Shanti Parva: Chapter 311

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೧೧

ವ್ಯಾಸನ ಶುಕ್ರದ ಮಂಥನದಿಂದ ಅರಣಿಗಳಲ್ಲಿ ಶುಕನು ಉತ್ಪನ್ನನಾದುದು (1-11). ಮಹಾದೇವನು ಅವನಿಗೆ ಉಪನಯನವನ್ನು ಮಾಡಿಸಿದ್ದುದು, ದೇವ-ದೇವರ್ಷಿಗಳ ಸನ್ಮಾನ (12-27).

12311001 ಭೀಷ್ಮ ಉವಾಚ| 

12311001a ಸ ಲಬ್ಧ್ವಾ ಪರಮಂ ದೇವಾದ್ವರಂ ಸತ್ಯವತೀಸುತಃ|

12311001c ಅರಣೀಂ ತ್ವಥ ಸಂಗೃಹ್ಯ ಮಮಂಥಾಗ್ನಿಚಿಕೀರ್ಷಯಾ||

ಭೀಷ್ಮನು ಹೇಳಿದನು: “ದೇವನಿಂದ ಆ ಪರಮ ವರವನ್ನು ಪಡೆದು ಸತ್ಯವತೀಸುತನು ಅಗ್ನಿಯನ್ನು ಪಡೆಯುವ ಸಲುವಾಗಿ ಅರಣಿಗಳನ್ನು ಹಿಡಿದುಕೊಂಡು ಮಂಥಿಸತೊಡಗಿದನು.

12311002a ಅಥ ರೂಪಂ ಪರಂ ರಾಜನ್ಬಿಭ್ರತೀಂ ಸ್ವೇನ ತೇಜಸಾ|

12311002c ಘೃತಾಚೀಂ ನಾಮಾಪ್ಸರಸಮಪಶ್ಯದ್ಭಗವಾನೃಷಿಃ||

ರಾಜನ್! ಆಗ ಭಗವಾನ್ ಋಷಿಯು ತನ್ನದೇ ತೇಜಸ್ಸಿನಿಂದ ಪರಮ ರೂಪದಿಂದ ಬೆಳಗುತ್ತಿದ್ದ ಘೃತಾಚೀ ಎಂಬ ಹೆಸರಿನ ಅಪ್ಸರೆಯನ್ನು ನೋಡಿದನು.

12311003a ಋಷಿರಪ್ಸರಸಂ ದೃಷ್ಟ್ವಾ ಸಹಸಾ ಕಾಮಮೋಹಿತಃ|

12311003c ಅಭವದ್ಭಗವಾನ್ವ್ಯಾಸೋ ವನೇ ತಸ್ಮಿನ್ಯುಧಿಷ್ಠಿರ||

ಯುಧಿಷ್ಠಿರ! ಆ ವನದಲ್ಲಿ ಅಪ್ಸರೆಯನ್ನು ನೋಡಿ ಋಷಿ ವ್ಯಾಸನು ಕೂಡಲೇ ಕಾಮಮೋಹಿತನಾದನು.

12311004a ಸಾ ಚ ಕೃತ್ವಾ ತದಾ ವ್ಯಾಸಂ ಕಾಮಸಂವಿಗ್ನಮಾನಸಮ್|

12311004c ಶುಕೀ ಭೂತ್ವಾ ಮಹಾರಾಜ ಘೃತಾಚೀ ಸಮುಪಾಗಮತ್||

ಮಹಾರಾಜ! ಹಾಗೆ ವ್ಯಾಸನನ್ನು ಕಾಮಸಂವಿಗ್ನಮಾನಸನನ್ನಾಗಿ ಮಾಡಿ ಘೃತಾಚಿಯು ಗಿಳಿಯಾಗಿ ಅವನ ಬಳಿಬಂದಳು.

