Shanti Parva: Chapter 300

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೦೦

ಸಂಹಾರಕ್ರಮದ ವರ್ಣನೆ (1-17).

12300001 ಯಾಜ್ಞವಲ್ಕ್ಯ ಉವಾಚ|

12300001a ತತ್ತ್ವಾನಾಂ ಸರ್ಗಸಂಖ್ಯಾ ಚ ಕಾಲಸಂಖ್ಯಾ ತಥೈವ ಚ|

12300001c ಮಯಾ ಪ್ರೋಕ್ತಾನುಪೂರ್ವ್ಯೇಣ ಸಂಹಾರಮಪಿ ಮೇ ಶೃಣು||

ಯಾಜ್ಞವಲ್ಕ್ಯನು ಹೇಳಿದನು: “ಇದೂವರೆಗೆ ನಾನು ತತ್ತ್ವಗಳ ಸೃಷ್ಟಿಸಂಖ್ಯೆಗಳನ್ನೂ ಕಾಲಸಂಖ್ಯೆಗಳನ್ನೂ ಅನುಕ್ರಮವಾಗಿ ಹೇಳಿದ್ದೇನೆ. ಈಗ ಸಂಹಾರಕ್ರಮದ ಕುರಿತು ಕೇಳು.

12300002a ಯಥಾ ಸಂಹರತೇ ಜಂತೂನ್ಸಸರ್ಜ ಚ ಪುನಃ ಪುನಃ|

12300002c ಅನಾದಿನಿಧನೋ ಬ್ರಹ್ಮಾ ನಿತ್ಯಶ್ಚಾಕ್ಷರ ಏವ ಚ||

ನಿತ್ಯ, ಅಕ್ಷರ, ಅನಾದಿನಿಧನ ಬ್ರಹ್ಮನು ಪುನಃ ಪುನಃ ಹೇಗೆ ಜಂತುಗಳನ್ನು ಸೃಷ್ಟಿಸುತ್ತಾನೆ ಮತ್ತು ಸಂಹರಿಸುತ್ತಾನೆ ಎನ್ನುವುದನ್ನೂ ಕೇಳು.

12300003a ಅಹಃಕ್ಷಯಮಥೋ ಬುದ್ಧ್ವಾ ನಿಶಿ ಸ್ವಪ್ನಮನಾಸ್ತಥಾ|

12300003c ಚೋದಯಾಮಾಸ ಭಗವಾನವ್ಯಕ್ತೋಽಹಂಕೃತಂ ನರಮ್||

ಭಗವಾನ್ ಅವ್ಯಕ್ತನು ಹಗಲು ಕಳೆಯಿತೆಂದು ತಿಳಿದು ರಾತ್ರಿ ಮಲಗಬೇಕೆಂದು ಮನಸ್ಸುಮಾಡಿ ಅಹಂಕಾರಕೃತ ನರನನ್ನು ಪ್ರಚೋದಿಸುತ್ತಾನೆ.

12300004a ತತಃ ಶತಸಹಸ್ರಾಂಶುರವ್ಯಕ್ತೇನಾಭಿಚೋದಿತಃ|

12300004c ಕೃತ್ವಾ ದ್ವಾದಶಧಾತ್ಮಾನಮಾದಿತ್ಯೋ ಜ್ವಲದಗ್ನಿವತ್||

ಅನಂತರ ಅವ್ಯಕ್ತನಿಂದ ಪ್ರಚೋದಿತನಾಗಿ ಅಹಂಕಾರನು ಶತಸಹಸ್ರಾಂಶು ಸೂರ್ಯನಾಗಿ ತನ್ನನ್ನು ಹನ್ನೆರಡು ರೂಪಗಳನ್ನಾಗಿ ವಿಭಾಗಿಸಿಕೊಂಡು ಅಗ್ನಿಯೋಪಾದಿಯಲ್ಲಿ ಪ್ರಜ್ವಲಿಸುತ್ತಾನೆ.

