Shanti Parva: Chapter 312

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೧೨

ಮಿಥಿಲೆಗೆ ಶುಕನ ಆಗಮನ (1-24). ಮಂತ್ರಿಯೇ ಮೊದಲಾದವರಿಂದ ಅವನ ಸತ್ಕಾರ (25-46).

12312001 ಭೀಷ್ಮ ಉವಾಚ|

12312001a ಸ ಮೋಕ್ಷಮನುಚಿಂತ್ಯೈವ ಶುಕಃ ಪಿತರಮಭ್ಯಗಾತ್|

12312001c ಪ್ರಾಹಾಭಿವಾದ್ಯ ಚ ಗುರುಂ ಶ್ರೇಯೋರ್ಥೀ ವಿನಯಾನ್ವಿತಃ||

ಭೀಷ್ಮನು ಹೇಳಿದನು: “ಮೋಕ್ಷದ ಕುರಿತು ಚಿಂತಿಸುತ್ತಲೇ ಶುಕನು ತಂದೆಯ ಬಳಿ ಹೋದನು. ಆ ಶ್ರೇಯೋರ್ಥಿಯು ವಿನಯಾನ್ವಿತನಾಗಿ ಗುರುವನ್ನು ನಮಸ್ಕರಿಸಿ ಹೇಳಿದನು:

12312002a ಮೋಕ್ಷಧರ್ಮೇಷು ಕುಶಲೋ ಭಗವಾನ್ಪ್ರಬ್ರವೀತು ಮೇ|

12312002c ಯಥಾ ಮೇ ಮನಸಃ ಶಾಂತಿಃ ಪರಮಾ ಸಂಭವೇತ್ಪ್ರಭೋ||

“ಭಗವಾನ್! ಪ್ರಭೋ! ಮೋಕ್ಷಧರ್ಮಗಳಲ್ಲಿ ಕುಶಲನಾದ ನೀನು ನನ್ನ ಮನಸ್ಸಿಗೆ ಪರಮ ಶಾಂತಿಯುಂಟಾಗುವಂಥಹುದನ್ನು ಹೇಳಬೇಕು.”

12312003a ಶ್ರುತ್ವಾ ಪುತ್ರಸ್ಯ ವಚನಂ ಪರಮರ್ಷಿರುವಾಚ ತಮ್|

12312003c ಅಧೀಷ್ವ ಪುತ್ರ ಮೋಕ್ಷಂ ವೈ ಧರ್ಮಾಂಶ್ಚ ವಿವಿಧಾನಪಿ||

ಮಗನ ಮಾತನ್ನು ಕೇಳಿ ಪರಮ ಋಷಿಯು ಅವನಿಗೆ ಹೇಳಿದನು: “ಪುತ್ರ! ವಿವಿಧ ಮೋಕ್ಷ ಧರ್ಮಗಳನ್ನು ನೀನು ಅಧ್ಯಯನಮಾಡು” ಎಂದನು.

12312004a ಪಿತುರ್ನಿಯೋಗಾಜ್ಜಗ್ರಾಹ ಶುಕೋ ಬ್ರಹ್ಮವಿದಾಂ ವರಃ|

12312004c ಯೋಗಶಾಸ್ತ್ರಂ ಚ ನಿಖಿಲಂ ಕಾಪಿಲಂ ಚೈವ ಭಾರತ||

ಭಾರತ! ತಂದೆಯ ನಿಯೋಗದಂತೆ ಬ್ರಹ್ಮವಿದರಲ್ಲಿ ಶ್ರೇಷ್ಠ ಶುಕನು ಕಪಿಲನದನ್ನೂ ಸೇರಿ ನಿಖಿಲ ಯೋಗಶಾಸ್ತ್ರವನ್ನು ಅರ್ಥಮಾಡಿಕೊಂಡನು.

12312005a ಸ ತಂ ಬ್ರಾಹ್ಮ್ಯಾ ಶ್ರಿಯಾ ಯುಕ್ತಂ ಬ್ರಹ್ಮತುಲ್ಯಪರಾಕ್ರಮಮ್|

12312005c ಮೇನೇ ಪುತ್ರಂ ಯದಾ ವ್ಯಾಸೋ ಮೋಕ್ಷವಿದ್ಯಾವಿಶಾರದಮ್||

ಬ್ರಹ್ಮಶ್ರೀಯಿಂದ ಯುಕ್ತನಾದ ಬ್ರಹ್ಮನ ಪರಾಕ್ರಮವನ್ನೇ ಹೊಂದಿದ್ದ ಪುತ್ರನನ್ನು ವ್ಯಾಸನು ಮೋಕ್ಷವಿದ್ಯಾವಿಶಾರದನೆಂದು ತಿಳಿದುಕೊಂಡನು.