12311005a ಸ ತಾಮಪ್ಸರಸಂ ದೃಷ್ಟ್ವಾ ರೂಪೇಣಾನ್ಯೇನ ಸಂವೃತಾಮ್|

12311005c ಶರೀರಜೇನಾನುಗತಃ ಸರ್ವಗಾತ್ರಾತಿಗೇನ ಹ||

ಅನ್ಯ ರೂಪವನ್ನು ಧರಿಸಿದ ಆ ಅಪ್ಸರೆಯನ್ನು ನೋಡಿ ಶರೀರದಲ್ಲಿ ಹುಟ್ಟಿದ ಕಾಮವೇದನೆಯಿಂದ ಶರೀರಾದ್ಯಂತ ನೊಂದನು.

12311006a ಸ ತು ಧೈರ್ಯೇಣ ಮಹತಾ ನಿಗೃಹ್ಣನ್ ಹೃಚ್ಚಯಂ ಮುನಿಃ|

12311006c ನ ಶಶಾಕ ನಿಯಂತುಂ ತದ್ವ್ಯಾಸಃ ಪ್ರವಿಸೃತಂ ಮನಃ|

ಆ ಮುನಿಯು ಮಹಾ ಧೈರ್ಯದಿಂದ ಶರೀರವನ್ನು ಸುಡುತ್ತಿದ್ದ ಕಾಮವನ್ನು ನಿಗ್ರಹಿಸಲು ಪ್ರಯತ್ನಿಸಿದನು. ಆದರೂ ಅವಳ ಕಡೆ ಹರಿದಿದ್ದ ಮನವನ್ನು ನಿಯಂತ್ರಿಸಲು ವ್ಯಾಸನಿಗೆ ಸಾಧ್ಯವಾಗಲಿಲ್ಲ.

12311006e ಭಾವಿತ್ವಾಚ್ಚೈವ ಭಾವಸ್ಯ ಘೃತಾಚ್ಯಾ ವಪುಷಾ ಹೃತಃ||

12311007a ಯತ್ನಾನ್ನಿಯಚ್ಚತಸ್ತಸ್ಯ ಮುನೇರಗ್ನಿಚಿಕೀರ್ಷಯಾ|

12311007c ಅರಣ್ಯಾಮೇವ ಸಹಸಾ ತಸ್ಯ ಶುಕ್ರಮವಾಪತತ್||

ಘೃತಾಚಿಯ ರೂಪದಿಂದ ಅಪಹೃತವಾದ ಅವನ ಭಾವವನ್ನು ಪ್ರಯತ್ನಪಟ್ಟು ತಡೆಯುತ್ತಿದ್ದರೂ ಒಡನೆಯೇ ಆ ಮುನಿಯನ ವೀರ್ಯವು ಅಗ್ನಿಯನ್ನು ಬಯಸಿ ಮಥಿಸುತ್ತಿದ್ದ ಅರಣಿಗಳ ಮೇಲೆಯೇ ಬಿದ್ದಿತು.

12311008a ಸೋಽವಿಶಂಕೇನ ಮನಸಾ ತಥೈವ ದ್ವಿಜಸತ್ತಮಃ|

12311008c ಅರಣೀಂ ಮಮಂಥ ಬ್ರಹ್ಮರ್ಷಿಸ್ತಸ್ಯಾಂ ಜಜ್ಞೇ ಶುಕೋ ನೃಪ||

ನೃಪ! ಮನಸ್ಸಿನಲ್ಲಿ ಅವಿಶಂಕನಾಗಿ ಆ ದ್ವಿಜಸತ್ತಮನು ಹಾಗೆಯೇ ಅರಣಿಯನ್ನು ಮಥಿಸುತ್ತಿರಲು ಆ ಅರಣಿಗಳಿಂದ ಶುಕನು ಹುಟ್ಟಿದನು.

