Shanti Parva: Chapter 90

ಶಾಂತಿ ಪರ್ವ: ರಾಜಧರ್ಮ ಪರ್ವ

೯೦

ರಾಜನ ಕರ್ತವ್ಯಗಳು (1-26).

12090001 ಭೀಷ್ಮ ಉವಾಚ|

12090001a ವನಸ್ಪತೀನ್ ಭಕ್ಷ್ಯಫಲಾನ್ನ ಚಿಂದ್ಯುರ್ವಿಷಯೇ ತವ|

12090001c ಬ್ರಾಹ್ಮಣಾನಾಂ ಮೂಲಫಲಂ ಧರ್ಮ್ಯಮಾಹುರ್ಮನೀಷಿಣಃ||

ಭೀಷ್ಮನು ಹೇಳಿದನು: “ನಿನ್ನ ರಾಜ್ಯದಲ್ಲಿ ತಿನ್ನುವ ಹಣ್ಣುಗಳನ್ನು ನೀಡುವ ವನಸ್ಪತಿಗಳನ್ನು ಕಡಿಯದಿರಲಿ. ಫಲ-ಮೂಲಗಳು ಬ್ರಾಹ್ಮಣರಿಗೆ ಸೇರಿದ್ದವು ಎಂದು ಧರ್ಮವನ್ನು ತಿಳಿದವರು ಹೇಳುತ್ತಾರೆ.

12090002a ಬ್ರಾಹ್ಮಣೇಭ್ಯೋಽತಿರಿಕ್ತಂ ಚ ಭುಂಜೀರನ್ನಿತರೇ ಜನಾಃ|

12090002c ನ ಬ್ರಾಹ್ಮಣೋಪರೋಧೇನ ಹರೇದನ್ಯಃ ಕಥಂ ಚನ||

ಬ್ರಾಹ್ಮಣರು ಸೇವಿಸಿ ಅಧಿಕವಾಗಿರುವ ಮೂಲ-ಫಲಗಳನ್ನು ಇತರ ಜನರು ಭುಂಜಿಸಬೇಕು. ಬ್ರಾಹ್ಮಣರಿಂದ ಇದನ್ನು ಕಸಿದುಕೊಳ್ಳುವ ಅಪರಾಧವನ್ನು ಎಂದೂ ಮಾಡಬಾರದು.

12090003a ವಿಪ್ರಶ್ಚೇತ್ತ್ಯಾಗಮಾತಿಷ್ಠೇದಾಖ್ಯಾಯಾವೃತ್ತಿಕರ್ಶಿತಃ|

12090003c ಪರಿಕಲ್ಪ್ಯಾಸ್ಯ ವೃತ್ತಿಃ ಸ್ಯಾತ್ಸದಾರಸ್ಯ ನರಾಧಿಪ||

ನರಾಧಿಪ! ಸ್ವವೃತ್ತಿಯಿಂದ ಜೀವನವನ್ನು ನಡೆಸಲು ಅಶಕ್ಯನಾಗಿ ದೇಶವನ್ನು ತ್ಯಜಿಸಿ ಅನ್ಯ ದೇಶಕ್ಕೆ ಹೊರಟರೆ ಪರಿವಾರ ಸಹಿತ ಅವನನ್ನು ತಡೆದು ವೃತ್ತಿಯನ್ನು ಕಲ್ಪಿಸಿಕೊಡುವುದು ರಾಜನ ಕರ್ತವ್ಯವಾಗಿರುತ್ತದೆ.

12090004a ಸ ಚೇನ್ನೋಪನಿವರ್ತೇತ ವಾಚ್ಯೋ ಬ್ರಾಹ್ಮಣಸಂಸದಿ|

12090004c ಕಸ್ಮಿನ್ನಿದಾನೀಂ ಮರ್ಯಾದಾಮಯಂ ಲೋಕಃ ಕರಿಷ್ಯತಿ||

ಆದರೂ ಅವನು ಹಿಂದಿರುಗದಿದ್ದರೆ ಬ್ರಾಹ್ಮಣಸಂಸದಿಯಲ್ಲಿ ಅವನನ್ನು ಉದ್ದೇಶಿಸಿ “ನೀನು ಹೀಗೆ ಮಾಡಿದರೆ ನನ್ನ ಪ್ರಜೆಗಳು ಯಾರನ್ನಾಶ್ರಯಿಸಿ ಧರ್ಮದ ಮರ್ಯಾದೆಯನ್ನು ಪರಿಪಾಲಿಸುವರು?” ಎಂದು ಕೇಳಿಕೊಳ್ಳಬೇಕು.

