Shanti Parva: Chapter 87

ಶಾಂತಿ ಪರ್ವ: ರಾಜಧರ್ಮ ಪರ್ವ

೮೭

ರಾಜನಿಗೆ ನಿವಾಸಯೋಗ್ಯ ನಗರ-ದುರ್ಗಗಳ ವರ್ಣನೆ (೧-೩೩).

12087001 ಯುಧಿಷ್ಠಿರ ಉವಾಚ|

12087001a ಕಥಂವಿಧಂ ಪುರಂ ರಾಜಾ ಸ್ವಯಮಾವಸ್ತುಮರ್ಹತಿ|

12087001c ಕೃತಂ ವಾ ಕಾರಯಿತ್ವಾ ವಾ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸ್ವಯಂ ರಾಜನು ಯಾವ ವಿಧದ ಪುರದಲ್ಲಿ ವಾಸಿಸಬೇಕು? ಹಿಂದೆ ನಿರ್ಮಿತವಾಗಿದ್ದ ಪುರದಲ್ಲಿ ವಾಸಿಸಬೇಕೇ ಅಥವಾ ಹೊಸತಾಗಿ ನಿರ್ಮಿಸಿದ ಪುರದಲ್ಲಿ ವಾಸಿಸಬೇಕೇ? ಅದನ್ನು ನನಗೆ ಹೇಳು.”

12087002 ಭೀಷ್ಮ ಉವಾಚ|

12087002a ಯತ್ರ ಕೌಂತೇಯ ವಸ್ತವ್ಯಂ ಸಪುತ್ರಭ್ರಾತೃಬಂಧುನಾ|

12087002c ನ್ಯಾಯ್ಯಂ ತತ್ರ ಪರಿಪ್ರಷ್ಟುಂ ಗುಪ್ತಿಂ ವೃತ್ತಿಂ ಚ ಭಾರತ||

ಭೀಷ್ಮನು ಹೇಳಿದನು: “ಕೌಂತೇಯ! ಭಾರತ! ಪುತ್ರ-ಭ್ರಾತೃ-ಬಂಧುಗಳೊಡನೆ ರಾಜನು ಎಲ್ಲಿ ವಾಸಿಸಬೇಕು ಎಂದು, ಮತ್ತು ಅದರ ರಕ್ಷಣೆ-ವ್ಯವಸ್ಥೆಗಳ ಕುರಿತು ನೀನು ಕೇಳುವ ಪ್ರಶ್ನೆಯು ನ್ಯಾಯಯುಕ್ತವಾಗಿಯೇ ಇದೆ.

12087003a ತಸ್ಮಾತ್ತೇ ವರ್ತಯಿಷ್ಯಾಮಿ ದುರ್ಗಕರ್ಮ ವಿಶೇಷತಃ|

12087003c ಶ್ರುತ್ವಾ ತಥಾ ವಿಧಾತವ್ಯಮನುಷ್ಠೇಯಂ ಚ ಯತ್ನತಃ||

ಆದುದರಿಂದ ನಿನಗೆ ವಿಶೇಷವಾಗಿ ದುರ್ಗನಿರ್ಮಾಣದ ವಿಷಯವನ್ನು ಹೇಳುತ್ತೇನೆ. ಅದನ್ನು ಕೇಳಿ ಪ್ರಯತ್ನಪೂರ್ವಕವಾಗಿ ಹಾಗೆಯೇ ಮಾಡಬೇಕು.

12087004a ಷಡ್ವಿಧಂ ದುರ್ಗಮಾಸ್ಥಾಯ ಪುರಾಣ್ಯಥ ನಿವೇಶಯೇತ್|

12087004c ಸರ್ವಸಂಪತ್ಪ್ರಧಾನಂ ಯದ್ಬಾಹುಲ್ಯಂ ವಾಪಿ ಸಂಭವೇತ್||

ಎಲ್ಲಿ ಸರ್ವಸಂಪತ್ತುಗಳೂ ದೊರಕುವವೋ ಮತ್ತು ಯಾವುದು ವಿಸ್ತಾರವಾಗಿರುವುದೋ ಅಲ್ಲಿ ಆರುವಿಧದ ದುರ್ಗಗಳನ್ನು ಆಶ್ರಯಿಸಿ ಪುರವನ್ನು ನಿರ್ಮಿಸಬೇಕು.

