Shanti Parva: Chapter 88

ಶಾಂತಿ ಪರ್ವ: ರಾಜಧರ್ಮ ಪರ್ವ

೮೮

ರಾಷ್ಟ್ರದ ರಕ್ಷಣೆ ಮತ್ತು ರಾಷ್ಟ್ರದ ಕೋಶಸಂಗ್ರಹ (೧-೩೭).

12088001 ಯುಧಿಷ್ಠಿರ ಉವಾಚ|

12088001a ರಾಷ್ಟ್ರಗುಪ್ತಿಂ ಚ ಮೇ ರಾಜನ್ರಾಷ್ಟ್ರಸ್ಯೈವ ಚ ಸಂಗ್ರಹಮ್|

12088001c ಸಮ್ಯಗ್ಜಿಜ್ಞಾಸಮಾನಾಯ ಪ್ರಬ್ರೂಹಿ ಭರತರ್ಷಭ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ನಾನು ರಾಷ್ಟ್ರದ ರಕ್ಷಣೆ ಮತ್ತು ರಾಷ್ಟ್ರದ ಸಂಗ್ರಹಗಳ ಕುರಿತು ಚೆನ್ನಾಗಿ ತಿಳಿದುಕೊಳ್ಳ ಬಯಸುತ್ತೇನೆ. ಅದನ್ನು ನನಗೆ ಹೇಳು.”

12088002 ಭೀಷ್ಮ ಉವಾಚ|

12088002a ರಾಷ್ಟ್ರಗುಪ್ತಿಂ ಚ ತೇ ಸಮ್ಯಗ್ರಾಷ್ಟ್ರಸ್ಯೈವ ಚ ಸಂಗ್ರಹಮ್|

12088002c ಹಂತ ಸರ್ವಂ ಪ್ರವಕ್ಷ್ಯಾಮಿ ತತ್ತ್ವಮೇಕಮನಾಃ ಶೃಣು||

ಭೀಷ್ಮನು ಹೇಳಿದನು: “ರಾಷ್ಟ್ರರಕ್ಷಣೆ ಮತ್ತು ರಾಷ್ಟ್ರದ ಸಂಗ್ರಹದ ಕುರಿತು ಎಲ್ಲವನ್ನೂ ಚೆನ್ನಾಗಿ ಹೇಳುತ್ತೇನೆ. ಏಕಮನಸ್ಕನಾಗಿ ಕೇಳು.

12088003a ಗ್ರಾಮಸ್ಯಾಧಿಪತಿಃ ಕಾರ್ಯೋ ದಶಗ್ರಾಮ್ಯಸ್ತಥಾಪರಃ|

12088003c ದ್ವಿಗುಣಾಯಾಃ ಶತಸ್ಯೈವಂ ಸಹಸ್ರಸ್ಯ ಚ ಕಾರಯೇತ್||

ಒಂದು ಗ್ರಾಮಕ್ಕೆ ಒಬ್ಬ ಅಧಿಪತಿಯಿರಬೇಕು. ಹತ್ತು ಗ್ರಾಮಗಳಿಗೆ ಇನ್ನೊಬ್ಬ ಅಧಿಪತಿಯಿರಬೇಕು. ಇಪ್ಪತ್ತು ಗ್ರಾಮಗಳಿಗೆ ಮತ್ತೊಬ್ಬ ಅಧಿಪತಿಯಿರಬೇಕು. ನೂರು ಗ್ರಾಮಗಳಿಗೆ ಬೇರೊಬ್ಬ ಅಧಿಪತಿಯಿರಬೇಕು. ಸಾವಿರ ಗ್ರಾಮಗಳಿಗೆ ಬೇರೆಯೇ ಒಬ್ಬ ಅಧಿಪತಿಯಿರಬೇಕು.

12088004a ಗ್ರಾಮೇ ಯಾನ್ಗ್ರಾಮದೋಷಾಂಶ್ಚ ಗ್ರಾಮಿಕಃ ಪರಿಪಾಲಯೇತ್[1]|

12088004c ತಾನ್ಬ್ರೂಯಾದ್ದಶಪಾಯಾಸೌ ಸ ತು ವಿಂಶತಿಪಾಯ ವೈ||

ಗ್ರಾಮದ ಅಧಿಪತಿಯು ಗ್ರಾಮದ ದೋಷಗಳನ್ನು ಪರಿಪಾಲಿಸಬೇಕು. ಅವನು ಹತ್ತು ಗ್ರಾಮಗಳ ಅಧಿಪತಿಗೆ ಮತ್ತು ಹತ್ತು ಗ್ರಾಮಗಳ ಅಧಿಪತಿಯು ಇಪ್ಪತ್ತು ಗ್ರಾಮಗಳ ಅಧಿಪತಿಗೆ ವಿಷಯಗಳನ್ನು ಕ್ರೋಢೀಕರಿಸಿ ತಿಳಿಸುತ್ತಿರಬೇಕು.

12088005a ಸೋಽಪಿ ವಿಂಶತ್ಯಧಿಪತಿರ್ವೃತ್ತಂ ಜಾನಪದೇ ಜನೇ|

12088005c ಗ್ರಾಮಾಣಾಂ ಶತಪಾಲಾಯ ಸರ್ವಮೇವ ನಿವೇದಯೇತ್||

ಇಪ್ಪತ್ತು ಗ್ರಾಮಗಳ ಅಧಿಪತಿಯು ತನ್ನ ಗ್ರಾಮಗಳ ಜನರಲ್ಲಿ ನಡೆಯುವ ವಿಷಯಗಳನ್ನು ಕ್ರೋಢೀಕರಿಸಿ ಎಲ್ಲವನ್ನೂ ನೂರು ಗ್ರಾಮಗಳ ಪಾಲಕನಿಗೆ ನಿವೇದಿಸಬೇಕು.