12090005a ಅಸಂಶಯಂ ನಿವರ್ತೇತ ನ ಚೇದ್ವಕ್ಷ್ಯತ್ಯತಃ ಪರಮ್|

12090005c ಪೂರ್ವಂ ಪರೋಕ್ಷಂ ಕರ್ತವ್ಯಮೇತತ್ಕೌಂತೇಯ ಶಾಸನಮ್||

ಕೌಂತೇಯ! ಆಗ ಅವನು ನಿಃಸಂಶಯವಾಗಿಯೂ ಹಿಂದಿರುಗುತ್ತಾನೆ. ಆಗಲೂ ಹಿಂದಿರುಗದೇ ಇದ್ದರೆ ಅವನಿಗೆ ಇನ್ನೊಮ್ಮೆ “ಹಿಂದೆ ನಾನೇನಾದರೂ ಪರೋಕ್ಷವಾಗಿ ಅಪರಾಧಗೈದಿದ್ದರೆ ಅದನ್ನು ಕ್ಷಮಿಸಬೇಕು” ಎಂದು ಕೇಳಿಕೊಳ್ಳಬೇಕು. ಇದು ರಾಜ ಶಾಸನದ ಕರ್ತವ್ಯವಾಗಿರುತ್ತದೆ.

12090006a ಆಹುರೇತಜ್ಜನಾ ಬ್ರಹ್ಮನ್ನ ಚೈತಚ್ಚ್ರದ್ದಧಾಮ್ಯಹಮ್|

12090006c ನಿಮಂತ್ರ್ಯಶ್ಚ ಭವೇದ್ಭೋಗೈರವೃತ್ತ್ಯಾ ಚೇತ್ತದಾಚರೇತ್||

ಬ್ರಾಹ್ಮಣರಿಗೆ ಭೋಗವಸ್ತುಗಳನ್ನು ನೀಡಬೇಕು ಮತ್ತು ವೃತ್ತಿಯನ್ನು ಮಾಡಿಕೊಡಬೇಕು ಎಂದು ಜನರು ಹೇಳುತ್ತಾರೆ. ಆದರೆ ಅದರಲ್ಲಿ ನನಗೆ ಶ್ರದ್ಧೆಯಿಲ್ಲ[1].

12090007a ಕೃಷಿಗೋರಕ್ಷ್ಯವಾಣಿಜ್ಯಂ ಲೋಕಾನಾಮಿಹ ಜೀವನಮ್|

12090007c ಊರ್ಧ್ವಂ ಚೈವ ತ್ರಯೀ ವಿದ್ಯಾ ಸಾ ಭೂತಾನ್ ಭಾವಯತ್ಯುತ||

ಕೃಷಿ, ಗೋರಕ್ಷೆ ಮತ್ತು ವಾಣಿಜ್ಯಗಳು ಈ ಲೋಕದಲ್ಲಿ ಜೀವನಕ್ಕೆ ಆಧಾರಭೂತಗಳಾಗಿವೆ. ಮೂರು ವೇದಗಳು ಊರ್ಧ್ವಲೋಕದಲ್ಲಿ ಮನುಷ್ಯನ ರಕ್ಷಣೆಗೆ ಸಾಧಕಗಳಾಗಿವೆ. ಆ ಮೂರು ವೇದಗಳೂ ಯಜ್ಞಗಳ ಮೂಲಕ ಪ್ರಾಣಿಗಳ ಉತ್ಪತ್ತಿ-ವೃದ್ಧಿಗಳಿಗೆ ಕಾರಣಗಳಾಗಿವೆ.

