Shanti Parva: Chapter 309

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೦೯

ಯಾವಕಾಧ್ಯಾಯ (ದ್ವೈಪಾಯನ-ಶುಕ ಸಂವಾದ)

ವ್ಯಾಸನು ಪುತ್ರ ಶುಕನಿಗೆ ವೈರಾಗ್ಯ ಧರ್ಮವನ್ನು  ಉಪದೇಶಿಸಿದುದು (1-92).

12309001 ಯುಧಿಷ್ಠಿರ ಉವಾಚ|

12309001a ಕಥಂ ನಿರ್ವೇದಮಾಪನ್ನಃ ಶುಕೋ ವೈಯಾಸಕಿಃ ಪುರಾ|

12309001c ಏತದಿಚ್ಚಾಮಿ ಕೌರವ್ಯ ಶ್ರೋತುಂ ಕೌತೂಹಲಂ ಹಿ ಮೇ||

ಯುಧಿಷ್ಠಿರನು ಹೇಳಿದನು: “ಕೌರವ್ಯ! ಹಿಂದೆ ಶುಕನು ಹೇಗೆ ವೈರಾಗ್ಯವನ್ನು ಹೊಂದಿದನು? ಇದರ ಕುರಿತು ಕೇಳ ಬಯಸುತ್ತೇನೆ. ನನಗೆ ಕುತೂಹಲವುಂಟಾಗಿದೆ.[1]

12309002 ಭೀಷ್ಮ ಉವಾಚ|

12309002a ಪ್ರಾಕೃತೇನ ಸುವೃತ್ತೇನ ಚರಂತಮಕುತೋಭಯಮ್|

12309002c ಅಧ್ಯಾಪ್ಯ ಕೃತ್ಸ್ನಂ ಸ್ವಾಧ್ಯಾಯಮನ್ವಶಾದ್ವೈ ಪಿತಾ ಸುತಮ್||

ಭೀಷ್ಮನು ಹೇಳಿದನು: “ಸಾಧಾರಣ ಮನುಷ್ಯನಂತೆ ವ್ಯವಹರಿಸುತ್ತಾ ಭಯರಹಿತನಾಗಿ ಲೋಕದಲ್ಲಿ ಸಂಚರಿಸುತ್ತಿರುವ ಮಗನಿಗೆ ತಂದೆಯು ಸ್ವಾಧ್ಯಾಯವನ್ನು ಸಂಪೂರ್ಣವಾಗಿ ಅಧ್ಯಾಪಿಸಿ ಈ ಉಪದೇಶವನ್ನು ನೀಡಿದನು:

12309003a ಧರ್ಮಂ ಪುತ್ರ ನಿಷೇವಸ್ವ ಸುತೀಕ್ಷ್ಣೌ ಹಿ ಹಿಮಾತಪೌ|

12309003c ಕ್ಷುತ್ಪಿಪಾಸೇ ಚ ವಾಯುಂ ಚ ಜಯ ನಿತ್ಯಂ ಜಿತೇಂದ್ರಿಯಃ||

“ಪುತ್ರ! ಧರ್ಮವನ್ನೇ ಆಚರಿಸುತ್ತಿರು. ಜಿತೇಂದ್ರಿಯನಾಗಿ ನಿತ್ಯವೂ ಹಸಿವು, ಬಾಯಾರಿಕೆ, ಮತ್ತು ವಾಯುವನ್ನು ಜಯಿಸು.

12309004a ಸತ್ಯಮಾರ್ಜವಮಕ್ರೋಧಮನಸೂಯಾಂ ದಮಂ ತಪಃ|

12309004c ಅಹಿಂಸಾಂ ಚಾನೃಶಂಸ್ಯಂ ಚ ವಿಧಿವತ್ಪರಿಪಾಲಯ||

ಸತ್ಯ, ಆರ್ಜವ, ಅಕ್ರೋಧ, ಅನಸೂಯ, ದಮ, ತಪಸ್ಸು, ಅಹಿಂಸೆ, ಮತ್ತು ದಯೆ ಇವುಗಳನ್ನು ವಿಧಿವತ್ತಾಗಿ ಪರಿಪಾಲಿಸು.

12309005a ಸತ್ಯೇ ತಿಷ್ಠ ರತೋ ಧರ್ಮೇ ಹಿತ್ವಾ ಸರ್ವಮನಾರ್ಜವಮ್|

12309005c ದೇವತಾತಿಥಿಶೇಷೇಣ ಯಾತ್ರಾಂ ಪ್ರಾಣಸ್ಯ ಸಂಶ್ರಯ||

ಸತ್ಯದಲ್ಲಿಯೇ ನಿಷ್ಠನಾಗಿರು. ಸರ್ವ ಕೌಟಿಲ್ಯತೆಗಳನ್ನೂ ತ್ಯಜಿಸಿ ಧರ್ಮದಲ್ಲಿಯೇ ಅಭಿರುಚಿಯನ್ನಿಟ್ಟಿರು. ದೇವತೆಗಳಿಗೆ ಮತ್ತು ಅತಿಥಿಗಳಿಗೆ ಕೊಟ್ಟು ಉಳಿದುದನ್ನು ಪ್ರಾಣರಕ್ಷಣೆಗಾಗಿ ಭುಂಜಿಸು.

12309006a ಫೇನಪಾತ್ರೋಪಮೇ ದೇಹೇ ಜೀವೇ ಶಕುನಿವತ್ ಸ್ಥಿತೇ|

12309006c ಅನಿತ್ಯೇ ಪ್ರಿಯಸಂವಾಸೇ ಕಥಂ ಸ್ವಪಿಷಿ ಪುತ್ರಕ||

ಪುತ್ರಕ! ನೀರಿನ ಮೇಲಿನ ನೊರೆಯಂತಿರುವ ದೇಹದಲ್ಲಿ ಪಕ್ಷಿಯಂತೆ ಜೀವವು ನೆಲೆಸಿರುವಾಗ ಮತ್ತು ಈ ಪ್ರಿಯಸಂವಾಸವು ಅನಿತ್ಯವಾಗಿರುವಾಗ ಹೇಗೆ ತಾನೇ ನಿದ್ರಿಸುತ್ತೀಯೆ?

12309007a ಅಪ್ರಮತ್ತೇಷು ಜಾಗ್ರತ್ಸು ನಿತ್ಯಯುಕ್ತೇಷು ಶತ್ರುಷು|

12309007c ಅಂತರಂ ಲಿಪ್ಸಮಾನೇಷು ಬಾಲಸ್ತ್ವಂ ನಾವಬುಧ್ಯಸೇ||

ಅಪ್ರಮತ್ತರಾಗಿ ಎಚ್ಚೆತ್ತು ನಿತ್ಯವೂ ನಿನ್ನನ್ನು ಕಾಡುವ ಶತ್ರುಗಳು ಯಾರೆನ್ನುವುದನ್ನು ಬಾಲಕನಾದ ನಿನಗಿನ್ನೂ ತಿಳಿದಿಲ್ಲ.

12309008a ಗಣ್ಯಮಾನೇಷು ವರ್ಷೇಷು ಕ್ಷೀಯಮಾಣೇ ತಥಾಯುಷಿ|

12309008c ಜೀವಿತೇ ಶಿಷ್ಯಮಾಣೇ ಚ ಕಿಮುತ್ಥಾಯ ನ ಧಾವಸಿ||

ವರ್ಷಗಳು ಕಳೆಯುತ್ತಿರುವಾಗ ಮತ್ತು ಆಯುಷ್ಯವೂ ಕ್ಷೀಣಿಸುತ್ತಿರುವಾಗ ಹಾಗೂ ಜೀವಿತವು ಸ್ವಲ್ಪಕಾಲ ಮಾತ್ರವೇ ಉಳಿದುಕೊಂಡಿರುವಾಗ ನೀನು ಏಕೆ ಎದ್ದು ಓಡುತ್ತಿಲ್ಲ?

12309009a ಐಹಲೌಕಿಕಮೀಹಂತೇ ಮಾಂಸಶೋಣಿತವರ್ಧನಮ್|

12309009c ಪಾರಲೌಕಿಕಕಾರ್ಯೇಷು ಪ್ರಸುಪ್ತಾ ಭೃಶನಾಸ್ತಿಕಾಃ||

ಅತ್ಯಂತ ನಾಸ್ತಿಕರು ಈ ಲೋಕದಲ್ಲಿ ರಕ್ತ-ಮಾಂಸಗಳನ್ನು ವರ್ಧಿಸಲು ಕಾರ್ಯಗತರಾಗುತ್ತಾರೆ. ಪರಲೌಕಿಕ ಕಾರ್ಯಗಳು ಬಂದಾಗ ನಿದ್ದೆಮಾಡುತ್ತಾರೆ.

12309010a ಧರ್ಮಾಯ ಯೇಽಭ್ಯಸೂಯಂತಿ ಬುದ್ಧಿಮೋಹಾನ್ವಿತಾ ನರಾಃ|

12309010c ಅಪಥಾ ಗಚ್ಚತಾಂ ತೇಷಾಮನುಯಾತಾಪಿ ಪೀಡ್ಯತೇ||

ಧರ್ಮದಲ್ಲಿ ದೋಷವನ್ನೆಣಿಸುವ ಮತ್ತು ಕುತ್ಸಿತ ಮಾರ್ಗದಲ್ಲಿ ಹೋಗುವ ಬುದ್ಧಿಮೋಹಾನ್ವಿತ ನರರನ್ನು ಹಿಂಬಾಲಿಸುವವರೂ ಪೀಡೆಗೊಳಗಾಗುತ್ತಾರೆ.

12309011a ಯೇ ತು ತುಷ್ಟಾಃ ಸುನಿಯತಾಃ ಸತ್ಯಾಗಮಪರಾಯಣಾಃ|

12309011c ಧರ್ಮ್ಯಂ ಪಂಥಾನಮಾರೂಢಾಸ್ತಾನುಪಾಸ್ಸ್ವ ಚ ಪೃಚ್ಚ ಚ||

ತುಷ್ಟರೂ, ಸುನಿಯತರೂ, ಸತ್ಯಾಗಮಪರಾಯಣರು, ಧರ್ಮದ ಮಾರ್ಗವನ್ನು ಅನುಸರಿಸುವವರೂ ಆದವರನ್ನು ಉಪಾಸಿಸು ಮತ್ತು ಅವರನ್ನೇ ಪ್ರಶ್ನಿಸು.

12309012a ಉಪಧಾರ್ಯ ಮತಂ ತೇಷಾಂ ವೃದ್ಧಾನಾಂ ಧರ್ಮದರ್ಶಿನಾಮ್|

12309012c ನಿಯಚ್ಚ ಪರಯಾ ಬುದ್ಧ್ಯಾ ಚಿತ್ತಮುತ್ಪಥಗಾಮಿ ವೈ||

ವೃದ್ಧರೂ ಧರ್ಮದರ್ಶಿಗಳೂ ಆದ ಅವರ ಮತವನ್ನು ಮನನಮಾಡಿಕೊಂಡು ಶ್ರೇಷ್ಠ ಬುದ್ಧಿಯಿಂದ ಮನಸ್ಸನ್ನು ನಿಯಂತ್ರಿಸು. ಮನಸ್ಸು ಯಾವಾಗಲೂ ತಪ್ಪು ದಾರಿಯಲ್ಲಿಯೇ ಹೋಗುತ್ತಿರುತ್ತದೆಯಲ್ಲವೇ?

12309013a ಅದ್ಯಕಾಲಿಕಯಾ ಬುದ್ಧ್ಯಾ ದೂರೇ ಶ್ವ ಇತಿ ನಿರ್ಭಯಾಃ|

12309013c ಸರ್ವಭಕ್ಷಾ ನ ಪಶ್ಯಂತಿ ಕರ್ಮಭೂಮಿಂ ವಿಚೇತಸಃ||

ವರ್ತಮಾನದಲ್ಲಿಯೇ ಇದ್ದುಕೊಂಡು ನಾಳೆಯು ಇನ್ನೂ ದೂರದಲ್ಲಿದೆ ಎಂದು ನಿರ್ಭಯರಾಗಿ ಸರ್ವವನ್ನೂ ಭೋಗಿಸುತ್ತಿರುವ ವಿಚೇತಸರು ಕರ್ಮಭೂಮಿಯನ್ನು ತಿಳಿದವರಾಗಿರುವುದಿಲ್ಲ.