12088006a ಯಾನಿ ಗ್ರಾಮೀಣಭೋಜ್ಯಾನಿ ಗ್ರಾಮಿಕಸ್ತಾನ್ಯುಪಾಶ್ನುಯಾತ್|

12088006c ದಶಪಸ್ತೇನ ಭರ್ತವ್ಯಸ್ತೇನಾಪಿ ದ್ವಿಗುಣಾಧಿಪಃ||

ಕಂದಾಯ ರೂಪದಲ್ಲಿ  ಬರುವ ಗ್ರಾಮದ ಉತ್ಪತ್ತಿ-ಆಹಾರಪದಾರ್ಥಗಳನ್ನು ಆ ಗ್ರಾಮದ ಅಧಿಪತಿಯು ತನಗಾಗಿ ಬಳಸಿಕೊಂಡು ಒಂದು ಅಂಶವನ್ನು ಹತ್ತು ಗ್ರಾಮಗಳ ಅಧಿಪತಿಗೆ ಕಳುಹಿಸಬೇಕು. ಹತ್ತು ಗ್ರಾಮಗಳ ಅಧಿಪತಿಯು ಹೀಗೆ ಪಡೆದುಕೊಂಡಿದುದರಲ್ಲಿ ಒಂದು ಅಂಶವನ್ನು ಇಪ್ಪತ್ತು ಗ್ರಾಮಗಳ ಅಧಿಪತಿಗೆ ನೀಡಬೇಕು. ಹೀಗೆಯೇ ನೂರುಗ್ರಾಮಗಳ ಮತ್ತು ಸಾವಿರಗ್ರಾಮಗಳ ಅಧಿಪತಿಗಳಿಗೂ ಕಂದಾಯವು ಸಲ್ಲಬೇಕು.

12088007a ಗ್ರಾಮಂ ಗ್ರಾಮಶತಾಧ್ಯಕ್ಷೋ ಭೋಕ್ತುಮರ್ಹತಿ ಸತ್ಕೃತಃ|

12088007c ಮಹಾಂತಂ ಭರತಶ್ರೇಷ್ಠ ಸುಸ್ಫೀತಜನಸಂಕುಲಮ್|

12088007e ತತ್ರ ಹ್ಯನೇಕಮಾಯತ್ತಂ ರಾಜ್ಞೋ ಭವತಿ ಭಾರತ||

ಭರತಶ್ರೇಷ್ಠ! ನೂರು ಗ್ರಾಮಗಳ ಅಧ್ಯಕ್ಷನು ಒಂದು ಸಂಪದ್ಭರಿತ ಮತ್ತು ಜನಸಂಕುಲವಿರುವ ವಿಶಾಲ ಗ್ರಾಮದ ಆದಾಯವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಅರ್ಹನಾಗುತ್ತಾನೆ. ಭಾರತ! ಹೀಗೆ ರಾಜನ ರಾಜ್ಯವು ಅನೇಕರ ಅಧಿಕಾರಕ್ಕೆ ಒಳಪಟ್ಟಿರುತ್ತದೆ.

12088008a ಶಾಖಾನಗರಮರ್ಹಸ್ತು ಸಹಸ್ರಪತಿರುತ್ತಮಮ್|

12088008c ಧಾನ್ಯಹೈರಣ್ಯಭೋಗೇನ ಭೋಕ್ತುಂ ರಾಷ್ಟ್ರಿಯ ಉದ್ಯತಃ||

ಉತ್ತಮ ಸಹಸ್ರಗ್ರಾಮದ ಅಧಿಪತಿಯು ಒಂದು ಉಪನಗರದ ಆದಾಯವನ್ನು ಭೋಗಿಸಲು ಅರ್ಹನಾಗುತ್ತಾನೆ. ಆದರೆ ಅವನು ರಾಷ್ಟ್ರಿಯನ ಗಮನಕ್ಕೆ ತಂದು ಧಾನ್ಯ-ಹಿರಣ್ಯಗಳನ್ನು ಭೋಗಿಸಬೇಕು.

12088009a ತಥಾ ಯದ್ಗ್ರಾಮಕೃತ್ಯಂ ಸ್ಯಾದ್ಗ್ರಾಮಿಕೃತ್ಯಂ ಚ ತೇ ಸ್ವಯಮ್|

12088009c ಧರ್ಮಜ್ಞಃ ಸಚಿವಃ ಕಶ್ಚಿತ್ತತ್ಪ್ರಪಶ್ಯೇದತಂದ್ರಿತಃ||

ಆ ಗ್ರಾಮಾಧಿಪತಿಗಳು ಗ್ರಾಮಗಳಲ್ಲಿ ಮಾಡಬೇಕಾದ ಕಾರ್ಯಗಳನ್ನು ಧರ್ಮಜ್ಞನೂ ಆಲಸ್ಯರಹಿತನೂ ಆದ ಸಚಿವನು ನೋಡಿಕೊಳ್ಳಬೇಕು.