12090008a ತಸ್ಯಾಂ ಪ್ರಯತಮಾನಾಯಾಂ ಯೇ ಸ್ಯುಸ್ತತ್ಪರಿಪಂಥಿನಃ|

12090008c ದಸ್ಯವಸ್ತದ್ವಧಾಯೇಹ ಬ್ರಹ್ಮಾ ಕ್ಷತ್ರಮಥಾಸೃಜತ್||

ಅಧ್ಯಯನ-ಅಧ್ಯಾಪನಗಳಿಗೆ ಮತ್ತು ವೇದೋಕ್ತ ಯಜ್ಞ-ಯಾಗಾದಿಗಳಿಗೆ ಬಾಧೆಯನ್ನುಂಟುಮಾಡುವವರೇ ದಸ್ಯುಗಳು. ದಸ್ಯುಗಳ ವಧೆಗಾಗಿಯೇ ಬ್ರಹ್ಮನು ಕ್ಷತ್ರಿಯರನ್ನು ಸೃಷ್ಟಿಸಿದ್ದಾನೆ.

12090009a ಶತ್ರೂನ್ ಜಹಿ ಪ್ರಜಾ ರಕ್ಷ ಯಜಸ್ವ ಕ್ರತುಭಿರ್ನೃಪ|

12090009c ಯುಧ್ಯಸ್ವ ಸಮರೇ ವೀರೋ ಭೂತ್ವಾ ಕೌರವನಂದನ||

ನೃಪ! ಕೌರವನಂದನ! ಶತ್ರುಗಳನ್ನು ಸಂಹರಿಸು. ಪ್ರಜೆಗಳನ್ನು ರಕ್ಷಿಸು. ಕ್ರತುಗಳನ್ನು ಯಾಜಿಸು. ವೀರನಾಗಿ ಸಮರದಲ್ಲಿ ಯುದ್ಧಮಾಡು.

12090010a ಸಂರಕ್ಷ್ಯಾನ್ ಪಾಲಯೇದ್ರಾಜಾ ಯಃ ಸ ರಾಜಾರ್ಯಕೃತ್ತಮಃ|

12090010c ಯೇ ಕೇ ಚಿತ್ತಾನ್ನ ರಕ್ಷಂತಿ ತೈರರ್ಥೋ ನಾಸ್ತಿ ಕಶ್ಚನ||

ಸಂರಕ್ಷಿಸಬೇಕಾದವರನ್ನು ಪಾಲಿಸುವ ರಾಜನು ರಾಜರಲ್ಲಿಯೇ ಆರ್ಯನೆನಿಸಿಕೊಳ್ಳುತ್ತಾನೆ. ರಕ್ಷಿಸಬೇಕಾದವರನ್ನು ರಕ್ಷಿಸದೇ ಇರುವ ರಾಜನಿಂದ ಜಗತ್ತಿಗೆ ಯಾವ ವಿಧವಾದ ಪ್ರಯೋಜನವೂ ಇಲ್ಲ.

12090011a ಸದೈವ ರಾಜ್ಞಾ ಬೋದ್ಧವ್ಯಂ[2] ಸರ್ವಲೋಕಾದ್ಯುಧಿಷ್ಠಿರ|

12090011c ತಸ್ಮಾದ್ಧೇತೋರ್ಹಿ ಭುಂಜೀತ ಮನುಷ್ಯಾನೇವ ಮಾನವಃ||

ಯುಧಿಷ್ಠಿರ! ರಾಜನಾದವನು ಸದೈವ ಸರ್ವಪ್ರಜೆಗಳನೂ ತಿಳಿದುಕೊಂಡಿರಬೇಕು. ಆ ಕಾರಣಕ್ಕಾಗಿಯೇ ಆ ಮಾನವಶ್ರೇಷ್ಠನು ಎಲ್ಲ ಕಡೆ ಗುಪ್ತಚಾರರನ್ನು ನಿಯಮಿಸಿಕೊಂಡಿರುತ್ತಾನೆ.