12311009a ಶುಕ್ರೇ ನಿರ್ಮಥ್ಯಮಾನೇ ತು ಶುಕೋ ಜಜ್ಞೇ ಮಹಾತಪಾಃ|

12311009c ಪರಮರ್ಷಿರ್ಮಹಾಯೋಗೀ ಅರಣೀಗರ್ಭಸಂಭವಃ||

ಶುಕ್ರವನ್ನು ಮಥಿಸುತ್ತಿರುವಾಗ ಮಹಾತಪಸ್ವಿ ಶುಕನು ಜನಿಸಿದನು. ಆ ಪರಮ ಋಷಿ ಮಹಾಯೋಗಿಯು ಅರಣೀಗರ್ಭಸಂಭವನಾಗಿದ್ದನು.

12311010a ಯಥಾಧ್ವರೇ ಸಮಿದ್ಧೋಽಗ್ನಿರ್ಭಾತಿ ಹವ್ಯಮುಪಾತ್ತವಾನ್|

12311010c ತಥಾರೂಪಃ ಶುಕೋ ಜಜ್ಞೇ ಪ್ರಜ್ವಲನ್ನಿವ ತೇಜಸಾ||

ಅಧ್ವರದಲ್ಲಿ ಸಮಿತ್ತನ್ನು ಹಾಕಿ ಹೊತ್ತಿಸಿದ ಅಗ್ನಿಯು ಹವ್ಯವನ್ನು ಹೊತ್ತು ಬೆಳಗುತ್ತಾನೋ ಅದೇ ರೂಪದಲ್ಲಿ ತೇಜಸ್ಸಿನಿಂದ ಪ್ರಜ್ವಲಿಸುತ್ತಾ ಶುಕನು ಹುಟ್ಟಿದನು.

12311011a ಬಿಭ್ರತ್ಪಿತುಶ್ಚ ಕೌರವ್ಯ ರೂಪವರ್ಣಮನುತ್ತಮಮ್|

12311011c ಬಭೌ ತದಾ ಭಾವಿತಾತ್ಮಾ ವಿಧೂಮೋಽಗ್ನಿರಿವ ಜ್ವಲನ್||

ಕೌರವ್ಯ! ತಂದೆಯ ಅನುತ್ತಮ ರೂಪ-ವರ್ಣಗಳನ್ನು ಒಂದಿದ್ದ ಆ ಭಾವಿತಾತ್ಮನು ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ಪ್ರಕಾಶಿಸಿದನು.

12311012a ತಂ ಗಂಗಾ ಸರಿತಾಂ ಶ್ರೇಷ್ಠಾ ಮೇರುಪೃಷ್ಠೇ ಜನೇಶ್ವರ|

12311012c ಸ್ವರೂಪಿಣೀ ತದಾಭ್ಯೇತ್ಯ ಸ್ನಾಪಯಾಮಾಸ ವಾರಿಣಾ||

ಜನೇಶ್ವರ! ಆಗ ಸರಿತ್ತುಗಳಲ್ಲಿ ಶ್ರೇಷ್ಠ ಸ್ವರೂಪಿಣೀ ಗಂಗೆಯು ಮೇರುಪರ್ವದ ಮೇಲೆ ಆಗಮಿಸಿ ನೀರಿನಿಂದ ಅವನಿಗೆ ಸ್ನಾನಮಾಡಿಸಿದಳು.

12311013a ಅಂತರಿಕ್ಷಾಚ್ಚ ಕೌರವ್ಯ ದಂಡಃ ಕೃಷ್ಣಾಜಿನಂ ಚ ಹ|

12311013c ಪಪಾತ ಭುವಿ ರಾಜೇಂದ್ರ ಶುಕಸ್ಯಾರ್ಥೇ ಮಹಾತ್ಮನಃ||

ಕೌರವ್ಯ! ರಾಜೇಂದ್ರ! ಅಂತರಿಕ್ಷದಿಂದ ದಂಡ, ಕೃಷ್ಣಾಜಿನಗಳು ಮಹಾತ್ಮ ಶುಕನಿಗಾಗಿ ಭೂಮಿಯ ಮೇಲೆ ಬಿದ್ದವು.

