Shanti Parva: Chapter 255

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೫

ತುಲಾಧಾರನು ಜಾಜಲಿಗೆ ಆತ್ಮಯಜ್ಞದ ಧರ್ಮವನ್ನು ಉಪದೇಶಿಸಿದುದು (1-41).

12255001 ಜಾಜಲಿರುವಾಚ|

12255001a ಯಥಾ ಪ್ರವರ್ತಿತೋ ಧರ್ಮಸ್ತುಲಾಂ ಧಾರಯತಾ ತ್ವಯಾ|

12255001c ಸ್ವರ್ಗದ್ವಾರಂ ಚ ವೃತ್ತಿಂ ಚ ಭೂತಾನಾಮವರೋತ್ಸ್ಯತೇ||

ಜಾಜಲಿಯು ಹೇಳಿದನು: “ತಕ್ಕಡಿಯನ್ನು ಹಿಡಿದಿರುವ ನೀನು ಪ್ರಾಣಿಗಳಿಗೆ ಸ್ವರ್ಗದ ದ್ವಾರವಾಗಿರುವ ವೃತ್ತಿಯನ್ನು ಮುಂದುವರಿಸಿರುವೆ.

12255002a ಕೃಷ್ಯಾ ಹ್ಯನ್ನಂ ಪ್ರಭವತಿ ತತಸ್ತ್ವಮಪಿ ಜೀವಸಿ|

12255002c ಪಶುಭಿಶ್ಚೌಷಧೀಭಿಶ್ಚ ಮರ್ತ್ಯಾ ಜೀವಂತಿ ವಾಣಿಜ||

ವಾಣಿಜ! ಆದರೆ ಕೃಷಿಯಿಂದಲೇ ಅನ್ನವು ಹುಟ್ಟುತ್ತದೆ. ಅದೇ ಅನ್ನದಿಂದ ನೀನೂ ಜೀವಿಸಿರುವೆ. ಪಶುಗಳು ಮತ್ತು ಔಷಧಿಗಳಿಂದ ಮನುಷ್ಯರು ಜೀವನ ನಡೆಸುತ್ತಾರೆ.

12255003a ಯತೋ ಯಜ್ಞಃ ಪ್ರಭವತಿ ನಾಸ್ತಿಕ್ಯಮಪಿ ಜಲ್ಪಸಿ|

12255003c ನ ಹಿ ವರ್ತೇದಯಂ ಲೋಕೋ ವಾರ್ತಾಮುತ್ಸೃಜ್ಯ ಕೇವಲಮ್||

ಅದರಿಂದಲೇ ಯಜ್ಞವೂ ನಡೆಯುತ್ತದೆ. ನೀನು ನಾಸ್ತಿಕ್ಯನಂತೆ ಕೂಡ ಮಾತನಾಡುತ್ತಿದ್ದೀಯೆ. ನೀನು ಹೇಳಿದಂತೆ ಇವೆಲ್ಲವನ್ನೂ ನಿಲ್ಲಿಸಿಬಿಟ್ಟರೆ ಲೋಕವೇ ಉಳಿಯುವುದಿಲ್ಲ.”

12255004 ತುಲಾಧಾರ ಉವಾಚ|

12255004a ವಕ್ಷ್ಯಾಮಿ ಜಾಜಲೇ ವೃತ್ತಿಂ ನಾಸ್ಮಿ ಬ್ರಾಹ್ಮಣ ನಾಸ್ತಿಕಃ|

12255004c ನ ಚ ಯಜ್ಞಂ ವಿನಿಂದಾಮಿ ಯಜ್ಞವಿತ್ತು ಸುದುರ್ಲಭಃ||

ತುಲಾಧಾರನು ಹೇಳಿದನು: “ಜಾಜಲೇ! ಬ್ರಾಹ್ಮಣ! ನಾನು ನಿನಗೆ ಹಿಂಸಾರಹಿತ ವೃತ್ತಿಯ ಕುರಿತು ಹೇಳುತ್ತೇನೆ. ನಾನು ನಾಸ್ತಿಕನಲ್ಲ. ಯಜ್ಞವನ್ನೂ ನಾನು ನಿಂದಿಸುವುದಿಲ್ಲ. ಆದರೆ ಯಜ್ಞವನ್ನು ತಿಳಿದವರು ಬಹಳ ಅಪರೂಪ.

12255005a ನಮೋ ಬ್ರಾಹ್ಮಣಯಜ್ಞಾಯ ಯೇ ಚ ಯಜ್ಞವಿದೋ ಜನಾಃ|

12255005c ಸ್ವಯಜ್ಞಂ ಬ್ರಾಹ್ಮಣಾ ಹಿತ್ವಾ ಕ್ಷಾತ್ರಂ ಯಜ್ಞಮಿಹಾಸ್ಥಿತಾಃ||

ಬ್ರಾಹ್ಮಣರ ಯಜ್ಞಕ್ಕೆ ನಮಸ್ಕಾರ. ಯಜ್ಞವನ್ನು ತಿಳಿದುಕೊಂಡ ಜನರಿಗೂ ನಮಸ್ಕಾರ. ಈಗ ಬ್ರಾಹ್ಮಣರು ತಮ್ಮ ಯಜ್ಞವನ್ನು ತೊರೆದು ಕ್ಷತ್ರಿಯರ ಯಜ್ಞದಲ್ಲಿ ನಿರತರಾಗಿದ್ದಾರೆ.

12255006a ಲುಬ್ಧೈರ್ವಿತ್ತಪರೈರ್ಬ್ರಹ್ಮನ್ನಾಸ್ತಿಕೈಃ ಸಂಪ್ರವರ್ತಿತಮ್|

12255006c ವೇದವಾದಾನವಿಜ್ಞಾಯ ಸತ್ಯಾಭಾಸಮಿವಾನೃತಮ್||

ಬ್ರಹ್ಮನ್! ವಿತ್ತಕ್ಕೆ ಲುಬ್ಧರಾಗಿ ನಾಸ್ತಿಕರು ವೇದವಾದಗಳನ್ನು ಅರ್ಥಮಾಡಿಕೊಳ್ಳದೇ ಸತ್ಯದಂತೆ ತೋರುವ ಮಿಥ್ಯ ಯಜ್ಞಗಳನ್ನು ಪ್ರಚಾರಮಾಡುತ್ತಿದ್ದಾರೆ.