12090012a ಅಂತರೇಭ್ಯಃ ಪರಾನ್ರಕ್ಷನ್ ಪರೇಭ್ಯಃ ಪುನರಂತರಾನ್|

12090012c ಪರಾನ್ಪರೇಭ್ಯಃ ಸ್ವಾನ್ ಸ್ವೇಭ್ಯಃ ಸರ್ವಾನ್ಪಾಲಯ ನಿತ್ಯದಾ||

ನಿನ್ನ ಅಂತರಂಗದ ಮನುಷ್ಯರಿಂದ ಬಹಿರಂಗದ ಮನುಷ್ಯರನ್ನು ರಕ್ಷಿಸು. ಹೊರಗಡೆಯವರಿಂದ ಒಳಗಿನ ಜನರನ್ನು ರಕ್ಷಿಸು. ಬಹಿರಂಗದ ಪ್ರಜೆಗಳನ್ನು ಶತ್ರುಗಳಿಂದ ರಕ್ಷಿಸು. ಅಂತರಂಗದ ಜನರಲ್ಲಿಯೇ ಬೇಧ-ಭಾವವುಂಟಾಗಬಹುದು. ಹೀಗೆ ನಿನಗೆ ಸಂಬಂಧಿಸಿದ ಎಲ್ಲರನ್ನೂ ಮತ್ತು ಪ್ರಜೆಗಳನ್ನೂ ರಕ್ಷಿಸು.

12090013a ಆತ್ಮಾನಂ ಸರ್ವತೋ ರಕ್ಷನ್ರಾಜಾ ರಕ್ಷೇತ ಮೇದಿನೀಮ್|

12090013c ಆತ್ಮಮೂಲಮಿದಂ ಸರ್ವಮಾಹುರ್ಹಿ ವಿದುಷೋ ಜನಾಃ||

ರಾಜನಾದವನು ಮೊದಲು ಸರ್ವಪ್ರಕಾರಗಳಿಂದಲೂ ಆತ್ಮರಕ್ಷಣೆಯನ್ನು ಮಾಡಿಕೊಳ್ಳಬೇಕು. ನಂತರ ರಾಜ್ಯವನ್ನು ರಕ್ಷಿಸಬೇಕು. ಇವೆಲ್ಲವೂ ಆತ್ಮಮೂಲವಾಗಿವೆ ಎಂದು ವಿದ್ವಾಂಸರು ಹೇಳುತ್ತಾರೆ.

12090014a ಕಿಂ ಚಿದ್ರಂ ಕೋಽನುಷಂಗೋ ಮೇ ಕಿಂ ವಾಸ್ತ್ಯವಿನಿಪಾತಿತಮ್|

12090014c ಕುತೋ ಮಾಮಾಸ್ರವೇದ್ದೋಷ ಇತಿ ನಿತ್ಯಂ ವಿಚಿಂತಯೇತ್||

ನನ್ನಲ್ಲಿ ಯಾವ ದೌರ್ಬಲ್ಯಗಳಿವೆ? ನನ್ನಲ್ಲಿ ಯಾವರೀತಿಯ ದುರ್ವ್ಯಸನಗಳಿವೆ? ನನಗೆ ನಿಜವಾಗಿಯೂ ಪ್ರಜೆಗಳನ್ನು ರಕ್ಷಿಸುವುದರಲ್ಲಿ ಆಸಕ್ತಿಯಿದೆಯೇ? ಅದಕ್ಕೆ ಕಾರ್ಯವಿಧಾನವಿದೆಯೇ? ಇನ್ನೂ ದೂರವಾಗದೇ ಇರುವ ಯಾವ ವ್ಯಸನಗಳು ನನ್ನಲ್ಲಿವೆ? ಇವುಗಳ ಕುರಿತು ರಾಜನಾದವನು ನಿತ್ಯವೂ ಚಿಂತಿಸುತ್ತಿರಬೇಕು.

