Shanti Parva: Chapter 328

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೨೮

ಭಗವನ್ನಾಮ ನಿರ್ವಚನ

ಕೃಷ್ಣನು ಅರ್ಜುನನಿಗೆ ತನ್ನ ನಾಮಗಳ ಅರ್ಥವನ್ನು ತಿಳಿಸಿದುದು (1-53).

12328001 ಜನಮೇಜಯ ಉವಾಚ

12328001a ಅಸ್ತೌಷೀದ್ಯೈರಿಮಂ ವ್ಯಾಸಃ ಸಶಿಷ್ಯೋ ಮಧುಸೂದನಮ್|

12328001c ನಾಮಭಿರ್ವಿವಿಧೈರೇಷಾಂ ನಿರುಕ್ತಂ ಭಗವನ್ಮಮ||

12328002a ವಕ್ತುಮರ್ಹಸಿ ಶುಶ್ರೂಷೋಃ ಪ್ರಜಾಪತಿಪತೇರ್ಹರೇಃ|

12328002c ಶ್ರುತ್ವಾ ಭವೇಯಂ ಯತ್ಪೂತಃ ಶರಚ್ಚಂದ್ರ ಇವಾಮಲಃ||

ಜನಮೇಜಯನು ಹೇಳಿದನು: “ಭಗವನ್! ಶಿಷ್ಯಸಹಿತ ವ್ಯಾಸನು ಮಧುಸೂದನನನ್ನು ವಿವಿಧ ನಾಮಗಳಿಂದ ಸ್ತೋತ್ರಮಾಡಿದನು. ಆ ಪ್ರಜಾಪತಿಪತಿ ಹರಿಯ ನಾಮಗಳ ಶಬ್ಧಾರ್ಥಗಳನ್ನು ನನಗೆ ಹೇಳಬೇಕು. ಅದನ್ನು ಕೇಳಿ ಶರತ್ಕಾಲದ ಚಂದ್ರನಂತೆ ನಿರ್ಮಲನಾಗುತ್ತೇನೆ.”

12328003 ವೈಶಂಪಾಯನ ಉವಾಚ

12328003a ಶೃಣು ರಾಜನ್ಯಥಾಚಷ್ಟ ಫಲ್ಗುನಸ್ಯ ಹರಿರ್ವಿಭುಃ|

12328003c ಪ್ರಸನ್ನಾತ್ಮಾತ್ಮನೋ ನಾಮ್ನಾಂ ನಿರುಕ್ತಂ ಗುಣಕರ್ಮಜಮ್||

ವೈಶಂಪಾಯನನು ಹೇಳಿದನು: “ರಾಜನ್! ಹರಿ ವಿಭುವು ಪ್ರಸನ್ನಾತ್ಮನಾಗಿ ಫಲ್ಗುನನಿಗೆ ತನ್ನ ಗುಣ-ಕರ್ಮಗಳಿಂದ ಹುಟ್ಟಿದ ನಾಮಗಳ ನಿರುಕ್ತವನ್ನು ಹೇಗೆ ತಿಳಿಸಿದ್ದನೋ ಅದನ್ನು ಕೇಳು.

12328004a ನಾಮಭಿಃ ಕೀರ್ತಿತೈಸ್ತಸ್ಯ ಕೇಶವಸ್ಯ ಮಹಾತ್ಮನಃ|

12328004c ಪೃಷ್ಟವಾನ್ಕೇಶವಂ ರಾಜನ್ಫಲ್ಗುನಃ ಪರವೀರಹಾ||

ರಾಜನ್! ಮಹಾತ್ಮ ಕೇಶವನ ನಾಮಕೀರ್ತನೆಗಳ ಕುರಿತು ಪರವೀರಹ ಫಲ್ಗುನನು ಕೇಳಿದನು:

12328005 ಅರ್ಜುನ ಉವಾಚ

12328005a ಭಗವನ್ಭೂತಭವ್ಯೇಶ ಸರ್ವಭೂತಸೃಗವ್ಯಯ|

12328005c ಲೋಕಧಾಮ ಜಗನ್ನಾಥ ಲೋಕಾನಾಮಭಯಪ್ರದ||

12328006a ಯಾನಿ ನಾಮಾನಿ ತೇ ದೇವ ಕೀರ್ತಿತಾನಿ ಮಹರ್ಷಿಭಿಃ|

12328006c ವೇದೇಷು ಸಪುರಾಣೇಷು ಯಾನಿ ಗುಹ್ಯಾನಿ ಕರ್ಮಭಿಃ||

12328007a ತೇಷಾಂ ನಿರುಕ್ತಂ ತ್ವತ್ತೋಽಹಂ ಶ್ರೋತುಮಿಚ್ಚಾಮಿ ಕೇಶವ|

12328007c ನ ಹ್ಯನ್ಯೋ ವರ್ತಯೇನ್ನಾಮ್ನಾಂ ನಿರುಕ್ತಂ ತ್ವಾಮೃತೇ ಪ್ರಭೋ||

ಅರ್ಜುನನು ಹೇಳಿದನು: “ಭಗವನ್! ಭೂತಭವ್ಯೇಶ! ಸರ್ವಭೂತಗಳ ಸೃಷ್ಟಿಕರ್ತ! ಅವ್ಯಯ! ಲೋಕಧಾಮ! ಜಗನ್ನಾಥ! ಲೋಕಗಳಿಗೆ ಅಭಯಪ್ರದ! ದೇವ! ಮಹರ್ಷಿಗಳು ನಿನ್ನನ್ನು ಯಾವ ಯಾವ ನಾಮಗಳಿಂದ ಸಂಕೀರ್ತನ ಮಾಡುತ್ತಾರೋ ಮತ್ತು ಪುರಾಣ ಮತ್ತು ವೇದಗಳಲ್ಲಿ ನಿನ್ನ ಕರ್ಮಾನುಸಾರವಾಗಿ ಯಾವ ಗುಹ್ಯ ನಾಮಗಳಿವೆಯೋ ಅವುಗಳ ಶಬ್ಧಾರ್ಥಗಳನ್ನು ನಿನ್ನಿಂದ ಕೇಳಬಯಸುತ್ತೇನೆ. ಕೇಶವ! ಪ್ರಭೋ! ನಿನ್ನನ್ನು ಬಿಟ್ಟರೆ ನಿನ್ನ ದಿವ್ಯನಾಮಗಳ ವ್ಯಾಖ್ಯಾನವನ್ನು ಬೇರೆ ಯಾರೂ ಮಾಡಲಾರರು.”

