Shanti Parva: Chapter 254

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೪

ಜಾಜಲಿ-ತುಲಾಧಾರರ ನಡುವೆ ಧರ್ಮದ ವಿಷಯದಲ್ಲಿ ಸಂಭಾಷಣೆ (1-52).

12254001 ಭೀಷ್ಮ ಉವಾಚ|

12254001a ಇತ್ಯುಕ್ತಃ ಸ ತದಾ ತೇನ ತುಲಾಧಾರೇಣ ಧೀಮತಾ|

12254001c ಪ್ರೋವಾಚ ವಚನಂ ಧೀಮಾನ್ ಜಾಜಲಿರ್ಜಪತಾಂ ವರಃ||

ಭೀಷ್ಮನು ಹೇಳಿದನು: “ಧೀಮಂತ ತುಲಾಧಾರನು ಹೀಗೆ ಹೇಳಲು ಜಪಿಗಳಲ್ಲಿ ಶ್ರೇಷ್ಠ ಧೀಮಾನ ಜಾಜಲಿಯು ಈ ಮಾತನ್ನಾಡಿದನು:

12254002a ವಿಕ್ರೀಣಾನಃ ಸರ್ವರಸಾನ್ಸರ್ವಗಂಧಾಂಶ್ಚ ವಾಣಿಜ|

12254002c ವನಸ್ಪತೀನೋಷಧೀಶ್ಚ ತೇಷಾಂ ಮೂಲಫಲಾನಿ ಚ||

12254003a ಅಧ್ಯಗಾ ನೈಷ್ಠಿಕೀಂ ಬುದ್ಧಿಂ ಕುತಸ್ತ್ವಾಮಿದಮಾಗತಮ್|

12254003c ಏತದಾಚಕ್ಷ್ವ ಮೇ ಸರ್ವಂ ನಿಖಿಲೇನ ಮಹಾಮತೇ||

“ವಾಣಿಜ! ಮಹಾಮತೇ! ಸರ್ವ ರಸಗಳನ್ನೂ, ಗಂಧಗಳನ್ನೂ, ವನಸ್ಪತಿಗಳನ್ನೂ, ಔಷಧಿಗಳನ್ನೂ, ಕಂದ-ಮೂಲ-ಫಲಗಳನ್ನೂ ವಿಕ್ರಯಿಸುತ್ತಿರುವ ನಿನಗೆ ಧರ್ಮದಲ್ಲಿಯೇ ನಿಷ್ಠವಾಗಿರುವ ಬುದ್ಧಿಯು ಎಲ್ಲಿಂದ ಬಂದಿತು? ನೀನು ಈ ಜ್ಞಾನವನ್ನು ಹೇಗೆ ಪಡೆದುಕೊಂಡೆ? ಈ ವಿಷಯದಲ್ಲಿ ಎಲ್ಲವನ್ನೂ ಸಂಪೂರ್ಣವಾಗಿ ನನಗೆ ಹೇಳು.”

12254004a ಏವಮುಕ್ತಸ್ತುಲಾಧಾರೋ ಬ್ರಾಹ್ಮಣೇನ ಯಶಸ್ವಿನಾ|

12254004c ಉವಾಚ ಧರ್ಮಸೂಕ್ಷ್ಮಾಣಿ ವೈಶ್ಯೋ ಧರ್ಮಾರ್ಥತತ್ತ್ವವಿತ್|

12254004e ಜಾಜಲಿಂ ಕಷ್ಟತಪಸಂ ಜ್ಞಾನತೃಪ್ತಸ್ತದಾ ನೃಪ||

ನೃಪ! ಯಶಸ್ವೀ ಬ್ರಾಹ್ಮಣನು ಹೀಗೆ ಹೇಳಲು ಧರ್ಮಾರ್ಥ ತತ್ತ್ವಗಳನ್ನು ತಿಳಿದಿದ್ದ ವೈಶ್ಯ ಜ್ಞಾನತೃಪ್ತ ತುಲಾಧಾರನು ಕಷ್ಟ ತಪಸ್ಸನ್ನು ತಪಿಸಿದ್ದ ಜಾಜಲಿಗೆ ಧರ್ಮಸೂಕ್ಷ್ಮಗಳನ್ನು ಹೇಳಿದನು:

12254005a ವೇದಾಹಂ ಜಾಜಲೇ ಧರ್ಮಂ ಸರಹಸ್ಯಂ ಸನಾತನಮ್|

12254005c ಸರ್ವಭೂತಹಿತಂ ಮೈತ್ರಂ ಪುರಾಣಂ ಯಂ ಜನಾ ವಿದುಃ||

“ಜಾಜಲೇ! ಸರ್ವಭೂತಗಳಿಗೂ ಹಿತಕರವಾಗಿರುವ ಮತ್ತು ಎಲ್ಲರೊಡನೆಯೂ ಮೈತ್ರೀಭಾವವನ್ನುಂಟುಮಾಡುವ ಯಾವ ಧರ್ಮವನ್ನು ಜನರು ಪುರಾತನವೆಂದು ತಿಳಿದಿರುವರೋ ಅಂತಹ ಸನಾತನ ಧರ್ಮವನ್ನು ರಹಸ್ಯಗಳೊಂದಿಗೆ ನಾನು ತಿಳಿದಿದ್ದೇನೆ.

12254006a ಅದ್ರೋಹೇಣೈವ ಭೂತಾನಾಮಲ್ಪದ್ರೋಹೇಣ ವಾ ಪುನಃ|

12254006c ಯಾ ವೃತ್ತಿಃ ಸ ಪರೋ ಧರ್ಮಸ್ತೇನ ಜೀವಾಮಿ ಜಾಜಲೇ||

ಜಾಜಲೇ! ಯಾವ ರೀತಿಯ ಜೀವನ ನಿರ್ವಹಣೆಯಿಂದ ಯಾವುದಕ್ಕೂ ದ್ರೋಹವಾಗುವುದಿಲ್ಲವೋ ಅಥವಾ ಅತ್ಯಲ್ಪ ದ್ರೋಹವಾಗುವುದೋ ಅಂತಹ ಜೀವನವೃತ್ತಿಯನ್ನು ಅನುಸರಿಸುವುದೇ ಪರಮ ಧರ್ಮವು. ಅದೇ ಧರ್ಮದಿಂದ ಜೀವಿಸುತ್ತಿದ್ದೇನೆ.

12254007a ಪರಿಚ್ಚಿನ್ನೈಃ ಕಾಷ್ಠತೃಣೈರ್ಮಯೇದಂ ಶರಣಂ ಕೃತಮ್|

12254007c ಅಲಕ್ತಂ ಪದ್ಮಕಂ ತುಂಗಂ ಗಂಧಾಂಶ್ಚೋಚ್ಚಾವಚಾಂಸ್ತಥಾ||

12254008a ರಸಾಂಶ್ಚ ತಾಂಸ್ತಾನ್ವಿಪ್ರರ್ಷೇ ಮದ್ಯವರ್ಜಾನಹಂ ಬಹೂನ್|

12254008c ಕ್ರೀತ್ವಾ ವೈ ಪ್ರತಿವಿಕ್ರೀಣೇ ಪರಹಸ್ತಾದಮಾಯಯಾ||

ವಿಪ್ರರ್ಷೇ! ಕಟ್ಟಿಗೆ ಮತ್ತು ಹುಲ್ಲಿನಿಂದ ಈ ಮನೆಯನ್ನು ಕಟ್ಟಿಕೊಂಡಿದ್ದೇನೆ. ಅರಗು, ಪದ್ಮಕ[1], ತುಂಗ[2], ಗಂಧ ಮತ್ತು ಮದ್ಯವನ್ನು ಬಿಟ್ಟು ವಿವಿಧ ರಸ-ಗಂಧಗಳನ್ನು ಖರೀದಿಸಿ ಮೋಸ-ವಂಚನೆಗಳಿಲ್ಲದೇ ಮಾರಿ ಜೀವಿಸುತ್ತಿದ್ದೇನೆ.

