Shanti Parva: Chapter 324

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೨೪

ಯಜ್ಞದಲ್ಲಿ ಹವಿಸ್ಸಾಗಿ ಉಪಯೋಗಿಸಬೇಕಾದ ’ಅಜ”ದ ಶಬ್ಧಾರ್ಥವು “ಧಾನ್ಯಬೀಜ” ಎಂದೇ ಹೊರತು ಆಡಲ್ಲ ಎಂಬ ವಿಷಯವನ್ನು ತಿಳಿದಿದ್ದರೂ ಪಕ್ಷಪಾತವನ್ನು ತೋರಿದ ಕಾರಣ ಉಪರಿಚರವಸುವು ಸ್ವರ್ಗದಿಂದ ಭ್ರಷ್ಟನಾದುದು (1-16); ಭಗವಂತನ ಕೃಪೆಯಿಂದ ಪುನಃ ಸ್ವಸ್ಥಾನವನ್ನು ಸೇರಿದುದು (17-39).

12324001 ಯುಧಿಷ್ಠಿರ ಉವಾಚ|

12324001a ಯದಾ ಭಕ್ತೋ ಭಗವತ ಆಸೀದ್ರಾಜಾ ಮಹಾವಸುಃ|

12324001c ಕಿಮರ್ಥಂ ಸ ಪರಿಭ್ರಷ್ಟೋ ವಿವೇಶ ವಿವರಂ ಭುವಃ||

ಯುಧಿಷ್ಠಿರನು ಹೇಳಿದನು: “ಮಹಾವಸುವು ಭಗವಂತ ಭಕ್ತನಾಗಿದ್ದರೂ ಕೂಡ ಯಾವ ಕಾರಣಕ್ಕಾಗಿ ಪರಿಭ್ರಷ್ಟನಾಗಿ ಭೂಮಿಯ ಬಿಲವನ್ನು ಸೇರಿದನು?”

12324002 ಭೀಷ್ಮ ಉವಾಚ|

12324002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12324002c ಋಷೀಣಾಂ ಚೈವ ಸಂವಾದಂ ತ್ರಿದಶಾನಾಂ ಚ ಭಾರತ||

ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಋಷಿಗಳ ಮತ್ತು ತ್ರಿದಶರ ಸಂವಾದವನ್ನು ಉದಾಹರಿಸುತ್ತಾರೆ.

12324003a ಅಜೇನ ಯಷ್ಟವ್ಯಮಿತಿ ದೇವಾಃ ಪ್ರಾಹುರ್ದ್ವಿಜೋತ್ತಮಾನ್|

12324003c ಸ ಚ ಚಾಗೋ ಹ್ಯಜೋ ಜ್ಞೇಯೋ ನಾನ್ಯಃ ಪಶುರಿತಿ ಸ್ಥಿತಿಃ||

ಆಡಿನಿಂದ ಯಜ್ಞಮಾಡಬೇಕು ಎಂದು ದೇವತೆಗಳು ದ್ವಿಜೋತ್ತಮರಿಗೆ ಹೇಳುತ್ತಿದ್ದರು. ಅಜ ಎಂದರೆ ಪಶು ಆಡು. ಬೇರೆ ಯಾವುದೂ ಅಲ್ಲ ಎಂದು ಅವರ ಮತವಾಗಿತ್ತು.

12324004 ಋಷಯ ಊಚುಃ|

12324004a ಬೀಜೈರ್ಯಜ್ಞೇಷು ಯಷ್ಟವ್ಯಮಿತಿ ವೈ ವೈದಿಕೀ ಶ್ರುತಿಃ|

12324004c ಅಜಸಂಜ್ಞಾನಿ ಬೀಜಾನಿ ಚಾಗಂ ನ ಘ್ನಂತುಮರ್ಹಥ||

ಋಷಿಗಳು ಹೇಳಿದರು: “ಬೀಜಗಳಿಂದ ಯಜ್ಞಗಳಲ್ಲಿ ಆಹುತಿಯನ್ನು ನೀಡಬೇಕೆಂದು ವೈದಿಕೀ ಶ್ರುತಿಯಿದೆ. ಅಜ ಎಂದರೆ ಬೀಜಗಳು. ಆದುದರಿಂದ ಆಡನ್ನು ಕೊಲ್ಲಬಾರದು.

