Shanti Parva: Chapter 79

ಶಾಂತಿ ಪರ್ವ: ರಾಜಧರ್ಮ ಪರ್ವ

೭೯

ವರ್ಣಸಂಕರದ ಸಮಯದಲ್ಲಿ ಸರ್ವ ವರ್ಣದವರ ಪಾತ್ರ (೧-೪೩).

12079001 ಯುಧಿಷ್ಠಿರ ಉವಾಚ|

12079001a ವ್ಯಾಖ್ಯಾತಾ ಕ್ಷತ್ರಧರ್ಮೇಣ ವೃತ್ತಿರಾಪತ್ಸು ಭಾರತ|

12079001c ಕಥಂ ಚಿದ್ವೈಶ್ಯಧರ್ಮೇಣ ಜೀವೇದ್ವಾ ಬ್ರಾಹ್ಮಣೋ ನ ವಾ||

ಯುಧಿಷ್ಠಿರನು ಹೇಳಿದನು: “ಭಾರತ! ಬ್ರಾಹ್ಮಣನು ಆಪತ್ಕಾಲದಲ್ಲಿ ಕ್ಷತ್ರಿಯ ಧರ್ಮದ ವೃತ್ತಿಯನ್ನು ಮಾಡಬಹುದು ಎಂದು ನೀನು ಹೇಳಿದೆ. ಬ್ರಾಹ್ಮಣನಾದವನು ವೈಶ್ಯಧರ್ಮದ ವೃತ್ತಿಯನ್ನನುಸರಿಸಿ ಜೀವಿಸಬಹುದೇ?”

12079002 ಭೀಷ್ಮ ಉವಾಚ|

12079002a ಅಶಕ್ತಃ ಕ್ಷತ್ರಧರ್ಮೇಣ ವೈಶ್ಯಧರ್ಮೇಣ ವರ್ತಯೇತ್|

12079002c ಕೃಷಿಗೋರಕ್ಷಮಾಸ್ಥಾಯ ವ್ಯಸನೇ ವೃತ್ತಿಸಂಕ್ಷಯೇ||

ಭೀಷ್ಮನು ಹೇಳಿದನು: “ತನ್ನ ವೃತ್ತಿಯು ನಾಶವಾದ ವ್ಯಸನ ಪರಿಸ್ಥಿತಿಯಲ್ಲಿ ಬ್ರಾಹ್ಮಣನು ಕ್ಷತ್ರಧರ್ಮದ ವೃತ್ತಿಯನ್ನು ಅವಲಂಬಿಸಲು ಅಶಕ್ತನಾದರೆ ಕೃಷಿ-ಗೋರಕ್ಷೆಗಳನ್ನು ಅವಲಂಬಿಸಿ ವೈಶ್ಯಧರ್ಮದಂತೆ ನಡೆದುಕೊಳ್ಳಬಹುದು.”

12079003 ಯುಧಿಷ್ಠಿರ ಉವಾಚ|

12079003a ಕಾನಿ ಪಣ್ಯಾನಿ ವಿಕ್ರೀಣನ್ಸ್ವರ್ಗಲೋಕಾನ್ನ ಹೀಯತೇ|

12079003c ಬ್ರಾಹ್ಮಣೋ ವೈಶ್ಯಧರ್ಮೇಣ ವರ್ತಯನ್ಭರತರ್ಷಭ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಬ್ರಾಹ್ಮಣನು ವೈಶ್ಯಧರ್ಮದಲ್ಲಿ ನಡೆದುಕೊಂಡಿರುವಾಗ ಯಾವ ವಸ್ತುಗಳನ್ನು ಮಾರುವುದರಿಂದ ಅವನಿಗೆ ಸ್ವರ್ಗಲೋಕದ ಚ್ಯುತಿಯಾಗುವುದಿಲ್ಲ?”

12079004 ಭೀಷ್ಮ ಉವಾಚ|

12079004a ಸುರಾ ಲವಣಮಿತ್ಯೇವ ತಿಲಾನ್ಕೇಸರಿಣಃ ಪಶೂನ್|

12079004c ಋಷಭಾನ್ಮಧು ಮಾಂಸಂ ಚ ಕೃತಾನ್ನಂ ಚ ಯುಧಿಷ್ಠಿರ||

12079005a ಸರ್ವಾಸ್ವವಸ್ಥಾಸ್ವೇತಾನಿ ಬ್ರಾಹ್ಮಣಃ ಪರಿವರ್ಜಯೇತ್|

12079005c ಏತೇಷಾಂ ವಿಕ್ರಯಾತ್ತಾತ ಬ್ರಾಹ್ಮಣೋ ನರಕಂ ವ್ರಜೇತ್||

ಭೀಷ್ಮನು ಹೇಳಿದನು: “ಮದ್ಯ, ಉಪ್ಪು, ಸಿದ್ಧಪಡಿಸಿದ ದ್ರವಪದಾರ್ಥಗಳು, ಎಳ್ಳು, ಕುದುರೆ, ಕುರಿ, ಆಡು, ಹಸು, ಎತ್ತು ಮೊದಲಾದ ಪಶುಗಳು, ಜೇನುತುಪ್ಪ, ಮಾಂಸ, ಸಿದ್ಧಪಡಿಸಿದ ಅನ್ನ – ಇವುಗಳ ಮಾರಾಟವನ್ನು ಬ್ರಾಹ್ಮಣನು ಯಾವ ಅವಸ್ಥೆಗಳಲ್ಲಿಯೂ ಪರಿತ್ಯಜಿಸಬೇಕು. ಮಗೂ! ಇವುಗಳನ್ನು ಮಾರುವ ಬ್ರಾಹ್ಮಣನು ನರಕಕ್ಕೆ ಹೋಗುತ್ತಾನೆ.

