Shanti Parva: Chapter 91

ಶಾಂತಿ ಪರ್ವ: ರಾಜಧರ್ಮ ಪರ್ವ

೯೧

ಉತಥ್ಯಗೀತಾ

ರಾಜನ ಕರ್ತ್ಯವ್ಯಗಳ ಕುರಿತು ಉತಥ್ಯನು ಮಾಂಧಾತನಿಗೆ ಉಪದೇಶಿಸಿದುದು (1-38).

12091001 ಭೀಷ್ಮ ಉವಾಚ|

12091001a ಯಾನಂಗಿರಾಃ ಕ್ಷತ್ರಧರ್ಮಾನುತಥ್ಯೋ ಬ್ರಹ್ಮವಿತ್ತಮಃ|

12091001c ಮಾಂಧಾತ್ರೇ ಯೌವನಾಶ್ವಾಯ ಪ್ರೀತಿಮಾನಭ್ಯಭಾಷತ||

ಭೀಷ್ಮನು ಹೇಳಿದನು: “ಬ್ರಹ್ಮವಿತ್ತಮ ಅಂಗಿರಸನ ಮಗ ಉತಥ್ಯನು ಯುವನಾಶ್ವನ ಮಗ ಮಾಂಧಾತನಿಗೆ ಪ್ರೀತಿಪೂರ್ವಕವಾಗಿ ಹೇಳಿದನು.

12091002a ಸ ಯಥಾನುಶಶಾಸೈನಮುತಥ್ಯೋ ಬ್ರಹ್ಮವಿತ್ತಮಃ|

12091002c ತತ್ತೇ ಸರ್ವಂ ಪ್ರವಕ್ಷ್ಯಾಮಿ ನಿಖಿಲೇನ ಯುಧಿಷ್ಠಿರ||

ಯುಧಿಷ್ಠಿರ! ಬ್ರಹ್ಮವಿತ್ತಮ ಉತಥ್ಯನು ಹೇಗೆ ಅವನಿಗೆ ಉಪದೇಶಿಸಿದನೋ ಅವೆಲ್ಲವನ್ನೂ ಸಂಪೂರ್ಣವಾಗಿ ನಿನಗೆ ಹೇಳುತ್ತೇನೆ.

12091003 ಉತಥ್ಯ ಉವಾಚ|

12091003a ಧರ್ಮಾಯ ರಾಜಾ ಭವತಿ ನ ಕಾಮಕರಣಾಯ ತು|

12091003c ಮಾಂಧಾತರೇವಂ ಜಾನೀಹಿ ರಾಜಾ ಲೋಕಸ್ಯ ರಕ್ಷಿತಾ||

ಉತಥ್ಯನು ಹೇಳಿದನು: “ಮಾಂಧಾತ! ಧರ್ಮಕ್ಕಾಗಿ ರಾಜನಾಗುತ್ತಾನೆ. ಬಯಸಿದಂತೆ ಮಾಡುವುದಕ್ಕಲ್ಲ. ರಾಜನು ಲೋಕದ ರಕ್ಷಕ ಎನ್ನುವುದನ್ನು ತಿಳಿದುಕೋ.

12091004a ರಾಜಾ ಚರತಿ ವೈ ಧರ್ಮಂ ದೇವತ್ವಾಯೈವ ಗಚ್ಚತಿ|

12091004c ನ ಚೇದ್ಧರ್ಮಂ ಸ ಚರತಿ ನರಕಾಯೈವ ಗಚ್ಚತಿ||

ಧರ್ಮದಲ್ಲಿ ನಡೆದುಕೊಳ್ಳುವ ರಾಜನು ದೇವತ್ವವನ್ನೇ ಪಡೆದುಕೊಳ್ಳುತ್ತಾನೆ. ಧರ್ಮದಂತೆ ನಡೆದುಕೊಳ್ಳದಿದ್ದರೆ ಅವನು ನರಕಕ್ಕೇ ಹೋಗುತ್ತಾನೆ.

12091005a ಧರ್ಮೇ ತಿಷ್ಠಂತಿ ಭೂತಾನಿ ಧರ್ಮೋ ರಾಜನಿ ತಿಷ್ಠತಿ|

12091005c ತಂ ರಾಜಾ ಸಾಧು ಯಃ ಶಾಸ್ತಿ ಸ ರಾಜಾ ಪೃಥಿವೀಪತಿಃ||

ಇರುವ ಎಲ್ಲವೂ ಧರ್ಮದ ಮೇಲೆ ನಿಂತಿವೆ. ಧರ್ಮವು ರಾಜನಲ್ಲಿ ನೆಲೆಸಿರುತ್ತದೆ. ಉತ್ತಮವಾಗಿ ಶಾಸನಮಾಡುವ ರಾಜನು ಪೃಥ್ವೀಪತಿಯಾಗುತ್ತಾನೆ.