12324005a ನೈಷ ಧರ್ಮಃ ಸತಾಂ ದೇವಾ ಯತ್ರ ವಧ್ಯೇತ ವೈ ಪಶುಃ|

12324005c ಇದಂ ಕೃತಯುಗಂ ಶ್ರೇಷ್ಠಂ ಕಥಂ ವಧ್ಯೇತ ವೈ ಪಶುಃ||

ದೇವತೆಗಳೇ! ಪಶುವನ್ನು ವಧಿಸುವುದು ಸತ್ಪುರುಷರ ಧರ್ಮವಲ್ಲ. ಶ್ರೇಷ್ಠವಾದ ಈ ಕೃತಯುಗದಲ್ಲಿ ಪಶುವನ್ನು ಹೇಗೆ ವಧಿಸಬೇಕು?””

12324006 ಭೀಷ್ಮ ಉವಾಚ|

12324006a ತೇಷಾಂ ಸಂವದತಾಮೇವಮೃಷೀಣಾಂ ವಿಬುಧೈಃ ಸಹ|

12324006c ಮಾರ್ಗಾಗತೋ ನೃಪಶ್ರೇಷ್ಠಸ್ತಂ ದೇಶಂ ಪ್ರಾಪ್ತವಾನ್ವಸುಃ|

12324006e ಅಂತರಿಕ್ಷಚರಃ ಶ್ರೀಮಾನ್ಸಮಗ್ರಬಲವಾಹನಃ||

ಭೀಷ್ಮನು ಹೇಳಿದನು: “ಆ ಋಷಿಗಳು ವಿಬುಧರೊಂದಿಗೆ ಈ ರೀತಿ ಮಾತನಾಡುತ್ತಿರಲು ಸಮಗ್ರಬಲವಾಹನಾಗಿ ಅಂತರಿಕ್ಷಚರನಾಗಿ ಮಾರ್ಗದಲ್ಲಿ ಹೋಗುತ್ತಿದ್ದ ನೃಪಶ್ರೇಷ್ಠ ವಸುವು ಆ ಪ್ರದೇಶವನ್ನು ತಲುಪಿದನು.

12324007a ತಂ ದೃಷ್ಟ್ವಾ ಸಹಸಾಯಾಂತಂ ವಸುಂ ತೇ ತ್ವಂತರಿಕ್ಷಗಮ್|

12324007c ಊಚುರ್ದ್ವಿಜಾತಯೋ ದೇವಾನೇಷ ಚೇತ್ಸ್ಯತಿ ಸಂಶಯಮ್||

ಒಮ್ಮೆಲೇ ಅಲ್ಲಿಗೆ ಬರುತ್ತಿದ್ದ ಅಂತರಿಕ್ಷಗ ವಸುವನ್ನು ನೋಡಿ ದ್ವಿಜಾತಯರು ದೇವತೆಗಳಿಗೆ “ಇವನು ಸಂಶಯವನ್ನು ಬಗೆಹರಿಸುತ್ತಾನೆ” ಎಂದು ಹೇಳಿದರು.

12324008a ಯಜ್ವಾ ದಾನಪತಿಃ ಶ್ರೇಷ್ಠಃ ಸರ್ವಭೂತಹಿತಪ್ರಿಯಃ|

12324008c ಕಥಂ ಸ್ವಿದನ್ಯಥಾ ಬ್ರೂಯಾದ್ವಾಕ್ಯಮೇಷ ಮಹಾನ್ವಸುಃ||

“ಸರ್ವಭೂತಹಿತಪ್ರಿಯನಾದ ಯಜ್ಞಗಳನ್ನು ಮಾಡಿರುವ ದಾನಪತಿ ಶ್ರೇಷ್ಠನಾದ ಈ ಮಹಾನ್ ವಸುವು ಈ ವಾಕ್ಯಕ್ಕೆ ಅನ್ಯಥಾ ಹೇಗೆ ತಾನೇ ಹೇಳಬಲ್ಲನು?”

12324009a ಏವಂ ತೇ ಸಂವಿದಂ ಕೃತ್ವಾ ವಿಬುಧಾ ಋಷಯಸ್ತಥಾ|

12324009c ಅಪೃಚ್ಚನ್ಸಹಸಾಭ್ಯೇತ್ಯ ವಸುಂ ರಾಜಾನಮಂತಿಕಾತ್||

ಹೀಗೆ ಒಪ್ಪಂದವನ್ನು ಮಾಡಿಕೊಂಡು ವಿಬುಧರು ಮತ್ತು ಋಷಿಗಳು ಕೂಡಲೇ ರಾಜ ವಸುವಿನ ಹತ್ತಿರಹೋಗಿ ಕೇಳಿದರು:

12324010a ಭೋ ರಾಜನ್ಕೇನ ಯಷ್ಟವ್ಯಮಜೇನಾಹೋ ಸ್ವಿದೌಷಧೈಃ|

12324010c ಏತನ್ನಃ ಸಂಶಯಂ ಚಿಂಧಿ ಪ್ರಮಾಣಂ ನೋ ಭವಾನ್ಮತಃ||

“ಭೋ ರಾಜನ್! ಆಡು ಅಥವಾ ಧಾನ್ಯ ಯಾವುದರಿಂದ ಯಜ್ಞವನ್ನು ಮಾಡಬೇಕು? ನಮ್ಮ ಈ ಸಂಶಯವನ್ನು ನಿವಾರಿಸು. ನೀನು ಇದಕ್ಕೆ ಪ್ರಮಾಣನೆಂದು ನಮ್ಮ ಮತವಾಗಿದೆ.”

12324011a ಸ ತಾನ್ಕೃತಾಂಜಲಿರ್ಭೂತ್ವಾ ಪರಿಪಪ್ರಚ್ಚ ವೈ ವಸುಃ|

12324011c ಕಸ್ಯ ವಃ ಕೋ ಮತಃ ಪಕ್ಷೋ ಬ್ರೂತ ಸತ್ಯಂ ಸಮಾಗತಾಃ||

ಆಗ ಅಂಜಲೀಬದ್ಧನಾಗಿ ವಸುವು ಅವರನ್ನು ಪ್ರಶ್ನಿಸಿದನು: “ನಿಮ್ಮಲ್ಲಿ ಯಾರಿಗೆ ಯಾರ ಮತವು ಅಪೇಕ್ಷಿತವಾಗಿದೆ ಎನ್ನುವುದನ್ನು ಸತ್ಯವಾಗಿ ಹೇಳಿರಿ.”

12324012 ಋಷಯ ಊಚುಃ|

12324012a ಧಾನ್ಯೈರ್ಯಷ್ಟವ್ಯಮಿತ್ಯೇಷ ಪಕ್ಷೋಽಸ್ಮಾಕಂ ನರಾಧಿಪ|

12324012c ದೇವಾನಾಂ ತು ಪಶುಃ ಪಕ್ಷೋ ಮತೋ ರಾಜನ್ವದಸ್ವ ನಃ||

ಋಷಿಗಳು ಹೇಳಿದರು: “ನರಾಧಿಪ! ಧಾನದಿಂದ ಯಜ್ಞಮಾಡಬೇಕೆಂದು ನಮ್ಮ ಪಕ್ಷ. ದೇವತೆಗಳದ್ದಾದರೋ ಪಶು ಎನ್ನುವ ಪಕ್ಷ. ರಾಜನ್! ನಿನ್ನ ಮತವೇನೆಂದು ನಮಗೆ ಹೇಳು.””

12324013 ಭೀಷ್ಮ ಉವಾಚ|

12324013a ದೇವಾನಾಂ ತು ಮತಂ ಜ್ಞಾತ್ವಾ ವಸುನಾ ಪಕ್ಷಸಂಶ್ರಯಾತ್|

12324013c ಚಾಗೇನಾಜೇನ ಯಷ್ಟವ್ಯಮೇವಮುಕ್ತಂ ವಚಸ್ತದಾ||

ಭೀಷ್ಮನು ಹೇಳಿದನು: “ದೇವತೆಗಳ ಮತವನ್ನು ತಿಳಿದು ಅವರ ಪಕ್ಷವನ್ನು ಸೇರಲು ಬಯಸಿ ವಸುವು ಅಜ ಅರ್ಥಾತ್ ಆಡಿನಿಂದಲೇ ಯಜ್ಞಮಾಡಬೇಕು ಎಂದು ಹೇಳಿಬಿಟ್ಟನು.

12324014a ಕುಪಿತಾಸ್ತೇ ತತಃ ಸರ್ವೇ ಮುನಯಃ ಸೂರ್ಯವರ್ಚಸಃ|

12324014c ಊಚುರ್ವಸುಂ ವಿಮಾನಸ್ಥಂ ದೇವಪಕ್ಷಾರ್ಥವಾದಿನಮ್||

ಆಗ ಕುಪಿತರಾದ ಆ ಎಲ್ಲ ಸೂರ್ಯವರ್ಚಸ್ವೀ ಮುನಿಗಳು ದೇವಪಕ್ಷವನ್ನು ಅನುಮೋದಿಸಿ ಮಾತನಾಡಿದ ವಿಮಾನಸ್ಥನಿಗೆ ಹೇಳಿದರು:

12324015a ಸುರಪಕ್ಷೋ ಗೃಹೀತಸ್ತೇ ಯಸ್ಮಾತ್ತಸ್ಮಾದ್ದಿವಃ ಪತ|

12324015c ಅದ್ಯ ಪ್ರಭೃತಿ ತೇ ರಾಜನ್ನಾಕಾಶೇ ವಿಹತಾ ಗತಿಃ|

12324015e ಅಸ್ಮಚ್ಚಾಪಾಭಿಘಾತೇನ ಮಹೀಂ ಭಿತ್ತ್ವಾ ಪ್ರವೇಕ್ಷ್ಯಸಿ||

“ಸುರಪಕ್ಷವನ್ನು ಎತ್ತಿಹಿಡಿದುದರಿಂದ ನೀನು ದಿವದಿಂದ ಬೀಳು. ರಾಜನ್! ಆಕಾಶಮಾರ್ಗದಲ್ಲಿ ಹಾರಾಡುತ್ತಿರುವ ನೀನು ಇಂದಿನಿಂದ ನಮ್ಮ ಶಾಪದ ಆಘಾತದಿಂದ ಭೂಮಿಯನ್ನು ಸೀಳಿ ಪ್ರವೇಶಿಸುವೆ.”

12324016a ತತಸ್ತಸ್ಮಿನ್ಮುಹೂರ್ತೇಽಥ ರಾಜೋಪರಿಚರಸ್ತದಾ|

12324016c ಅಧೋ ವೈ ಸಂಬಭೂವಾಶು ಭೂಮೇರ್ವಿವರಗೋ ನೃಪಃ|

12324016e ಸ್ಮೃತಿಸ್ತ್ವೇನಂ ನ ಪ್ರಜಹೌ ತದಾ ನಾರಾಯಣಾಜ್ಞಯಾ||

ಆ ಮುಹೂರ್ತದಲ್ಲಿಯೇ ರಾಜ ಉಪರಿಚರನು ಅಧೋಮುಖನಾಗಿ ಬಿದ್ದು ಭೂಮಿಯ ಬಿಲವನ್ನು ಪ್ರವೇಶಿಸಿ ಪಾತಾಳಲೋಕಕ್ಕೆ ಹೋದನು. ಆದರೆ ನಾರಾಯಣನ ಅನುಗ್ರಹದಿಂದ ಅವನು ತನ್ನ ಸ್ಮೃತಿಯನ್ನು ಕಳೆದುಕೊಳ್ಳಲಿಲ್ಲ.

12324017a ದೇವಾಸ್ತು ಸಹಿತಾಃ ಸರ್ವೇ ವಸೋಃ ಶಾಪವಿಮೋಕ್ಷಣಮ್|

12324017c ಚಿಂತಯಾಮಾಸುರವ್ಯಗ್ರಾಃ ಸುಕೃತಂ ಹಿ ನೃಪಸ್ಯ ತತ್||

ಅವ್ಯಗ್ರರಾದ ದೇವತೆಗಳೆಲ್ಲರೂ ವಸುವಿನ ಶಾಪವಿಮೋಚನೆಯ ಕುರಿತು ಯೋಚಿಸಿ ನೃಪನಿಗೆ ಸುಕೃತವನ್ನೆಸಗಲು ನಿಶ್ಚಯಿಸಿದರು.

12324018a ಅನೇನಾಸ್ಮತ್ಕೃತೇ ರಾಜ್ಞಾ ಶಾಪಃ ಪ್ರಾಪ್ತೋ ಮಹಾತ್ಮನಾ|

12324018c ಅಸ್ಯ ಪ್ರತಿಪ್ರಿಯಂ ಕಾರ್ಯಂ ಸಹಿತೈರ್ನೋ ದಿವೌಕಸಃ||

“ನಮ್ಮ ಸಲುವಾಗಿ ಮಹಾತ್ಮ ರಾಜನು ಶಾಪವನ್ನು ಪಡೆದುಕೊಂಡನು. ದಿವೌಕಸರಾದ ನಾವು ಒಟ್ಟಾಗಿ ಅವನ ಪ್ರತಿ ಪ್ರಿಯಕಾರ್ಯವನ್ನು ಮಾಡಬೇಕು.”

