ಶಾಂತಿ ಪರ್ವ: ರಾಜಧರ್ಮ ಪರ್ವ

೮೯

ಪ್ರಜೆಗಳಿಂದ ತೆರಿಗೆಯನ್ನು ಪಡೆದುಕೊಳ್ಳುವ ವಿಧಾನಗಳು (1-29).

12089001 ಯುಧಿಷ್ಠಿರ ಉವಾಚ|

12089001a ಯದಾ ರಾಜಾ ಸಮರ್ಥೋಽಪಿ ಕೋಶಾರ್ಥೀ ಸ್ಯಾನ್ಮಹಾಮತೇ|

12089001c ಕಥಂ ಪ್ರವರ್ತೇತ ತದಾ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಮತೇ! ಸಮರ್ಥನಾಗಿದ್ದರೂ ಕೋಶಾರ್ಥಿಯಾದ ರಾಜನು ಹೇಗೆ ತನ್ನ ಕೋಶವನ್ನು ವೃದ್ಧಿಗೊಳಿಸಿಕೊಳ್ಳಬಲ್ಲನು ಎನ್ನುವುದನ್ನು ನನಗೆ ಹೇಳು.”

12089002 ಭೀಷ್ಮ ಉವಾಚ|

12089002a ಯಥಾದೇಶಂ ಯಥಾಕಾಲಮಪಿ ಚೈವ ಯಥಾಬಲಮ್|

12089002c ಅನುಶಿಷ್ಯಾತ್ಪ್ರಜಾ ರಾಜಾ ಧರ್ಮಾರ್ಥೀ ತದ್ಧಿತೇ ರತಃ||

ಭೀಷ್ಮನು ಹೇಳಿದನು: “ಧರ್ಮಾರ್ಥಿಯಾದ ರಾಜನು ದೇಶ-ಕಾಲಗಳಿಗನುಗುಣವಾಗಿ ಯಥಾಶಕ್ತಿಯಾಗಿ ಅವರ ಹಿತದಲ್ಲಿಯೇ ನಿರತನಾಗಿ ಪ್ರಜೆಗಳ ಅನುಶಾಸನವನ್ನು ಮಾಡಬೇಕು.

12089003a ಯಥಾ ತಾಸಾಂ ಚ ಮನ್ಯೇತ ಶ್ರೇಯ ಆತ್ಮನ ಏವ ಚ|

12089003c ತಥಾ ಧರ್ಮ್ಯಾಣಿ ಸರ್ವಾಣಿ ರಾಜಾ ರಾಷ್ಟ್ರೇ ಪ್ರವರ್ತಯೇತ್||

ಪ್ರಜೆಗಳ ಶ್ರೇಯಸ್ಸೇ ತನ್ನ ಶ್ರೇಯಸ್ಸೆಂದು ತಿಳಿದು ರಾಜನು ರಾಷ್ಟ್ರದ ಎಲ್ಲ ವಿಷಯಗಳಲ್ಲಿ ಧರ್ಮದಿಂದಲೇ ನಡೆದುಕೊಳ್ಳಬೇಕು.

12089004a ಮಧುದೋಹಂ ದುಹೇದ್ರಾಷ್ಟ್ರಂ ಭ್ರಮರಾನ್ನ ವಿಪಾತಯೇತ್|

12089004c ವತ್ಸಾಪೇಕ್ಷೀ ದುಹೇಚ್ಚೈವ ಸ್ತನಾಂಶ್ಚ ನ ವಿಕುಟ್ಟಯೇತ್||

ಹೂವಿಗೆ ಹಾನಿಯನ್ನುಂಟುಮಾಡದೇ ದುಂಬಿಗಳು ಮಧುವನ್ನು ಹೇಗೆ ಹೀರಿಕೊಳ್ಳುತ್ತವೆಯೋ ಹಾಗೆ ರಾಷ್ಟ್ರದವರಿಗೆ ಸ್ವಲ್ಪವೂ ತೊಂದರೆಯಾಗದಂತೆ ಕರವನ್ನು ತೆಗೆದುಕೊಳ್ಳಬೇಕು. ಕರುವಿಗೆ ಹಾಲನ್ನು ಬಿಟ್ಟು ಮತ್ತು ಕೆಚ್ಚಲಿಗೆ ಘಾಸಿಯಾಗದಂತೆ ಹಾಲನ್ನು ಕರೆಯುವಂತೆ ರಾಜನು ತೆರಿಗೆಯನ್ನು ಪಡೆದುಕೊಳ್ಳಬೇಕು.