12088010a ನಗರೇ ನಗರೇ ಚ ಸ್ಯಾದೇಕಃ ಸರ್ವಾರ್ಥಚಿಂತಕಃ|

12088010c ಉಚ್ಚೈಃಸ್ಥಾನೇ ಘೋರರೂಪೋ ನಕ್ಷತ್ರಾಣಾಮಿವ ಗ್ರಹಃ|

12088010e ಭವೇತ್ಸ ತಾನ್ಪರಿಕ್ರಾಮೇತ್ಸರ್ವಾನೇವ ಸದಾ ಸ್ವಯಮ್||

ನಗರ ನಗರದಲ್ಲಿಯೂ ನಕ್ಷತ್ರಗಳಿಗಿಂತಲೂ ಉಚ್ಛ ಸ್ಥಾನದಲ್ಲಿರುವ ಘೋರರೂಪದ ಗ್ರಹದಂತೆ ಓರ್ವ ಸರ್ವಾರ್ಥಚಿಂತಕನು ಇರಬೇಕು. ಎಲ್ಲರಿಗೂ ನಿಕಟವರ್ತಿಯಾಗಿದ್ದು ಎಲ್ಲ ಕಾರ್ಯಗಳನ್ನೂ ಸ್ವಯಂ ಪರಿಶೀಲಿಸುತ್ತಿರಬೇಕು.

[2]12088011a ವಿಕ್ರಯಂ ಕ್ರಯಮಧ್ವಾನಂ ಭಕ್ತಂ ಚ ಸಪರಿವ್ಯಯಮ್|

12088011c ಯೋಗಕ್ಷೇಮಂ ಚ ಸಂಪ್ರೇಕ್ಷ್ಯ ವಣಿಜಃ ಕಾರಯೇತ್ಕರಾನ್||

ಮಾರುವ ಬೆಲೆ, ಪ್ರಯಾಣದ ಖರ್ಚು, ನೌಕರರ ವೇತನ ಮತ್ತು ವ್ಯಾಪಾರಿಗಳ ಯೋಗಕ್ಷೇಮಗಳನ್ನು ಪರಿಶೀಲಿಸಿ ವಾಣಿಜ್ಯ ತೆರಿಗೆಯನ್ನು ಹಾಕಬೇಕು.

12088012a ಉತ್ಪತ್ತಿಂ ದಾನವೃತ್ತಿಂ ಚ ಶಿಲ್ಪಂ ಸಂಪ್ರೇಕ್ಷ್ಯ ಚಾಸಕೃತ್|

12088012c ಶಿಲ್ಪಪ್ರತಿಕರಾನೇವ ಶಿಲ್ಪಿನಃ ಪ್ರತಿ ಕಾರಯೇತ್||

ಪದಾರ್ಥಗಳ ಉತ್ಪತ್ತಿಗೆ ಬೀಳುವ ಖರ್ಚು, ಅವುಗಳ ಮಾರಾಟದ ನಂತರ ದೊರೆಯುವ ಲಾಭ, ಪದಾರ್ಥದ ಗುಣಮಟ್ಟ ಇವನ್ನು ಪರಿಶೀಲಿಸಿ ಪದಾರ್ಥಗಳ ಮೇಲೆ ತೆರಿಗೆಯನ್ನು ಹಾಕಬೇಕು. ಪದಾರ್ಥಗಳನ್ನು ತಯಾರಿಸುವವರಿಗೂ ಆದಾಯ ತೆರಿಗೆಯನ್ನು ಹಾಕಬೇಕು.

12088013a ಉಚ್ಚಾವಚಕರಾ ನ್ಯಾಯ್ಯಾಃ ಪೂರ್ವರಾಜ್ಞಾಂ ಯುಧಿಷ್ಠಿರ|

12088013c ಯಥಾ ಯಥಾ ನ ಹೀಯೇರಂಸ್ತಥಾ ಕುರ್ಯಾನ್ಮಹೀಪತಿಃ||

12088014a ಫಲಂ ಕರ್ಮ ಚ ಸಂಪ್ರೇಕ್ಷ್ಯ ತತಃ ಸರ್ವಂ ಪ್ರಕಲ್ಪಯೇತ್|

ಯುಧಿಷ್ಠಿರ! ರಾಜನು ಪದಾರ್ಥಗಳ ಉತ್ಪತ್ತಿ, ಅದಕ್ಕೆ ತಗಲುವ ವೆಚ್ಚ, ಅವುಗಳಿಂದ ಬರುವ ಆದಾಯ, ಕ್ರಯ-ವಿಕ್ರಯಗಳಿಂದ ಬರುವ ಆದಾಯ – ಇವುಗಳೆಲ್ಲವನ್ನೂ ಚೆನ್ನಾಗಿ ಪರಿಶೀಲಿಸಿ ನಿವ್ವಳ ಲಾಭಕ್ಕೆ ಅನುಗುಣವಾಗಿ ತೆರಿಗೆಯನ್ನು ಹಾಕಬೇಕು. ಎಲ್ಲ ಪದಾರ್ಥಗಳ್ಗೂ ಒಂದೇ ವಿಧದ ತೆರಿಗೆಯನ್ನು ಹೇರಬಾರದು. ಕಡಿಮೆ ಆದಾಯವಿರುವವನಿಗೆ ಕಡಿಮೆ ತೆರಿಗೆಯನ್ನು, ಹೆಚ್ಚು ಆದಾಯವಿರುವವನಿಗೆ ಹೆಚ್ಚು ತೆರಿಗೆಯನ್ನು ಮತ್ತು ಹೆಚ್ಚು ಲಾಭ ಬರುವ ಪದಾರ್ಥಗಳಿಗೆ ಹೆಚ್ಚು ತೆರಿಗೆಯನ್ನು ಹಾಕಬೇಕು. ಕರಭಾರದಿಂದ ಪ್ರಜೆಗಳ ನಾಶವಾಗದಂತೆ ರಾಜನು ನೋಡಿಕೊಳ್ಳಬೇಕು.