12324019a ಇತಿ ಬುದ್ಧ್ಯಾ ವ್ಯವಸ್ಯಾಶು ಗತ್ವಾ ನಿಶ್ಚಯಮೀಶ್ವರಾಃ|

12324019c ಊಚುಸ್ತಂ ಹೃಷ್ಟಮನಸೋ ರಾಜೋಪರಿಚರಂ ತದಾ||

ಹೀಗೆ ಯೋಚಿಸಿ ಪಾತಾಳಕ್ಕೆ ಹೋಗಿ ಆ ಈಶ್ವರರು ಹೃಷ್ಟಮನಸ್ಕರಾಗಿ ರಾಜಾ ಉಪರಿಚರನಿಗೆ ಹೇಳಿದರು:

12324020a ಬ್ರಹ್ಮಣ್ಯದೇವಂ ತ್ವಂ ಭಕ್ತಃ ಸುರಾಸುರಗುರುಂ ಹರಿಮ್|

12324020c ಕಾಮಂ ಸ ತವ ತುಷ್ಟಾತ್ಮಾ ಕುರ್ಯಾಚ್ಚಾಪವಿಮೋಕ್ಷಣಮ್||

“ನೀನು ಬ್ರಹ್ಮಣ್ಯದೇವ ಸುರಾಸುರಗುರು ಹರಿಯ ಭಕ್ತನಾಗಿರುವೆ. ತುಷ್ಟಾತ್ಮನಾದ ಅವನು ನಿನ್ನ ಶಾಪವಿಮೋಚನೆಯನ್ನು ಮಾಡಲು ಬಯಸಬಹುದು.

12324021a ಮಾನನಾ ತು ದ್ವಿಜಾತೀನಾಂ ಕರ್ತವ್ಯಾ ವೈ ಮಹಾತ್ಮನಾಮ್|

12324021c ಅವಶ್ಯಂ ತಪಸಾ ತೇಷಾಂ ಫಲಿತವ್ಯಂ ನೃಪೋತ್ತಮ||

12324022a ಯತಸ್ತ್ವಂ ಸಹಸಾ ಭ್ರಷ್ಟ ಆಕಾಶಾನ್ಮೇದಿನೀತಲಮ್|

ನೃಪೋತ್ತಮ! ಮಹಾತ್ಮ ದ್ವಿಜಾತಿಯವರನ್ನು ಗೌರವಿಸಬೇಕು. ಅವರ ತಪಸ್ಸು ಅವಶ್ಯವಾಗಿ ಫಲಿಸುತ್ತದೆ. ಆದುದರಿಂದಲೇ ನೀನು ಕೂಡಲೇ ಆಕಾಶದಿಂದ ಭ್ರಷ್ಟನಾಗಿ ಮೇದಿನೀತಲವನ್ನು ಪ್ರವೇಶಿಸಿದೆ.

12324022c ಏಕಂ ತ್ವನುಗ್ರಹಂ ತುಭ್ಯಂ ದದ್ಮೋ ವೈ ನೃಪಸತ್ತಮ||

12324023a ಯಾವತ್ತ್ವಂ ಶಾಪದೋಷೇಣ ಕಾಲಮಾಸಿಷ್ಯಸೇಽನಘ|

12324023c ಭೂಮೇರ್ವಿವರಗೋ ಭೂತ್ವಾ ತಾವಂತಂ ಕಾಲಮಾಪ್ಸ್ಯಸಿ|

12324023e ಯಜ್ಞೇಷು ಸುಹುತಾಂ ವಿಪ್ರೈರ್ವಸೋರ್ಧಾರಾಂ ಮಹಾತ್ಮಭಿಃ||

ನೃಪಸತ್ತಮ! ಅನಘ! ನಾವು ನಿನಗೆ ಒಂದು ಅನುಗ್ರಹವನ್ನು ನೀಡುತ್ತೇವೆ. ಎಷ್ಟುಕಾಲದವರೆಗೆ ಶಾಪದೋಷದಿಂದ ನೀನು ಭೂಮಿಯ ಬಿಲವನ್ನು ಪ್ರವೇಶಿಸಿ ವಾಸಿಸುತ್ತೀಯೋ ಅಷ್ಟು ಕಾಲದ ವರೆಗೆ ಯಜ್ಞಗಳಲ್ಲಿ ಮಹಾತ್ಮ ವಿಪ್ರರು ನೀಡುವ ವಸೋರ್ಧಾರಾ ಎನ್ನುವ ಉತ್ತಮ ಆಹುತಿಯನ್ನು ನೀನು ಪಡೆದುಕೊಳ್ಳುತ್ತೀಯೆ.

