Shanti Parva: Chapter 334

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೩೪

ನಾರಾಯಣೀಯ ಸಮಾಪ್ತಿ (1-17).

12334001 ವೈಶಂಪಾಯನ ಉವಾಚ|

12334001a ಶ್ರುತ್ವೈತನ್ನಾರದೋ ವಾಕ್ಯಂ ನರನಾರಾಯಣೇರಿತಮ್|

12334001c ಅತ್ಯಂತಭಕ್ತಿಮಾನ್ ದೇವೇ ಏಕಾಂತಿತ್ವಮುಪೇಯಿವಾನ್||

ವೈಶಂಪಾಯನನು ಹೇಳಿದನು: “ನರನಾರಾಯಣರು ಹೇಳಿದ ಮಾತನ್ನು ಕೇಳಿ ಅತ್ಯಂತ ಭಕ್ತಿವಂತನಾದ ನಾರದನು ದೇವನಲ್ಲಿ ಏಕಾಂತಿತ್ವವನ್ನು ಹೊಂದಿದನು.

12334002a ಪ್ರೋಷ್ಯ ವರ್ಷಸಹಸ್ರಂ ತು ನರನಾರಾಯಣಾಶ್ರಮೇ|

12334002c ಶ್ರುತ್ವಾ ಭಗವದಾಖ್ಯಾನಂ ದೃಷ್ಟ್ವಾ ಚ ಹರಿಮವ್ಯಯಮ್|

12334002e ಹಿಮವಂತಂ ಜಗಾಮಾಶು ಯತ್ರಾಸ್ಯ ಸ್ವಕ ಆಶ್ರಮಃ||

ನರನಾರಾಯಣಾಶ್ರಮದಲ್ಲಿ ಸಹಸ್ರವರ್ಷಗಳ ಪರ್ಯಂತ ಭಗವದಾಖ್ಯಾನವನ್ನು ಕೇಳಿ ಮತ್ತು ಅವ್ಯಯ ಹರಿಯನ್ನು ನೋಡಿ ನಾರದನು ತನ್ನದೇ ಆಶ್ರಮವಿದ್ದ ಹಿಮವತ್ಪರ್ವಕ್ಕೆ ತೆರಳಿದನು.

12334003a ತಾವಪಿ ಖ್ಯಾತತಪಸೌ ನರನಾರಾಯಣಾವೃಷೀ|

12334003c ತಸ್ಮಿನ್ನೇವಾಶ್ರಮೇ ರಮ್ಯೇ ತೇಪತುಸ್ತಪ ಉತ್ತಮಮ್||

ಖ್ಯಾತತಪಸ್ವಿಗಳಾದ ನರನಾರಾಯಣ ಋಷಿಗಳೂ ಕೂಡ ಅದೇ ರಮ್ಯ ಆಶ್ರಮದಲ್ಲಿ ಉತ್ತಮ ತಪಸ್ಸನ್ನು ತಪಿಸಿದರು.

12334004a ತ್ವಮಪ್ಯಮಿತವಿಕ್ರಾಂತಃ ಪಾಂಡವಾನಾಂ ಕುಲೋದ್ವಹಃ|

12334004c ಪಾವಿತಾತ್ಮಾದ್ಯ ಸಂವೃತ್ತಃ ಶ್ರುತ್ವೇಮಾಮಾದಿತಃ ಕಥಾಮ್||

ಅಮಿತವಿಕ್ರಾಂತನೂ ಪಾಂದವರ ಕುಲೋದ್ವಹನೂ ಆದ ನೀನೂ ಕೂಡ ಈ ಕಥೆಯನ್ನು ಮೊದಲಿನಿಂದಲೂ ಕೇಳಿ ಇಂದು ಪವಿತ್ರಾತ್ಮನಾಗಿದ್ದೀಯೆ.

12334005a ನೈವ ತಸ್ಯ ಪರೋ ಲೋಕೋ ನಾಯಂ ಪಾರ್ಥಿವಸತ್ತಮ|

12334005c ಕರ್ಮಣಾ ಮನಸಾ ವಾಚಾ ಯೋ ದ್ವಿಷ್ಯಾದ್ವಿಷ್ಣುಮವ್ಯಯಮ್||

ಪಾರ್ಥಿವಸತ್ತಮ! ಕರ್ಮ, ಮನಸ್ಸು ಮತ್ತು ಮಾತುಗಳಿಂದ ಯಾರು ಅವ್ಯಯ ವಿಷ್ಣುವನ್ನು ದ್ವೇಷಿಸುತ್ತಾನೋ ಅವನಿಗೆ ಪರಲೋಕವೂ ಇಲ್ಲ; ಇಹಲೋಕದಲ್ಲಿಯೂ ಸುಖವಿಲ್ಲ.