12255007a ಇದಂ ದೇಯಮಿದಂ ದೇಯಮಿತಿ ನಾಂತಂ ಚಿಕೀರ್ಷತಿ|

12255007c ಅತಃ ಸ್ತೈನ್ಯಂ ಪ್ರಭವತಿ ವಿಕರ್ಮಾಣಿ ಚ ಜಾಜಲೇ|

12255007e ತದೇವ ಸುಕೃತಂ ಹವ್ಯಂ ಯೇನ ತುಷ್ಯಂತಿ ದೇವತಾಃ||

ಜಾಜಲೇ! ಯಜ್ಞಗಳಲ್ಲಿ ಇದನ್ನು ಕೊಡಬೇಕು; ಇಷ್ಟನ್ನೇ ಕೊಡಬೇಕು; ದಕ್ಷಿಣೆಯನ್ನು ಕೊಡದಿದ್ದರೂ ಅಥವಾ ಅಲ್ಪದಕ್ಷಿಣೆಗಳನ್ನು ಕೊಟ್ಟರೂ ಅದು ಫಲಿಸುವುದಿಲ್ಲ ಎಂದೆಲ್ಲ ಶಾಸ್ತ್ರಗಳು ಹೇಳುತ್ತವೆ. ಹಾಗೆಯೇ ಪುಣ್ಯಕರ್ಮಗಳ ಮೂಲಕ ಸಂಗ್ರಹಿಸಿದ ಹವ್ಯಗಳಿಂದಲೇ ದೇವತೆಗಳು ತುಷ್ಟರಾಗುತ್ತಾರೆ.

12255008a ನಮಸ್ಕಾರೇಣ ಹವಿಷಾ ಸ್ವಾಧ್ಯಾಯೈರೌಷಧೈಸ್ತಥಾ|

12255008c ಪೂಜಾ ಸ್ಯಾದ್ದೇವತಾನಾಂ ಹಿ ಯಥಾ ಶಾಸ್ತ್ರನಿದರ್ಶನಮ್||

ನಮಸ್ಕಾರ, ಹವಿಸ್ಸು, ಅಧ್ಯಯನ, ಅಧ್ಯಾಪನ ಮತ್ತು ಅನ್ನ ಇವುಗಳಿಂದಲೇ ದೇವತೆಗಳನ್ನು ಪೂಜಿಸಲು ಸಾಧ್ಯವೆಂದು ಶಾಸ್ತ್ರಗಳಲ್ಲಿಯೂ ನಿದರ್ಶಿತವಾಗಿದೆ.

12255009a ಇಷ್ಟಾಪೂರ್ತಾದಸಾಧೂನಾಂ ವಿಷಮಾ ಜಾಯತೇ ಪ್ರಜಾ|

12255009c ಲುಬ್ಧೇಭ್ಯೋ ಜಾಯತೇ ಲುಬ್ಧಃ ಸಮೇಭ್ಯೋ ಜಾಯತೇ ಸಮಃ||

ಇಷ್ಟಾಪೂರ್ತಗಳನ್ನು ಮಾಡುವ ಅಸಾಧುಗಳಿಗೆ ವಿಷಮ ಸಂತಾನವೇ ಹುಟ್ಟುತ್ತವೆ. ಲುಬ್ಧರಿಗೆ ಲುಬ್ಧರೇ ಹುಟ್ಟುತ್ತಾರೆ. ಸಮರಿಗೆ ಸಮರೇ ಹುಟ್ಟುತ್ತಾರೆ.

12255010a ಯಜಮಾನೋ ಯಥಾತ್ಮಾನಮೃತ್ವಿಜಶ್ಚ ತಥಾ ಪ್ರಜಾಃ|

12255010c ಯಜ್ಞಾತ್ ಪ್ರಜಾ ಪ್ರಭವತಿ ನಭಸೋಽಂಭ ಇವಾಮಲಮ್||

ಯಜಮಾನ ಮತ್ತು ಋತ್ವಿಜರು ಹೇಗಿರುತ್ತಾರೋ ಹಾಗಿನದೇ ಸಂತಾನವು ಅವರಿಗಾಗುತ್ತದೆ. ನಿರ್ಮಲ ಆಕಾಶದಿಂದ ಹೇಗೆ ನಿರ್ಮಲ ಮಳೆಯು ಸುರಿಯುವುದೋ ಹಾಗೆ ಶುದ್ಧ ಯಜ್ಞದಿಂದ ಶುದ್ಧ ಸಂತಾನವು ಹುಟ್ಟುತ್ತದೆ.

12255011a ಅಗ್ನೌ ಪ್ರಾಸ್ತಾಹುತಿರ್ಬ್ರಹ್ಮನ್ನಾದಿತ್ಯಮುಪತಿಷ್ಠತಿ|

12255011c ಆದಿತ್ಯಾಜ್ಜಾಯತೇ ವೃಷ್ಟಿರ್ವೃಷ್ಟೇರನ್ನಂ ತತಃ ಪ್ರಜಾಃ||

ಬ್ರಹ್ಮನ್! ಅಗ್ನಿಯಲ್ಲಿ ಹಾಕಿದ ಆಹುತಿಯು ಆದಿತ್ಯನಿಗೆ ಹೋಗಿ ಸೇರುತ್ತದೆ. ಆದಿತ್ಯನಿಂದ ಮಳೆಯು ಹುಟ್ಟುತ್ತದೆ. ಮಳೆಯಿಂದ ಅನ್ನವಾಗುತ್ತದೆ. ಅನ್ನದಿಂದ ಪ್ರಜೆಗಳು ಹುಟ್ಟುತ್ತಾರೆ.

12255012a ತಸ್ಮಾತ್ಸ್ವನುಷ್ಠಿತಾತ್ಪೂರ್ವೇ ಸರ್ವಾನ್ಕಾಮಾಂಶ್ಚ ಲೇಭಿರೇ|

12255012c ಅಕೃಷ್ಟಪಚ್ಯಾ ಪೃಥಿವೀ ಆಶೀರ್ಭಿರ್ವೀರುಧೋಽಭವನ್|

12255012e ನ ತೇ ಯಜ್ಞೇಷ್ವಾತ್ಮಸು ವಾ ಫಲಂ ಪಶ್ಯಂತಿ ಕಿಂ ಚನ||

ಹಿಂದಿನವರು ಧರ್ಮನಿಷ್ಠರಾಗಿದ್ದು ಎಲ್ಲ ಕಾಮನೆಗಳನ್ನೂ ಪಡೆದುಕೊಳ್ಳುತ್ತಿದ್ದರು. ಕೃಷಿ ಮಾಡದೆಯೇ ಭೂಮಿಯು ಬೆಳೆಯನ್ನು ಕೊಡುತ್ತಿತ್ತು. ಸಂಕಲ್ಪಮಾತ್ರದಿಂದಲೇ ಗಿಡ-ಬಳ್ಳಿಗಳು ಬೆಳೆಯುತ್ತಿದ್ದವು. ಅವರು ಯಜ್ಞಗಳಿಂದ ತಮಗಾಗಿ ಯಾವ ಫಲಗಳನ್ನೂ ನಿರೀಕ್ಷಿಸುತ್ತಿರಲಿಲ್ಲ.

