Shanti Parva: Chapter 310

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೧೦

ಶುಕಚರಿತ

ಪುತ್ರಪ್ರಾಪ್ತಿಗಾಗಿ ವ್ಯಾಸನು ತಪಸ್ಸನ್ನು ತಪಿಸಿದುದು (1-25). ಮಹಾದೇವನಿಂದ ವರಪ್ರಾಪ್ತಿ (26-29).

12310001 ಯುಧಿಷ್ಠಿರ ಉವಾಚ|

12310001a ಕಥಂ ವ್ಯಾಸಸ್ಯ ಧರ್ಮಾತ್ಮಾ ಶುಕೋ ಜಜ್ಞೇ ಮಹಾತಪಾಃ|

12310001c ಸಿದ್ಧಿಂ ಚ ಪರಮಾಂ ಪ್ರಾಪ್ತಸ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ವ್ಯಾಸನಿಗೆ ಧರ್ಮಾತ್ಮಾ ಮಹಾತಪಸ್ವಿ ಶುಕನು ಹೇಗೆ ಹುಟ್ಟಿದನು? ಅವನು ಪರಮ ಸಿದ್ಧಿಯನ್ನು ಹೇಗೆ ಪಡೆದುಕೊಂಡನು ಎನ್ನುವುದನ್ನು ನನಗೆ ಹೇಳು.

12310002a ಕಸ್ಯಾಂ ಚೋತ್ಪಾದಯಾಮಾಸ ಶುಕಂ ವ್ಯಾಸಸ್ತಪೋಧನಃ|

12310002c ನ ಹ್ಯಸ್ಯ ಜನನೀಂ ವಿದ್ಮ ಜನ್ಮ ಚಾಗ್ರ್ಯಂ ಮಹಾತ್ಮನಃ||

ತಪೋಧನ ವ್ಯಾಸನು ಶುಕನನ್ನು ಯಾರಲ್ಲಿ ಹುಟ್ಟಿಸಿದನು? ಶುಕನ ಜನನಿಯ ಕುರಿತು ತಿಳಿದಿಲ್ಲ ಮತ್ತು ಆ ಮಹಾತ್ಮನ ಜನ್ಮವೃತ್ತಾಂತವನ್ನು ತಿಳಿದಿಲ್ಲ.

12310003a ಕಥಂ ಚ ಬಾಲಸ್ಯ ಸತಃ ಸೂಕ್ಷ್ಮಜ್ಞಾನೇ ಗತಾ ಮತಿಃ|

12310003c ಯಥಾ ನಾನ್ಯಸ್ಯ ಲೋಕೇಽಸ್ಮಿನ್ದ್ವಿತೀಯಸ್ಯೇಹ ಕಸ್ಯ ಚಿತ್||

ಬಾಲಕನಾಗಿದ್ದಾಗಲೇ ಶುಕನಿಗೆ ಸೂಕ್ಷ್ಮಜ್ಞಾನದಲ್ಲಿ ಹೇಗೆ ಬುದ್ಧಿಯುಂಟಾಯಿತು? ಈ ಲೋಕದಲ್ಲಿ ಬೇರೆ ಯಾರಿಗೂ ಇಂತಹ ಅದ್ವಿತೀಯ ಸೂಕ್ಷ್ಮಬುದ್ಧಿಯಿಲ್ಲ.

12310004a ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ಮಹಾದ್ಯುತೇ|

12310004c ನ ಹಿ ಮೇ ತೃಪ್ತಿರಸ್ತೀಹ ಶೃಣ್ವತೋಽಮೃತಮುತ್ತಮಮ್||

ಮಹಾದ್ಯುತೇ! ಇದನ್ನು ವಿಸ್ತಾರವಾಗಿ ಕೇಳಬಯಸುತ್ತೇನೆ. ಈ ಉತ್ತಮ ಅಮೃತವನ್ನು ಕೇಳಿ ನನಗೆ ತೃಪ್ತಿಯೇ ಆಗುತ್ತಿಲ್ಲ.