12334006a ಮಜ್ಜಂತಿ ಪಿತರಸ್ತಸ್ಯ ನರಕೇ ಶಾಶ್ವತೀಃ ಸಮಾಃ|

12334006c ಯೋ ದ್ವಿಷ್ಯಾದ್ವಿಬುಧಶ್ರೇಷ್ಠಂ ದೇವಂ ನಾರಾಯಣಂ ಹರಿಮ್||

ವಿಬುಧಶ್ರೇಷ್ಠ ದೇವ ನಾರಾಯಣ ಹರಿಯನ್ನು ಯಾರು ದ್ವೇಷಿಸುತ್ತಾರೋ ಅವರ ಪಿತೃಗಳು ಶಾಶ್ವತ ವರ್ಷಗಳ ವರೆಗೆ ನರಕದಲ್ಲಿ ಮುಳುಗಿರುತ್ತಾರೆ.

12334007a ಕಥಂ ನಾಮ ಭವೇದ್ದ್ವೇಷ್ಯ ಆತ್ಮಾ ಲೋಕಸ್ಯ ಕಸ್ಯ ಚಿತ್|

12334007c ಆತ್ಮಾ ಹಿ ಪುರುಷವ್ಯಾಘ್ರ ಜ್ಞೇಯೋ ವಿಷ್ಣುರಿತಿ ಸ್ಥಿತಿಃ||

ಲೋಕದಲ್ಲಿ ತಮ್ಮನ್ನು ತಾವೇ ಹೇಗೆ ದ್ವೇಷಿಸಿಯಾರು? ಪುರುಷವ್ಯಾಘ್ರ! ವಿಷ್ಣುವು ಲೋಕಕ್ಕೇ ಆತ್ಮನು ಎಂದು ತಿಳಿ.

12334008a ಯ ಏಷ ಗುರುರಸ್ಮಾಕಮೃಷಿರ್ಗಂಧವತೀಸುತಃ|

12334008c ತೇನೈತತ್ಕಥಿತಂ ತಾತ ಮಾಹಾತ್ಮ್ಯಂ ಪರಮಾತ್ಮನಃ|

12334008e ತಸ್ಮಾಚ್ಚ್ರುತಂ ಮಯಾ ಚೇದಂ ಕಥಿತಂ ಚ ತವಾನಘ||

ಅನಘ! ಅಯ್ಯಾ! ನಮ್ಮ ಗುರು ಋಷಿ ಗಂಧವತೀಸುತನು ನಮಗೆ ಈ ಪರಮಾತ್ಮನ ಮಹಾತ್ಮ್ಯೆಯನ್ನು ಹೇಳಿದ್ದರು. ಅವನಿಂದ ಕೇಳಿದುದನ್ನು ನಾನು ನಿನಗೆ ಹೇಳಿದ್ದೇನೆ.

12334009a ಕೃಷ್ಣದ್ವೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ಪ್ರಭುಮ್|

12334009c ಕೋ ಹ್ಯನ್ಯಃ ಪುರುಷವ್ಯಾಘ್ರ ಮಹಾಭಾರತಕೃದ್ಭವೇತ್|

12334009e ಧರ್ಮಾನ್ನಾನಾವಿಧಾಂಶ್ಚೈವ ಕೋ ಬ್ರೂಯಾತ್ತಮೃತೇ ಪ್ರಭುಮ್||

ಕೃಷ್ಣದ್ವೈಪಾಯನ ವ್ಯಾಸನು ಪ್ರಭು ನಾರಾಯಣ ಎಂದು ತಿಳಿ. ಪುರುಷವ್ಯಾಘ್ರ! ಬೇರೆ ಯಾರು ತಾನೇ ಮಹಾಭಾರತವನ್ನು ರಚಿಸಬಹುದಾಗಿತ್ತು? ಆ ಪ್ರಭುವಿನ ಹೊರತಾಗಿ ಬೇರೆ ಯಾರು ತಾನೇ ನಾನಾವಿಧದ ಧರ್ಮಗಳ ಕುರಿತು ಹೇಳಬಹುದು?

12334010a ವರ್ತತಾಂ ತೇ ಮಹಾಯಜ್ಞೋ ಯಥಾ ಸಂಕಲ್ಪಿತಸ್ತ್ವಯಾ|

12334010c ಸಂಕಲ್ಪಿತಾಶ್ವಮೇಧಸ್ತ್ವಂ ಶ್ರುತಧರ್ಮಶ್ಚ ತತ್ತ್ವತಃ||

ನೀನು ಸಂಕಲ್ಪಿಸಿದಂತೆಯೇ ಈ ಮಹಾಯಜ್ಞವು ನಡೆಯಲಿ. ನೀನು ಅಶ್ವಮೇಧದ ಸಂಕಲ್ಪವನ್ನು ಮಾಡಿದ್ದೀಯೆ. ತತ್ತ್ವತಃ ಧರ್ಮವನ್ನೂ ಕೇಳಿ ತಿಳಿದುಕೊಂಡಿದ್ದೀಯೆ.””