12079006a ಅಜೋಽಗ್ನಿರ್ವರುಣೋ ಮೇಷಃ ಸೂರ್ಯೋಽಶ್ವಃ ಪೃಥಿವೀ ವಿರಾಟ್|

12079006c ಧೇನುರ್ಯಜ್ಞಶ್ಚ ಸೋಮಶ್ಚ ನ ವಿಕ್ರೇಯಾಃ ಕಥಂ ಚನ||

ಅಗ್ನಿಯ ರೂಪದ ಆಡು, ವರುಣನ ರೂಪದ ಟಗರು, ಸೂರ್ಯನ ರೂಪದ ಕುದುರೆ, ವಿರಾಟ್ ರೂಪದ ಭೂಮಿ, ಯಜ್ಞ-ಸೋಮಗಳ ರೂಪವಾದ ಹಸು – ಇವುಗಳನ್ನು ಬ್ರಾಹ್ಮಣನಾದವನು ಎಂದೂ ಮಾರಾಟಮಾಡಬಾರದು.

12079007a ಪಕ್ವೇನಾಮಸ್ಯ ನಿಮಯಂ ನ ಪ್ರಶಂಸಂತಿ ಸಾಧವಃ|

12079007c ನಿಮಯೇತ್ಪಕ್ವಮಾಮೇನ ಭೋಜನಾರ್ಥಾಯ ಭಾರತ||

ಭಾರತ! ಪಕ್ವ ಪದಾರ್ಥಗಳಿಂದ ಅಪಕ್ವ ಪದಾರ್ಥಗಳ ವಿನಿಮಯವನ್ನು ಸಾಧುಗಳು ಪ್ರಶಂಸಿಸುವುದಿಲ್ಲ. ಭೋಜನಾರ್ಥವಾಗಿ ಪಕ್ವಪದಾರ್ಥಕ್ಕೆ ಅಪಕ್ವ ಪದಾರ್ಥಗಳನ್ನು ವಿನಿಮಯ ಮಾಡಬಹುದು.

12079008a ವಯಂ ಸಿದ್ಧಮಶಿಷ್ಯಾಮೋ ಭವಾನ್ಸಾಧಯತಾಮಿದಮ್|

12079008c ಏವಂ ಸಮೀಕ್ಷ್ಯ ನಿಮಯನ್ನಾಧರ್ಮೋಽಸ್ತಿ ಕದಾ ಚನ||

“ನಾವು ಸಿದ್ಧವಾದ ಅನ್ನವನ್ನು ಬಯಸುತ್ತೇವೆ. ನೀವು ಈ ಅಕ್ಕಿಯಿಂದ ಅನ್ನವನ್ನು ತಯಾರಿಸಿ ಕೊಡಿ.” ಹೀಗೆ ಹೇಳಿ ಅಕ್ಕಿ ಮತ್ತು ಅನ್ನಗಳ ವಿನಿಮಯ ಮಾಡಿಕೊಂಡರೆ ಅದರಲ್ಲಿ ಯಾವ ಅಧರ್ಮವೂ ಇಲ್ಲ.

12079009a ಅತ್ರ ತೇ ವರ್ತಯಿಷ್ಯಾಮಿ ಯಥಾ ಧರ್ಮಃ ಪುರಾತನಃ|

12079009c ವ್ಯವಹಾರಪ್ರವೃತ್ತಾನಾಂ ತನ್ನಿಬೋಧ ಯುಧಿಷ್ಠಿರ||

ಯುಧಿಷ್ಠಿರ! ಈ ವಿಷಯದಲ್ಲಿ ವ್ಯವಹಾರ ಮಾಡುತ್ತಿದ್ದವರಲ್ಲಿ ಪುರಾತನ ಧರ್ಮವು ಹೇಗೆ ನಡೆಯುತ್ತಿತ್ತು ಎನ್ನುವುದನ್ನು ಹೇಳುತ್ತೇನೆ. ಅದನ್ನು ಕೇಳು.

12079010a ಭವತೇಽಹಂ ದದಾನೀದಂ ಭವಾನೇತತ್ಪ್ರಯಚ್ಚತು|

12079010c ರುಚಿತೇ ವರ್ತತೇ ಧರ್ಮೋ ನ ಬಲಾತ್ಸಂಪ್ರವರ್ತತೇ||

“ನಿನಗೆ ನಾನು ಇದನ್ನು ಕೊಡುತ್ತೇನೆ. ನೀನು ನನಗೆ ಅದನ್ನು ಕೊಡು.” ಎಂದು ಪರಸ್ಪರ ಸಮ್ಮತಿಯಿಂದ ಮತ್ತು ಸಂತೋಷದಿಂದ ಪದಾರ್ಥಗಳನ್ನು ವಿನಿಮಯ ಮಾಡಿಕೊಳ್ಳುವುದು ಧರ್ಮವಾಗಿತ್ತು. ಬಲವನ್ನು ಉಪಯೋಗಿಸುವುದು ಅಧರ್ಮವಾಗಿತ್ತು.