12310005a ಮಾಹಾತ್ಮ್ಯಮಾತ್ಮಯೋಗಂ ಚ ವಿಜ್ಞಾನಂ ಚ ಶುಕಸ್ಯ ಹ|

12310005c ಯಥಾವದಾನುಪೂರ್ವ್ಯೇಣ ತನ್ಮೇ ಬ್ರೂಹಿ ಪಿತಾಮಹ||

ಪಿತಾಮಹ! ಶುಕನ ಮಹಾತ್ಮೆ, ಆತ್ಮಯೋಗ ಮತ್ತು ವಿಜ್ಞಾನಗಳನ್ನು ಮೊದಲಿನಿಂದ ಯಥಾವತ್ತಾಗಿ ನನಗೆ ಹೇಳು.”

12310006 ಭೀಷ್ಮ ಉವಾಚ|

12310006a ನ ಹಾಯನೈರ್ನ ಪಲಿತೈರ್ನ ವಿತ್ತೇನ ನ ಬಂಧುಭಿಃ|

12310006c ಋಷಯಶ್ಚಕ್ರಿರೇ ಧರ್ಮಂ ಯೋಽನೂಚಾನಃ ಸ ನೋ ಮಹಾನ್||

ಭೀಷ್ಮನು ಹೇಳಿದನು: “ವಯಸ್ಸಿನಿಂದ, ಕೂದಲು ನೆರೆತುದರಿಂದ, ವಿತ್ತದಿಂದ ಮತ್ತು ಬಂಧುಗಳಿಂದ ಮಹಾತ್ಮನೆನಿಸಿಕೊಳ್ಳುವುದಿಲ್ಲ. ವೇದಗಳನ್ನು ತಿಳಿದಿರುವವನೇ ಮಹಾತ್ಮನೆಂದು ಋಷಿಗಳು ಧರ್ಮನಿಯಮವನ್ನು ಮಾಡಿರುತ್ತಾರೆ.

12310007a ತಪೋಮೂಲಮಿದಂ ಸರ್ವಂ ಯನ್ಮಾಂ ಪೃಚ್ಚಸಿ ಪಾಂಡವ|

12310007c ತದಿಂದ್ರಿಯಾಣಿ ಸಂಯಮ್ಯ ತಪೋ ಭವತಿ ನಾನ್ಯಥಾ||

ಪಾಂಡವ! ನೀನು ಕೇಳುತ್ತಿರುವ ಎಲ್ಲವಕ್ಕೆ ತಪಸ್ಸೇ ಮೂಲ. ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡಾಗ ತಪಸ್ಸಾಗುತ್ತದೆ. ಅನ್ಯಥಾ ಇಲ್ಲ.

12310008a ಇಂದ್ರಿಯಾಣಾಂ ಪ್ರಸಂಗೇನ ದೋಷನೃಚ್ಚತ್ಯಸಂಶಯಮ್|

12310008c ಸಂನಿಯಮ್ಯ ತು ತಾನ್ಯೇವ ಸಿದ್ಧಿಂ ಪ್ರಾಪ್ನೋತಿ ಮಾನವಃ||

ಇಂದ್ರಿಯಗಳ ಪ್ರಸಂಗದಿಂದ ದೋಷವುಂಟಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಿಂದಲೇ ಮನುಷ್ಯನು ಸಿದ್ಧಿಯನ್ನು ಹೊಂದುತ್ತಾನೆ.

12310009a ಅಶ್ವಮೇಧಸಹಸ್ರಸ್ಯ ವಾಜಪೇಯಶತಸ್ಯ ಚ|

12310009c ಯೋಗಸ್ಯ ಕಲಯಾ ತಾತ ನ ತುಲ್ಯಂ ವಿದ್ಯತೇ ಫಲಮ್||

ಸಹಸ್ರ ಅಶ್ವಮೇಧ ಮತ್ತು ನೂರು ವಾಜಪೇಯಗಳ ಫಲವು ಯೋಗದಿಂದ ದೊರೆಯುವ ಫಲದ ಹದಿನಾರನೆಯೇ ಒಂದು ಭಾಗಕ್ಕೂ ಸಮನಾಗಿರುವುದಿಲ್ಲ.