[1]12334011a ಏತತ್ತು ಮಹದಾಖ್ಯಾನಂ ಶ್ರುತ್ವಾ ಪಾರಿಕ್ಷಿತೋ ನೃಪಃ|

12334011c ತತೋ ಯಜ್ಞಸಮಾಪ್ತ್ಯರ್ಥಂ ಕ್ರಿಯಾಃ ಸರ್ವಾಃ ಸಮಾರಭತ್||

ಈ ಮಹಾ ಆಖ್ಯಾನವನ್ನು ಕೇಳಿ ನೃಪ ಪಾರಿಕ್ಷಿತನು ಯಜ್ಞವನ್ನು ಸಮಾಪ್ತಗೊಳಿಸಲು ಎಲ್ಲ ಕ್ರಿಯೆಗಳನ್ನೂ ಪ್ರಾರಂಭಿಸಿದನು.

[2]12334012a ನಾರಾಯಣೀಯಮಾಖ್ಯಾನಮೇತತ್ತೇ ಕಥಿತಂ ಮಯಾ|

12334012c ನಾರದೇನ ಪುರಾ ರಾಜನ್ಗುರವೇ ಮೇ ನಿವೇದಿತಮ್|

12334012e ಋಷೀಣಾಂ ಪಾಂಡವಾನಾಂ ಚ ಶೃಣ್ವತೋಃ ಕೃಷ್ಣಭೀಷ್ಮಯೋಃ||

ವೈಶಂಪಾಯನನು ಹೇಳಿದನು: “ರಾಜನ್! ನಾನು ಹೇಳಿದ ಈ ನಾರಾಯಣೀಯ ಆಖ್ಯಾನವನ್ನು ಹಿಂದೆ ನಾರದನು ಋಷಿಗಳೂ, ಪಾಂಡವರೂ, ಕೃಷ್ಣ-ಭೀಷ್ಮರೂ ಕೇಳುತ್ತಿರುವಾಗ ನನ್ನ ಗುರು ವ್ಯಾಸನಿಗೆ ಹೇಳಿದ್ದನು.

12334013a ಸ ಹಿ ಪರಮಗುರುರ್ಭುವನಪತಿರ್

ಧರಣಿಧರಃ ಶಮನಿಯಮನಿಧಿಃ|

12334013c ಶ್ರುತಿವಿನಯನಿಧಿರ್ದ್ವಿಜಪರಮಹಿತಸ್

ತವ ಭವತು ಗತಿರ್ಹರಿರಮರಹಿತಃ||

ಅವನೇ ಪರಮ ಗುರು. ಭುವನ ಪತಿ, ಧರಣೀಧರ. ಶಮನಿಯಮ ನಿಧಿ. ಶೃತಿವಿನಯ ನಿಧಿಯೂ ದ್ವಿಜರ ಪರಮ ಹಿತೈಷಿಯೂ ಅಮರರ ಹಿತೈಷಿಯೂ ಆದ ಹರಿಯು ನಿನಗೆ ಆಶ್ರಯನಾಗಲಿ.

[3]12334014a ತಪಸಾಂ ನಿಧಿಃ ಸುಮಹತಾಂ ಮಹತೋ

ಯಶಸಶ್ಚ ಭಾಜನಮರಿಷ್ಟಕಹಾ|

12334014c ಏಕಾಂತಿನಾಂ ಶರಣದೋಽಭಯದೋ

ಗತಿದೋಽಸ್ತು ವಃ ಸ ಮಖಭಾಗಹರಃ||

ತಪಸ್ಸಿನ ನಿಧಿ, ಮಹತ್ತರವಾದವುಗಳಿಗಿಂತಲೂ ಮಹತ್ತರನಾದ, ಯಶೋವಂತ, ಅರಿಷ್ಟಗಳನ್ನು ಹೋಗಲಾಡಿಸುವ, ಏಕಾಂತಿಗಳ ಶರಣದ, ಅಭಯದಾಯಕ, ಮಖಭಾಗಹರನಾದ ಅವನು ನಿನಗೆ ಆಶ್ರಯನಾಗಲಿ.