12087005a ಧನ್ವದುರ್ಗಂ ಮಹೀದುರ್ಗಂ ಗಿರಿದುರ್ಗಂ ತಥೈವ ಚ|

12087005c ಮನುಷ್ಯದುರ್ಗಮಬ್ದುರ್ಗಂ ವನದುರ್ಗಂ ಚ ತಾನಿ ಷಟ್||

ಧನ್ವದುರ್ಗ[1], ಮಹೀದುರ್ಗ[2], ಗಿರುದುರ್ಗ[3], ಮನುಷ್ಯದುರ್ಗ[4], ಜಲದುರ್ಗ[5] ಮತ್ತು ವನದುರ್ಗ[6] ಇವೇ ಆ ಆರು ದುರ್ಗಗಳು.

12087006a ಯತ್ಪುರಂ ದುರ್ಗಸಂಪನ್ನಂ ಧಾನ್ಯಾಯುಧಸಮನ್ವಿತಮ್|

12087006c ದೃಢಪ್ರಾಕಾರಪರಿಖಂ ಹಸ್ತ್ಯಶ್ವರಥಸಂಕುಲಮ್||

12087007a ವಿದ್ವಾಂಸಃ ಶಿಲ್ಪಿನೋ ಯತ್ರ ನಿಚಯಾಶ್ಚ ಸುಸಂಚಿತಾಃ|

12087007c ಧಾರ್ಮಿಕಶ್ಚ ಜನೋ ಯತ್ರ ದಾಕ್ಷ್ಯಮುತ್ತಮಮಾಸ್ಥಿತಃ||

12087008a ಊರ್ಜಸ್ವಿನರನಾಗಾಶ್ವಂ ಚತ್ವರಾಪಣಶೋಭಿತಮ್|

12087008c ಪ್ರಸಿದ್ಧವ್ಯವಹಾರಂ ಚ ಪ್ರಶಾಂತಮಕುತೋಭಯಮ್||

12087009a ಸುಪ್ರಭಂ ಸಾನುನಾದಂ ಚ ಸುಪ್ರಶಸ್ತನಿವೇಶನಮ್|

12087009c ಶೂರಾಢ್ಯಜನಸಂಪನ್ನಂ ಬ್ರಹ್ಮಘೋಷಾನುನಾದಿತಮ್||

12087010a ಸಮಾಜೋತ್ಸವಸಂಪನ್ನಂ ಸದಾಪೂಜಿತದೈವತಮ್|

12087010c ವಶ್ಯಾಮಾತ್ಯಬಲೋ ರಾಜಾ ತತ್ಪುರಂ ಸ್ವಯಮಾವಸೇತ್||

ಇಂತಹ ದುರ್ಗಗಳಿರುವ, ಧಾನ್ಯ-ಆಯುಧಗಳಿಂದ ಸಮೃದ್ಧವಾಗಿರುವ, ದೃಢ ಪ್ರಾಕಾರ-ಕಂದಕಗಳಿರುವ, ಆನೆ-ಕುದುರೆ-ರಥಗಳಿಂದ ಕೂಡಿರುವ, ವಿದ್ವಾಂಸರೂ ಶಿಲ್ಪಿಗಳೂ ವಾಸಿಸುವ, ಆವಶ್ಯಕ ವಸ್ತುಗಳಿಂದ ತುಂಬಿರುವ, ಬೊಕ್ಕಸವು ತುಂಬಿರುವ, ಸಾಮರ್ಥ್ಯ ಧಾರ್ಮಿಕ ಜನರಿರುವ, ಚೌಕಗಳು ಅಂಗಡಿಗಳಿಂದ ಶೋಭಿಸುವ, ಧರ್ಮಮೂಲ ಪ್ರಸಿದ್ಧ ನ್ಯಾಯಾಲಯವಿರುವ, ಪ್ರಶಾಂತ ನಿರ್ಭಯ ವಾತಾವರಣವಿರುವ, ಬೆಳಕು ಚೆನ್ನಾಗಿರುವ, ಸಂಗೀತವಾದ್ಯಗಳ ದಧವನಿಯಿರುವ, ಪ್ರತಿಯೊಂದು ಮನೆಯೂ ಪ್ರಶಸ್ತವಾಗಿಯೂ ಸುಂದರವಾಗಿಯೂ ಇರುವ, ಶೂರರೂ ಧನಿಕರೂ ವಾಸಿಸುತ್ತಿರುವ, ಸರ್ವಕಾಲಗಳಲ್ಲಿಯೂ ವೇದಮಂತ್ರಗಳಿಂದ ನಿನಾದಿತವಾಗಿರುವ, ಸತತ ಸಮಾಜೋತ್ಸವ-ದೇವತಾಪೂಜೆಗಳು ನಡೆಯುವ, ಸುಂದರ ನಗರವನ್ನು ತನ್ನ ವಶವರ್ತಿ ಮಂತ್ರಿ-ಬಲ ಸಮೇತನಾಗಿ ರಾಜನು ಪ್ರವೇಶಿಸಬೇಕು.  

