Shanti Parva: Chapter 96

ಶಾಂತಿ ಪರ್ವ: ರಾಜಧರ್ಮ ಪರ್ವ

೯೬

ವಿಜಿಗೀಷಮಾಣವೃತ್ತ

ವಿಜಯಾಭಿಲಾಶೀ ರಾಜನ ಧಾರ್ಮಿಕ ವ್ಯವಹಾರಗಳು ಮತ್ತು ಯುದ್ಧನೀತಿ (1-21).

12096001 ಯುಧಿಷ್ಠಿರ ಉವಾಚ|

12096001a ಅಥ ಯೋ ವಿಜಿಗೀಷೇತ ಕ್ಷತ್ರಿಯಃ ಕ್ಷತ್ರಿಯಂ ಯುಧಿ|

12096001c ಕಸ್ತಸ್ಯ ಧರ್ಮ್ಯೋ ವಿಜಯ ಏತತ್ ಪೃಷ್ಟೋ ಬ್ರವೀಹಿ ಮೇ||

ಯುಧಿಷ್ಠಿರನು ಹೇಳಿದನು: “ಓರ್ವ ಕ್ಷತ್ರಿಯನು ಇನ್ನೊಬ್ಬ ಕ್ಷತ್ರಿಯನೊಡನೆ ಯುದ್ಧದದಲ್ಲಿ ವಿಜಯಗಳಿಸಲು ಬಯಸಿದರೆ ವಿಜಯಕ್ಕೆ ಅವನು ನಡೆದುಕೊಳ್ಳಬೇಕಾದ ಧರ್ಮವು ಯಾವುದು? ಕೇಳುತ್ತಿರುವ ನನಗೆ ಹೇಳು.”

12096002 ಭೀಷ್ಮ ಉವಾಚ|

12096002a ಸಸಹಾಯೋಽಸಹಾಯೋ ವಾ ರಾಷ್ಟ್ರಮಾಗಮ್ಯ ಭೂಮಿಪಃ|

12096002c ಬ್ರೂಯಾದಹಂ ವೋ ರಾಜೇತಿ ರಕ್ಷಿಷ್ಯಾಮಿ ಚ ವಃ ಸದಾ||

12096003a ಮಮ ಧರ್ಮ್ಯಂ ಬಲಿಂ ದತ್ತ ಕಿಂ ವಾ ಮಾಂ ಪ್ರತಿಪತ್ಸ್ಯಥ|

12096003c ತೇ ಚೇತ್ತಮಾಗತಂ ತತ್ರ ವೃಣುಯುಃ ಕುಶಲಂ ಭವೇತ್||

ಭೀಷ್ಮನು ಹೇಳಿದನು: “ವಿಜಯವನ್ನು ಬಯಸಿದ ರಾಜನು ಸಹಾಯಕರೊಂದಿಗೆ ಅಥವಾ ಸಹಾಯಕರಿಲ್ಲದೇ ಆ ರಾಷ್ಟ್ರಕ್ಕೆ ಹೋಗಿ “ನಾನು ನಿಮ್ಮ ರಾಜ. ನಿಮ್ಮನ್ನು ಸದಾ ರಕ್ಷಿಸುತ್ತೇನೆ. ಧರ್ಮಾನುಸಾರವಾಗಿ ನನಗೆ ತೆರಿಗೆಯನ್ನು ಕೊಡಿ ಅಥವಾ ನನ್ನೊಡನೆ ಯುದ್ಧಮಾಡಿ” ಎಂದು ಹೇಳಬೇಕು. ಆಗಮಿಸಿದ ರಾಜನನ್ನು ಅವರು ಸ್ವೀಕರಿಸಿದರೆ ಎಲ್ಲವೂ ಉಳ್ಳೆಯದೇ ಆಗುತ್ತದೆ.