12328008 ಶ್ರೀಭಗವಾನುವಾಚ

12328008a ಋಗ್ವೇದೇ ಸಯಜುರ್ವೇದೇ ತಥೈವಾಥರ್ವಸಾಮಸು|

12328008c ಪುರಾಣೇ ಸೋಪನಿಷದೇ ತಥೈವ ಜ್ಯೋತಿಷೇಽರ್ಜುನ||

12328009a ಸಾಂಖ್ಯೇ ಚ ಯೋಗಶಾಸ್ತ್ರೇ ಚ ಆಯುರ್ವೇದೇ ತಥೈವ ಚ|

12328009c ಬಹೂನಿ ಮಮ ನಾಮಾನಿ ಕೀರ್ತಿತಾನಿ ಮಹರ್ಷಿಭಿಃ||

ಶ್ರೀಭಗವಂತನು ಹೇಳಿದನು: “ಅರ್ಜುನ! ಋಗ್ಯಜುಸ್ಸಾಮಾಥರ್ವಣವೇದಗಳಲ್ಲಿಯೂ, ಪುರಾಣಗಳಲ್ಲಿಯೂ, ಉಪನಿಷತ್ತುಗಳಲ್ಲಿಯೂ, ಜ್ಯೋತಿಃಶಾಸ್ತ್ರದಲ್ಲಿಯೂ, ಸಾಂಖ್ಯಯೋಗಶಾಸ್ತ್ರಗಳಲ್ಲಿಯೂ ಮತ್ತು ಹಾಗೆಯೇ ಆಯುರ್ವೇದದಲ್ಲಿಯೂ ಮಹರ್ಷಿಗಳು ನನ್ನನ್ನು ಅನೇಕ ನಾಮಗಳಿಂದ ಸ್ತುತಿಸಿದ್ದಾರೆ.

12328010a ಗೌಣಾನಿ ತತ್ರ ನಾಮಾನಿ ಕರ್ಮಜಾನಿ ಚ ಕಾನಿ ಚಿತ್|

12328010c ನಿರುಕ್ತಂ ಕರ್ಮಜಾನಾಂ ಚ ಶೃಣುಷ್ವ ಪ್ರಯತೋಽನಘ|

12328010e ಕಥ್ಯಮಾನಂ ಮಯಾ ತಾತ ತ್ವಂ ಹಿ ಮೇಽರ್ಧಂ ಸ್ಮೃತಃ ಪುರಾ||

ಅನಘ! ಅವುಗಳಲ್ಲಿ ಕೆಲವು ನಾಮಗಳು ನನ್ನ ಗುಣಗಳಿಂದಾಗಿ ಹುಟ್ಟಿಕೊಂಡಿವೆ. ಇನ್ನು ಕೆಲವು ನನ್ನ ಕರ್ಮಗಳಿಂದಾಗಿ ಹುಟ್ಟಿಕೊಂಡಿವೆ. ನನ್ನ ಕರ್ಮಗಳಿಗೆ ಸಂಬಂಧಿಸಿದಂತೆ ನನಗೆ ಒದಗಿದ ನಾಮಗಳ ಶಬ್ದಾರ್ಥವನ್ನು ಹೇಳುವ ನನ್ನನ್ನು ಏಕಾಗ್ರಚಿತ್ತನಾಗಿ ಕೇಳು. ಅಯ್ಯಾ! ಹಿಂದಿನಿಂದಲೂ ನೀನು ನನ್ನ ಅರ್ಧಶರೀರಿಯೆಂದೇ ಪ್ರಸಿದ್ಧನಾಗಿರುವೆ.

12328011a ನಮೋಽತಿಯಶಸೇ ತಸ್ಮೈ ದೇಹಿನಾಂ ಪರಮಾತ್ಮನೇ|

12328011c ನಾರಾಯಣಾಯ ವಿಶ್ವಾಯ ನಿರ್ಗುಣಾಯ ಗುಣಾತ್ಮನೇ||

ಮಹಾಯಶೋವಂತನೂ, ದೇಹಿಗಳ ಪರಮಾತ್ಮನೂ, ವಿಶ್ವನೂ, ನಿರ್ಗುಣನೂ, ಗುಣಾತ್ಮನೂ ಆದ ನಾರಾಯಣನಿಗೆ ನಮಸ್ಕರಿಸುತ್ತೇನೆ.

12328012a ಯಸ್ಯ ಪ್ರಸಾದಜೋ ಬ್ರಹ್ಮಾ ರುದ್ರಶ್ಚ ಕ್ರೋಧಸಂಭವಃ|

12328012c ಯೋಽಸೌ ಯೋನಿರ್ಹಿ ಸರ್ವಸ್ಯ ಸ್ಥಾವರಸ್ಯ ಚರಸ್ಯ ಚ||

ಯಾರ ಪ್ರಸನ್ನತೆಯಿಂದ ಬ್ರಹ್ಮನು ಹುಟ್ಟಿದನೋ ಮತ್ತು ಯಾರ ಕ್ರೋಧದಿಂದ ರುದ್ರನು ಜನಿಸಿದನೋ ಅವನೇ ಸರ್ವ ಸ್ಥಾವರ ಚರಗಳ ಯೋನಿ.

12328013a ಅಷ್ಟಾದಶಗುಣಂ ಯತ್ತತ್ಸತ್ತ್ವಂ ಸತ್ತ್ವವತಾಂ ವರ|

12328013c ಪ್ರಕೃತಿಃ ಸಾ ಪರಾ ಮಹ್ಯಂ ರೋದಸೀ ಯೋಗಧಾರಿಣೀ|

12328013e ಋತಾ ಸತ್ಯಾಮರಾಜಯ್ಯಾ ಲೋಕಾನಾಮಾತ್ಮಸಂಜ್ಞಿತಾ||

ಸತ್ತ್ವವತರಲ್ಲಿ ಶ್ರೇಷ್ಠ! ಯಾರ ಸತ್ತ್ವವು ಅಷ್ಟಾದಶಗುಣಗಳಿಂದ ಪರಿಪೂರ್ಣವಾಗಿರುವುದೋ ಅವನು ಪರಾ ಪ್ರಕೃತಿಯು. ಯೋಗಧಾರಿಣಿಯಾಗಿ ಈ ಮಹಿಯನ್ನು ಧರಿಸಿದ್ದಾನೆ. ಋತ, ಸತ್ಯ, ಅಮರ, ಅಜಯನಾದ ಇವನು ಲೋಕಗಳ ಆತ್ಮನೆಂದು ತಿಳಿಯಲ್ಪಟ್ಟಿದ್ದಾನೆ.