12255013a ಶಂಕಮಾನಾಃ ಫಲಂ ಯಜ್ಞೇ ಯೇ ಯಜೇರನ್ಕಥಂ ಚನ|

12255013c ಜಾಯಂತೇಽಸಾಧವೋ ಧೂರ್ತಾ ಲುಬ್ಧಾ ವಿತ್ತಪ್ರಯೋಜನಾಃ||

ತಾವು ಬಯಸಿದ ಫಲವು ಯಜ್ಞದಿಂದ ಸಿಗುವುದೋ ಇಲ್ಲವೋ ಎಂಬ ಸಂದೇಹದಿಂದ ಯಜ್ಞಮಾಡುವವರು ಅಸಾಧುಗಳಾಗಿ, ಧೂರ್ತರಾಗಿ, ಲುಬ್ಧರಾಗಿ ಮತ್ತು ಧನಪಿಶಾಚಿಗಳಾಗಿ ಹುಟ್ಟುತ್ತಾರೆ.

12255014a ಸ ಸ್ಮ ಪಾಪಕೃತಾಂ ಲೋಕಾನ್ಗಚ್ಚೇದಶುಭಕರ್ಮಣಾ|

12255014c ಪ್ರಮಾಣಮಪ್ರಮಾಣೇನ ಯಃ ಕುರ್ಯಾದಶುಭಂ ನರಃ|

12255014e ಪಾಪಾತ್ಮಾ ಸೋಽಕೃತಪ್ರಜ್ಞಃ ಸದೈವೇಹ ದ್ವಿಜೋತ್ತಮ||

ದ್ವಿಜೋತ್ತಮ! ಪ್ರಮಾಣವಾಗಿರುವುದನ್ನು ಅಪ್ರಮಾಣ ಮಾಡಿ ಅಶುಭವನ್ನು ಮಾಡುವ ನರನು ತನ್ನ ಅಶುಭ ಕರ್ಮಗಳಿಂದ ಪಾಪಕೃತರ ಲೋಕಗಳಿಗೆ ಹೋಗುತ್ತಾನೆ. ಅಂತಹ ಪಾಪಾತ್ಮನು ಸದೈವ ಅಕೃತಪ್ರಜ್ಞನಾಗಿಯೇ ಇರುತ್ತಾನೆ.

12255015a ಕರ್ತವ್ಯಮಿತಿ ಕರ್ತವ್ಯಂ ವೇತ್ತಿ ಯೋ ಬ್ರಾಹ್ಮಣೋಭಯಮ್|

12255015c ಬ್ರಹ್ಮೈವ ವರ್ತತೇ ಲೋಕೇ ನೈತಿ ಕರ್ತವ್ಯತಾಂ ಪುನಃ||

ಮಾಡಬೇಕಾದುದನ್ನು ಕರ್ತವ್ಯ ಎಂದೂ ಅದನ್ನು ಮಾಡದಿದ್ದರೆ ಭಯವುಂಟಾಗುವುದೆಂದೂ ತಿಳಿದು, ಎಲ್ಲದರಲ್ಲಿಯೂ ಬ್ರಹ್ಮವೇ ಇರುವುದೆಂದೂ ಮತ್ತು ಕರ್ತವ್ಯವೆಂದು ಕರ್ಮಗಳನ್ನು ಮಾಡಿದರೂ  ಕರ್ತೃತ್ವಾಭಿಮಾನವನ್ನು ತೊರೆದಿರುವವನೇ ನಿಜವಾದ ಬ್ರಾಹ್ಮಣನು[1].

12255016a ವಿಗುಣಂ ಚ ಪುನಃ ಕರ್ಮ ಜ್ಯಾಯ ಇತ್ಯನುಶುಶ್ರುಮ|

12255016c ಸರ್ವಭೂತೋಪಘಾತಶ್ಚ ಫಲಭಾವೇ ಚ ಸಂಯಮಃ||

ಕರ್ಮಗಳಲ್ಲಿ ಲೋಪ-ದೋಷಗಳುಂಟಾದರೆ ಅದು ಫಲಕೊಡುವುದಿಲ್ಲವೆಂದೂ, ಗುಣಹೀನಾಗುವುದೆಂದೂ ಮತ್ತು ಸರ್ವಭೂತಗಳಿಗೂ ವಿಪತ್ಕಾರಿಯಾಗುವುದೆಂದೂ ಕೇಳಿದ್ದೇವೆ. ಆದರೆ ಅದೇ ಕರ್ಮವನ್ನು ನಿಷ್ಕಾಮಭಾವದಿಂದ ಮಾಡಿದರೆ ಅದು ಶ್ರೇಷ್ಠ ಕರ್ಮವಾಗುತ್ತದೆ. ಆದುದರಿಂದ ಕರ್ತೃವು ಯಾವಾಗಲೂ ಫಲದ ವಿಷಯದಲ್ಲಿ ಸಂಯಮದಿಂದಿರಬೇಕು.

12255017a ಸತ್ಯಯಜ್ಞಾ ದಮಯಜ್ಞಾ ಅಲುಬ್ಧಾಶ್ಚಾತ್ಮತೃಪ್ತಯಃ[2]|

12255017c ಉತ್ಪನ್ನತ್ಯಾಗಿನಃ ಸರ್ವೇ ಜನಾ ಆಸನ್ನಮತ್ಸರಾಃ||

ಹಿಂದಿನ ಜನರು ಸತ್ಯಯಜ್ಞ ಮತ್ತು ದಮಯಜ್ಞಗಳಲ್ಲಿ ತೊಡಗಿದ್ದು ಅಲುಬ್ಧರೂ ಆತ್ಮತೃಪ್ತರೂ ಆಗಿದ್ದರು. ಬೆಳೆದವುಗಳನ್ನೂ ತ್ಯಾಗಿಸುತ್ತಿದ್ದರು. ಎಲ್ಲರೂ ಮಾತ್ಸರ್ಯರಹಿತರಾಗಿದ್ದರು. 