12310010a ಅತ್ರ ತೇ ವರ್ತಯಿಷ್ಯಾಮಿ ಜನ್ಮಯೋಗಫಲಂ ಯಥಾ|

12310010c ಶುಕಸ್ಯಾಗ್ರ್ಯಾಂ ಗತಿಂ ಚೈವ ದುರ್ವಿದಾಮಕೃತಾತ್ಮಭಿಃ||

ಈಗ ನಿನಗೆ ಶುಕನ ಜನ್ಮ, ಯೋಗಫಲ ಮತ್ತು ಅಕೃತಾತ್ಮರಿಗೆ ದೊರೆಯಲು ಅಸಾಧ್ಯವಾದ ಅಗ್ರ ಗತಿಯ ಕುರಿತು ಹೇಳುತ್ತೇನೆ.

12310011a ಮೇರುಶೃಂಗೇ ಕಿಲ ಪುರಾ ಕರ್ಣಿಕಾರವನಾಯುತೇ|

12310011c ವಿಜಹಾರ ಮಹಾದೇವೋ ಭೀಮೈರ್ಭೂತಗಣೈರ್ವೃತಃ||

ಹಿಂದೆ ಕರ್ಣಿಕಾರವನಗಳಿಂದ ಕೂಡಿದ್ದ ಮೇರು ಶೃಂಗದಲ್ಲಿ ಮಹಾದೇವನು ಭಯಂಕರ ಭೂತಗಣಗಳಿಂದ ಆವೃತನಾಗಿ ವಿಹರಿಸುತ್ತಿದ್ದನು.

12310012a ಶೈಲರಾಜಸುತಾ ಚೈವ ದೇವೀ ತತ್ರಾಭವತ್ಪುರಾ|

12310012c ತತ್ರ ದಿವ್ಯಂ ತಪಸ್ತೇಪೇ ಕೃಷ್ಣದ್ವೈಪಾಯನಃ ಪ್ರಭುಃ||

ಆಗ ಶೈಲರಾಜಸುತೆ ದೇವಿಯೂ ಕೂಡ ಅವನೊಡನಿದ್ದಳು. ಅಲ್ಲಿಯೇ ಪ್ರಭು ಕೃಷ್ಣದ್ವೈಪಾಯನನು ದಿವ್ಯ ತಪಸ್ಸನ್ನು ತಪಿಸುತ್ತಿದ್ದನು.

12310013a ಯೋಗೇನಾತ್ಮಾನಮಾವಿಶ್ಯ ಯೋಗಧರ್ಮಪರಾಯಣಃ|

12310013c ಧಾರಯನ್ಸ ತಪಸ್ತೇಪೇ ಪುತ್ರಾರ್ಥಂ ಕುರುಸತ್ತಮ||

ಕುರುಸತ್ತಮ! ಆ ಯೋಗಧರ್ಮಪರಾಯಣನು ಪುತ್ರನಿಗಾಗಿ ಯೋಗದಿಂದ ಆತ್ಮನನ್ನು ಪ್ರವೇಶಿಸಿ ಆತ್ಮನನ್ನು ಧರಿಸಿ ತಪಸ್ಸನ್ನು ತಪಿಸುತ್ತಿದ್ದನು.

12310014a ಅಗ್ನೇರ್ಭೂಮೇರಪಾಂ ವಾಯೋರಂತರಿಕ್ಷಸ್ಯ ಚಾಭಿಭೋ|

12310014c ವೀರ್ಯೇಣ ಸಂಮಿತಃ ಪುತ್ರೋ ಮಮ ಭೂಯಾದಿತಿ ಸ್ಮ ಹ||

“ನನಗೆ ಅಗ್ನಿ, ಭೂಮಿ, ಜಲ, ವಾಯು ಮತ್ತು ಆಕಾಶ ಇವುಗಳ ವೀರ್ಯಗಳಿಂದ ಸಮ್ಮಿತನಾದ ಪುತ್ರನಾಗಲಿ!”