12309014a ಧರ್ಮನಿಃಶ್ರೇಣಿಮಾಸ್ಥಾಯ ಕಿಂ ಚಿತ್ಕಿಂ ಚಿತ್ಸಮಾರುಹ|

12309014c ಕೋಶಕಾರವದಾತ್ಮಾನಂ ವೇಷ್ಟಯನ್ನಾವಬುಧ್ಯಸೇ||

ಧರ್ಮವನ್ನೇ ಏಣಿಯನ್ನಾಗಿಸಿಕೊಂಡು ಸ್ವಲ್ಪ ಸ್ವಲ್ಪವಾದರೂ ಮೇಲೆ ಏರುತ್ತಿರು. ರೇಷ್ಮೆಯ ಹುಳುವು ತನ್ನ ಸುತ್ತಲೂ ಆವರಣವನ್ನು ಕಲ್ಪಿಸಿಕೊಂಡು ತಾನೇ ಕಲ್ಪಿಸಿಕೊಂಡ ಗೂಡಿನಲ್ಲಿ ಬಂಧಿಯಾಗಿ ಉಳಿಯುವಂತೆ ನೀನು ನಿನ್ನ ಕರ್ಮಗಳಿಂದಲೇ ಕರ್ಮಫಲರೂಪದ ಆವರಣವನ್ನು ಕಲ್ಪಿಸಿಕೊಂಡು ನಿನಗೆ ಅರಿವಿಲ್ಲದೇಯೇ ಬಂಧಿಸಲ್ಪಟ್ಟಿರುವೆ.

12309015a ನಾಸ್ತಿಕಂ ಭಿನ್ನಮರ್ಯಾದಂ ಕೂಲಪಾತಮಿವಾಸ್ಥಿರಮ್[2]|

12309015c ವಾಮತಃ ಕುರು ವಿಸ್ರಬ್ಧೋ ನರಂ ವೇಣುಮಿವೋದ್ಧತಮ್||

ಮರ್ಯಾದೆಗಳಿಲ್ಲದೇ ಎಲ್ಲಕಡೆ ನುಗ್ಗುವ ಅಸ್ಥಿರನಾದ ನಾಸ್ತಿಕ ನರನನ್ನು ಕಿತ್ತುಹಾಕಿದ ಬಿದಿರುಮೆಳೆಯಂತೆ ಯಾವ ಭಯವೂ ಇಲ್ಲದೇ ತ್ಯಜಿಸು.

12309016a ಕಾಮಂ ಕ್ರೋಧಂ ಚ ಮೃತ್ಯುಂ ಚ ಪಂಚೇಂದ್ರಿಯಜಲಾಂ ನದೀಮ್|

12309016c ನಾವಂ ಧೃತಿಮಯೀಂ ಕೃತ್ವಾ ಜನ್ಮದುರ್ಗಾಣಿ ಸಂತರ||

ಕಾಮ, ಕ್ರೋಧ, ಮೃತ್ಯು ಮತ್ತು ಪಂಚೇಂದ್ರಿಯಗಳನ್ನೇ ನೀರಾಗುಳ್ಳ ನದಿಯನ್ನು ಧೃತಿಮಯೀ ನಾವೆಯನ್ನು ಕಟ್ಟಿಕೊಂಡು ದುರ್ಗಮವಾದ ಜನ್ಮಮೃತ್ಯುಸಂಕಟದಿಂದ ಪಾರಾಗು.

12309017a ಮೃತ್ಯುನಾಭ್ಯಾಹತೇ ಲೋಕೇ ಜರಯಾ ಪರಿಪೀಡಿತೇ|

12309017c ಅಮೋಘಾಸು ಪತಂತೀಷು ಧರ್ಮಯಾನೇನ ಸಂತರ||

ಮೃತ್ಯುವು ಅಪ್ಪಳಿಸುತ್ತಿರುವ, ಮುಪ್ಪಿನಿಂದ ಪೀಡಿತವಾದ ಮತ್ತು ಸುಮ್ಮನೇ ಕಾಲವು ಉರುಳುತ್ತಿರುವ ಈ ಲೋಕವನ್ನು ಧರ್ಮವೆಂಬ ನಾವೆಯಿಂದ ದಾಟು.

12309018a ತಿಷ್ಠಂತಂ ಚ ಶಯಾನಂ ಚ ಮೃತ್ಯುರನ್ವೇಷತೇ ಯದಾ|

12309018c ನಿರ್ವೃತಿಂ ಲಭಸೇ ಕಸ್ಮಾದಕಸ್ಮಾನ್ಮೃತ್ಯುನಾಶಿತಃ||

ನಿಂತವನನ್ನೂ, ಮಲಗಿದವನನ್ನೂ ಮೃತ್ಯುವು ಹಿಂಬಾಲಿಸುತ್ತಿರುವಾಗ ಮತ್ತು ಅಕಸ್ಮಾತ್ತಾಗಿ ನೀನೂ ಮೃತ್ಯುವಿನಿಂದ ನಾಶಹೊಂದುತ್ತಿರುವಾಗ ಅದರಿಂದ ಪಾರಾಗದೇ ನೀನು ಹೇಗಿರುವೆ?

12309019a ಸಂಚಿನ್ವಾನಕಮೇವೈನಂ ಕಾಮಾನಾಮವಿತೃಪ್ತಕಮ್|

12309019c ವೃಕೀವೋರಣಮಾಸಾದ್ಯ ಮೃತ್ಯುರಾದಾಯ ಗಚ್ಚತಿ||

ಯಾವಾಗಲೂ ಭೋಗಸಾಮಗ್ರಿಗಳನ್ನು ಸಂಗ್ರಹಿಸುತ್ತಿರುವ ಮತ್ತು ಕಾಮನೆಗಳಿಂದ ತೃಪ್ತಿಯನ್ನೇ ಹೊಂದದಿರುವ ಮನುಷ್ಯನನ್ನು ಹೆಣ್ಣು ತೋಳವು ಕುರಿಮರಿಯನ್ನು ಕಚ್ಚಿಕೊಂಡು ಹೋಗುವಂತೆ ಮೃತ್ಯುವು ಕಚ್ಚಿಕೊಂಡು ಹೋಗುತ್ತದೆ.

12309020a ಕ್ರಮಶಃ ಸಂಚಿತಶಿಖೋ ಧರ್ಮಬುದ್ಧಿಮಯೋ ಮಹಾನ್|

12309020c ಅಂಧಕಾರೇ ಪ್ರವೇಷ್ಟವ್ಯೇ ದೀಪೋ ಯತ್ನೇನ ಧಾರ್ಯತಾಮ್||

ಕ್ರಮೇಣವಾಗಿ ಹತ್ತಿ ಉರಿಯುವ ಧರ್ಮಬುದ್ಧಿಮಯ ದೀಪವನ್ನು ಪ್ರಯತ್ನಪೂರ್ವಕವಾಗಿ ಹಿಡಿದುಕೊಂಡು ಈ ಮಹಾ ಅಂಧಕಾರವನ್ನು ಪ್ರವೇಶಿಸಬೇಕು.

12309021a ಸಂಪತನ್ದೇಹಜಾಲಾನಿ ಕದಾ ಚಿದಿಹ ಮಾನುಷೇ|

12309021c ಬ್ರಾಹ್ಮಣ್ಯಂ ಲಭತೇ ಜಂತುಸ್ತತ್ಪುತ್ರ ಪರಿಪಾಲಯ||

ಪುತ್ರ! ಅನೇಕ ದೇಹಜಾಲಗಳಲ್ಲಿ ಬಿದ್ದು ಯಾವುದೋ ಒಂದು ಸಮಯದಲ್ಲಿ ಈ ಮನುಷ್ಯದೇಹದಲ್ಲಿ ಜೀವವು ಹುಟ್ಟುತ್ತದೆ. ಯಾವಾಗಲೋ ಒಮ್ಮೆ ಬ್ರಾಹ್ಮಣ್ಯತ್ವವು ದೊರೆಯುತ್ತದೆ. ಅದನ್ನು ಪರಿಪಾಲಿಸು.

12309022a ಬ್ರಾಹ್ಮಣಸ್ಯ ಹಿ ದೇಹೋಽಯಂ ನ ಕಾಮಾರ್ಥಾಯ ಜಾಯತೇ|

12309022c ಇಹ ಕ್ಲೇಶಾಯ ತಪಸೇ ಪ್ರೇತ್ಯ ತ್ವನುಪಮಂ ಸುಖಮ್||

ಬ್ರಾಹ್ಮಣನ ಈ ದೇಹವು ಕಾಮಾರ್ಥಗಳ ಉಪಭೋಗಕ್ಕಾಗಿ ಹುಟ್ಟಿಲ್ಲ. ಇಹದಲ್ಲಿ ತಪಸ್ಸಿನ ಕ್ಲೇಶಕ್ಕಾಗಿ ಮತ್ತು ಪರದಲ್ಲಿ ಅನುಪಮ ಸುಖಕ್ಕಾಗಿ ಈ ಬ್ರಾಹ್ಮಣ ದೇಹವು ಲಭಿಸಿದೆ.

12309023a ಬ್ರಾಹ್ಮಣ್ಯಂ ಬಹುಭಿರವಾಪ್ಯತೇ ತಪೋಭಿಸ್

ತಲ್ಲಬ್ಧ್ವಾ ನ ಪರಿಪಣೇನ ಹೇಡಿತವ್ಯಮ್[3]|

12309023c ಸ್ವಾಧ್ಯಾಯೇ ತಪಸಿ ದಮೇ ಚ ನಿತ್ಯಯುಕ್ತಃ

ಕ್ಷೇಮಾರ್ಥೀ ಕುಶಲಪರಃ ಸದಾ ಯತಸ್ವ||

ಅನೇಕ ತಪಸ್ಸುಗಳಿಂದ ಈ ಬ್ರಾಹ್ಮಣ್ಯತ್ವವು ಲಭಿಸುತ್ತದೆ. ಅದನ್ನು ಪಡೆದುಕೊಂಡು ಕಾಮಾಸಕ್ತಿಯಲ್ಲಿಯೇ ಮುಳುಗಿರಬಾರದು. ಸ್ವಾಧ್ಯಾಯ, ತಪಸ್ಸು, ದಮಗಳಲ್ಲಿ ನಿತ್ಯವೂ ಯುಕ್ತನಾಗಿದ್ದುಕೊಂಡು ಕ್ಷೇಮಕ್ಕಾಗಿ ಸದಾ ಕುಶಲಪರನಾಗಿ ಪ್ರಯತ್ನಿಸುತ್ತಿರು.

12309024a ಅವ್ಯಕ್ತಪ್ರಕೃತಿರಯಂ ಕಲಾಶರೀರಃ

ಸೂಕ್ಷ್ಮಾತ್ಮಾ ಕ್ಷಣತ್ರುಟಿಶೋ ನಿಮೇಷರೋಮಾ|

12309024c ಋತ್ವಾಸ್ಯಃ ಸಮಬಲಶುಕ್ಲಕೃಷ್ಣನೇತ್ರೋ

ಮಾಂಸಾಂಗೋ ದ್ರವತಿ ವಯೋಹಯೋ ನರಾಣಾಮ್||

ಓಡುತ್ತಿರುವ ಮನುಷ್ಯನ ಆಯುಸ್ಸೆಂಬ ಈ ಕುದುರೆಯು ಅವ್ಯಕ್ತ ಪ್ರಕೃತಿ. ಕಲೆ[4]ಯೇ ಇದರ ಶರೀರ. ಆತ್ಮವು ಅತ್ಯಂತ ಸೂಕ್ಷ್ಮ. ಕ್ಷಣ[5], ತ್ರುಟಿ ಮತ್ತು ನಿಮಿಷಗಳೇ ಅದರ ರೋಮಗಳು. ಋತುಗಳೇ ಅದರ ಮುಖ. ಸಮಾನ ಬಲವುಳ್ಳ ಕೃಷ್ಣ ಮತ್ತು ಶುಕ್ಲ ಪಕ್ಷಗಳೇ ಅದರ ನೇತ್ರಗಳು. ಮಾಸಗಳೇ ಅದರ ಅವಯವಗಳು.