12328014a ತಸ್ಮಾತ್ಸರ್ವಾಃ ಪ್ರವರ್ತಂತೇ ಸರ್ಗಪ್ರಲಯವಿಕ್ರಿಯಾಃ|

12328014c ತತೋ ಯಜ್ಞಶ್ಚ ಯಷ್ಟಾ ಚ ಪುರಾಣಃ ಪುರುಷೋ ವಿರಾಟ್|

12328014e ಅನಿರುದ್ಧ ಇತಿ ಪ್ರೋಕ್ತೋ ಲೋಕಾನಾಂ ಪ್ರಭವಾಪ್ಯಯಃ||

ಅವನಿಂದಲೇ ಸೃಷ್ಟಿ-ಪ್ರಲಯ ಕಾರರ್ಯಗಳು ನಡೆಯುತ್ತವೆ. ಅವನೇ ಯಜ್ಞ, ಯಜ್ಞವು ಯಾರಿಗಿದೆಯೋ ಅದೇ ಅವನು. ಅವನೇ ಪುರಾಣ ಪುರುಷ. ವಿರಾಟ್. ಲೋಕಗಳ ಉತ್ಪತ್ತಿ-ಲಯಗಳಿಗೆ ಕಾರಣನಾದ ಅವನನ್ನು ಅನಿರುದ್ಧ ಎಂದು ಕರೆಯುತ್ತಾರೆ.

12328015a ಬ್ರಾಹ್ಮೇ ರಾತ್ರಿಕ್ಷಯೇ ಪ್ರಾಪ್ತೇ ತಸ್ಯ ಹ್ಯಮಿತತೇಜಸಃ|

12328015c ಪ್ರಸಾದಾತ್ ಪ್ರಾದುರಭವತ್ಪದ್ಮಂ ಪದ್ಮನಿಭೇಕ್ಷಣ|

12328015e ತತ್ರ ಬ್ರಹ್ಮಾ ಸಮಭವತ್ಸ ತಸ್ಯೈವ ಪ್ರಸಾದಜಃ||

ಪದ್ಮನಿಭೇಕ್ಷಣ! ಬ್ರಹ್ಮನ ರಾತ್ರಿಯು ಕಳೆದು ಹಗಲು ಪ್ರಾಪ್ತವಾದಾಗ ಅನಿರುದ್ಧನ ಪ್ರಸಾದದಿಂದ ಪದ್ಮವೊಂದು ಪ್ರಾದುರ್ಭವಿಸಿತು. ಅವನ ಪ್ರಸಾದದಿಂದಲೇ ಆ ಬ್ರಹ್ಮನು ಅಲ್ಲಿ ಸಮುದ್ಭವಿಸಿದನು.

12328016a ಅಹ್ನಃ ಕ್ಷಯೇ ಲಲಾಟಾಚ್ಚ ಸುತೋ ದೇವಸ್ಯ ವೈ ತಥಾ|

12328016c ಕ್ರೋಧಾವಿಷ್ಟಸ್ಯ ಸಂಜಜ್ಞೇ ರುದ್ರಃ ಸಂಹಾರಕಾರಕಃ||

ಹಗಲು ಕಳೆದೊಡನೆಯೇ ಕ್ರೋಧಾವಿಷ್ಟನಾದ ಬ್ರಹ್ಮ ದೇವನ ಹಣೆಯಿಂದ ಲೋಸಂಹಾರಕಾರಕ ರುದ್ರನು ಹುಟ್ಟಿಕೊಂಡನು.

12328017a ಏತೌ ದ್ವೌ ವಿಬುಧಶ್ರೇಷ್ಠೌ ಪ್ರಸಾದಕ್ರೋಧಜೌ ಸ್ಮೃತೌ|

12328017c ತದಾದೇಶಿತಪಂಥಾನೌ ಸೃಷ್ಟಿಸಂಹಾರಕಾರಕೌ|

12328017e ನಿಮಿತ್ತಮಾತ್ರಂ ತಾವತ್ರ ಸರ್ವಪ್ರಾಣಿವರಪ್ರದೌ||

ಇವರಿಬ್ಬರೂ ವಿಬುಧರಲ್ಲಿ ಶ್ರೇಷ್ಠರು. ಒಬ್ಬನು ಪ್ರಸಾದದಿಂದ ಮತ್ತು ಇನ್ನೊಬ್ಬನು ಕ್ರೋಧದಿಂದ ಹುಟ್ಟಿದವರು. ಅವನ ಆದೇಶದಂತೆ ನಡೆಯುವ ಅವರಿಬ್ಬರೂ ಸೃಷ್ಟಿ-ಸಂಹಾರಕಾರಕರು. ಆದರೆ ಅದರಲ್ಲಿ ಸರ್ವಪ್ರಾಣಿಗಳಿಗೆ ವರವನ್ನು ನೀಡುವ ಅವರು ನಿಮಿತ್ರಮಾತ್ರ. 

12328018a ಕಪರ್ದೀ ಜಟಿಲೋ ಮುಂಡಃ ಶ್ಮಶಾನಗೃಹಸೇವಕಃ|

12328018c ಉಗ್ರವ್ರತಧರೋ ರುದ್ರೋ ಯೋಗೀ ತ್ರಿಪುರದಾರುಣಃ||

12328019a ದಕ್ಷಕ್ರತುಹರಶ್ಚೈವ ಭಗನೇತ್ರಹರಸ್ತಥಾ|

12328019c ನಾರಾಯಣಾತ್ಮಕೋ ಜ್ಞೇಯಃ ಪಾಂಡವೇಯ ಯುಗೇ ಯುಗೇ||

ಪಾಂಡವೇಯ! ಕಪರ್ದೀ, ಜಟಿಲ, ಮುಂಡ, ಶ್ಮಶಾನಗೃಹಸೇವಕ, ಉಗ್ರವ್ರತಧರ, ರುದ್ರ, ಯೋಗೀ, ತ್ರಿಪುರದಾರುಣ, ದಕ್ಷಕ್ರತುಹರ, ಭಗನೇತ್ರ, ಹರನು ಯುಗ ಯುಗದಲ್ಲಿಯೂ ನಾರಾಯಣಾತ್ಮಕನು ಎಂದು ತಿಳಿಯಬೇಕು.