12312006a ಉವಾಚ ಗಚ್ಚೇತಿ ತದಾ ಜನಕಂ ಮಿಥಿಲೇಶ್ವರಮ್|

12312006c ಸ ತೇ ವಕ್ಷ್ಯತಿ ಮೋಕ್ಷಾರ್ಥಂ ನಿಖಿಲೇನ ವಿಶೇಷತಃ||

ಆಗ ಅವನು ಅವನಿಗೆ “ಮಿಥಿಲೇಶ್ವರ ಜನಕನಲ್ಲಿಗೆ ಹೋಗು. ಅವನು ವಿಶೇಷವಾಗಿ ಮೋಕ್ಷದ ಕುರಿತು ಎಲ್ಲವನ್ನೂ ನಿನಗೆ ಹೇಳುತ್ತಾನೆ” ಎಂದನು.

12312007a ಪಿತುರ್ನಿಯೋಗಾದಗಮನ್ಮೈಥಿಲಂ ಜನಕಂ ನೃಪಮ್|

12312007c ಪ್ರಷ್ಟುಂ ಧರ್ಮಸ್ಯ ನಿಷ್ಠಾಂ ವೈ ಮೋಕ್ಷಸ್ಯ ಚ ಪರಾಯಣಮ್||

ತಂದೆಯ ನಿಯೋಗದಂತೆ ಅವನು ಧರ್ಮನಿಷ್ಠನಾಗಿದ್ದ ಮತ್ತು ಮೋಕ್ಷ ಪರಾಯಣನಾಗಿದ್ದ ಮಿಥಿಲೆಯ ಜನಕ ನೃಪನಲ್ಲಿಗೆ ಹೋದನು.

12312008a ಉಕ್ತಶ್ಚ ಮಾನುಷೇಣ ತ್ವಂ ಪಥಾ ಗಚ್ಚೇತ್ಯವಿಸ್ಮಿತಃ|

12312008c ನ ಪ್ರಭಾವೇಣ ಗಂತವ್ಯಮಂತರಿಕ್ಷಚರೇಣ ವೈ||

ವ್ಯಾಸನು ಇದನ್ನೂ ಹೇಳಿದನು: “ಅವಿಸ್ಮಿತನಾಗಿ ನೀನು ಮನುಷ್ಯರು ಸಂಚರಿಸುವ ಮಾರ್ಗದಲಿಯೇ ಹೋಗು. ನಿನ್ನ ಯೋಗಪ್ರಭಾವದಿಂದ ಅಂತರಿಕ್ಷಮಾರ್ಗದಲ್ಲಿ ಹೋಗಬೇಡ.

12312009a ಆರ್ಜವೇಣೈವ ಗಂತವ್ಯಂ ನ ಸುಖಾನ್ವೇಷಿಣಾ ಪಥಾ|

12312009c ನಾನ್ವೇಷ್ಟವ್ಯಾ ವಿಶೇಷಾಸ್ತು ವಿಶೇಷಾ ಹಿ ಪ್ರಸಂಗಿನಃ||

ಆರ್ಜವದಿಂದಲೇ ಅಲ್ಲಿಗೆ ಹೋಗಬೇಕು. ಸುಖಾನ್ವೇಷಿಣಿಯರ ಪಥದಲ್ಲಿ ಹೋಗಬಾರದು. ವಿಶೇಷವಾದವುಗಳನ್ನು ಬಯಸಿ ಹೋಗಬಾರದು. ಏಕೆಂದರೆ ಅದೇ ವಿಶೇಷವಾದವುಗಳೊಡನೆ ಹೆಚ್ಚಿನ ಆಸಕ್ತಿಯುಂಟಾಗುತ್ತದೆ.

12312010a ಅಹಂಕಾರೋ ನ ಕರ್ತವ್ಯೋ ಯಾಜ್ಯೇ ತಸ್ಮಿನ್ನರಾಧಿಪೇ|

12312010c ಸ್ಥಾತವ್ಯಂ ಚ ವಶೇ ತಸ್ಯ ಸ ತೇ ಚೇತ್ಸ್ಯತಿ ಸಂಶಯಮ್||

ಆ ನರಾಧಿಪನ ಎದಿರು ಅಹಂಕಾರವನ್ನು ತೋರಿಸಬಾರದು. ಅವನ ವಶದಲ್ಲಿಯೇ ಇರಬೇಕು. ಅವನು ನಿನ್ನ ಸಂಶಯಗಳನ್ನು ಹೋಗಲಾಡಿಸುತ್ತಾನೆ.

12312011a ಸ ಧರ್ಮಕುಶಲೋ ರಾಜಾ ಮೋಕ್ಷಶಾಸ್ತ್ರವಿಶಾರದಃ|

12312011c ಯಾಜ್ಯೋ ಮಮ ಸ ಯದ್ಬ್ರೂಯಾತ್ತತ್ಕಾರ್ಯಮವಿಶಂಕಯಾ||

ನನ್ನ ಯಾಜನಾದ ಆ ರಾಜನು ಧರ್ಮಕುಶಲನು ಮತ್ತು ಮೋಕ್ಷಶಾಸ್ತ್ರವಿಶಾರದನು. ಅವನು ಹೇಳಿದ ಯಾವುದೇ ಕಾರ್ಯವನ್ನು ನಿಃಶಂಕನಾಗಿ ಮಾಡಬೇಕು.”