12091006a ರಾಜಾ ಪರಮಧರ್ಮಾತ್ಮಾ ಲಕ್ಷ್ಮೀವಾನ್ಪಾಪ[1] ಉಚ್ಯತೇ|

12091006c ದೇವಾಶ್ಚ ಗರ್ಹಾಂ ಗಚ್ಚಂತಿ ಧರ್ಮೋ ನಾಸ್ತೀತಿ ಚೋಚ್ಯತೇ||

ಪರಮಧರ್ಮಾತ್ಮ ರಾಜನು ಲಕ್ಷ್ಮೀವಾನನೆಂದು ಹೇಳುತ್ತಾರೆ. ಅವನು ಪಾಪಿಯಾಗಿದ್ದರೆ ಜನರು ದೇವತೆಗಳನ್ನೂ ನಿಂದಿಸುತ್ತಾರೆ ಮತ್ತು ಧರ್ಮವೇ ಇಲ್ಲವೆಂದು ಹೇಳುತ್ತಾರೆ.

12091007a ಅಧರ್ಮೇ[2] ವರ್ತಮಾನಾನಾಮರ್ಥಸಿದ್ಧಿಃ ಪ್ರದೃಶ್ಯತೇ|

12091007c ತದೇವ ಮಂಗಲಂ ಸರ್ವಂ ಲೋಕಃ ಸಮನುವರ್ತತೇ||

ಅಧರ್ಮದಲ್ಲಿ ನಡೆದುಕೊಳ್ಳುವವರಿಗೆ ಅರ್ಥಸಿದ್ಧಿಯಾದಂತೆ ಕಾಣುತ್ತದೆ. ಆದುದರಿಂದ ಲೋಕವೆಲ್ಲವೂ ಮಂಗಲ ಧರ್ಮವನ್ನೇ ಅನುಸರಿಸುತ್ತದೆ.

12091008a ಉಚ್ಚಿದ್ಯತೇ ಧರ್ಮವೃತ್ತಮಧರ್ಮೋ ವರ್ತತೇ ಮಹಾನ್|

12091008c ಭಯಮಾಹುರ್ದಿವಾರಾತ್ರಂ ಯದಾ ಪಾಪೋ ನ ವಾರ್ಯತೇ||

ಧರ್ಮವೃತ್ತಿಯನ್ನು ಕಡೆಗಣಿಸಿದರೆ ಮಹಾ ಅಧರ್ಮವೇ ನಡೆಯುತ್ತದೆ. ಪಾಪವನ್ನು ತಡೆಯದಿದ್ದರೆ ಹಗಲು-ರಾತ್ರಿ ಭಯವುಂಟಾಗುತ್ತದೆ ಎನ್ನುತ್ತಾರೆ.

[3]12091009a ನ ವೇದಾನನುವರ್ತಂತಿ ವ್ರತವಂತೋ ದ್ವಿಜಾತಯಃ|

12091009c ನ ಯಜ್ಞಾಂಸ್ತನ್ವತೇ ವಿಪ್ರಾ ಯದಾ ಪಾಪೋ ನ ವಾರ್ಯತೇ||

ಪಾಪವನ್ನು ತಡೆಯದೇ ಇದ್ದರೆ ವ್ರತವಂತ ದ್ವಿಜಾತಿಯವರು ವೇದಗಳನ್ನು ಅನುಸರಿಸುವುದಿಲ್ಲ. ವಿಪ್ರರು ಯಜ್ಞಗಳನ್ನು ನಡೆಸುವುದಿಲ್ಲ.

12091010a ವಧ್ಯಾನಾಮಿವ ಸರ್ವೇಷಾಂ[4] ಮನೋ ಭವತಿ ವಿಹ್ವಲಮ್|

12091010c ಮನುಷ್ಯಾಣಾಂ ಮಹಾರಾಜ ಯದಾ ಪಾಪೋ ನ ವಾರ್ಯತೇ||

ಮಹಾರಾಜ! ಪಾಪವನ್ನು ನಿಲ್ಲಿಸದಿದ್ದರೆ ವಧಿಸಲ್ಪಡುವ ಎಲ್ಲ ಮನುಷ್ಯರ ಮನಸ್ಸಿನಲ್ಲಿಯೂ ವಿಹ್ವಲವುಂಟಾಗುತ್ತದೆ.