12089005a ಜಲೌಕಾವತ್ಪಿಬೇದ್ರಾಷ್ಟ್ರಂ ಮೃದುನೈವ ನರಾಧಿಪ|

12089005c ವ್ಯಾಘ್ರೀವ ಚ ಹರೇತ್ಪುತ್ರಮದಷ್ಟ್ವಾ ಮಾ ಪತೇದಿತಿ||

ನೀರಿನಲ್ಲಿರುವ ಜಿಗಣೆಯು ಮನುಷ್ಯನಿಗೆ ತಿಳಿಯದಂತೆಯೇ ಅವನ ರಕ್ತವನ್ನು ಹೀರಿಕೊಳ್ಳುವಂತೆ ನರಾಧಿಪನು ಮೃದುವಾಗಿಯೇ ರಾಷ್ಟ್ರದ ಐಶ್ವರ್ಯವನ್ನು ಸಂಗ್ರಹಿಸಬೇಕು. ಹೇಗೆ ತಾಯಿ ಹುಲಿಯು ತನ್ನ ಮರಿಯನ್ನು ಅದಕ್ಕೆ ಗಾಯವಾಗದ ರೀತಿಯಲ್ಲಿ ತನ್ನ ಹಲ್ಲಿನಿಂದಲೇ ಕಚ್ಚಿಕೊಂಡು ಹೋಗುತ್ತದೆಯೋ ಹಾಗೆ ರಾಜನು ಪ್ರಜೆಗಳಿಗೆ ಪೀಡೆಯಾಗದ ರೀತಿಯಲ್ಲಿ ಕರವನ್ನು ಪಡೆದುಕೊಳ್ಳಬೇಕು.

12089006a ಅಲ್ಪೇನಾಲ್ಪೇನ ದೇಯೇನ ವರ್ಧಮಾನಂ ಪ್ರದಾಪಯೇತ್|

12089006c ತತೋ ಭೂಯಸ್ತತೋ ಭೂಯಃ ಕಾಮಂ ವೃದ್ಧಿಂ ಸಮಾಚರೇತ್||

ಮೊದಲು ಅಲ್ಪ ತೆರಿಗೆಯನ್ನು ಹಾಕಿ ನಂತರ ಸ್ವಲ್ವ ಸ್ವಲ್ಪವೇ ಅದನ್ನು ಹೆಚ್ಚಿಸಿ ಪಡೆದುಕೊಳ್ಳಬೇಕು. ಹೀಗೆ ಆಗೊಮ್ಮೆ-ಈಗೊಮ್ಮೆ ತೆರಿಗೆಯನ್ನು ಹೆಚ್ಚಿಸಿ ಕ್ರಮೇಣವಾಗಿ ಕೋಶವನ್ನು ಹೆಚ್ಚಿಸಬೇಕು. ಆದರೆ ಕರವು ಹೆಚ್ಚಾಯಿತೆಂದು ಪ್ರಜೆಗಳು ಭಾವಿಸದಂತೆ ನೋಡಿಕೊಳ್ಳಬೇಕು.