12096004a ತೇ ಚೇದಕ್ಷತ್ರಿಯಾಃ ಸಂತೋ ವಿರುಧ್ಯೇಯುಃ ಕಥಂ ಚನ|

12096004c ಸರ್ವೋಪಾಯೈರ್ನಿಯಂತವ್ಯಾ ವಿಕರ್ಮಸ್ಥಾ ನರಾಧಿಪ||

ಒಂದು ವೇಳೆ ಅವರು ಕ್ಷತ್ರಿಯರಾಗಿರದೇ ವಿರೋಧಿಸಿದರೆ ಸರ್ವೋಪಾಯಗಳಿಂದ ನರಾಧಿಪನು ಆ ವಿಕರ್ಮಸ್ಥರನ್ನು ನಿಯಂತ್ರಿಸಬೇಕು.

12096005a ಅಶಕ್ತಂ ಕ್ಷತ್ರಿಯಂ ಮತ್ವಾ ಶಸ್ತ್ರಂ ಗೃಹ್ಣಾತ್ಯಥಾಪರಃ|

12096005c ತ್ರಾಣಾಯಾಪ್ಯಸಮರ್ಥಂ ತಂ ಮನ್ಯಮಾನಮತೀವ ಚ||

ಕ್ಷತ್ರಿಯನು ಅಶಕ್ತನೆಂದೂ ತಮ್ಮನ್ನು ರಕ್ಷಿಸಲು ಅಸಮರ್ಥನೆಂದೂ ತಿಳಿದು ಇತರರು ಶಸ್ತ್ರವನ್ನು ಹಿಡಿಯುತ್ತಾರೆ.”

12096006 ಯುಧಿಷ್ಠಿರ ಉವಾಚ|

12096006a ಅಥ ಯಃ ಕ್ಷತ್ರಿಯೋ ರಾಜಾ ಕ್ಷತ್ರಿಯಂ ಪ್ರತ್ಯುಪಾವ್ರಜೇತ್|

12096006c ಕಥಂ ಸ ಪ್ರತಿಯೋದ್ಧವ್ಯಸ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಕ್ಷತ್ರಿಯ ರಾಜನು ಇನ್ನೊಬ್ಬ ಕ್ಷತ್ರಿಯನೊಡನೆ ಯುದ್ಧಮಾಡಬೇಕಾಗಿ ಬಂದಾಗ ಅವನು ಯುದ್ಧವನ್ನು ಹೇಗೆ ಮಾಡಬೇಕು? ಇದರ ಕುರಿತು ನನಗೆ ಹೇಳು.”

12096007 ಭೀಷ್ಮ ಉವಾಚ|

12096007a ನಾಸಂನದ್ಧೋ ನಾಕವಚೋ ಯೋದ್ಧವ್ಯಃ ಕ್ಷತ್ರಿಯೋ ರಣೇ|

12096007c ಏಕ ಏಕೇನ ವಾಚ್ಯಶ್ಚ ವಿಸೃಜಸ್ವ ಕ್ಷಿಪಾಮಿ ಚ||

ಭೀಷ್ಮನು ಹೇಳಿದನು: “ಕವಚವನ್ನು ಧರಿಸಿ ಯುದ್ಧಸನ್ನದ್ಧನಾಗಿರದೇ ಇದ್ದ ಕ್ಷತ್ರಿಯನೊಡನೆ ರಣದಲ್ಲಿ ಯುದ್ಧಮಾಡಬಾರದು. ಪ್ರಯೋಗಿಸುತ್ತೇನೆ ಎಂದು ಪರಸ್ಪರರಲ್ಲಿ ಹೇಳಿಕೊಂಡೇ ಆಯುಧಗಳನ್ನು ಪ್ರಯೋಗಿಸಬೇಕು.