12090015a ಗುಪ್ತೈಶ್ಚಾರೈರನುಮತೈಃ ಪೃಥಿವೀಮನುಚಾರಯೇತ್|

12090015c ಸುನೀತಂ ಯದಿ ಮೇ ವೃತ್ತಂ ಪ್ರಶಂಸಂತಿ ನ ವಾ ಪುನಃ|

12090015e ಕಚ್ಚಿದ್ರೋಚೇಜ್ಜನಪದೇ ಕಚ್ಚಿದ್ರಾಷ್ಟ್ರೇ ಚ ಮೇ ಯಶಃ||

“ನಾನು ನಡೆಸಿರುವ ವ್ಯವವಹಾರಗಳನ್ನು ಜನರು ಪುನಃ ಪುನಃ ಪ್ರಶಂಸಿಸುತ್ತಿರುವರೇ? ಕೆಲವು ಜನಪದಗಳಲ್ಲಿ ಮಾತ್ರ ಜನರು ನನ್ನನ್ನು ಪ್ರಶಂಸಿಸುತ್ತಾರೆಯೇ? ಅಥವಾ ರಾಷ್ಟ್ರಾದ್ಯಂತ ಜನರು ನನ್ನನ್ನು ಬಯಸುತ್ತಾರೆಯೇ?” ಎನ್ನುವುದನ್ನು ತಿಳಿದುಕೊಳ್ಳಲು ರಾಜನಾದವನು ವಿಶ್ವಾಸಪಾತ್ರ ಗುಪ್ತಚಾರರನ್ನು ಭೂಮಂಡಲದ ಎಲ್ಲಕಡೆ ಕಳುಹಿಸಬೇಕು.

12090016a ಧರ್ಮಜ್ಞಾನಾಂ ಧೃತಿಮತಾಂ ಸಂಗ್ರಾಮೇಷ್ವಪಲಾಯಿನಾಮ್|

12090016c ರಾಷ್ಟ್ರಂ ಚ ಯೇಽನುಜೀವಂತಿ ಯೇ ಚ ರಾಜ್ಞೋಽನುಜೀವಿನಃ||

12090017a ಅಮಾತ್ಯಾನಾಂ ಚ ಸರ್ವೇಷಾಂ ಮಧ್ಯಸ್ಥಾನಾಂ ಚ ಸರ್ವಶಃ|

12090017c ಯೇ ಚ ತ್ವಾಭಿಪ್ರಶಂಸೇಯುರ್ನಿಂದೇಯುರಥ ವಾ ಪುನಃ|

12090017e ಸರ್ವಾನ್ಸುಪರಿಣೀತಾಂಸ್ತಾನ್ಕಾರಯೇತ ಯುಧಿಷ್ಠಿರ||

ಯುಧಿಷ್ಠಿರ! ನಿನ್ನ ಪ್ರಶಂಸೆಮಾಡುವ ಮತ್ತು ನಿಂದನೆಯನ್ನು ಮಾಡುವ ಎಲ್ಲ ಧರ್ಮಜ್ಞರನ್ನೂ, ಧೈರ್ಯಶಾಲಿಗಳನ್ನೂ, ಸಂಗ್ರಾಮದಲ್ಲಿ ಪಲಾಯನಮಾಡದಿರುವವರನ್ನೂ, ನಿನ್ನ ರಾಷ್ಟ್ರದಲ್ಲಿಯೇ ಉಪಜೀವನವನ್ನು ನಡೆಸುತ್ತಿರುವವರನ್ನೂ, ರಾಜನನ್ನೇ ಆಶ್ರಯಿಸಿ ಜೀವಿಸಿರುವವರನ್ನೂ, ಅಮಾತ್ಯರನ್ನೂ, ಮಧ್ಯಸ್ಥರನ್ನೂ – ಎಲ್ಲರನ್ನೂ ನೀನು ಯಥಾಯೋಗ್ಯವಾಗಿ ಸತ್ಕರಿಸಬೇಕು.

12090018a ಏಕಾಂತೇನ ಹಿ ಸರ್ವೇಷಾಂ ನ ಶಕ್ಯಂ ತಾತ ರೋಚಿತುಮ್|

12090018c ಮಿತ್ರಾಮಿತ್ರಮಥೋ ಮಧ್ಯಂ ಸರ್ವಭೂತೇಷು ಭಾರತ||

ಅಯ್ಯಾ! ಭಾರತ! ಒಬ್ಬನೇ ಎಲ್ಲರಿಗೂ ಇಷ್ಟವಾಗಲು ಶಕ್ಯವಿಲ್ಲ. ಎಲ್ಲ ಜೀವಿಗಳಿಗೂ ಮಿತ್ರ, ಅಮಿತ್ರ ಮತ್ತು ಮಧ್ಯಸ್ಥ ಎನ್ನುವವರು ಇದ್ದೇ ಇರುತ್ತಾರೆ.

