Shanti Parva: Chapter 256

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೬

ಜಾಜಲಿಗೆ ಪಕ್ಷಿಗಳ ಉಪದೇಶ (1-22).

12256001 ತುಲಾಧಾರ ಉವಾಚ|

12256001a ಸದ್ಭಿರ್ವಾ ಯದಿ ವಾಸದ್ಭಿರಯಂ ಪಂಥಾಃ ಸಮಾಶ್ರಿತಃ|

12256001c ಪ್ರತ್ಯಕ್ಷಂ ಕ್ರಿಯತಾಂ ಸಾಧು ತತೋ ಜ್ಞಾಸ್ಯಸಿ ತದ್ಯಥಾ||

ತುಲಾಧಾರನು ಹೇಳಿದನು: “ನಾನು ನಿರೂಪಿಸಿದ ಧರ್ಮ ಮಾರ್ಗವನ್ನು ಸತ್ಪುರುಷರು ಆಚರಿಸುವರೇ ಅಥವಾ ಅಸತ್ಪುರುಷರು ಆಚರಿಸುವರೇ ಎನ್ನುವುದನ್ನು ಚೆನ್ನಾಗಿ ಸಮಾಲೋಚಿಸಿ ನೋಡು. ನಂತರ ನಿನಗೆ ಇದರ ಯಥಾರ್ಥಜ್ಞಾನವಾಗುತ್ತದೆ.

12256002a ಏತೇ ಶಕುಂತಾ ಬಹವಃ ಸಮಂತಾದ್ವಿಚರಂತಿ ಹಿ|

12256002c ತವೋತ್ತಮಾಂಗೇ ಸಂಭೂತಾಃ ಶ್ಯೇನಾಶ್ಚಾನ್ಯಾಶ್ಚ ಜಾತಯಃ||

ಅಲ್ಲಿ ನೋಡು. ಆಕಾಶದಲ್ಲಿ ಗಿಡಗವೇ ಮೊದಲಾದ ಅನೇಕ ಜಾತಿಯ ಪಕ್ಷಿಗಳು ಸುತ್ತಲೂ ಹಾರಾಡುತ್ತಿವೆ. ಅವುಗಳಲ್ಲಿ ನಿನ್ನ ತಲೆಯ ಮೇಲೆ ಹುಟ್ಟಿ ಬೆಳೆದ ಪಕ್ಷಿಗಳೂ ಇವೆ.

12256003a ಆಹ್ವಯೈನಾನ್ಮಹಾಬ್ರಹ್ಮನ್ವಿಶಮಾನಾಂಸ್ತತಸ್ತತಃ|

12256003c ಪಶ್ಯೇಮಾನ್ ಹಸ್ತಪಾದೇಷು ಶ್ಲಿಷ್ಟಾನ್ದೇಹೇ ಚ ಸರ್ವಶಃ||

ಮಹಾಬ್ರಹ್ಮನ್! ಅಲ್ಲಲ್ಲಿ ಹೋಗಿ ಸೇರಿಕೊಳ್ಳುವ ಪಕ್ಷಿಗಳನ್ನು ನೀನು ಆಹ್ವಾನಿಸು. ಕಾಲುಗಳಲ್ಲಿ ದೇಹಗಳಲ್ಲಿ ಅಡಗಿಸಿಕೊಂಡು ಹಾರಾಡುತ್ತಿರುವ ಅವುಗಳನ್ನು ನೋಡು.

12256004a ಸಂಭಾವಯಂತಿ ಪಿತರಂ ತ್ವಯಾ ಸಂಭಾವಿತಾಃ ಖಗಾಃ|

12256004c ಅಸಂಶಯಂ ಪಿತಾ ಚ ತ್ವಂ ಪುತ್ರಾನಾಹ್ವಯ ಜಾಜಲೇ||

ಜಾಜಲೇ! ನಿನ್ನಿಂದ ಪಾಲಿಸಲ್ಪಟ್ಟ ಆ ಪಕ್ಷಿಗಳು ನಿನ್ನನ್ನು ತಂದೆಯೆಂದೇ ಭಾವಿಸಿವೆ. ನೀನು ಅವುಗಳ ತಂದೆಯೆನ್ನುವುದರಲ್ಲಿ ಸಂಶಯವೇ ಇಲ್ಲ. ನಿನ್ನ ಪುತ್ರರನ್ನು ಕರೆ!””