12096008a ಸ ಚೇತ್ಸಂನದ್ಧ ಆಗಚ್ಚೇತ್ಸಂನದ್ಧವ್ಯಂ ತತೋ ಭವೇತ್|

12096008c ಸ ಚೇತ್ಸಸೈನ್ಯ ಆಗಚ್ಚೇತ್ಸಸೈನ್ಯಸ್ತಮಥಾಹ್ವಯೇತ್||

ಅವನೇನಾದರೋ ಸನ್ನದ್ಧನಾಗಿ ಬಂದರೆ ತಾನು ಸನ್ನದ್ಧನಾಗಬೇಕು. ಅವನೇನಾದರೋ ಸೇನೆಯೊಡನೆ ಯುದ್ಧಕ್ಕೆ ಬಂದರೆ ತಾನೂ ಸೇನಾಸಮೇತ ಯುದ್ಧಮಾಡಬೇಕು.

12096009a ಸ ಚೇನ್ನಿಕೃತ್ಯಾ ಯುಧ್ಯೇತ ನಿಕೃತ್ಯಾ ತಂ ಪ್ರಯೋಧಯೇತ್|

12096009c ಅಥ ಚೇದ್ಧರ್ಮತೋ ಯುಧ್ಯೇದ್ಧರ್ಮೇಣೈವ ನಿವಾರಯೇತ್||

ಅವನೇನಾದರೋ ಮೋಸದಿಂದ ಯುದ್ಧಮಾಡತೊಡಗಿದರೆ ತಾನೂ ಮೋಸದಿಂದಲೇ ಯುದ್ಧಮಾಡಬೇಕು. ಅವನು ಧರ್ಮದ ಯುದ್ಧವನ್ನು ಮಾಡುತ್ತಿದ್ದರೆ ತಾನೂ ಧರ್ಮಯುದ್ಧವನ್ನೇ ಮಾಡಿ ಅವನನ್ನು ಎದುರಿಸಬೇಕು.

12096010a ನಾಶ್ವೇನ ರಥಿನಂ ಯಾಯಾದುದಿಯಾದ್ರಥಿನಂ ರಥೀ|

12096010c ವ್ಯಸನೇ ನ ಪ್ರಹರ್ತವ್ಯಂ ನ ಭೀತಾಯ ಜಿತಾಯ ಚ||

ಕುದುರೆಯ ಮೇಲೆ ಕುಳಿತು ರಥದಲ್ಲಿರುವನನ್ನು ಆಕ್ರಮಣಿಸಬಾರದು. ರಥದಲ್ಲಿರುವವನನ್ನು ರಥದಲ್ಲಿರುವವನೇ ಎದುರಿಸಿ ಯುದ್ಧಮಾಡಬೇಕು. ಶತ್ರುವು ಸಂಕಟದಲ್ಲಿರುವಾಗ, ಭಯಪಟ್ಟಿರುವಾಗ ಮತ್ತು ಪರಾಜಿತನಾಗಿರುವಾಗ ಅವನ ಮೇಲೆ ಆಯುಧವನ್ನು ಪ್ರಹರಿಸಬಾರದು.

12096011a ನೇಷುರ್ಲಿಪ್ತೋ ನ ಕರ್ಣೀ ಸ್ಯಾದಸತಾಮೇತದಾಯುಧಮ್|

12096011c ಜಯಾರ್ಥಮೇವ ಯೋದ್ಧವ್ಯಂ ನ ಕ್ರುಧ್ಯೇದಜಿಘಾಂಸತಃ||

ವಿಷಲಿಪ್ತವಾದ ಬಾಣಗಳನ್ನು ಮತ್ತು ಕರ್ಣಿಗಳನ್ನು ಉಪಯೋಗಿಸಬಾರದು. ಇವು ಅಸತ್ಪುರುಷರ ಆಯುಧಗಳು. ಜಯಕ್ಕಾಗಿಯೇ ಯುದ್ಧಮಾಡಬೇಕು. ತನ್ನನ್ನು ಕೊಲ್ಲಲು ಬಂದವನೊಡನೆ ಕ್ರೋಧದಿಂದ ಯುದ್ಧಮಾಡಬಾರದು.