12091011a ಉಭೌ ಲೋಕಾವಭಿಪ್ರೇಕ್ಷ್ಯ ರಾಜಾನಮೃಷಯಃ ಸ್ವಯಮ್|

12091011c ಅಸೃಜನ್ಸುಮಹದ್ಭೂತಮಯಂ ಧರ್ಮೋ ಭವಿಷ್ಯತಿ||

ಇಹ ಮತ್ತು ಪರ ಲೋಕಗಳೆರಡನ್ನೂ ನೋಡಿಯೇ ಸ್ವಯಂ ಋಷಿಗಳು ರಾಜನೆಂಬ ಮಹಾಭೂತವನ್ನು “ಇವನು ಧರ್ಮನಾಗುತ್ತಾನೆ” ಎಂದು ಸೃಷ್ಟಿಸಿದರು.

12091012a ಯಸ್ಮಿನ್ಧರ್ಮೋ ವಿರಾಜೇತ ತಂ ರಾಜಾನಂ ಪ್ರಚಕ್ಷತೇ|

12091012c ಯಸ್ಮಿನ್ವಿಲೀಯತೇ ಧರ್ಮಸ್ತಂ ದೇವಾ ವೃಷಲಂ ವಿದುಃ||

ಯಾರಲ್ಲಿ ಧರ್ಮವು ವಿರಾಜಿಸುತ್ತದೆಯೋ ಅವನನ್ನು ರಾಜನೆಂದು ಕರೆಯುತ್ತಾರೆ. ಯಾರಲ್ಲಿ ಧರ್ಮವು ವಿಲೀನವಾಗಿದೆಯೋ ಅವನನ್ನು ದೇವತೆಗಳು “ವೃಷಲ” ಎಂದು ತಿಳಿಯುತ್ತಾರೆ.

12091013a ವೃಷೋ ಹಿ ಭಗವಾನ್ಧರ್ಮೋ ಯಸ್ತಸ್ಯ ಕುರುತೇ ಹ್ಯಲಮ್|

12091013c ವೃಷಲಂ ತಂ ವಿದುರ್ದೇವಾಸ್ತಸ್ಮಾದ್ಧರ್ಮಂ ನ ಲೋಪಯೇತ್||

ವೃಷನೇ ಭಗವಾನ್ ಧರ್ಮ. ಇದಕ್ಕೆ ವಿಘ್ನವನ್ನುಂಟುಮಾಡುವವನು ವೃಷಲ. ಆದುದರಿಂದ ದೇವತೆಗಳು ಅಧರ್ಮಿಯನ್ನು ವೃಷಲ ಎಂದು ಕರೆಯುತ್ತಾರೆ. ಧರ್ಮವನ್ನು ಲೋಪಗೊಳಿಸಬಾರದು.

12091014a ಧರ್ಮೇ ವರ್ಧತಿ ವರ್ಧಂತಿ ಸರ್ವಭೂತಾನಿ ಸರ್ವದಾ|

12091014c ತಸ್ಮಿನ್ ಹ್ರಸತಿ ಹೀಯಂತೇ ತಸ್ಮಾದ್ಧರ್ಮಂ ಪ್ರವರ್ಧಯೇತ್||

ಧರ್ಮವು ವರ್ಧಿಸಿದರೆ ಸರ್ವದಾ ಸರ್ವಭೂತಗಲೂ ವೃದ್ಧಿಹೊಂದುತ್ತವೆ. ಧರ್ಮವು ಕಡಿಮೆಯಾದಾಗ ಎಲ್ಲ ಪ್ರಾಣಿಗಳೂ ನಾಶವಾಗುತ್ತವೆ. ಆದುದರಿಂದ ಧರ್ಮವನ್ನು ವೃದ್ಧಿಸಬೇಕು.

12091015a ಧನಾತ್ ಸ್ರವತಿ ಧರ್ಮೋ ಹಿ ಧಾರಣಾದ್ವೇತಿ ನಿಶ್ಚಯಃ|

12091015c ಅಕಾರ್ಯಾಣಾಂ ಮನುಷ್ಯೇಂದ್ರ ಸ ಸೀಮಾಂತಕರಃ ಸ್ಮೃತಃ||

ಧನದಿಂದ ಧರ್ಮವು ಉತ್ಪತ್ತಿಯಾಗುತ್ತದೆ. ಏಲ್ಲವನ್ನೂ ಧಾರಣೆ ಮಾಡುವುದರಿಂದಲೇ ಅದಕ್ಕೆ ಧರ್ಮವೆಂದು ಕರೆಯುತ್ತಾರೆನ್ನುವುದು ನಿಶ್ಚಯ. ಮನುಷ್ಯೇಂದ್ರ! ಮಾಡಬಾರದವುಗಳಿಗೆ ಧರ್ಮವು ಒಂದು ಎಲ್ಲೆಯನ್ನು ಕಲ್ಪಿಸುತ್ತದೆಯೆಂದು ಹೇಳುತ್ತಾರೆ.