12311014a ಜೇಗೀಯಂತೇ ಸ್ಮ ಗಂಧರ್ವಾ ನನೃತುಶ್ಚಾಪ್ಸರೋಗಣಾಃ|

12311014c ದೇವದುಂದುಭಯಶ್ಚೈವ ಪ್ರಾವಾದ್ಯಂತ ಮಹಾಸ್ವನಾಃ||

ಗಂಧರ್ವರು ಜಯಕಾರಮಾಡಿ ಹಾಡುತ್ತಿದ್ದರೆ ಅಪ್ಸರಗಣಗಳು ನೃತ್ತಿಸಿದವು. ದೇವದುಂದುಭಿಗಳೂ ಕೂಡ ಮಹಾಸ್ವನದಲ್ಲಿ ಮೊಳಗಿದವು.

12311015a ವಿಶ್ವಾವಸುಶ್ಚ ಗಂಧರ್ವಸ್ತಥಾ ತುಂಬುರುನಾರದೌ|

12311015c ಹಾಹಾಹೂಹೂ ಚ ಗಂಧರ್ವೌ ತುಷ್ಟುವುಃ ಶುಕಸಂಭವಮ್||

ಶುಕಸಂಭವದಿಂದ ಗಂಧರ್ವ ವಿಶ್ವಾವಸು, ತುಂಬುರು-ನಾರದರು ಮತ್ತು ಗಂಧರ್ವರಾದ ಹಾಹಾ ಹೂಹೂ ಇಬ್ಬರೂ ತುಷ್ಟರಾದರು.

12311016a ತತ್ರ ಶಕ್ರಪುರೋಗಾಶ್ಚ ಲೋಕಪಾಲಾಃ ಸಮಾಗತಾಃ|

12311016c ದೇವಾ ದೇವರ್ಷಯಶ್ಚೈವ ತಥಾ ಬ್ರಹ್ಮರ್ಷಯೋಽಪಿ ಚ||

ಶಕ್ರನನ್ನು ಮುಂದಿರಿಸಿಕೊಂಡು ಅಲ್ಲಿ ಲೋಕಪಾಲಕರು, ದೇವತೆಗಳು, ದೇವರ್ಷಿಗಳು ಮತ್ತು ಬ್ರಹ್ಮರ್ಷಿಗಳು ಸೇರಿದರು.

12311017a ದಿವ್ಯಾನಿ ಸರ್ವಪುಷ್ಪಾಣಿ ಪ್ರವವರ್ಷಾತ್ರ ಮಾರುತಃ|

12311017c ಜಂಗಮಂ ಸ್ಥಾವರಂ ಚೈವ ಪ್ರಹೃಷ್ಟಮಭವಜ್ಜಗತ್||

ಮಾರುತನು ಅಲ್ಲಿ ಸರ್ವ ದಿವ್ಯಪುಷ್ಪಗಳ ಮಳೆಯನ್ನು ಸುರಿಸಿದನು. ಜಗತ್ತಿನ ಎಲ್ಲ ಸ್ಥಾವರ-ಜಂಗಮಗಳೂ ಪ್ರಹೃಷ್ಟವಾದವು.

12311018a ತಂ ಮಹಾತ್ಮಾ ಸ್ವಯಂ ಪ್ರೀತ್ಯಾ ದೇವ್ಯಾ ಸಹ ಮಹಾದ್ಯುತಿಃ|

12311018c ಜಾತಮಾತ್ರಂ ಮುನೇಃ ಪುತ್ರಂ ವಿಧಿನೋಪಾನಯತ್ತದಾ||

ಮಹಾತ್ಮಾ ಮಹಾದ್ಯುತಿ ಶಿವನು ಪ್ರೀತನಾಗಿ ದೇವಿಯ ಸಹಿತ ಸ್ವಯಂ ತಾನೇ ಬಂದು ಆಗತಾನೇ ಹುಟ್ಟಿದ್ದ ಮುನಿಯ ಪುತ್ರನಿಗೆ ವಿಧಿವತ್ತಾಗಿ ಉಪನಯನವನ್ನು ಮಾಡಿಸಿದನು.