12255018a ಕ್ಷೇತ್ರಕ್ಷೇತ್ರಜ್ಞತತ್ತ್ವಜ್ಞಾಃ ಸ್ವಯಜ್ಞಪರಿನಿಷ್ಠಿತಾಃ|

12255018c ಬ್ರಾಹ್ಮಂ ವೇದಮಧೀಯಂತಸ್ತೋಷಯಂತ್ಯಮರಾನಪಿ[3]||

ಕ್ಷೇತ್ರ-ಕ್ಷೇತ್ರಜ್ಞದ ತತ್ತ್ವವನ್ನು ತಿಳಿದವರಾಗಿದ್ದರು. ಆತ್ಮಯಜ್ಞಪರಾಯಣರಾಗಿದ್ದರು. ಅಮರರನ್ನೂ ತೃಪ್ತಿಪಡಿಸುತ್ತಾ ವೇದಗಳಲ್ಲಿನ ಬ್ರಹ್ಮವಿದ್ಯೆಯನ್ನು ಅಧ್ಯಯನಮಾಡುತ್ತಿದ್ದರು.

12255019a ಅಖಿಲಂ ದೈವತಂ ಸರ್ವಂ ಬ್ರಹ್ಮ ಬ್ರಾಹ್ಮಣಸಂಶ್ರಿತಮ್|

12255019c ತೃಪ್ಯಂತಿ ತೃಪ್ಯತೋ ದೇವಾಸ್ತೃಪ್ತಾಸ್ತೃಪ್ತಸ್ಯ ಜಾಜಲೇ||

ಜಾಜಲೇ! ಅಖಿಲ ದೇವತೆಗಳೂ ಮತ್ತು ಸರ್ವವೂ ಬ್ರಾಹ್ಮಣನಲ್ಲಿ ಸಂಶ್ರಿತವಾಗಿವೆ. ಆದುದರಿಂದ ಬ್ರಾಹ್ಮಣನು ತೃಪ್ತಿಹೊಂದಿದರೆ ದೇವತೆಗಳೂ ತೃಪ್ತರಾಗುತ್ತಾರೆ.

12255020a ಯಥಾ ಸರ್ವರಸೈಸ್ತೃಪ್ತೋ ನಾಭಿನಂದತಿ ಕಿಂ ಚನ|

12255020c ತಥಾ ಪ್ರಜ್ಞಾನತೃಪ್ತಸ್ಯ ನಿತ್ಯಂ ತೃಪ್ತಿಃ ಸುಖೋದಯಾ||

ಸರ್ವ ರಸಗಳಿಂದಲೂ ತೃಪ್ತನಾದವನು ಯಾವರಸವನ್ನೂ ಪ್ರಶಂಸಿಸುವುದಿಲ್ಲ. ಹಾಗೆಯೇ ಪ್ರಜ್ಞಾನತೃಪ್ತನಾದವನು ಬೇರೆ ಯಾವುದರಿಂದಲೂ ತೃಪ್ತಿಯನ್ನು ಅಪೇಕ್ಷಿಸುವುದಿಲ್ಲ. ಜ್ಞಾನ ತೃಪ್ತಿಯು ಸುಖೋದಯವಾದುದು. ನಿತ್ಯತೃಪ್ತಿಕರವಾದುದು.

12255021a ಧರ್ಮಾರಾಮಾ[4] ಧರ್ಮಸುಖಾಃ ಕೃತ್ಸ್ನವ್ಯವಸಿತಾಸ್ತಥಾ|

12255021c ಅಸ್ತಿ ನಸ್ತತ್ತ್ವತೋ ಭೂಯ ಇತಿ ಪ್ರಜ್ಞಾಗವೇಷಿಣಃ||

ಧರ್ಮದಲ್ಲಿಯೇ ರಮಿಸುವವರಿದ್ದಾರೆ. ಧರ್ಮದಲ್ಲಿಯೇ ಸುಖವನ್ನು ಹೊಂದುವವರಿದ್ದಾರೆ. ಅವರು ಎಲ್ಲವನ್ನೂ ಯೋಚನೆಮಾಡಿಯೇ ಮಾಡುತ್ತಿರುತ್ತಾರೆ. ಆದರೆ ಧರ್ಮಕ್ಕಿಂತಲೂ ದೊಡ್ಡದಾದ ವ್ಯಾಪಕವಾದ ಪರಮಾತ್ಮತತ್ತ್ವವಿರುವುದೆಂದು ಪ್ರಾಜ್ಞರು ಹೇಳುತ್ತಾರೆ.

12255022a ಜ್ಞಾನವಿಜ್ಞಾನಿನಃ ಕೇ ಚಿತ್ಪರಂ ಪಾರಂ ತಿತೀರ್ಷವಃ|

12255022c ಅತೀವ ತತ್ಸದಾ ಪುಣ್ಯಂ ಪುಣ್ಯಾಭಿಜನಸಂಹಿತಮ್||

ಸಂಸಾರಸಾಗರವನ್ನು ದಾಟಲಿಚ್ಛಿಸುವ ಜ್ಞಾನ-ವಿಜ್ಞಾನ ಸಂಪನ್ನರು ಕೆಲವರು ಅತೀವ ಪುಣ್ಯದಾಯಕವಾದ ಪುಣ್ಯಜನರಿಂದ ಕೂಡಿರುವ ಬ್ರಹ್ಮಲೋಕವನ್ನು ಹೊಂದುತ್ತಾರೆ.

12255023a ಯತ್ರ ಗತ್ವಾ ನ ಶೋಚಂತಿ ನ ಚ್ಯವಂತಿ ವ್ಯಥಂತಿ ಚ|

12255023c ತೇ ತು ತದ್ ಬ್ರಹ್ಮಣಃ ಸ್ಥಾನಂ ಪ್ರಾಪ್ನುವಂತೀಹ ಸಾತ್ತ್ವಿಕಾಃ||

ಅಲ್ಲಿಗೆ ಹೋಗಿ ಶೋಕಿಸುವುದಿಲ್ಲ, ವ್ಯಥೆಪಡುವುದಿಲ್ಲ ಮತ್ತು ಅಲ್ಲಿಂದ ಚ್ಯುತರಾಗುವುದಿಲ್ಲ. ಅಂತಹ ಸಾತ್ವಿಕರು ಬ್ರಹ್ಮಪದವನ್ನೇ ಸೇರುತ್ತಾರೆ.