12256005 ಭೀಷ್ಮ ಉವಾಚ|

12256005a ತತೋ ಜಾಜಲಿನಾ ತೇನ ಸಮಾಹೂತಾಃ ಪತತ್ರಿಣಃ|

12256005c ವಾಚಮುಚ್ಚಾರಯನ್ದಿವ್ಯಾಂ ಧರ್ಮಸ್ಯ ವಚನಾತ್ಕಿಲ||

ಭೀಷ್ಮನು ಹೇಳಿದನು: ”ಆಗ ಜಾಜಲಿಯು ಆ ಪಕ್ಷಿಗಳನ್ನು ಕರೆದನು. ಅವನ ಧರ್ಮಯುಕ್ತ ಮಾತುಗಳನ್ನು ಕೇಳಿ ಆ ಪಕ್ಷಿಗಳೂ ಅಲ್ಲಿಗೆ ಬಂದು ದಿವ್ಯ ಮಾತುಗಳನ್ನು ಹೇಳಿದವು:

12256006a ಅಹಿಂಸಾದಿಕೃತಂ ಕರ್ಮ ಇಹ ಚೈವ ಪರತ್ರ ಚ|

12256006c ಸ್ಪರ್ಧಾ ನಿಹಂತಿ ವೈ ಬ್ರಹ್ಮನ್ಸಾಹತಾ ಹಂತಿ ತಂ ನರಮ್||

“ಅಹಿಂಸೆ, ದಯೆ ಇತ್ಯಾದಿ ಗುಣಗಳಿಂದ ಪ್ರೇರಿತವಾಗಿ ಮಾಡಿದ ಕರ್ಮವು ಇಹ-ಪರ ಲೋಕಗಳೆರಡರಲ್ಲಿಯೂ ಉತ್ತಮ ಫಲವನ್ನು ಕೊಡುತ್ತದೆ. ಮನಸ್ಸಿನಲ್ಲಿ ಹಿಂಸೆಯ ಭಾವನೆಯೇನಾದರೂ ಇದ್ದರೆ ಅದು ಶ್ರದ್ಧೆಯನ್ನೇ ನಾಶಗೊಳಿಸುತ್ತದೆ. ಶ್ರದ್ಧೆಯಿಲ್ಲದ ಕರ್ಮವು ಕರ್ತೃವಾದ ಮನುಷ್ಯನನ್ನೂ ನಾಶಗೊಳಿಸುತ್ತದೆ.

12256007a ಶ್ರದ್ಧಾವೃದ್ಧಂ ವಾಙ್ಮನಸೀ ನ ಯಜ್ಞಸ್ತ್ರಾತುಮರ್ಹತಿ|

12256007c ಅತ್ರ ಗಾಥಾ ಬ್ರಹ್ಮಗೀತಾಃ ಕೀರ್ತಯಂತಿ ಪುರಾವಿದಃ||

ಮಂತ್ರಗಳನ್ನು ಸ್ವರಸಹಿತವಾಗಿ ಹೇಳಿದರೂ, ಮನಸ್ಸನ್ನು ಸಂಯಮದಲ್ಲಿಟ್ಟುಕೊಂಡಿದ್ದರೂ, ಶ್ರದ್ಧೆಯಿಲ್ಲದೇ ಮಾಡಿದ ಯಜ್ಞವು ಕರ್ತೃವನ್ನು ರಕ್ಷಿಸುವುದಿಲ್ಲ. ಈ ವಿಷಯದಲ್ಲಿ ಹಿಂದಿನ ಚರಿತ್ರೆಯನ್ನು ತಿಳಿದವರು ಬ್ರಹ್ಮನ ಗೀತೆಗಳಿಂದ ಕೂಡಿದ ಹಾಡುಗಳನ್ನು ಕೀರ್ತನೆ ಮಾಡುತ್ತಾರೆ.