12087011a ತತ್ರ ಕೋಶಂ ಬಲಂ ಮಿತ್ರಂ ವ್ಯವಹಾರಂ ಚ ವರ್ಧಯೇತ್|

12087011c ಪುರೇ ಜನಪದೇ ಚೈವ ಸರ್ವದೋಷಾನ್ನಿವರ್ತಯೇತ್||

ಅಲ್ಲಿ ಕೋಶ, ಬಲ, ಮಿತ್ರ, ಮತ್ತು ವ್ಯವಹಾರಗಳನ್ನು ವೃದ್ಧಿಗೊಳಿಸಬೇಕು. ನಗರ ಮತ್ತು ಗ್ರಾಮೀಣಪ್ರದೇಶಗಳಲ್ಲಿನ ಸರ್ವ ದೋಷಗಳನ್ನೂ ನಿವಾರಿಸಬೇಕು.

12087012a ಭಾಂಡಾಗಾರಾಯುಧಾಗಾರಂ ಪ್ರಯತ್ನೇನಾಭಿವರ್ಧಯೇತ್|

12087012c ನಿಚಯಾನ್ವರ್ಧಯೇತ್ಸರ್ವಾಂಸ್ತಥಾ ಯಂತ್ರಗದಾಗದಾನ್||

ಭಾಂಡಾಗಾರಗಳನ್ನೂ ಆಯುಧಾಗಾರಗಳನ್ನೂ ಪ್ರಯತ್ನಪೂರ್ವಕವಾಗಿ ಹೆಚ್ಚಿಸಬೇಕು. ಎಲ್ಲವುಗಳ ಸಂಗ್ರಹವನ್ನೂ ಹೆಚ್ಚಿಸಬೇಕು. ಆಯುಧಗಳನ್ನು ತಯಾರಿಸುವ ಯಂತ್ರಗಳ ಕಾರ್ಯಾಗಾರಗಳನ್ನೂ ಹೆಚ್ಚಿಸಬೇಕು.