12309025a ತಂ ದೃಷ್ಟ್ವಾ ಪ್ರಸೃತಮಜಸ್ರಮುಗ್ರವೇಗಂ

ಗಚ್ಚಂತಂ ಸತತಮಿಹಾವ್ಯಪೇಕ್ಷಮಾಣಮ್|

12309025c ಚಕ್ಷುಸ್ತೇ ಯದಿ ನ ಪರಪ್ರಣೇತೃನೇಯಂ

ಧರ್ಮೇ ತೇ ಭವತು ಮನಃ ಪರಂ ನಿಶಮ್ಯ||

ಭಯಂಕರ ವೇಗದಿಂದ ಯಾವುದನ್ನೂ ಅಪೇಕ್ಷಿಸದೇ ಸತತವಾಗಿ ಓಡುತ್ತಿರುವ ಆ ಕುದುರೆಯನ್ನು ನೋಡಿ ನಿನ್ನ ಜ್ಞಾನದೃಷ್ಟಿಯು ಬೇರೆ ಕಡೆ ಚಲಿಸದಂತೆ ವಿಚಲಿತವಾಗಿರಲಿ. ನಿನ್ನ ಮನಸ್ಸು ಯಾವಾಗಲೂ ಪರಮ ಧರ್ಮದಲ್ಲಿಯೇ ಆಸಕ್ತವಾಗಿರಲಿ.

12309026a ಯೇಽಮೀ ತು ಪ್ರಚಲಿತಧರ್ಮಕಾಮವೃತ್ತಾಃ

ಕ್ರೋಶಂತಃ ಸತತಮನಿಷ್ಟಸಂಪ್ರಯೋಗಾಃ|

12309026c ಕ್ಲಿಶ್ಯಂತೇ ಪರಿಗತವೇದನಾಶರೀರಾ

ಬಹ್ವೀಭಿಃ ಸುಭೃಶಮಧರ್ಮವಾಸನಾಭಿಃ||

ಈ ಲೋಕದಲ್ಲಿ ಧರ್ಮದಿಂದ ವಿಚಲಿತರಾಗಿ ಸ್ಚೇಚ್ಛಾಚಾರದಲಿ ಪ್ರವೃತ್ತರಾಗಿರುವ, ಇತರರನ್ನು ನಿಂದಿಸುವ ಮತ್ತು ಯಾವಾಗಲೂ ಅನಿಷ್ಟಕರ ಅಶುಭಕರ್ಮಗಳಲ್ಲಿಯೇ ನಿರತರಾಗಿರುವ ಮನುಷ್ಯರು ಮರಣಾನಂತರ ಯಮಲೋಕದಲ್ಲಿ ಯಾತನಾಮಯ ಶರೀರವನ್ನು ಹೊಂದಿ ತಮ್ಮ ಅನೇಕ ಅಧರ್ಮ-ಅಶುಭ ಕರ್ಮಫಲಗಳಿಂದಾಗಿ ನಾನಾವಿಧದ ಕ್ಲೇಶಗಳನ್ನು ಅನುಭವಿಸುತ್ತಾರೆ.

12309027a ರಾಜಾ ಧರ್ಮಪರಃ ಸದಾ ಶುಭಗೋಪ್ತಾ[6]

ಸಮೀಕ್ಷ್ಯ ಸುಕೃತಿನಾಂ ದಧಾತಿ ಲೋಕಾನ್|

12309027c ಬಹುವಿಧಮಪಿ ಚರತಃ ಪ್ರದಿಶತಿ

ಸುಖಮನುಪಗತಂ ನಿರವದ್ಯಮ್||

ಧರ್ಮಪರನೂ ಸದಾ ಶುಭಫಲಗಳನ್ನು ರಕ್ಷಿಸುವವನೂ ಆದ ಯಮರಾಜನು ಸುಕೃತಗಳನ್ನು ನೋಡಿ ಲೋಕಗಳನ್ನು ನೀಡುತ್ತಾನೆ. ಬಹುವಿಧದ ಶುಭಕರ್ಮಗಳನ್ನು ಮಾಡಿದವರಿಗೆ ಸಾವಿರಾರು ಜನ್ಮಗಳಲ್ಲಿಯೂ ದೊರೆಯದಿರುವ ಉತ್ಕೃಷ್ಟ ಸುಖವನ್ನು ನೀಡುತ್ತಾನೆ.

12309028a ಶ್ವಾನೋ ಭೀಷಣಾಯೋಮುಖಾನಿ ವಯಾಂಸಿ

ವಡಗೃಧ್ರಕುಲಪಕ್ಷಿಣಾಂ ಚ ಸಂಘಾಃ|

12309028c ನರಾಂ ಕದನೇ ರುಧಿರಪಾ ಗುರುವಚನ

ನುದಮುಪರತಂ ವಿಶಸಂತಿ||

ಗುರುವಚನವನ್ನು ನಿರಾದರಿಸುವವನನ್ನು ಭಯಂಕರ ಶರೀರದ ನಾಯಿಗಳೂ, ಲೋಹಮಯ ಮುಖಗಳುಳ್ಳ ಪಕ್ಷಿಗಳೂ, ಕಾಗೆ-ಹದ್ದು ಗಳಂಥಹ ಪಕ್ಷಿಸಮೂಹಗಳೂ ಕುಕ್ಕಿ ಕುಕ್ಕಿ ತಿನ್ನುತ್ತವೆ.

12309029a ಮರ್ಯಾದಾ ನಿಯತಾಃ ಸ್ವಯಂಭುವಾ ಯ ಇಹೇಮಾಃ

ಪ್ರಭಿನತ್ತಿ ದಶಗುಣಾ ಮನೋನುಗತ್ವಾತ್|

12309029c ನಿವಸತಿ ಭೃಶಮಸುಖಂ ಪಿತೃವಿಷಯ

ವಿಪಿನಮವಗಾಹ್ಯ ಸ ಪಾಪಃ||

ಕಾಮಾಭಿಭೂತ ಮನಸ್ಸನ್ನು ಅನುಸರಿಸಿ ಸ್ವಯಂಭುವು ವಿಧಿಸಿರುವ ಹತ್ತು ಧರ್ಮ[7]ಗಳ ಮರ್ಯಾದೆಯನ್ನು ಉಲ್ಲಂಘಿಸುವ ಮನುಷ್ಯನು ಮರಣಾನಂತರ ಯಮಲೋಕದ ಅಸಿತಪತ್ರವನಕ್ಕೆ ಹೋಗಿ ಅಲ್ಲಿ ಅತಿಕಷ್ಟವನ್ನು ಅನುಭವಿಸುತ್ತಾನೆ.

12309030a ಯೋ ಲುಬ್ಧಃ ಸುಭೃಶಂ ಪ್ರಿಯಾನೃತಶ್ಚ ಮನುಷ್ಯಃ

ಸತತನಿಕೃತಿವಂಚನಾರತಿಃ ಸ್ಯಾತ್|

12309030c ಉಪನಿಧಿಭಿರಸುಖಕೃತ್ಸ ಪರಮನಿರಯಗೋ

ಭೃಶಮಸುಖಮನುಭವತಿ ದುಷ್ಕೃತಕರ್ಮಾ||

ಅತ್ಯಂತಲೋಭಿಯೂ, ಸುಳ್ಳನ್ನಾಡುವುದರಲ್ಲಿಯೇ ಹೆಚ್ಚು ಅಭಿರುಚಿಯುಳ್ಳ, ಸತತವೂ ಕಪಟ-ಮೋಸ-ವಂಚನೆಗಳಲ್ಲಿಯೇ ನಿರತನಾಗಿರುವ, ರಕ್ಷಣೆಗಾಗಿಟ್ಟ ಧನವನ್ನು ದುರುಪಯೋಗಮಾಡಿಕೊಂಡು ಅದನ್ನಿಟ್ಟವರಿಗೆ ದುಃಖವನ್ನುಂಟುಮಾಡುವ ದುಷ್ಕರ್ಮಿ ಪಾಪಾತ್ಮ ಮನುಷ್ಯನು ಮರಣಾನಂತರ ಘೋರನರಕದಲ್ಲಿ ಅತ್ಯಂತ ದುಃಖವನ್ನು ಅನುಭವಿಸುತ್ತಾನೆ.

12309031a ಉಷ್ಣಾಂ ವೈತರಣೀಂ ಮಹಾನದೀಮ್

ಅವಗಾಢೋಽಸಿಪತ್ರವನಭಿನ್ನಗಾತ್ರಃ|

12309031c ಪರಶುವನಶಯೋ ನಿಪತಿತೋ

ವಸತಿ ಚ ಮಹಾನಿರಯೇ ಭೃಶಾರ್ತಃ||

ಅಂಥವನು ಕುದಿಯುತ್ತಿರುವ ಮಹಾನದೀ ವೈತರಣಿಯಲ್ಲಿ ಮುಳುಗುತ್ತಾನೆ. ಕತ್ತಿಗಳೇ ಎಲೆಗಳಾಗಿರುವ ವೃಕ್ಷಗಳ ವನದಲ್ಲಿ ಅವನ ಶರೀರವು ಛಿನ್ನ-ಛಿನ್ನವಾಗುತ್ತದೆ. ಕೊಡಲಿಗಳ ವನದಲ್ಲಿ ಮಲಗಬೇಕಾಗುತ್ತದೆ. ಹೀಗೆ ಅವನು ನಾನಾವಿಧದ ಪೀಡೆಗಳಿಗೊಳಗಾಗುತ್ತಾ ಘೋರ ನರಕದಲ್ಲಿ ವಾಸಿಸುತ್ತಾನೆ.

12309032a ಮಹಾಪದಾನಿ ಕತ್ಥಸೇ ನ ಚಾಪ್ಯವೇಕ್ಷಸೇ ಪರಮ್|

12309032c ಚಿರಸ್ಯ ಮೃತ್ಯುಕಾರಿಕಾಮನಾಗತಾಂ ನ ಬುಧ್ಯಸೇ||

ಮಹಾ ಲೋಕಗಳ ಕುರಿತು ಹೇಳುತ್ತಿರುವೆಯೇ ವಿನಃ ಅವಕ್ಕೂ ಶ್ರೇಷ್ಠವಾಗಿರುವ ಗತಿಯನ್ನು ನೀನು ಕಾಣುತ್ತಿಲ್ಲ. ಇನ್ನೂ ಒದಗಿರದ ಮೃತ್ಯುವಿಗೆ ಕಾರಣವಾದ, ಮುಂದೆ ಬರಲಿರುವ ಮುಪ್ಪಿನ ಕುರಿತು ನಿನಗೆ ತಿಳಿದಿಲ್ಲ.

12309033a ಪ್ರಯಾಸ್ಯತಾಂ ಕಿಮಾಸ್ಯತೇ ಸಮುತ್ಥಿತಂ ಮಹದ್ಭಯಮ್|

12309033c ಅತಿಪ್ರಮಾಥಿ ದಾರುಣಂ ಸುಖಸ್ಯ ಸಂವಿಧೀಯತಾಮ್||

ಸುಮ್ಮನೇ ಏಕೆ ಕುಳಿತಿದ್ದೀಯೆ? ಹೃದಯವನ್ನೇ ಕದಡಿಬಿಡುವ ದಾರುಣ ಮಹಾ ಭಯವು ಉತ್ಪನ್ನವಾಗಿದೆ. ಶೀಘ್ರವಾಗಿ ಮುಂದೆ ಹೋಗು. ಪರಮಾನಂದಪ್ರಾಪ್ತಿಗೆ ಪ್ರಯತ್ನಿಸು.

12309034a ಪುರಾ ಮೃತಃ ಪ್ರಣೀಯಸೇ ಯಮಸ್ಯ ಮೃತ್ಯುಶಾಸನಾತ್[8]|

12309034c ತದಂತಿಕಾಯ ದಾರುಣೈಃ ಪ್ರಯತ್ನಮಾರ್ಜವೇ ಕುರು||

ಯಮನ ಮೃತ್ಯುಶಾಸನದಂತೆ ಯಮದೂತರು ಬಂದು ನಿನ್ನನ್ನು ಆ ದಾರುಣ ಅಂತಕನ ಬಳಿ ಕರೆದೊಯ್ಯುವ ಮೊದಲೇ ಆರ್ಜವಕ್ಕಾಗಿ ಪ್ರಯತ್ನಿಸು.

12309035a ಪುರಾ ಸಮೂಲಬಾಂಧವಂ ಪ್ರಭುರ್ಹರತ್ಯದುಃಖವಿತ್|

12309035c ತವೇಹ ಜೀವಿತಂ ಯಮೋ ನ ಚಾಸ್ತಿ ತಸ್ಯ ವಾರಕಃ||

ಪ್ರಭು ಯಮನು ಯಾರ ದುಃಖಗಳನ್ನೂ ತಿಳಿದಿರುವುದಿಲ್ಲ. ಅವನು ಶರೀರಸಹಿತವಾಗಿ ನಿನ್ನ ಜೀವನವನ್ನು ಇಲ್ಲಿಂದಲೇ ಅಪಹರಿಸಿಕೊಂಡು ಹೋಗುತ್ತಾನೆ. ಅವನನ್ನು ತಡೆಯುವವರು ಯಾರೂ ಇಲ್ಲ.