12312012a ಏವಮುಕ್ತಃ ಸ ಧರ್ಮಾತ್ಮಾ ಜಗಾಮ ಮಿಥಿಲಾಂ ಮುನಿಃ|

12312012c ಪದ್ಭ್ಯಾಂ ಶಕ್ತೋಽಂತರಿಕ್ಷೇಣ ಕ್ರಾಂತುಂ ಭೂಮಿಂ ಸಸಾಗರಾಮ್||

ಇದನ್ನು ಕೇಳಿ ಅಂತರಿಕ್ಷಮಾರ್ಗದಲ್ಲಿ ಸಾಗರಗಳೊಂದಿಗೆ ಭೂಮಿಯನ್ನೇ ದಾಟಬಲ್ಲ ಆ ಧರ್ಮಾತ್ಮ ಮುನಿಯು ಕಾಲ್ನಡುಗೆಯಲ್ಲಿಯೇ ಮಿಥಿಲೆಗೆ ಹೋದನು.

12312013a ಸ ಗಿರೀಂಶ್ಚಾಪ್ಯತಿಕ್ರಮ್ಯ ನದೀಸ್ತೀರ್ತ್ವಾ ಸರಾಂಸಿ ಚ|

12312013c ಬಹುವ್ಯಾಲಮೃಗಾಕೀರ್ಣಾ ವಿವಿಧಾಶ್ಚಾಟವೀಸ್ತಥಾ||

12312014a ಮೇರೋರ್ಹರೇಶ್ಚ ದ್ವೇ ವರ್ಷೇ ವರ್ಷಂ ಹೈಮವತಂ ತಥಾ|

12312014c ಕ್ರಮೇಣೈವ ವ್ಯತಿಕ್ರಮ್ಯ ಭಾರತಂ ವರ್ಷಮಾಸದತ್||

ಅವನು ಗಿರಿಗಳನ್ನು, ನದೀ-ಸರೋವರಗಳನ್ನು, ಅನೇಕ ಸರ್ಪ-ಮೃಗಗಣಗಳಿಂದ ತುಂಬಿದ್ದ ವಿವಿಧ ಅಡವಿಗಳನ್ನೂ ಅತಿಕ್ರಮಿಸಿ, ಮೇರುವರ್ಷ[1]ವನ್ನೂ, ಹರಿವರ್ಷವನ್ನೂ ಹೈಮವತವರ್ಷ[2]ವನ್ನೂ ಅತಿಕ್ರಮಿಸಿ ಕ್ರಮೇಣವಾಗಿ  ಭಾರತವರ್ಷವನ್ನು ತಲುಪಿದನು.

12312015a ಸ ದೇಶಾನ್ವಿವಿಧಾನ್ಪಶ್ಯಂಶ್ಚೀನಹೂಣನಿಷೇವಿತಾನ್|

12312015c ಆರ್ಯಾವರ್ತಮಿಮಂ ದೇಶಮಾಜಗಾಮ ಮಹಾಮುನಿಃ||

ಚೀನ-ಹೂಣರು ವಾಸಿಸುತ್ತಿದ್ದ ವಿವಿಧ ದೇಶಗಳನ್ನು ದಾಟಿ ಆ ಮಹಾಮುನಿಯು ಈ ಆರ್ಯಾವರ್ತದೇಶಕ್ಕೆ ಆಗಮಿಸಿದನು.

12312016a ಪಿತುರ್ವಚನಮಾಜ್ಞಾಯ ತಮೇವಾರ್ಥಂ ವಿಚಿಂತಯನ್|

12312016c ಅಧ್ವಾನಂ ಸೋಽತಿಚಕ್ರಾಮ ಖೇಽಚರಃ ಖೇ ಚರನ್ನಿವ||

ತಂದೆಯ ವಚನವನ್ನು ನೆನಪಿಸಿಕೊಳ್ಳುತ್ತಾ ಅದರ ಅರ್ಥವನ್ನೇ ಚಿಂತಿಸುತ್ತಾ ಅವನು ಆಕಾಶದಲ್ಲಿ ಹಾರಾಡುವ ಪಕ್ಷಿಯಂತೆ ಭೂಮಿಯ ಮೇಲೆ ನಡೆದು ಹೋಗುತ್ತಿದ್ದನು.

12312017a ಪತ್ತನಾನಿ ಚ ರಮ್ಯಾಣಿ ಸ್ಫೀತಾನಿ ನಗರಾಣಿ ಚ|

12312017c ರತ್ನಾನಿ ಚ ವಿಚಿತ್ರಾಣಿ ಶುಕಃ ಪಶ್ಯನ್ನ ಪಶ್ಯತಿ||

ರಮ್ಯ ಪಟ್ಟಣಗಳು, ಸಮೃದ್ಧ ನಗರಗಳು ಮತ್ತು ವಿಚಿತ್ರ ರತ್ನಗಳು ಕಂಡರೂ ಕಾಣದಂತೆ ಶುಕನು ಹೋಗುತ್ತಿದ್ದನು.