12096012a ಸಾಧೂನಾಂ ತು ಮಿಥೋಭೇದಾತ್ಸಾಧುಶ್ಚೇದ್ವ್ಯಸನೀ ಭವೇತ್|

12096012c ಸವ್ರಣೋ ನಾಭಿಹಂತವ್ಯೋ ನಾನಪತ್ಯಃ ಕಥಂ ಚನ||

ಇಬ್ಬರು ಸತ್ಪುರುಷರು ಯುದ್ಧಮಾಡುತ್ತಿದ್ದಾಗ ಒಬ್ಬನು ಸಂಕಟಕ್ಕೊಳಗಾದರೆ ಇನ್ನೊಬ್ಬನು ಅವನನ್ನು ಸಂಹರಿಸಬಾರದು. ಬಲಹೀನನನ್ನೂ ಮಕ್ಕಳಿಲ್ಲದವನನ್ನೂ ಯಾವುದೇ ಕಾರಣದಿಂದಲೂ ಸಂಹರಿಸಬಾರದು.

12096013a ಭಗ್ನಶಸ್ತ್ರೋ ವಿಪನ್ನಾಶ್ವಶ್ಚಿನ್ನಜ್ಯೋ ಹತವಾಹನಃ|

12096013c ಚಿಕಿತ್ಸ್ಯಃ ಸ್ಯಾತ್ಸ್ವವಿಷಯೇ ಪ್ರಾಪ್ಯೋ ವಾ ಸ್ವಗೃಹಾನ್ಭವೇತ್|

12096013e ನಿರ್ವ್ರಣೋಽಪಿ ಚ ಮೋಕ್ತವ್ಯ ಏಷ ಧರ್ಮಃ ಸನಾತನಃ||

ಶಸ್ತ್ರವು ಭಗ್ನವಾಗಿರುವ, ಆಪತ್ತಿನಲ್ಲಿರುವ, ಧನುಸ್ಸಿನ ಶಿಂಜಿನಿಯು ತುಂಡಾಗಿರುವ ಮತ್ತು ವಾಹನಗಳು ಹತವಾಗಿರುವವನ ಮೇಲೆ ಶಸ್ತ್ರಪ್ರಯೋಗ ಮಾಡಬಾರದು. ಗಾಯಗೊಂಡವನಿಗೆ ತನ್ನ ರಾಜ್ಯದಲ್ಲಿಯೇ ಚಿಕಿತ್ಸೆಯನ್ನು ಕೊಡಿಸಬೇಕು ಅಥವಾ ಅವನನ್ನು ಅವನ ಮನೆಗೆ ಕಳುಹಿಸಬೇಕು. ಗಾಯಗಳು ಮಾಸಿದ ನಂತರ ಅವನನ್ನು ಬಿಟ್ಟುಬಿಡಬೇಕು. ಇದೇ ಸನಾತನ ಧರ್ಮವು.

12096014a ತಸ್ಮಾದ್ಧರ್ಮೇಣ ಯೋದ್ಧವ್ಯಂ ಮನುಃ ಸ್ವಾಯಂಭುವೋಽಬ್ರವೀತ್|

12096014c ಸತ್ಸು ನಿತ್ಯಂ ಸತಾಂ ಧರ್ಮಸ್ತಮಾಸ್ಥಾಯ ನ ನಾಶಯೇತ್||

ಆದುದರಿಂದ ಧರ್ಮದಿಂದಲೇ ಯುದ್ಧಮಾಡಬೇಕೆಂದು ಸ್ವಾಯಂಭುವ ಮನುವು ಹೇಳಿದ್ದಾನೆ. ಸತ್ಪುರುಷರಲ್ಲಿ ಸದ್ಧರ್ಮವೂ ಸದಾ ನೆಲೆಸಿರುತ್ತದೆ. ಧರ್ಮವನ್ನು ಆಶ್ರಯಿಸಬೇಕು. ವಿನಾಶಗೊಳಿಸಬಾರದು.