12328020a ತಸ್ಮಿನ್ ಹಿ ಪೂಜ್ಯಮಾನೇ ವೈ ದೇವದೇವೇ ಮಹೇಶ್ವರೇ|

12328020c ಸಂಪೂಜಿತೋ ಭವೇತ್ಪಾರ್ಥ ದೇವೋ ನಾರಾಯಣಃ ಪ್ರಭುಃ||

ಪಾರ್ಥ! ಅದೇ ದೇವದೇವ ಮಹೇಶ್ವರನನ್ನು ಪೂಜಿಸಿದರೆ ದೇವ ಪ್ರಭು ನಾರಾಯಣನನ್ನು ಪೂಜಿಸಿದಂತೆಯೇ ಆಗುತ್ತದೆ.

12328021a ಅಹಮಾತ್ಮಾ ಹಿ ಲೋಕಾನಾಂ ವಿಶ್ವಾನಾಂ ಪಾಂಡುನಂದನ|

12328021c ತಸ್ಮಾದಾತ್ಮಾನಮೇವಾಗ್ರೇ ರುದ್ರಂ ಸಂಪೂಜಯಾಮ್ಯಹಮ್||

ಪಾಂಡುನಂದನ! ನಾನು ಲೋಕಗಳ ಮತ್ತು ವಿಶ್ವದ ಆತ್ಮನು. ಆದುದರಿಂದ ನನ್ನ ಆತ್ಮನೇ ಆಗಿರುವ ರುದ್ರನನ್ನು ನಾನು ಪೂಜಿಸುತ್ತೇನೆ.

12328022a ಯದ್ಯಹಂ ನಾರ್ಚಯೇಯಂ ವೈ ಈಶಾನಂ ವರದಂ ಶಿವಮ್|

12328022c ಆತ್ಮಾನಂ ನಾರ್ಚಯೇತ್ಕಶ್ಚಿದಿತಿ ಮೇ ಭಾವಿತಂ ಮನಃ|

12328022e ಮಯಾ ಪ್ರಮಾಣಂ ಹಿ ಕೃತಂ ಲೋಕಃ ಸಮನುವರ್ತತೇ||

ಒಂದುವೇಳೆ ನಾನು ನನ್ನ ಆತ್ಮ ಈಶಾನ ವರದ ಶಿವನನ್ನು ಅರ್ಚಿಸದೇ ಇದ್ದರೆ ನನ್ನನ್ನು ಯಾರೂ ಪೂಜಿಸುವುದಿಲ್ಲ ಎಂದು ನನ್ನ ಭಾವನೆಯಾಗಿದೆ. ನಾನು ಪ್ರಮಾಣವಾಗಿ ಮಾಡುವ ಇದನ್ನು ಲೋಕವು ಅನುಸರಿಸುತ್ತದೆ.

12328023a ಪ್ರಮಾಣಾನಿ ಹಿ ಪೂಜ್ಯಾನಿ ತತಸ್ತಂ ಪೂಜಯಾಮ್ಯಹಮ್|

12328023c ಯಸ್ತಂ ವೇತ್ತಿ ಸ ಮಾಂ ವೇತ್ತಿ ಯೋಽನು ತಂ ಸ ಹಿ ಮಾಮನು||

ಪ್ರಮಾಣವಾಗಿರುವುದನ್ನು ತಾನೇ ಎಲ್ಲರೂ ಪೂಜಿಸಬೇಕು. ಅದಕ್ಕಾಗಿ ನಾನು ಅವನನ್ನು ಪೂಜಿಸುತ್ತೇನೆ. ಅವನನ್ನು ತಿಳಿದವನು ನನ್ನನ್ನು ತಿಳಿಯುತ್ತಾನೆ. ಅವನನ್ನು ಅನುಸರಿಸುವವರು ನನ್ನನ್ನೂ ಅನುಸರಿಸುತ್ತಾರೆ.

12328024a ರುದ್ರೋ ನಾರಾಯಣಶ್ಚೈವ ಸತ್ತ್ವಮೇಕಂ ದ್ವಿಧಾಕೃತಮ್|

12328024c ಲೋಕೇ ಚರತಿ ಕೌಂತೇಯ ವ್ಯಕ್ತಿಸ್ಥಂ ಸರ್ವಕರ್ಮಸು||

ಕೌಂತೇಯ! ರುದ್ರ ಮತ್ತು ನಾರಾಯಣರು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿರುವ ಒಂದೇ ಸತ್ತ್ವ. ಇವರು ಸರ್ವಕರ್ಮಗಳಲ್ಲಿ ವ್ಯಕ್ತಿಶಃ ನೆಲೆಸಿಕೊಂಡು ಲೋಕದಲ್ಲಿ ಸಂಚರಿಸುತ್ತಿರುತ್ತಾರೆ.

12328025a ನ ಹಿ ಮೇ ಕೇನ ಚಿದ್ದೇಯೋ ವರಃ ಪಾಂಡವನಂದನ|

12328025c ಇತಿ ಸಂಚಿಂತ್ಯ ಮನಸಾ ಪುರಾಣಂ ವಿಶ್ವಮೀಶ್ವರಮ್|

12328025e ಪುತ್ರಾರ್ಥಮಾರಾಧಿತವಾನಾತ್ಮಾನಮಹಮಾತ್ಮನಾ||

ಪಾಂಡವನಂದನ! ನನಗೆ ಬೇರೆ ಯಾರೂ ವರವನ್ನು ಕೊಡಬೇಕಾಗದಿರಲಿ ಎಂದು ಮನಸಾರೆ ಯೋಚಿಸಿಯೇ ನಾನು ಪುತ್ರನಿಗೋಸ್ಕರವಾಗಿ ನನ್ನ ಆತ್ಮನಾದ ಆ ಪುರಾಣ ವಿಶ್ವ ಈಶ್ವರನನ್ನು ಆರಾಧಿಸಿದೆ.

12328026a ನ ಹಿ ವಿಷ್ಣುಃ ಪ್ರಣಮತಿ ಕಸ್ಮೈ ಚಿದ್ವಿಬುಧಾಯ ತು|

12328026c ಋತ ಆತ್ಮಾನಮೇವೇತಿ ತತೋ ರುದ್ರಂ ಭಜಾಮ್ಯಹಮ್||

ವಿಷ್ಣುವು ತನ್ನ ಆತ್ಮನಾದ ರುದ್ರನ ಹೊರತಾಗಿ ಬೇರೆ ಯಾವ ದೇವತೆಗಳಿಗೂ ನಮಿಸುವುದಿಲ್ಲ. ಆದುದರಿಂದ ಅವನನ್ನು ನಾನು ಭಜಿಸುತ್ತೇನೆ.