12300005a ಚತುರ್ವಿಧಂ ಪ್ರಜಾಜಾಲಂ ನಿರ್ದಹತ್ಯಾಶು ತೇಜಸಾ|

12300005c ಜರಾಯ್ವಂಡಸ್ವೇದಜಾತಮುದ್ಭಿಜ್ಜಂ ಚ ನರಾಧಿಪ||

ನರಾಧಿಪ! ಅವನು ತನ್ನ ಪ್ರಖರ ತೇಜಸ್ಸಿನಿಂದ ಜರಾಯುಜ, ಅಂಡಜ, ಸ್ವೇದಜ ಮತ್ತು ಉದ್ಭಿಜ್ಜಗಳೆಂಬ ನಾಲ್ಕು ಪ್ರಕಾರದ ಜೀವಗಳನ್ನೂ ಭಸ್ಮಮಾಡುತ್ತಾನೆ.

12300006a ಏತದುನ್ಮೇಷಮಾತ್ರೇಣ ವಿನಿಷ್ಟಂ ಸ್ಥಾಣುಜಂಗಮಮ್|

12300006c ಕೂರ್ಮಪೃಷ್ಠಸಮಾ ಭೂಮಿರ್ಭವತ್ಯಥ ಸಮಂತತಃ||

ಕಣ್ಣುಮುಚ್ಚಿ ತೆಗೆಯುವುದರೊಳಗೆ ಸ್ಥಾವರ-ಜಂಗಮಗಳೆಲ್ಲವೂ ನಾಶಹೊಂದಿ ಭೂಮಿಯು ಸುತ್ತಲೂ ಆಮೆಯ ಬೆನ್ನಿನಂತೆ ಕಾಣುತ್ತದೆ.

12300007a ಜಗದ್ದಗ್ಧ್ವಾಮಿತಬಲಃ ಕೇವಲಂ ಜಗತೀಂ ತತಃ|

12300007c ಅಂಭಸಾ ಬಲಿನಾ ಕ್ಷಿಪ್ರಮಾಪೂರ್ಯತ ಸಮಂತತಃ||

ಆ ಅಮಿತಬಲಶಾಲಿಯು ಜಗತ್ತನ್ನು ಭಸ್ಮಮಾಡಿ ಉಳಿದ ಕೇವಲ ಭೂಮಿಯನ್ನು ಪ್ರಬಲವಾದ ನೀರಿನ ಪ್ರವಾಹದಿಂದ ಬೇಗನೇ ಎಲ್ಲಕಡೆಗಳಿಂದ ತುಂಬುತ್ತಾನೆ.

12300008a ತತಃ ಕಾಲಾಗ್ನಿಮಾಸಾದ್ಯ ತದಂಭೋ ಯಾತಿ ಸಂಕ್ಷಯಮ್|

12300008c ವಿನಷ್ಟೇಽಂಭಸಿ ರಾಜೇಂದ್ರ ಜಾಜ್ವಲೀತ್ಯನಲೋ ಮಹಾನ್||

ರಾಜೇಂದ್ರ! ಅನಂತರ ಕಾಲಾಗ್ನಿಗೆ ಸಿಲುಕಿ ನೀರು ಬತ್ತಿಹೋಗುತ್ತದೆ. ನೀರು ನಷ್ಟವಾದ ನಂತರ ಆ ಮಹಾ ಅನಲನು ಪ್ರಜ್ವಲಿಸುತ್ತಾನೆ.