12079011a ಇತ್ಯೇವಂ ಸಂಪ್ರವರ್ತಂತ ವ್ಯವಹಾರಾಃ ಪುರಾತನಾಃ|

12079011c ಋಷೀಣಾಮಿತರೇಷಾಂ ಚ ಸಾಧು ಚೇದಮಸಂಶಯಮ್||

ಋಷಿಗಳಲ್ಲಿ ಮತ್ತು ಇತರ ಸಾಧು ಪುರುಷರಲ್ಲಿ ಪುರಾತನ ವ್ಯವಹಾರಗಳು ಹೀಗೆಯೇ ನಡೆಯುತ್ತಿದ್ದವು. ಅದರಲ್ಲಿ ಸಂಶಯವಿಲ್ಲ.”

12079012 ಯುಧಿಷ್ಠಿರ ಉವಾಚ|

12079012a ಅಥ ತಾತ ಯದಾ ಸರ್ವಾಃ ಶಸ್ತ್ರಮಾದದತೇ ಪ್ರಜಾಃ|

12079012c ವ್ಯುತ್ಕ್ರಾಮಂತಿ ಸ್ವಧರ್ಮೇಭ್ಯಃ ಕ್ಷತ್ರಸ್ಯ ಕ್ಷೀಯತೇ ಬಲಮ್||

ಯುಧಿಷ್ಠಿರನು ಹೇಳಿದನು: “ಅಯ್ಯಾ! ಒಂದು ವೇಳೆ ಪ್ರಜೆಗಳೆಲ್ಲರೂ ಶಸ್ತ್ರಧಾರಿಗಳಾಗಬೇಕಾಗಿ ಬಂದರೆ ಎಲ್ಲರೂ ಸ್ವಧರ್ಮಗಳನ್ನು ಅತಿಕ್ರಮಿಸಿದಂತಾಗಿ ರಾಜನ ಬಲವು ಕ್ಷೀಣಿಸುವುದಿಲ್ಲವೇ?

12079013a ರಾಜಾ ತ್ರಾತಾ ನ ಲೋಕೇ ಸ್ಯಾತ್ಕಿಂ ತದಾ ಸ್ಯಾತ್ಪರಾಯಣಮ್|

12079013c ಏತನ್ಮೇ ಸಂಶಯಂ ಬ್ರೂಹಿ ವಿಸ್ತರೇಣ ಪಿತಾಮಹ||

ಪಿತಾಮಹ! ಆಗ ರಾಜನು ಲೋಕಗಳ ತ್ರಾತಾರನೆಂದು ಹೇಗಾಗುತ್ತಾನೆ? ನನ್ನಲ್ಲಿರುವ ಈ ಸಂಶಯವನ್ನು ವಿಸ್ತಾರವಾಗಿ ಹೇಳಿ ಹೋಗಲಾಡಿಸು.”

12079014 ಭೀಷ್ಮ ಉವಾಚ|

12079014a ದಾನೇನ ತಪಸಾ ಯಜ್ಞೈರದ್ರೋಹೇಣ ದಮೇನ ಚ|

12079014c ಬ್ರಾಹ್ಮಣಪ್ರಮುಖಾ ವರ್ಣಾಃ ಕ್ಷೇಮಮಿಚ್ಚೇಯುರಾತ್ಮನಃ||

ಭೀಷ್ಮನು ಹೇಳಿದನು: “ಬ್ರಾಹ್ಮಣ ಪ್ರಮುಖರಾದ ಎಲ್ಲ ವರ್ಣದವರೂ ದಾನ, ತಪಸ್ಸು, ಯಜ್ಞ, ಅದ್ರೋಹ ಮತ್ತು ದಮಗಳಿಂದ ತಮ್ಮ ಕ್ಷೇಮವನ್ನು ಬಯಸುತ್ತಿರಬೇಕು.

12079015a ತೇಷಾಂ ಯೇ ವೇದಬಲಿನಸ್ತ ಉತ್ಥಾಯ ಸಮಂತತಃ|

12079015c ರಾಜ್ಞೋ ಬಲಂ ವರ್ಧಯೇಯುರ್ಮಹೇಂದ್ರಸ್ಯೇವ ದೇವತಾಃ||

ಅವರಲ್ಲಿ ಯಾರಲ್ಲಿ ವೇದಬಲವಿರುತ್ತದೆಯೋ ಅವರು, ದೇವತೆಗಳು ಇಂದ್ರನನ್ನು ಹೇಗೋ ಹಾಗೆ, ಎಲ್ಲಕಡೆಗಳಿಂದಲೂ ಮೇಲೆದ್ದು ರಾಜನ ಬಲವನ್ನು ವರ್ಧಿಸುತ್ತಾರೆ.

12079016a ರಾಜ್ಞೋ ಹಿ ಕ್ಷೀಯಮಾಣಸ್ಯ ಬ್ರಹ್ಮೈವಾಹುಃ ಪರಾಯಣಮ್|

12079016c ತಸ್ಮಾದ್ಬ್ರಹ್ಮಬಲೇನೈವ ಸಮುತ್ಥೇಯಂ ವಿಜಾನತಾ||

ಕ್ಷೀಣಿಸುತ್ತಿರುವ ರಾಜನಿಗೆ ಬ್ರಾಹ್ಮಣರೇ ಪರಾಯಣರು ಎಂದು ಹೇಳುತ್ತಾರೆ. ಆದುದರಿಂದ ಅಂತಹ ರಾಜನು ಬ್ರಹ್ಮಬಲದಿಂದಲೇ ಅಭ್ಯುದಯವನ್ನು ಹೊಂದಬೇಕು.

