Shanti Parva: Chapter 299

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೯೯

ಅವ್ಯಕ್ತ, ಮಹತ್ತತ್ವ, ಅಹಂಕಾರ, ಮನಸ್ಸು, ಮತ್ತು ವಿಷಯಗಳ ಕಾಲ ಪರಿಮಾಣ; ಸೃಷ್ಟಿಯ ವರ್ಣನೆ (1-14); ಇಂದ್ರಿಯಗಳಲ್ಲಿ ಮನಸ್ಸಿನ ಪ್ರಾಧಾನ್ಯತೆ (15-18).

12299001 ಯಾಜ್ಞವಲ್ಕ್ಯ ಉವಾಚ|

12299001a ಅವ್ಯಕ್ತಸ್ಯ ನರಶ್ರೇಷ್ಠ ಕಾಲಸಂಖ್ಯಾಂ ನಿಬೋಧ ಮೇ|

12299001c ಪಂಚ ಕಲ್ಪಸಹಸ್ರಾಣಿ ದ್ವಿಗುಣಾನ್ಯಹರುಚ್ಯತೇ||

ಯಾಜ್ಞವಲ್ಕ್ಯನು ಹೇಳಿದನು: “ನರಶ್ರೇಷ್ಠ! ಅವ್ಯಕ್ತದ[1] ಕಾಲ ಪರಿಮಿತಿಯನ್ನು ಕೇಳು. ಹತ್ತುಸಾವಿರ ಕಲ್ಪಗಳು[2] ಅವ್ಯಕ್ತದ ಒಂದು ಹಗಲು.

12299002a ರಾತ್ರಿರೇತಾವತೀ ಚಾಸ್ಯ ಪ್ರತಿಬುದ್ಧೋ ನರಾಧಿಪ|

12299002c ಸೃಜತ್ಯೋಷಧಿಮೇವಾಗ್ರೇ ಜೀವನಂ ಸರ್ವದೇಹಿನಾಮ್||

ನರಾಧಿಪ! ಅವ್ಯಕ್ತದ ರಾತ್ರಿಯೂ ಅಷ್ಟೇ ಪ್ರಮಾಣದ್ದಾಗಿದೆ. ಮೊಟ್ಟಮೊದಲು ಸರ್ವದೇಹಿಗಳ ಜೀವನಕ್ಕಾಗಿ ಆಹಾರ-ಓಷಧಿಗಳ ಸೃಷ್ಟಿಯಾಯಿತು.

12299003a ತತೋ ಬ್ರಹ್ಮಾಣಮಸೃಜದ್ಧೈರಣ್ಯಾಂಡಸಮುದ್ಭವಮ್|

12299003c ಸಾ ಮೂರ್ತಿಃ ಸರ್ವಭೂತಾನಾಮಿತ್ಯೇವಮನುಶುಶ್ರುಮ||

ಅನಂತರ ಹಿರಣ್ಯ ಅಂಡದಿಂದ ಹೊರಬಂದ ಬ್ರಹ್ಮನ ಸೃಷ್ಟಿಯಾಯಿತು. ಆ ಮೂರ್ತಿಯೇ ಸರ್ವಭೂತಗಳ ಜನ್ಮಸ್ಥಾನವೆಂದು ಕೇಳಿದ್ದೇವೆ.

12299004a ಸಂವತ್ಸರಮುಷಿತ್ವಾಂಡೇ ನಿಷ್ಕ್ರಮ್ಯ ಚ ಮಹಾಮುನಿಃ|

12299004c ಸಂದಧೇಽರ್ಧಂ ಮಹೀಂ ಕೃತ್ಸ್ನಾಂ ದಿವಮರ್ಧಂ ಪ್ರಜಾಪತಿಃ||

ಮಹಾಮುನಿ ಪ್ರಜಾಪತಿಯು ಒಂದು ಸಂವತ್ಸರ ಆ ಅಂಡದಲ್ಲಿಯೇ ವಾಸಿಸಿದ್ದು, ನಂತರ ಹೊರಬಂದು ಅದನ್ನು ಭೂಮಿ ಮತ್ತು ದಿವವೆಂದು ಎರಡಾಗಿ ವಿಭಜಿಸಿದನು.