12087013a ಕಾಷ್ಠಲೋಹತುಷಾಂಗಾರದಾರುಶೃಂಗಾಸ್ಥಿವೈಣವಾನ್|

12087013c ಮಜ್ಜಾಸ್ನೇಹವಸಾಕ್ಷೌದ್ರಮೌಷಧಗ್ರಾಮಮೇವ ಚ||

12087014a ಶಣಂ ಸರ್ಜರಸಂ ಧಾನ್ಯಮಾಯುಧಾನಿ ಶರಾಂಸ್ತಥಾ|

12087014c ಚರ್ಮ ಸ್ನಾಯು ತಥಾ ವೇತ್ರಂ ಮುಂಜಬಲ್ಬಜಧನ್ವನಾನ್||

ರಾಜನು ಸಂಗ್ರಹಿಸಿಟ್ಟುಕೊಳ್ಳಬೇಕಾದ ವಸ್ತುಗಳು – ಕಟ್ಟಿಗೆ, ಚಿನ್ನ-ಬೆಳ್ಳಿ ಮೊದಲಾದ ವಿವಿಧ ಲೋಹಗಳು, ಧಾನ್ಯದ ಹೊಟ್ಟು, ಇದ್ದಿಲು, ಮರದ ದಿಮ್ಮಿಗಳು, ಪ್ರಾಣಿಗಳ ಕೊಂಬುಗಳು, ಮೂಳೆಗಳು, ಬಿದಿರುಗಳು, ಮೇಧಸ್ಸು, ಎಣ್ಣೆ, ಕೊಬ್ಬು, ಜೇನುತುಪ್ಪ, ಔಷಧಗಳ ದಾಸ್ತಾನು, ಸೆಣಬು, ರಾಳ, ಧಾನ್ಯಗಳು, ಅಸ್ತ್ರ-ಶಸ್ತ್ರಗಳು, ಬಾಣಗಳು, ಪ್ರಾಣಿಗಳ ಚರ್ಮಗಳು, ನರಗಳು, ಬೆತ್ತಗಳು, ಹಗ್ಗಕ್ಕಾಗಿ ಉಪಯೋಗಿಸುವ ಮುಂಜೀಹುಲ್ಲು ಮತ್ತು ಕರಡಿ ಹುಲ್ಲು.

12087015a ಆಶಯಾಶ್ಚೋದಪಾನಾಶ್ಚ ಪ್ರಭೂತಸಲಿಲಾ ವರಾಃ|

12087015c ನಿರೋದ್ಧವ್ಯಾಃ ಸದಾ ರಾಜ್ಞಾ ಕ್ಷೀರಿಣಶ್ಚ ಮಹೀರುಹಾಃ||

ಇವುಗಳು ನಾಶವಾಗದಂತೆ ಸದಾ ರಾಜನು ನೋಡಿಕೊಳ್ಳಬೇಕು – ಸರೋವರಗಳು, ಬಾವಿಗಳು, ದೊಡ್ಡ ಜಲಾಶಯಗಳು, ಹಾಲಿನಂತೆ ವಿವಿಧ ರಸಗಳನ್ನು ನೀದುವ ವೃಕ್ಷಗಳು.

12087016a ಸತ್ಕೃತಾಶ್ಚ ಪ್ರಯತ್ನೇನ ಆಚಾರ್ಯರ್ತ್ವಿಕ್ಪುರೋಹಿತಾಃ|

12087016c ಮಹೇಷ್ವಾಸಾಃ ಸ್ಥಪತಯಃ ಸಾಂವತ್ಸರಚಿಕಿತ್ಸಕಾಃ||

ಇವರನ್ನು ರಾಜನು ಪ್ರಯತ್ನಪೂರ್ವಕವಾಗಿ ಸತ್ಕರಿಸಬೇಕು: ಆಚಾರ್ಯರು, ಋತ್ವಿಜರು, ಪುರೋಹಿತರು, ಮಹಾಧನುರ್ಧಾರಿಗಳು, ಮನೆಗಳನ್ನು ಕಟ್ಟುವ ಶಿಲ್ಪಿಗಳು, ವರ್ಷಹ್ದ ಫಲಗಳನ್ನು ಸಿದ್ಧಗೊಳಿಸುವ ಜೋತಿಷ್ಯರು ಮತ್ತು ವೈದ್ಯರು.

12087017a ಪ್ರಾಜ್ಞಾ ಮೇಧಾವಿನೋ ದಾಂತಾ ದಕ್ಷಾಃ ಶೂರಾ ಬಹುಶ್ರುತಾಃ|

12087017c ಕುಲೀನಾಃ ಸತ್ತ್ವಸಂಪನ್ನಾ ಯುಕ್ತಾಃ ಸರ್ವೇಷು ಕರ್ಮಸು||

ಇವರನ್ನು ರಾಜನು ತನ್ನ ಸಕಲ ಕಾರ್ಯಗಳಲ್ಲಿ ನಿಯೋಜಿಸಿಕೊಳ್ಳಬೇಕು: ಪ್ರಾಜ್ಞರು, ಮೇಧಾವಿಗಳು, ಜಿತೇಂದ್ರಿಯರು, ಕಾರ್ಯದಕ್ಷರು, ಶೂರರು, ಬಹುಶ್ರುತರು, ಸತ್ಕುಲಪ್ರಸೂತರು, ಸತ್ಪುರುಷರು, ಮತ್ತು ಬಲಸಂಪನ್ನರು.