12254009a ಸರ್ವೇಷಾಂ ಯಃ ಸುಹೃನ್ನಿತ್ಯಂ ಸರ್ವೇಷಾಂ ಚ ಹಿತೇ ರತಃ|

12254009c ಕರ್ಮಣಾ ಮನಸಾ ವಾಚಾ ಸ ಧರ್ಮಂ ವೇದ ಜಾಜಲೇ||

ಜಾಜಲೇ! ಯಾರು ನಿತ್ಯವೂ ಎಲ್ಲರೊಡನೆಯೂ ಕರ್ಮ, ಮನಸ್ಸು ಮತ್ತು ಮಾತುಗಳಲ್ಲಿ ಸುಹೃದಯನಾಗಿರುವನೋ ಮತ್ತು ಸರ್ವರ ಹಿತದಲ್ಲಿ ನಿರತನಾಗಿರುವನೋ ಅವನೇ ಧರ್ಮವನ್ನು ತಿಳಿದಿರುತ್ತಾನೆ.

12254010a ನಾಹಂ ಪರೇಷಾಂ ಕರ್ಮಾಣಿ ಪ್ರಶಂಸಾಮಿ ಶಪಾಮಿ ವಾ|

12254010c ಆಕಾಶಸ್ಯೇವ ವಿಪ್ರರ್ಷೇ ಪಶ್ಯಽಲ್ಲೋಕಸ್ಯ ಚಿತ್ರತಾಮ್||

ವಿಪ್ರರ್ಷೇ! ಆಕಾಶದಲ್ಲಿ ಚಿತ್ರಿತವಾಗಿರುವ ಲೋಕವನ್ನು ಹೇಗೋ ಹಾಗೆ ನಾನು ಪರರ ಕರ್ಮಗಳನ್ನು ಪ್ರಶಂಸಿಸುವುದೂ ಇಲ್ಲ ಅಥವಾ ನಿಂದಿಸುವುದೂ ಇಲ್ಲ[3].

12254011a ನಾನುರುಧ್ಯೇ ವಿರುಧ್ಯೇ ವಾ ನ ದ್ವೇಷ್ಮಿ ನ ಚ ಕಾಮಯೇ|

12254011c ಸಮೋಽಸ್ಮಿ ಸರ್ವಭೂತೇಷು ಪಶ್ಯ ಮೇ ಜಾಜಲೇ ವ್ರತಮ್||

ಜಾಜಲೇ! ಯಾರನ್ನೂ ನಾನು ತೃಪ್ತಿಪಡಿಸಲು ಪ್ರಯತ್ನಿಸುವುದಿಲ್ಲ ಅಥವಾ ಅತೃಪ್ತಿಗೊಳಿಸಲೂ ಪ್ರಯತ್ನಿಸುವುದಿಲ್ಲ. ಯಾರನ್ನು ದ್ವೇಷಿಸುವುದೂ ಇಲ್ಲ. ಕಾಮಿಸುವುದೂ ಇಲ್ಲ. ಸರ್ವಭೂತಗಳಲ್ಲಿ ಸಮನಾಗಿದ್ದೇನೆ. ನನ್ನ ಈ ವ್ರತವನ್ನು ನೋಡು.

12254012a ಇಷ್ಟಾನಿಷ್ಟವಿಮುಕ್ತಸ್ಯ ಪ್ರೀತಿರಾಗಬಹಿಷ್ಕೃತಃ|

12254012c ತುಲಾ ಮೇ ಸರ್ವಭೂತೇಷು ಸಮಾ ತಿಷ್ಠತಿ ಜಾಜಲೇ||

ಜಾಜಲೇ! ಇಷ್ಟ-ಅನಿಷ್ಟಗಳಿಂದ ವಿಮುಕ್ತನಾಗಿ, ಪ್ರೀತಿ-ರಾಗಗಳನ್ನು ಬಹಿಷ್ಕರಿಸಿ ನನ್ನ ತಕ್ಕಡಿಯು ಸರ್ವಭೂತಗಳ ವಿಷಯದಲ್ಲಿಯೂ ಸಮವಾಗಿ ನಿಂತಿರುತ್ತದೆ.