12311019a ತಸ್ಯ ದೇವೇಶ್ವರಃ ಶಕ್ರೋ ದಿವ್ಯಮದ್ಭುತದರ್ಶನಮ್|

12311019c ದದೌ ಕಮಂಡಲುಂ ಪ್ರೀತ್ಯಾ ದೇವವಾಸಾಂಸಿ ಚಾಭಿಭೋ||

ವಿಭೋ! ದೇವೇಶ್ವರ ಶಕ್ರನು ಪ್ರೀತಿಯಿಂದ ಅವನಿಗೆ ದಿವ್ಯವಾದ ಅದ್ಭುತವಾಗಿ ಕಾಣುತ್ತಿದ್ದ ಕಮಂಡಲುವನ್ನು ಮತ್ತು ದೇವವಸ್ತ್ರಗಳನ್ನು ನೀಡಿದನು.

12311020a ಹಂಸಾಶ್ಚ ಶತಪತ್ರಾಶ್ಚ ಸಾರಸಾಶ್ಚ ಸಹಸ್ರಶಃ|

12311020c ಪ್ರದಕ್ಷಿಣಮವರ್ತಂತ ಶುಕಾಶ್ಚಾಷಾಶ್ಚ ಭಾರತ||

ಭಾರತ! ಸಹಸ್ರಾರು ಹಂಸಗಳು, ಶತಪತ್ರಗಳು, ಸಾರಸಗಳು, ಗಿಳಿಗಳು ಮತ್ತು ಆಷಗಳು ಅವನಿಗೆ ಪ್ರದಕ್ಷಿಣೆಮಾಡಿದವು.

12311021a ಆರಣೇಯಸ್ತಥಾ ದಿವ್ಯಂ ಪ್ರಾಪ್ಯ ಜನ್ಮ ಮಹಾದ್ಯುತಿಃ|

12311021c ತತ್ರೈವೋವಾಸ ಮೇಧಾವೀ ವ್ರತಚಾರೀ ಸಮಾಹಿತಃ||

ಹೀಗೆ ಆರಣೇಯಗಳಿಂದ ದಿವ್ಯ ಜನ್ಮವನ್ನು ಪಡೆದ ಮಹಾದ್ಯುತಿ ಮೇಧಾವೀ ವ್ರತಚಾರೀ ಶುಕನು ಅಲ್ಲಿಯೇ ಸಮಾಹಿತನಾಗಿ ವಾಸಿಸಿದನು.

12311022a ಉತ್ಪನ್ನಮಾತ್ರಂ ತಂ ವೇದಾಃ ಸರಹಸ್ಯಾಃ ಸಸಂಗ್ರಹಾಃ|

12311022c ಉಪತಸ್ಥುರ್ಮಹಾರಾಜ ಯಥಾಸ್ಯ ಪಿತರಂ ತಥಾ||

ಮಹಾರಾಜ! ಅವನು ಉತ್ಪನ್ನನಾಗುತ್ತಲೇ ರಹಸ್ಯ ಸಂಗ್ರಹಗಳೊಂದಿಗೆ ವೇದಗಳು, ಅವನ ತಂದೆಯನ್ನು ಹೇಗೋ ಹಾಗೆ, ಉಪಾಸಿಸತೊಡಗಿದವು.

12311023a ಬೃಹಸ್ಪತಿಂ ತು ವವ್ರೇ ಸ ವೇದವೇದಾಂಗಭಾಷ್ಯವಿತ್|

12311023c ಉಪಾಧ್ಯಾಯಂ ಮಹಾರಾಜ ಧರ್ಮಮೇವಾನುಚಿಂತಯನ್||

ಮಹಾರಾಜ! ಧರ್ಮದ ಕುರಿತೇ ಚಿಂತಿಸುತ್ತಾ ಅವನು ವೇದವೇದಾಂಗ ಭಾಷ್ಯವಿದು ಬೃಹಸ್ಪತಿಯನ್ನು ಉಪಾಧ್ಯಾಯನನ್ನಾಗಿ ವರಿಸಿದನು.