12079017a ಯದಾ ತು ವಿಜಯೀ ರಾಜಾ ಕ್ಷೇಮಂ ರಾಷ್ಟ್ರೇಽಭಿಸಂದಧೇತ್|

12079017c ತದಾ ವರ್ಣಾ ಯಥಾಧರ್ಮಮಾವಿಶೇಯುಃ ಸ್ವಕರ್ಮಸು||

ವಿಜಯಿಯಾದ ರಾಜನು ಪುನಃ ರಾಷ್ಟ್ರವನ್ನು ಕ್ಷೇಮಗೊಳಿಸಿದ ನಂತರ ಎಲ್ಲ ವರ್ಣದವರೂ ತಮ್ಮ ತಮ್ಮ ಕರ್ಮಗಳಲ್ಲಿ ಪುನಃ ತೊಡಗಿಸಿಕೊಳ್ಳಬೇಕು.

12079018a ಉನ್ಮರ್ಯಾದೇ ಪ್ರವೃತ್ತೇ ತು ದಸ್ಯುಭಿಃ ಸಂಕರೇ ಕೃತೇ|

12079018c ಸರ್ವೇ ವರ್ಣಾ ನ ದುಷ್ಯೇಯುಃ ಶಸ್ತ್ರವಂತೋ ಯುಧಿಷ್ಠಿರ||

ಯುಧಿಷ್ಠಿರ! ದಸ್ಯುಗಳು ವರ್ಣಸಂಕರವೆನ್ನುವ ಉನ್ಮಾದವನ್ನು ಮಾಡತೊಡಗಿದರೆ ಸರ್ವವರ್ಣದವರೂ ಶಸ್ತ್ರಧಾರಿಗಳಾಗಿ ಅವರನ್ನು ನಾಶಗೊಳಿಸಬೇಕು. ಅದರಲ್ಲಿ ಪಾಪವೆನ್ನುವುದಿಲ್ಲ.”

12079019 ಯುಧಿಷ್ಠಿರ ಉವಾಚ|

12079019a ಅಥ ಚೇತ್ಸರ್ವತಃ ಕ್ಷತ್ರಂ ಪ್ರದುಷ್ಯೇದ್ಬ್ರಾಹ್ಮಣಾನ್ಪ್ರತಿ|

12079019c ಕಸ್ತಸ್ಯ ಬ್ರಾಹ್ಮಣಸ್ತ್ರಾತಾ ಕೋ ಧರ್ಮಃ ಕಿಂ ಪರಾಯಣಮ್||

ಯುಧಿಷ್ಠಿರನು ಹೇಳಿದನು: “ಕ್ಷತ್ರಿಯರೇ ಬ್ರಾಹ್ಮನರ ವಿರುದ್ಧವಾಗಿ ನಡೆದುಕೊಂಡರೆ ಬ್ರಾಹ್ಮಣರನ್ನು ಪೊರೆಯುವವರು ಯಾರು? ಧರ್ಮದ ಪರಾಯಣರು ಆಗ ಯಾರಾಗುತ್ತಾರೆ?”

12079020 ಭೀಷ್ಮ ಉವಾಚ|

12079020a ತಪಸಾ ಬ್ರಹ್ಮಚರ್ಯೇಣ ಶಸ್ತ್ರೇಣ ಚ ಬಲೇನ ಚ|

12079020c ಅಮಾಯಯಾ ಮಾಯಯಾ ಚ ನಿಯಂತವ್ಯಂ ತದಾ ಭವೇತ್||

ಭೀಷ್ಮನು ಹೇಳಿದನು: “ಆಗ ಬ್ರಾಹ್ಮಣರು ತಪಸ್ಸು, ಬ್ರಹ್ಮಚರ್ಯ, ಶಸ್ತ್ರ ಮತ್ತು ಬಲಗಳಿಂದ, ನಿಷ್ಕಪಟ ವ್ಯವಹಾರಗಳಿಂದ ಅಥವಾ ಭೇದನೀತಿಯಿಂದ ಕ್ಷತ್ರಿಯರನ್ನು ಹತೋಟಿಗೆ ತರಬೇಕು.

12079021a ಕ್ಷತ್ರಸ್ಯಾಭಿಪ್ರವೃದ್ಧಸ್ಯ ಬ್ರಾಹ್ಮಣೇಷು ವಿಶೇಷತಃ|

12079021c ಬ್ರಹ್ಮೈವ ಸಂನಿಯಂತೃ ಸ್ಯಾತ್ ಕ್ಷತ್ರಂ ಹಿ ಬ್ರಹ್ಮಸಂಭವಮ್||

ರಾಜನಾದವನು ಪ್ರಜೆಗಳ ಮೇಲೆ ಮತ್ತು ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರ ಮೇಲೆ ಅತ್ಯಾಚಾರವನ್ನೆಸಗತೊಡಗಿದರೆ ಅವನನ್ನು ಬ್ರಾಹ್ಮಣರೇ ನಿಯಂತ್ರಿಸಬೇಕು. ಏಕೆಂದರೆ ಕ್ಷತ್ರಿಯನು ಬ್ರಾಹ್ಮಣನಿಂದಲೇ ಹುಟ್ಟಿದವನು.