12254013a ಇತಿ ಮಾಂ ತ್ವಂ ವಿಜಾನೀಹಿ ಸರ್ವಲೋಕಸ್ಯ ಜಾಜಲೇ|

12254013c ಸಮಂ ಮತಿಮತಾಂ ಶ್ರೇಷ್ಠ ಸಮಲೋಷ್ಟಾಶ್ಮಕಾಂಚನಮ್||

ಜಾಜಲೇ! ಮತಿವಂತರಲ್ಲಿ ಶ್ರೇಷ್ಠ! ಹೀಗೆ ನೀನು ನನ್ನನ್ನು ಸರ್ವಪ್ರಾಣಿಗಳಲ್ಲಿಯೂ ಸಮಭಾವವಿರುವವನೆಂದೂ ಮತ್ತು ಮಣ್ಣುಹಂಟೆ ಮತ್ತು ಚಿನ್ನಗಳನ್ನು ಸಮನಾಗಿ ಭಾವಿಸಿರುವವನೆಂದೂ ತಿಳಿ.

12254014a ಯಥಾಂಧಬಧಿರೋನ್ಮತ್ತಾ ಉಚ್ಚ್ವಾಸಪರಮಾಃ ಸದಾ|

12254014c ದೇವೈರಪಿಹಿತದ್ವಾರಾಃ ಸೋಪಮಾ ಪಶ್ಯತೋ ಮಮ||

ದೇವತೆಗಳಿಂದ ಮುಚ್ಚಲ್ಪಟ್ಟ ಇಂದ್ರಿಯಗಳಿಂದ ಕೂಡಿ ಹೇಗೆ ಕುರುಡ, ಕಿವುಡ ಅಥವಾ ಹುಚ್ಚು ಮನುಷ್ಯರು ಸದಾ ಕೇವಲ ಉಸಿರಾಟವುಳ್ಳವರಾಗಿರುತ್ತಾರೋ ಹಾಗೆ ಲೋಕವನ್ನು ನೋಡುವ ನನಗೂ ಅದೇ ಉಪಮಾನವನ್ನು ಕೊಡಬಹುದು[4].

12254015a ಯಥಾ ವೃದ್ಧಾತುರಕೃಶಾ ನಿಃಸ್ಪೃಹಾ ವಿಷಯಾನ್ ಪ್ರತಿ|

12254015c ತಥಾರ್ಥಕಾಮಭೋಗೇಷು ಮಮಾಪಿ ವಿಗತಾ ಸ್ಪೃಹಾ||

ವೃದ್ಧರಿಗೆ, ರೋಗಿಗಳಿಗೆ ಮತ್ತು ದುರ್ಬಲರಿಗೆ ಹೇಗೆ ವಿಷಯಭೋಗಗಳಲ್ಲಿ ಆಸಕ್ತಿಯೇ ಇರುವುದಿಲ್ಲವೋ ಹಾಗೆ ನನಗೂ ಅರ್ಥ-ಕಾಮ ಭೋಗಗಳಲ್ಲಿನ ಆಸಕ್ತಿಯೇ ಹೊರಟುಹೋಗಿದೆ.

12254016a ಯದಾ ಚಾಯಂ ನ ಬಿಭೇತಿ ಯದಾ ಚಾಸ್ಮಾನ್ನ ಬಿಭ್ಯತಿ|

12254016c ಯದಾ ನೇಚ್ಚತಿ ನ ದ್ವೇಷ್ಟಿ ತದಾ ಸಿಧ್ಯತಿ ವೈ ದ್ವಿಜಃ||

ಯಾವಾಗ ಬೇರೆಯವರಿಗೆ ಭಯಪಡುವುದಿಲ್ಲವೋ, ಯಾವಾಗ ಬೇರೆಯವರಿಗೆ ಭಯವನ್ನುಂಟುಮಾಡುವುದಿಲ್ಲವೋ, ಮತ್ತು ಯಾವಾಗ ಯಾವುದನ್ನೂ ಇಚ್ಛಿಸುವುದಿಲ್ಲವೋ ಅಥವಾ ದ್ವೇಷಿಸುವುದಿಲ್ಲವೋ ಆಗ ದ್ವಿಜನು ಸಿದ್ಧಿಯನ್ನು ಹೊಂದುತ್ತಾನೆ.

12254017a ಯದಾ ನ ಕುರುತೇ ಭಾವಂ ಸರ್ವಭೂತೇಷು ಪಾಪಕಮ್|

12254017c ಕರ್ಮಣಾ ಮನಸಾ ವಾಚಾ ಬ್ರಹ್ಮ ಸಂಪದ್ಯತೇ ತದಾ||

ಯಾವಾಗ ಕಾಯಾ-ವಾಚಾ-ಮನಸಾ ಸರ್ವಭೂತಗಳಲ್ಲಿಯೂ ಪಾಪಭಾವನೆಯನ್ನು ಇಟ್ಟುಕೊಳ್ಳುವುದಿಲ್ಲವೋ ಆಗ ಮನುಷ್ಯನಿಗೆ ಬ್ರಹ್ಮಭಾವವು ಉಂಟಾಗುತ್ತದೆ.