12312018a ಉದ್ಯಾನಾನಿ ಚ ರಮ್ಯಾಣಿ ತಥೈವಾಯತನಾನಿ ಚ|

12312018c ಪುಣ್ಯಾನಿ ಚೈವ ತೀರ್ಥಾನಿ ಸೋಽತಿಕ್ರಮ್ಯ ತಥಾಧ್ವನಃ||

ಆ ದೇಶದಲ್ಲಿ ಅವನು ರಮ್ಯ ಉದ್ಯಾನಗಳನ್ನೂ ಹಾಗೆಯೇ ಸೌಧಗಳನ್ನೂ, ಪುಣ್ಯತೀರ್ಥಗಳನ್ನೂ ದಾಟಿದನು.

12312019a ಸೋಽಚಿರೇಣೈವ ಕಾಲೇನ ವಿದೇಹಾನಾಸಸಾದ ಹ|

12312019c ರಕ್ಷಿತಾನ್ಧರ್ಮರಾಜೇನ ಜನಕೇನ ಮಹಾತ್ಮನಾ||

ಸ್ವಲ್ಪವೇ ಸಮಯದಲ್ಲಿ ಅವನು ಮಹಾತ್ಮ ಧರ್ಮರಾಜ ಜನಕನಿಂದ ರಕ್ಷಿತವಾಗಿದ್ದ ವಿದೇಹವನ್ನು ತಲುಪಿದನು.

12312020a ತತ್ರ ಗ್ರಾಮಾನ್ಬಹೂನ್ಪಶ್ಯನ್ಬಹ್ವನ್ನರಸಭೋಜನಾನ್|

12312020c ಪಲ್ಲೀಘೋಷಾನ್ಸಮೃದ್ಧಾಂಶ್ಚ ಬಹುಗೋಕುಲಸಂಕುಲಾನ್||

12312021a ಸ್ಫೀತಾಂಶ್ಚ ಶಾಲಿಯವಸೈರ್ಹಂಸಸಾರಸಸೇವಿತಾನ್|

12312021c ಪದ್ಮಿನೀಭಿಶ್ಚ ಶತಶಃ ಶ್ರೀಮತೀಭಿರಲಂಕೃತಾನ್||

12312022a ಸ ವಿದೇಹಾನತಿಕ್ರಮ್ಯ ಸಮೃದ್ಧಜನಸೇವಿತಾನ್|

12312022c ಮಿಥಿಲೋಪವನಂ ರಮ್ಯಮಾಸಸಾದ ಮಹರ್ದ್ಧಿಮತ್||

ಅಲ್ಲಿ ಅನೇಕ ಗ್ರಾಮಗಳನ್ನೂ, ಪಶುಗಳನ್ನೂ ಅನ್ನರಸಭೋಜನಗಳನ್ನು, ಗೋವುಗಳಿಂದ ತುಂಬಿಹೋಗಿದ್ದ ಗೋವಲರ ಹಳ್ಳಿಗಳನ್ನು, ಬೆಳೆಗಳಿಂದ ತುಂಬಿದ್ದ ಭತ್ತದ ಗದ್ದೆಗಳನ್ನೂ, ಹಂಸ-ಸಾರಸಗಳಿಂದ ಕೂಡಿದ್ದ ಪದ್ಮದ ಕೊಳಗಳನ್ನೂ, ನೂರಾರು ಅಲಂಕೃತ ಶ್ರೀಮತಿಯರನ್ನು ನೋಡುತ್ತಾ ಸಮೃದ್ಧ ಜನಸೇವಿತ ವಿದೇಹವನ್ನು ದಾಟಿ ಆ ಮಹಾಬುದ್ಧಿವಂತನು ಮಿಥಿಲೆಯ ರಮ್ಯ ಉಪವನವನ್ನು ತಲುಪಿದನು.

12312023a ಹಸ್ತ್ಯಶ್ವರಥಸಂಕೀರ್ಣಂ ನರನಾರೀಸಮಾಕುಲಮ್|

12312023c ಪಶ್ಯನ್ನಪಶ್ಯನ್ನಿವ ತತ್ಸಮತಿಕ್ರಾಮದಚ್ಯುತಃ||

ಆನೆ-ಕುದುರೆ-ರಥಗಳಿಂದ ಮತ್ತು ನರನಾರಿಯರ ಸಮಾಕುಲಗಳಿಂದ ತುಂಬಿದ್ದ ಆ ಉಪವನವನ್ನು ನೋಡಿಯೂ ನೋಡದಿದ್ದಂತೆ ಆ ಅಚ್ಯುತನು ದಾಟಿ ಮುಂದುವರೆದನು.