12324024a ಪ್ರಾಪ್ಸ್ಯಸೇಽಸ್ಮದನುಧ್ಯಾನಾನ್ಮಾ ಚ ತ್ವಾಂ ಗ್ಲಾನಿರಾಸ್ಪೃಶೇತ್|

12324024c ನ ಕ್ಷುತ್ಪಿಪಾಸೇ ರಾಜೇಂದ್ರ ಭೂಮೇಶ್ಚಿದ್ರೇ ಭವಿಷ್ಯತಃ||

ರಾಜೇಂದ್ರ! ನಮ್ಮ ಅನುಧ್ಯಾನವನ್ನು ಮಾಡುವುದರಿಂದ ನೀನು ಅದನ್ನು ಪಡೆದುಕೊಂಡಾಗ ಆಯಾಸವು ನಿನ್ನನ್ನು ಮುಟ್ಟುವುದಿಲ್ಲ. ಭೂಮಿಯ ಬಿಲದಲ್ಲಿ ನಿನಗೆ ಹಸಿವು-ಬಾಯಾರಿಕೆಗಳೂ ಆಗುವುದಿಲ್ಲ.

12324025a ವಸೋರ್ಧಾರಾನುಪೀತತ್ವಾತ್ತೇಜಸಾಪ್ಯಾಯಿತೇನ ಚ|

12324025c ಸ ದೇವೋಽಸ್ಮದ್ವರಾತ್ಪ್ರೀತೋ ಬ್ರಹ್ಮಲೋಕಂ ಹಿ ನೇಷ್ಯತಿ||

ನಮ್ಮ ವರದಿಂದ ವಸೋರ್ಧಾರವನ್ನು ಕುಡಿದು ತೇಜಸ್ಸಿನಿಂದ ಉಬ್ಬಿದ ನಿನ್ನನ್ನು ಪ್ರೀತನಾದ ದೇವನು ಬ್ರಹ್ಮಲೋಕಕ್ಕೆ ಕೊಂಡೊಯ್ಯುತ್ತಾನೆ.”

12324026a ಏವಂ ದತ್ತ್ವಾ ವರಂ ರಾಜ್ಞೇ ಸರ್ವೇ ತತ್ರ ದಿವೌಕಸಃ|

12324026c ಗತಾಃ ಸ್ವಭವನಂ ದೇವಾ ಋಷಯಶ್ಚ ತಪೋಧನಾಃ||

ರಾಜನಿಗೆ ಈ ರೀತಿಯ ವರವನ್ನಿತ್ತು ಸರ್ವ ದಿವೌಕಸ ದೇವತೆಗಳೂ ತಪೋಧನ ಋಷಿಗಳು ಸ್ವಭವನಗಳಿಗೆ ತೆರಳಿದರು.

12324027a ಚಕ್ರೇ ಚ ಸತತಂ ಪೂಜಾಂ ವಿಷ್ವಕ್ಸೇನಾಯ ಭಾರತ|

12324027c ಜಪ್ಯಂ ಜಗೌ ಚ ಸತತಂ ನಾರಾಯಣಮುಖೋದ್ಗತಮ್||

ಭಾರತ! ಉಪರಿಚರನು ಸತತವೂ ವಿಷ್ವಕ್ಸೇನನ ಪೂಜೆಯನ್ನು ಮಾಡಿದನು. ಮತ್ತು ಸತತವೂ ನಾರಾಯಣಮುಖೋದ್ಗತವಾದ ಜಪವನ್ನು ಜಪಿಸಿದನು.

12324028a ತತ್ರಾಪಿ ಪಂಚಭಿರ್ಯಜ್ಞೈಃ ಪಂಚಕಾಲಾನರಿಂದಮ|

12324028c ಅಯಜದ್ಧರಿಂ ಸುರಪತಿಂ ಭೂಮೇರ್ವಿವರಗೋಽಪಿ ಸನ್||

ಅರಿಂದಮ! ಭೂಮಿಯ ಬಿಲದಲ್ಲಿದ್ದುಕೊಂಡೂ ಅವನು ಪಂಚಯಜ್ಞಗಳಿಂದ ಮತ್ತು ಪಂಚಕಾಲಗಳಿಂದ ಸುರಪತಿ ಹರಿಯನ್ನು ಯಜಿಸಿದನು.

12324029a ತತೋಽಸ್ಯ ತುಷ್ಟೋ ಭಗವಾನ್ಭಕ್ತ್ಯಾ ನಾರಾಯಣೋ ಹರಿಃ|

12324029c ಅನನ್ಯಭಕ್ತಸ್ಯ ಸತಸ್ತತ್ಪರಸ್ಯ ಜಿತಾತ್ಮನಃ||

ಅನಂತರ ಆ ಅನನ್ಯಭಕ್ತನ, ಸತತವೂ ತನ್ನನ್ನೇ ಧ್ಯಾನಿಸುತ್ತಿದ್ದ ಆ ಜಿತಾತ್ಮನ ಭಕ್ತಿಯಿಂದ ಭಗವಾನ್ ಹರಿ ನಾರಾಯಣನು ತುಷ್ಟನಾದನು.