12328027a ಸಬ್ರಹ್ಮಕಾಃ ಸರುದ್ರಾಶ್ಚ ಸೇಂದ್ರಾ ದೇವಾಃ ಸಹರ್ಷಿಭಿಃ|

12328027c ಅರ್ಚಯಂತಿ ಸುರಶ್ರೇಷ್ಠಂ ದೇವಂ ನಾರಾಯಣಂ ಹರಿಮ್||

ಬ್ರಹ್ಮ-ರುದ್ರರೂ, ಇಂದ್ರನೊಂದಿಗೆ ದೇವತೆಗಳೂ ಋಷಿಗಳೂ ಸುರಶ್ರೇಷ್ಠ ದೇವ ನಾರಾಯಣ ಹರಿಯನ್ನು ಅರ್ಚಿಸುತ್ತಾರೆ.

12328028a ಭವಿಷ್ಯತಾಂ ವರ್ತತಾಂ ಚ ಭೂತಾನಾಂ ಚೈವ ಭಾರತ|

12328028c ಸರ್ವೇಷಾಮಗ್ರಣೀರ್ವಿಷ್ಣುಃ ಸೇವ್ಯಃ ಪೂಜ್ಯಶ್ಚ ನಿತ್ಯಶಃ||

ಭಾರತ! ಮುಂದಿನ, ಈಗಿರುವ ಮತ್ತು ಹಿಂದಿದ್ದ ಸರ್ವರಿಗೂ ವಿಷ್ಣುವು ಅಗ್ರಣಿಯು. ನಿತ್ಯ ಸೇವ್ಯನು ಮತ್ತು ಪೂಜ್ಯನು.

12328029a ನಮಸ್ವ ಹವ್ಯದಂ ವಿಷ್ಣುಂ ತಥಾ ಶರಣದಂ ನಮ|

12328029c ವರದಂ ನಮಸ್ವ ಕೌಂತೇಯ ಹವ್ಯಕವ್ಯಭುಜಂ ನಮ||

ಕೌಂತೇಯ! ಹವ್ಯವನ್ನು ನೀಡುವ  ಮತ್ತು ಆಶ್ರಯವನ್ನು ನೀಡುವ ವಿಷ್ಣುವಿಗೆ ನಮಸ್ಕರಿಸು. ವರದನಿಗೆ ನಮಸ್ಕರಿಸು. ಹವ್ಯಕವ್ಯಭುಜನಿಗೆ ನಮಸ್ಕರಿಸು.

12328030a ಚತುರ್ವಿಧಾ ಮಮ ಜನಾ ಭಕ್ತಾ ಏವಂ ಹಿ ತೇ ಶ್ರುತಮ್|

12328030c ತೇಷಾಮೇಕಾಂತಿನಃ ಶ್ರೇಷ್ಠಾಸ್ತೇ ಚೈವಾನನ್ಯದೇವತಾಃ|

12328030e ಅಹಮೇವ ಗತಿಸ್ತೇಷಾಂ ನಿರಾಶೀಃಕರ್ಮಕಾರಿಣಾಮ್||

ನನ್ನ ಭಕ್ತಜನರು ಚತುರ್ವಿಧರು ಎಂದು ನಿನಗೆ ತಿಳಿದೇ ಇದೆ. ಅವರಲ್ಲಿ ಅನ್ಯ ದೇವತೆಗಳಲ್ಲದೇ ನನ್ನನ್ನೋರ್ವನನ್ನೇ ಭಜಿಸುವ ಏಕಾಂತಿಗಳು ಶ್ರೇಷ್ಠರು. ನಿಷ್ಕಾಮ ಕರ್ಮಗಳನ್ನು ಮಾಡುವ ಅವರಿಗೆ ನಾನೇ ಗತಿಯು.

12328031a ಯೇ ಚ ಶಿಷ್ಟಾಸ್ತ್ರಯೋ ಭಕ್ತಾಃ ಫಲಕಾಮಾ ಹಿ ತೇ ಮತಾಃ|

12328031c ಸರ್ವೇ ಚ್ಯವನಧರ್ಮಾಣಃ ಪ್ರತಿಬುದ್ಧಸ್ತು ಶ್ರೇಷ್ಠಭಾಕ್||

ಉಳಿದ ಮೂರು ಬಗೆಯ ಭಕ್ತರೂ ಫಲಕಾಮಿಗಳು ಎಂದೇ ನನ್ನ ಮತ. ಅವರೆಲ್ಲರೂ ಸ್ವರ್ಗದಿಂದ ಕೆಳಗೆ ಬೀಳುವ ಧರ್ಮವುಳ್ಳವರಾಗಿರುತ್ತಾರೆ. ಆದರೆ ಜ್ಞಾನಿಯು ಮಾತ್ರ ಶ್ರೇಷ್ಠಫಲವನ್ನು ಪಡೆಯುತ್ತಾನೆ.

12328032a ಬ್ರಹ್ಮಾಣಂ ಶಿತಿಕಂಠಂ ಚ ಯಾಶ್ಚಾನ್ಯಾ ದೇವತಾಃ ಸ್ಮೃತಾಃ|

12328032c ಪ್ರಬುದ್ಧವರ್ಯಾಃ ಸೇವಂತೇ ಮಾಮೇವೈಷ್ಯಂತಿ ಯತ್ಪರಮ್|

12328032e ಭಕ್ತಂ ಪ್ರತಿ ವಿಶೇಷಸ್ತೇ ಏಷ ಪಾರ್ಥಾನುಕೀರ್ತಿತಃ||

ಜ್ಞಾನಿಗಳು ಬ್ರಹ್ಮನನ್ನಾಗಲೀ, ಶಿವನನ್ನಾಗಲೀ, ಅನ್ಯ ಯಾವ ದೇವತೆಯನ್ನೇ ಸೇವಿಸುತ್ತಿದ್ದರೂ ಕಡೆಯಲ್ಲಿ ಶ್ರೇಷ್ಠನಾದ ನನ್ನನ್ನೇ ಸೇರುತ್ತಾರೆ.

12328033a ತ್ವಂ ಚೈವಾಹಂ ಚ ಕೌಂತೇಯ ನರನಾರಾಯಣೌ ಸ್ಮೃತೌ|

12328033c ಭಾರಾವತರಣಾರ್ಥಂ ಹಿ ಪ್ರವಿಷ್ಟೌ ಮಾನುಷೀಂ ತನುಮ್||

ಕೌಂತೇಯ! ನೀನು ಮತ್ತು ನಾನು ನರ-ನಾರಾಯಣರೆಂದು ವಿಖ್ಯಾತರಾಗಿದ್ದೆವು. ಭೂಭಾರಹರಣಾರ್ಥವಾಗಿ ನಾವು ಮನುಷ್ಯ ಶರೀರವನ್ನು ಪ್ರವೇಶಿಸಿದ್ದೇವೆ.