12312024a ಮನಸಾ ತಂ ವಹನ್ಭಾರಂ ತಮೇವಾರ್ಥಂ ವಿಚಿಂತಯನ್|

12312024c ಆತ್ಮಾರಾಮಃ ಪ್ರಸನ್ನಾತ್ಮಾ ಮಿಥಿಲಾಮಾಸಸಾದ ಹ||

ತನ್ನ ಮನಸ್ಸಿನಲ್ಲಿ ಹೊತ್ತಿದ್ದ ಆ ಮಹಾಭಾರದ ಅರ್ಥದಕುರಿತೇ ಚಿಂತಿಸುತ್ತಾ ಆ ಆತ್ಮಾರಾಮ ಪ್ರಸನ್ನಾತ್ಮನು ಮಿಥೆಲೆಯನ್ನು ತಲುಪಿದನು.

12312025a ತಸ್ಯಾ ದ್ವಾರಂ ಸಮಾಸಾದ್ಯ ದ್ವಾರಪಾಲೈರ್ನಿವಾರಿತಃ|

12312025c ಸ್ಥಿತೋ ಧ್ಯಾನಪರೋ ಮುಕ್ತೋ ವಿದಿತಃ ಪ್ರವಿವೇಶ ಹ||

ಅದರ ದ್ವಾರವನ್ನು ತಲುಪಿದ ಅವನನ್ನು ದ್ವಾರಪಾಲರು ತಡೆದರು. ಧ್ಯಾನಪರನಾಗಿ ನಿಂತಿದ್ದ ಆ ಮುಕ್ತನನ್ನು ತಿಳಿದ ಅವರು ಅವನಿಗೆ ಪ್ರವೇಶಿಸಲು ಬಿಟ್ಟರು.

12312026a ಸ ರಾಜಮಾರ್ಗಮಾಸಾದ್ಯ ಸಮೃದ್ಧಜನಸಂಕುಲಮ್|

12312026c ಪಾರ್ಥಿವಕ್ಷಯಮಾಸಾದ್ಯ ನಿಃಶಂಕಃ ಪ್ರವಿವೇಶ ಹ||

ಅವನು ಸಮೃದ್ಧ ಜನಸಂಕುಲಗಳಿಂದ ಕೂಡಿದ್ದ ರಾಜಮಾರ್ಗವನ್ನು ತಲುಪಿ ರಾಜನ ಅರಮನೆಯನ್ನು ತಲುಪಿ ನಿಃಶಂಕನಾಗಿ ಪ್ರವೇಶಿಸಿದನು.

12312027a ತತ್ರಾಪಿ ದ್ವಾರಪಾಲಾಸ್ತಮುಗ್ರವಾಚೋ ನ್ಯಷೇಧಯನ್|

12312027c ತಥೈವ ಚ ಶುಕಸ್ತತ್ರ ನಿರ್ಮನ್ಯುಃ ಸಮತಿಷ್ಠತ||

ಅಲ್ಲಿಯೂ ಕೂಡ ದ್ವಾರಪಾಲರು ಉಗ್ರಮಾತುಗಳಿಂದ ಅವನನ?ನು ತಡೆದರು. ಆಗಲೂ ಕೂಡ ಶುಕನು ಕೋಪರಹಿತನಾಗಿ ಸುಮ್ಮನೇ ನಿಂತುಕೊಂಡನು.

12312028a ನ ಚಾತಪಾಧ್ವಸಂತಪ್ತಃ ಕ್ಷುತ್ಪಿಪಾಸಾಶ್ರಮಾನ್ವಿತಃ|

12312028c ಪ್ರತಾಮ್ಯತಿ ಗ್ಲಾಯತಿ ವಾ ನಾಪೈತಿ ಚ ತಥಾತಪಾತ್||

ಅವನು ಪ್ರಯಾಣದಿಂದ ಹಸಿವು-ಬಾಯಾರಿಕೆಗಳಿಂದ ಸಂತಪ್ತನಾಗಿದ್ದರೂ ಸಂತಪಿಸುತ್ತಿರಲಿಲ್ಲ. ಬಿಸಿಲಿದ್ದರೂ ಬಳಲಿರಲಿಲ್ಲ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಅವನು ಅಲ್ಲಿಂದ ಚಲಿಸಲೂ ಇಲ್ಲ.

12312029a ತೇಷಾಂ ತು ದ್ವಾರಪಾಲಾನಾಮೇಕಃ ಶೋಕಸಮನ್ವಿತಃ|

12312029c ಮಧ್ಯಂಗತಮಿವಾದಿತ್ಯಂ ದೃಷ್ಟ್ವಾ ಶುಕಮವಸ್ಥಿತಮ್||

ಅಲ್ಲಿ ಮಧ್ಯಾಹ್ನದ ಸೂರ್ಯನಂತೆ ನಿಂತಿದ್ದ ಶುಕನನ್ನು ನೋಡಿ ಆ ದ್ವಾರಪಾಕರಲ್ಲಿ ಒಬ್ಬನು ಶೋಕಸಮನ್ವಿತನಾದನು.