12089007a ದಮಯನ್ನಿವ ದಮ್ಯಾನಾಂ ಶಶ್ವದ್ಭಾರಂ ಪ್ರವರ್ಧಯೇತ್|

12089007c ಮೃದುಪೂರ್ವಂ ಪ್ರಯತ್ನೇನ ಪಾಶಾನಭ್ಯವಹಾರಯೇತ್||

ಸ್ವಲ್ಪ ಸ್ವಲ್ಪವಾಗಿಯೇ ಹೊರೆಯನ್ನು ಹೆಚ್ಚಿಸಿ ಹೋರಿಗೆ ಭಾರಹೊರುವುದನ್ನು ಅಭ್ಯಾಸಮಾಡಿಸುವಂತೆ ತೆರಿಗೆಯ ಪಾಶವನ್ನು ಪ್ರಜೆಗಳ ಕೊರಳಿಗೆ ಹಾಕಿ ಅನಂತರ ಕಣಿಕೆಯನ್ನು ಸ್ವಲ್ಪ-ಸ್ವಲ್ಪವಾಗಿ ಬಿಗಿಯುತ್ತಾ ಹೋಗಬೇಕು. ಆದರೆ ಸಂಪೂರ್ಣವಾಗಿ ಬಿಗಿದು ಜೀವಕ್ಕೇ ಘಾತಿಯನ್ನುಂಟುಮಾಡಬಾರದು. ಅತಿಯಾಗಿ ಬಿಗಿಯಬಾರದು.

12089008a ಸಕೃತ್ಪಾಶಾವಕೀರ್ಣಾಸ್ತೇ ನ ಭವಿಷ್ಯಂತಿ ದುರ್ದಮಾಃ|

12089008c ಉಚಿತೇನೈವ ಭೋಕ್ತವ್ಯಾಸ್ತೇ ಭವಿಷ್ಯಂತಿ ಯತ್ನತಃ||

ಒಂದೇ ಬಾರಿ ಅಧಿಕ ತೆರಿಗೆಯ ಪಾಶವನ್ನು ಕುತ್ತಿಗೆಗೆ ಬಿಗಿದು ಬಿಟ್ಟರೆ ಪ್ರಜೆಗಳು ಉಳಿಯುವುದೇ ಇಲ್ಲ. ಅವರನ್ನು ಒಂದೇ ಬಾರಿ ಬಗ್ಗಿಸಲೂ ಆಗುವುದಿಲ್ಲ. ಆದುದರಿಂದ ಉಚಿತ ರೀತಿಯಲ್ಲಿ ಸ್ವಲ್ಪ-ಸ್ವಲ್ಪವಾಗಿ ತೆರಿಗೆಯನ್ನು ಹಾಕಿ ಪ್ರಯತ್ನಪೂರ್ವಕವಾಗಿ ಪ್ರಜೆಗಳನ್ನು ಉಪಭುಂಜಿಸಬೇಕು.

12089009a ತಸ್ಮಾತ್ಸರ್ವಸಮಾರಂಭೋ ದುರ್ಲಭಃ ಪುರುಷವ್ರಜಃ|

12089009c ಯಥಾಮುಖ್ಯಾನ್ಸಾಂತ್ವಯಿತ್ವಾ ಭೋಕ್ತವ್ಯ ಇತರೋ ಜನಃ||

ರಾಜನು ಪ್ರತಿಪುರುಷನನ್ನೂ ಒಂದೇ ಬಾರಿಗೆ ತೆರಿಗೆಗೆ ಒಳಪಡಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಪ್ರಜೆಗಳಲ್ಲಿ ಮುಖ್ಯ-ಮುಖ್ಯರಾದವರನ್ನು ಕರೆಯಿಸಿ ಸಾಂತ್ವನವಚನಗಳಿಂದ ಅವರನ್ನು ತನ್ನವರನ್ನಾಗಿ ಮಾಡಿಕೊಳ್ಳಬೇಕು. ಅವರಿಂದ ಸ್ವಲ್ಪ-ಸ್ವಲ್ಪವೇ ಕರವನ್ನು ತೆಗೆದುಕೊಳ್ಳಲು ಪ್ರಾರಂಭಿಸಬೇಕು. ಮುಖ್ಯಸ್ಥರು ಕರಕೊಡಲು ಪ್ರಾರಂಭಿಸಿದರೆ ಇತರ ಜನರೂ ಕರಕೊಡಲು ಪ್ರಾರಂಭಿಸುತ್ತಾರೆ. ಹೀಗೆ ರಾಜನು ಇತರ ಜನರನ್ನೂ ಭುಂಜಿಸಬೇಕು.