12090019a ತುಲ್ಯಬಾಹುಬಲಾನಾಂ ಚ ಗುಣೈರಪಿ ನಿಷೇವಿನಾಮ್|

12090019c ಕಥಂ ಸ್ಯಾದಧಿಕಃ ಕಶ್ಚಿತ್ಸ ತು ಭುಂಜೀತ ಮಾನವಾನ್||

ಬಾಹುಬಲದಲ್ಲಿ ಸಮಾನನಾಗಿದ್ದರೂ ಮತ್ತು ಗುಣಗಳು ಒಂದೇ ಆಗಿದ್ದರೂ ಒಬ್ಬರು ಮಾತ್ರ ಹೇಗೆ ಎಲ್ಲರನ್ನೂ ಶಾಸನ ಮಾಡುತ್ತಾನೆ?

12090020a ಯೇ ಚರಾ ಹ್ಯಚರಾನದ್ಯುರದಂಷ್ಟ್ರಾನ್ದಂಷ್ಟ್ರಿಣಸ್ತಥಾ|

12090020c ಆಶೀವಿಷಾ ಇವ ಕ್ರುದ್ಧಾ ಭುಜಗಾ ಭುಜಗಾನಿವ||

ಯಾವರೀತಿಯಲ್ಲಿ ಕೋಪಗೊಂಡ ವಿಷಸರ್ಪಗಳು ಇತರ ಚಿಕ್ಕ ಹಾವುಗಳನ್ನು ನುಂಗಿಹಾಕುತ್ತವೆಯೋ, ಚಲಿಸುವ ಪ್ರಾಣಿಗಳು ಚಲಿಸದಿರುವ ವಸ್ತುಗಳನ್ನು ನುಂಗಿಹಾಕುತ್ತವೆಯೋ, ಕೋರೆದಾಡೆಗಳಿರುವ ಪ್ರಾಣಿಗಳು ಕೋರೆದಾಡೆಗಳಿಲ್ಲದ ಪ್ರಾಣಿಗಳನ್ನು ತಿನ್ನುತ್ತವೆಯೋ ಹಾಗೆ ಪ್ರಬಲರಾದವರು ದುರ್ಬಲರಾದವರ ಮೇಲೆ ಅಧಿಕಾರವನ್ನು ನಡೆಸುತ್ತಾರೆ.

12090021a ಏತೇಭ್ಯಶ್ಚಾಪ್ರಮತ್ತಃ ಸ್ಯಾತ್ಸದಾ ಯತ್ತೋ ಯುಧಿಷ್ಠಿರ|

12090021c ಭಾರುಂಡಸದೃಶಾ ಹ್ಯೇತೇ ನಿಪತಂತಿ ಪ್ರಮಾದ್ಯತಃ||

ಯುಧಿಷ್ಠಿರ! ಪ್ರಯತ್ನಶೀಲ ರಾಜನು ಇವೆಲ್ಲವುಗಳಿಂದ ಸದಾ ಅಪ್ರಮತ್ತನಾಗಿರಬೇಕು. ರಾಜನು ಪ್ರಮಾದಕ್ಕೊಳಗಾದರೆ ಗಂಡಭೇರುಂಡ ಸಮಾನ ಶತ್ರುಗಳು ರಾಜನ ಮೇಲೆ ಆಕ್ರಮಣ ಮಾಡುತ್ತಾರೆ.