12256008a ಶುಚೇರಶ್ರದ್ದಧಾನಸ್ಯ ಶ್ರದ್ದಧಾನಸ್ಯ ಚಾಶುಚೇಃ|

12256008c ದೇವಾಶ್ಚಿತ್ತಮಮನ್ಯಂತ ಸದೃಶಂ ಯಜ್ಞಕರ್ಮಣಿ||

ಯಜ್ಞಕರ್ಮಗಳಲ್ಲಿ ಶ್ರದ್ಧೆಯಿಲ್ಲದವನು ಶುಚಿಯಾದ ದ್ರವ್ಯಗಳನ್ನು ಬಳಸಿದರೂ ಮತ್ತು ಶ್ರದ್ಧೆಯಿದ್ದವನು ಅಶುಚಿಯಾದ ದ್ರವ್ಯಗಳನ್ನು ಬಳಸಿದರೂ ಅವೆರಡನ್ನೂ ದೇವತೆಗಳು ಒಂದೇ ಸಮವೆಂದು ಭಾವಿಸುವರು.

12256009a ಶ್ರೋತ್ರಿಯಸ್ಯ ಕದರ್ಯಸ್ಯ ವದಾನ್ಯಸ್ಯ ಚ ವಾರ್ಧುಷೇಃ|

12256009c ಮೀಮಾಂಸಿತ್ವೋಭಯಂ ದೇವಾಃ ಸಮಮನ್ನಮಕಲ್ಪಯನ್||

ಅದೇರೀತಿಯಲ್ಲಿ ಕೃಪಣನಾದ ಶ್ರೋತ್ರೀಯನ ಅನ್ನವನ್ನೂ ಮತ್ತು ಉದಾರಿಯಾದ ಬಡ್ಡಿಯ ಹಣದಿಂದ ಜೀವಿಸುವವನ ಅನ್ನವನ್ನೂ ದೇವತೆಗಳು ಚೆನ್ನಾಗಿ ಪರ್ಯಾಯಲೋಚಿಸಿ ಸಮಾನವೆಂದು ನಿಶ್ಚಯಿಸಿದರು.

12256010a ಪ್ರಜಾಪತಿಸ್ತಾನುವಾಚ ವಿಷಮಂ ಕೃತಮಿತ್ಯುತ|

12256010c ಶ್ರದ್ಧಾಪೂತಂ ವದಾನ್ಯಸ್ಯ ಹತಮಶ್ರದ್ಧಯೇತರತ್|

12256010e ಭೋಜ್ಯಮನ್ನಂ ವದಾನ್ಯಸ್ಯ ಕದರ್ಯಸ್ಯ ನ ವಾರ್ಧುಷೇಃ||

ಪ್ರಜಾಪತಿಯು ಅವರಿಗೆ ಹೇಳಿದನು: “ನೀವು ಕಲ್ಪಿಸಿರುವ ಸಮಾನತೆಯು ಸರಿಯಲ್ಲ. ಉದಾರಿಯಾದವನು ಅಶುಚಿಯಾಗಿದ್ದರೂ ಶ್ರದ್ಧಾಪೂರ್ವಕವಾಗಿ ಕೊಡುವ ಅನ್ನವೇ ಪವಿತ್ರವಾದುದು. ಉದಾರಿಯಾದವನು ಶುಚಿಯಾಗಿದ್ದರೂ ಶ್ರದ್ಧಾಪೂರ್ವಕವಾಗಿ ಕೊಡದಿದ್ದರೆ ಅದು ಅಪವಿತ್ರವಾಗುತ್ತದೆ, ಮತ್ತು ಅಂತಹ ದಾನವು ನಷ್ಟಪ್ರಾಯವೇ ಆಗುತ್ತದೆ. ಕೃಪಣನಾದ ಶ್ರೋತ್ರಿಯನ ಅನ್ನವನ್ನು ತಿನ್ನಬಾರದು. ಉದಾರಿಯಾದ ಬಡ್ಡೀಹಣದಿಂದ ಜೀವಿಸುವವನ ಅನ್ನವನ್ನು ತಿನ್ನಬಹುದು.

12256011a ಅಶ್ರದ್ದಧಾನ ಏವೈಕೋ ದೇವಾನಾಂ ನಾರ್ಹತೇ ಹವಿಃ|

12256011c ತಸ್ಯೈವಾನ್ನಂ ನ ಭೋಕ್ತವ್ಯಮಿತಿ ಧರ್ಮವಿದೋ ವಿದುಃ||

ಶ್ರದ್ಧೆಯಿಲ್ಲದಿರುವ ಯಾರೊಬ್ಬನೂ ದೇವತೆಗಳಿಗೆ ಹವಿಸ್ಸನ್ನು ಅರ್ಪಿಸಲು ಅರ್ಹನಲ್ಲ. ಅಶ್ರದ್ಧೆಯಿಂದ ಕೂಡಿರುವವನ ಅನ್ನವನ್ನು ತಿನ್ನಲೇಬಾರದೆಂದು ಧರ್ಮವನ್ನು ತಿಳಿದವರು ಹೇಳುತ್ತಾರೆ.