12087018a ಪೂಜಯೇದ್ಧಾರ್ಮಿಕಾನ್ರಾಜಾ ನಿಗೃಹ್ಣೀಯಾದಧಾರ್ಮಿಕಾನ್|

12087018c ನಿಯುಂಜ್ಯಾಚ್ಚ ಪ್ರಯತ್ನೇನ ಸರ್ವವರ್ಣಾನ್ಸ್ವಕರ್ಮಸು||

ರಾಜನು ಧಾರ್ಮಿಕರನ್ನು ಸತ್ಕರಿಸಬೇಕು, ಅಧಾರ್ಮಿಕರನ್ನು ನಿಗ್ರಹಿಸಬೇಕು. ಪ್ರಯತ್ನಪೂರ್ವಕವಾಗಿ ಎಲ್ಲ ವರ್ಣದವರನ್ನೂ ಅವರವರ ಕರ್ಮಗಳಲ್ಲಿ ನಿಯೋಜಿಸಬೇಕು.

12087019a ಬಾಹ್ಯಮಾಭ್ಯಂತರಂ ಚೈವ ಪೌರಜಾನಪದಂ ಜನಮ್|

12087019c ಚಾರೈಃ ಸುವಿದಿತಂ ಕೃತ್ವಾ ತತಃ ಕರ್ಮ ಪ್ರಯೋಜಯೇತ್||

ಗುಪ್ತಚರರ ಮೂಲಕ ನಗರ-ಗ್ರಾಮಗಳ ಒಳಗೆ ಮತ್ತು ಹೊರಗೆ ನಡುಯುವ ವಿದ್ಯಮಾನಗಳನ್ನು ಚೆನ್ನಾಗಿ ತಿಳಿದುಕೊಂಡು ಪುರ-ಗ್ರಾಮೀಣ ಜನರಿಗೆ ಪ್ರಯೋಜನವಾಗುವ ಕಾರ್ಯಗಳನ್ನು ಕೈಗೊಳ್ಳಬೇಕು.

12087020a ಚಾರಾನ್ಮಂತ್ರಂ ಚ ಕೋಶಂ ಚ ಮಂತ್ರಂ[7] ಚೈವ ವಿಶೇಷತಃ|

12087020c ಅನುತಿಷ್ಠೇತ್ಸ್ವಯಂ ರಾಜಾ ಸರ್ವಂ ಹ್ಯತ್ರ ಪ್ರತಿಷ್ಠಿತಮ್||

ಗುಪ್ತಚರರ ಭೇಟಿ, ಮಂತ್ರಾಲೋಚನೆ, ಮತ್ತು ಕೋಶದ ವಿಷಯ ಇವುಗಳನ್ನು ವಿಶೇಷವಾಗಿ ಸ್ವಯಂ ರಾಜನೇ ಮಾಡಬೇಕು. ಏಕೆಂದರೆ ಎಲ್ಲವೂ ಇವುಗಳನ್ನು ಆಧರಿಸಿವೆ.

12087021a ಉದಾಸೀನಾರಿಮಿತ್ರಾಣಾಂ ಸರ್ವಮೇವ ಚಿಕೀರ್ಷಿತಮ್|

12087021c ಪುರೇ ಜನಪದೇ ಚೈವ ಜ್ಞಾತವ್ಯಂ ಚಾರಚಕ್ಷುಷಾ||

ನಗರ ಮತ್ತು ಗ್ರಾಮಗಳಲ್ಲಿ ತಟಸ್ಥರು, ಮಿತ್ರರು ಮತ್ತು ಶತ್ರುಗಳು ಮಾಡುವ ಎಲ್ಲವನ್ನೂ ಚಾರರ ಮೂಲಕ ರಾಜನು ತಿಳಿದುಕೊಳ್ಳಬೇಕು.

12087022a ತತಸ್ತಥಾ ವಿಧಾತವ್ಯಂ ಸರ್ವಮೇವಾಪ್ರಮಾದತಃ|

12087022c ಭಕ್ತಾನ್ಪುಜಯತಾ ನಿತ್ಯಂ ದ್ವಿಷತಶ್ಚ ನಿಗೃಹ್ಣತಾ||

ಅನಂತರ ಎಲ್ಲವನ್ನೂ ಜಾಗರೂಕತೆಯಿಂದ ನಡೆಸಬೇಕು. ನಿತ್ಯವೂ ಭಕ್ತರನ್ನು ಸತ್ಕರಿಸಬೇಕು ಮತ್ತು ಶತ್ರುಗಳನ್ನು ನಿಗ್ರಹಿಸಬೇಕು.