12088014c ಫಲಂ ಕರ್ಮ ಚ ನಿರ್ಹೇತು ನ ಕಶ್ಚಿತ್ಸಂಪ್ರವರ್ತಯೇತ್||

12088015a ಯಥಾ ರಾಜಾ ಚ ಕರ್ತಾ ಚ ಸ್ಯಾತಾಂ ಕರ್ಮಣಿ ಭಾಗಿನೌ|

12088015c ಸಮವೇಕ್ಷ್ಯ ತಥಾ ರಾಜ್ಞಾ ಪ್ರಣೇಯಾಃ ಸತತಂ ಕರಾಃ||

ಕರ್ಮಗಳ ಫಲವು ದೊರಕದಿದ್ದರೆ ಯಾರೂ ಕರ್ಮಗಳಲ್ಲಿ ತೊಡಗುವುದಿಲ್ಲ. ಕರ್ತನಾಗಿ ತನ್ನ ಕರ್ಮಫಲಗಳಿಗೆ ಭಾಗಿಯಾಗುವ ರೀತಿಯಲ್ಲಿ ಕೃಷಿ-ವಾಣಿಜ್ಯಗಳಲ್ಲಿ ತೊಡಗಿರುವ ಕರ್ತರಿಗೆ ತಮ್ಮ ಕರ್ಮ ಫಲಗಳು ದೊರೆಯುವ ರೀತಿಯಲ್ಲಿ ರಾಜನು ಕರಗಳನ್ನು ಹಾಕಬೇಕು.

12088016a ನೋಚ್ಚಿಂದ್ಯಾದಾತ್ಮನೋ ಮೂಲಂ ಪರೇಷಾಂ ವಾಪಿ ತೃಷ್ಣಯಾ|

12088016c ಈಹಾದ್ವಾರಾಣಿ ಸಂರುಧ್ಯ ರಾಜಾ ಸಂಪ್ರೀತಿದರ್ಶನಃ||

12088017a ಪ್ರದ್ವಿಷಂತಿ ಪರಿಖ್ಯಾತಂ ರಾಜಾನಮತಿಖಾದಿನಮ್|

ಕರವನ್ನೇ ತೆಗೆದುಕೊಳ್ಳದೇ ತನ್ನನ್ನು ತಾನು ಹಾಳುಮಾಡಿಕೊಳ್ಳಲೂ ಬಾರದು. ಧನವನ್ನು ಬಯಸಿ ಕೃಷಿ-ವಾಣಿಜ್ಯಾದಿಗಳಲ್ಲಿ ತೊಡಗಿರುವವರ ಮೂಲವನ್ನೂ ನಾಶಗೊಳಿಸಬಾರದು. ಅತಿ ಆಸೆಯ ದ್ವಾರವನ್ನು ಮುಚ್ಚಿ ಯಥೋಚಿತ ತೆರಿಗೆಗಳನ್ನು ಮಾತ್ರವೇ ಜನರ ಮೇಲೆ ಹಾಕುವುದರಿಂದ ರಾಜನು ಜನರಿಗೆ ಪ್ರಿಯದರ್ಶನನಾಗುತ್ತಾನೆ. ಪ್ರಜೆಗಳ ಅದಾಯವನ್ನು ಅತಿಯಾಗಿ ಕಬಳಿಸುವವನೆಂದು ಪ್ರಖ್ಯಾತನಾದ ರಾಜನನ್ನು ಪ್ರಜೆಗಳು ದ್ವೇಷಿಸುತ್ತಾರೆ.

12088017c ಪ್ರದ್ವಿಷ್ಟಸ್ಯ ಕುತಃ ಶ್ರೇಯಃ ಸಂಪ್ರಿಯೋ[3] ಲಭತೇ ಪ್ರಿಯಮ್||

12088018a ವತ್ಸೌಪಮ್ಯೇನ ದೋಗ್ಧವ್ಯಂ ರಾಷ್ಟ್ರಮಕ್ಷೀಣಬುದ್ಧಿನಾ|

ಪ್ರಜೆಗಳು ದ್ವೇಷಿಸುವರ ರಾಜನಿಗೆ ಎಲ್ಲಿಯ ಶ್ರೇಯಸ್ಸು? ಪ್ರಜೆಗಳ ಪ್ರೀತಿಗೆ ಪಾತ್ರನಾದವನು ಸುಖಿಯಾಗುತ್ತಾನೆ. ಕರುವಿಗೂ ಹಾಲನ್ನು ಬಿಟ್ಟು ಹಸುವಿನಿಂದ ಹಾಲನ್ನು ಕರೆದುಕೊಳ್ಳುವಂತೆ ಬುದ್ಧಿವಂತ ರಾಜನು ರಾಷ್ಟ್ರವನ್ನು ಕರೆದುಕೊಳ್ಳಬೇಕು.