12254018a ನ ಭೂತೋ ನ ಭವಿಷ್ಯಶ್ಚ ನ ಚ ಧರ್ಮೋಽಸ್ತಿ ಕಶ್ಚನ|

12254018c ಯೋಽಭಯಃ ಸರ್ವಭೂತಾನಾಂ ಸ ಪ್ರಾಪ್ನೋತ್ಯಭಯಂ ಪದಮ್||

ಯಾರಿಗೆ ಭೂತ, ಭವಿಷ್ಯ ಮತ್ತು ಧರ್ಮಗಳ್ಯಾವುವೂ ಇಲ್ಲವೋ[5] ಮತ್ತು ಯಾರು ಸರ್ವಭೂತಗಳಿಗೂ ಅಭಯವನ್ನು ನೀಡುತ್ತಾನೋ ಅವನು ನಿರ್ಭಯ ಪದವನ್ನು ಹೊಂದುತ್ತಾನೆ.

12254019a ಯಸ್ಮಾದುದ್ವಿಜತೇ ಲೋಕಃ ಸರ್ವೋ ಮೃತ್ಯುಮುಖಾದಿವ|

12254019c ವಾಕ್ಕ್ರೂರಾದ್ದಂಡಪಾರುಷ್ಯಾತ್ಸ ಪ್ರಾಪ್ನೋತಿ ಮಹದ್ಭಯಮ್||

ಯಾರನ್ನು ನೋಡಿ ಸರ್ವ ಲೋಕವೂ ಮೃತ್ಯುವಿನ ಮುಖವನ್ನು ನೋಡಿದಂತೆ ಭಯಪಡುವುದೋ ಅಂಥಹ ಕಠೋರಮಾತನ್ನಾಡುವ ಮತ್ತು ಕಠಿಣ ಶಿಕ್ಷೆಗಳನ್ನು ವಿಧಿಸುವವನು ಮಹಾಭಯವನ್ನು ಹೊಂದುತ್ತಾನೆ.

12254020a ಯಥಾವದ್ವರ್ತಮಾನಾನಾಂ ವೃದ್ಧಾನಾಂ ಪುತ್ರಪೌತ್ರಿಣಾಮ್|

12254020c ಅನುವರ್ತಾಮಹೇ ವೃತ್ತಮಹಿಂಸ್ರಾಣಾಂ ಮಹಾತ್ಮನಾಮ್||

ಪುತ್ರಪೌತ್ರರನ್ನು ಪಡೆದಿರುವ, ಯಾರಿಗೂ ಹಿಂಸೆಯಾಗದಂತೆ ನಡೆದುಕೊಳ್ಳುವ ಮಹಾತ್ಮ ವೃದ್ಧರನ್ನು ನಾವು ಅನುಸರಿಸುತ್ತಿದ್ದೇವೆ.

12254021a ಪ್ರನಷ್ಟಃ ಶಾಶ್ವತೋ ಧರ್ಮಃ ಸದಾಚಾರೇಣ[6] ಮೋಹಿತಃ|

12254021c ತೇನ ವೈದ್ಯಸ್ತಪಸ್ವೀ ವಾ ಬಲವಾನ್ವಾ ವಿಮೋಹ್ಯತೇ||

ಮೋಹದಿಂದ ಸದಾಚಾರ ಯುಕ್ತವಾದ ಶಾಶ್ವತ ಧರ್ಮವು ನಾಶವಾಗುತ್ತಿದೆ. ಅದರಿಂದಾಗಿ ವಿದ್ವಾಂಸರೂ, ತಪಸ್ವಿಗಳೂ, ಬಲಶಾಲಿಗಳೂ ವಿಮೋಹಿತರಾಗುತ್ತಾರೆ.