12087023a ಯಷ್ಟವ್ಯಂ ಕ್ರತುಭಿರ್ನಿತ್ಯಂ ದಾತವ್ಯಂ ಚಾಪ್ಯಪೀಡಯಾ|

12087023c ಪ್ರಜಾನಾಂ ರಕ್ಷಣಂ ಕಾರ್ಯಂ ನ ಕಾರ್ಯಂ ಕರ್ಮ ಗರ್ಹಿತಮ್[8]||

ನಿತ್ಯವೂ ಕ್ರತುಗಳನ್ನು ನಡೆಸಬೇಕು. ಇತರರಿಗೆ ಪೀಡೆಯನ್ನುಂಟುಮಾಡದೇ ದಾನಮಾಡಬೇಕು. ಪ್ರಜೆಗಳ ರಕ್ಷಣೆಯನ್ನು ಮಾಡಬೇಕು. ನಿಂದನೀಯ ಕಾರ್ಯಗಳನ್ನು ಮಾಡಬಾರದು.

12087024a ಕೃಪಣಾನಾಥವೃದ್ಧಾನಾಂ ವಿಧವಾನಾಂ ಚ ಯೋಷಿತಾಮ್|

12087024c ಯೋಗಕ್ಷೇಮಂ ಚ ವೃತ್ತಿಂ ಚ ನಿತ್ಯಮೇವ ಪ್ರಕಲ್ಪಯೇತ್||

ನಿತ್ಯವೂ ದೀನರ, ಅನಾಥರ, ವೃದ್ಧರ ಮತ್ತು ವಿಧವೆಯರ ಯೋಗಕ್ಷೇಮಗಳನ್ನು ನೋಡಿಕೊಳ್ಳುತ್ತಾ ಅವರಿಗೆ ವೃತ್ತಿಗಳನ್ನು ಕಲ್ಪಿಸಿಕೊಡಬೇಕು.

12087025a ಆಶ್ರಮೇಷು ಯಥಾಕಾಲಂ ಚೇಲಭಾಜನಭೋಜನಮ್|

12087025c ಸದೈವೋಪಹರೇದ್ರಾಜಾ ಸತ್ಕೃತ್ಯಾನವಮನ್ಯ ಚ||

ಆಶ್ರಮಗಳಿಗೆ ಯಥಾಕಾಲಕ್ಕೆ ತಕ್ಕುದಾಗಿ ವಸ್ತ್ರಗಳನ್ನೂ, ಪಾತ್ರೆಗಳನ್ನೂ, ಭೋಜನಕ್ಕೆ ಬೇಕಾದ ಆಹಾರಪದಾರ್ಥಗಳನ್ನೂ ಕಳುಹಿಸಿಕೊಡುತ್ತಿರಬೇಕು. ರಾಜನು ಸದೈವ ಅವರನ್ನು ಸತ್ಕರಿಸಿ ಆದರಿಸಬೇಕು.

12087026a ಆತ್ಮಾನಂ ಸರ್ವಕಾರ್ಯಾಣಿ ತಾಪಸೇ ರಾಜ್ಯಮೇವ ಚ|

12087026c ನಿವೇದಯೇತ್ಪ್ರಯತ್ನೇನ ತಿಷ್ಠೇತ್ಪ್ರಹ್ವಶ್ಚ ಸರ್ವದಾ||

ಪ್ರಯತ್ನಪಟ್ಟು ತಪಸ್ವಿಗಳಿಗೆ ತನ್ನ ಮತ್ತು ರಾಜ್ಯದ ಸರ್ವ ಕಾರ್ಯಗಳ ಕುರಿತು ನಿವೇದಿಸಬೇಕು. ಸರ್ವದಾ ಅವರೊಂದಿಗೆ ವಿನಮ್ರನಾಗಿ ನಡೆದುಕೊಳ್ಳಬೇಕು.