12256012a ಅಶ್ರದ್ಧಾ ಪರಮಂ ಪಾಪಂ ಶ್ರದ್ಧಾ ಪಾಪಪ್ರಮೋಚನೀ|

12256012c ಜಹಾತಿ ಪಾಪಂ ಶ್ರದ್ಧಾವಾನ್ಸರ್ಪೋ ಜೀರ್ಣಾಮಿವ ತ್ವಚಮ್||

ಅಶ್ರದ್ಧೆಯು ಪರಮ ಪಾಪವು. ಶ್ರದ್ಧೆಯು ಪಾಪವನ್ನು ಕಳೆಯುವಂಥಹುದು. ಸರ್ಪವು ಪೊರೆ ಬಿಡುವಂತೆ ಶ್ರದ್ಧಾವಾನನು ಪಾಪವನ್ನು ತೊರೆಯುತ್ತಾನೆ.

12256013a ಜ್ಯಾಯಸೀ ಯಾ ಪವಿತ್ರಾಣಾಂ ನಿವೃತ್ತಿಃ ಶ್ರದ್ಧಯಾ ಸಹ|

12256013c ನಿವೃತ್ತಶೀಲದೋಷೋ ಯಃ ಶ್ರದ್ಧಾವಾನ್ಪೂತ ಏವ ಸಃ||

ಶ್ರದ್ಧೆಯೊಂದಿಗೆ ನಿವೃತ್ತಿ (ಕಾಮಕ್ರೋಧಾದಿಗಳಿಂದ ನಿವೃತ್ತಿ)ಯೂ ಪವಿತ್ರಕಾರ್ಯಗಳಲ್ಲಿ ಹಿರಿದಾದುದು. ಶೀಲಕ್ಕೆ ದೋಷವನ್ನುಂಟುಮಾಡುವ ಕಾಮ-ಕ್ರೋಧಗಳಿಂದ ನಿವೃತ್ತಿಹೊಂದಿದ ಶ್ರದ್ಧಾವಾನನು ಪರಮ ಪವಿತ್ರನೇ ಸರಿ.

12256014a ಕಿಂ ತಸ್ಯ ತಪಸಾ ಕಾರ್ಯಂ ಕಿಂ ವೃತ್ತೇನ ಕಿಮಾತ್ಮನಾ|

12256014c ಶ್ರದ್ಧಾಮಯೋಽಯಂ ಪುರುಷೋ ಯೋ ಯಚ್ಚ್ರದ್ಧಃ ಸ ಏವ ಸಃ||

ಶ್ರದ್ಧಾವಂತನಿಗೆ ತಪಸ್ಸಿನಿಂದ ಆಗಬೇಕಾದುದೇನಿದೆ? ಆಚಾರ-ವ್ಯವಹಾರಗಳಿಂದಾಗಲೀ, ಆತ್ಮಚಿಂತನೆಯಿಂದಾಗಲೀ ಆಗಬೇಕಾದುದೇನಿದೆ? ಅಂತಹ ಪುರುಷನು ಯಾವುದರ ಮೇಲೆ ಶ್ರದ್ಧೆಯಿಡುವನೋ ಅವನು ಅದೇ ಆಗಿಬಿಡುತ್ತಾನೆ[1].

12256015a ಇತಿ ಧರ್ಮಃ ಸಮಾಖ್ಯಾತಃ ಸದ್ಭಿರ್ಧರ್ಮಾರ್ಥದರ್ಶಿಭಿಃ|

12256015c ವಯಂ ಜಿಜ್ಞಾಸಮಾನಾಸ್ತ್ವಾ ಸಂಪ್ರಾಪ್ತಾ ಧರ್ಮದರ್ಶನಾತ್||

ಧರ್ಮಾರ್ಥದರ್ಶಿಗಳು ಧರ್ಮವನ್ನು ಹೀಗೆಯೇ ವ್ಯಾಖ್ಯಾನಿಸಿದ್ದಾರೆ. ನಾವೂ ಈ ಧರ್ಮದ ವಿಷಯದಲ್ಲಿ ಜಿಜ್ಞಾಸೆಮಾಡುತ್ತಿದ್ದಾಗ ಶ್ರದ್ಧೆಯ ಸಂಬಂಧವಾದ ಈ ಧರ್ಮವು ಧರ್ಮದರ್ಶನನಿಂದ ನಮಗೆ ತಿಳಿಯಿತು.