12255024a ನೈವ ತೇ ಸ್ವರ್ಗಮಿಚ್ಚಂತಿ ನ ಯಜಂತಿ ಯಶೋಧನೈಃ|

12255024c ಸತಾಂ ವರ್ತ್ಮಾನುವರ್ತಂತೇ ಯಥಾಬಲಮಹಿಂಸಯಾ[5]||

ಅವರು ಸ್ವರ್ಗವನ್ನು ಬಯಸುವುದಿಲ್ಲ. ಧನಕ್ಕಾಗಲೀ ಯಶಸ್ಸಿಗಾಗಲೀ ಅವರು ಯಜ್ಞಮಾಡುವುದಿಲ್ಲ. ಸತ್ಪುರುಷರ ನಡತೆಗಳಂತೆ ನಡೆಯುತ್ತಾ ಯಥಾಶಕ್ತಿ ಅಹಿಂಸೆಯ ಯಜ್ಞವನ್ನು ಮಾಡುತ್ತಾರೆ.

12255025a ವನಸ್ಪತೀನೋಷಧೀಶ್ಚ ಫಲಮೂಲಂ ಚ ತೇ ವಿದುಃ|

12255025c ನ ಚೈತಾನೃತ್ವಿಜೋ ಲುಬ್ಧಾ ಯಾಜಯಂತಿ ಧನಾರ್ಥಿನಃ[6]||

ವನಸ್ಪತಿಗಳನ್ನು, ಔಷಧಿಗಳನ್ನು ಮತ್ತು ಫಲ-ಮೂಲಗಳನ್ನೇ ಅವರು ಹವಿಸ್ಸುಗಳೆಂದು ಭಾವಿಸುತ್ತಾರೆ. ಅಂಥಹ ಋತ್ವಿಜರು ಲುಬ್ಧ ಧನಾರ್ಥಿಗಳಿಗೆ ಯಜ್ಞಮಾಡಿಸುವುದಿಲ್ಲ.

12255026a ಸ್ವಮೇವ ಚಾರ್ಥಂ ಕುರ್ವಾಣಾ ಯಜ್ಞಂ ಚಕ್ರುಃ ಪುನರ್ದ್ವಿಜಾಃ|

12255026c ಪರಿನಿಷ್ಠಿತಕರ್ಮಾಣಃ ಪ್ರಜಾನುಗ್ರಹಕಾಮ್ಯಯಾ[7]||

ಜ್ಞಾನದಿಂದ ಕರ್ಮಮಾಡುವ ದ್ವಿಜರು ಲೋಕದ ಜನರಿಗೆ ಹಿತವನ್ನುಂಟು ಮಾಡುವ ಅಪೇಕ್ಷೆಯಿಂದ ತಮ್ಮನ್ನೇ ಯಜ್ಞದ ಉಪಕರಣವನ್ನಾಗಿ ಭಾವಿಸಿಕೊಂಡು ಮಾನಸಿಕ ಯಜ್ಞವನ್ನು ಮಾಡುತ್ತಾರೆ.

12255027a ಪ್ರಾಪಯೇಯುಃ ಪ್ರಜಾಃ ಸ್ವರ್ಗಂ ಸ್ವಧರ್ಮಚರಣೇನ ವೈ|

12255027c ಇತಿ ಮೇ ವರ್ತತೇ ಬುದ್ಧಿಃ ಸಮಾ ಸರ್ವತ್ರ ಜಾಜಲೇ||

ಜಾಜಲೇ! ಅವರು ಸ್ವಧರ್ಮಾಚರಣೆಯಿಂದಲೇ ಪ್ರಜೆಗಳಿಗೆ ಸ್ವರ್ಗವನ್ನು ಹೊಂದಿಸಬಲ್ಲರು. ಇದರಿಂದಾಗಿಯೇ ನನ್ನ ಬುದ್ಧಿಯು ಸರ್ವತ್ರ ಸಮಭಾವದಿಂದಿದೆ.

12255028a ಪ್ರಯುಂಜತೇ ಯಾನಿ ಯಜ್ಞೇ ಸದಾ ಪ್ರಾಜ್ಞಾ ದ್ವಿಜರ್ಷಭ[8]|

12255028c ತೇನ ತೇ ದೇವಯಾನೇನ ಪಥಾ ಯಾಂತಿ ಮಹಾಮುನೇ||

ದ್ವಿಜರ್ಷಭ! ಮಹಾಮುನೇ! ಯಾವ ಪ್ರಾಜ್ಞರು ಸದಾ ಯಜ್ಞಗಳನ್ನು ಯಾಜಿಸುತ್ತಾರೋ ಅವರು ದೇವಯಾನದ ಮಾರ್ಗದಲ್ಲಿ ಹೋಗುತ್ತಾರೆ.

12255029a ಆವೃತ್ತಿಸ್ತತ್ರ ಚೈಕಸ್ಯ ನಾಸ್ತ್ಯಾವೃತ್ತಿರ್ಮನೀಷಿಣಾಮ್|

12255029c ಉಭೌ ತೌ ದೇವಯಾನೇನ ಗಚ್ಚತೋ ಜಾಜಲೇ ಪಥಾ||

ಜಾಜಲೇ! ಕಾಮನೆಗಳಲ್ಲಿ ಆಸಕ್ತನಾಗಿರುವವನಿಗೆ ಹುಟ್ಟು-ಸಾವುಗಳಿವೆ. ಜ್ಞಾನಿಯಾದವನಿಗೆ ಪುನರಾವೃತ್ತಿಯಿಲ್ಲ. ಒಂದು ವೇಳೆ ಇಬ್ಬರೂ ದೇವಯಾನದ ಮೂಲಕ ಹೋದರೂ ಒಬ್ಬನಿಗೆ ಪುನರಾವೃತ್ತಿಯೂ ಇನ್ನೊಬ್ಬನಿಗೆ ಅಪುನಾವೃತ್ತಿಯೂ ಉಂಟಾಗುತ್ತದೆ.