12089010a ತತಸ್ತಾನ್ಭೇದಯಿತ್ವಾಥ ಪರಸ್ಪರವಿವಕ್ಷಿತಾನ್|

12089010c ಭುಂಜೀತ ಸಾಂತ್ವಯಿತ್ವೈವ ಯಥಾಸುಖಮಯತ್ನತಃ||

ಪರಸ್ಪರ ವಿಚಾರಮಾಡುವವರಲ್ಲಿ ಭೇದವನ್ನುಂಟುಮಾಡಿ ಇಬ್ಬರೂ ತನ್ನನ್ನೇ ಅವಲಂಬಿಸಿರುವವಂತೆ ಮಾಡಿಕೊಂಡು ಇಬ್ಬರನ್ನೂ ಸಮಾಧಾನಗೊಳಿಸುತ್ತಾ ಯಾವ ಪ್ರಯತ್ನವೂ ಇಲ್ಲದೇ ಸುಲಭದಿಂದ ಉಪಭೋಗಿಸಬೇಕು.

12089011a ನ ಚಾಸ್ಥಾನೇ ನ ಚಾಕಾಲೇ ಕರಾನೇಭ್ಯೋಽನುಪಾತಯೇತ್|

12089011c ಆನುಪೂರ್ವ್ಯೇಣ ಸಾಂತ್ವೇನ ಯಥಾಕಾಲಂ ಯಥಾವಿಧಿ||

ಕಾರಣವಿಲ್ಲದೇ ಅಕಾಲದಲ್ಲಿ ತೆರಿಗೆಯನ್ನು ಹೇರಬಾರದು. ತೆರಿಗೆಯ ಕಾರಣವನ್ನು ಮೊದಲೇ ತಿಳಿಸಿ ಯಥಾಕಾಲದಲ್ಲಿ ಯಥಾವಿಧಿಯಲ್ಲಿ ಕರವನ್ನು ಪಡೆದುಕೊಳ್ಳಬೇಕು.

12089012a ಉಪಾಯಾನ್ಪ್ರಬ್ರವೀಮ್ಯೇತಾನ್ನ ಮೇ ಮಾಯಾ ವಿವಕ್ಷಿತಾ|

12089012c ಅನುಪಾಯೇನ ದಮಯನ್ಪ್ರಕೋಪಯತಿ ವಾಜಿನಃ||

ಈ ಉತ್ತಮ ಉಪಾಯಗಳನ್ನು ನಾನು ನಿನಗೆ ಹೇಳುತ್ತಿದ್ದೇನೆ. ಏಕೆಂದರೆ ಉಪಾಯವಿಲ್ಲದೇ ಕುದುರೆಯನ್ನು ಹತ್ತಲು ಹೋದರೆ ಅದು ಕೋಪಗೊಳ್ಳುತ್ತದೆ. ಆದುದರಿಂದ ಉಪಾಯದಿಂದ ಕುದುರೆಯನ್ನು ಹೇಗೋ ಹಾಗೆ ಪ್ರಜೆಗಳನ್ನೂ ಪಳಗಿಸಿ ನಂತರ ಕರವನ್ನು ಹೇರಬೇಕು.

12089013a ಪಾನಾಗಾರಾಣಿ ವೇಶಾಶ್ಚ ವೇಶಪ್ರಾಪಣಿಕಾಸ್ತಥಾ|

12089013c ಕುಶೀಲವಾಃ ಸಕಿತವಾ ಯೇ ಚಾನ್ಯೇ ಕೇ ಚಿದೀದೃಶಾಃ||

12089014a ನಿಯಮ್ಯಾಃ ಸರ್ವ ಏವೈತೇ ಯೇ ರಾಷ್ಟ್ರಸ್ಯೋಪಘಾತಕಾಃ|

12089014c ಏತೇ ರಾಷ್ಟ್ರೇ ಹಿ ತಿಷ್ಠಂತೋ ಬಾಧಂತೇ ಭದ್ರಿಕಾಃ ಪ್ರಜಾಃ||

ಮದ್ಯದ ಅಂಗಡಿಗಳನ್ನಿಟ್ಟಿರುವವರು, ವೇಶ್ಯೆಯರು, ವೇಶ್ಯೆಯರ ವ್ಯಾಪಾರದಲ್ಲಿ ತೊಡಗಿರುವವರು, ವಿಟರು, ಗಾಯಕರು, ಜೂಜುಕೋರರು – ಇವೇ ಮೊದಲಾದ ಅನೇಕರು ರಾಷ್ಟ್ರಕ್ಕೆ ಹಾನಿಯನ್ನುಮಾಡುವರು. ಅವರೆಲ್ಲರನ್ನೂ ನಿಗ್ರಹಿಸಬೇಕು. ಅವರು ರಾಷ್ಟ್ರದಲ್ಲಿ ಸನ್ಮಾರ್ಗದಲ್ಲಿರುವ ಪ್ರಜೆಗಳನ್ನು ಬಾಧಿಸುತ್ತಿರುತ್ತಾರೆ.