12312030a ಪೂಜಯಿತ್ವಾ ಯಥಾನ್ಯಾಯಮಭಿವಾದ್ಯ ಕೃತಾಂಜಲಿಃ|

12312030c ಪ್ರಾವೇಶಯತ್ತತಃ ಕಕ್ಷ್ಯಾಂ ದ್ವಿತೀಯಾಂ ರಾಜವೇಶ್ಮನಃ||

ಅವನು ಅವನನ್ನು ಯಥಾನ್ಯಾಯವಾಗಿ ಪೂಜಿಸಿ, ಕೈಮುಗಿದು ನಮಸ್ಕರಿಸಿ, ಅರಮನೆಯ ಎರಡನೇ ಕಕ್ಷೆಗೆ ಪ್ರವೇಶಿಸಿದನು.

12312031a ತತ್ರಾಸೀನಃ ಶುಕಸ್ತಾತ ಮೋಕ್ಷಮೇವಾನುಚಿಂತಯನ್|

12312031c ಚಾಯಾಯಾಮಾತಪೇ ಚೈವ ಸಮದರ್ಶೀ ಮಹಾದ್ಯುತಿಃ||

ಅಯ್ಯಾ! ಬಿಸಿಲು-ನೆರಳುಗಳನ್ನು ಸಮನಾಗಿ ಕಾಣುವ ಮಹಾದ್ಯುತಿ ಶುಕನು ಅಲ್ಲಿ ಕುಳಿತು ಮೋಕ್ಷದ ಕುರಿತೇ ಚಿಂತಿಸುತ್ತಿದ್ದನು.

12312032a ತಂ ಮುಹೂರ್ತಾದಿವಾಗಮ್ಯ ರಾಜ್ಞೋ ಮಂತ್ರೀ ಕೃತಾಂಜಲಿಃ|

12312032c ಪ್ರಾವೇಶಯತ್ತತಃ ಕಕ್ಷ್ಯಾಂ ತೃತೀಯಾಂ ರಾಜವೇಶ್ಮನಃ||

ಮುಹೂರ್ತದಲ್ಲಿಯೇ ರಾಜನ ಮಂತ್ರಿಯು ಕೈಮುಗಿದು ಬಂದು ಅವನನ್ನು ಅರಮನೆಯ ಮೂರನೆಯ ಕಕ್ಷೆಗೆ ಪ್ರವೇಶಿಸಿದನು.

12312033a ತತ್ರಾಂತಃಪುರಸಂಬದ್ಧಂ ಮಹಚ್ಚೈತ್ರರಥೋಪಮಮ್|

12312033c ಸುವಿಭಕ್ತಜಲಾಕ್ರೀಡಂ ರಮ್ಯಂ ಪುಷ್ಪಿತಪಾದಪಮ್||

ಅಲ್ಲಿ ಅಂತಃಪುರಕ್ಕೆ ಸಂಬಂಧಿಸಿದ ಚೈತ್ರರಥ[3]ಕ್ಕೆ ಸಮನಾದ ಪುಷ್ಪಭರಿತ ವೃಕ್ಷಗಳಿಂದ ಕೂಡಿದ ಪ್ರತ್ಯೇಕ ರಮ್ಯ ಜಲಾಕ್ರೀಡಾಪ್ರದೇಶಗಳಿದ್ದವು.

12312034a ತದ್ದರ್ಶಯಿತ್ವಾ ಸ ಶುಕಂ ಮಂತ್ರೀ ಕಾನನಮುತ್ತಮಮ್|

12312034c ಅರ್ಹಮಾಸನಮಾದಿಶ್ಯ ನಿಶ್ಚಕ್ರಾಮ ತತಃ ಪುನಃ||

ಆ ಉತ್ತಮ ಕಾನನವನ್ನು ತೋರಿಸುತ್ತಾ ಮಂತ್ರಿಯು ಶುಕನಿಗೆ ಅರ್ಹ ಆಸನದಲ್ಲಿ ಕುಳ್ಳಿರಿಸಿ ಪುನಃ ಹೊರಟುಹೋದನು.