12255030a ಸ್ವಯಂ ಚೈಷಾಮನಡುಹೋ ಯುಜ್ಯಂತಿ ಚ ವಹಂತಿ ಚ|

12255030c ಸ್ವಯಮುಸ್ರಾಶ್ಚ ದುಹ್ಯಂತೇ ಮನಃಸಂಕಲ್ಪಸಿದ್ಧಿಭಿಃ||

ಸಂಕಲ್ಪಸಿದ್ಧಿಯಿರುವ ಜ್ಞಾನಿ ಮಹಾತ್ಮರು ಮನಸ್ಸಿನಲ್ಲಿ ಇಚ್ಛಿಸಿದರೆ ಎತ್ತುಗಳು ತಾವೇ ಗಾಡಿಯ ನೊಗದ ಎರಡೂ ಕಡೆ ನಿಂತು ಹಗ್ಗದಿಂದ ಬಿಗಿದುಕೊಂಡು ಗಾಡಿಯನ್ನು ಎಳೆದುಕೊಂಡು ಹೋಗುತ್ತವೆ. ಹಸುಗಳು ಕರೆಯದೆಯೇ ಹಾಲನ್ನು ಸುರಿಸುತ್ತವೆ.

12255031a ಸ್ವಯಂ ಯೂಪಾನುಪಾದಾಯ ಯಜಂತೇ ಸ್ವಾಪ್ತದಕ್ಷಿಣೈಃ|

12255031c ಯಸ್ತಥಾಭಾವಿತಾತ್ಮಾ ಸ್ಯಾತ್ಸ ಗಾಮಾಲಬ್ಧುಮರ್ಹತಿ||

ಸಂಕಲ್ಪಸಿದ್ಧರು ಮನಸ್ಸಿನಲ್ಲಿಯೇ ಯೂಪವನ್ನು ಸ್ಥಾಪಿಸಿ ಯಥೇಚ್ಛ ದಕ್ಷಿಣೆಗಳನ್ನಿತ್ತು ಯಾಗ ಮಾಡುತ್ತಾರೆ. ಅಂಥಹ ಭಾವಿತಾತ್ಮರು ಮನಸ್ಸಿನ ಮೂಲಕವೇ ಗವಾಲಂಭನವನ್ನು ಮಾಡಬಲ್ಲರು.

12255032a ಓಷಧೀಭಿಸ್ತಥಾ ಬ್ರಹ್ಮನ್ಯಜೇರಂಸ್ತೇ ನತಾದೃಶಾಃ|

12255032c ಬುದ್ಧಿತ್ಯಾಗಂ ಪುರಸ್ಕೃತ್ಯ ತಾದೃಶಂ ಪ್ರಬ್ರವೀಮಿ ತೇ||

ಬ್ರಹ್ಮನ್! ಯೋಗಸಿದ್ಧಿಯನ್ನು ಪಡೆದವರು ಓಷಧಿಗಳಿಂದ ಯಜ್ಞವನ್ನು ಮಾಡಬಲ್ಲರು. ಆದರೆ ಇತರರು ಇಂತಹ ಮಾನಸಿಕ ಯಜ್ಞವನ್ನು ಮಾಡಲಾರರು. ಕರ್ಮಫಲವನ್ನು ತ್ಯಾಗಮಾಡುವವರ ಮಹಿಮೆಯು ಇಷ್ಟು ಅದ್ಭುತವಾಗಿದೆ. ನಾನು ತ್ಯಾಗಧರ್ಮವನ್ನೇ ಮನಸ್ಸಿನಲ್ಲಿಟ್ಟುಕೊಂಡು ನಿನಗೆ ಹೇಳುತ್ತಿದ್ದೇನೆ.

12255033a ನಿರಾಶಿಷಮನಾರಂಭಂ ನಿರ್ನಮಸ್ಕಾರಮಸ್ತುತಿಮ್|

12255033c ಅಕ್ಷೀಣಂ ಕ್ಷೀಣಕರ್ಮಾಣಂ ತಂ ದೇವಾ ಬ್ರಾಹ್ಮಣಂ ವಿದುಃ||

ಯಾರ ಮನಸ್ಸಿನಲ್ಲಿ ಯಾವ ವಿಧದ ಕಾಮನೆಗಳೂ ಇಲ್ಲವೋ, ಫಲದ ಇಚ್ಛೆಯೆಂದು ಯಾರು ಕರ್ಮಗಳನ್ನು ಆರಂಭಿಸುವುದಿಲ್ಲವೋ, ನಮಸ್ಕಾರ-ಹೊಗಳಿಕೆಗಳಿಂದ ಯಾರು ದೂರವಾಗಿರುವನೋ, ಯಾರ ಆತ್ಮಧರ್ಮವು ಎಂದೂ ಕ್ಷೀಣಿಸುವುದಿಲ್ಲವೋ, ಯಾರಲ್ಲಿ ಬಂಧನಗಳನ್ನುಂಟುಮಾಡುವ ಕರ್ಮಗಳು ಕ್ಷೀಣಿಸಿರುವವೋ ಅವನನ್ನೇ ಬ್ರಾಹ್ಮಣನೆಂದು ದೇವತೆಗಳು ತಿಳಿಯುತ್ತಾರೆ.

12255034a ನಾಶ್ರಾವಯನ್ನ ಚ ಯಜನ್ನ ದದದ್ ಬ್ರಾಹ್ಮಣೇಷು ಚ|

12255034c ಗ್ರಾಮ್ಯಾಂ ವೃತ್ತಿಂ ಲಿಪ್ಸಮಾನಃ ಕಾಂ ಗತಿಂ ಯಾತಿ ಜಾಜಲೇ|

12255034e ಇದಂ ತು ದೈವತಂ ಕೃತ್ವಾ ಯಥಾ ಯಜ್ಞಮವಾಪ್ನುಯಾತ್||

ಜಾಜಲೇ! ಅಧ್ಯಯನ-ಅಧ್ಯಾಪಗಳನ್ನು ಮಾಡದೇ, ಯಜ್ಞಮಾಡದೇ, ಬ್ರಾಹ್ಮಣರಿಗೆ ದಾನಮಾಡದೇ, ಕೇವಲ ಗ್ರಾಮ್ಯ ವೃತ್ತಿಯಲ್ಲಿಯೇ ಇರಬೇಕೆನ್ನುವವರು ಯಾವ ಸದ್ಗತಿಯನ್ನು ಹೊಂದಬಲ್ಲರು? ಆದರೆ ಎಲ್ಲ ಕರ್ಮಗಳನ್ನೂ ನಿಷ್ಕಾಮಭಾವನೆಯಿಂದ ಪರಮಾತ್ಮನ ಪ್ರೀತ್ಯರ್ಥವಾಗಿ ಮಾಡುವವನು ಯಜ್ಞದ ಯಥಾವತ್ತಾದ ಫಲವನ್ನು ಹೊಂದುತ್ತಾನೆ.”