12300009a ತಮಪ್ರಮೇಯೋಽತಿಬಲಂ ಜ್ವಲಮಾನಂ ವಿಭಾವಸುಮ್|

12300009c ಊಷ್ಮಾಣಂ ಸರ್ವಭೂತಾನಾಂ ಸಪ್ತಾರ್ಚಿಷಮಥಾಂಜಸಾ||

12300010a ಭಕ್ಷಯಾಮಾಸ ಬಲವಾನ್ವಾಯುರಷ್ಟಾತ್ಮಕೋ ಬಲೀ|

12300010c ವಿಚರನ್ನಮಿತಪ್ರಾಣಸ್ತಿರ್ಯಗೂರ್ಧ್ವಮಧಸ್ತಥಾ||

ಸರ್ವಭೂತಗಳಿಗೂ ಶಾಖವನ್ನುಂಟುಮಾಡುವ ಮಹಾಬಲ ಧಗ-ಧಗಿಸುತ್ತಿರುವ ಏಳು ವಿಧದ ಜ್ವಾಲೆಗಳಿಂದ ಕೂಡಿದ ಅಗ್ನಿಯನ್ನು ಅಪ್ರಮೇಯ ಮಹಾಬಲಿಷ್ಠ ಭಗವಾನ್ ವಾಯುವು ಎಂಟು ವಿಧದ ರೂಪಗಳನ್ನು ಧರಿಸಿ ಮೇಲೆ-ಕೆಳಗೆ ಮತ್ತು ಅಡ್ಡಡ್ಡವಾಗಿ ರಭಸದಿಂದ ಬೀಸುತ್ತಾ ಭಕ್ಷಿಸಿಬಿಡುತ್ತಾನೆ.

12300011a ತಮಪ್ರತಿಬಲಂ ಭೀಮಮಾಕಾಶಂ ಗ್ರಸತೇಽತ್ಮನಾ|

12300011c ಆಕಾಶಮಪ್ಯತಿನದನ್ಮನೋ ಗ್ರಸತಿ ಚಾರಿಕಮ್||

ಆ ಅಪ್ರತಿಮ ಬಲಶಾಲೀ ಭಯಂಕರ ವಾಯುವನ್ನು ಆಕಾಶವು ನುಂಗಿಬಿಡುತ್ತದೆ. ಗರ್ಜನ-ತರ್ಜನಗಳನ್ನು ಮಾಡುವ ಆಕಾಶವನ್ನು ಅದಕ್ಕಿಂತಲೂ ಅಧಿಕ ಬಲಶಾಲಿಯಾದ ಮನಸ್ಸು ನುಂಗಿಬಿಡುತ್ತದೆ.

12300012a ಮನೋ ಗ್ರಸತಿ ಸರ್ವಾತ್ಮಾ ಸೋಽಹಂಕಾರಃ ಪ್ರಜಾಪತಿಃ|

12300012c ಅಹಂಕಾರಂ ಮಹಾನಾತ್ಮಾ ಭೂತಭವ್ಯಭವಿಷ್ಯವಿತ್||

ಸರ್ವಾತ್ಮಾ ಪ್ರಜಾಪತಿ ಅಹಂಕಾರವು ಮನಸ್ಸನ್ನು ನುಂಗುತ್ತದೆ. ಅನಂತರ ಭೂತ-ಭವ್ಯ-ಭವಿಷ್ಯತ್ತುಗಳನ್ನು ತಿಳಿದಿರುವ ಮಹಾನ್ ಆತ್ಮವು ಅಹಂಕಾರವನ್ನು ನುಂಗುತ್ತದೆ.