12310015a ಸಂಕಲ್ಪೇನಾಥ ಸೋಽನೇನ ದುಷ್ಪ್ರಾಪೇಣಾಕೃತಾತ್ಮಭಿಃ|

12310015c ವರಯಾಮಾಸ ದೇವೇಶಮಾಸ್ಥಿತಸ್ತಪ ಉತ್ತಮಮ್||

ಈ ಸಂಕಲ್ಪದಿಂದ ಉತ್ತಮ ತಪಸ್ಸಿನಲ್ಲಿ ತೊಡಗಿದ್ದ ಅವನು ಅಕೃತಾತ್ಮರಿಗೆ ದೊರಕಲಾಗದ ವರವನ್ನು ದೇವೇಶನಲ್ಲಿ ಕೇಳಿದನು.

12310016a ಅತಿಷ್ಠನ್ಮಾರುತಾಹಾರಃ ಶತಂ ಕಿಲ ಸಮಾಃ ಪ್ರಭುಃ|

12310016c ಆರಾಧಯನ್ಮಹಾದೇವಂ ಬಹುರೂಪಮುಮಾಪತಿಮ್||

ನೂರು ವರ್ಷಗಳ ಪರ್ಯಂತ ವಾಯುವನ್ನೇ ಆಹಾರವನ್ನಾಗಿ ಸೇವಿಸುತ್ತಾ ಆ ಪ್ರಭುವು ಬಹುರೂಪೀ ಉಮಾಪತಿ ಮಹಾದೇವನನ್ನು ಆರಾಧಿಸಿದನು.

12310017a ತತ್ರ ಬ್ರಹ್ಮರ್ಷಯಶ್ಚೈವ ಸರ್ವೇ ದೇವರ್ಷಯಸ್ತಥಾ|

12310017c ಲೋಕಪಾಲಾಶ್ಚ ಲೋಕೇಶಂ ಸಾಧ್ಯಾಶ್ಚ ವಸುಭಿಃ ಸಹ||

12310018a ಆದಿತ್ಯಾಶ್ಚೈವ ರುದ್ರಾಶ್ಚ ದಿವಾಕರನಿಶಾಕರೌ|

12310018c ಮರುತೋ ಮಾರುತಶ್ಚೈವ ಸಾಗರಾಃ ಸರಿತಸ್ತಥಾ||

12310019a ಅಶ್ವಿನೌ ದೇವಗಂಧರ್ವಾಸ್ತಥಾ ನಾರದಪರ್ವತೌ|

12310019c ವಿಶ್ವಾವಸುಶ್ಚ ಗಂಧರ್ವಃ ಸಿದ್ಧಾಶ್ಚಾಪ್ಸರಸಾಂ ಗಣಾಃ||

ಅಲ್ಲಿ ಬ್ರಹ್ಮರ್ಷಿಗಳೆಲ್ಲರೂ, ದೇವರ್ಷಿಗಳೂ, ಲೋಕಪಾಲರೂ, ವಸುಗಳೊಂದಿಗೆ ಸಾಧ್ಯರು, ಆದಿತ್ಯರು, ರುದ್ರರು, ದಿವಾಕರ-ನಿಶಾಕರರಿಬ್ಬರೂ, ಮರುತನೂ, ಮಾರುತರೂ, ಸಾಗರ-ಸರಿತ್ತುಗಳೂ, ಅಶ್ವಿನೀದೇವತೆಗಳಿಬ್ಬರೂ, ದೇವ-ಗಂಧರ್ವರೂ, ನಾರದ-ಪರ್ವತರೂ, ಗಂಧರ್ವ ವಿಶ್ವಾವಸುವೂ, ಸಿದ್ಧ-ಅಪ್ಸರೆಯರ ಗಣಗಳೂ ಲೋಕೇಶನನ್ನು ಪ್ರಾರ್ಥಿಸುತ್ತಿದ್ದರು.

12310020a ತತ್ರ ರುದ್ರೋ ಮಹಾದೇವಃ ಕರ್ಣಿಕಾರಮಯೀಂ ಶುಭಾಮ್|

12310020c ಧಾರಯಾಣಃ ಸ್ರಜಂ ಭಾತಿ ಜ್ಯೋತ್ಸ್ನಾಮಿವ ನಿಶಾಕರಃ||

ಅಲ್ಲಿ ಮಹಾದೇವನು ಶುಭ ಕರ್ಣಿಕಾರಗಳ ಹಾರವನ್ನು ಧರಿಸಿ ಬೆಳದಿಂಗಳ ಚಂದ್ರನಂತೆ ಪ್ರಕಾಶಿಸುತ್ತಿದ್ದನು.