12088018c ಭೃತೋ ವತ್ಸೋ ಜಾತಬಲಃ ಪೀಡಾಂ ಸಹತಿ ಭಾರತ||

12088019a ನ ಕರ್ಮ ಕುರುತೇ ವತ್ಸೋ ಭೃಶಂ ದುಗ್ಧೋ ಯುಧಿಷ್ಠಿರ|

ಭಾರತ! ಯುಧಿಷ್ಠಿರ! ಕರುವಿಗೆ ಬೇಕಾಗುವಷ್ಟು ಹಾಲನ್ನು ಬಿಟ್ಟು ಕರೆಯುವುದರಿಂದ ಆ ಬಲಿಷ್ಠ ಕರುವು ಪೀಡೆಗಳನ್ನು ಸಹಿಸಿಕೊಳ್ಳಬಹುದು. ಯುಧಿಷ್ಠಿರ! ಕರುವು ದೊಡ್ಡದಾಗಿ ಕಾರ್ಯಗಳನ್ನು ಮಾಡಲು ತೊಡಗಿದ ನಂತರವೇ ಚೆನ್ನಾಗಿ ಹಾಲನ್ನು ಕರೆಯಬಹುದು.

12088019c ರಾಷ್ಟ್ರಮಪ್ಯತಿದುಗ್ಧಂ ಹಿ ನ ಕರ್ಮ ಕುರುತೇ ಮಹತ್||

12088020a ಯೋ ರಾಷ್ಟ್ರಮನುಗೃಹ್ಣಾತಿ ಪರಿಗೃಹ್ಯ ಸ್ವಯಂ ನೃಪಃ|

12088020c ಸಂಜಾತಮುಪಜೀವನ್ಸ ಲಭತೇ ಸುಮಹತ್ಫಲಮ್||

ರಾಷ್ಟ್ರವನ್ನು ಅತಿಯಾಗಿ ಕರೆದರೆ ಅದು ಯಾವ ಮಹತ್ಕಾರ್ಯಗಳನ್ನೂ ಸಾಧಿಸಲಾರದು. ಲಭಿಸಿದಷ್ಟು ಆದಾಯದಲ್ಲಿಯೇ ಜೀವನ ನಿರ್ವಹಣೆ ಮಾಡುವ ರಾಜನು ರಾಷ್ಟ್ರವನ್ನು ಅನುಗ್ರಹಿಸಿದಂತಾಗುತ್ತದೆ. ಇದರಿಂದ ಅವನು ಮಹಾಫಲವನ್ನು ಪಡೆದುಕೊಳ್ಳುತ್ತಾನೆ.

12088021a ಆಪದರ್ಥಂ ಹಿ ನಿಚಯಾನ್ರಾಜಾನ ಇಹ ಚಿನ್ವತೇ[4]|

12088021c ರಾಷ್ಟ್ರಂ ಚ ಕೋಶಭೂತಂ ಸ್ಯಾತ್ಕೋಶೋ ವೇಶ್ಮಗತಸ್ತಥಾ||

ಆಪತ್ಕಾಲಕ್ಕೆಂದು ಪ್ರಜೆಗಳು ಇಟ್ಟುಕೊಂಡಿರುವ ಧನವನ್ನು ರಾಜನು ಕಸಿದುಕೊಳ್ಳಬಾರದು. ರಾಷ್ಟ್ರವು ಕೋಶವನ್ನು ಅವಲಂಬಿಸಿರುತ್ತದೆ. ಈ ಕೋಶವು ಮನೆಮನೆಯಲ್ಲಿಯೂ ಇರುತ್ತದೆ.

12088022a ಪೌರಜಾನಪದಾನ್ಸರ್ವಾನ್ಸಂಶ್ರಿತೋಪಾಶ್ರಿತಾಂಸ್ತಥಾ|

12088022c ಯಥಾಶಕ್ತ್ಯನುಕಂಪೇತ ಸರ್ವಾನಭ್ಯಂತರಾನಪಿ||

ನಗರ ಮತ್ತು ಗ್ರಾಮೀಣ ಜನರು ನೇರವಾಗಿ ಅಥವಾ ಮಧ್ಯಸ್ಥರ ಮೂಲಕ ರಾಜನ ಆಶ್ರಯವನ್ನು ಪಡೆಯನು ಬಂದರೆ ಅವರೆಲ್ಲರನ್ನೂ ಯಥಾಶಕ್ತಿಯಾಗಿ ಅನುಕಂಪದಿಂದ ನೋಡಿಕೊಳ್ಳಬೇಕು.

12088023a ಬಾಹ್ಯಂ ಜನಂ ಭೇದಯಿತ್ವಾ ಭೋಕ್ತವ್ಯೋ ಮಧ್ಯಮಃ ಸುಖಮ್|

12088023c ಏವಂ ನ ಸಂಪ್ರಕುಪ್ಯಂತೇ ಜನಾಃ ಸುಖಿತದುಃಖಿತಾಃ||

ಬಾಹ್ಯ ಜನರನ್ನು ಭೇದಿಸಿ ಮಧ್ಯಮ ರೀತಿಯಲ್ಲಿ ಅವರಿಂದ ತೆರಿಗೆಯನ್ನು ಭೋಗಿಸಬೇಕು. ಹೀಗೆ ಮಾಡುವುದರಿಂದ ಸುಖಿತ ದುಃಖಿತರಾದ ಜನರು ಕುಪಿತರಾಗುವುದಿಲ್ಲ.