12079022a ಅದ್ಭ್ಯೋಽಗ್ನಿರ್ಬ್ರಹ್ಮತಃ ಕ್ಷತ್ರಮಶ್ಮನೋ ಲೋಹಮುತ್ಥಿತಮ್|

12079022c ತೇಷಾಂ ಸರ್ವತ್ರಗಂ ತೇಜಃ ಸ್ವಾಸು ಯೋನಿಷು ಶಾಮ್ಯತಿ||

ನೀರಿನಲ್ಲಿ ಹುಟ್ಟಿದ ಅಗ್ನಿ, ಬ್ರಹ್ಮನಲ್ಲಿ ಹುಟ್ಟಿದ ಕ್ಷತ್ರ, ಕಲ್ಲಿನಿಂದ ಹುಟ್ಟಿದ ಲೋಹ ಈ ಎಲ್ಲ ಸರ್ವತ್ರವ್ಯಾಪಿಗಳೂ ತಮ್ಮ ತಮ್ಮ ಯೋನಿಗಳಲ್ಲಿಯೇ ಶಾಂತವಾಗುತ್ತವೆ.

12079023a ಯದಾ ಚಿನತ್ತ್ಯಯೋಽಶ್ಮಾನಮಗ್ನಿಶ್ಚಾಪೋಽಭಿಪದ್ಯತೇ|

12079023c ಕ್ಷತ್ರಂ ಚ ಬ್ರಾಹ್ಮಣಂ ದ್ವೇಷ್ಟಿ ತದಾ ಶಾಮ್ಯಂತಿ ತೇ ತ್ರಯಃ||

ಲೋಹವು ಕಲ್ಲನ್ನು ಭೇದಿಸಲು ಪ್ರಯತ್ನಿಸಿದರೆ, ಅಗ್ನಿಯು ನೀರನ್ನು ಹೊಕ್ಕರೆ ಮತ್ತು ಕ್ಷತ್ರಿಯನು ಬ್ರಾಹ್ಮಣನನ್ನು ದ್ವೇಷಿಸಿದರೆ ಈ ಮೂವರೂ ನಾಶಹೊಂದುತ್ತಾರೆ.

12079024a ತಸ್ಮಾದ್ಬ್ರಹ್ಮಣಿ ಶಾಮ್ಯಂತಿ ಕ್ಷತ್ರಿಯಾಣಾಂ ಯುಧಿಷ್ಠಿರ|

12079024c ಸಮುದೀರ್ಣಾನ್ಯಜೇಯಾನಿ ತೇಜಾಂಸಿ ಚ ಬಲಾನಿ ಚ||

ಯುಧಿಷ್ಠಿರ! ಆದುದರಿಂದ ಕ್ಷತ್ರಿಯರ ಪ್ರಚಂಡ ಮತ್ತು ಅಜೇಯ  ತೇಜಸ್ಸು-ಬಲಗಳು ಬ್ರಾಹ್ಮಣರಲ್ಲಿ ಶಾಂತವಾಗುತ್ತವೆ.

12079025a ಬ್ರಹ್ಮವೀರ್ಯೇ ಮೃದೂಭೂತೇ ಕ್ಷತ್ರವೀರ್ಯೇ ಚ ದುರ್ಬಲೇ|

12079025c ದುಷ್ಟೇಷು ಸರ್ವವರ್ಣೇಷು ಬ್ರಾಹ್ಮಣಾನ್ಪ್ರತಿ ಸರ್ವಶಃ||

12079026a ಯೇ ತತ್ರ ಯುದ್ಧಂ ಕುರ್ವಂತಿ ತ್ಯಕ್ತ್ವಾ ಜೀವಿತಮಾತ್ಮನಃ|

12079026c ಬ್ರಾಹ್ಮಣಾನ್ಪರಿರಕ್ಷಂತೋ ಧರ್ಮಮಾತ್ಮಾನಮೇವ ಚ||

12079027a ಮನಸ್ವಿನೋ ಮನ್ಯುಮಂತಃ ಪುಣ್ಯಲೋಕಾ ಭವಂತಿ ತೇ|

12079027c ಬ್ರಾಹ್ಮಣಾರ್ಥಂ ಹಿ ಸರ್ವೇಷಾಂ ಶಸ್ತ್ರಗ್ರಹಣಮಿಷ್ಯತೇ||

ಬ್ರಹ್ಮವೀರ್ಯವು ಮೃದುವಾದಾಗ, ಕ್ಷತ್ರವೀರ್ಯವು ದುರ್ಬಲವಾದಾಗ, ಸರ್ವವರ್ಣದವರೂ ಬ್ರಾಹ್ಮಣರ ಕುರಿತು ಎಲ್ಲರೀತಿಯಲ್ಲಿ ದುಷ್ಟರಾಗಿ ವರ್ತಿಸಿದಾಗ ತಮ್ಮ ಜೀವವನ್ನೇ ತೊರೆದು ಯುದ್ಧಮಾಡಿ ಬ್ರಾಹ್ಮಣರನ್ನು ರಕ್ಷಿಸುವವರು ಧರ್ಮಾತ್ಮರೇ ಸರಿ. ಅಂಥಹ ಮನಸ್ವೀ ಮನ್ಯುಮಂತರು ಪುಣ್ಯಲೋಕಗಳಿಗೆ ಹೋಗುತ್ತಾರೆ. ಬ್ರಾಹ್ಮಣರಿಗೋಸ್ಕರ ಎಲ್ಲರೂ ಶಸ್ತ್ರಗ್ರಹಣ ಮಾಡಬಹುದು.