12310021a ತಸ್ಮಿನ್ದಿವ್ಯೇ ವನೇ ರಮ್ಯೇ ದೇವದೇವರ್ಷಿಸಂಕುಲೇ|

12310021c ಆಸ್ಥಿತಃ ಪರಮಂ ಯೋಗಮೃಷಿಃ ಪುತ್ರಾರ್ಥಮುದ್ಯತಃ||

ದೇವದೇವರ್ಷಿಸಂಕುಲ ದಿವ್ಯ ರಮ್ಯ ವನದಲ್ಲಿ ಋಷಿಯು ಪುತ್ರನಿಗಾಗಿ ಪರಮ ಯೋಗದಲ್ಲಿದ್ದನು.

12310022a ನ ಚಾಸ್ಯ ಹೀಯತೇ ವರ್ಣೋ ನ ಗ್ಲಾನಿರುಪಜಾಯತೇ|

12310022c ತ್ರಯಾಣಾಮಪಿ ಲೋಕಾನಾಂ ತದದ್ಭುತಮಿವಾಭವತ್||

ಅವನ ಬಣ್ಣವು ಕುಂದಲಿಲ್ಲ. ಅವನಿಗೆ ಯಾವ ಆಯಾಸವೂ ಉಂಟಾಗಲಿಲ್ಲ. ಮೂರು ಲೋಕಗಳಲ್ಲಿಯೂ ಇದು ಅದ್ಭುತವಾಗಿ ಕಂಡಿತು.

12310023a ಜಟಾಶ್ಚ ತೇಜಸಾ ತಸ್ಯ ವೈಶ್ವಾನರಶಿಖೋಪಮಾಃ|

12310023c ಪ್ರಜ್ವಲಂತ್ಯಃ ಸ್ಮ ದೃಶ್ಯಂತೇ ಯುಕ್ತಸ್ಯಾಮಿತತೇಜಸಃ||

ಆ ಅಮಿತತೇಜಸ್ವಿಯ ಜಟೆಯು ವೈಶ್ವಾನರನ ಶಿಖೆಯಂತೆ ತೇಜಸ್ಸಿನಿಂದ ಬೆಳಗುತ್ತಿತ್ತುದು ಕಾಣುತ್ತಿತ್ತು.

12310024a ಮಾರ್ಕಂಡೇಯೋ ಹಿ ಭಗವಾನೇತದಾಖ್ಯಾತವಾನ್ಮಮ|

12310024c ಸ ದೇವಚರಿತಾನೀಹ ಕಥಯಾಮಾಸ ಮೇ ಸದಾ||

ಸದಾ ನನಗೆ ದೇವಚರಿತೆಗಳನ್ನು ಹೇಳುತ್ತಿದ್ದ ಭಗವಾನ್ ಮಾರ್ಕಂಡೇಯನು ನನಗೆ ಇದನ್ನು ಹೇಳಿದ್ದರು.

12310025a ತಾ ಏತಾದ್ಯಾಪಿ ಕೃಷ್ಣಸ್ಯ ತಪಸಾ ತೇನ ದೀಪಿತಾಃ|

12310025c ಅಗ್ನಿವರ್ಣಾ ಜಟಾಸ್ತಾತ ಪ್ರಕಾಶಂತೇ ಮಹಾತ್ಮನಃ||

ಅಯ್ಯಾ! ಆ ತಪಸ್ಸಿನಿಂದ ಉದ್ದೀಪ್ತವಾಗಿದ್ದ ಮಹಾತ್ಮ ವ್ಯಾಸನ ಜಟೆಯು ಈಗಲೂ ಕೂಡ ಅಗ್ನಿವರ್ಣದಿಂದ ಪ್ರಜ್ವಲಿಸುತ್ತಿದೆ[1].