12088024a ಪ್ರಾಗೇವ ತು ಕರಾದಾನಮನುಭಾಷ್ಯ ಪುನಃ ಪುನಃ|

12088024c ಸಂನಿಪತ್ಯ ಸ್ವವಿಷಯೇ ಭಯಂ ರಾಷ್ಟ್ರೇ ಪ್ರದರ್ಶಯೇತ್||

ಪ್ರಜೆಗಳಿಂದ ಧನವನ್ನು ಸಂಗ್ರಹಿಸುವ ಮೊದಲೇ ರಾಜನು ಅದರ ಅವಶ್ಯಕತೆಯ ಕುರಿತು ಜನರಿಗೆ ತಿಳಿಸಬೇಕು. ತನ್ನ ರಾಷ್ಟ್ರದಲ್ಲಿ ಸಂಚರಿಸಿ ರಾಷ್ಟ್ರಕ್ಕಿರುವ ಭಯವನ್ನು ತೋರಿಸಬೇಕು.

12088025a ಇಯಮಾಪತ್ಸಮುತ್ಪನ್ನಾ ಪರಚಕ್ರಭಯಂ ಮಹತ್|

12088025c ಅಪಿ ನಾಂತಾಯ ಕಲ್ಪೇತ ವೇಣೋರಿವ ಫಲಾಗಮಃ||

12088026a ಅರಯೋ ಮೇ ಸಮುತ್ಥಾಯ ಬಹುಭಿರ್ದಸ್ಯುಭಿಃ ಸಹ|

12088026c ಇದಮಾತ್ಮವಧಾಯೈವ ರಾಷ್ಟ್ರಮಿಚ್ಚಂತಿ ಬಾಧಿತುಮ್||

“ಈ ಆಪತ್ತು ಉತ್ಪನ್ನವಾಗಿದೆ. ಪರರ ಆಕ್ರಮಣದ ಭಯವುಂಟಾಗಿದೆ. ಬಿದಿರಿನಲ್ಲಿ ಬಿಟ್ಟ ಫಲವು ಬಿದಿರನ್ನೇ ನಾಶಗೊಳಿಸುವಂತೆ ಶತ್ರುಗಳು ದಸ್ಯುಗಳೊಂದಿಗೆ ಸೇರಿ ನಮ್ಮ ಮೇಲೆ ಧಾಳಿಯಿಡುತ್ತಿದ್ದಾರೆ. ನಮ್ಮ ರಾಷ್ಟ್ರವನ್ನು ಧ್ವಂಸಮಾಡಲು ಬಯಸಿದ್ದಾರೆ.

12088027a ಅಸ್ಯಾಮಾಪದಿ ಘೋರಾಯಾಂ ಸಂಪ್ರಾಪ್ತೇ ದಾರುಣೇ ಭಯೇ|

12088027c ಪರಿತ್ರಾಣಾಯ ಭವತಾಂ ಪ್ರಾರ್ಥಯಿಷ್ಯೇ ಧನಾನಿ ವಃ||

ಈ ಘೋರ ದಾರುಣ ಭಯವು ಪ್ರಾಪ್ತವಾಗಿರುವುದರಿಂದ ನಿಮ್ಮನ್ನು ರಕ್ಷಿಸಲೋಸುಗ ನಿಮ್ಮಿಂದ ಧನವನ್ನು ಪ್ರಾರ್ಥಿಸುತ್ತಿದ್ದೇನೆ.

12088028a ಪ್ರತಿದಾಸ್ಯೇ ಚ ಭವತಾಂ ಸರ್ವಂ ಚಾಹಂ ಭಯಕ್ಷಯೇ|

12088028c ನಾರಯಃ ಪ್ರತಿದಾಸ್ಯಂತಿ ಯದ್ಧರೇಯುರ್ಬಲಾದಿತಃ||

ಭಯವು ಕಳೆದುಹೋದ ನಂತರ ಅವೆಲ್ಲವನ್ನೂ ನಿಮಗೆ ಹಿಂದಿರುಗಿಸುತ್ತೇನೆ. ಶತ್ರುಗಳಾದರೋ ನಮ್ಮನ್ನು ಸೋಲಿಸಿದರೆ ನಿಮ್ಮಿಂದ ಧನವನ್ನು ತೆಗೆದುಕೊಂಡು ಅದನ್ನು ನಿಮಗೆ ಹಿಂದಿರುಗಿಸುವುದಿಲ್ಲ.

12088029a ಕಲತ್ರಮಾದಿತಃ ಕೃತ್ವಾ ನಶ್ಯೇತ್ಸ್ವಂ ಸ್ವಯಮೇವ ಹಿ|

12088029c ಅಪಿ ಚೇತ್ಪುತ್ರದಾರಾರ್ಥಮರ್ಥಸಂಚಯ ಇಷ್ಯತೇ||

ಸ್ತ್ರೀಯರೂ ಮೊದಲ್ಗೊಂಡು ಅವರು ನಮ್ಮೆಲ್ಲರನ್ನೂ ನಾಶಪಡಿಸುತ್ತಾರೆ. ಪುತ್ರ-ಕಳತ್ರ-ಮಿತ್ರರ ರಕ್ಷಣೆಗಾಗಿ ನೀವು ಸಂಗ್ರಹಿಸಿಟ್ಟ ಧನವನ್ನು ಈಗ ನನಗೆ ಕೊಡಿರೆಂದು ಪ್ರಾರ್ಥಿಸುತ್ತೇನೆ.