12299005a ದ್ಯಾವಾಪೃಥಿವ್ಯೋರಿತ್ಯೇಷ ರಾಜನ್ವೇದೇಷು ಪಠ್ಯತೇ|

12299005c ತಯೋಃ ಶಕಲಯೋರ್ಮಧ್ಯಮಾಕಾಶಮಕರೋತ್ ಪ್ರಭುಃ||

ರಾಜನ್! ಇವು ದ್ಯಾವಾಪೃಥಿವೀ ಎಂದೇ ವೇದಗಳಲ್ಲಿ ಹೇಳಲ್ಪಟ್ಟಿವೆ. ಈ ಎರಡು ಭಾಗಗಳ ಮಧ್ಯೆ ಪ್ರಭುವು ಆಕಾಶವನ್ನು ಸೃಷ್ಟಿಸಿದನು.

12299006a ಏತಸ್ಯಾಪಿ ಚ ಸಂಖ್ಯಾನಂ ವೇದವೇದಾಂಗಪಾರಗೈಃ|

12299006c ದಶ ಕಲ್ಪಸಹಸ್ರಾಣಿ ಪಾದೋನಾನ್ಯಹರುಚ್ಯತೇ|

12299006e ರಾತ್ರಿಮೇತಾವತೀಂ ಚಾಸ್ಯ ಪ್ರಾಹುರಧ್ಯಾತ್ಮಚಿಂತಕಾಃ||

ವೇದವೇದಾಂಗಪಾರಗರು ಬ್ರಹ್ಮನ ಕಾಲಪರಿಮಿತಿಯು ಹತ್ತುಸಾವಿರ ಕಲ್ಪಗಳಿಗಿಂದ ಒಂದು ಪಾದ ಊನ ಎಂದರೆ ಏಳು ಸಾವಿರದ ಐದು ನೂರು ಕಲ್ಪಗಳು ಬ್ರಹ್ಮನ ಒಂದು ಹಗಲು ಎಂದು ಹೇಳಿದ್ದಾರೆ. ಆಧ್ಯಾತ್ಮ ಚಿಂತಕರು ಬ್ರಹ್ಮನ ರಾತ್ರಿಯೂ ಅಷ್ಟೇ ಸಮಯವುಳ್ಳದ್ದು ಎಂದು ಹೇಳುತ್ತಾರೆ.

12299007a ಸೃಜತ್ಯಹಂಕಾರಮೃಷಿರ್ಭೂತಂ ದಿವ್ಯಾತ್ಮಕಂ ತಥಾ|

12299007c ಚತುರಶ್ಚಾಪರಾನ್ಪುತ್ರಾನ್ದೇಹಾತ್ಪೂರ್ವಂ ಮಹಾನೃಷಿಃ|

12299007e ತೇ ವೈ ಪಿತೃಭ್ಯಃ ಪಿತರಃ ಶ್ರೂಯಂತೇ ರಾಜಸತ್ತಮ||

ಇವುಗಳನ್ನು ಸೃಷ್ಟಿಸಿ ನಂತರ ಋಷಿಯು ಅಹಂಕಾರವೆಂಬ ದಿವ್ಯ ಭೂತವನ್ನು ಸೃಷ್ಟಿಸಿದನು. ಆ ಮಹಾನೃಷಿಯು ದೇಹವನ್ನು ಪಡೆಯುವುದರ ಮೊದಲೇ ನಾಲ್ಕು[3] ಮಕ್ಕಳನ್ನು ಪಡೆದುಕೊಂಡನು. ರಾಜಸತ್ತಮ! ಅವರು ಪಿತೃಗಳಿಗೂ ಪಿತೃಗಳೆಂದು ಕೇಳಿದ್ದೇವೆ.