12091016a ಪ್ರಭವಾರ್ಥಂ ಹಿ ಭೂತಾನಾಂ ಧರ್ಮಃ ಸೃಷ್ಟಃ ಸ್ವಯಂಭುವಾ|

12091016c ತಸ್ಮಾತ್ಪ್ರವರ್ಧಯೇದ್ಧರ್ಮಂ ಪ್ರಜಾನುಗ್ರಹಕಾರಣಾತ್||

ಪ್ರಜೆಗಳ ಕಲ್ಯಾಣಕ್ಕಾಗಿಯೇ ಸ್ವಯಂಭುವು ಧರ್ಮವನ್ನು ಸೃಷ್ಟಿಸಿದನು. ಆದುದರಿಂದ ಪ್ರಜೆಗಳಿಗೆ ಅನುಗ್ರಹ ಮಾಡುವುದಕ್ಕಾಗಿ ಧರ್ಮವನ್ನು ವೃದ್ಧಿಗೊಳಿಸಬೇಕು.

12091017a ತಸ್ಮಾದ್ಧಿ ರಾಜಶಾರ್ದೂಲ ಧರ್ಮಃ ಶ್ರೇಷ್ಠ ಇತಿ ಸ್ಮೃತಃ|

12091017c ಸ ರಾಜಾ ಯಃ ಪ್ರಜಾಃ ಶಾಸ್ತಿ ಸಾಧುಕೃತ್ಪುರುಷರ್ಷಭಃ||

ರಾಜಶಾರ್ದೂಲ! ಆದುದರಿಂದ ಧರ್ಮವೇ ಶ್ರೇಷ್ಠವೆಂದು ತಿಳಿ. ಇದೇ ಸ್ಮೃತಿ. ಸದ್ಧರ್ಮದಿಂದ ಪ್ರಜೆಗಳ ಶಾಸನಮಾಡುವವನೇ ರಾಜ. ಅವನೇ ಪುರುಷರ್ಷಭ.

12091018a ಕಾಮಕ್ರೋಧಾವನಾದೃತ್ಯ ಧರ್ಮಮೇವಾನುಪಾಲಯೇತ್|

12091018c ಧರ್ಮಃ ಶ್ರೇಯಸ್ಕರತಮೋ ರಾಜ್ಞಾಂ ಭರತಸತ್ತಮ||

ಭರತಸತ್ತಮ! ಕಾಮಕ್ರೋಧಗಳನ್ನು ಅನಾದರಿಸಿ ಧರ್ಮವನ್ನೇ ಪಾಲಿಸಬೇಕು. ರಾಜನಿಗೆ ಧರ್ಮವೇ ಅತ್ಯಂತ ಶ್ರೇಯಸ್ಕರವಾದುದು.

12091019a ಧರ್ಮಸ್ಯ ಬ್ರಾಹ್ಮಣಾ ಯೋನಿಸ್ತಸ್ಮಾತ್ತಾನ್ಪೂಜಯೇತ್ಸದಾ|

12091019c ಬ್ರಾಹ್ಮಣಾನಾಂ ಚ ಮಾಂಧಾತಃ ಕಾಮಾನ್ಕುರ್ಯಾದಮತ್ಸರೀ||

ಮಾಂಧಾತಾ! ಬ್ರಾಹ್ಮಣನೇ ಧರ್ಮದ ಯೋನಿ. ಆದುದರಿಂದ ಅವರನ್ನು ಸದಾ ಪೂಜಿಸಬೇಕು. ಬ್ರಾಹ್ಮಣರ ಕಾಮನೆಗಳನ್ನು ಮತ್ಸರವಿಲ್ಲದೇ ಪೂರೈಸಬೇಕು.

12091020a ತೇಷಾಂ ಹ್ಯಕಾಮಕರಣಾದ್ರಾಜ್ಞಃ ಸಂಜಾಯತೇ ಭಯಮ್|

12091020c ಮಿತ್ರಾಣಿ ಚ ನ ವರ್ಧಂತೇ ತಥಾಮಿತ್ರೀಭವಂತ್ಯಪಿ||

ರಾಜನು ಅವರು ಬಯಸಿದಂತೆ ಮಾಡದಿದ್ದರೆ ಭಯವುಂಟಾಗುತ್ತದೆ. ಮಿತ್ರರ ವೃದ್ಧಿಯಾಗುವುದಿಲ್ಲ. ಮಿತ್ರರೇ ಶತ್ರುಗಳಾಗುತ್ತಾರೆ.

