Shanti Parva: Chapter 257

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೭

ವಿಚಖ್ನು ಗೀತಾ

ವಿಚಖ್ನು ರಾಜನಿಂದ ಅಹಿಂಸಾಧರ್ಮದ ಪ್ರಶಂಸೆ (1-13).

 12257001 ಭೀಷ್ಮ ಉವಾಚ|

12257001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12257001c ಪ್ರಜಾನಾಮನುಕಂಪಾರ್ಥಂ ಗೀತಂ ರಾಜ್ಞಾ ವಿಚಖ್ನುನಾ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ರಾಜ ವಿಚಖ್ನುವು ಪ್ರಜೆಗಳ ಮೇಲಿನ ಅನುಕಂಪದಿಂದ ಹಾಡಿದ ಗೀತೆಯನ್ನು ಉದಾಹರಿಸುತ್ತಾರೆ.

12257002a ಚಿನ್ನಸ್ಥೂಣಂ ವೃಷಂ ದೃಷ್ಟ್ವಾ ವಿರಾವಂ ಚ ಗವಾಂ ಭೃಶಮ್|

12257002c ಗೋಗ್ರಹೇ ಯಜ್ಞವಾಟಸ್ಯ ಪ್ರೇಕ್ಷಮಾಣಃ ಸ ಪಾರ್ಥಿವಃ||

12257003a ಸ್ವಸ್ತಿ ಗೋಭ್ಯೋಽಸ್ತು ಲೋಕೇಷು ತತೋ ನಿರ್ವಚನಂ ಕೃತಮ್|

ಯಜ್ಞವಾಟಿಯಲ್ಲಿ ಕತ್ತನ್ನು ಕತ್ತರಿಸಿದ್ದ ಹೋರಿಯನ್ನು ನೋಡಿ ಗೋಗ್ರಹದಲ್ಲಿ ಗೋವುಗಳು ಬಹಳವಾಗಿ ರೋದಿಸುತ್ತಿರುವುದನ್ನು ಆ ಪಾರ್ಥಿವನು ನೋಡಿ, “ಲೋಕದಲ್ಲಿರುವ ಗೋವುಗಳಿಗೆಲ್ಲವಕ್ಕೂ ಮಂಗಳವಾಗಲಿ” ಎಂಬ ನಿರ್ವಚನವನ್ನು ಮಾಡಿದನು.

12257003c ಹಿಂಸಾಯಾಂ ಹಿ ಪ್ರವೃತ್ತಾಯಾಮಾಶೀರೇಷಾನುಕಲ್ಪಿತಾ||

12257004a ಅವ್ಯವಸ್ಥಿತಮರ್ಯಾದೈರ್ವಿಮೂಢೈರ್ನಾಸ್ತಿಕೈರ್ನರೈಃ|

12257004c ಸಂಶಯಾತ್ಮಭಿರವ್ಯಕ್ತೈರ್ಹಿಂಸಾ ಸಮನುಕೀರ್ತಿತಾ||

ಹಿಂಸಾಪ್ರವೃತ್ತಿಯನ್ನು ನಿಂದಿಸುತ್ತಾ ಈ ರೀತಿ ಹೇಳಿದನು ಕೂಡ: “ಧರ್ಮದ ಮರ್ಯಾದೆಯಿಂದ ಭ್ರಷ್ಟರಾದ ಮೂರ್ಖರು, ನಾಸ್ತಿಕರು, ಆತ್ಮನ ವಿಷಯದಲ್ಲಿ ಸಂದೇಹವುಳ್ಳವರು ಮತ್ತು ಅಪ್ರಸಿದ್ಧರು ಮಾತ್ರ ಹಿಂಸೆಯನ್ನು ಸಮರ್ಥಿಸುತ್ತಾರೆ.

12257005a ಸರ್ವಕರ್ಮಸ್ವಹಿಂಸಾ ಹಿ ಧರ್ಮಾತ್ಮಾ ಮನುರಬ್ರವೀತ್|

12257005c ಕಾಮರಾಗಾದ್ವಿಹಿಂಸಂತಿ ಬಹಿರ್ವೇದ್ಯಾಂ ಪಶೂನ್ನರಾಃ||

ಧರ್ಮಾತ್ಮ ಮನುವು ಸರ್ವಕರ್ಮಗಳಲ್ಲಿ ಅಹಿಂಸೆಯನ್ನೇ ಪ್ರತಿಪಾದಿಸಿದ್ದಾನೆ. ಮನುಷ್ಯರು ತಮ್ಮ ಕಾಮ-ರಾಗಗಳನ್ನು ಪೂರೈಸಿಕೊಳ್ಳಲು ಬಹಿರ್ವೇದಿಯಲ್ಲಿ ಪಶುಗಳನ್ನು ಬಲಿಕೊಡುತ್ತಾರೆ.