12324030a ವರದೋ ಭಗವಾನ್ವಿಷ್ಣುಃ ಸಮೀಪಸ್ಥಂ ದ್ವಿಜೋತ್ತಮಮ್|

12324030c ಗರುತ್ಮಂತಂ ಮಹಾವೇಗಮಾಬಭಾಷೇ ಸ್ಮಯನ್ನಿವ||

ಆಗ ವರದ ಭಗವಾನ್ ವಿಷ್ಣುವು ಸಮೀಪದಲ್ಲಿದ್ದ ಮಹಾವೇಗಶಾಲೀ ದ್ವಿಜೋತ್ತಮ ಗರುತ್ಮಂತನಿಗೆ ನಸುನಗುತ್ತಾ ಹೇಳಿದನು:

12324031a ದ್ವಿಜೋತ್ತಮ ಮಹಾಭಾಗ ಗಮ್ಯತಾಂ ವಚನಾನ್ಮಮ|

12324031c ಸಮ್ರಾಡ್ರಾಜಾ ವಸುರ್ನಾಮ ಧರ್ಮಾತ್ಮಾ ಮಾಂ ಸಮಾಶ್ರಿತಃ||

“ದ್ವಿಜೋತ್ತಮ! ಮಹಾಭಾಗ! ನನ್ನ ವಚನದಂತೆ ನೀನು ನನ್ನನ್ನೇ ಆಶ್ರಯಿಸಿರುವ ಧರ್ಮಾತ್ಮಾ ವಸುವೆಂಬ ಸಾಮ್ರಾಟ್ ರಾಜನ ಬಳಿ ಹೋಗಬೇಕು.

12324032a ಬ್ರಾಹ್ಮಣಾನಾಂ ಪ್ರಕೋಪೇನ ಪ್ರವಿಷ್ಟೋ ವಸುಧಾತಲಮ್|

12324032c ಮಾನಿತಾಸ್ತೇ ತು ವಿಪ್ರೇಂದ್ರಾಸ್ತ್ವಂ ತು ಗಚ್ಚ ದ್ವಿಜೋತ್ತಮ||

ಬ್ರಾಹ್ಮಣರ ಪ್ರಕೋಪದಿಂದ ಅವನು ವಸುಧಾತಲವನ್ನು ಪ್ರವೇಶಿಸಿದ್ದಾನೆ. ಅವನು ಆ ವಿಪ್ರೇಂದ್ರರನ್ನು ಗೌರವಿಸಿಯಾಯಿತು. ದ್ವಿಜೋತ್ತಮ! ನೀನು ಅವನ ಬಳಿ ಹೋಗು.

12324033a ಭೂಮೇರ್ವಿವರಸಂಗುಪ್ತಂ ಗರುಡೇಹ ಮಮಾಜ್ಞಯಾ|

12324033c ಅಧಶ್ಚರಂ ನೃಪಶ್ರೇಷ್ಠಂ ಖೇಚರಂ ಕುರು ಮಾಚಿರಮ್||

ಗರುಡ! ನನ್ನ ಈ ಆಜ್ಞೆಯಂತೆ ಭೂಮಿಯ ಬಿಲದಲ್ಲಿ ಗುಪ್ತನಾಗಿ ಕೆಳಗೇ ಸಂಚರಿಸುತ್ತಿರುವ ಆ ನೃಪಶ್ರೇಷ್ಠನನ್ನು ಕೂಡಲೇ ಖೇಚರನನ್ನಾಗಿ ಮಾಡು!”

12324034a ಗರುತ್ಮಾನಥ ವಿಕ್ಷಿಪ್ಯ ಪಕ್ಷೌ ಮಾರುತವೇಗವಾನ್|

12324034c ವಿವೇಶ ವಿವರಂ ಭೂಮೇರ್ಯತ್ರಾಸ್ತೇ ವಾಗ್ಯತೋ ವಸುಃ||

ಕೂಡಲೇ ಮಾರುತವೇಗವಾನ್ ಗರುತ್ಮಾನನು ತನ್ನ ರೆಕ್ಕೆಗಳನ್ನು ಹರಡಿ ವಸುವು ಇದ್ದ ಭೂಮಿಯ ಬಿಲವನ್ನು ಪ್ರವೇಶಿಸಿದನು.

