಾಸತೇ||

ಹಿಂದೆ ಸೋಪಾನದ ಮೇಲೆ ಸ್ತ್ರೀಯರು ರಮಿಸುತ್ತಿದ್ದ ಮಹೀಕ್ಷಿತನು ಹತನಾಗಿ ನೆಲದ ಮೇಲೆ ಮಲಗಿರಲು ಹದ್ದುಗಳು ಅವನ ಸೇವೆ ಮಾಡುತ್ತಿವೆ.

11017013a ಯಂ ಪುರಾ ವ್ಯಜನೈರಗ್ರ್ಯೈರುಪವೀಜಂತಿ ಯೋಷಿತಃ|

11017013c ತಮದ್ಯ ಪಕ್ಷವ್ಯಜನೈರುಪವೀಜಂತಿ ಪಕ್ಷಿಣಃ||

ಹಿಂದೆ ಸ್ತ್ರೀಯರು ಉತ್ತಮ ವ್ಯಜನಗಳಿಂದ ಗಾಳಿಬೀಸುತ್ತಿದ್ದ ಅವನಿಗೆ ಇಂದು ಪಕ್ಷಿಗಳು ತಮ್ಮ ರೆಕ್ಕೆಗಳಿಂದ ಗಾಳಿಬೀಸುತ್ತಿವೆ.

11017014a ಏಷ ಶೇತೇ ಮಹಾಬಾಹುರ್ಬಲವಾನ್ಸತ್ಯವಿಕ್ರಮಃ|

11017014c ಸಿಂಹೇನೇವ ದ್ವಿಪಃ ಸಂಖ್ಯೇ ಭೀಮಸೇನೇನ ಪಾತಿತಃ||

ಯುದ್ಧದಲ್ಲಿ ಸಿಂಹದಿಂದ ಆನೆಯಂತೆ ಭೀಮಸೇನನಿಂದ ಕೆಳಗುರುಳಿಸಲ್ಪಟ್ಟ ಮಹಾಬಾಹು ಬಲವಾನ್ ಸತ್ಯವಿಕ್ರಮಿಯು ಇಲ್ಲಿ ಮಲಗಿದ್ದಾನೆ.

11017015a ಪಶ್ಯ ದುರ್ಯೋಧನಂ ಕೃಷ್ಣ ಶಯಾನಂ ರುಧಿರೋಕ್ಷಿತಮ್|

11017015c ನಿಹತಂ ಭೀಮಸೇನೇನ ಗದಾಮುದ್ಯಮ್ಯ ಭಾರತ||

ಕೃಷ್ಣ! ಭಾರತ ಭೀಮಸೇನನಿಂದ ಹತನಾಗಿ ರಕ್ತಸಿಕ್ತನಾಗಿ ಗದೆಯನ್ನು ಹಿಡಿದು ಮಲಗಿರುವ ದುರ್ಯೋಧನನನ್ನು ನೋಡು!

11017016a ಅಕ್ಷೌಹಿಣೀರ್ಮಹಾಬಾಹುರ್ದಶ ಚೈಕಾಂ ಚ ಕೇಶವ|

11017016c ಅನಯದ್ಯಃ ಪುರಾ ಸಂಖ್ಯೇ ಸೋಽನಯಾನ್ನಿಧನಂ ಗತಃ||

ಕೇಶವ! ಹಿಂದೆ ಹನ್ನೊಂದು ಅಕ್ಷೋಹಿಣೀ ಸೇನೆಯನ್ನು ಒಂದುಗೂಡಿಸಿದ್ದ ಅವನು ಯುದ್ಧದಲ್ಲಿ ಅನ್ಯಾಯರೀತಿಯಲ್ಲಿ ನಿಧನಹೊಂದಿದ್ದಾನೆ.