12088030a ನಂದಾಮಿ ವಃ ಪ್ರಭಾವೇನ ಪುತ್ರಾಣಾಮಿವ ಚೋದಯೇ|

12088030c ಯಥಾಶಕ್ತ್ಯನುಗೃಹ್ಣಾಮಿ ರಾಷ್ಟ್ರಸ್ಯಾಪೀಡಯಾ ಚ ವಃ||

ಮಗನ ಅಭಿವೃದ್ಧಿಯಿಂದ ಸಂತೋಷಪಡುವಂತೆ ನಾನು ನಿಮ್ಮ ಪ್ರಭಾವವನ್ನು ನೋಡಿ ಸಂತೋಷಪಡುತ್ತಿದ್ದೇನೆ. ರಾಷ್ಟ್ರಕ್ಕೆ ಪೀಡೆಯುಂಟಾಗದ ರೀತಿಯಲ್ಲಿ ನಿಮ್ಮಿಂದ ಯಥಾಶಕ್ತಿ ಪಡೆದುಕೊಂಡು ಅನುಗ್ರಹಿಸುತ್ತೇನೆ.

12088031a ಆಪತ್ಸ್ವೇವ ಚ ವೋಢವ್ಯಂ ಭವದ್ಭಿಃ ಸದ್ಗವೈರಿವ|

12088031c ನ ವಃ ಪ್ರಿಯತರಂ ಕಾರ್ಯಂ ಧನಂ ಕಸ್ಯಾಂ ಚಿದಾಪದಿ||

ಬಲಿಷ್ಠ ಎತ್ತು ದುರ್ಗಮ ಸ್ಥಳದಲ್ಲಿಯೂ ಭಾರವನ್ನು ಹೊರುವಂತೆ ನೀವೆಲ್ಲರೂ ದೇಶಕ್ಕೊದಗಿದ ಆಪತ್ತಿನಲ್ಲಿ ಭಾರವನ್ನು ಹೊರಬೇಕು. ಆಪತ್ತಿನಲ್ಲಿ ಧನದ ಮೇಲಿನ ವ್ಯಾಮೋಹದಿಂದ ಕಾರ್ಯವನ್ನು ಕೈಗೊಳ್ಳಬೇಡಿ.”

12088032a ಇತಿ ವಾಚಾ ಮಧುರಯಾ ಶ್ಲಕ್ಷ್ಣಯಾ ಸೋಪಚಾರಯಾ|

12088032c ಸ್ವರಶ್ಮೀನಭ್ಯವಸೃಜೇದ್ಯುಗಮಾದಾಯ ಕಾಲವಿತ್||

ಸಮಯಜ್ಞಾನವಿರುವವನು ಇದರಂತೆ ಸ್ನೇಹಯುಕ್ತ ಅನುನಯಪೂರ್ಣ ಸುಮಧುರ ಮಾತುಗಳಿಂದ ಪ್ರಜೆಗಳನ್ನು ಒಪ್ಪಿಸಿ ತನ್ನ ಸೈನಿಕರನ್ನು ಧನಸಂಗ್ರಹಕ್ಕಾಗಿ ಪ್ರಜೆಗಳ ಮನೆಗಳಿಗೆ ಕಳುಹಿಸಬೇಕು.

12088033a ಪ್ರಚಾರಂ ಭೃತ್ಯಭರಣಂ ವ್ಯಯಂ ಗೋಗ್ರಾಮತೋ ಭಯಮ್|

12088033c ಯೋಗಕ್ಷೇಮಂ ಚ ಸಂಪ್ರೇಕ್ಷ್ಯ ಗೋಮಿನಃ ಕಾರಯೇತ್ಕರಾನ್||

ಪ್ರಚಾರ, ಭೃತ್ಯಭರಣ, ಗೋ-ಗ್ರಾಮಗಳಿಗೆ ಇರುವ ಭಯವನ್ನು ಹೋಗಲಾಡಿಸಿ ಯೋಗಕ್ಷೇಮವನ್ನುಂಟುಮಾಡುವುದು – ಈ ಕಾರಣಗಳನ್ನು ಹೇಳಿ ಧನಿಕ ವೈಶ್ಯರಿಂದ ತೆರಿಗೆಯನ್ನು ತೆಗೆದುಕೊಳ್ಳಬೇಕು.

12088034a ಉಪೇಕ್ಷಿತಾ ಹಿ ನಶ್ಯೇಯುರ್ಗೋಮಿನೋಽರಣ್ಯವಾಸಿನಃ|

12088034c ತಸ್ಮಾತ್ತೇಷು ವಿಶೇಷೇಣ ಮೃದುಪೂರ್ವಂ ಸಮಾಚರೇತ್||

ಉಪೇಕ್ಷಿಸಿದರೆ ಗೋಧನಿಕ ವೈಶ್ಯರು ಅರಣ್ಯಕ್ಕೆ ಹೋಗಿ ನಾಶವಾಗಿಬಿಡುತ್ತಾರೆ. ಆದುದರಿಂದ ಅವರೊಂದಿಗೆ ವಿಶೇಷವಾಗಿ ಮೃದುಪೂರ್ವಕವಾಗಿ ವ್ಯವಹರಿಸಬೇಕು.