12096015a ಯೋ ವೈ ಜಯತ್ಯಧರ್ಮೇಣ ಕ್ಷತ್ರಿಯೋ ವರ್ಧಮಾನಕಃ[1]|

12096015c ಆತ್ಮಾನಮಾತ್ಮನಾ ಹಂತಿ ಪಾಪೋ ನಿಕೃತಿಜೀವನಃ||

ಅಭಿವೃದ್ಧಿಯನ್ನು ಬಯಸುವ ಯಾವ ಕ್ಷತ್ರಿಯನು ಅಧರ್ಮದಿಂದ ಜಯಿಸುತ್ತಾನೋ ಆ ಪಾಪಿ ಮೋಸಗಾರನು ತನ್ನನ್ನು ತಾನೇ ಕೊಂದುಕೊಳ್ಳುತ್ತಾನೆ.

12096016a ಕರ್ಮ ಚೈತದಸಾಧೂನಾಮಸಾಧುಂ ಸಾಧುನಾ ಜಯೇತ್|

12096016c ಧರ್ಮೇಣ ನಿಧನಂ ಶ್ರೇಯೋ ನ ಜಯಃ ಪಾಪಕರ್ಮಣಾ||

ಧರ್ಮಯುದ್ಧವನ್ನು ಆರಂಭಿಸಿ ಅಧರ್ಮಪೂರ್ವಕವಾಗಿ ವಿಜಯಗಳಿಸುವುದು ಪಾಪಾತ್ಮರ ಕರ್ಮವು. ಶ್ರೇಷ್ಠ ಪುರುಷರು ದುಷ್ಟರನ್ನೂ ಧರ್ಮಮಾರ್ಗದಿಂದಲೇ ಜಯಿಸಬೇಕು. ಪಾಪಕರ್ಮದಿಂದ ಗಳಿಸಿದ ಜಯಕ್ಕಿಂತಲೂ ಧರ್ಮದಿಂದ ಹೋರಾಡಿ ನಿಧನಹೊಂದುವುದೇ ಶ್ರೇಯಸ್ಕರವು.

12096017a ನಾಧರ್ಮಶ್ಚರಿತೋ ರಾಜನ್ಸದ್ಯಃ ಫಲತಿ ಗೌರಿವ|

12096017c ಮೂಲಾನ್ಯಸ್ಯ ಪ್ರಶಾಖಾಶ್ಚ ದಹನ್ಸಮನುಗಚ್ಚತಿ||

ರಾಜನ್! ಬಿತ್ತಿದಾಕ್ಷಣ ಕೂಡಲೇ ಭೂಮಿಯು ಹೇಗೆ ಫಲವನ್ನು ಕೊಡುವುದಿಲ್ಲವುದಿಲ್ಲವೋ ಹಾಗೆ ಮಾಡಿದ ಅಧರ್ಮವು ಕೂಡಲೇ ಫಲವನ್ನು ಕೊಡುವುದಿಲ್ಲ. ಆದರೆ ಫಲಕೊಡಲು ಪ್ರಾರಂಭವಾಯಿತೆಂದರೆ ಬೇರುಗಳನ್ನೂ, ಶಾಖೋಪಶಾಖೆಗಳನ್ನೂ ದಹಿಸಿ ಭಸ್ಮಮಾಡಿಬಿಡುತ್ತದೆ.

12096018a ಪಾಪೇನ ಕರ್ಮಣಾ ವಿತ್ತಂ ಲಬ್ಧ್ವಾ ಪಾಪಃ ಪ್ರಹೃಷ್ಯತಿ|

12096018c ಸ ವರ್ಧಮಾನಃ ಸ್ತೇಯೇನ ಪಾಪಃ ಪಾಪೇ ಪ್ರಸಜ್ಜತಿ||

ಪಾಪಕರ್ಮಗಳಿಂದ ಧನವನ್ನು ಪಡೆದ ಪಾಪಿಯು ಸಂತೋಷಪಡುತ್ತಾನೆ. ಕಳ್ಳತನದಿಂದ ವೃದ್ಧಿಯನ್ನು ಹೊಂದುವ ಅವನು ಪಾಪಕರ್ಮಗಳಲ್ಲಿಯೇ ಮುಳುಗಿ ಹೋಗುತ್ತಾನೆ.