12089015a ನ ಕೇನ ಚಿದ್ಯಾಚಿತವ್ಯಃ ಕಶ್ಚಿತ್ಕಿಂ ಚಿದನಾಪದಿ|

12089015c ಇತಿ ವ್ಯವಸ್ಥಾ ಭೂತಾನಾಂ ಪುರಸ್ತಾನ್ಮನುನಾ ಕೃತಾ||

ಆಪತ್ಕಾಲವೊಂದನ್ನು ಬಿಟ್ಟು ಬೇರೆ ಸಂದರ್ಭಗಳಲ್ಲಿ ಯಾರು ಯಾರಿಂದಲೂ ಏನನ್ನೂ ಯಾಜಿಸಬಾರದೆಂದು ಹಿಂದೆಯೇ ಮನುವು ಪ್ರಾಣಿಗಳಿಗೆ ವ್ಯವಸ್ಥೆಮಾಡಿದ್ದಾನೆ.

12089016a ಸರ್ವೇ ತಥಾ ನ ಜೀವೇಯುರ್ನ ಕುರ್ಯುಃ ಕರ್ಮ ಚೇದಿಹ|

12089016c ಸರ್ವ ಏವ ತ್ರಯೋ ಲೋಕಾ ನ ಭವೇಯುರಸಂಶಯಮ್||

ಇಲ್ಲವಾದರೆ ಎಲ್ಲ ಜನರೂ ಭಿಕ್ಷೆಯಿಂದಲೇ ಜೀವನವನ್ನು ನಡೆಸುತ್ತಿದ್ದರು. ಯಾರೂ ಕರ್ಮಗಳನ್ನು ಮಾಡುತ್ತಿರಲಿಲ್ಲ. ಈ ಮೂರುಲೋಕಗಳೆಲ್ಲವೂ ನಿಸ್ಸಂಶಯವಾಗಿ ವಿನಾಶಹೊಂದುತ್ತಿದ್ದವು.

12089017a ಪ್ರಭುರ್ನಿಯಮನೇ ರಾಜಾ ಯ ಏತಾನ್ನ ನಿಯಚ್ಚತಿ|

12089017c ಭುಂಕ್ತೇ ಸ ತಸ್ಯ ಪಾಪಸ್ಯ ಚತುರ್ಭಾಗಮಿತಿ ಶ್ರುತಿಃ|

[1]12089017e ತಥಾ ಕೃತಸ್ಯ ಧರ್ಮಸ್ಯ ಚತುರ್ಭಾಗಮುಪಾಶ್ನುತೇ||

ಮದ್ಯದಂಗಡಿ ಇಟ್ಟವರು ಮೊದಲಾದವರನ್ನು ನಿಯಂತ್ರಿಸಲು ಸಮರ್ಥನಾಗಿದ್ದರೂ ನಿಯಂತಿಸದೇ ಇರುವ ರಾಜನು ಅವರು ಮಾಡುವ ಪಾಪದ ನಾಲ್ಕನೆಯ ಒಂದು ಭಾಗವನ್ನು ಪಡೆದುಕೊಳ್ಳುತ್ತಾನೆಂದು ಶ್ರುತಿಗಳು ಹೇಳುತ್ತವೆ. ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ರಾಜನು ಅವರ ಧರ್ಮದ ನಾಲ್ಕನೆಯ ಒಂದು ಭಾಗವನ್ನು ಪಡೆದುಕೊಳ್ಳುತ್ತಾನೆ.