12255035 ಜಾಜಲಿರುವಾಚ|

12255035a ನ ವೈ ಮುನೀನಾಂ ಶೃಣುಮಃ ಸ್ಮ ತತ್ತ್ವಂ

ಪೃಚ್ಚಾಮಿ ತ್ವಾ ವಾಣಿಜ ಕಷ್ಟಮೇತತ್|

12255035c ಪೂರ್ವೇ ಪೂರ್ವೇ ಚಾಸ್ಯ ನಾವೇಕ್ಷಮಾಣಾ

ನಾತಃ ಪರಂ ತಮೃಷಯಃ ಸ್ಥಾಪಯಂತಿ||

ಜಾಜಲಿಯು ಹೇಳಿದನು: “ವಾಣಿಜ! ನಾನು ಮುನಿಗಳ ತತ್ತ್ವಗಳ ಕುರಿತು ಕೇಳುತ್ತಿಲ್ಲ. ಅದನ್ನು ಅರ್ಥಮಾಡಿಕೊಳ್ಳುವುದೂ ಕಷ್ಟ. ಹಿಂದಿನವರು ಈ ವಿಷಯದಲ್ಲಿ ಹೆಚ್ಚು ವಿಚಾರಮಾಡಿರುವುದಿಲ್ಲ. ವಿಚಾರಮಾಡಿದ್ದರೂ ಈ ಪರತತ್ತ್ವವನ್ನು ಋಷಿಗಳು ಜಗತ್ತಿನಲ್ಲಿ ಸ್ಥಾಪಿಸಲಿಲ್ಲ.

12255036a ಅಸ್ಮಿನ್ನೇವಾತ್ಮತೀರ್ಥೇ ನ ಪಶವಃ ಪ್ರಾಪ್ನುಯುಃ ಸುಖಮ್|

12255036c ಅಥ ಸ್ವಕರ್ಮಣಾ ಕೇನ ವಾಣಿಜ ಪ್ರಾಪ್ನುಯಾತ್ಸುಖಮ್|

12255036e ಶಂಸ ಮೇ ತನ್ಮಹಾಪ್ರಾಜ್ಞ ಭೃಶಂ ವೈ ಶ್ರದ್ದಧಾಮಿ ತೇ||

ಮಹಾಪ್ರಾಜ್ಞ! ವಾಣಿಜ! ಪಶುಸಮಾನ ಅಜ್ಞಾನಿಗಳು ದೇಹವೆಂಬ ಪುಣ್ಯ ಭೂಮಿಯಲ್ಲಿ ಆತ್ಮಯಜ್ಞವನ್ನು ಮಾಡಲಾರರು. ಅಂಥವರು ಯಾವ ಇತರ ಕರ್ಮಗಳಿಂದ ಮೋಕ್ಷಸುಖವನ್ನು ಹೊಂದುತ್ತಾರೆ? ಇದರ ಕುರಿತು ನನಗೆ ಹೇಳು. ನಿನ್ನ ಮೇಲೆ ನನಗೆ ಅಧಿಕ ಶ್ರದ್ಧೆಯುಂಟಾಗಿದೆ.”

12255037 ತುಲಾಧಾರ ಉವಾಚ|

12255037a ಉತ ಯಜ್ಞಾ ಉತಾಯಜ್ಞಾ ಮಖಂ ನಾರ್ಹಂತಿ ತೇ ಕ್ವ ಚಿತ್|

12255037c ಆಜ್ಯೇನ ಪಯಸಾ ದಧ್ನಾ ಪೂರ್ಣಾಹುತ್ಯಾ ವಿಶೇಷತಃ|

12255037e ವಾಲೈಃ ಶೃಂಗೇಣ ಪಾದೇನ ಸಂಭವತ್ಯೇವ ಗೌರ್ಮಖಮ್||

ತುಲಾಧಾರನು ಹೇಳಿದನು: “ದಾಂಭಿಕರು ಮಾಡುವ ಯಜ್ಞವು ಅಶ್ರದ್ಧೆಯೇ ಮೊದಲಾದ ದೋಷಗಳಿಂದಾಗಿ “ಯಜ್ಞ” ಎಂದು ಎನಿಸಿಕೊಳ್ಳುವುದೇ ಇಲ್ಲ. ಅಂಥವರು ಮಾನಸಿಕ ಯಜ್ಞವನ್ನು ಮಾಡಲೂ ಅರ್ಹರಲ್ಲ. ಕ್ರಿಯಾತ್ಮಕ ಯಜ್ಞವನ್ನು ಮಾಡಲೂ ಯೋಗ್ಯರಲ್ಲ. ಶ್ರದ್ಧೆಯಿದ್ದವನು ತುಪ್ಪ, ಹಾಲು, ಮೊಸರು ಮತ್ತು ವಿಶೇಷವಾಗಿ ಪೂರ್ಣಾಹುತಿ ಇವುಗಳಿಂದಲೇ ಯಜ್ಞಗಳನ್ನು ಮಾಡುತ್ತಾನೆ. ಇಷ್ಟು ಮಾಡುವುದಕ್ಕೂ ಸಾಧ್ಯವಿಲ್ಲದವನು ಗೋಪುಚ್ಛದಿಂದ ಪಿತೃತರ್ಪಣಾದಿಗಳನ್ನೂ, ಗೋಶೃಂಗದಿಂದ ದೇವತಾಭಿಷೇಕವನ್ನೂ ಮಾಡಿ, ಹಸುವಿನ ಕಾಲಿನ ಧೂಳನ್ನು ತಲೆಯಲ್ಲಿ ಧರಿಸಿ ಗೋವನ್ನು ಸ್ಪರ್ಶಿಸಿ ಯಜ್ಞವನ್ನು ಪೂರ್ಣಗೊಳಿಸುತ್ತಾನೆ.