12256016a ಸ್ಪರ್ಧಾಂ ಜಹಿ ಮಹಾಪ್ರಾಜ್ಞ ತತಃ ಪ್ರಾಪ್ಸ್ಯಸಿ ಯತ್ಪರಮ್|

12256016c ಶ್ರದ್ಧಾವಾನ್ ಶ್ರದ್ದಧಾನಶ್ಚ ಧರ್ಮಾಂಶ್ಚೈವೇಹ ವಾಣಿಜಃ[2]|

12256016e ಸ್ವವರ್ತ್ಮನಿ ಸ್ಥಿತಶ್ಚೈವ ಗರೀಯಾನೇಷ ಜಾಜಲೇ||

ಮಹಾಪ್ರಾಜ್ಞ! ಸ್ಪರ್ಧೆಯನ್ನು ತೊರೆ. ಅನಂತರ ಪರಮ ಪದವನ್ನು ಹೊಂದುವೆ. ಜಾಜಲೇ! ಈ ಶ್ರದ್ಧಾವಂತ ಶ್ರದ್ಧಾಳು ವಾಣಿಜನು ಧರ್ಮದ ಸ್ವರೂಪನೇ ಆಗಿರುತ್ತಾನೆ. ಶ್ರದ್ಧೆಯಿಂದ ಸ್ವಧರ್ಮದಲ್ಲಿ ನಿರತನಾಗಿರುವವನು ಎಲ್ಲರಿಗಿಂತಲೂ ಶ್ರೇಷ್ಠನೆನಿಸಿಕೊಳ್ಳುತ್ತಾನೆ.”

12256017a ಏವಂ ಬಹುಮತಾರ್ಥಂ ಚ ತುಲಾಧಾರೇಣ ಭಾಷಿತಮ್|

12256017c ಸಮ್ಯಕ್ಚೈವಮುಪಾಲಬ್ಧೋ ಧರ್ಮಶ್ಚೋಕ್ತಃ ಸನಾತನಃ||

ಹೀಗೆ ತುಲಾಧಾರನು ಬಹುಮತಾರ್ಥಗಳುಳ್ಳ, ಉತ್ತಮ ಪ್ರಯೋಜನವುಳ್ಳ ಮಾತುಗಳಿಂದ ಸನಾತನ ಧರ್ಮವನ್ನು ಹೇಳಿದನು.

12256018a ತಸ್ಯ ವಿಖ್ಯಾತವೀರ್ಯಸ್ಯ ಶ್ರುತ್ವಾ ವಾಕ್ಯಾನಿ ಸ ದ್ವಿಜಃ|

12256018c ತುಲಾಧಾರಸ್ಯ ಕೌಂತೇಯ ಶಾಂತಿಮೇವಾನ್ವಪದ್ಯತ||

ಕೌಂತೇಯ! ವಿಖ್ಯಾತವಾದ ಮತ್ತು ಪ್ರಭಾವಶಾಲಿಯಾದ ತುಲಾಧಾರನ ಮಾತುಗಳನ್ನು ಕೇಳಿ ದ್ವಿಜನು ಶಾಂತನಾದನು.

12256019a ತತೋಽಚಿರೇಣ ಕಾಲೇನ ತುಲಾಧಾರಃ ಸ ಏವ ಚ|

12256019c ದಿವಂ ಗತ್ವಾ ಮಹಾಪ್ರಾಜ್ಞೌ ವಿಹರೇತಾಂ ಯಥಾಸುಖಮ್|

12256019e ಸ್ವಂ ಸ್ವಂ ಸ್ಥಾನಮುಪಾಗಮ್ಯ ಸ್ವಕರ್ಮಫಲನಿರ್ಜಿತಮ್||

ನಂತರ ಸ್ವಲ್ಪವೇ ಸಮಯದಲ್ಲಿ ಮಹಾಪ್ರಾಜ್ಞರಾದ ತುಲಾಧಾರ ಮತ್ತು ಅವನು, ತಮ್ಮ ತಮ್ಮ ಕರ್ಮಫಲಗಳಿಂದ ಜಯಿಸಲ್ಪಟ್ಟ  ದಿವಕ್ಕೆ ಹೋಗಿ ಯಥಾಸುಖವಾಗಿ ವಿಹರಿಸಿದರು.