12299008a ದೇವಾಃ ಪಿತೃಣಾಂ ಚ ಸುತಾ ದೇವೈರ್ಲೋಕಾಃ ಸಮಾವೃತಾಃ|

12299008c ಚರಾಚರಾ ನರಶ್ರೇಷ್ಠ ಇತ್ಯೇವಮನುಶುಶ್ರುಮ||

ನರಶ್ರೇಷ್ಠ! ದೇವತೆಗಳು[4] ಪಿತೃಗಳಿಗೆ[5] ಮಕ್ಕಳೆಂದು ಕೇಳಿದ್ದೇವೆ. ಅವರಿಂದಲೇ ಚರಾಚರ ಲೋಕಗಳೆಲ್ಲವೂ ಆವೃತವಾಗಿವೆ.

12299009a ಪರಮೇಷ್ಠೀ ತ್ವಹಂಕಾರೋಽಸೃಜದ್ಭೂತಾನಿ ಪಂಚಧಾ|

12299009c ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್||

ಪರಮೇಷ್ಠೀ ಅಹಂಕಾರವು ಪೃಥಿವೀ, ವಾಯು, ಆಕಾಶ, ಜಲ ಮತ್ತು ಐದನೆಯದಾದ ತೇಜಸ್ಸುಗಳೆಂಬ ಪಂಚ ಭೂತಗಳನ್ನು ಸೃಷ್ಟಿಸಿದೆ.

12299010a ಏತಸ್ಯಾಪಿ ನಿಶಾಮಾಹುಸ್ತೃತೀಯಮಿಹ ಕುರ್ವತಃ|

12299010c ಪಂಚ ಕಲ್ಪಸಹಸ್ರಾಣಿ ತಾವದೇವಾಹರುಚ್ಯತೇ||

ಮೂರನೆಯ ಸೃಷ್ಟಿಯಾದ ಅಹಂಕಾರದ ಕಾಲಪರಿಮಾಣವನ್ನೂ ವಿದ್ವಾಂಸರು ಹೇಳಿದ್ದಾರೆ. ಐದು ಸಾವಿರ ಕಲ್ಪಗಳು ಅಹಂಕಾರದ ಒಂದು ರಾತ್ರಿಯಾಗುತ್ತದೆ. ಅಷ್ಟೇ ಪರಿಮಾಣದ ಹಗಲೂ ಸೇರಿ ಅಹಂಕಾರದ ಒಂದು ದಿನವಾಗುತ್ತದೆ.

12299011a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಶ್ಚ ಪಂಚಮಃ|

12299011c ಏತೇ ವಿಶೇಷಾ ರಾಜೇಂದ್ರ ಮಹಾಭೂತೇಷು ಪಂಚಸು|

12299011e ಯೈರಾವಿಷ್ಟಾನಿ ಭೂತಾನಿ ಅಹನ್ಯಹನಿ ಪಾರ್ಥಿವ||

ರಾಜೇಂದ್ರ! ಪಾರ್ಥಿವ! ಪಂಚಮಹಾಭೂತಗಳಲ್ಲಿ ಅನುಕ್ರಮವಾಗಿ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ವಿಶೇಷ ಗುಣಗಳಿವೆ. ಇವು ನಿತ್ಯವೂ ಇರುವವುಗಳನ್ನು ಆವೇಶಿಸಿರುತ್ತವೆ.

12299012a ಅನ್ಯೋನ್ಯಂ ಸ್ಪೃಹಯಂತ್ಯೇತೇ ಅನ್ಯೋನ್ಯಸ್ಯ ಹಿತೇ ರತಾಃ|

12299012c ಅನ್ಯೋನ್ಯಮಭಿಮನ್ಯಂತೇ[6] ಅನ್ಯೋನ್ಯಸ್ಪರ್ಧಿನಸ್ತಥಾ||

ಇವುಗಳು ಭೂತಗಳನ್ನು ಆವೇಶಿಸಿರುವುದರಿಂದ ಅನ್ಯೋನ್ಯರಲ್ಲಿ ಸ್ನೇಹವುಂಟಾಗುತ್ತದೆ. ಅನ್ಯೋನ್ಯರ ಹಿತದಲ್ಲಿ ನಿರತರಾಗಿರುತ್ತಾರೆ. ಅನ್ಯೋನ್ಯರನ್ನು ಗೌರವಿಸುತ್ತಾರೆ ಮತ್ತು ಅನ್ಯೋನ್ಯರಲ್ಲಿ ಸ್ಪರ್ಧಿಸುತ್ತಾರೆ ಕೂಡ.