12312035a ತಂ ಚಾರುವೇಷಾಃ ಸುಶ್ರೋಣ್ಯಸ್ತರುಣ್ಯಃ ಪ್ರಿಯದರ್ಶನಾಃ|

12312035c ಸೂಕ್ಷ್ಮರಕ್ತಾಂಬರಧರಾಸ್ತಪ್ತಕಾಂಚನಭೂಷಣಾಃ||

12312036a ಸಂಲಾಪೋಲ್ಲಾಪಕುಶಲಾ ನೃತ್ತಗೀತವಿಶಾರದಾಃ|

12312036c ಸ್ಮಿತಪೂರ್ವಾಭಿಭಾಷಿಣ್ಯೋ ರೂಪೇಣಾಪ್ಸರಸಾಂ ಸಮಾಃ||

12312037a ಕಾಮೋಪಚಾರಕುಶಲಾ ಭಾವಜ್ಞಾಃ ಸರ್ವಕೋವಿದಾಃ|

12312037c ಪರಂ ಪಂಚಾಶತೋ ನಾರ್ಯೋ ವಾರಮುಖ್ಯಾಃ ಸಮಾದ್ರವನ್||

12312038a ಪಾದ್ಯಾದೀನಿ ಪ್ರತಿಗ್ರಾಹ್ಯ ಪೂಜಯಾ ಪರಯಾರ್ಚ್ಯ ಚ|

12312038c ದೇಶಕಾಲೋಪಪನ್ನೇನ ಸಾಧ್ವನ್ನೇನಾಪ್ಯತರ್ಪಯನ್||

ಕೂಡಲೇ ಐದುನೂರು ಪರಮ ಸುಂದರಿ ನಾರಿಯರು ಪಾದ್ಯಾದಿಗಳನ್ನು ತೆಗೆದುಕೊಂಡು ಅವನ ಬಳಿ ಧಾವಿಸಿ ಬಂದು ಪರಮ ಪೂಜೆಯಿಂದ ಅರ್ಚಿಸಿದರು. ದೇಶಕಾಲದಲ್ಲಿ ದೊರಕುವ ಉತ್ತಮ ಆಹಾರವನ್ನಿತ್ತು ಆ ಸಾಧುವನ್ನು ತೃಪ್ತಿಪಡಿಸಿದರು. ಆ ಪ್ರಿಯದರ್ಶನ ತರುಣಿಯರು ಸುಂದರ ವೇಷ-ಭೂಷಣಗಳನ್ನು ಧರಿಸಿ, ಸುಂದರ ನಿತಂಬವುಳ್ಳವರಾಗಿದ್ದರು. ನವಿರಾದ ಕೆಂಪುವಸ್ತ್ರಗಳನ್ನು ಧರಿಸಿದ್ದರು. ಕುದಿಸಿದ ಚಿನ್ನದಿಂದ ತಯಾರಿಸಿದ ಭೂಷಣಗಳಿಂದ ಅಲಂಕೃತರಾಗಿದ್ದರು. ಸಲ್ಲಾಪ-ಉಲ್ಲಾಪಗಳಲ್ಲಿ ಕುಶಲರಾಗಿದ್ದರು. ನೃತ್ಯ-ಗೀತಾ ವಿಶಾರದೆಯರಾಗಿದ್ದರು. ನಸುನಗುತ್ತಾ ಮಾತನಾಡುತ್ತಿದ್ದರು. ರೂಪದಲ್ಲಿ ಅಪ್ಸರೆಯರ ಸಮನಾಗಿದ್ದರು. ಕಾಮೋಪಚಾರದಲ್ಲಿ ಕುಶಲರಾಗಿದ್ದರು. ಭಾವಿಜ್ಞರೂ ಸರ್ವಕೋವಿದರೂ ಆಗಿದ್ದರು.

12312039a ತಸ್ಯ ಭುಕ್ತವತಸ್ತಾತ ತದಂತಃಪುರಕಾನನಮ್|

12312039c ಸುರಮ್ಯಂ ದರ್ಶಯಾಮಾಸುರೇಕೈಕಶ್ಯೇನ ಭಾರತ||

ಅಯ್ಯಾ! ಭಾರತ! ಅವನಿಗೆ ಊಟಮಾಡಿಸಿ ಅವರು ಆ ಅಂತಃಪುರಕಾನನದ ರಮ್ಯತೆಯನ್ನು ಒಂದೊಂದಾಗಿ ತೋರಿಸತೊಡಗಿದರು.

12312040a ಕ್ರೀಡಂತ್ಯಶ್ಚ ಹಸಂತ್ಯಶ್ಚ ಗಾಯಂತ್ಯಶ್ಚೈವ ತಾಃ ಶುಕಮ್|

12312040c ಉದಾರಸತ್ತ್ವಂ ಸತ್ತ್ವಜ್ಞಾಃ ಸರ್ವಾಃ ಪರ್ಯಚರಂಸ್ತದಾ||

ಅವನ ಸತ್ತ್ವವನ್ನು ತಿಳಿದಿದ್ದ ಅವರೆಲ್ಲರೂ ಆಡುತ್ತಾ, ನಗುತ್ತಾ ಮತ್ತು ಹಾಡುತ್ತಾ ಆ ಉದಾರಸತ್ತ್ವ ಶುಕನನ್ನು ಸುತ್ತುವರೆದರು.

12312041a ಆರಣೇಯಸ್ತು ಶುದ್ಧಾತ್ಮಾ ತ್ರಿಸಂದೇಹಸ್ತ್ರಿಕರ್ಮಕೃತ್|

12312041c ವಶ್ಯೇಂದ್ರಿಯೋ ಜಿತಕ್ರೋಧೋ ನ ಹೃಷ್ಯತಿ ನ ಕುಪ್ಯತಿ||

ಇಂದ್ರಿಯಗಳನ್ನು ವಶದಲ್ಲಿರಿಸಿಕೊಂಡಿದ್ದ ಮತ್ತು ಕ್ರೋಧವನ್ನು ಜಹಿಸಿದ್ದ ಆ ಶುದ್ಧಾತ್ಮ ತ್ರಿಸಂದೇಹ ತ್ರಿಕರ್ಮಕೃತುವು ಹರ್ಷಿತನಾಗಲಿಲ್ಲ. ಕುಪಿತನೂ ಆಗಲಿಲ್ಲ.