12311024a ಸೋಽಧೀತ್ಯ ವೇದಾನಖಿಲಾನ್ಸರಹಸ್ಯಾನ್ಸಸಂಗ್ರಹಾನ್|

12311024c ಇತಿಹಾಸಂ ಚ ಕಾರ್ತ್ಸ್ನ್ಯೇನ ರಾಜಶಾಸ್ತ್ರಾಣಿ ಚಾಭಿಭೋ||

ವಿಭೋ! ಅವನು ವೇದಗಳನ್ನು ಅವುಗಳ ಅಖಿಲ ರಹಸ್ಯಗಳು ಮತ್ತು ಸಂಗ್ರಹಗಳೊಡನೆ ಹಾಗೂ ಸಂಪೂರ್ಣ ಇತಿಹಾಸ ಮತ್ತು ರಾಜಶಾಸ್ತ್ರಗಳನ್ನೂ ತಿಳಿದುಕೊಂಡನು.

12311025a ಗುರವೇ ದಕ್ಷಿಣಾಂ ದತ್ತ್ವಾ ಸಮಾವೃತ್ತೋ ಮಹಾಮುನಿಃ|

12311025c ಉಗ್ರಂ ತಪಃ ಸಮಾರೇಭೇ ಬ್ರಹ್ಮಚಾರೀ ಸಮಾಹಿತಃ||

ಗುರುವಿಗೆ ದಕ್ಷಿಣೆಯನ್ನಿತ್ತು ಸಮಾವೃತ್ತನಾದ ಆ ಮಹಾಮುನಿಯು ಬ್ರಹ್ಮಚರ್ಯದಲ್ಲಿಯೇ ಸಮಾಹಿತನಾಗಿ ಉಗ್ರ ತಪಸ್ಸನ್ನು ಪ್ರಾರಂಭಿಸಿದನು.

12311026a ದೇವತಾನಾಮೃಷೀಣಾಂ ಚ ಬಾಲ್ಯೇಽಪಿ ಸ ಮಹಾತಪಾಃ|

12311026c ಸಂಮಂತ್ರಣೀಯೋ ಮಾನ್ಯಶ್ಚ ಜ್ಞಾನೇನ ತಪಸಾ ತಥಾ||

ತನ್ನ ಜ್ಞಾನ ಮತ್ತು ತಪಸ್ಸುಗಳಿಂದ ಆ ಮಹಾತಪಸ್ವಿಯು ಬಾಲ್ಯದಿಂದಲೇ ದೇವತೆಗಳು ಮತ್ತು ಋಷಿಗಳ ಸಲಹೆಗಾರನೂ ಮಾನ್ಯನೂ ಆಗಿದ್ದನು.

12311027a ನ ತ್ವಸ್ಯ ರಮತೇ ಬುದ್ಧಿರಾಶ್ರಮೇಷು ನರಾಧಿಪ|

12311027c ತ್ರಿಷು ಗಾರ್ಹಸ್ಥ್ಯಮೂಲೇಷು ಮೋಕ್ಷಧರ್ಮಾನುದರ್ಶಿನಃ||

ನರಾಧಿಪ! ಮೋಕ್ಷಧರ್ಮವನ್ನೇ ಕಂಡಿದ್ದ ಅವನ ಬುದ್ಧಿಯು ಗೃಹಸ್ಥಾಶ್ರಮವೇ ಮೊದಲಾದ ಮೂರು ಆಶ್ರಮಗಳಲ್ಲಿ ರುಚಿಸಲೇ ಇಲ್ಲ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕೋತ್ಪತ್ತೌ ಏಕಾದಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕೋತ್ಪತ್ತಿ ಎನ್ನುವ ಮುನ್ನೂರಾಹನ್ನೊಂದನೇ ಅಧ್ಯಾಯವು.

White Jasmine Flowers Fresh Flowers Natural Backgrounds. Stock ...

Comments are closed.