12299013a ತೇ ವಧ್ಯಮಾನಾ ಅನ್ಯೋನ್ಯಂ ಗುಣೈರ್ಹಾರಿಭಿರವ್ಯಯಾಃ|

12299013c ಇಹೈವ ಪರಿವರ್ತಂತೇ ತಿರ್ಯಗ್ಯೋನಿಪ್ರವೇಶಿನಃ||

ಅನ್ಯೋನ್ಯರನ್ನು ಕೊಂದುಹಾಕುತ್ತಾ ವಿಷಯಾಸಕ್ತ ಪ್ರಾಣಿಗಳು ತಿರ್ಯಗ್ಯೋನಿಗಳಲ್ಲಿ ಪ್ರವೇಶಿಸಿ ಪ್ರಪಂಚದಲ್ಲಿ ಸುತ್ತಾಡುತ್ತಿರುತ್ತವೆ.

12299014a ತ್ರೀಣಿ ಕಲ್ಪಸಹಸ್ರಾಣಿ ಏತೇಷಾಮಹರುಚ್ಯತೇ|

12299014c ರಾತ್ರಿರೇತಾವತೀ ಚೈವ ಮನಸಶ್ಚ ನರಾಧಿಪ||

ಮೂರು ಸಾವಿರ ಕಲ್ಪಗಳು ಇವುಗಳ ಒಂದು ಹಗಲೆಂದು ಹೇಳುತ್ತಾರೆ. ಅಷ್ಟೇ ಸಮಯದ ರಾತ್ರಿಯೂ ಇವಕ್ಕಿವೆ. ನರಾಧಿಪ! ಇದೇ ಕಾಲಮಾನವನ್ನು ಮನಸ್ಸಿಗೂ ಹೇಳಿದ್ದಾರೆ.

12299015a ಮನಶ್ಚರತಿ ರಾಜೇಂದ್ರ ಚರಿತಂ[7] ಸರ್ವಮಿಂದ್ರಿಯೈಃ|

12299015c ನ ಚೇಂದ್ರಿಯಾಣಿ ಪಶ್ಯಂತಿ ಮನ ಏವಾತ್ರ ಪಶ್ಯತಿ||

ರಾಜೇಂದ್ರ! ಇಂದ್ರಿಯಗಳಿಂದ ಸಂಚಾಲಿತಗೊಂಡ ಮನಸ್ಸು ಎಲ್ಲ ವಿಷಯಗಳ ಬಳಿಗೂ ಹೋಗುತ್ತದೆ. ಇಂದ್ರಿಯಗಳು ವಿಷಯಗಳನ್ನು ನೋಡುವುದಿಲ್ಲ. ಮನಸ್ಸು ಮಾತ್ರ ವಿಷಯಗಳನ್ನು ನೋಡುತ್ತದೆ.