12090022a ಕಚ್ಚಿತ್ತೇ ವಣಿಜೋ ರಾಷ್ಟ್ರೇ ನೋದ್ವಿಜಂತೇ ಕರಾರ್ದಿತಾಃ|

12090022c ಕ್ರೀಣಂತೋ ಬಹು ವಾಲ್ಪೇನ ಕಾಂತಾರಕೃತನಿಶ್ರಮಾಃ||

ಕಾಡುಮೇಡುಗಳಲ್ಲಿ ಅಲೆದು ಶ್ರಮಪಟ್ಟು ದೊಡ್ಡ ಅಥವಾ ಅಲ್ಪ ಪ್ರಮಾಣದಲ್ಲಿ ಮಾರಾಟಮಾಡುವ ವಣಿಜರು ನಿನ್ನ ರಾಷ್ಟ್ರದಲ್ಲಿ ತೆರಿಗೆಯ ಭಾರದಿಂದ ಉದ್ವಿಗ್ನರಾಗುತ್ತಿಲ್ಲ ತಾನೇ?

12090023a ಕಚ್ಚಿತ್ಕೃಷಿಕರಾ ರಾಷ್ಟ್ರಂ ನ ಜಹತ್ಯತಿಪೀಡಿತಾಃ|

12090023c ಯೇ ವಹಂತಿ ಧುರಂ ರಾಜ್ಞಾಂ ಸಂಭರಂತೀತರಾನಪಿ||

ಕೃಷಿಕರು ಅತಿಯಾಗಿ ಪೀಡಿತರಾಗಿ ನಿನ್ನ ರಾಷ್ಟ್ರವನ್ನು ಬಿಟ್ಟು ಹೋಗುತ್ತಿಲ್ಲ ತಾನೇ? ಏಕೆಂದರೆ ಅವರು ರಾಜನ ಭಾರವನ್ನು ಹೊರುತ್ತಾರೆ. ಪ್ರಜೆಗಳನ್ನೂ ಪಾಲಿಸುತ್ತಾರೆ.

12090024a ಇತೋ ದತ್ತೇನ ಜೀವಂತಿ ದೇವಾಃ ಪಿತೃಗಣಾಸ್ತಥಾ|

12090024c ಮನುಷ್ಯೋರಗರಕ್ಷಾಂಸಿ ವಯಾಂಸಿ ಪಶವಸ್ತಥಾ||

ಇವರು ನೀಡುವ ಧಾನ್ಯಾದಿಗಳಿಂದಲೇ ದೇವತೆಗಳು, ಪಿತೃಗಳು, ಮನುಷ್ಯರು, ಉರಗ-ರಾಕ್ಷಸರು, ಪಶು-ಪಕ್ಷಿಗಳು ಎಲ್ಲವೂ ಜೀವನವನ್ನು ನಡೆಸುತ್ತವೆ.

12090025a ಏಷಾ ತೇ ರಾಷ್ಟ್ರವೃತ್ತಿಶ್ಚ ರಾಷ್ಟ್ರಗುಪ್ತಿಶ್ಚ ಭಾರತ|

12090025c ಏತಮೇವಾರ್ಥಮಾಶ್ರಿತ್ಯ ಭೂಯೋ ವಕ್ಷ್ಯಾಮಿ ಪಾಂಡವ||

ಭಾರತ! ಪಾಂಡವ! ಇವು ರಾಷ್ಟ್ರದಲ್ಲಿ ನಡೆದುಕೊಳ್ಳುವ ಮತ್ತು ರಾಷ್ಟ್ರವನ್ನು ರಕ್ಷಿಸುವ ವಿಧಾನಗಳು. ಇದಕ್ಕೆ ಸಂಬಂಧಿಸಿದಂತೆ ಮುಂದೆಯೂ ಹೇಳುತ್ತೇನೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ರಾಷ್ಟ್ರಗುಪ್ತೌ ನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ರಾಷ್ಟ್ರಗುಪ್ತ ಎನ್ನುವ ತೊಂಭತ್ತನೇ ಅಧ್ಯಾಯವು.

Lavender Flowers Isolated On White Background Stock Photo, Picture ...

[1] ಏಕೆಂದರೆ ಬ್ರಾಹ್ಮಣರು ಭೋಗಾಸಕ್ತರಲ್ಲ. ಜೀವನದ ವಿಷಯವಾಗಿಯೂ ಅವರು ಹೆಚ್ಚು ಯೋಚಿಸುವವರಲ್ಲ.

[2] ಯೋದ್ಧವ್ಯಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.