12255038a ಪತ್ನೀಂ ಚಾನೇನ ವಿಧಿನಾ ಪ್ರಕರೋತಿ ನಿಯೋಜಯನ್[9]|

12255038c ಪುರೋಡಾಶೋ ಹಿ ಸರ್ವೇಷಾಂ ಪಶೂನಾಂ ಮೇಧ್ಯ ಉಚ್ಯತೇ||

ಇದೇ ವಿಧಿಯಿಂದ ಪತ್ನಿಯನ್ನೂ ನಿಯೋಜಿಸಿಕೊಳ್ಳಬೇಕು. ಪುರೋಡಾಶವೇ ಎಲ್ಲ ಪಶುಗಳ ಮೇಧ್ಯಕ್ಕಿಂತಲೂ ಹೆಚ್ಚಿನ ಹವಿಸ್ಸೆಂದು ಹೇಳಲ್ಪಟ್ಟಿದೆ.

12255039a ಸರ್ವಾ ನದ್ಯಃ ಸರಸ್ವತ್ಯಃ ಸರ್ವೇ ಪುಣ್ಯಾಃ ಶಿಲೋಚ್ಚಯಾಃ|

12255039c ಜಾಜಲೇ ತೀರ್ಥಮಾತ್ಮೈವ ಮಾ ಸ್ಮ ದೇಶಾತಿಥಿರ್ಭವ||

ಸರ್ವನದಿಗಳೂ ಸರಸ್ವತೀ ನದಿಯ ರೂಪಗಳೇ ಆಗಿವೆ. ಎಲ್ಲ ಪರ್ವತಗಳೂ ಪುಣ್ಯ ಪ್ರದೇಶಗಳೇ ಆಗಿವೆ. ಜಾಜಲೇ! ಈ ಶರೀರವೇ ಒಂದು ಪುಣ್ಯತೀರ್ಥವಾಗಿದೆ. ತೀರ್ಥಾರ್ಥಿಯಾಗಿ ದೇಶಾಟನೆ ಮಾಡಬೇಕಾಗಿಲ್ಲ.

12255040a ಏತಾನೀದೃಶಕಾನ್ ಧರ್ಮಾನಾಚರನ್ನಿಹ ಜಾಜಲೇ|

12255040c ಕಾರಣೈರ್ಧರ್ಮಮನ್ವಿಚ್ಚನ್ನ ಲೋಕಾನಾಪ್ನುತೇ ಶುಭಾನ್||

ಜಾಜಲೇ! ಈ ತರಹದ ಧರ್ಮಗಳನ್ನು ಆಚರಿಸಿ ಸುಲಭ ಸಲಕರಣಗಳಿಂದಲೇ ಧರ್ಮಾಚರಣೆಯನ್ನು ಮಾಡಿ ಶುಭಪ್ರದ ಲೋಕಗಳನ್ನು ಹೊಂದುತ್ತಾರೆ.””

12255041 ಭೀಷ್ಮ ಉವಾಚ|

12255041a ಏತಾನೀದೃಶಕಾನ್ ಧರ್ಮಾಂಸ್ತುಲಾಧಾರಃ ಪ್ರಶಂಸತಿ|

12255041c ಉಪಪತ್ತ್ಯಾ ಹಿ ಸಂಪನ್ನಾನ್ನಿತ್ಯಂ ಸದ್ಭಿರ್ನಿಷೇವಿತಾನ್||

ಭೀಷ್ಮನು ಹೇಳಿದನು: “ಈ ರೀತಿಯ ಹಿಂಸಾರಹಿತವಾದ ಯುಕ್ತಿಯುಕ್ತವಾದ ಮತ್ತು ಶ್ರೇಷ್ಠ ಪುರುಷರು ಆಚರಿಸುವ ಧರ್ಮವನ್ನೇ ವೈಶ್ಯ ತುಲಾಧಾರನು ಸದಾ ಪ್ರಶಂಸಿಸುತ್ತಿದ್ದನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ತುಲಾಭಾರಜಾಜಲಿಸಂವಾದೇ ಪಂಚಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ತುಲಾಭಾರಜಾಜಲಿಸಂವಾದ ಎನ್ನುವ ಇನ್ನೂರಾಐವತ್ತೈದನೇ ಅಧ್ಯಾಯವು.

pink gerbera Wall Mural • Pixers® - We live to change

[1] ಕರ್ತೃತ್ವಾಭಿಮಾನವನ್ನೂ ಫಲಾಭಿಸಂಧಿಯನ್ನೂ ಬಿಟ್ಟು ಎಲ್ಲವೂ ಬ್ರಹ್ಮಮಯವೆಂದು ಭಾವಿಸಿ ಬ್ರಹ್ಮಾರ್ಪಣಭಾವದಿಂದ ಕರ್ಮಗಳನ್ನು ಮಾಡುವವರು ಶ್ರೇಷ್ಠರು (ಭೀಷ್ಮ ಪರ್ವ, ಭಗವದ್ಗೀತಾಪರ್ವ, ಅಧ್ಯಾಯ 26, ಶ್ಲೋಕ 24: ಬ್ರಹ್ಮಾರ್ಪಣಂ ಬ್ರಹ್ಮಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಂ| ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ||)

[2] ಅರ್ಥಲುಬ್ಧಾರ್ಥತೃಪ್ತಯಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ವೇದಮಧೀಯಂತಸ್ತೋಷಯಂತ್ಯಪರಾನಪಿ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಧರ್ಮಾಧಾರಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಯಜಂತೇ ಚಾವಿಹಿಂಸೆಯಾ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಫಲಾರ್ಥಿನಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಇದರ ನಂತರ ಭಾರತ ದರ್ಶನದಲ್ಲಿ ಈ ಒಂದು ಶ್ಲೋಕಾರ್ಧವಿದೆ: ತಸ್ಮಾತ್ತಾನೃತ್ವಿಜೋ ಲುಬ್ಧಾ ಯಾಜಯಂತಶುಭಾನ್ನರಾನ್|

[8] ಯಾನಿ ಯಜ್ಞೇಷ್ಟಿಹೇಜ್ಯಂತಿ ಸದಾ ಪ್ರಾಜ್ಞಾ ದ್ವಿಜರ್ಷಭಾಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[9] ಭಾರತದರ್ಶನದಲ್ಲಿ ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ಇಷ್ಟಂ ತು ದೈವತಂ ಕೃತ್ವಾ ಯಥಾ ಯಜ್ಞಮವಾಪ್ನುಯಾತ್|

Comments are closed.