12299016a ಚಕ್ಷುಃ ಪಶ್ಯತಿ ರೂಪಾಣಿ ಮನಸಾ ತು ನ ಚಕ್ಷುಷಾ|

12299016c ಮನಸಿ ವ್ಯಾಕುಲೇ ಚಕ್ಷುಃ ಪಶ್ಯನ್ನಪಿ ನ ಪಶ್ಯತಿ|

12299016e ತಥೇಂದ್ರಿಯಾಣಿ ಸರ್ವಾಣಿ ಪಶ್ಯಂತೀತ್ಯಭಿಚಕ್ಷತೇ||

ಕಣ್ಣು ರೂಪಗಳನ್ನು ನೋಡುತ್ತದೆಯಾದರೂ ಅದು ಮನಸ್ಸಿನ ಮೂಲಕ ನೋಡುತ್ತದೆ. ಮನಸ್ಸಿಲ್ಲದೇ ಕಣ್ಣುಗಳು ರೂಪಗಳನ್ನು ನೋಡುವುದಿಲ್ಲ. ಮನಸ್ಸು ವ್ಯಾಕುಲಗೊಂಡಿರುವಾಗ ಕಣ್ಣುಗಳು ನೋಡುತ್ತಿದ್ದರೂ ನೋಡುತ್ತಿರುವುದಿಲ್ಲ. ಹಾಗೆಯೇ ಇಂದ್ರಿಯಗಳೆಲ್ಲವೂ ತಾವೇ ತಮ್ಮ ಕೆಲಸಗಳನ್ನು ಮಾಡುತ್ತಿರುವಂತೆ ತೋರುತ್ತದೆ.

[8]12299017a ಮನಸ್ಯುಪರತೇ ರಾಜನ್ನಿಂದ್ರಿಯೋಪರಮೋ ಭವೇತ್|

12299017c ನ ಚೇಂದ್ರಿಯವ್ಯುಪರಮೇ ಮನಸ್ಯುಪರಮೋ ಭವೇತ್|

12299017e ಏವಂ ಮನಃಪ್ರಧಾನಾನಿ ಇಂದ್ರಿಯಾಣಿ ವಿಭಾವಯೇತ್||

ರಾಜೇಂದ್ರ! ಮನಸ್ಸು ವಿಷಯಗಳಿಂದ ವಿಮುಖಗೊಂಡರೆ ಇಂದ್ರಿಯಗಳೂ ವಿಷಯಗಳಿಂದ ನಿವೃತ್ತವಾಗುತ್ತವೆ. ಆದರೆ ಇಂದ್ರಿಯಗಳು ವಿರಕ್ತವಾದರೂ ಮನಸ್ಸು ವಿರಕ್ತವಾಗುವುದಿಲ್ಲ.

[9]12299018a ಇಂದ್ರಿಯಾಣಾಂ ಹಿ ಸರ್ವೇಷಾಮೀಶ್ವರಂ ಮನ ಉಚ್ಯತೇ|

12299018c ಏತದ್ವಿಶಂತಿ ಭೂತಾನಿ ಸರ್ವಾಣೀಹ ಮಹಾಯಶಾಃ||

ಆದುದರಿಂದ ಇಂದ್ರಿಯಗಳೆಲ್ಲವುಗಳ ಒಡೆಯನು ಮನಸ್ಸು ಎಂದು ಹೇಳುತ್ತಾರೆ. ಈ ಮಹಾಯಶಸ್ವೀ ಮನಸ್ಸು ಸರ್ವ ಭೂತಗಳನ್ನೂ ಆವೇಶಿಸಿದೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ನವನವತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಇನ್ನೂರಾತೊಂಭತ್ತೊಂಭತ್ತನೇ ಅಧ್ಯಾಯವು.

Isolated Big Tree On White Background.Large Trees Database Botanical.. Stock Photo, Picture And Royalty Free Image. Image 108856232.

[1] ಪ್ರಧಾನಕ್ಕೆ ಕಾಲವಿಲ್ಲ? ಇದು ಅವ್ಯಕ್ತ ಪ್ರಕೃತಿಯೇ?

[2] 1 ಕಲ್ಪ=864 ಕೋಟಿ ಸೌರವರ್ಷಗಳು.

[3] ಬುದ್ಧಿ, ಅಹಂಕಾರ, ಮನಸ್ಸು ಮತ್ತು ಚಿತ್ತ.

[4] ಇಂದ್ರಿಯಗಳು

[5] ಪಂಚಮಹಾಭೂತಗಳಿಗೆ

[6] ಅನ್ಯೋನ್ಯಮತಿವರ್ತಂತೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಚಾರಿತಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[8] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ನ ಚೇಂದ್ರಿಯಾಣಿ ಪಶ್ಯಂತಿ ಮನ ಏವಾತ್ರ ಪಶ್ಯತಿ|

[9] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಏವಂ ಮನಃಪ್ರಧಾನಾನಿ ಇಂದ್ರಿಯಾಣಿ ಪ್ರಭಾವಯೇತ್|

Comments are closed.