12334015a ತ್ರಿಗುಣಾತಿಗಶ್ಚತುಷ್ಪಂಚಧರಃ[4]

ಪೂರ್ತೇಷ್ಟಯೋಶ್ಚ ಫಲಭಾಗಹರಃ|

12334015c ವಿದಧಾತಿ ನಿತ್ಯಮಜಿತೋಽತಿಬಲೋ

ಗತಿಮಾತ್ಮಗಾಂ ಸುಕೃತಿನಾಮೃಷಿಣಾಮ್||

ತ್ರಿಗುಣಾತಿಗನೂ, ತುಷ್ಪಂಚಧರನೂ, ಸಂಪೂರ್ಣವಾದ ಯಜ್ಞಗಳ ಫಲಭಾಗಹರನೂ, ನಿತ್ಯನೂ, ಅಜಿತನೂ, ಅತಿಬಲನೂ ಆದ ಆ ದೇವನು ಸುಕೃತ ಋಷಿಗಳಿಗೆ ಮತ್ತು ಆತ್ಮಗರಿಗೆ ಉತ್ತಮ ಗತಿಯನ್ನು ನೀಡುತ್ತಾನೆ.

12334016a ತಂ ಲೋಕಸಾಕ್ಷಿಣಮಜಂ ಪುರುಷಂ

ರವಿವರ್ಣಮೀಶ್ವರಗತಿಂ ಬಹುಶಃ|

12334016c ಪ್ರಣಮಧ್ವಮೇಕಮತಯೋ ಯತಯಃ

ಸಲಿಲೋದ್ಭವೋಽಪಿ ತಮೃಷಿಂ ಪ್ರಣತಃ||

ಆ ಲೋಕಸಾಕ್ಷಿ, ಅಜ, ಪುರುಷ, ರವಿವರ್ಣ, ಈಶ್ವರ, ಅನೇಕ ಗತಿಗಳಲ್ಲಿ ಚಲಿಸುವವವನ್ನು ಒಂದೇ ಮನಸ್ಸಿನಿಂದ ಬಾರಿ ಬಾರಿ ನಮಸ್ಕರಿಸಿರಿ. ಸಲಿಲೋದ್ಭವ ಬ್ರಹ್ಮನೂ ಆ ನಾರಾಯಣ ಋಷಿಯನ್ನು ನಮಸ್ಕರಿಸುತ್ತಾನೆ.

12334017a ಸ ಹಿ ಲೋಕಯೋನಿರಮೃತಸ್ಯ ಪದಂ

ಸೂಕ್ಷ್ಮಂ ಪುರಾಣಮಚಲಂ ಪರಮಮ್|

12334017c ತತ್ಸಾಂಖ್ಯಯೋಗಿಭಿರುದಾರಧೃತಂ

ಬುದ್ಧ್ಯಾ ಯತಾತ್ಮಭಿರ್ವಿದಿತಂ ಸತತಮ್||

ಅವನೇ ಲೋಕಯೋನಿ. ಅಮೃತ ಪದ. ಸೂಕ್ಷ್ಮ. ಪುರಾಣ. ಅಚಲ ಮತ್ತು ಪರಮ. ಜಿತಮನಸ್ಕರಾದ ಸಾಂಖ್ಯಯೋಗಿಗಳು ಅವನನ್ನು ಬುದ್ಧಿಯ ಮೂಲಕ ವರಿಸುತ್ತಾರೆ. ಅಂತಹ ಸನಾತನ ಶ್ರೀಹರಿಯನ್ನು ಸತತವೂ ನಮಸ್ಕರಿಸಿ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ಚತುರ್ಸ್ತ್ರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಮೂವತ್ನಾಲ್ಕನೇ ಅಧ್ಯಾಯವು.

Peacock feather isolated on white background Vector Image

[1] ಇಲ್ಲಿ ಸೂತ ಉವಾಚ ಎಂಬ ಪಾಠಾಂತರವು ಇದೆ (ಭಾರತ ದರ್ಶನ).

[2] ಇಲ್ಲಿ ವೈಶಂಪಾಯನ ಉವಾಚ ಎಂದು ಇರಬೇಕಾಗಿತ್ತು??

[3] ಭಾರತ ದರ್ಶನದಲ್ಲಿ ಈ ಶ್ಲೋಕವಿಲ್ಲ. ಇದಕ್ಕೆ ಬದಲಾಗಿ ಅದರಲ್ಲಿ ಈ ಕೆಳಗಿನ ಶ್ಲೋಕವಿದೆ: ಅಸುರವಧಕರಸ್ತಪಸಾಂ ನಿಧಿಃ ಸುಮಹತಾಂ ಯಶಸಾಂ ಚ ಭಾಜನಮ್| ಮಧುಕೈಟಭಹಾ ಕೃತಧರ್ಮವಿದಾಂ ಗತಿದೋಽಭಯದೋ ಮಖಭಾಗಹರೋಽಸ್ತು ಶರಂ ಸ ತೇ||

[4] ತ್ರಿಗುಣೋ ವಿಗುಣಶ್ಚತುರಾತ್ಮಧರಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.