12324035a ತತ ಏನಂ ಸಮುತ್ಕ್ಷಿಪ್ಯ ಸಹಸಾ ವಿನತಾಸುತಃ|

12324035c ಉತ್ಪಪಾತ ನಭಸ್ತೂರ್ಣಂ ತತ್ರ ಚೈನಮಮುಂಚತ||

ವಿನತಾಸುತನು ಅಲ್ಲಿದ್ದ ರಾಜನನ್ನು ಮೇಲೆತ್ತಿಕೊಂಡು ಒಡನೆಯೇ ಆಕಾಶದ ಕಡೆ ಹಾರಿ ರಾಜನನ್ನು ಆಕಾಶದಲ್ಲಿಯೇ ಬಿಟ್ಟನು.

12324036a ತಸ್ಮಿನ್ಮುಹೂರ್ತೇ ಸಂಜಜ್ಞೇ ರಾಜೋಪರಿಚರಃ ಪುನಃ|

12324036c ಸಶರೀರೋ ಗತಶ್ಚೈವ ಬ್ರಹ್ಮಲೋಕಂ ನೃಪೋತ್ತಮಃ||

ಅದೇ ಮುಹೂರ್ತದಲ್ಲಿ ರಾಜನು ಪುನಃ ಉಪರಿಚರನೆಂದಾದನು. ಆ ನೃಪೋತ್ತಮನು ಸಶರೀರಿಯಾಗಿಯೇ ಬ್ರಹ್ಮಲೋಕಕ್ಕೆ ಹೋದನು ಕೂಡ.

12324037a ಏವಂ ತೇನಾಪಿ ಕೌಂತೇಯ ವಾಗ್ದೋಷಾದ್ದೇವತಾಜ್ಞಯಾ|

12324037c ಪ್ರಾಪ್ತಾ ಗತಿರಯಜ್ವಾರ್ಹಾ ದ್ವಿಜಶಾಪಾನ್ಮಹಾತ್ಮನಾ||

ಕೌಂತೇಯ! ಈ ರೀತಿ ದೇವತೆಗಳಿಗಾಗಿ ಮಾಡಿದ ವಾಗ್ದೋಷದಿಂದ ದ್ವಿಜರ ಶಾಪಕ್ಕೊಳಗಾಗಿ ಆ ಮಹಾತ್ಮನು ಅಧೋಗತಿಯನ್ನು ಹೊಂದಿದನು.

12324038a ಕೇವಲಂ ಪುರುಷಸ್ತೇನ ಸೇವಿತೋ ಹರಿರೀಶ್ವರಃ|

12324038c ತತಃ ಶೀಘ್ರಂ ಜಹೌ ಶಾಪಂ ಬ್ರಹ್ಮಲೋಕಮವಾಪ ಚ||

ಕೇವಲ ಹರಿ ಈಶ್ವರ ಪುರುಷನನ್ನೇ ಅವನು ಪೂಜಿಸುತ್ತಿದ್ದುದರಿಂದ ಶೀಘ್ರವಾಗಿ ಅವನು ಶಾಪವನ್ನು ಕಳೆದುಕೊಂಡು ಬ್ರಹ್ಮಲೋಕವನ್ನು ಪಡೆದುಕೊಂಡನು.

12324039a ಏತತ್ತೇ ಸರ್ವಮಾಖ್ಯಾತಂ ತೇ ಭೂತಾ ಮಾನವಾ ಯಥಾ|

12324039c ನಾರದೋಽಪಿ ಯಥಾ ಶ್ವೇತಂ ದ್ವೀಪಂ ಸ ಗತವಾನೃಷಿಃ|

12324039e ತತ್ತೇ ಸರ್ವಂ ಪ್ರವಕ್ಷ್ಯಾಮಿ ಶೃಣುಷ್ವೈಕಮನಾ ನೃಪ||

ನೃಪ! ಶ್ವೇತ ದ್ವೀಪದ ಮಾನವರು ಹೇಗೆ ಎನ್ನುವುದೆಲ್ಲವನ್ನೂ ನಿನಗೆ ಹೇಳಿಯಾಯಿತು. ಋಷಿ ನಾರದನೂ ಕೂಡ ಹೇಗೆ ಶ್ವೇತದ್ವೀಪವನ್ನು  ಹೇಗೆ ತಲುಪಿದನು ಎನ್ನುವುದರ ಕುರಿತು ಎಲ್ಲವನ್ನೂ ಹೇಳುತ್ತೇನೆ. ಏಕಮನಸ್ಕನಾಗಿ ಕೇಳು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ಚತುರ್ವಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಇಪ್ಪತ್ನಾಲ್ಕನೇ ಅಧ್ಯಾಯವು.

Orange Flowers Against White Background Photograph by ...

Comments are closed.