12309036a ಪುರಾ ವಿವಾತಿ ಮಾರುತೋ ಯಮಸ್ಯ ಯಃ ಪುರಃಸರಃ|

12309036c ಪುರೈಕ ಏವ ನೀಯಸೇ ಕುರುಷ್ವ ಸಾಂಪರಾಯಿಕಮ್||

ಯಮನ ಮುಂದೆ ಮುಂದೆ ಮಾರುತನು ಹೋಗಿ ನಿನ್ನನ್ನು ಕೊಂಡೊಯ್ಯುವ ಮೊದಲೇ ಮರಣಾನಂತರದ ಪರಮ ಸುಖಕ್ಕೆ ಸಾಧಕವಾದ ಧರ್ಮಾಚರಣೆಗಳನ್ನು ಮಾಡು.

12309037a ಪುರಾ ಸಹಿಕ್ಕ ಏವ ತೇ ಪ್ರವಾತಿ ಮಾರುತೋಽಂತಕಃ|

12309037c ಪುರಾ ಚ ವಿಭ್ರಮಂತಿ ತೇ ದಿಶೋ ಮಹಾಭಯಾಗಮೇ||

ಹಿಂದಿನ ಜನ್ಮದಲ್ಲಿಯೂ ಆ ಯಮನೇ ನಿನ್ನ ಪ್ರಾಣಗಳನ್ನು ಒಯ್ದಿದ್ದನು. ಈಗಲೂ ವಾಯುರೂಪನಾದ ಆ ಅಂತಕನೇ ನಿನ್ನ ಮುಂದೆ ಬರುತ್ತಾನೆ. ಆಗ ನಿನಗೆ ಮಹಾಭಯವುಂಟಾಗುತ್ತದೆ. ದಿಕ್ಕುಗಳೂ ತಿರುಗುತ್ತಿರುವಂತೆ ಕಾಣುತ್ತದೆ. ಹಾಗಾಗುವ ಮೊದಲೇ ಧರ್ಮಾಚರಣೆ ಮಾಡು.

12309038a ಸ್ಮೃತಿಶ್ಚ ಸಂನಿರುಧ್ಯತೇ ಪುರಾ ತವೇಹ ಪುತ್ರಕ|

12309038c ಸಮಾಕುಲಸ್ಯ ಗಚ್ಚತಃ ಸಮಾಧಿಮುತ್ತಮಂ ಕುರು||

ಪುತ್ರಕ! ನೀನು ಈ ಶರೀರವನ್ನು ಬಿಟ್ಟುಹೋಗುವಾಗ ವ್ಯಾಕುಲಿತನಾಗುವ ನಿನ್ನ ಸ್ಮೃತಿಯೂ ನಷ್ಟವಾಗಿಹೋಗುತ್ತದೆ. ಹಾಗಾಗುವುದಕ್ಕೆ ಮೊದಲೇ ನೀನು ಉತ್ತಮ ಸಮಾಧಿಯೋಗವನ್ನು ಸಾಧಿಸು.

12309039a ಕೃತಾಕೃತೇ ಶುಭಾಶುಭೇ ಪ್ರಮಾದಕರ್ಮವಿಪ್ಲುತೇ|

12309039c ಸ್ಮರನ್ ಪುರಾ ನ ತಪ್ಯಸೇ ನಿಧತ್ಸ್ವ ಕೇವಲಂ ನಿಧಿಮ್||

ಹಿಂದೆ ನೀನು ಅಜಾಗರೂಕತೆಯಿಂದ ಪೀಡಾರೂಪದ ಕರ್ಮಗಳನ್ನು ಮಾಡಿ, ಈ ಜನ್ಮದಲ್ಲಿ ಆ ಶುಭಾಶುಭಕರ್ಮಗಳ ಫಲವನ್ನು ಅನುಭವಿಸಬೇಕಾಗುತ್ತದೆ. ಅದನ್ನು ಸ್ಮರಿಸಿ ಪಶ್ಚಾತ್ತಾಪ ಪಡುವುದರ ಮೊದಲೇ ಅಂತಹ ಕರ್ಮಗಳನ್ನು ಮಾಡಹೋಗದೇ ಜ್ಞಾನಭಂಡಾರವನ್ನೇ ಸಂಗ್ರಹಿಸು. ಇದರಿಂದ ನೀನು ಪರಿತಪಿಸಬೇಕಾಗುವುದಿಲ್ಲ.

12309040a ಪುರಾ ಜರಾ ಕಲೇವರಂ ವಿಜರ್ಜರೀಕರೋತಿ ತೇ|

12309040c ಬಲಾಂಗರೂಪಹಾರಿಣೀ ನಿಧತ್ಸ್ವ ಕೇವಲಂ ನಿಧಿಮ್||

ನಿನ್ನ ಶರೀರವನ್ನು ಜೀರ್ಣಗೊಳಿಸುವುದರ ಮೊದಲೇ ಮತ್ತು ಅಂಗಾಗಗಳ ಬಲ-ರೂಪಗಳು ಅಪಹರಿಸಲ್ಪಡುವ ಮೊದಲೇ ನೀನು ಜ್ಞಾನಭಂಡಾರವನ್ನು ತುಂಬಿಸಿಕೋ.

12309041a ಪುರಾ ಶರೀರಮಂತಕೋ ಭಿನತ್ತಿ ರೋಗಸಾಯಕೈಃ|

12309041c ಪ್ರಸಹ್ಯ ಜೀವಿತಕ್ಷಯೇ ತಪೋ ಮಹತ್ ಸಮಾಚರ||

ರೋಗವನ್ನೇ ಸಾರಥಿಯನ್ನಾಗುಳ್ಳ ಅಂತಕನು ಬಲಾತ್ಕಾರವಾಗಿ ಶರೀರವನ್ನು ನಾಶಗೊಳಿಸುವುದರ ಮೊದಲೇ ಮತ್ತು ಅದರಿಂದ ನಿನ್ನ ಜೀವಿತವು ವಿನಾಶಹೊಂದುವ ಮೊದಲೇ ಆತ್ಮೋದ್ಧಾರಕವಾದ ಮಹಾತಪಸ್ಸನ್ನು ಆಚರಿಸು.

12309042a ಪುರಾ ವೃಕಾ ಭಯಂಕರಾ ಮನುಷ್ಯದೇಹಗೋಚರಾಃ|

12309042c ಅಭಿದ್ರವಂತಿ ಸರ್ವತೋ ಯತಸ್ವ ಪುಣ್ಯಶೀಲನೇ||

ಮನುಷ್ಯನ ದೇಹದಲ್ಲಿ ಗೋಚರವಾಗುವ ಕಾಮ-ಕ್ರೋಧಾದಿ ಭಯಂಕರ ತೋಳಗಳು ಎಲ್ಲ ಕಡೆಗಳಿಂದಲೂ ಓಡಿ ಬಂದು ಆಕ್ರಮಣ ಮಾಡುವುದರ ಮೊದಲೇ ಪುಣ್ಯಶೀಲನಾಗಲು ಪ್ರಯತ್ನಿಸು.

12309043a ಪುರಾಂಧಕಾರಮೇಕಕೋಽನುಪಶ್ಯಸಿ ತ್ವರಸ್ವ ವೈ|

12309043c ಪುರಾ ಹಿರಣ್ಮಯಾನ್ನಗಾನ್ನಿರೀಕ್ಷಸೇಽದ್ರಿಮೂರ್ಧನಿ||

ಮರಣಕಾಲದಲ್ಲಿ ಘೋರ ಅಂಧಕಾರವನ್ನು ಮತ್ತು ಪರ್ವತ ಶಿಖರದಲ್ಲಿರುವ ಸುವರ್ಣಮಯ ವೃಕ್ಷಗಳನ್ನು ಕಾಣುವ ಮೊದಲೇ ನೀನು ಶೀಘ್ರವಾಗಿ ಅತ್ಮೋದ್ಧಾರಕವಾದ ತಪಸ್ಸನ್ನು ಆಚರಿಸು.

12309044a ಪುರಾ ಕುಸಂಗತಾನಿ ತೇ ಸುಹೃನ್ಮುಖಾಶ್ಚ ಶತ್ರವಃ|

12309044c ವಿಚಾಲಯಂತಿ ದರ್ಶನಾದ್ ಘಟಸ್ವ ಪುತ್ರ ಯತ್ಪರಮ್||

ದುಷ್ಟರ ಸಹವಾಸವು ಕರ್ತವ್ಯದಿಂದ ಚ್ಯುತನನ್ನಾಗಿ ಮಾಡುವುದರ ಮೊದಲೇ ಮತ್ತು ಸ್ನೇಹಿತರ ಮುಖವಾಡವನ್ನು ಧರಿಸಿದ ಶತ್ರುಗಳು ದರ್ಶನಮಾತ್ರದಿಂದಲೇ ನಿನ್ನನ್ನು ಕರ್ತವ್ಯಭ್ರಷ್ಟನನ್ನಾಗಿ ಮಾಡುವ ಮೊದಲೇ ನೀನು ಪರಮ ಪದವನ್ನು ಪಡೆಯಲು ಪ್ರಯತ್ನಿಸು.

12309045a ಧನಸ್ಯ ಯಸ್ಯ ರಾಜತೋ ಭಯಂ ನ ಚಾಸ್ತಿ ಚೌರತಃ|

12309045c ಮೃತಂ ಚ ಯನ್ನ ಮುಂಚತಿ ಸಮರ್ಜಯಸ್ವ ತದ್ಧನಮ್||

ಯಾವ ಧನಕ್ಕೆ ರಾಜನಿಂದಾಲೀ ಕಳ್ಳನಿಂದಾಗಲೀ ಭಯವಿಲ್ಲವೋ ಮತ್ತು ಯಾವ ಧನವು ನೀನು ಸತ್ತುಹೋದರೂ ನಿನ್ನನ್ನು ತ್ಯಜಿಸಿ ಹೋಗುವುದಿಲ್ಲವೋ ಅಂಥಹ ಧರ್ಮಧನವನ್ನು ಸಂಪಾದಿಸು.

12309046a ನ ತತ್ರ ಸಂವಿಭಜ್ಯತೇ ಸ್ವಕರ್ಮಭಿಃ ಪರಸ್ಪರಮ್|

12309046c ಯದೇವ ಯಸ್ಯ ಯೌತಕಂ ತದೇವ ತತ್ರ ಸೋಽಶ್ನುತೇ||

ಮಾವನು ಅಳಿಯನಿಗೆ ಕೊಟ್ಟ ಬಳುವಳಿಯನ್ನು ಬೇರೆ ಯಾರೂ ಹಂಚಿಕೊಳ್ಳಲು ಸಾಧ್ಯವಾಗದಂತೆ ತಾನು ಇಲ್ಲಿ ಕರ್ಮಗಳನ್ನು ಮಾಡಿ ಸಂಪಾದಿಸಿದ ಫಲವನ್ನು ಪರಲೋಕದಲ್ಲಿ ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಕರ್ಮಗಳ ಫಲವನ್ನು ಅವನೊಬ್ಬನೇ ಪರಲೋಕದಲ್ಲಿ ಅನುಭವಿಸುತ್ತಾನೆ.

12309047a ಪರತ್ರ ಯೇನ ಜೀವ್ಯತೇ ತದೇವ ಪುತ್ರ ದೀಯತಾಮ್|

12309047c ಧನಂ ಯದಕ್ಷಯಂ ಧ್ರುವಂ ಸಮರ್ಜಯಸ್ವ ತತ್ ಸ್ವಯಮ್||

ಪುತ್ರ! ಯಾವುದನ್ನು ದಾನಮಾಡಿದರೆ ಪರಲೋಕದಲ್ಲಿ ಸುಖವಾಗಿರಲು ಸಾಧ್ಯವಾಗುತ್ತದೆಯೋ ಅಂತಹ ಉತ್ತಮ ಪದಾರ್ಥಗಳನ್ನೇ ದಾನಮಾಡು. ಧರ್ಮರೂಪವಾದ ಯಾವ ಧನವು ಅವಿನಾಶಿಯೂ ಶಾಶ್ವತವೂ ಆಗಿರುವುದೋ ಅದನ್ನೇ ಸಂಪಾದಿಸು.