12087027a ಸರ್ವಾರ್ಥತ್ಯಾಗಿನಂ ರಾಜಾ ಕುಲೇ ಜಾತಂ ಬಹುಶ್ರುತಮ್|

12087027c ಪೂಜಯೇತ್ತಾದೃಶಂ ದೃಷ್ಟ್ವಾ ಶಯನಾಸನಭೋಜನೈಃ||

ಸರ್ವಾರ್ಥತ್ಯಾಗಿಗಳನ್ನೂ, ಸತ್ಕುಲಪ್ರಸೂತರನ್ನೂ, ಬಹುಶ್ರುತರನ್ನೂ ರಾಜನು ಕಂಡೊಡನೆಯೇ ಕರೆತಂದು ಶಯನ, ಆಸನ, ಭೋಜನಾದಿಗಳಿಂದ ಸತ್ಕರಿಸಬೇಕು.

12087028a ತಸ್ಮಿನ್ಕುರ್ವೀತ ವಿಶ್ವಾಸಂ ರಾಜಾ ಕಸ್ಯಾಂ ಚಿದಾಪದಿ|

12087028c ತಾಪಸೇಷು ಹಿ ವಿಶ್ವಾಸಮಪಿ ಕುರ್ವಂತಿ ದಸ್ಯವಃ||

ಯಾವುದಾದರೂ ಆಪತ್ತು ಬಂದಾಗ ರಾಜನು ತಪಸ್ವಿಗಳಲ್ಲಿ ವಿಶ್ವಾಸವನ್ನಿಡಬೇಕು. ಏಕೆಂದರೆ ದಸ್ಯುಗಳೂ ಅವರಲ್ಲಿ ವಿಶ್ವಾಸವನ್ನಿಡುತ್ತಾರೆ.

12087029a ತಸ್ಮಿನ್ನಿಧೀನಾದಧೀತ ಪ್ರಜ್ಞಾಂ ಪರ್ಯಾದದೀತ ಚ|

12087029c ನ ಚಾಪ್ಯಭೀಕ್ಷ್ಣಂ ಸೇವೇತ ಭೃಶಂ ವಾ ಪ್ರತಿಪೂಜಯೇತ್||

ಆಪತ್ಕಾಲದಲ್ಲಿ ತನ್ನ ಐಶ್ವರ್ಯವನ್ನು ತಪಸ್ವಿಯ ಬಳಿ ಇಡಬಹುದು. ಅವನ ಸಲಹೆಗಳನ್ನು ಪಡೆದುಕೊಳ್ಳಬಹುದು. ಆದರೆ ಪದೇ ಪದೇ ಅವನ ಬಳಿ ಹೋಗಬಾರದು. ಅವನನ್ನು ಹೆಚ್ಚಾಗಿ ಸತ್ಕರಿಸಲೂ ಬಾರದು.

12087030a ಅನ್ಯಃ ಕಾರ್ಯಃ ಸ್ವರಾಷ್ಟ್ರೇಷು ಪರರಾಷ್ಟ್ರೇಷು ಚಾಪರಃ|

12087030c ಅಟವೀಷ್ವಪರಃ ಕಾರ್ಯಃ ಸಾಮಂತನಗರೇಷು ಚ||

ಸ್ವರಾಷ್ಟ್ರದಲ್ಲಿರುವ ಮತ್ತು ಪರರಾಷ್ಟ್ರಗಳಲ್ಲಿರುವ, ಅಡವಿಗಳಲ್ಲಿರುವ, ಮತ್ತು ಸಾಮಂತ ನಗರಗಳಲ್ಲಿರುವ ತಪಸ್ವಿಗಳನ್ನು ಗುಟ್ಟಾಗಿ ಸಂಧಿಸಿ ಅವರೊಡನೆ ರಾಜನು ಸೌಹಾರ್ದವನ್ನು ಬೆಳೆಸಿಕೊಳ್ಳಬೇಕು.