12079028a ಅತಿ ಸ್ವಿಷ್ಟಸ್ವಧೀತಾನಾಂ ಲೋಕಾನತಿ ತಪಸ್ವಿನಾಮ್|

12079028c ಅನಾಶಕಾಗ್ನ್ಯೋರ್ವಿಶತಾಂ ಶೂರಾ ಯಾಂತಿ ಪರಾಂ ಗತಿಮ್||

ಯಜ್ಞಮಾಡಿದವರಿಗೆ, ವೇದಾಧ್ಯಯನ ಮಾಡಿದವರಿಗೆ, ತಪಸ್ಸು ಮತ್ತು ಉಪವಾಸ ವ್ರತಗಳನ್ನು ಮಾಡಿದವರಿಗೆ ದೊರಕುವ ಪರಮ ಲೋಕಗಳು ಮತ್ತು ಗತಿಯು ಬ್ರಾಹ್ಮಣರನ್ನು ರಕ್ಷಿಸುವ ಶೂರನಿಗೆ ದೊರೆಯುತ್ತದೆ.

12079028E ಏವಮೇವಾತ್ಮನಸ್ತ್ಯಾಗಾನ್ನಾನ್ಯಂ ಧರ್ಮಂ ವಿದುರ್ಜನಾಃ|

12079029a ತೇಭ್ಯೋ ನಮಶ್ಚ ಭದ್ರಂ ಚ ಯೇ ಶರೀರಾಣಿ ಜುಹ್ವತಿ||

ಹೀಗೆ ಧರ್ಮಯುದ್ಧದಲ್ಲಿ ದೇಹತ್ಯಾಗಕ್ಕಿಂತಲೂ ಹೆಚ್ಚಿನ ಧರ್ಮವೆಲ್ಲವೆಂದು ವಿದ್ವಾಂಸರು ತಿಳಿದಿದ್ದಾರೆ. ಹೀಗೆ ತಮ್ಮ ಶರೀರಗಳನ್ನು ಆಹುತಿಯನ್ನಾಗಿ ಕೊಡುವ ಅವರಿಗೆ ನಮಸ್ಕರ. ಅವರಿಗೆ ಮಂಗಳವಾಗಲಿ.

12079029c ಬ್ರಹ್ಮದ್ವಿಷೋ ನಿಯಚ್ಚಂತಸ್ತೇಷಾಂ ನೋಽಸ್ತು ಸಲೋಕತಾ|

12079029e ಬ್ರಹ್ಮಲೋಕಜಿತಃ ಸ್ವರ್ಗ್ಯಾನ್ವೀರಾಂಸ್ತಾನ್ಮನುರಬ್ರವೀತ್||

ಬ್ರಹ್ಮದ್ವೇಷಿಗಳನ್ನು ಸಂಹರಿಸಿದವರಿಗೆ ದೊರಕುವ ಲೋಕಗಳು ನಮಗೂ ದೊರಕಲಿ. ಬ್ರಹ್ಮಲೋಕವನ್ನು ಗೆದ್ದ ಸ್ವರ್ಗೀಯರಾದ ಅವರು ವೀರರು ಎಂದೇ ಮನುವು ಹೇಳಿದ್ದಾನೆ.

12079030a ಯಥಾಶ್ವಮೇಧಾವಭೃಥೇ ಸ್ನಾತಾಃ ಪೂತಾ ಭವಂತ್ಯುತ|

12079030c ದುಷ್ಕೃತಃ ಸುಕೃತಶ್ಚೈವ ತಥಾ ಶಸ್ತ್ರಹತಾ ರಣೇ||

ಅಶ್ವಮೇಧದ ನಂತರ ಅವಭೃತಸ್ನಾನದಲ್ಲಿ ಪವಿತ್ರರಾಗುವಂತೆ ಶಸ್ತ್ರದಿಂದ ರಣದಲ್ಲಿ ಹತರಾದವರ ದುಷ್ಕೃತ-ಸುಕೃತಗಳೂ ಪಾವನವಾಗುತ್ತವೆ.

12079031a ಭವತ್ಯಧರ್ಮೋ ಧರ್ಮೋ ಹಿ ಧರ್ಮಾಧರ್ಮಾವುಭಾವಪಿ|

12079031c ಕಾರಣಾದ್ದೇಶಕಾಲಸ್ಯ ದೇಶಕಾಲಃ ಸ ತಾದೃಶಃ||

ದೇಶ-ಕಾಲಗಳ ಕಾರಣಗಳಿಂದ ಅಧರ್ಮವು ಧರ್ಮವಾಗುತ್ತದೆ. ಮತ್ತು ಧರ್ಮವು ಅಧರ್ಮವೆನಿಸಿಕೊಳ್ಳುತ್ತದೆ.

12079032a ಮೈತ್ರಾಃ ಕ್ರೂರಾಣಿ ಕುರ್ವಂತೋ ಜಯಂತಿ ಸ್ವರ್ಗಮುತ್ತಮಮ್|

12079032c ಧರ್ಮ್ಯಾಃ ಪಾಪಾನಿ ಕುರ್ವಂತೋ ಗಚ್ಚಂತಿ ಪರಮಾಂ ಗತಿಮ್||

ಎಲ್ಲರಲ್ಲಿಯೂ ಮಿತ್ರಭಾವವನ್ನು ಹೊಂದಿರುವವರು ಕ್ರೂರಕರ್ಮಗಳನ್ನೆಸಗಿ ಉತ್ತಮ ಸ್ವರ್ಗವನ್ನು ಜಯಿಸುತ್ತಾರೆ. ಧಾರ್ಮಿಕರೂ ಪಾಪಕರ್ಮಗಳನ್ನೆಸಗಿ ಪರಮ ಗತಿಯನ್ನು ಹೊಂದುತ್ತಾರೆ.