12096019a ನ ಧರ್ಮೋಽಸ್ತೀತಿ ಮನ್ವಾನಃ ಶುಚೀನವಹಸನ್ನಿವ|

12096019c ಅಶ್ರದ್ದಧಾನಭಾವಾಚ್ಚ ವಿನಾಶಮುಪಗಚ್ಚತಿ||

ಧರ್ಮವೆನ್ನುವುದೇ ಇಲ್ಲ ಎಂದು ತಿಳಿದು ಶುಚಿಯಾಗಿರುವವರ ಅಪಹಾಸ್ಯಮಾಡುತ್ತಾನೆ. ಧರ್ಮದ ಮೇಲೆ ಶ್ರದ್ಧಾಭಾವವಿಲ್ಲದೇ ವಿನಾಶವನ್ನು ಹೊಂದುತ್ತಾನೆ.

12096020a ಸ ಬದ್ಧೋ ವಾರುಣೈಃ ಪಾಶೈರಮರ್ತ್ಯ ಇವ ಮನ್ಯತೇ|

12096020c ಮಹಾದೃತಿರಿವಾಧ್ಮಾತಃ ಸ್ವಕೃತೇನ ವಿವರ್ಧತೇ||

ವರುಣನ ಪಾಶಗಳಿಂದ ಬದ್ಧನಾಗಿದ್ದರೂ ತಾನು ಅಮರನೆಂದೇ ತಿಳಿದುಕೊಳ್ಳುತ್ತಾನೆ. ಗಾಳಿತುಂಬಿದ ಚರ್ಮದ ಚೀಲವು ಉಬ್ಬಿಕೊಳ್ಳುವಂತೆ ತನ್ನದೇ ಕರ್ಮಗಳಿಂದ ಉಬ್ಬಿಕೊಳ್ಳುತ್ತಾನೆ.

12096021a ತತಃ ಸಮೂಲೋ ಹ್ರಿಯತೇ ನದೀಕೂಲಾದಿವ ದ್ರುಮಃ|

12096021c ಅಥೈನಮಭಿನಿಂದಂತಿ ಭಿನ್ನಂ ಕುಂಭಮಿವಾಶ್ಮನಿ|

12096021e ತಸ್ಮಾದ್ಧರ್ಮೇಣ ವಿಜಯಂ ಕಾಮಂ ಲಿಪ್ಸೇತ ಭೂಮಿಪಃ||

ಅನಂತರ ಅವನು ನದೀತೀರದಲ್ಲಿರುವ ವೃಕ್ಷವು ಪ್ರವಾಹದ ರಭಸಕ್ಕೆ ಸಿಲುಕಿ ಬುಡಸಹಿತ ಉರುಳಿ ತೇಲಿಹೋಗುವಂತೆ ಪಾಪಿಷ್ಠನು ಸಮೂಲವಾಗಿ ನಾಶಹೊಂದುತ್ತಾನೆ. ಕಲ್ಲಿನ ಮೇಲೆ ಕುಕ್ಕಿದ ಗಡಿಗೆಯಂತೆ ಒಡೆದು ಹೋಗುತ್ತಾನೆ. ಆದುದರಿಂದ ಭೂಮಿಪನು ವಿಜಯವನ್ನೂ ಐಶ್ವರ್ಯವನ್ನೂ ಧರ್ಮದಿಂದಲೇ ಜಯಿಸಿಕೊಳ್ಳಬೇಕು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಿಜಿಗೀಷಮಾಣವೃತ್ತೇ ಷಣ್ಣಾವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ವಿಜಿಗೀಷಮಾಣವೃತ್ತ ಎನ್ನುವ ತೊಂಭತ್ತಾರನೇ ಅಧ್ಯಾಯವು.

10 Flower Images with White Background | Top Collection of different types  of flowers in the images Hd

[1] ಧರ್ಮಸಂಗರಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.