11017017a ಏಷ ದುರ್ಯೋಧನಃ ಶೇತೇ ಮಹೇಷ್ವಾಸೋ ಮಹಾರಥಃ|

11017017c ಶಾರ್ದೂಲ ಇವ ಸಿಂಹೇನ ಭೀಮಸೇನೇನ ಪಾತಿತಃ||

ಸಿಂಹದಿಂದ ಕೆಳಗುರುಳಿಸಲ್ಪಟ್ಟ ಶಾರ್ದೂಲದಂತೆ ಭೀಮಸೇನನಿಂದ ಪಾತಿತನಾಗಿ ಇಗೋ ಮಹಾರಥ ಮಹೇಷ್ವಾಸ ದುರ್ಯೋಧನನು ಮಲಗಿದ್ದಾನೆ.

11017018a ವಿದುರಂ ಹ್ಯವಮನ್ಯೈಷ ಪಿತರಂ ಚೈವ ಮಂದಭಾಕ್|

11017018c ಬಾಲೋ ವೃದ್ಧಾವಮಾನೇನ ಮಂದೋ ಮೃತ್ಯುವಶಂ ಗತಃ||

ವಿದುರನನ್ನೂ, ತನ್ನ ತಂದೆಯನ್ನೂ ಅವಮಾನಿಸಿ ಆ ಮಂದಭಾಗ್ಯ, ಬಾಲಬುದ್ಧಿಯ ಮೂಢನು ವೃದ್ಧರನ್ನು ಅವಮಾನಿಸಿದುದರಿಂದ ಮೃತ್ಯುವಿನ ವಶನಾದನು.

11017019a ನಿಃಸಪತ್ನಾ ಮಹೀ ಯಸ್ಯ ತ್ರಯೋದಶ ಸಮಾಃ ಸ್ಥಿತಾ|

11017019c ಸ ಶೇತೇ ನಿಹತೋ ಭೂಮೌ ಪುತ್ರೋ ಮೇ ಪೃಥಿವೀಪತಿಃ||

ಸ್ಪರ್ಧೆಯೇ ಇಲ್ಲದೇ ಹದಿಮೂರು ವರ್ಷಗಳು ಈ ಭೂಮಂಡಲವು ಯಾರ ಅಧೀನದಲ್ಲಿತ್ತೋ ಆ ನನ್ನ ಪುತ್ರ ಪೃಥಿವೀಪತಿಯು ಹತನಾಗಿ ಭೂಮಿಯ ಮೇಲೆ ಮಲಗಿದ್ದಾನೆ!

11017020a ಅಪಶ್ಯಂ ಕೃಷ್ಣ ಪೃಥಿವೀಂ ಧಾರ್ತರಾಷ್ಟ್ರಾನುಶಾಸನಾತ್|

11017020c ಪೂರ್ಣಾಂ ಹಸ್ತಿಗವಾಶ್ವಸ್ಯ ವಾರ್ಷ್ಣೇಯ ನ ತು ತಚ್ಚಿರಮ್||

ಕೃಷ್ಣ! ವಾರ್ಷ್ಣೇಯ! ಈ ಧಾರ್ತರಾಷ್ಟ್ರನ ಅನುಶಾಸನದಲ್ಲಿ ಪೃಥ್ವಿಯು ಆನೆ-ಗೋವು-ಕುದುರೆಗಳಿಂದ ಸಮೃದ್ಧವಾಗಿದ್ದುದನ್ನು ನಾನು ನೋಡಿದ್ದೆನು.

11017021a ತಾಮೇವಾದ್ಯ ಮಹಾಬಾಹೋ ಪಶ್ಯಾಮ್ಯನ್ಯಾನುಶಾಸನಾತ್|

11017021c ಹೀನಾಂ ಹಸ್ತಿಗವಾಶ್ವೇನ ಕಿಂ ನು ಜೀವಾಮಿ ಮಾಧವ||

ಮಹಾಬಾಹೋ! ಇಂದು ಅನ್ಯರ ಅನುಶಾಸನದಡಿಯಲ್ಲಿರುವ ಈ ಭೂಮಿಯು ಆನೆ-ಕುದುರೆ-ಗೋವುಗಳಿಂದ ವಿಹೀನವಾಗಿರುವುದನ್ನು ನಾನು ನೋಡುತ್ತಿದ್ದೇನೆ! ನಾನೇಕೆ ಜೀವಿಸಿರಬೇಕು ಮಾಧವ!