12091021a ಬ್ರಾಹ್ಮಣಾನ್ವೈ ತದಾಸೂಯಾದ್ಯದಾ ವೈರೋಚನೋ ಬಲಿಃ|

12091021c ಅಥಾಸ್ಮಾಚ್ಚ್ರೀರಪಾಕ್ರಾಮದ್ಯಾಸ್ಮಿನ್ನಾಸೀತ್ಪ್ರತಾಪಿನೀ||

ವಿರೋಚನನ ಮಗ ಬಲಿಯು ಬ್ರಾಹ್ಮಣರ ವಿಷಯದಲ್ಲಿ ಅಸೂಯಾಪರನಾಗಿದ್ದುದರಿಂದಲೇ ಆ ಶತ್ರುತಾಪಿನಿಯನ್ನು ರಾಜ್ಯಲಕ್ಷ್ಮಿಯು ಬಿಟ್ಟು ಹೋದಳು.

12091022a ತತಸ್ತಸ್ಮಾದಪಕ್ರಮ್ಯ ಸಾಗಚ್ಚತ್ಪಾಕಶಾಸನಮ್|

12091022c ಅಥ ಸೋಽನ್ವತಪತ್ಪಶ್ಚಾಚ್ಚ್ರಿಯಂ ದೃಷ್ಟ್ವಾ ಪುರಂದರೇ||

ಆಗ ಅವಳು ಅವನನ್ನು ಬಿಟ್ಟು ಪಾಕಶಾಸನನ ಬಳಿ ಹೋದಳು. ಶ್ರೀಯು ಪುರಂದರನ ಬಳಿ ಹೋದುದನ್ನು ನೋಡಿ ಬಲಿಗೆ ಅತ್ಯಂತ ಪಶ್ಚಾತ್ತಾಪವಾಯಿತು.

12091023a ಏತತ್ಫಲಮಸೂಯಾಯಾ ಅಭಿಮಾನಸ್ಯ ಚಾಭಿಭೋ|

12091023c ತಸ್ಮಾದ್ಬುಧ್ಯಸ್ವ ಮಾಂಧಾತರ್ಮಾ ತ್ವಾ ಜಹ್ಯಾತ್ಪ್ರತಾಪಿನೀ||

ವಿಭೋ! ಅಸೂಯಾಭಿಮಾನಿಗಳಿಗೆ ಇದೇ ಫಲ. ಮಾಂಧಾತ! ಎಚ್ಚರಗೊಳ್ಳು. ಬ್ರಾಹ್ಮಣರ ಮೇಲೆ ಅಸೂಯೆಪಡದಿರು. ಪ್ರತಾಪಿನೀ ಶ್ರೀಯು ನಿನ್ನನ್ನು ಬಿಟ್ಟುಹೋಗದಿರಲಿ.

12091024a ದರ್ಪೋ ನಾಮ ಶ್ರಿಯಃ ಪುತ್ರೋ ಜಜ್ಞೇಽಧರ್ಮಾದಿತಿ ಶ್ರುತಿಃ|

12091024c ತೇನ ದೇವಾಸುರಾ ರಾಜನ್ನೀತಾಃ ಸುಬಹುಶೋ ವಶಮ್||

12091025a ರಾಜರ್ಷಯಶ್ಚ ಬಹವಸ್ತಸ್ಮಾದ್ಬುಧ್ಯಸ್ವ ಪಾರ್ಥಿವ|

12091025c ರಾಜಾ ಭವತಿ ತಂ ಜಿತ್ವಾ ದಾಸಸ್ತೇನ ಪರಾಜಿತಃ||

ದರ್ಪ ಎನ್ನುವವನು ಶ್ರೀಗೆ ಅಧರ್ಮನಿಂದ ಹುಟ್ಟಿದವನೆಂದು ಶ್ರುತಿವಾಕ್ಯವಿದೆ. ರಾಜನ್! ಅವನು ಅನೇಕ ದೇವತೆಗಳನ್ನೂ, ಅಸುರರನ್ನೂ, ರಾಜರ್ಷಿಗಳನ್ನೂ ತನ್ನ ವಶಮಾಡಿಕೊಂಡು ವಿನಾಶಗೊಳಿಸಿದನು. ಮಾಂಧಾತ! ಇದನ್ನು ನೀನೂ ಮನದಟ್ಟುಮಾಡಿಕೊಳ್ಳಬೇಕು. ಪಾರ್ಥಿವ! ದುಷ್ಟನಾದ ದರ್ಪನನ್ನು ಗೆದ್ದವನು ರಾಜನಾಗುತ್ತಾನೆ. ಅವನಿಗೆ ಸೋತವನು ದಾಸನಾಗುತ್ತಾನೆ.

12091026a ಸ ಯಥಾ ದರ್ಪಸಹಿತಮಧರ್ಮಂ ನಾನುಸೇವಸೇ|

12091026c ತಥಾ ವರ್ತಸ್ವ ಮಾಂಧಾತಶ್ಚಿರಂ ಚೇತ್ ಸ್ಥಾತುಮಿಚ್ಚಸಿ||

ಮಾಂಧಾತಾ! ಚಿರಕಾಲ ರಾಜ್ಯವಾಳಬೇಕೆಂದು ಬಯಸುವೆಯಾದರೆ ದರ್ಪಸಹಿತವಾದ ಅಧರ್ಮವನ್ನು ಸೇವಿಸದಂತೆ ವರ್ತಿಸು.