12309048a ನ ಯಾವದೇವ ಪಚ್ಯತೇ ಮಹಾಜನಸ್ಯ ಯಾವಕಮ್|

12309048c ಅಪಕ್ವ ಏವ ಯಾವಕೇ ಪುರಾ ಪ್ರಣೀಯಸೇ ತ್ವರ||

ಮಹಾಜನರಿಗೆ ಗಂಜಿಯನ್ನು ಬೇಯಿಸುತ್ತಿದ್ದರೆ ಅದು ಬೇಯುವುದರೊಳಗೇ ನೀನು ಮರಣಹೊಂದಿಬಿಡಬಹುದು. ಆದುದರಿಂದ ಅತಿ ಶೀಘ್ರವಾಗಿ ಧರ್ಮವನ್ನಾಚರಿಸು[9].

12309049a ನ ಮಾತೃಪಿತೃಬಾಂಧವಾ ನ ಸಂಸ್ತುತಃ ಪ್ರಿಯೋ ಜನಃ|

12309049c ಅನುವ್ರಜಂತಿ ಸಂಕಟೇ ವ್ರಜಂತಮೇಕಪಾತಿನಮ್||

ಏಕಾಕಿಯಾಗಿ ಪರಲೋಕಕ್ಕೆ ಹೋಗುವಾಗ ಅಂತಹ ಸಂಕಟಸಮಯದಲ್ಲಿಯೂ ತಾಯಿಯಾಗಲೀ, ತಂದೆಯಾಗಲೀ, ಬಾಂಧವರಾಗಲೀ, ಪರಿಚಿತ ಪ್ರಿಯ ಜನರಾಗಲೀ ಅವನನ್ನು ಅನುಸರಿಸಿ ಹೋಗುವುದಿಲ್ಲ.

12309050a ಯದೇವ ಕರ್ಮ ಕೇವಲಂ ಸ್ವಯಂ ಕೃತಂ ಶುಭಾಶುಭಮ್|

12309050c ತದೇವ ತಸ್ಯ ಯೌತಕಂ ಭವತ್ಯಮುತ್ರ ಗಚ್ಚತಃ||

ಪರಲೋಕಕ್ಕೆ ಹೋಗುವಾಗ ಕೇವಲ ಸ್ವಯಂ ಮಾಡಿದ ಶುಭಾಶುಭಕರ್ಮಗಗಳ ಫಲಗಳು ಮಾತ್ರ ಜೊತೆಯಲ್ಲಿರುತ್ತವೆ.

12309051a ಹಿರಣ್ಯರತ್ನಸಂಚಯಾಃ ಶುಭಾಶುಭೇನ ಸಂಚಿತಾಃ|

12309051c ನ ತಸ್ಯ ದೇಹಸಂಕ್ಷಯೇ ಭವಂತಿ ಕಾರ್ಯಸಾಧಕಾಃ||

ಶುಭಾಶುಭ ಕರ್ಮಗಳಿಂದ ಸಂಪಾದಿಸಿ ಕೂಡಿಟ್ಟ ಧನಕನಕವಸ್ತುವಾಹನಾದಿಗಳು ದೇಹಸಂಕ್ಷಯವಾದಾಗ ಅವನ ಕಾರ್ಯಸಾಧಕಗಳಾಗುವುದಿಲ್ಲ.

12309052a ಪರತ್ರಗಾಮಿಕಸ್ಯ ತೇ ಕೃತಾಕೃತಸ್ಯ ಕರ್ಮಣಃ|

12309052c ನ ಸಾಕ್ಷಿರಾತ್ಮನಾ ಸಮೋ ನೃಣಾಮಿಹಾಸ್ತಿ ಕಶ್ಚನ||

ಪರಲೋಕಯಾತ್ರೆಯನ್ನು ಮಾಡುವಾಗ ಅವನು ಮಾಡಿದ ಅಥವಾ ಮಾಡದಿದ್ದ ಕರ್ಮಗಳ ಸಾಕ್ಷಿಯು ಆತ್ಮನಲ್ಲದೇ ಬೇರೆ ಯಾರೂ ಇರುವುದಿಲ್ಲ.

12309053a ಮನುಷ್ಯದೇಹಶೂನ್ಯಕಂ ಭವತ್ಯಮುತ್ರ ಗಚ್ಚತಃ|

12309053c ಪ್ರಪಶ್ಯ ಬುದ್ಧಿಚಕ್ಷುಷಾ ಪ್ರದೃಶ್ಯತೇ ಹಿ ಸರ್ವತಃ||

ಪರಲೋಕಕ್ಕೆ ಹೋಗುವಾಗ ಮನುಷ್ಯದೇಹವು ಶೂನ್ಯಕವಾಗುತ್ತದೆ. ಜೀವವು ಸೂಕ್ಷ್ಮಶರೀರವನ್ನು ಪ್ರವೇಶಿಸಿ ಬುದ್ಧಿರೂಪವಾದ ಕಣ್ಣಿನ ಮೂಲಕ ಎಲ್ಲ ಕಡೆ ನೋಡುತ್ತದೆ.

12309054a ಇಹಾಗ್ನಿಸೂರ್ಯವಾಯವಃ ಶರೀರಮಾಶ್ರಿತಾಸ್ತ್ರಯಃ|

12309054c ತ ಏವ ತಸ್ಯ ಸಾಕ್ಷಿಣೋ ಭವಂತಿ ಧರ್ಮದರ್ಶಿನಃ||

ಈ ಲೋಕದಲ್ಲಿ ಅಗ್ನಿ, ಸೂರ್ಯ ಮತ್ತು ವಾಯು ಈ ಮೂವರು ಶರೀರದಲ್ಲಿ ವಾಸಿಸಿರುತ್ತಾರೆ. ಅವರೇ ಅವನ ಧರ್ಮಕರ್ಮಗಳಿಗೆ ಸಾಕ್ಷಿಗಳಾಗುತ್ತಾರೆ.

12309055a ಯಥಾನಿಶೇಷು ಸರ್ವತಃಸ್ಪೃಶತ್ಸು ಸರ್ವದಾರಿಷು[10]|

12309055c ಪ್ರಕಾಶಗೂಢವೃತ್ತಿಷು ಸ್ವಧರ್ಮಮೇವ ಪಾಲಯ||

ರಾತ್ರಿಯು ಎಲ್ಲ  ಪದಾರ್ಥಗಳನ್ನೂ ಮುಚ್ಚಿಬಿಡುತ್ತದೆ. ಎಲ್ಲಕಡೆ ಪಸರಿಸಿ ಎಲ್ಲವನ್ನೂ ಸ್ಪರ್ಶಿಸುತ್ತದೆ. ನೀನು ಕತ್ತಲೆಯಲ್ಲಿ ಮತ್ತು ಹಗಲಿನಲ್ಲಿ ಕೂಡ ಸ್ವಧರ್ಮವನ್ನೇ ಪಾಲಿಸು.

12309056a ಅನೇಕಪಾರಿಪಂಥಿಕೇ ವಿರೂಪರೌದ್ರರಕ್ಷಿತೇ[11]|

12309056c ಸ್ವಮೇವ ಕರ್ಮ ರಕ್ಷ್ಯತಾಂ ಸ್ವಕರ್ಮ ತತ್ರ ಗಚ್ಚತಿ||

ಪರಲೋಕದ ಮಾರ್ಗದಲ್ಲಿ ಅನೇಕ ವಿರೂಪ ರೌದ್ರ ತಲೆಗಡುಕರಿರುತ್ತಾರೆ. ಸ್ವಕರ್ಮವು ಮಾತ್ರ ಅಲ್ಲಿ ರಕ್ಷಣೆಗೆ ಸಹಾಯಕವಾಗುತ್ತದೆ. ಆದುದರಿಂದ ಸ್ವಯಂ ನಿನ್ನ ಕರ್ಮಗಳನ್ನು ರಕ್ಷಿಸಿಕೊಳ್ಳಬೇಕು.

12309057a ನ ತತ್ರ ಸಂವಿಭಜ್ಯತೇ ಸ್ವಕರ್ಮಣಾ ಪರಸ್ಪರಮ್|

12309057c ಯಥಾಕೃತಂ ಸ್ವಕರ್ಮಜಂ ತದೇವ ಭುಜ್ಯತೇ ಫಲಮ್||

ಅಲ್ಲಿ ತನ್ನ ಕರ್ಮಗಳಲ್ಲಿ ಶುಭ-ಅಶುಭಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ತಾನು ಹೇಗೆ ಮಾಡಿದ್ದನೋ ಆ ಕರ್ಮಗಳ ಫಲವನ್ನು ತಾನೇ ಅನುಭವಿಸಬೇಕಾಗುತ್ತದೆ.

12309058a ಯಥಾಪ್ಸರೋಗಣಾಃ ಫಲಂ ಸುಖಂ ಮಹರ್ಷಿಭಿಃ ಸಹ|

12309058c ತಥಾಪ್ನುವಂತಿ ಕರ್ಮತೋ ವಿಮಾನಕಾಮಗಾಮಿನಃ||

ಹೇಗೆ ಅಪ್ಸರಗಣಗಳು ಮಹರ್ಷಿಗಳ ಜೊತೆಗೆ ಪುಣ್ಯಫಲಗಳ ಸುಖವನ್ನು ಅನುಭವಿಸುವರೋ ಹಾಗೆ ಪುಣ್ಯಕರ್ಮಿಗಳು ವಿಮಾನದಲ್ಲಿ ಹೋಗುವ ಕಾಮಗಾಮಿಗಳಾಗುತ್ತಾರೆ.

12309059a ಯಥೇಹ ಯತ್ ಕೃತಂ ಶುಭಂ ವಿಪಾಪ್ಮಭಿಃ ಕೃತಾತ್ಮಭಿಃ|

12309059c ತದಾಪ್ನುವಂತಿ ಮಾನವಾಸ್ತಥಾ ವಿಶುದ್ಧಯೋನಯಃ||

ಪಾಪರಹಿತ ಮತ್ತು ಪರಿಶುದ್ಧಹೃದಯಿಗಳು ಯಾವ ಶುಭಕರ್ಮಗಳನ್ನು ಮಾಡುತ್ತಾರೋ ಅದಕ್ಕನುಸಾರವಾಗಿ ಜನ್ಮಾಂತರದಲ್ಲಿ ಸತ್ಕುಲಗಳಲ್ಲಿ ಜನ್ಮತಾಳಿ ಅವುಗಳ ಫಲವನ್ನು ಪಡೆದುಕೊಳ್ಳುತ್ತಾರೆ.

12309060a ಪ್ರಜಾಪತೇಃ ಸಲೋಕತಾಂ ಬೃಹಸ್ಪತೇಃ ಶತಕ್ರತೋಃ|

12309060c ವ್ರಜಂತಿ ತೇ ಪರಾಂ ಗತಿಂ ಗೃಹಸ್ಥಧರ್ಮಸೇತುಭಿಃ||

ಗೃಹಸ್ಥಧರ್ಮದ ಸೇತುವೆಯನ್ನು ಅನುಸರಿಸಿ ಹೋಗುವವರು ಪ್ರಜಾಪತಿಯ, ಬೃಹಸ್ಪತಿಯ ಅಥವಾ ಶತಕ್ರತುವಿನ ಲೋಕಗಳಿಗೆ ಹೋಗಿ ಪರಮ ಗತಿಯನ್ನು ಹೊಂದುತ್ತಾರೆ.

12309061a ಸಹಸ್ರಶೋಽಪ್ಯನೇಕಶಃ ಪ್ರವಕ್ತುಮುತ್ಸಹಾಮಹೇ[12]|

12309061c ಅಬುದ್ಧಿಮೋಹನಂ ಪುನಃ ಪ್ರಭುರ್ವಿನಾ ನ ಯಾವಕಮ್[13]||

ನಿನಗೆ ಇದನ್ನು ಸಾವಿರ ಸಲ ಮತ್ತು ಇನ್ನೂ ಹಲವಾರು ಬಾರಿ ಹೇಳುವ ಉತ್ಸಾಹದಿಂದಿದ್ದೇನೆ. ಬುದ್ಧಿಯನ್ನು ಮೋಹಗೊಳಿಸದಿರುವ ಆ ಪ್ರಭು ಧರ್ಮದ ವಿನಃ ಯಾರೂ ಆ ಪರಮ ಗತಿಯನ್ನು ಹೊಂದುವುದಿಲ್ಲ.