12079033a ಬ್ರಾಹ್ಮಣಸ್ತ್ರಿಷು ಕಾಲೇಷು ಶಸ್ತ್ರಂ ಗೃಹ್ಣನ್ನ ದುಷ್ಯತಿ|

12079033c ಆತ್ಮತ್ರಾಣೇ ವರ್ಣದೋಷೇ ದುರ್ಗಸ್ಯ ನಿಯಮೇಷು ಚ||

ಆತ್ಮರಕ್ಷಣೆಗೆ, ವರ್ಣದೋಷವುಂಟಾದಾಗ ಮತ್ತು ದುರ್ಗದ ನಿಯಮವಿದ್ದಾಗ – ಈ ಮೂರು ಕಾಲಗಳಲ್ಲಿ ಬ್ರಾಹ್ಮಣರು ಶಸ್ತ್ರವನ್ನು ಧರಿಸಿದರೆ ಅದು ದುಷ್ಕರ್ಮವೆನಿಸುವುದಿಲ್ಲ.”

12079034 ಯುಧಿಷ್ಠಿರ ಉವಾಚ|

12079034a ಅಭ್ಯುತ್ಥಿತೇ ದಸ್ಯುಬಲೇ ಕ್ಷತ್ರಾರ್ಥೇ ವರ್ಣಸಂಕರೇ|

12079034c ಸಂಪ್ರಮೂಢೇಷು ವರ್ಣೇಷು ಯದ್ಯನ್ಯೋಽಭಿಭವೇದ್ಬಲೀ||

12079035a ಬ್ರಾಹ್ಮಣೋ ಯದಿ ವಾ ವೈಶ್ಯಃ ಶೂದ್ರೋ ವಾ ರಾಜಸತ್ತಮ|

12079035c ದಸ್ಯುಭ್ಯೋಽಥ ಪ್ರಜಾ ರಕ್ಷೇದ್ದಂಡಂ ಧರ್ಮೇಣ ಧಾರಯನ್||

12079036a ಕಾರ್ಯಂ ಕುರ್ಯಾನ್ನ ವಾ ಕುರ್ಯಾತ್ಸಂವಾರ್ಯೋ ವಾ ಭವೇನ್ನ ವಾ|

12079036c ನ ಸ್ಮ ಶಸ್ತ್ರಂ ಗ್ರಹೀತವ್ಯಮನ್ಯತ್ರ ಕ್ಷತ್ರಬಂಧುತಃ||

ಯುಧಿಷ್ಠಿರನು ಹೇಳಿದನು: “ರಾಜಸತ್ತಮ! ದಸ್ಯುಗಳ ಬಲವು ಹೆಚ್ಚಾದಾಗ, ವರ್ಣಸಂಕರವಾಗುತ್ತಿರುವಾಗ, ವರ್ಣಗಳಲ್ಲಿ ಗೊಂದಲವುಂಟಾದಾಗ, ಬ್ರಾಹ್ಮಣರಲ್ಲಿ, ವೈಶ್ಯರಲ್ಲಿ ಅಥವಾ ಶೂದ್ರರಲ್ಲಿ ಯಾರೊಬ್ಬನು ಬಲಶಾಲಿಯೂ ದಸ್ಯುಗಳ ಮೇಲೆ ದಂಡವನ್ನು ಎತ್ತಿ ಪ್ರಜೆಗಳನ್ನು ರಕ್ಷಿಸಿ ಧರ್ಮವನ್ನು ಸ್ಥಾಪಿಸುತ್ತಾನೆ. ಅಂಥಹ ಕಾರ್ಯವನ್ನು ಅವನು ಮಾಡಬಹುದೇ? ಅಥವಾ ಮಾಡಬಾರದೇ? ಅಂಥಹ ಸಮಯದಲ್ಲಿ ಕ್ಷತ್ರಿಯನಲ್ಲದಿದ್ದರೂ ಶಸ್ತ್ರಗಳನ್ನು ಹಿಡಿಯಬಹುದು.”

12079037 ಭೀಷ್ಮ ಉವಾಚ|

12079037a ಅಪಾರೇ ಯೋ ಭವೇತ್ಪಾರಮಪ್ಲವೇ ಯಃ ಪ್ಲವೋ ಭವೇತ್|

12079037c ಶೂದ್ರೋ ವಾ ಯದಿ ವಾಪ್ಯನ್ಯಃ ಸರ್ವಥಾ ಮಾನಮರ್ಹತಿ||

ಸಮುದ್ರದಲ್ಲಿ ಕಷ್ಟಕ್ಕೊಳಗಾಗಿ ತಲ್ಲಣಿಸುತ್ತಿರುವ ದೋಣಿಗೆ ಯಾರು ದೋಣಿಯಾಗಿ ಪಾರುಮಾಡುತ್ತನೋ ಅವನು ಶೂದ್ರನೇ ಆಗಿರಲಿ ಅಥವಾ ಅನ್ಯ ವರ್ಣದವನೇ ಆಗಿರಲಿ, ಅವನು ಮಾನಾರ್ಹ.