12312042a ತಸ್ಮೈ ಶಯ್ಯಾಸನಂ ದಿವ್ಯಂ ವರಾರ್ಹಂ ರತ್ನಭೂಷಿತಮ್|

12312042c ಸ್ಪರ್ಧ್ಯಾಸ್ತರಣಸಂಸ್ತೀರ್ಣಂ ದದುಸ್ತಾಃ ಪರಮಸ್ತ್ರಿಯಃ||

ಆ ಪ್ರರಮ ಸ್ತ್ರೀಯರು ಅವನಿಗೆ ದಿವ್ಯವಾದ ವರಾರ್ಹವಾದ ರತ್ನಭೂಷಿತ ಬಹುಮೂಲ್ಯವಾದ ರತ್ನಗಂಬಳಿಯಿಂದ ಆಚ್ಛಾದಿತವಾದ ಶಯ್ಯಾಸನವನ್ನು ಅವನಿಗೆ ಸಿದ್ಧಗೊಳಿಸಿದರು.

12312043a ಪಾದಶೌಚಂ ತು ಕೃತ್ವೈವ ಶುಕಃ ಸಂಧ್ಯಾಮುಪಾಸ್ಯ ಚ|

12312043c ನಿಷಸಾದಾಸನೇ ಪುಣ್ಯೇ ತಮೇವಾರ್ಥಂ ವಿಚಿಂತಯನ್||

ಶುಕನಾದರೋ ಕಾಲುತೊಳಿದು ಸಂಧ್ಯಾವಂದನೆಯನ್ನು ಮಾಡಿ ಪುಣ್ಯ ಆಸನದ ಮೇಲೆ ಕುಳಿತು ಮೋಕ್ಷದ ಕುರಿತೇ ಚಿಂತಿಸುತ್ತಿದ್ದನು.

12312044a ಪೂರ್ವರಾತ್ರೇ ತು ತತ್ರಾಸೌ ಭೂತ್ವಾ ಧ್ಯಾನಪರಾಯಣಃ|

12312044c ಮಧ್ಯರಾತ್ರೇ ಯಥಾನ್ಯಾಯಂ ನಿದ್ರಾಮಾಹಾರಯತ್ಪ್ರಭುಃ||

ಪ್ರಭುವು ರಾತ್ರಿಯ ಮೊದಲ ಯಾಮದಲ್ಲಿ ಧ್ಯಾನಪರಾಯಣನಾಗಿದ್ದುಕೊಂಡು ಮಧ್ಯರಾತ್ರಿಯಲ್ಲಿ ಯಥಾನ್ಯಾಯವಾಗಿ ನಿದ್ರೆಮಾಡಿದನು.

12312045a ತತೋ ಮುಹೂರ್ತಾದುತ್ಥಾಯ ಕೃತ್ವಾ ಶೌಚಮನಂತರಮ್|

12312045c ಸ್ತ್ರೀಭಿಃ ಪರಿವೃತೋ ಧೀಮಾನ್ಧ್ಯಾನಮೇವಾನ್ವಪದ್ಯತ||

ಬಳಿಕ ಶುಕನು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಶೌಚ-ಮುಖಮಾರ್ಜನ-ಸ್ನಾನ-ಸಂಧ್ಯಾದಿಗಳನ್ನು ಮುಗಿಸಿ ಸ್ತ್ರೀಯರಿಂದ ಪರಿವೃತನಾಗಿ ಧ್ಯಾನದಲ್ಲಿಯೇ ಮಗ್ನನಾದನು.

12312046a ಅನೇನ ವಿಧಿನಾ ಕಾರ್ಷ್ಣಿಸ್ತದಹಃಶೇಷಮಚ್ಯುತಃ|

12312046c ತಾಂ ಚ ರಾತ್ರಿಂ ನೃಪಕುಲೇ ವರ್ತಯಾಮಾಸ ಭಾರತ||

ಭಾರತ! ಈ ರೀತಿಯಲ್ಲಿ ಅಚ್ಯುತನು ಉಳಿದ ಹಗಲನ್ನೂ ಮತ್ತು ರಾತ್ರಿಯನ್ನೂ ನೃಪನ ಭವನದಲ್ಲಿ ಕಳೆದನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕೋತ್ಪತ್ತೌ ದ್ವಾದಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕೋತ್ಪತ್ತಿ ಎನ್ನುವ ಮುನ್ನೂರಾಹನ್ನೆರಡನೇ ಅಧ್ಯಾಯವು.

Chrysanthemum Blue. Flower On Isolated White Background With ...

[1] ಇಲಾವೃತವರ್ಷ.

[2] ಕಿಂಪುರುಷವರ್ಷ.

[3] ಕುಬೇರನ ಉದ್ಯಾನವನ ಚೈತ್ರರಥ.

Comments are closed.