12091027a ಮತ್ತಾತ್ಪ್ರಮತ್ತಾತ್ಪೋಗಂಡಾ[5]ದುನ್ಮತ್ತಾಚ್ಚ ವಿಶೇಷತಃ|

12091027c ತದಭ್ಯಾಸಾದುಪಾವರ್ತಾದಹಿತಾನಾಂ ಚ ಸೇವನಾತ್||

ಮದಿಸಿದವರು, ಅಪ್ರಮತ್ತರು, ಐದರಿಂದ ಹತ್ತು ವರ್ಷದ ಬಾಲಕರು ಮತ್ತು ಹುಚ್ಚರಿಂದಲೂ ವಿಶೇಷವಾಗಿ ದೂರವಿರು. ಈ ನಾಲ್ವರೂ ಅಹಿತರು ನಿನ್ನ ಸೇವೆಗೈಯಲು ಬಂದರೂ ಅವರನ್ನು ದೂರವಿರಿಸು.

12091028a ನಿಗೃಹೀತಾದಮಾತ್ಯಾಚ್ಚ ಸ್ತ್ರೀಭ್ಯಶ್ಚೈವ ವಿಶೇಷತಃ|

12091028c ಪರ್ವತಾದ್ವಿಷಮಾದ್ದುರ್ಗಾದ್ಧಸ್ತಿನೋಽಶ್ವಾತ್ಸರೀಸೃಪಾತ್||

12091029a ಏತೇಭ್ಯೋ ನಿತ್ಯಯತ್ತಃ ಸ್ಯಾನ್ನಕ್ತಂಚರ್ಯಾಂ ಚ ವರ್ಜಯೇತ್|

12091029c ಅತ್ಯಾಯಂ ಚಾತಿಮಾನಂ ಚ[6] ದಂಭಂ ಕ್ರೋಧಂ ಚ ವರ್ಜಯೇತ್||

ಒಮ್ಮೆ ಬಂಧನಕ್ಕೊಳಗಾದ ಮಂತ್ರಿಯಿಂದ, ವಿಶೇಷವಾಗಿ ಪರಸ್ತ್ರೀಯರಿಂದ, ಎತ್ತರ ಪರ್ವತ ಪ್ರದೇಶಗಳಿಂದ, ಬಹಳ ತಗ್ಗಾಗಿರುವ ಪ್ರದೇಶಗಳಿಂದ, ಹೋಗಲು ಅಸಾಧ್ಯ ದುರ್ಗಮ ಪ್ರದೇಶಗಳಿಂದ, ಪಳಗಿರದ ಆನೆಯಿಂದ, ಕುದುರೆಯಿಂದ ಮತ್ತು ಸರ್ಪಗಳಿಂದ ದೂರವಿರು. ಇವುಗಳ ವಿಷಯದಲ್ಲಿ ನಿತ್ಯವೂ ಎಚ್ಚರದಿಂದಿರಬೇಕು. ರಾತ್ರಿಯಲ್ಲಿ ತಿರುಗಾಡುವುದನ್ನೂ ವರ್ಜಿಸಬೇಕು. ಅತಿಯಾದ ಕೃಪಣತೆ, ಅತಿಯಾದ ಅಭಿಮಾನ, ದಂಭ ಮತ್ತು ಕ್ರೋಧಗಳನ್ನೂ ವರ್ಜಿಸಬೇಕು.

12091030a ಅವಿಜ್ಞಾತಾಸು ಚ ಸ್ತ್ರೀಷು ಕ್ಲೀಬಾಸು ಸ್ವೈರಿಣೀಷು ಚ|

12091030c ಪರಭಾರ್ಯಾಸು ಕನ್ಯಾಸು ನಾಚರೇನ್ಮೈಥುನಂ ನೃಪಃ||

ಅಪರಿಚಿತ ಸ್ರೀಯರೊಡನೆ, ನಪುಂಸಕರೊಡಾನೆ, ವೈಶ್ಯೆಯರೊದನೆ, ಪರರ ಪತ್ನಿಯರೊದನೆ, ಮತ್ತು ಕನ್ಯೆಯರೊಂದಿಗೆ ರಾಜನಾದವನು ಸಂಭೋಗ ಮಾಡಬಾರದು.