11017022a ಇದಂ ಕೃಚ್ಚ್ರತರಂ ಪಶ್ಯ ಪುತ್ರಸ್ಯಾಪಿ ವಧಾನ್ಮಮ|

11017022c ಯದಿಮಾಃ ಪರ್ಯುಪಾಸಂತೇ ಹತಾನ್ ಶೂರಾನ್ರಣೇ ಸ್ತ್ರಿಯಃ||

ನನ್ನ ಪುತ್ರನ ವಧೆಗಿಂತಲೂ ಕಷ್ಟಕರವಾದುದನ್ನು ನೋಡು! ರಣದಲ್ಲಿ ಹತರಾದ ಶೂರರನ್ನು ಈ ಸ್ತ್ರೀಯರು ಉಪಾಸಿಸುತ್ತಿದ್ದಾರೆ!

11017023a ಪ್ರಕೀರ್ಣಕೇಶಾಂ ಸುಶ್ರೋಣೀಂ ದುರ್ಯೋಧನಭುಜಾಂಕಗಾಮ್|

11017023c ರುಕ್ಮವೇದೀನಿಭಾಂ ಪಶ್ಯ ಕೃಷ್ಣ ಲಕ್ಷ್ಮಣಮಾತರಮ್||

ಕೃಷ್ಣ! ಚಿನ್ನದ ವೇದಿಯಂತೆ ಬೆಳಗುತ್ತಿರುವ ಸುಶ್ರೋಣೀ ಲಕ್ಷ್ಮಣನ ತಾಯಿಯು ಕೂದಲುಗಳನ್ನು ಕೆದರಿಕೊಂಡು ದುರ್ಯೋಧನನ ತೊಡೆಯ ಸಮೀಪದಲ್ಲಿ ಕುಳಿತಿರುವುದನ್ನು ನೋಡು!

11017024a ನೂನಮೇಷಾ ಪುರಾ ಬಾಲಾ ಜೀವಮಾನೇ ಮಹಾಭುಜೇ|

11017024c ಭುಜಾವಾಶ್ರಿತ್ಯ ರಮತೇ ಸುಭುಜಸ್ಯ ಮನಸ್ವಿನೀ||

ಹಿಂದೆ ಆ ಮಹಾಭುಜನು ಜೀವಿಸಿರುವಾಗ ಈ ಮನಸ್ವಿನೀ ಬಾಲೆಯು ಅವನ ಸುಂದರ ಬಾಹುಗಳನ್ನಾಶ್ರಯಿಸಿ ರಮಿಸುತ್ತಿದ್ದಳಲ್ಲವೇ?

11017025a ಕಥಂ ತು ಶತಧಾ ನೇದಂ ಹೃದಯಂ ಮಮ ದೀರ್ಯತೇ|

11017025c ಪಶ್ಯಂತ್ಯಾ ನಿಹತಂ ಪುತ್ರಂ ಪುತ್ರೇಣ ಸಹಿತಂ ರಣೇ||

ರಣದಲ್ಲಿ ಪುತ್ರನೊಂದಿಗೆ ಹತನಾಗಿರುವ ಈ ಪುತ್ರನನ್ನು ನೋಡಿಯೂ ಹೇಗೆ ನನ್ನ ಈ ಹೃದಯವು ನೂರು ಚೂರಾಗಿ ಒಡೆದುಹೋಗುತ್ತಿಲ್ಲ?

11017026a ಪುತ್ರಂ ರುಧಿರಸಂಸಿಕ್ತಮುಪಜಿಘ್ರತ್ಯನಿಂದಿತಾ|

11017026c ದುರ್ಯೋಧನಂ ತು ವಾಮೋರೂಃ ಪಾಣಿನಾ ಪರಿಮಾರ್ಜತಿ||

ಆ ವಾಮೋರುವು ರಕ್ತದಿಂದ ತೋಯ್ದುಹೋಗಿರುವ ಮಗ ಲಕ್ಷ್ಮಣನ ಮುಖವನ್ನು ಆಘ್ರಾಣಿಸುತ್ತಿದ್ದಾಳೆ ಮತ್ತು ದುರ್ಯೋಧನನನ್ನು ಕೈಯಿಂದ ಸವರುತ್ತಿದ್ದಾಳೆ.