12309062a ಗತಾ ದ್ವಿರಷ್ಟವರ್ಷತಾ[14] ಧ್ರುವೋಽಸಿ ಪಂಚವಿಂಶಕಃ|

12309062c ಕುರುಷ್ವ ಧರ್ಮಸಂಚಯಂ ವಯೋ ಹಿ ತೇಽತಿವರ್ತತೇ||

ನಿನಗೆ ಈಗಾಗಲೇ ಹದಿನಾರು ವರ್ಷಗಳಾಗಿವೆ. ನೀನು ಇಪ್ಪತ್ತೈದು ವರ್ಷದವನೂ ನಿಶ್ಚಿತವಾಗಿ ಆಗುತ್ತೀಯೆ. ನಿನ್ನ ವಯಸ್ಸು ಹೀಗೆಯೇ ಕಳೆದುಹೋಗುತ್ತಿರುತ್ತದೆ. ಆದುದರಿಂದ ಧರ್ಮವನ್ನು ಸಂಗ್ರಹಿಸು.

12309063a ಪುರಾ ಕರೋತಿ ಸೋಽಂತಕಃ ಪ್ರಮಾದಗೋಮುಖಂ ದಮಮ್[15]|

12309063c ಯಥಾಗೃಹೀತಮುತ್ಥಿತಂ ತ್ವರಸ್ವ ಧರ್ಮಪಾಲನೇ||

ಅಂತಕನು ಪ್ರಮಾದದಿಂದ ಕೂಡಿದ ಇಂದ್ರಿಯಗಳನ್ನು ಮುಂದಿಟ್ಟುಕೊಂಡು ನಿನ್ನನ್ನು ಆಕ್ರಮಣ ಮಾಡುವುದರ ಮೊದಲೇ ನೀನು ಜಾಗ್ರತನಾಗಿ ಮೇಲೆದ್ದು ಧರ್ಮವನ್ನು ಪಾಲಿಸುವಲ್ಲಿ ತ್ವರೆಮಾಡು.

12309064a ಯದಾ[16] ತ್ವಮೇವ ಪೃಷ್ಠತಸ್ತ್ವಮಗ್ರತೋ ಗಮಿಷ್ಯಸಿ|

12309064c ತಥಾ ಗತಿಂ ಗಮಿಷ್ಯತಃ ಕಿಮಾತ್ಮನಾ ಪರೇಣ ವಾ||

ಪರಲೋಕಕ್ಕೆ ಹೋಗುವಾಗ ನಿನ್ನ ಮುಂದೆ ಮತ್ತು ಹಿಂದೆ ನೀನೇ ಹೋಗುವೆ. ಅಂಥಹ ದಾರಿಯಲ್ಲಿ ಹೋಗುತ್ತಿರುವಾಗ ನಿನ್ನ ಈ ದೇಹದಿಂದಾಗಲೀ ಅಥವಾ ಇತರರಿಂದಾಗಲೀ ಯಾವ ಪ್ರಯೋಜನವಿದೆ?

12309065a ಯದೇಕಪಾತಿನಾಂ ಸತಾಂ ಭವತ್ಯಮುತ್ರ ಗಚ್ಚತಾಮ್|

12309065c ಭಯೇಷು ಸಾಂಪರಾಯಿಕಂ ನಿಧತ್ಸ್ವ ತಂ ಮಹಾನಿಧಿಮ್||

ಏಕಾಕಿಗಳಾಗಿ ಪರಲೋಕಕ್ಕೆ ಹೋಗುವಾಗ ಸತ್ಪುರುಷರ ಭಯವನ್ನು ಹೋಗಲಾಡಿಸಿ ಪರಲೋಕದಲ್ಲಿ ಹಿತವನ್ನುಂಟುಮಾಡುವಂಥಹ ನಿಧಿರೂಪವಾದ ಜ್ಞಾನವನ್ನೇ ನಿನ್ನಲ್ಲಿಟ್ಟುಕೋ.

12309066a ಸಕೂಲಮೂಲಬಾಂಧವಂ ಪ್ರಭುರ್ಹರತ್ಯಸಂಗವಾನ್|

12309066c ನ ಸಂತಿ ಯಸ್ಯ ವಾರಕಾಃ ಕುರುಷ್ವ ಧರ್ಮಸಂನಿಧಿಮ್||

ಸರ್ವಸಮರ್ಥವಾದ ಕಾಲವು ಸಂಗರಹಿತವಾದುದು. ಅದು ಯಾರೊಡನೆಯೂ ಸ್ನೇಹಮಾಡುವುದಿಲ್ಲ. ಆದುದರಿಂದ ಅದು ಸಕೂಲ-ಸಮೂಲವಾಗಿ ಸಮಸ್ತಬಂಧುಗಳನ್ನೂ ಅಪಹರಿಸಿಕೊಂಡು ಹೋಗುತ್ತದೆ. ಆಗ ಅದನ್ನು ತಡೆಯುವವರು ಯಾರೂ ಇರುವುದಿಲ್ಲ. ಆದುದರಿಂದ ಧರ್ಮವನ್ನು ಸಂಗ್ರಹಿಸು.

12309067a ಇದಂ ನಿದರ್ಶನಂ ಮಯಾ ತವೇಹ ಪುತ್ರ ಸಂಮತಮ್|

12309067c ಸ್ವದರ್ಶನಾನುಮಾನತಃ ಪ್ರವರ್ಣಿತಂ ಕುರುಷ್ವ ತತ್||

ಪುತ್ರ! ನನ್ನ ಶಾಸ್ತ್ರಜ್ಞಾನದಿಂದಲೂ ಯುಕ್ತಿಯಿಂದಲೂ ನಿನಗೆ ಉಪದೇಶಿಸಿದ ಈ ಜ್ಞಾನದಂತೆಯೇ ನೀನು ಧರ್ಮಾಚರಣೆಯನ್ನು ಮಾಡು.

12309068a ದಧಾತಿ ಯಃ ಸ್ವಕರ್ಮಣಾ ಧನಾನಿ ಯಸ್ಯ ಕಸ್ಯ ಚಿತ್|

12309068c ಅಬುದ್ಧಿಮೋಹಜೈರ್ಗುಣೈಃ ಶತೈಕ[17] ಏವ ಯುಜ್ಯತೇ||

ಸ್ವಕರ್ಮದಿಂದ ಗಳಿಸಿದ ಧನವನ್ನು ಇತರರಿಗೆ ದಾನಮಾಡುವವನು ಮಾತ್ರ ಮೋಹಗೊಳ್ಳದ ಬುದ್ಧಿಯಿಂದ ಪ್ರಾಪ್ತವಾದ ಗುಣಗಳಿಂದ ಕೂಡಿದವನಾಗುತ್ತಾನೆ.

12309069a ಶ್ರುತಂ ಸಮರ್ಥಮಸ್ತು ತೇ ಪ್ರಕುರ್ವತಃ ಶುಭಾಃ ಕ್ರಿಯಾಃ|

12309069c ತದೇವ ತತ್ರ ದರ್ಶನಂ ಕೃತಜ್ಞಮರ್ಥಸಂಹಿತಮ್||

ಸಮಸ್ತಶಾಸ್ತ್ರಜ್ಞಾನವನ್ನು ಪಡೆದುಕೊಂಡು ಅದಕ್ಕೆ ಅನುಸಾರವಾಗಿ ಶುಭಕರ್ಮಗಳನ್ನು ಮಾಡುವ ಸಮರ್ಥನಿಗೆ ಈ ಆಧ್ಯಾತ್ಮಜ್ಞಾನವನ್ನು ಉಪದೇಶಿಸಬೇಕು. ಏಕೆಂದರೆ ಕೃತಜ್ಞನಾದವನಿಗೆ ಏನನ್ನು ಉಪದೇಶಿಸಿದರೂ ಅದು ಸಫಲವಾಗುತ್ತದೆ.

12309070a ನಿಬಂಧನೀ ರಜ್ಜುರೇಷಾ ಯಾ ಗ್ರಾಮೇ ವಸತೋ ರತಿಃ|

12309070c ಚಿತ್ತ್ವೈನಾಂ ಸುಕೃತೋ ಯಾಂತಿ ನೈನಾಂ ಚಿಂದಂತಿ ದುಷ್ಕೃತಃ||

ಗ್ರಾಮ ಅಥವಾ ಪಟ್ಟಣದಲ್ಲಿಯೇ ವಾಸಿಸುತ್ತಿರಲಿ, ಸುಖೋಪಭೋಗಗಳಲ್ಲಿನ ಆಸಕ್ತಿಯೇ ಮನುಷ್ಯನನ್ನು ಬಂಧಿಸುವ ಹಗ್ಗವಾಗಿರುತ್ತದೆ. ಪುಣ್ಯಾತ್ಮರು ಆ ಹಗ್ಗವನ್ನು ತುಂಡರಿಸಿ ಪರಮ ಪದವನ್ನು ಸೇರುತ್ತಾರೆ. ಪಾಪಾತ್ಮರು ಅದನ್ನು ಕತ್ತರಿಸುವ ಪ್ರಯತ್ನವನ್ನೇ ಮಾಡುವುದಿಲ್ಲ.

12309071a ಕಿಂ ತೇ ಧನೇನ ಕಿಂ ಬಂಧುಭಿಸ್ತೇ

ಕಿಂ ತೇ ಪುತ್ರೈಃ ಪುತ್ರಕ ಯೋ ಮರಿಷ್ಯಸಿ|

12309071c ಆತ್ಮಾನಮನ್ವಿಚ್ಚ ಗುಹಾಂ ಪ್ರವಿಷ್ಟಂ

ಪಿತಾಮಹಾಸ್ತೇ ಕ್ವ ಗತಾಶ್ಚ ಸರ್ವೇ||

ಪುತ್ರಕ! ಮರಣಹೊಂದುವವನಿಗೆ ಧನದಿಂದೇನಾಗುವುದು? ಬಂಧುಗಳಿಂದ ಏನಾಗುವುದು? ಪುತ್ರರಿಂದ ಏನಾಗಬಹುದು? ಆದುದರಿಂದ ಹೃದಯವೆಂಬ ಗುಹೆಯಲ್ಲಿ ಅಡಗಿರುವ ಆತ್ಮತತ್ತ್ವವನ್ನು ಅನುಸಂಧಾನಮಾಡು. ನಿನ್ನ ಪಿತಾಮಹರು ಎಲ್ಲರೂ ಎಲ್ಲಿ ಹೋಗಿರುವರೆಂದು ಯೋಚಿಸು.

12309072a ಶ್ವಃಕಾರ್ಯಮದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ಣಿಕಮ್|

12309072c ಕೋ ಹಿ ತದ್ವೇದ ಕಸ್ಯಾದ್ಯ ಮೃತ್ಯುಸೇನಾ ನಿವೇಕ್ಷ್ಯತೇ||

ನಾಳೆಯ ಕಾರ್ಯವನ್ನು ಇಂದೇ ಮಾಡಬೇಕು. ಮಧ್ಯಾಹ್ನ ಮಾಡಬೇಕಾದುದನ್ನು ಬೆಳಿಗ್ಗೆಯೇ ಮಾಡಿ ಮುಗಿಸಬೇಕು. ಏಕೆಂದರೆ ಮೃತ್ಯುವು ಅವನ ಕಾರ್ಯವು ಮುಗಿಯಿತೇ ಅಥವಾ ಇಲ್ಲವೇ ಎನ್ನುವುದನ್ನು ನೋಡುತ್ತಾ ಕುಳಿತುಕೊಳ್ಳುವುದಿಲ್ಲ.

12309073a ಅನುಗಮ್ಯ ಶ್ಮಶಾನಾಂತಂ ನಿವರ್ತಂತೀಹ ಬಾಂಧವಾಃ|

12309073c ಅಗ್ನೌ ಪ್ರಕ್ಷಿಪ್ಯ ಪುರುಷಂ ಜ್ಞಾತಯಃ ಸುಹೃದಸ್ತಥಾ||

ಮರಣಾನಂತರ ಬಾಂಧವರು, ಕುಟುಂಬದವರು ಮತ್ತು ಸ್ನೇಹಿತರು ಶ್ಮಶಾನದ ವರೆಗೂ ಮೃತನನ್ನು ಅನುಸರಿಸಿ ಬಂದು ಶವಕ್ಕೆ ಅಗ್ನಿಯನ್ನಿಟ್ಟು ಹಿಂದಿರುಗುತ್ತಾರೆ.