12328034a ಜಾನಾಮ್ಯಧ್ಯಾತ್ಮಯೋಗಾಂಶ್ಚ ಯೋಽಹಂ ಯಸ್ಮಾಚ್ಚ ಭಾರತ|

12328034c ನಿವೃತ್ತಿಲಕ್ಷಣೋ ಧರ್ಮಸ್ತಥಾಭ್ಯುದಯಿಕೋಽಪಿ ಚ||

ಭಾರತ! ಆಧ್ಯಾತ್ಮಯೋಗವನ್ನು ತಿಳಿದಿದ್ದೇನೆ. ನಾನು ಯಾರು ಮತ್ತು ಎಲ್ಲಿಂದ ಬಂದವನು ಎನ್ನುವುದನ್ನೂ ತಿಳಿದಿದ್ದೇನೆ. ನಿವೃತ್ತಿಲಕ್ಷಣನೂ ಅಭ್ಯುದಯ ಧರ್ಮದವನೂ ಆಗಿದ್ದೇನೆ.

12328035a ನರಾಣಾಮಯನಂ ಖ್ಯಾತಮಹಮೇಕಃ ಸನಾತನಃ|

12328035c ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ|

12328035e ಅಯನಂ ಮಮ ತತ್ಪೂರ್ವಮತೋ ನಾರಾಯಣೋ ಹ್ಯಹಮ್||

ನರರ ಆಶ್ರಯಭೂತನಾದ ನಾನು ಖ್ಯಾತ. ಏಕ. ಮತ್ತು ಸನಾತನ. ನರನಿಂದ ಹುಟ್ಟಿದ ನೀರಿಗೆ ನಾರಾ ಎಂದು ಹೆಸರು. ನೀರಿನ ಮೇಲೆ ಹಿಂದೆ ಮಲಗಿಕೊಂಡಿದ್ದುದರಿಂದ ನಾನು ನಾರಾಯಣನಾದೆನು.

12328036a ಚಾದಯಾಮಿ ಜಗದ್ವಿಶ್ವಂ ಭೂತ್ವಾ ಸೂರ್ಯ ಇವಾಂಶುಭಿಃ|

12328036c ಸರ್ವಭೂತಾಧಿವಾಸಶ್ಚ ವಾಸುದೇವಸ್ತತೋ ಹ್ಯಹಮ್||

ಸೂರ್ಯನಾಗಿ ನನ್ನ ಕಿರಣಗಳಿಂದ ಈ ವಿಶ್ವ ಜಗತ್ತನ್ನು ತುಂಬಿಬಿಡುತ್ತೇನೆ. ಸರ್ವಭೂತಗಳಿಗೂ ನಾನು ವಾಸಸ್ಥಾನನಾಗಿದ್ದೇನೆ. ಆದುದರಿಂದ ನಾನು ವಾಸುದೇವ.

12328037a ಗತಿಶ್ಚ ಸರ್ವಭೂತಾನಾಂ ಪ್ರಜಾನಾಂ ಚಾಪಿ ಭಾರತ|

12328037c ವ್ಯಾಪ್ತಾ ಮೇ ರೋದಸೀ ಪಾರ್ಥ ಕಾಂತಿಶ್ಚಾಭ್ಯಧಿಕಾ ಮಮ||

ಭಾರತ! ಸರ್ವಭೂತಗಳ ಮತ್ತು ಪ್ರಜೆಗಳ ಗತಿಯು ನಾನು. ಮೇಲೆ ಮತ್ತು ಕೆಳಗೆ ನಾನು ವ್ಯಾಪಿಸಿದ್ದೇನೆ. ಪಾರ್ಥ! ನನ್ನ ಕಾಂತಿಯು ಅಧಿಕವಾಗಿದೆ.

12328038a ಅಧಿಭೂತಾನಿ ಚಾಂತೇಽಹಂ ತದಿಚ್ಚಂಶ್ಚಾಸ್ಮಿ ಭಾರತ|

12328038c ಕ್ರಮಣಾಚ್ಚಾಪ್ಯಹಂ ಪಾರ್ಥ ವಿಷ್ಣುರಿತ್ಯಭಿಸಂಜ್ಞಿತಃ||

ಭಾರತ! ಎಲ್ಲ ಭೂತಗಳೂ ಅಂತ್ಯದಲ್ಲಿ ಯಾರನ್ನು ಸೇರಲು ಬಯಸುತ್ತವೆಯೋ ಅದು ನಾನೇ ಆಗಿದ್ದೇನೆ. ಮತ್ತು ಎಲ್ಲಕಡೆಯೂ ಪಾದಗಳನ್ನು ಚಾಚಿರುವುದರಿಂದ ನಾನು ವಿಷ್ಣುವೆಂಬ ಸಂಜ್ಞೆಯನ್ನು ಪಡೆದಿದ್ದೇನೆ.

12328039a ದಮಾತ್ಸಿದ್ಧಿಂ ಪರೀಪ್ಸಂತೋ ಮಾಂ ಜನಾಃ ಕಾಮಯಂತಿ ಹಿ|

12328039c ದಿವಂ ಚೋರ್ವೀಂ ಚ ಮಧ್ಯಂ ಚ ತಸ್ಮಾದ್ದಾಮೋದರೋ ಹ್ಯಹಮ್||

ದಮ (ಇಂದ್ರಿಯ ನಿಗ್ರಹ) ದಿಂದ ಸಿದ್ಧಿಯನ್ನು ಬಯಸುವ ಜನರು ನನ್ನನ್ನೇ ಬಯಸುತ್ತಾರೆ. ದಿವ, ಉರ್ವಿ ಮತ್ತು ಮಧ್ಯಗಳನ್ನು ನನ್ನ ಉದರದಲ್ಲಿ ಅಡಗಿಸಿಕೊಂಡಿರುವುದರಿಂದ ನಾನು ದಾಮೋದರ[1]ನು.