12089018a ಸ್ಥಾನಾನ್ಯೇತಾನಿ ಸಂಗಮ್ಯ ಪ್ರಸಂಗೇ ಭೂತಿನಾಶನಃ|

12089018c ಕಾಮಪ್ರಸಕ್ತಃ ಪುರುಷಃ ಕಿಮಕಾರ್ಯಂ ವಿವರ್ಜಯೇತ್||

ಮದ್ಯದಂಗಡಿ, ವೇಶ್ಯಾವಾಟಿಗಳು, ಜೂಜುಕಟ್ಟೆಗಳು – ಇವು ದಿನ-ದಿನಕ್ಕೂ ಹೆಚ್ಚದಂತೆ ಮತ್ತು ಕಡಿಮೆಯಾಗುವಂತೆ ರಾಜನು ನೋಡಿಕೊಳ್ಳಬೇಕು. ಸ್ತ್ರೀಪ್ರಸಂಗಗಳು, ಜೂಜು ಇವೆಲ್ಲಾ ಐಶ್ವರ್ಯಯ-ಕೀರ್ತಿಗಳನ್ನು ನಾಶಮಾಡುತ್ತವೆ. ಕಾಮಪ್ರಸಕ್ತನಾದ ಪುರುಷನು ಹೇಗೆತಾನೇ ಮಾಡಬಾರದವುಗಳನ್ನು ತ್ಯಜಿಸಿಯಾನು?

[2]12089019a ಆಪದ್ಯೇವ ತು ಯಾಚೇರನ್ಯೇಷಾಂ ನಾಸ್ತಿ ಪರಿಗ್ರಹಃ|

12089019c ದಾತವ್ಯಂ ಧರ್ಮತಸ್ತೇಭ್ಯಸ್ತ್ವನುಕ್ರೋಶಾದ್ದಯಾರ್ಥಿನಾ||

ಪರಿಗ್ರಹಿಸಲು ಅಧಿಕಾರವಿಲ್ಲದಿರುವವರು ಆಪತ್ತಿನಲ್ಲಿ ಯಾಚಿಸುತ್ತಾರೆ. ದಯಾರ್ಥಿಗಳಾದ ಅಂಥವರಿಗೆ ಅನುಕ್ರೋಶದಿಂದ ಧರ್ಮತಃ ನೀಡಬೇಕು.

12089020a ಮಾ ತೇ ರಾಷ್ಟ್ರೇ ಯಾಚನಕಾ ಮಾ ತೇ ಭೂಯುಶ್ಚ ದಸ್ಯವಃ|

12089020c ಇಷ್ಟಾದಾತಾರ ಏವೈತೇ ನೈತೇ ಭೂತಸ್ಯ ಭಾವಕಾಃ||

ನಿನ್ನ ರಾಷ್ಟ್ರದಲ್ಲಿ ಯಾಚಕರಿಲ್ಲದಿರಲಿ. ಕಳ್ಳರೂ ಇಲ್ಲದಿರಲಿ. ಇವರು ಪ್ರಜೆಗಳ ಧನವನ್ನು ಅಪಹರಿಸುವರೇ ಹೊರತು ಪ್ರಜೆಗಳ ಐಶ್ವರ್ಯವನ್ನು ವೃದ್ಧಿಸುವುದಿಲ್ಲ.

12089021a ಯೇ ಭೂತಾನ್ಯನುಗೃಹ್ಣಂತಿ ವರ್ಧಯಂತಿ ಚ ಯೇ ಪ್ರಜಾಃ|

12089021c ತೇ ತೇ ರಾಷ್ಟ್ರೇ ಪ್ರವರ್ತಂತಾಂ ಮಾ ಭೂತಾನಾಮಭಾವಕಾಃ||

ಇರುವವುಗಳಿಗೆ ಅನುಗ್ರಹಿಸುವ ಮತ್ತು ಪ್ರಜೆಗಳ ಅಭಿವೃದ್ಧಿಯನ್ನು ಮಾಡುವವರು ನಿನ್ನ ರಾಷ್ಟ್ರದಲ್ಲಿರಲಿ. ಇರುವವುಗಳು ನಾಶಗೊಳಿಸುವವರು ನಿನ್ನ ರಾಷ್ಟ್ರದಲ್ಲಿ ಇಲ್ಲದಿರಲಿ.