12091031a ಕುಲೇಷು ಪಾಪರಕ್ಷಾಂಸಿ ಜಾಯಂತೇ ವರ್ಣಸಂಕರಾತ್|

12091031c ಅಪುಮಾಂಸೋಽಂಗಹೀನಾಶ್ಚ ಸ್ಥೂಲಜಿಹ್ವಾ ವಿಚೇತಸಃ||

12091032a ಏತೇ ಚಾನ್ಯೇ ಚ ಜಾಯಂತೇ ಯದಾ ರಾಜಾ ಪ್ರಮಾದ್ಯತಿ|

12091032c ತಸ್ಮಾದ್ರಾಜ್ಞಾ ವಿಶೇಷೇಣ ವರ್ತಿತವ್ಯಂ ಪ್ರಜಾಹಿತೇ||

ಒಂದು ವೆಳೆ ರಾಜನು ಪ್ರಮತ್ತನಾದರೆ ವರ್ಣಸಂಕರದಿಂದ ಕುಲಗಳಲ್ಲಿ ಪಾಪಿಷ್ಟರೂ ರಾಕ್ಷಸರೂ ಹುಟ್ಟಿಕೊಳ್ಳುತ್ತಾರೆ. ನಪುಂಸಕರು, ಅಂಗಹೀನರು, ತೊದಲರು, ಬುದ್ಧಿ ಹೀನರು ಮೊದಲಾದ ಅನೇಕ ಅನ್ಯರು ಹುಟ್ಟುತ್ತಾರೆ. ಆದುದರಿಂದ ರಾಜನು ವಿಶೇಷವಾಗಿ ಪ್ರಜಾಹಿತದಲ್ಲಿಯೇ ನಡೆದುಕೊಳ್ಳಬೇಕು.

12091033a ಕ್ಷತ್ರಿಯಸ್ಯ ಪ್ರಮತ್ತಸ್ಯ ದೋಷಃ ಸಂಜಾಯತೇ ಮಹಾನ್|

12091033c ಅಧರ್ಮಾಃ ಸಂಪ್ರವರ್ತಂತೇ ಪ್ರಜಾಸಂಕರಕಾರಕಾಃ||

ಕ್ಷತ್ರಿಯನ ಪ್ರಮತ್ತತೆಯಿಂದ ಮಹಾ ದೋಷವುಂಟಾಗುತ್ತದೆ. ಪ್ರಜಾಸಂಕರವನ್ನು ಮಾಡುವ ಅಧರ್ಮಗಳು ಹುಟ್ಟಿಕೊಳ್ಳುತ್ತವೆ.

12091034a ಅಶೀತೇ ವಿದ್ಯತೇ ಶೀತಂ ಶೀತೇ ಶೀತಂ ನ ವಿದ್ಯತೇ|

12091034c ಅವೃಷ್ಟಿರತಿವೃಷ್ಟಿಶ್ಚ ವ್ಯಾಧಿಶ್ಚಾವಿಶತಿ ಪ್ರಜಾಃ||

ಬೇಸಿಗೆಯಲ್ಲಿ ಚಳಿಯಾಗುತ್ತದೆ. ಛಳಿಗಾಲದಲ್ಲಿ ಛಳಿಯಾಗುವುದೆ ಇಲ್ಲ. ಅತಿ ವೃಷ್ಟಿ ಅನಾವೃಷ್ಟಿಗಳಾಗುತ್ತವೆ ಮತ್ತು ಪ್ರಜೆಗಳನ್ನು ವ್ಯಾಧಿಗಳು ಆವರಿಸುತ್ತವೆ.

12091035a ನಕ್ಷತ್ರಾಣ್ಯುಪತಿಷ್ಠಂತಿ ಗ್ರಹಾ ಘೋರಾಸ್ತಥಾಪರೇ|

12091035c ಉತ್ಪಾತಾಶ್ಚಾತ್ರ ದೃಶ್ಯಂತೇ ಬಹವೋ ರಾಜನಾಶನಾಃ||

ಹಾಗೆಯೇ ಘೋರ ಗ್ರಹಗಳು ನಕ್ಷತ್ರಗಳ ಬಳಿಸಾರುತ್ತವೆ. ರಾಜನ ವಿನಾಶದ ಸೂಚಕವಾಗಿ ಅನೇಕ ಉತ್ಪಾತಗಳು ಕಾಣಿಸಿಕೊಳ್ಳುತ್ತವೆ.

12091036a ಅರಕ್ಷಿತಾತ್ಮಾ ಯೋ ರಾಜಾ ಪ್ರಜಾಶ್ಚಾಪಿ ನ ರಕ್ಷತಿ|

12091036c ಪ್ರಜಾಶ್ಚ ತಸ್ಯ ಕ್ಷೀಯಂತೇ ತಾಶ್ಚ ಸೋಽನು ವಿನಶ್ಯತಿ||

ಆತ್ಮರಕ್ಷಣೆಯನ್ನು ಮಾಡಿಕೊಳ್ಳಲಾರದ ರಾಜನು ಪ್ರಜೆಗಳನ್ನೂ ರಕ್ಷಿಸುವುದಿಲ್ಲ. ಅವನ ಪ್ರಜೆಗಳು ಕ್ಷೀಣಿಸುತ್ತಾರೆ. ನಂತರ ಅವನೂ ವಿನಾಶನಾಗುತ್ತಾನೆ.