12088035a ಸಾಂತ್ವನಂ ರಕ್ಷಣಂ ದಾನಮವಸ್ಥಾ ಚಾಪ್ಯಭೀಕ್ಷ್ಣಶಃ|

12088035c ಗೋಮಿನಾಂ ಪಾರ್ಥ ಕರ್ತವ್ಯಂ ಸಂವಿಭಾಗಾಃ ಪ್ರಿಯಾಣಿ ಚ||

ಪಾರ್ಥ! ಸಾಂತ್ವನ, ರಕ್ಷಣೆ, ದಾನ, ವ್ಯವಹಾರಗಳಿಗೆ ಸರಿಯಾದ ವ್ಯವಸ್ಥೆ ಮತ್ತು ಬಹುಮಾನಗಳಿಂದ ವೈಶ್ಯರೊಂದಿಗೆ ವಿಶ್ವಾಸದಿಂದಿರಬೇಕು.

12088036a ಅಜಸ್ರಮುಪಯೋಕ್ತವ್ಯಂ ಫಲಂ ಗೋಮಿಷು ಸರ್ವತಃ|

12088036c ಪ್ರಭಾವಯತಿ ರಾಷ್ಟ್ರಂ ಚ ವ್ಯವಹಾರಂ ಕೃಷಿಂ ತಥಾ||

ವೈಶ್ಯರಿಗೆ ಅವರ ಶ್ರಮಕ್ಕೆ ತಕ್ಕುದಾದ ಫಲವನ್ನು ಕೊಡುತ್ತಲೇ ಇರಬೇಕು. ಏಕೆಂದರೆ ಅವರು ವ್ಯವಹಾರ ಕೃಷಿಗಳಿಂದ ರಾಷ್ಟ್ರವನ್ನು ವೃದ್ಧಿಗೊಳಿಸುತ್ತಾರೆ.

12088037a ತಸ್ಮಾದ್ಗೋಮಿಷು ಯತ್ನೇನ ಪ್ರೀತಿಂ ಕುರ್ಯಾದ್ವಿಚಕ್ಷಣಃ|

12088037c ದಯಾವಾನಪ್ರಮತ್ತಶ್ಚ ಕರಾನ್ಸಂಪ್ರಣಯನ್ಮೃದೂನ್||

ಆದುದರಿಂದ ಬುದ್ಧಿವಂತ ರಾಜನು ಪ್ರಯತ್ನಪಟ್ಟು ವೈಶ್ಯರೊಂದಿಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ದಯವಂತನೂ ಅಪ್ರಮತ್ತನೂ ಆಗಿದ್ದುಕೊಂಡು ಮೃದುವಾದ ತೆರಿಗೆಗಳನ್ನು ಅವರಿಂದ ತೆಗೆದುಕೊಳ್ಳಬೇಕು.

12088038a ಸರ್ವತ್ರ ಕ್ಷೇಮಚರಣಂ ಸುಲಭಂ ತಾತ ಗೋಮಿಭಿಃ|

12088038c ನ ಹ್ಯತಃ ಸದೃಶಂ ಕಿಂ ಚಿದ್ಧನಮಸ್ತಿ ಯುಧಿಷ್ಠಿರ||

ಯುಧಿಷ್ಠಿರ! ಅಯ್ಯಾ! ವೈಶ್ಯರು ಎಲ್ಲಕಡೆಯೂ ಕ್ಷೇಮದಿಂದ ಸುಲಭವಾಗಿ ಸಂಚರಿಸುವಂತಿರಬೇಕು. ರಾಜನಾದವನಿಗೆ ಇದಕ್ಕೆ ಸಮನಾದ ಮತ್ತು ಇದಕ್ಕಿಂತಲೂ ಹೆಚ್ಚಿನ ಹಿತಕರ ಕಾರ್ಯವು ಬೇರೆ ಯಾವುದೂ ಇಲ್ಲ.”

ಇತಿ ಶ್ರೀ ಮಹಾಭಾರತೇ ಶಾಂತಿ  ಪರ್ವಣಿ ರಾಜಧರ್ಮ ಪರ್ವಣಿ ರಾಷ್ಟ್ರಗುಪ್ತ್ಯಾದಿಕಥನೇ ಅಷ್ಟಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ರಾಷ್ಟ್ರಗುಪ್ತ್ಯಾದಿಕಥನ ಎನ್ನುವ ಎಂಭತ್ತೆಂಟನೇ ಅಧ್ಯಾಯವು.

Tiger Lilly On White Background Stock Photo, Picture And Royalty ...

[1] ಪ್ರತಿಭಾವಯೇತ್| ಎಂಬ ಪಾಠಾಂತರವಿದೆ.

[2] ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಶ್ಲೋಕಗಳಿವೆ: ತೇಷಾಂ ವೃತ್ಥಿಂ ಪರಿಣಯೇತ್ಕಶ್ಚಿದ್ರಾಷ್ಟ್ರೇಷು ತಚ್ಚರಃ| ಜಿಘಾಂಸವಃ ಪಾಪಕಾಮಾಃ ಪರಸ್ವಾದಯಿನಃ ಶಠಾಃ| ರಕ್ಷಾಭ್ಯಧಿಕೃತಾ ನಾಮ ತೇಭ್ಯೋ ರಕ್ಷೇದಿಮಾಃ ಪ್ರಜಾಃ||

[3] ನಾಪ್ರಿಯೋ ಎಂಬ ಪಾಠಾಂತರವಿದೆ.

[4] ಆಪದರ್ಥಂ ಚ ನಿರ್ಯಾತಂ ಧನಂ ತ್ವಿಹ ವಿವರ್ಧಯೇತ್| ಎಂಬ ಪಾಠಾಂತರವಿದೆ.

Comments are closed.