12089022a ದಂಡ್ಯಾಸ್ತೇ ಚ ಮಹಾರಾಜ ಧನಾದಾನಪ್ರಯೋಜನಾಃ|

12089022c ಪ್ರಯೋಗಂ ಕಾರಯೇಯುಸ್ತಾನ್ಯಥಾ ಬಲಿಕರಾಂಸ್ತಥಾ||

ಮಹಾರಾಜ! ಉಚಿತವಾದುದಕ್ಕಿಂತಲೂ ಅಧಿಕ ತೆರಿಗೆಯನ್ನು ತೆಗೆದುಕೊಳ್ಳುವ ಅಧಿಕಾರಿಗಳನ್ನು ನೀನು ಶಿಕ್ಷಿಸಬೇಕು. ಹಾಗೆ ಮಾಡದಿದ್ದರೆ ಇತರ ಅಧಿಕಾರಿಗಳೂ ಅಧಿಕ ತೆರಿಗೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು.

12089023a ಕೃಷಿಗೋರಕ್ಷ್ಯವಾಣಿಜ್ಯಂ ಯಚ್ಚಾನ್ಯತ್ಕಿಂ ಚಿದೀದೃಶಮ್|

12089023c ಪುರುಷೈಃ ಕಾರಯೇತ್ಕರ್ಮ ಬಹುಭಿಃ ಸಹ ಕರ್ಮಿಭಿಃ||

ಕೃಷಿ, ಗೋರಕ್ಷಣೆ, ವಾಣಿಜ್ಯ ಇವೇ ಮೊದಲಾದವುಗಳನ್ನು ಅನೇಕ ಕುಶಲ ಪುರುಷರಿಂದ ಮಾಡಿಸಿಕೊಳ್ಳಬೇಕು.

12089024a ನರಶ್ಚೇತ್ಕೃಷಿಗೋರಕ್ಷ್ಯಂ ವಾಣಿಜ್ಯಂ ಚಾಪ್ಯನುಷ್ಠಿತಃ|

12089024c ಸಂಶಯಂ ಲಭತೇ ಕಿಂ ಚಿತ್ತೇನ ರಾಜಾ ವಿಗರ್ಹ್ಯತೇ||

ಕೃಷಿ, ಗೋಪಾಲನೆ ಮತ್ತು ವಾಣಿಜ್ಯಗಳಲ್ಲಿ ತೊಡಗಿರುವವರು ಕಳ್ಳಕಾಕರ ಪೀಡೆಗೆ ಒಳಗಾದಾಗ ಅವರಿಗೆ ಸರಿಯಾದ ರಕ್ಷಣೆಯನ್ನು ನೀಡದ ರಾಜನೇ ನಿಂದನೆಗೊಳಗಾಗುತ್ತಾನೆ.

12089025a ಧನಿನಃ ಪೂಜಯೇನ್ನಿತ್ಯಂ ಯಾನಾಚ್ಚಾದನಭೋಜನೈಃ|

12089025c ವಕ್ತವ್ಯಾಶ್ಚಾನುಗೃಹ್ಣೀಧ್ವಂ ಪೂಜಾಃ ಸಹ ಮಯೇತಿ ಹ||

ಧನಿಕರನ್ನು ನಿತ್ಯವೂ ವಾಹನ, ತೊಡುಗೆ, ಮತ್ತು ಭೋಜನಗಳೊಂದಿಗೆ ಸತ್ಕರಿಸಬೇಕು. ನನ್ನೊಡನೆ ನನ್ನ ಪ್ರಜೆಗಳನ್ನು ಕೃಪಾದೃಷ್ಟಿಯಿಂದ ಕಾಣಿರಿ ಎಂದು ಅವರಿಗೆ ಹೇಳಬೇಕು.

12089026a ಅಂಗಮೇತನ್ಮಹದ್ರಾಜ್ಞಾಂ ಧನಿನೋ ನಾಮ ಭಾರತ|

12089026c ಕಕುದಂ ಸರ್ವಭೂತಾನಾಂ ಧನಸ್ಥೋ ನಾತ್ರ ಸಂಶಯಃ||

ಭಾರತ! ಧನಿಕರು ರಾಜ್ಯದ ಒಂದು ಮಹಾ ಅಂಗವಾಗಿರುತ್ತಾರೆ. ಧನಿಕನು ಸರ್ವಭೂತಗಳಿಗೂ ಶಿಖರಪ್ರಾಯ ಎನ್ನುವುದರಲ್ಲಿ ಸಂಶಯವಿಲ್ಲ.