12091037a ದ್ವಾವಾದದಾತೇ ಹ್ಯೇಕಸ್ಯ ದ್ವಯೋಶ್ಚ ಬಹವೋಽಪರೇ|

12091037c ಕುಮಾರ್ಯಃ ಸಂಪ್ರಲುಪ್ಯಂತೇ ತದಾಹುರ್ನೃಪದೂಷಣಮ್||

ಒಬ್ಬನ ಐಶ್ವರ್ಯವನ್ನು ಇಬ್ಬರು ಸೇರಿ ಅಪಹರಿಸುವುದು, ಇಬ್ಬರಲ್ಲಿರುವ ಐಶ್ವರ್ಯವನ್ನು ಬಹುಜನರು ಸೇರಿ ಕೊಳ್ಳೆಹೊಡೆಯುವುದು, ಕುಮಾರಿಯರ ಮೇಲೆ ಬಲಾತ್ಕಾರವಾಗುವುದು ಇವೆಲ್ಲವೂ ನೃಪನ ದೋಷದಿಂದಾಗಿ ಎಂದು ಹೇಳುತ್ತಾರೆ.

12091038a ಮಮೈತದಿತಿ ನೈಕಸ್ಯ ಮನುಷ್ಯೇಷ್ವವತಿಷ್ಠತೇ|

12091038c ತ್ಯಕ್ತ್ವಾ ಧರ್ಮಂ ಯದಾ ರಾಜಾ ಪ್ರಮಾದಮನುತಿಷ್ಠತಿ||

ಧರ್ಮವನ್ನು ತ್ಯಜಿಸಿ ರಾಜನು ಪ್ರಮಾದಕ್ಕೊಳಗಾದರೆ ಮನುಷ್ಯದಲ್ಲಿ ಇದು ನನ್ನದು ಎನ್ನುವುದು ಯಾವುದೂ ಉಳಿಯುವುದಿಲ್ಲ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಉತಥ್ಯಗೀತಾಸು ಏಕನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಉತಥ್ಯಗೀತ ಎನ್ನುವ ತೊಂಭತ್ತೊಂದನೇ ಅಧ್ಯಾಯವು.

Flower On White Background Free Stock Photo - Public Domain Pictures

[1] ಲಕ್ಷ್ಮೀವಾನ್ಧರ್ಮ ಉಚ್ಯತೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಸ್ವಧರ್ಮೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಮೂರು ಶ್ಲೋಕಗಳಿವೆ: ಮಮೇದಮಿತಿ ನೈವೈತತ್ಸಾಧೂನಾಂ ತಾತ ಧರ್ಮತಃ| ನ ವೈ ವ್ಯವಸ್ಥಾ ಭವತಿ ಯದಾ ಪಾಪೋ ನ ವಾರ್ಯತೇ|| ನೈವ ಭಾರ್ಯಾ ನ ಪಶವೋ ನ ಕ್ಷೇತ್ರಂ ನ ನಿವೇಶನಮ್| ಸಂದೃಶ್ಯೇತ ಮನುಷ್ಯಾಣಾಂ ಯದಾ ಪಾಪಬಲಂ ಭವೇಟ್|| ದೇವಾಃ ಪೂಜಾಂ ನ ಜಾನಂತಿ ನ ಸ್ವಧಾಂ ಪಿತರಸ್ತದಾ| ನ ಪೂಜ್ಯಂತೆ ಹ್ಯತಿಥಯೋ ಯದಾ ಪಾಪೋ ನ ವಾರ್ಯತೇ||

[4] ವೃದ್ಧಾನಾಮಿವ ಸತ್ತ್ವಾನಾಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಪೌಗಂಡಾತ್ ಎಂಬ ಪಾಠಾಂತರವಿದೆ. ಪೌಗಂಡಃ ಎಂದರೆ ಐದರಿಂದ ಹತ್ತು ವರ್ಷ ವಯಸ್ಸಿನೊಳಗಿರುವ ಬಾಲಕ. ಕೌಮಾರಂ ಪಂಚಮಾಬ್ಧಂ ತು ಪೌಗಂಡಂ ದಶಮಾವಧಿ| ಕೈಶೋರಮಾಪಂಚದಶಾದ್ಯೌವನಂಚ ತತಃ ಪರಂ||

[6] ಅತ್ಯಾಗಂ ಚಾಭಿಮಾನಂ ಚ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.