12300013a ತಮಪ್ಯನುಪಮಾತ್ಮಾನಂ ವಿಶ್ವಂ ಶಂಭುಃ ಪ್ರಜಾಪತಿಃ|

12300013c ಅಣಿಮಾ ಲಘಿಮಾ ಪ್ರಾಪ್ತಿರೀಶಾನೋ ಜ್ಯೋತಿರವ್ಯಯಃ||

12300014a ಸರ್ವತಃಪಾಣಿಪಾದಾಂತಃ ಸರ್ವತೋಕ್ಷಿಶಿರೋಮುಖಃ|

12300014c ಸರ್ವತಃಶ್ರುತಿಮಾಽಲ್ಲೋಕೇ ಸರ್ವಮಾವೃತ್ಯ ತಿಷ್ಠತಿ||

12300015a ಹೃದಯಂ ಸರ್ವಭೂತಾನಾಂ ಪರ್ವಣೋಽಂಗುಷ್ಠಮಾತ್ರಕಃ|

12300015c ಅನುಗ್ರಸತ್ಯನಂತಂ ಹಿ ಮಹಾತ್ಮಾ ವಿಶ್ವಮೀಶ್ವರಃ||

ಅನಂತರ ಎಲ್ಲಕಡೆಗಳಲ್ಲಿಯೂ ಕೈ-ಕಾಲು-ಕಣ್ಣು-ಶಿರಸ್ಸು-ಮುಖ-ಕಿವಿಗಳಿರುವ, ಸಮಸ್ತಲೋಕಗಳನ್ನೂ ಆವರಿಸಿ ನಿಂತಿರುವ, ಅಂಗುಷ್ಠದ ಗಿಣ್ಣಿನಷ್ಟು ಮಾತ್ರವೇ ಆಕಾರದಲ್ಲಿ ಎಲ್ಲ ಪ್ರಾಣಿಗಳ ಹೃದಯಗಳಲ್ಲಿಯೂ ವಿರಾಜಮಾನನಾಗಿರುವ, ಅಣಿಮ-ಲಘಿಮಾ-ಪ್ರಾಪ್ತಿ ಮೊದಲಾದ ಅಷ್ಟೈಶ್ವರ್ಯಗಳಿಗೆ ಒಡೆಯನಾಗಿರುವ, ಜ್ಯೋತಿ, ಅವ್ಯಯ ಮಹಾತ್ಮ ವಿಶ್ವದ ಈಶ್ವರನು ಅನಂತ ಮಹತ್ತತ್ತ್ವವನ್ನು ನುಂಗುತ್ತಾನೆ.

12300016a ತತಃ ಸಮಭವತ್ಸರ್ವಮಕ್ಷಯಾವ್ಯಯಮವ್ರಣಮ್|

12300016c ಭೂತಭವ್ಯಮನುಷ್ಯಾಣಾಂ[1] ಸ್ರಷ್ಟಾರಮನಘಂ ತಥಾ||

ಆಗ ಅಕ್ಷಯ ಅವ್ಯಯ ನಿರ್ವಿಕಾರ ಪರಮಾತ್ಮನ ಸ್ವರೂಪವೇ ಎಲ್ಲವೂ ಆಗುತ್ತವೆ. ಅವನಿಂದಲೇ ಭೂತ-ಭವ್ಯ-ಮನುಷ್ಯರ ಸ್ರಷ್ಟಾರ ಅನಘನ ಸೃಷ್ಟಿಯೂ ಆಗುತ್ತದೆ.

12300017a ಏಷೋಽಪ್ಯಯಸ್ತೇ ರಾಜೇಂದ್ರ ಯಥಾವತ್ಪರಿಭಾಷಿತಃ|

12300017c ಅಧ್ಯಾತ್ಮಮಧಿಭೂತಂ ಚ ಅಧಿದೈವಂ ಚ ಶ್ರೂಯತಾಮ್||

ರಾಜೇಂದ್ರ! ಹೀಗೆ ನಾನು ಸಂಹಾರಕ್ರಮವನ್ನು ಯಥಾವತ್ತಾಗಿ ಹೇಳಿದ್ದೇನೆ. ಮುಂದೆ ನೀನು ಅಧ್ಯಾತ್ಮ, ಅಧಿಭೂತ ಮತ್ತು ಅಧಿದೈವಗಳ ಕುರಿತು ಕೇಳು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಮುನ್ನೂರನೇ ಅಧ್ಯಾಯವು.

A tree in spring against white background Vector Image

[1] ಭೂತಭವ್ಯಭವಿಷ್ಯಾಣಾಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.