12087031a ತೇಷು ಸತ್ಕಾರಸಂಸ್ಕಾರಾನ್ಸಂವಿಭಾಗಾಂಶ್ಚ ಕಾರಯೇತ್|

12087031c ಪರರಾಷ್ಟ್ರಾಟವೀಸ್ಥೇಷು ಯಥಾ ಸ್ವವಿಷಯೇ ತಥಾ||

ಅವರನ್ನು ಸತ್ಕರಿಸುವುದರ ಜೊತೆಗೆ ಅವರಿಗೆ ಬೇಕಾದ ಅವಶ್ಯ ವಸ್ತುಗಳನ್ನು ಕೊಡಬೇಕು. ತನ್ನ ರಾಜ್ಯದಲ್ಲಿರುವ ತಪಸ್ವಿಗಳನ್ನು ಹೇಗೋ ಹಾಗೆ ಪರರಾಷ್ಟ್ರದಲ್ಲಿರುವ ತಪಸ್ವಿಗಳನ್ನೂ ಆದರಿಸಿ ಸತ್ಕರಿಸಬೇಕು.

12087032a ತೇ ಕಸ್ಯಾಂ ಚಿದವಸ್ಥಾಯಾಂ ಶರಣಂ ಶರಣಾರ್ಥಿನೇ|

12087032c ರಾಜ್ಞೇ ದದ್ಯುರ್ಯಥಾಕಾಮಂ ತಾಪಸಾಃ ಸಂಶಿತವ್ರತಾಃ||

ಸಂಶಿತವ್ರತ ತಾಪಸರು ಯಾವುದಾದರೂ ಆಪತ್ಕಾಲದಲ್ಲಿ ಶರಣಾರ್ಥಿಯಾದ ರಾಜನಿಗೆ ಸ್ವೇಚ್ಛೆಯಿಂದಲೇ ಆಶ್ರಯವನ್ನು ನೀಡುತ್ತಾರೆ.

12087033a ಏಷ ತೇ ಲಕ್ಷಣೋದ್ದೇಶಃ ಸಂಕ್ಷೇಪೇಣ ಪ್ರಕೀರ್ತಿತಃ|

12087033c ಯಾದೃಶಂ ನಗರಂ ರಾಜಾ ಸ್ವಯಮಾವಸ್ತುಮರ್ಹತಿ||

ಹೀಗೆ ರಾಜನು ಯಾವ ತರಹದ ನಗರದಲ್ಲಿ ವಾಸಮಾಡಬೇಕೆನ್ನುವುದನ್ನು ಸಂಕ್ಷೇಪವಾಗಿ ಹೇಳಿದ್ದೇನೆ. ಸ್ವಯಂ ನೀನು ಅಂಥಹ ನಗರದಲ್ಲಿಯೇ ವಾಸಿಸಬೇಕು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ದುರ್ಗಪರೀಕ್ಷಾಯಾಂ ಸಪ್ತಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ದುರ್ಗಪರೀಕ್ಷಾ ಎನ್ನುವ ಎಂಭತ್ತೇಳನೇ ಅಧ್ಯಾಯವು.

A Blue Flower On A White Background Royalty Free Cliparts, Vectors ...

[1] ನಾಲ್ಕು ದಿಕ್ಕುಗಳಲ್ಲಿಯೂ ಐದು ಯೋಜನಗಳ ದೂರ ಮರುಭೂಮಿಯಿಂದ ಆವೃತವಾಗಿರುವ ಪ್ರದೇಶ.

[2] ಸುತ್ತಲೂ ಮನುಷ್ಯನಿರ್ಮಿತ ಕೋಟೆಗಳಿಂದ ಆವೃತವಾಗಿರುವ ಪ್ರದೇಶ.

[3] ಪರ್ವತಗಳಿಂದ ಸುತ್ತುವರೆಯಲ್ಪಟ್ಟಿರುವ ಪ್ರದೇಶ.

[4] ಸುತ್ತಲೂ ಸೈನಿಕರಿಂದ ರಕ್ಷಿಸಲ್ಪಟ್ಟಿರುವ ಪ್ರದೇಶ.

[5] ಸುತ್ತಲೂ ನೀರಿನಿಂದ ಆವೃತವಾಗಿರುವ ಪ್ರದೇಶ.

[6] ಸುತ್ತಲೂ ಅರಣ್ಯದಿಂದ ಆವೃತವಾಗಿರುವ ಪ್ರದೇಶ.

[7] ದಂಡಂ ಎಂಬ ಪಾಠಾಂತರವಿದೆ.

[8] ನ ಕಾರ್ಯಂ ಧರ್ಮಬಾಧಕಮ್| ಎಂಬ ಪಾಠಾಂತರವಿದೆ.

Comments are closed.