12309074a ನಾಸ್ತಿಕಾನ್ನಿರನುಕ್ರೋಶಾನ್ನರಾನ್ ಪಾಪಮತೌ ಸ್ಥಿತಾನ್|

12309074c ವಾಮತಃ ಕುರು ವಿಶ್ರಬ್ಧಂ ಪರಂ ಪ್ರೇಪ್ಸುರತಂದ್ರಿತಃ||

ಪರಮಾತ್ಮತತ್ತ್ವವನ್ನು ಪಡೆಯಲಿಚ್ಛಿಸುವ ನೀನು ಆಲಸ್ಯವನ್ನು ತೊರೆದು ನಾಸ್ತಿಕರನ್ನೂ, ದಯಾಹೀನರನ್ನೂ, ಪಾಪಬುದ್ಧಿಗಳನ್ನೂ ನಿರ್ಭಯನಾಗಿ ಪರಿತ್ಯಜಿಸು.

12309075a ಏವಮಭ್ಯಾಹತೇ ಲೋಕೇ ಕಾಲೇನೋಪನಿಪೀಡಿತೇ|

12309075c ಸುಮಹದ್ಧೈರ್ಯಮಾಲಂಬ್ಯ ಧರ್ಮಂ ಸರ್ವಾತ್ಮನಾ ಕುರು||

ಹೀಗೆ ಕಾಲನು ಲೋಕವನ್ನು ಅಪ್ಪಳಿಸಿ ಪೀಡಿಸುತ್ತಿರುವಾಗ ನೀನು ಪ್ರಚಂಡ ಧೈರ್ಯವನ್ನು ಆಶ್ರಯಿಸಿ ಸಂಪೂರ್ಣ ಮನಸ್ಸಿನಿಂದ ಧರ್ಮವನ್ನಾಚರಿಸು.

12309076a ಅಥೇಮಂ ದರ್ಶನೋಪಾಯಂ ಸಮ್ಯಗ್ಯೋ ವೇತ್ತಿ ಮಾನವಃ|

12309076c ಸಮ್ಯಕ್ಸ ಧರ್ಮಂ ಕೃತ್ವೇಹ ಪರತ್ರ ಸುಖಮೇಧತೇ||

ಪರಮಾತ್ಮಸಾಕ್ಷಾತ್ಕಾರದ ಈ ಉಪಾಯವನ್ನು ಚೆನ್ನಾಗಿ ತಿಳಿದಿರುವ ಮನುಷ್ಯನು ಈ ಲೋಕದಲ್ಲಿ ಸ್ವಧರ್ಮವನ್ನಾಚರಿಸಿ ಪರಲೋಕದಲ್ಲಿಯೂ ಸುಖವನ್ನು ಅನುಭವಿಸುತ್ತಾನೆ.

12309077a ನ ದೇಹಭೇದೇ ಮರಣಂ ವಿಜಾನತಾಂ

ನ ಚ ಪ್ರಣಾಶಃ ಸ್ವನುಪಾಲಿತೇ ಪಥಿ|

12309077c ಧರ್ಮಂ ಹಿ ಯೋ ವರ್ಧಯತೇ ಸ ಪಂಡಿತೋ

ಯ ಏವ ಧರ್ಮಾಚ್ಚ್ಯವತೇ ಸ ಮುಹ್ಯತಿ||

ದೇಹವು ನಾಶವಾದರೂ ಆತ್ಮವು ವಿನಾಶಹೊಂದುವುದಿಲ್ಲವೆಂದೂ ಮತ್ತು ಶಿಷ್ಠರು ಪರಿಪಾಲಿಸುವ ಧರ್ಮಮಾರ್ಗದಲ್ಲಿರುವವನು ವಿನಾಶಹೊಂದುವುದಿಲ್ಲ ಎನ್ನುವುದನ್ನೂ ತಿಳಿದವನೇ ಪಂಡಿತನು. ಧರ್ಮದಿಂದ ಚ್ಯುತನಾದವನು ವಿಮೋಹಗೊಳ್ಳುತ್ತಾನೆ.

12309078a ಪ್ರಯುಕ್ತಯೋಃ ಕರ್ಮಪಥಿ ಸ್ವಕರ್ಮಣೋಃ

ಫಲಂ ಪ್ರಯೋಕ್ತಾ ಲಭತೇ ಯಥಾವಿಧಿ|

12309078c ನಿಹೀನಕರ್ಮಾ ನಿರಯಂ ಪ್ರಪದ್ಯತೇ

ತ್ರಿವಿಷ್ಟಪಂ ಗಚ್ಚತಿ ಧರ್ಮಪಾರಗಃ||

ಕರ್ಮಪಥದಲ್ಲಿ ನಡೆಯುವವರು ತಮ್ಮ ಕರ್ಮಗಳಿಗೆ ತಕ್ಕಂತೆ ಫಲಗಳನ್ನು ಪಡೆದುಕೊಳ್ಳುತ್ತಾರೆ. ವಿಹೀನಕರ್ಮಗಳನ್ನು ಮಾಡುವವರು ನರಕವನ್ನು ಹೊಂದುತ್ತಾರೆ. ಧರ್ಮಪಾರಂಗತರು ಸ್ವರ್ಗಕ್ಕೆ ಹೋಗುತ್ತಾರೆ.

12309079a ಸೋಪಾನಭೂತಂ ಸ್ವರ್ಗಸ್ಯ ಮಾನುಷ್ಯಂ ಪ್ರಾಪ್ಯ ದುರ್ಲಭಮ್|

12309079c ತಥಾತ್ಮಾನಂ ಸಮಾದಧ್ಯಾದ್ ಭ್ರಶ್ಯೇತ ನ ಪುನರ್ಯಥಾ||

ಸ್ವರ್ಗಕ್ಕೆ ಸೋಪಾನದಂತಿರುವ ದುರ್ಲಭವಾದ ಮನುಷ್ಯ ಜನ್ಮವನ್ನು ಪಡೆದವನು ಮನುಷ್ಯತ್ವದಿಂದ ಭ್ರಷ್ಟನಾಗಿ ನೀಚಯೋನಿಗಳಲ್ಲಿ ಹುಟ್ಟದಿರುವ ರೀತಿಯಲ್ಲಿ ಧರ್ಮಾಚರಣೆಗಳನ್ನು ಮಾಡಿ ತನ್ನನ್ನು ಉನ್ನತ ಸ್ಥಾನಗಳಿಗೆ ಏರಿಸಿಕೊಳ್ಳಬೇಕು.

12309080a ಯಸ್ಯ ನೋತ್ಕ್ರಾಮತಿ ಮತಿಃ ಸ್ವರ್ಗಮಾರ್ಗಾನುಸಾರಿಣೀ|

12309080c ತಮಾಹುಃ ಪುಣ್ಯಕರ್ಮಾಣಮಶೋಚ್ಯಂ ಮಿತ್ರಬಾಂಧವೈಃ||

ಸ್ವರ್ಗಮಾರ್ಗಾನುಸಾರಿಣಿಯಾದ ಧರ್ಮ ಮತಿಯನ್ನು ಮೀರಿ ನಡೆಯದಿರುವವನನ್ನು ಪುಣ್ಯಕರ್ಮಿ ಎಂದು ಹೇಳುತ್ತಾರೆ. ಅವನಿಂದಾಗಿ ಮಿತ್ರಬಾಂಧವರಿಗೆ ಯಾವ ಶೋಕವೂ ಉಂಟಾಗುವುದಿಲ್ಲ.

12309081a ಯಸ್ಯ ನೋಪಹತಾ ಬುದ್ಧಿರ್ನಿಶ್ಚಯೇಷ್ವವಲಂಬತೇ|

12309081c ಸ್ವರ್ಗೇ ಕೃತಾವಕಾಶಸ್ಯ ತಸ್ಯ ನಾಸ್ತಿ ಮಹದ್ ಭಯಮ್||

ಯಾರ ಬುದ್ಧಿಯು ದೂಷಿತವಾಗಿಲ್ಲದೇ ದೃಢವಾಗಿರುವುದೋ ಅವನಿಗೆ ಸ್ವರ್ಗದಲ್ಲಿ ಸ್ಥಾನವು ಸಿದ್ಧವಾಗಿಯೇ ಇರುತ್ತದೆ. ಮಹಾಭಯವನ್ನುಂಟುಮಾಡುವ ನರಕವು ಅವನಿಗೆ ಪ್ರಾಪ್ತವಾಗುವುದಿಲ್ಲ.

12309082a ತಪೋವನೇಷು ಯೇ ಜಾತಾಸ್ತತ್ರೈವ ನಿಧನಂ ಗತಾಃ|

12309082c ತೇಷಾಮಲ್ಪತರೋ ಧರ್ಮಃ ಕಾಮಭೋಗಮಜಾನತಾಮ್||

ಕಾಮಭೋಗಗಳನ್ನು ತಿಳಿಯದೇ ತಪೋವನಗಳಲ್ಲಿಯೇ ಹುಟ್ಟಿ ಅಲ್ಲಿಯೇ ನಿಧನರಾಗುವವರಿಗೆ ದೊರೆಯುವ ಧರ್ಮವು ಅಲ್ಪವಾದುದು.

12309083a ಯಸ್ತು ಭೋಗಾನ್ ಪರಿತ್ಯಜ್ಯ ಶರೀರೇಣ ತಪಶ್ಚರೇತ್|

12309083c ನ ತೇನ ಕಿಂ ಚಿನ್ನ ಪ್ರಾಪ್ತಂ ತನ್ಮೇ ಬಹುಮತಂ ಫಲಮ್||

ಭೋಗಗಳನ್ನು ಪರಿತ್ಯಜಿಸಿ ಶಾರೀರಿಕ ತಪಸ್ಸನ್ನು ತಪಿಸುವವನಿಗೆ ಅತ್ಯಧಿಕ ಫಲವು ಪ್ರಾಪ್ತವಾಗುವುದೆಂದು ನನ್ನ ಅಭಿಮತವು. ಅವನಿಗೆ ಪ್ರಾಪ್ತವಾಗದೇ ಇರುವುದು ಯಾವುದೂ ಇಲ್ಲ.

12309084a ಮಾತಾಪಿತೃಸಹಸ್ರಾಣಿ ಪುತ್ರದಾರಶತಾನಿ ಚ|

12309084c ಅನಾಗತಾನ್ಯತೀತಾನಿ ಕಸ್ಯ ತೇ ಕಸ್ಯ ವಾ ವಯಮ್||

ನಮಗೆ ಸಹಸ್ರಾರು ಮಾತ-ಪಿತೃಗಳು ಮತ್ತು ನೂರಾರು ಮಕ್ಕಳು-ಪತ್ನಿಯರು ಆಗಿ ಹೋಗಿದ್ದಾರೆ ಮತ್ತು ಮುಂದೆ ಆಗುವವರಿದ್ದಾರೆ. ಹೀಗಿರುವಾಗ ಅವರು ನಮಗೇನಾಬೇಕು ಅಥವಾ ನಾವು ಅವರಿಗೇನಾಗಬೇಕು?

[18]12309085a ನ ತೇಷಾಂ ಭವತಾ ಕಾರ್ಯಂ ನ ಕಾರ್ಯಂ ತವ ತೈರಪಿ|

12309085c ಸ್ವಕೃತೈಸ್ತಾನಿ ಯಾತಾನಿ ಭವಾಂಶ್ಚೈವ ಗಮಿಷ್ಯತಿ||

ನಿನ್ನಿಂದ ಅವರಿಗೆ ಯಾವ ಕಾರ್ಯವೂ ಆಗಬೇಕಾಗಿಲ್ಲ. ಮತ್ತು ಅವರಿಂದ ನಿನಗೆ ಯಾವ ಕಾರ್ಯವೂ ಆಗಬೇಕಾಗಿಲ್ಲ. ಆ ಜೀವಿಗಳೆಲ್ಲವೂ ತಮ್ಮ ತಮ್ಮ ಕರ್ಮಗಳೊಡನೆ ಹೊರಟುಹೋದವು. ಹಾಗೆಯೇ ನೀನೂ ಹೋಗುವೆ.