12328040a ಪೃಶ್ನಿರಿತ್ಯುಚ್ಯತೇ ಚಾನ್ನಂ ವೇದಾ ಆಪೋಽಮೃತಂ ತಥಾ|

12328040c ಮಮೈತಾನಿ ಸದಾ ಗರ್ಭೇ ಪೃಶ್ನಿಗರ್ಭಸ್ತತೋ ಹ್ಯಹಮ್||

ಅನ್ನ, ವೇದ, ಆಪ ಮತ್ತು ಅಮೃತ ಇವುಗಳನ್ನು ಪೃಶ್ನಿ ಎಂದು ಕರೆಯುತ್ತಾರೆ. ಇವುಗಳು ಸದಾ ನನ್ನ ಗರ್ಭದಲ್ಲಿಯೇ ಇರುವುದರಿಂದ ನಾನು ಪೃಶ್ನಿಗರ್ಭನಾಗಿದ್ದೇನೆ.

12328041a ಋಷಯಃ ಪ್ರಾಹುರೇವಂ ಮಾಂ ತ್ರಿತಕೂಪಾಭಿಪಾತಿತಮ್|

12328041c ಪೃಶ್ನಿಗರ್ಭ ತ್ರಿತಂ ಪಾಹೀತ್ಯೇಕತದ್ವಿತಪಾತಿತಮ್||

12328042a ತತಃ ಸ ಬ್ರಹ್ಮಣಃ ಪುತ್ರ ಆದ್ಯೋ ಋಷಿವರಸ್ತ್ರಿತಃ|

12328042c ಉತ್ತತಾರೋದಪಾನಾದ್ವೈ ಪೃಶ್ನಿಗರ್ಭಾನುಕೀರ್ತನಾತ್||

ತ್ರಿತನು ಬಾವಿಗೆ ತಳ್ಳಲ್ಪಟ್ಟಾಗ ಋಷಿಗಳು ನನ್ನಲ್ಲಿ “ಪೃಶ್ನಿಗರ್ಭ! ಏಕತ-ದ್ವಿತರಿಂದ ತಳ್ಲಲ್ಪಟ್ಟ ತ್ರಿತನನ್ನು ಕಾಪಾಡು!” ಎಂದು ಹೇಳಿದರು. ಆಗ ಪೃಶ್ನಿಗರ್ಭ ಎಂದು ಅವರು ನನ್ನನ್ನು ಕರೆದುದರಿಂದ ಬ್ರಹ್ಮಪುತ್ರ ಋಷಿವರ ತ್ರಿತನು ಆ ಬಾವಿಯಿಂದ ಮೇಲೆ ಬಂದನು.

12328043a ಸೂರ್ಯಸ್ಯ ತಪತೋ ಲೋಕಾನಗ್ನೇಃ ಸೋಮಸ್ಯ ಚಾಪ್ಯುತ|

12328043c ಅಂಶವೋ ಯೇ ಪ್ರಕಾಶಂತೇ ಮಮ ತೇ ಕೇಶಸಂಜ್ಞಿತಾಃ|

12328043e ಸರ್ವಜ್ಞಾಃ ಕೇಶವಂ ತಸ್ಮಾನ್ಮಾಮಾಹುರ್ದ್ವಿಜಸತ್ತಮಾಃ||

ಲೋಕಗಳನ್ನು ಪ್ರಕಾಶಗೊಳಿಸುವ ಸೂರ್ಯ, ಅಗ್ನಿ ಮತ್ತು ಚಂದ್ರರ ಕಿರಣಗಳೇ ನನ್ನ ಕೇಶಗಳೆಂಬ ಸಂಜ್ಞೆಯನ್ನು ಪಡೆದಿವೆ. ಅಂತಹ ಕೇಶಯುಕ್ತನಾಗಿದ್ದುದರಿಂದ ಸರ್ವಜ್ಞ ದ್ವಿಜಸತ್ತಮರು ನನ್ನನ್ನು ಕೇಶವ ಎಂದು ಕರೆಯುತ್ತಾರೆ.

12328044a ಸ್ವಪತ್ನ್ಯಾಮಾಹಿತೋ ಗರ್ಭ ಉತಥ್ಯೇನ ಮಹಾತ್ಮನಾ|

12328044c ಉತಥ್ಯೇಽಂತರ್ಹಿತೇ ಚೈವ ಕದಾ ಚಿದ್ದೇವಮಾಯಯಾ|

12328044e ಬೃಹಸ್ಪತಿರಥಾವಿಂದತ್ತಾಂ ಪತ್ನೀಂ ತಸ್ಯ ಭಾರತ||

ಭಾರತ! ಮಹಾತ್ಮ ಉತಥ್ಯನಿಗೆ ತನ್ನ ಪತ್ನಿಯಲ್ಲಿ ಗರ್ಭವು ಬೆಳೆಯುತ್ತಿತ್ತು. ಉತಥ್ಯನ ಗರ್ಭವು ಒಳಗಿರುವಾಗ ಒಮ್ಮೆ ದೇವಮಾಯೆಯಿಂದಾಗಿ ಬೃಹಸ್ಪತಿಯು ಅವನ ಪತ್ನಿಯನ್ನು ಬಯಸಿದನು.

12328045a ತತೋ ವೈ ತಮೃಷಿಶ್ರೇಷ್ಠಂ ಮೈಥುನೋಪಗತಂ ತಥಾ|

12328045c ಉವಾಚ ಗರ್ಭಃ ಕೌಂತೇಯ ಪಂಚಭೂತಸಮನ್ವಿತಃ||

ಕೌಂತೇಯ! ಸಂಭೋಗಮಾಡುತ್ತಿದ್ದ ಆ ಋಷಿಶ್ರೇಷ್ಠನಿಗೆ ಪಂಚಭೂತಸಮನ್ವಿತ ಗರ್ಭವು ಹೇಳಿತು:

12328046a ಪೂರ್ವಾಗತೋಽಹಂ ವರದ ನಾರ್ಹಸ್ಯಂಬಾಂ ಪ್ರಬಾಧಿತುಮ್|

12328046c ಏತದ್ ಬೃಹಸ್ಪತಿಃ ಶ್ರುತ್ವಾ ಚುಕ್ರೋಧ ಚ ಶಶಾಪ ಚ||

“ವರದ! ಇಲ್ಲಿ ನಾನು ಮೊದಲೇ ಬಂದಿದ್ದೇನೆ. ತಾಯಿಯನ್ನು ಬಾಧಿಸಬೇಡ!” ಇದನ್ನು ಕೇಳಿದ ಬೃಹಸ್ಪತಿಯು ಕುಪಿತನಾದನು ಮತ್ತು ಶಪಿಸಿದನು ಕೂಡ.