12089027a ಪ್ರಾಜ್ಞಃ ಶೂರೋ ಧನಸ್ಥಶ್ಚ ಸ್ವಾಮೀ ಧಾರ್ಮಿಕ ಏವ ಚ|

12089027c ತಪಸ್ವೀ ಸತ್ಯವಾದೀ ಚ ಬುದ್ಧಿಮಾಂಶ್ಚಾಭಿರಕ್ಷತಿ||

ಪ್ರಾಜ್ಞ, ಶೂರ, ಧನಿಕ, ರಾಜ, ಧಾರ್ಮಿಕ, ತಪಸ್ವೀ, ಸತ್ಯವಾದೀ ಮತ್ತು ಬುದ್ಧಿವಂತ – ಇವರೆಲ್ಲರೂ ಸೇರಿ ಪ್ರಜೆಗಳನ್ನು ರಕ್ಷಿಸುತ್ತಾರೆ.

12089028a ತಸ್ಮಾದೇತೇಷು ಸರ್ವೇಷು ಪ್ರೀತಿಮಾನ್ಭವ ಪಾರ್ಥಿವ|

12089028c ಸತ್ಯಮಾರ್ಜವಮಕ್ರೋಧಮಾನೃಶಂಸ್ಯಂ ಚ ಪಾಲಯ||

ಪಾರ್ಥಿವ! ಆದುದರಿಂದ ಇವರೆಲ್ಲರ ಮೇಲೆ ಪ್ರೀತಿವಂತನಾಗಿರು. ಸತ್ಯ, ಸರಳತೆ, ಅಕ್ರೋಧ, ಅಹಿಂಸೆ ಇವುಗಳನ್ನು ಪಾಲಿಸು.

12089029a ಏವಂ ದಂಡಂ ಚ ಕೋಶಂ ಚ ಮಿತ್ರಂ ಭೂಮಿಂ ಚ ಲಪ್ಸ್ಯಸೇ|

12089029c ಸತ್ಯಾರ್ಜವಪರೋ ರಾಜನ್ಮಿತ್ರಕೋಶಸಮನ್ವಿತಃ||

ಹೀಗೆ ನೀನು ದಂಡಾಧಿಕಾರ, ಕೋಶ, ಮಿತ್ರರು, ಮತ್ತು ಭೂಮಿಯನ್ನು ಪಡೆದುಕೊಳ್ಳುತ್ತೀಯೆ. ರಾಜನ್! ಸತ್ಯಪರ ಮತ್ತು ಸರಳನಾಗಿದ್ದರೆ ಮಿತ್ರ-ಕೋಶಗಳಿಂದ ಸಂಪನ್ನನಾಗುವೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕೋಶಸಂಚಯಪ್ರಕಾರಕಥನೇ ಏಕೋನನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಕೋಶಸಂಚಯಪ್ರಕಾರಕಥನ ಎನ್ನುವ ಎಂಭತ್ತೊಂಭತ್ತನೇ ಅಧ್ಯಾಯವು.

EPS Illustration - Asian ethnic floral retro doodle black and ...

[1] ಭಾರತ ದರ್ಶನದಲ್ಲಿ ಇದರ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಭೋಕ್ತಾ ತಸ್ಯ ತು ಪಾಪಸ್ಯ ಸುಕೃತಸ್ಯ ಯಥಾ ತಥಾ| ನಿಯಂತವ್ಯಾಃ ಸದಾ ರಾಜ್ಞಾ ಪಾಪಾ ಯೇ ಸ್ಯುರ್ನರಾಧಿಪ| ಕೃತಪಾಪಸ್ತ್ವಸೌ ರಾಜಾ ಯ ಏತಾನ್ನ ನಿಯಚ್ಛತಿ||

[2] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಮದ್ಯಮಾಂಸಪರಸ್ವಾನಿ ತಥಾ ದಾರಾ ಧನಾನಿ ಚ| ಆಹರೇದ್ರಾಗವಶಗಸ್ತಥಾ ಶಾಸ್ತ್ರಂ ಪ್ರದರ್ಶಯೇತ್||

Comments are closed.