12256020a ಸಮಾನಾಂ ಶ್ರದ್ದಧಾನಾನಾಂ ಸಂಯತಾನಾಂ ಸುಚೇತಸಾಮ್|

12256020c ಕುರ್ವತಾಂ ಯಜ್ಞ ಇತ್ಯೇವ ನ ಯಜ್ಞೋ ಜಾತು ನೇಷ್ಯತೇ||

ಲಾಭಾಲಾಭಗಳು ಸಮನಾಗಿರುವ, ಶ್ರದ್ಧಾವಂತ, ಜಿತೇಂದ್ರಿಯ, ಶುದ್ಧಚಿತ್ತರು ಕರ್ತ್ಯವ್ಯವೆಂದು ಮಾಡುವ ಯಜ್ಞವು ಎಂದೂ ನಿಷ್ಫಲವಾಗುವುದಿಲ್ಲ.

12256021a ಶ್ರದ್ಧಾ ವೈ ಸಾತ್ತ್ವಿಕೀ ದೇವೀ[3] ಸೂರ್ಯಸ್ಯ ದುಹಿತಾ ನೃಪ|

12256021c ಸಾವಿತ್ರೀ ಪ್ರಸವಿತ್ರೀ ಚ ಜೀವವಿಶ್ವಾಸಿನೀ ತಥಾ[4]||

ನೃಪ! ದೇವೀ ಶ್ರದ್ಧೆಯು ಸಾತ್ತ್ವಿಕೀ. ಸೂರ್ಯನ ಪುತ್ರಿಯು. ಅವಳು ಸಾವಿತ್ರೀ, ಪ್ರಸವಿತ್ರೀ ಮತ್ತು ಹಾಗೆಯೇ ಜೀವವಿಶ್ವಾಸಿನಿ ಕೂಡ.

12256022a ವಾಗ್ವೃದ್ಧಂ ತ್ರಾಯತೇ ಶ್ರದ್ಧಾ ಮನೋವೃದ್ಧಂ ಚ ಭಾರತ|

12256022c ಯಥೌಪಮ್ಯೋಪದೇಶೇನ ಕಿಂ ಭೂಯಃ ಶ್ರೋತುಮಿಚ್ಚಸಿ||

ಭಾರತ! ಮಂತ್ರಗಳನ್ನು ಹೇಳುವಾಗ ವರ್ಣಗಳ ಉಚ್ಛಾರಣೆಯಲ್ಲಿ ಅಥವಾ ಸ್ವರದಲ್ಲಿ ವ್ಯತ್ಯಾಸವಾದರೂ ಅಥವಾ ಮನಸ್ಸಿನಲ್ಲಿ ಅಸ್ಥಿರತೆಯಿದ್ದರೂ ಶ್ರದ್ಧೆಯು ಸ್ಖಾಲಿತ್ಯದೋಷವನ್ನು ನಿವಾರಿಸುತ್ತದೆ. ಈ ಉಪದೇಶವನ್ನು ಉಪಮೆಯಾಗಿ ಹೇಳಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ತುಲಾಭಾರಜಾಜಲಿಸಂವಾದೇ ಷಟ್ಪಂಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ತುಲಾಭಾರಜಾಜಲಿಸಂವಾದ ಎನ್ನುವ ಇನ್ನೂರಾಐವತ್ತಾರನೇ ಅಧ್ಯಾಯವು.

16 Sunflower Facts That Are So Sweet - ProFlowers Blog

[1] ಶ್ರದ್ಧಾಮಯೋಽಯಂ ಪುರುಷಃ ಯೋ ಯಚ್ಛ್ರದ್ಧಃ ಸ ಏವ ಸಃ| (ಭೀಷ್ಮಪರ್ವ, ಭಗವದ್ಗೀತಾಪರ್ವ, ಅಧ್ಯಾಯ 39, ಶ್ಲೋಕ 3).

[2] ಧರ್ಮಶ್ಚೈವ ಹಿ ಜಾಜಲೇ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ವೈವಸ್ವತೀ ಸೇಯಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಬಹಿರ್ವಾಙ್ಮನಸೀ ತತಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.