12328047a ಮೈಥುನೋಪಗತೋ ಯಸ್ಮಾತ್ತ್ವಯಾಹಂ ವಿನಿವಾರಿತಃ|

12328047c ತಸ್ಮಾದಂಧೋ ಜಾಸ್ಯಸಿ ತ್ವಂ ಮಚ್ಚಾಪಾನ್ನಾತ್ರ ಸಂಶಯಃ||

“ಸಂಭೋಗದಲ್ಲಿ ತೊಡಗಿದ್ದಾಗ ನನ್ನನ್ನು ನೀನು ತಡೆದೆ. ಆದುದರಿಂದ ನೀನು ಅಂಧನಾಗುತ್ತೀಯೆ. ಇದು ನನ್ನ ಶಾಪ. ಇದರಲ್ಲಿ ಸಂಶಯವೇ ಇಲ್ಲ.”

12328048a ಸ ಶಾಪಾದೃಷಿಮುಖ್ಯಸ್ಯ ದೀರ್ಘಂ ತಮ ಉಪೇಯಿವಾನ್|

12328048c ಸ ಹಿ ದೀರ್ಘತಮಾ ನಾಮ ನಾಮ್ನಾ ಹ್ಯಾಸೀದೃಷಿಃ ಪುರಾ||

ಋಷಿಮುಖ್ಯನ ಶಾಪದಿಂದ ಅವನು ದಿರ್ಘ ಕತ್ತಲೆಯನ್ನೇ ಅನುಭವಿಸಿದನು. ಅವನೇ ಹಿಂದೆ ದೀರ್ಘತಮಾ ಎಂಬ ಹೆಸರಿನ ಋಷಿಯಾಗಿದ್ದನು.

12328049a ವೇದಾನವಾಪ್ಯ ಚತುರಃ ಸಾಂಗೋಪಾಂಗಾನ್ ಸನಾತನಾನ್|

12328049c ಪ್ರಯೋಜಯಾಮಾಸ ತದಾ ನಾಮ ಗುಹ್ಯಮಿದಂ ಮಮ||

12328050a ಆನುಪೂರ್ವ್ಯೇಣ ವಿಧಿನಾ ಕೇಶವೇತಿ ಪುನಃ ಪುನಃ|

12328050c ಸ ಚಕ್ಷುಷ್ಮಾನ್ಸಮಭವದ್ಗೌತಮಶ್ಚಾಭವತ್ಪುನಃ||

ಆ ಚತುರನು ಸಾಂಗೋಪಾಂಗ ಸನಾತನ ವೇದಗಳನ್ನು ಪಡೆದು ಕೇಶವ ಎಂಬ ನನ್ನ ಈ ಗುಹ್ಯ ನಾಮವನ್ನು ವಿಧಿವತ್ತಾಗಿ ಪುನಃ ಪುನಃ ಜಪಿಸತೊಡಗಿದನು. ಅವನು ದೃಷ್ಟಿವಂತನಾದನು ಮತ್ತು ಪುನಃ ಗೌತಮನೆಂದೂ ಆದನು.

12328051a ಏವಂ ಹಿ ವರದಂ ನಾಮ ಕೇಶವೇತಿ ಮಮಾರ್ಜುನ|

12328051c ದೇವಾನಾಮಥ ಸರ್ವೇಷಾಮೃಷೀಣಾಂ ಚ ಮಹಾತ್ಮನಾಮ್||

ಅರ್ಜುನ! ಹೀಗೆ ಕೇಶವ ಎಂಬ ನನ್ನ ಹೆಸರು ದೇವತೆಗಳಿಗೂ ಸರ್ವ ಮಹಾತ್ಮ ಋಷಿಗಳಿಗೂ ವರದಾಯಕವಾಗಿದೆ.

12328052a ಅಗ್ನಿಃ ಸೋಮೇನ ಸಂಯುಕ್ತ ಏಕಯೋನಿ ಮುಖಂ ಕೃತಮ್|

12328052c ಅಗ್ನೀಷೋಮಾತ್ಮಕಂ ತಸ್ಮಾಜ್ಜಗತ್ ಕೃತ್ಸ್ನಂ ಚರಾಚರಮ್||

ಅಗ್ನಿಯು ಸೋಮನೊಡನೆ ಸೇರಿ ಏಕಯೋನಿತ್ವವನ್ನು ಹೊಂದಿರುವನು. ಆದುದರಿಂದ ಚರಾಚರಾತ್ಮಕವಾದ ಸಕಲಜಗತ್ತೂ ಅಗ್ನೀಷೋಮಮಯವಾಗಿದೆ.

12328053A ಅಪಿ ಹಿ ಪುರಾಣೇ ಭವತಿ|

12328053B ಏಕಯೋನ್ಯಾತ್ಮಕಾವಗ್ನೀಷೋಮೌ||

12328053C ದೇವಾಶ್ಚಾಗ್ನಿಮುಖಾ ಇತಿ|

ಪುರಾಣದಲ್ಲಿಯೂ ಅಗ್ನೀಷೋಮರು ಏಕಯೋನಾತ್ಮಕರು ಮತ್ತು ದೇವತೆಗಳೆಲ್ಲರಿಗೂ ಅಗ್ನಿಯೇ ಮುಖ ಎಂದು ಹೇಳಲ್ಪಟ್ಟಿದೆ.

12328053D ಏಕಯೋನಿತ್ವಾಚ್ಚ ಪರಸ್ಪರಂ ಮಹಯಂತೋ ಲೋಕಾನ್

         ಧಾರಯತ ಇತಿ||

ಏಕಯೋನಿತ್ವದಿಂದ ಅಗ್ನೀಷೋಮರು ಪರಸ್ಪರ  ಭೋಕ್ತೃ-ಭೋಜ್ಯತ್ವಭಾವದಿಂದ ಇರುವರು ಮತ್ತು ಲೋಕಗಳನ್ನು ಧರಿಸಿರುವರು ಎಂದೂ ಪುರಾಣವು ಹೇಳುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ಅಷ್ಟವಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಇಪ್ಪತ್ತೆಂಟನೇ ಅಧ್ಯಾಯವು.

Infantil y Primaria: Mandalas para colorear | Imagenes de mandalas, Mandalas para colorear, Libro de colores

[1] ದಮ ಏವ ದಾಮಃ| ತೇನ ಉದೀರ್ಯತಿ ಉನ್ನತಿಂ ಪ್ರಾಪ್ನೋತಿ ಯಸ್ಮಾತ್ ಸಃ ದಾಮೋದರಃ|| ದಮವೇ ದಾಮ. ಆ ದಮದಿಂದ ಯಾವನ ಮೂಲಕ ಉನ್ನತಿಯನ್ನು ಋಷಿಗಳು ಹೊಂದುವ್ವರೋ ಅವನು ದಾಮೋದರ.

Comments are closed.