12257006a ತಸ್ಮಾತ್ಪ್ರಮಾಣತಃ ಕಾರ್ಯೋ ಧರ್ಮಃ ಸೂಕ್ಷ್ಮೋ ವಿಜಾನತಾ|

12257006c ಅಹಿಂಸೈವ ಹಿ ಸರ್ವೇಭ್ಯೋ ಧರ್ಮೇಭ್ಯೋ ಜ್ಯಾಯಸೀ ಮತಾ||

ಆದುದರಿಂದ ವಿದ್ವಾಂಸನು ವೈದಿಕ ಪ್ರಮಾಣಗಳಿಂದ ಧರ್ಮಸೂಕ್ಷ್ಮವನ್ನು ನಿರ್ಣಯಿಸಬೇಕು. ಎಲ್ಲ ಪ್ರಾಣಿಗಳಿಗೂ ಎಲ್ಲ ಧರ್ಮಗಳಿಗಿಂತಲೂ ಅಹಿಂಸಾಧರ್ಮವೇ ಶ್ರೇಷ್ಠವಾದುದೆಂದು ವಿದ್ವಾಂಸರ ಅಭಿಪ್ರಾಯವಾಗಿದೆ.

12257007a ಉಪೋಷ್ಯ ಸಂಶಿತೋ ಭೂತ್ವಾ ಹಿತ್ವಾ ವೇದಕೃತಾಃ ಶ್ರುತೀಃ|

12257007c ಆಚಾರ ಇತ್ಯನಾಚಾರಾಃ ಕೃಪಣಾಃ ಫಲಹೇತವಃ||

ಉಪವಾಸ ಮಾಡುತ್ತಾ ಕಠಿನ ವ್ರತಗಳನ್ನು ಪರಿಪಾಲಿಸಬೇಕು. ವೇದಗಳಲ್ಲಿರುವ ಕಾಮ್ಯಕರ್ಮಗಳನ್ನು ಪರಿತ್ಯಜಿಸಬೇಕು. ಸಕಾಮ ಕರ್ಮಗಳು ಅನಾಚಾರಕರ್ಮಗಳೆಂದು ಭಾವಿಸಿ ಅವುಗಳಲ್ಲಿ ಪ್ರವೃತ್ತನಾಗಬಾರದು. ಕೃಪಣರು ಮಾತ್ರ ಫಲೇಚ್ಛೆಯಿಂದ ಕರ್ಮಗಳನ್ನು ಮಾಡುತ್ತಾರೆ.

12257008a ಯದಿ ಯಜ್ಞಾಂಶ್ಚ ವೃಕ್ಷಾಂಶ್ಚ ಯೂಪಾಂಶ್ಚೋದ್ದಿಶ್ಯ ಮಾನವಾಃ|

12257008c ವೃಥಾ ಮಾಂಸಾನಿ ಖಾದಂತಿ ನೈಷ ಧರ್ಮಃ ಪ್ರಶಸ್ಯತೇ||

ಯಜ್ಞದ ಯೂಪಸ್ತಂಭಕ್ಕಾಗಿ ಮನುಷ್ಯನು ವೃಕ್ಷಗಳನ್ನು ಕಡಿಯುವುದು ಮತ್ತು ವೃಥಾ ಮಾಂಸಗಳನ್ನು ತಿನ್ನುವುದು – ಇವೆರಡೂ ಧರ್ಮವೆನಿಸಿಕೊಳ್ಳುವುದಿಲ್ಲ.

12257009a ಮಾಂಸಂ ಮಧು ಸುರಾ ಮತ್ಸ್ಯಾ ಆಸವಂ ಕೃಸರೌದನಮ್|

12257009c ಧೂರ್ತೈಃ ಪ್ರವರ್ತಿತಂ ಹ್ಯೇತನ್ನೈತದ್ವೇದೇಷು ಕಲ್ಪಿತಮ್||

12257010a ಕಾಮಾನ್ಮೋಹಾಚ್ಚ ಲೋಭಾಚ್ಚ ಲೌಲ್ಯಮೇತತ್ಪ್ರವರ್ತಿತಮ್|

ಮಾಂಸ, ಜೇನುತುಪ್ಪ, ಸುರೆ, ಮೀನು ಮತ್ತು ಎಳ್ಳನ್ನ – ಇವುಗಳನ್ನು ಧೂರ್ತರು ಯಜ್ಞದ ಸಂಭಾರಗಳೆಂದು ಕಲ್ಪಿಸಿದ್ದಾರೆ. ಆದರೆ ವೇದಗಳಲ್ಲಿ ಇವುಗಳ ಉಪಯೋಗವಿಧಾನಗಳಿರುವುದಿಲ್ಲ. ಕಾಮ, ಮೋಹ, ಲೋಭ, ಮತ್ತು ಲೋಲುಪತೆಗಳಿಂದ ಅವರು ಹೀಗೆ ಮಾಡಿಕೊಂಡಿದ್ದಾರೆ.