12079038a ಯಮಾಶ್ರಿತ್ಯ ನರಾ ರಾಜನ್ವರ್ತಯೇಯುರ್ಯಥಾಸುಖಮ್|

12079038c ಅನಾಥಾಃ ಪಾಲ್ಯಮಾನಾ ವೈ ದಸ್ಯುಭಿಃ ಪರಿಪೀಡಿತಾಃ||

12079039a ತಮೇವ ಪೂಜಯೇರಂಸ್ತೇ ಪ್ರೀತ್ಯಾ ಸ್ವಮಿವ ಬಾಂಧವಮ್|

12079039c ಮಹದ್ಧ್ಯಭೀಕ್ಷ್ಣಂ ಕೌರವ್ಯ ಕರ್ತಾ ಸನ್ಮಾನಮರ್ಹತಿ||

ರಾಜನ್! ಯಾರನ್ನು ಆಶ್ರಯಿಸಿ ಪ್ರಜೆಗಳು ಯಥಾಸುಖವನ್ನು ಪಡೆಯುತ್ತಾರೋ, ದಸ್ಯುಗಳಿಂದ ಪರಿಪೀಡಿತರಾಗಿ ಅನಾಥರಾದವರನ್ನು ಯಾರು ಪಾಲಿಸುತ್ತಾರೋ ಅವನನ್ನು ಸ್ವಂತ ಬಾಂಧವರಂತೆ ಪ್ರೀತಿಯಿಂದ ಗೌರವಿಸಬೇಕು. ಕೌರವ್ಯ! ಅಂಥವನು ರಾಜೋಚಿತ ಸನ್ಮಾನಕ್ಕೆ ಅರ್ಹನಾಗುತ್ತಾನೆ.

12079040a ಕಿಮುಕ್ಷ್ಣಾವಹತಾ ಕೃತ್ಯಂ ಕಿಂ ಧೇನ್ವಾ ಚಾಪ್ಯದುಗ್ಧಯಾ|

12079040c ವಂಧ್ಯಯಾ ಭಾರ್ಯಯಾ ಕೋಽರ್ಥಃ ಕೋಽರ್ಥೋ ರಾಜ್ಞಾಪ್ಯರಕ್ಷತಾ||

ಭಾರವನ್ನು ಹೊರಲಾರದ ಎತ್ತುಗಳು ಎಷ್ಟಿದ್ದರೂ ಪ್ರಯೋಜನವೇನು? ಹಾಲಿಲ್ಲದ ಹಸುವಿದ್ದೂ ಪ್ರಯೋಜನವೇನು? ಬಂಜೆ ಹೆಂಡತಿಯಿಂದ ಯಾವ ಪ್ರಯೋಜನವಿದೆ? ಪ್ರಜೆಗಳನ್ನು ರಕ್ಷಿಸಲು ಅಸಮರ್ಥನಾದ ರಾಜನಿಂದ ಏನು ಪ್ರಯೋಜನ?

12079041a ಯಥಾ ದಾರುಮಯೋ ಹಸ್ತೀ ಯಥಾ ಚರ್ಮಮಯೋ ಮೃಗಃ|

12079041c ಯಥಾ ಹ್ಯನೇತ್ರಃ ಶಕಟಃ ಪಥಿ ಕ್ಷೇತ್ರಂ ಯಥೋಷರಮ್||

12079042a ಏವಂ ಬ್ರಹ್ಮಾನಧೀಯಾನಂ ರಾಜಾ ಯಶ್ಚ ನ ರಕ್ಷಿತಾ|

12079042c ನ ವರ್ಷತಿ ಚ ಯೋ ಮೇಘಃ ಸರ್ವ ಏತೇ ನಿರರ್ಥಕಾಃ||

ಮರದ ಆನೆಯಂತೆ, ಚರ್ಮದಿಂದ ಮಾಡಿದ ಜಿಂಕೆಯಂತೆ, ಅಪ್ರಯೋಜಕ ಬಂಡಿಯಂತೆ, ಬೆಳೆಯು ಬೆಳೆಯದೇ ಇರುವ ಹೊಲದಂತೆ, ಮಳೆಸುರಿಸಿದ ಮೋಡಗಳು, ಪ್ರಜೆಗಳನ್ನು ರಕ್ಷಿಸದ ರಾಜನು ಮತ್ತು ವೇದಾಧ್ಯಯನ ಮಾಡದ ಬ್ರಾಹ್ಮಣ – ಇವರೆಲ್ಲರೂ ನಿರರ್ಥಕರೇ ಸರಿ.

12079043a ನಿತ್ಯಂ ಯಸ್ತು ಸತೋ ರಕ್ಷೇದಸತಶ್ಚ ನಿಬರ್ಹಯೇತ್|

12079043c ಸ ಏವ ರಾಜಾ ಕರ್ತವ್ಯಸ್ತೇನ ಸರ್ವಮಿದಂ ಧೃತಮ್||

ನಿತ್ಯವೂ ಯಾರು ಸತ್ಪುರುಷರನ್ನು ರಕ್ಷಿಸುವನೋ, ದುಷ್ಪುರುಷರನ್ನು ದಂಡಿಸುವನೋ ಅಂಥವನನ್ನೇ ರಾಜನನ್ನಾಗಿ ಮಾಡಿಕೊಳ್ಳಬೇಕು. ಅದರಿಂದಲೇ ಎಲ್ಲವೂ ನಿಂತಿವೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಏಕೋನಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಎಪ್ಪತ್ತೊಂಭತ್ತನೇ ಅಧ್ಯಾಯವು.

Close-up of two pink gerbera flowers against white background Wall ...

Comments are closed.