12309086a ಇಹ ಲೋಕೇ ಹಿ ಧನಿನಃ ಪರೋಽಪಿ[19] ಸ್ವಜನಾಯತೇ|

12309086c ಸ್ವಜನಸ್ತು ದರಿದ್ರಾಣಾಂ ಜೀವತಾಮೇವ ನಶ್ಯತಿ||

ಈ ಲೋಕದಲ್ಲಿ ಧನಿಕರೊಂದಿಗೆ ಪರರೂ ಸ್ವಜನರಂತೆ ನಡೆದುಕೊಳ್ಳುತ್ತಾರೆ. ಆದರೆ ದರಿದ್ರರಿಗೆ ಸ್ವಜನರು ಜೀವಿತವಾಗಿದ್ದರೂ ಇಲ್ಲದಂತೆಯೇ ಇರುತ್ತಾರೆ.

12309087a ಸಂಚಿನೋತ್ಯಶುಭಂ ಕರ್ಮ ಕಲತ್ರಾಪೇಕ್ಷಯಾ ನರಃ|

12309087c ತತಃ ಕ್ಲೇಶಮವಾಪ್ನೋತಿ ಪರತ್ರೇಹ ತಥೈವ ಚ||

ಮನುಷ್ಯನು ತನ್ನ ಪತ್ನಿಯೇ ಮೊದಲಾದ ರಕ್ಷಣೀಯರ ಸಲುವಾಗಿ ಅಶುಭ ಕರ್ಮಗಳನ್ನು ಮಾಡಿ ನಂತರ ಇಹದಲ್ಲಿಯೂ ಪರದಲ್ಲಿಯೂ ಕ್ಲೇಶಗಳನ್ನು ಪಡೆದುಕೊಳ್ಳುತ್ತಾನೆ.

12309088a ಪಶ್ಯ ತ್ವಂ ಚಿದ್ರಭೂತಂ ಹಿ ಜೀವಲೋಕಂ ಸ್ವಕರ್ಮಣಾ|

12309088c ತತ್ಕುರುಷ್ವ ತಥಾ ಪುತ್ರ ಕೃತ್ಸ್ನಂ ಯತ್ಸಮುದಾಹೃತಮ್||

ಪುತ್ರ! ನಿನ್ನ ಕರ್ಮಗಳಿಂದ ಈ ಜೀವಲೋಕವು ಚಿದ್ರವಾಗಿರುವುದನ್ನು ನೀನು ಕಾಣುತ್ತೀಯೆ. ಆದುದರಿಂದ ನಾನು ಯಾವುದನ್ನು ನಿನಗೆ ಹೇಗೆ ಉಪದೇಶಿಸಿರುವೆನೋ ಅವೆಲ್ಲವನ್ನೂ ಸಮಗ್ರವಾಗಿ ಹಾಗೆಯೇ ಮಾಡು.

12309089a ತದೇತತ್ಸಂಪ್ರದೃಶ್ಯೈವ ಕರ್ಮಭೂಮಿಂ ಪ್ರವಿಶ್ಯ ತಾಮ್|

12309089c ಶುಭಾನ್ಯಾಚರಿತವ್ಯಾನಿ ಪರಲೋಕಮಭೀಪ್ಸತಾ||

ಇದು ಕರ್ಮಭೂಮಿ ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡು ಪರಲೋಕವನ್ನು ಇಚ್ಛಿಸುವ ಪುರುಷನು ಯಾವಾಗಲೂ ಶುಭಕರ್ಮಗಳನ್ನೇ ಆಚರಿಸುತ್ತಿರಬೇಕು.

12309090a ಮಾಸರ್ತುಸಂಜ್ಞಾಪರಿವರ್ತಕೇನ

ಸೂರ್ಯಾಗ್ನಿನಾ ರಾತ್ರಿದಿವೇಂಧನೇನ|

12309090c ಸ್ವಕರ್ಮನಿಷ್ಠಾಫಲಸಾಕ್ಷಿಕೇಣ

ಭೂತಾನಿ ಕಾಲಃ ಪಚತಿ ಪ್ರಸಹ್ಯ||

ಕಾಲನೆಂಬ ಪಾಚಕನು ಕರ್ಮಫಲಕ್ಕೆ ಸಾಕ್ಷೀಭೂತವಾದ ಹಗಲು-ರಾತ್ರಿಗಳೆಂಬ ಕಟ್ಟಿಗೆಗಳಿಂದಲೂ, ಸೂರ್ಯನೆಂಬ ಅಗ್ನಿಯಿಂದಲೂ, ಮಾಸ ಮತ್ತು ಋತುಗಳೆಂಬ ಹುಟ್ಟಿನಿಂದ ಪ್ರಾಣಿಗಳನ್ನು ಪದೇ ಪದೇ ಮೊಗಚಿಹಾಕುತ್ತಾ ಬಲಾತ್ಕಾರವಾಗಿ ಬೇಯಿಸುತ್ತಿರುತ್ತಾನೆ.

12309091a ಧನೇನ ಕಿಂ ಯನ್ನ ದದಾತಿ ನಾಶ್ನುತೇ

ಬಲೇನ ಕಿಂ ಯೇನ ರಿಪೂನ್ನ ಬಾಧತೇ|

12309091c ಶ್ರುತೇನ ಕಿಂ ಯೇನ ನ ಧರ್ಮಮಾಚರೇತ್

ಕಿಮಾತ್ಮನಾ ಯೋ ನ ಜಿತೇಂದ್ರಿಯೋ ವಶೀ||

ಬೇರೆಯವರಿಗೆ ಕೊಡದೇ ಮತ್ತು ತಾನೂ ಉಪಭೋಗಿಸದೇ ಇರುವ ಧನದಿಂದ ಯಾವ ಪ್ರಯೋಜನ? ಶತ್ರುಗಳನ್ನು ಪೀಡಿಸದೇ ಇರುವ ಬಲದಿಂದ ಯಾವ ಪ್ರಯೋಜನ? ಧರ್ಮವನ್ನು ಆಚರಿಸದೇ ಕೇವಲ ವಿದ್ಯಾರ್ಜನೆಯಿಂದ ಯಾವ ಪ್ರಯೋಜನ? ಜಿತೇಂದ್ರಿಯನೂ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡವನೂ ಆಗಿರದಿದ್ದರೆ ಈ ಶರೀರದಿಂದ ಏನು ಪ್ರಯೋಜನ?”

12309092a ಇದಂ ದ್ವೈಪಾಯನವಚೋ ಹಿತಮುಕ್ತಂ ನಿಶಮ್ಯ ತು|

12309092c ಶುಕೋ ಗತಃ ಪರಿತ್ಯಜ್ಯ ಪಿತರಂ ಮೋಕ್ಷದೇಶಿಕಮ್||

ದ್ವೈಪಾಯನನು ಹೇಳಿದ ಈ ಹಿತ ಮಾತುಗಳನ್ನು ಕೇಳಿ ಶುಕನು ತಂದೆಯನ್ನು ಪರಿತ್ಯಜಿಸಿ ಮೋಕ್ಷತತ್ತ್ವೋಪದೇಶಿಕ ಗುರುವನ್ನು ಅರಸಿಕೊಂಡು ಹೊರಟುಹೋದನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾವಕಾಧ್ಯಯನಂ ನಾಮ ನವಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾವಕಾಧ್ಯಯನ ಎನ್ನುವ ಮುನ್ನೂರಾಒಂಭತ್ತನೇ ಅಧ್ಯಾಯವು.

Parrot White Background Images, Stock Photos & Vectors | Shutterstock

[1] ಭಾರತ ದರ್ಶನದಲ್ಲಿ ಇದರ ನಂತರ ಈ ಒಂದು ಶ್ಲೋಕವಿದೆ: ಅವ್ಯಕ್ತವ್ಯಕ್ತತತ್ತ್ವಾನಾಂ ನಿಶ್ಚಯಂ ಬುದ್ಧಿನಿಶ್ಚಯಮ್| ವಕ್ತುಮರ್ಹಸಿ ಕೌರವ್ಯ ದೇವಸ್ಯಾಜಸ್ಯ ಯಾ ಕೃತಿಃ||

[2] ಕೂಲಪಾತಮಿವ ಸ್ಥಿತಮ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ತಲ್ಲಬ್ಧ್ವಾ ನ ರತಿಪರೇಣ ಹೇಲಿತವ್ಯಮ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] 450 ಸಲ ರೆಪ್ಪೆಯಾಡಿಸುವಷ್ಟು ಕಾಲ.

[5] ನಿಮಿಷದ ನಾಲ್ಕನೇ ಒಂದು ಭಾಗ.

[6] ರಾಜಾ ಸದಾ ಧರ್ಮಪರಃ ಶುಭಾಶುಭಸ್ಯ ಗೋಪ್ತಾ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಧೃತಿಃ ಕ್ಷಮಾ ದಮೋಽಸ್ತೇಯಂ ಶೌಚಮಿಂದ್ರಿಯನಿಗ್ರಹಃ| ಧೀರ್ವಿದ್ಯಾ ಸತ್ಯಮಕ್ರೋಧೋ ದಶತಂ ಧರ್ಮಲಕ್ಷ್ಮಣಮ್|| (ಮನುಸ್ಮೃತಿ).

[8] ರಾಜಶಾಸನಾತ್ ಎಂಬ ಪಾಠಾಂತರವಿದೆ (ಭಾರತದರ್ಶನ).

[9] ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್| ನಿತ್ಯಂ ಸನ್ನಿಹಿತೋ ಮೃತ್ಯುಃ|

[10]ಹರ್ನಿಶೇಷು ಸರ್ವತಃ ಸ್ಪೃಶತ್ಸು ಸರ್ವಚಾರಿಷು| ಎಂಬ ಪಾಠಾಂತರವಿದೆ (ಭಾರತದರ್ಶನ).

[11] ವಿರೂಪರೌದ್ರಮಕ್ಷಿಕೇ| ಎಂಬ ಪಾಠಾಂತರವಿದೆ (ಭಾರತದರ್ಶನ).

[12] ಪ್ರವಕ್ತುಮುತ್ಸಹಾಮ ತೇ| ಎಂಬ ಪಾಠಾಂತರವಿದೆ (ಭಾರತದರ್ಶನ).

[13] ಪ್ರಭುರ್ನಿನಾಯ ಪಾವಕಃ| ಎಂಬ ಪಾಠಾಂತರವಿದೆ (ಭಾರತದರ್ಶನ).

[14] ಗತಾ ತ್ರಿರಷ್ಟವರ್ಷತಾ| ಅರ್ಥಾತ್ ಈಗ ನಿನಗೆ ಇಪ್ಪತ್ನಾಲ್ಕು ವರ್ಷಗಳಾಗಿವೆ ಎಂಬ ಪಾಠಾಂತರವಿದೆ (ಭಾರತದರ್ಶನ).

[15] ಪ್ರಮಾದಗೋಮುಖಾಂ ಚಮೂಮ್| ಎಂಬ ಪಾಠಾಂತರವಿದೆ (ಭಾರತದರ್ಶನ).

[16] ಯಥಾ ಎಂಬ ಪಾಠಾಂತರವಿದೆ (ಭಾರತದರ್ಶನ).

[17] ಸ ಏಕ ಎಂಬ ಪಾಠಾಂತರವಿದೆ (ಭಾರತದರ್ಶನ).

[18] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಹಮೇಕೋ ನ ಮೇ ಕಶ್ಚಿನ್ನಾಹಮನ್ಯಸ್ಯ ಸಸ್ಯಚಿತ್| ನ ತಂ ಪಶ್ಯಾಮಿ ಯಸ್ಯಾಹಂ ತನ್ನ ಪಶ್ಯಾಮಿ ಯೋ ಮಮ|| ಅರ್ಥಾತ್: ನಾನು ಏಕಾಂಗಿ. ನನಗೆ ಸಂಬಂಧಿಸಿದವರು ಯಾರೂ ಇಲ್ಲ. ನಾನೂ ಕೂಡ ಬೇರೆ ಯಾರಿಗೂ ಸೇರಿದವನಲ್ಲ. ನಾನು ಯಾರವನೋ ಅವನನ್ನು ಇದೂವರೆಗೆ ನಾನು ನೋಡಿಲ್ಲ. ಯಾವನು ನನ್ನವನೋ ಅವನನ್ನೂ ಕೂಡ ಇದೂವರೆಗೆ ನಾನು ನೋಡಿಲ್ಲ.

[19] ಸ್ವಜನಃ ಎಂಬ ಪಾಠಾಂತರವಿದೆ (ಭಾರತದರ್ಶನ).

Comments are closed.