11017027a ಕಿಂ ನು ಶೋಚತಿ ಭರ್ತಾರಂ ಪುತ್ರಂ ಚೈಷಾ ಮನಸ್ವಿನೀ|

11017027c ತಥಾ ಹ್ಯವಸ್ಥಿತಾ ಭಾತಿ ಪುತ್ರಂ ಚಾಪ್ಯಭಿವೀಕ್ಷ್ಯ ಸಾ||

ಈ ಮನಸ್ವಿನಿಯು ಯಾರಿಗಾಗಿ ಶೋಕಿಸುತ್ತಿದ್ದಾಳೆ? ಪುತ್ರನಿಗಾಗಿಯೋ ಅಥವಾ ಪತಿಗಾಗಿಯೋ? ಅವಳು ಮಗನನ್ನು ನೋಡುತ್ತಿರುವ ರೀತಿಯಿಂದ ಅವಳು ಈ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಳೆಂದು ನಮಗನ್ನಿಸುತ್ತದೆ.

11017028a ಸ್ವಶಿರಃ ಪಂಚಶಾಖಾಭ್ಯಾಮಭಿಹತ್ಯಾಯತೇಕ್ಷಣಾ|

11017028c ಪತತ್ಯುರಸಿ ವೀರಸ್ಯ ಕುರುರಾಜಸ್ಯ ಮಾಧವ||

ಮಾಧವ! ಆ ಆಯತೇಕ್ಷಣಿಯು ಎರಡೂ ಕೈಗಳಿಂದ ತನ್ನ ತಲೆಯನ್ನು ಚಚ್ಚಿಕೊಳ್ಳುತ್ತಿದ್ದಾಳೆ ಮತ್ತು ವೀರ ಪತಿ ಕುರುರಾಜನ ಎದೆಯಮೇಲೆ ಬೀಳುತ್ತಿದ್ದಾಳೆ!

11017029a ಪುಂಡರೀಕನಿಭಾ ಭಾತಿ ಪುಂಡರೀಕಾಂತರಪ್ರಭಾ|

11017029c ಮುಖಂ ವಿಮೃಜ್ಯ ಪುತ್ರಸ್ಯ ಭರ್ತುಶ್ಚೈವ ತಪಸ್ವಿನೀ||

ಕಮಲದ ಪ್ರಭೆಯುಳ್ಳ ಆ ತಪಸ್ವಿನಿಯು ಒಮ್ಮೆ ಮಗನ ಮತ್ತು ಇನ್ನೊಮ್ಮೆ ಪತಿಯ ಮುಖವನ್ನು ಒರೆಸುತ್ತಾ ಕಾಂತಿಹೀನಳಾಗಿ ತೋರುತ್ತಿದ್ದಾಳೆ.

11017030a ಯದಿ ಚಾಪ್ಯಾಗಮಾಃ ಸಂತಿ ಯದಿ ವಾ ಶ್ರುತಯಸ್ತಥಾ|

11017030c ಧ್ರುವಂ ಲೋಕಾನವಾಪ್ತೋಽಯಂ ನೃಪೋ ಬಾಹುಬಲಾರ್ಜಿತಾನ್||

ಆಗಮಗಳು ಮತ್ತು ಶ್ರುತಿಗಳು ಸತ್ಯವನ್ನೇ ಪ್ರತಿಪಾದಿಸುವುದಾದರೆ ನಿಶ್ಚಯವಾಗಿ ನೃಪನು ಬಾಹುಬಲದಿಂದ ಆರ್ಜಿಸಿದ ಪುಣ್ಯ ಲೋಕಗಳನ್ನೇ ಸೇರಿರಬಹುದು!”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ದುರ್ಯೋಧನದರ್ಶನೇ ಸಪ್ತದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ದುರ್ಯೋಧನದರ್ಶನ ಎನ್ನುವ ಹದಿನೇಳನೇ ಅಧ್ಯಾಯವು.

Comments are closed.