12257010c ವಿಷ್ಣುಮೇವಾಭಿಜಾನಂತಿ ಸರ್ವಯಜ್ಞೇಷು ಬ್ರಾಹ್ಮಣಾಃ|

12257010e ಪಾಯಸೈಃ ಸುಮನೋಭಿಶ್ಚ ತಸ್ಯಾಪಿ ಯಜನಂ ಸ್ಮೃತಮ್||

ಸರ್ವಯಜ್ಞಗಳಲ್ಲಿ ಬ್ರಾಹ್ಮಣರು ಪಾಯಸ ಮತ್ತು ಸುಮನೋಹರ ಪುಷ್ಪಗಳಿಂದ ವಿಷ್ಣುವನ್ನೇ ಪೂಜಿಸುತ್ತಾರೆ. ಅದೂ ಕೂಡ ಯಜ್ಞವೆಂದೇ ಹೇಳಲ್ಪಟ್ಟಿದೆ.

12257011a ಯಜ್ಞಿಯಾಶ್ಚೈವ ಯೇ ವೃಕ್ಷಾ ವೇದೇಷು ಪರಿಕಲ್ಪಿತಾಃ|

12257011c ಯಚ್ಚಾಪಿ ಕಿಂ ಚಿತ್ಕರ್ತವ್ಯಮನ್ಯಚ್ಚೋಕ್ಷೈಃ ಸುಸಂಸ್ಕೃತಮ್|

12257011e ಮಹಾಸತ್ತ್ವೈಃ ಶುದ್ಧಭಾವೈಃ ಸರ್ವಂ ದೇವಾರ್ಹಮೇವ ತತ್||

ವೇದಗಳಲ್ಲಿ ಯಜ್ಞಗಳಿಗೆ ಯಾವ ವೃಕ್ಷಗಳನ್ನು ಹೇಳಲಾಗಿವೆಯೋ ಅವುಗಳನ್ನು ಶುದ್ಧ ಆಚಾರವಿಚಾರವುಳ್ಳ ಸಾತ್ತ್ವಿಕ ಪುರುಷನು ವಿಶುದ್ಧ ಭಾವನೆಯ ಪ್ರೋಕ್ಷಣೆಯಿಂದಲೇ ಹವಿಸ್ಸಾಗಿ ಸಿದ್ಧಗೊಳಿಸಿದರೆ ಅದೇ ದೇವತೆಗಳಿಗೆ ಅರ್ಹವಾಗುತ್ತದೆ.””

12257012 ಯುಧಿಷ್ಠಿರ ಉವಾಚ|

12257012a ಶರೀರಮಾಪದಶ್ಚಾಪಿ ವಿವದಂತ್ಯವಿಹಿಂಸತಃ|

12257012c ಕಥಂ ಯಾತ್ರಾ ಶರೀರಸ್ಯ ನಿರಾರಂಭಸ್ಯ ಸೇತ್ಸ್ಯತಿ||

ಯುಧಿಷ್ಠಿರನು ಹೇಳಿದನು: “ಶರೀರಕ್ಕೆ ಆಪತ್ತುಂಟಾದಾಗ ಹಿಂಸೆ-ಅಹಿಂಸೆಗಳ ನಡುವೆ ಘರ್ಷಣೆಯಾಗುತ್ತದೆ. ಅಹಿಂಸಾವಾದಿಯು ಶರೀರದ ಯಾತ್ರೆಯನ್ನು ಹೇಗೆ ನಿರ್ವಹಿಸುತ್ತಾನೆ?”

12257013 ಭೀಷ್ಮ ಉವಾಚ|

12257013a ಯಥಾ ಶರೀರಂ ನ ಗ್ಲಾಯೇನ್ನೇಯಾನ್ಮೃತ್ಯುವಶಂ ಯಥಾ|

12257013c ತಥಾ ಕರ್ಮಸು ವರ್ತೇತ ಸಮರ್ಥೋ ಧರ್ಮಮಾಚರೇತ್||

ಭೀಷ್ಮನು ಹೇಳಿದನು: “ಶರೀರವು ಕ್ಷೀಣಿಸಿ ಅಕಾಲಮೃತ್ಯುವಿಗೆ ವಶವಾಗದಂತೆ ಕರ್ಮಗಳನ್ನು ಮಾಡುತ್ತಿರಬೇಕು. ಶರೀರಸಾಮರ್ಥ್ಯವುಳ್ಳವನೇ ಧರ್ಮವನ್ನು ಆಚರಿಸಬಲ್ಲನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ವಿಚಖ್ನುಗೀತಾಯಾಂ ಸಪ್ತಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ವಿಚಖ್ನುಗೀತಾ ಎನ್ನುವ ಇನ್ನೂರಾಐವತ್ತೇಳನೇ ಅಧ್ಯಾಯವು.

White Background Mandala — Otauna

Comments are closed.