12310026a ಏವಂವಿಧೇನ ತಪಸಾ ತಸ್ಯ ಭಕ್ತ್ಯಾ ಚ ಭಾರತ|

12310026c ಮಹೇಶ್ವರಃ ಪ್ರಸನ್ನಾತ್ಮಾ ಚಕಾರ ಮನಸಾ ಮತಿಮ್||

ಭಾರತ! ಅವನ ಈ ವಿಧದ ತಪಸ್ಸು ಮತ್ತು ಭಕ್ತಿಗಳಿಂದ ಪ್ರಸನ್ನಾತ್ಮನಾದ ಮಹೇಶ್ವರನು ಅವನಿಗೆ ಒಲಿಯಲು ಮನಸ್ಸು ಮಾಡಿದನು.

12310027a ಉವಾಚ ಚೈನಂ ಭಗವಾಂಸ್ತ್ರ್ಯಂಬಕಃ ಪ್ರಹಸನ್ನಿವ|

12310027c ಏವಂವಿಧಸ್ತೇ ತನಯೋ ದ್ವೈಪಾಯನ ಭವಿಷ್ಯತಿ||

ಭಗವಾನ್ ತ್ರ್ಯಂಬಕನು ನಸುನಗುತ್ತಾ ಅವನಿಗೆ ಹೇಳಿದನು: “ದ್ವೈಪಾಯನ! ಆ ರೀತಿಯ ತನಯನೇ ನಿನಗಾಗುತ್ತಾನೆ.

12310028a ಯಥಾ ಹ್ಯಗ್ನಿರ್ಯಥಾ ವಾಯುರ್ಯಥಾ ಭೂಮಿರ್ಯಥಾ ಜಲಮ್|

12310028c ಯಥಾ ಚ ಖಂ ತಥಾ ಶುದ್ಧೋ ಭವಿಷ್ಯತಿ ಸುತೋ ಮಹಾನ್||

ಅಗ್ನಿ, ವಾಯು, ಭೂಮಿ, ಜಲ ಮತ್ತು ಆಕಾಶಗಳು ಎಷ್ಟು ಶುದ್ಧವಾಗಿವೆಯೋ ಅಷ್ಟೇ ಶುದ್ಧಾತ್ಮನಾದ ಮಹಾನ್ ಸುತನು ನಿನಗಾಗುತ್ತಾನೆ.

12310029a ತದ್ಭಾವಭಾವೀ ತದ್ಬುದ್ಧಿಸ್ತದಾತ್ಮಾ ತದಪಾಶ್ರಯಃ|

12310029c ತೇಜಸಾವೃತ್ಯ ಲೋಕಾಂಸ್ತ್ರೀನ್ಯಶಃ ಪ್ರಾಪ್ಸ್ಯತಿ ಕೇವಲಮ್||

ಅವನು ಅದರ ಭಾವದಲ್ಲಿಯೇ ಇರುತ್ತಾನೆ. ಅವನ ಬುದ್ಧಿಯು ಆತ್ಮನಲ್ಲಿಯೇ ಲೀನವಾಗಿರುತ್ತದೆ. ಅವನು ಆತ್ಮನನ್ನೇ ಆಶ್ರಯಿಸಿರುತ್ತಾನೆ. ತನ್ನ ತೇಜಸ್ಸಿನಿಂದ ಮೂರು ಲೋಕಗಳನ್ನೂ ಆವರಿಸಿ ಕೇವಲ ಯಶಸ್ಸನ್ನು ಪಡೆಯುತ್ತಾನೆ.””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕೋತ್ಪತ್ತೌ ದಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕೋತ್ಪತ್ತಿ ಎನ್ನುವ ಮುನ್ನೂರಾಹತ್ತನೇ ಅಧ್ಯಾಯವು.

White Flowers Background | Gallery Yopriceville - High-Quality ...

[1] ಭೀಷ್ಮನು ಯುಧಿಷ್ಠಿರನಿಗೆ ಈ ಕಥೆಯನ್ನು ಹೇಳುತ್ತಿರುವಾಗ ವಾಸನೂ ಅಲ್ಲಿದ್ದನು.

Comments are closed.