12254022a ಆಚಾರಾಜ್ಜಾಜಲೇ ಪ್ರಾಜ್ಞಃ ಕ್ಷಿಪ್ರಂ ಧರ್ಮಮವಾಪ್ನುಯಾತ್|

12254022c ಏವಂ ಯಃ ಸಾಧುಭಿರ್ದಾಂತಶ್ಚರೇದದ್ರೋಹಚೇತಸಾ||

ಜಾಜಲೇ! ಜಿತೇಂದ್ರಿಯನಾಗಿದ್ದುಕೊಂಡು ತನ್ನ ಮನಸ್ಸಿನಲ್ಲಿಯೂ ಇತರರಿಗೆ ದ್ರೋಹವನ್ನೆಣಿಸದೇ ಸಾಧುಪುರುಷರ ಸದಾಚಾರಗಳನ್ನೇ ಅನುಸರಿಸುವ ಪ್ರಾಜ್ಞನು ಬೇಗನೇ ಧರ್ಮವನ್ನು ಪಡೆದುಕೊಳ್ಳುತ್ತಾನೆ.

12254023a ನದ್ಯಾಂ ಯಥಾ ಚೇಹ ಕಾಷ್ಠಮುಹ್ಯಮಾನಂ ಯದೃಚ್ಚಯಾ|

12254023c ಯದೃಚ್ಚಯೈವ ಕಾಷ್ಠೇನ ಸಂಧಿಂ ಗಚ್ಚೇತ ಕೇನ ಚಿತ್||

12254024a ತತ್ರಾಪರಾಣಿ ದಾರೂಣಿ ಸಂಸೃಜ್ಯಂತೇ ತತಸ್ತತಃ|

12254024c ತೃಣಕಾಷ್ಠಕರೀಷಾಣಿ ಕದಾ ಚಿನ್ನಸಮೀಕ್ಷಯಾ|

12254024e ಏವಮೇವಾಯಮಾಚಾರಃ ಪ್ರಾದುರ್ಭೂತೋ ಯತಸ್ತತಃ||

ನದಿಯಲ್ಲಿ ತಾನೇ ತಾನಾಗಿ ತೇಲಿಬರುತ್ತಿರುವ ಕಟ್ಟಿಗೆಯು ತಾನೇ ತಾನಾಗಿ ತೇಲಿಬರುತ್ತಿರುವ ಇನ್ನೊಂದು ಕಟ್ಟಿಗೆಯೊಡನೆ ಹೇಗೆ ಸೇರಿಕೊಳ್ಳುತ್ತದೆಯೋ, ಮತ್ತು ಹಾಗೆ ಆ ಎರಡೂ ಕಟ್ಟಿಗೆಗಳು ತೇಲಿಹೋಗುತ್ತಿರುವಾಗ ಅವುಗಳೊಂದಿಗೆ ನದಿಯಲ್ಲಿ ತೇಲಿಕೊಂಡು ಬರುತ್ತಿರುವ ಇನ್ನೂ ಹಲವಾರು ಕಟ್ಟಿಗೆಗಳು ಹೇಗೆ ಸೇರಿಕೊಳ್ಳುತ್ತವೆಯೋ, ಮತ್ತು ಹಾಗೆಯೇ ಅವುಗಳೊಂದಿಗೆ ಹುಲ್ಲು, ಕಟ್ಟಿಗೆ, ಬೆರಣಿಯ ಚೂರುಗಳು ಹೇಗೆ ಸೇರಿಕೊಳ್ಳುತ್ತವೆಯೋ ಹಾಗೆ ಸಂಸಾರದಲ್ಲಿ ಪರಸ್ಪರ ಸಂಯೋಗ-ವಿಯೋಗಗಳು ಯಾವ ಪೂರ್ವಯೋಜಿತ ಕ್ರಮವೂ ಇಲ್ಲದೇ ಆಗುತ್ತಲೇ ಇರುತ್ತವೆ.

12254025a ಯಸ್ಮಾನ್ನೋದ್ವಿಜತೇ ಭೂತಂ ಜಾತು ಕಿಂ ಚಿತ್ಕಥಂ ಚನ|

12254025c ಅಭಯಂ ಸರ್ವಭೂತೇಭ್ಯಃ ಸ ಪ್ರಾಪ್ನೋತಿ ಸದಾ ಮುನೇ||

ಮುನೇ! ಯಾರ ಕಾರಣದಿಂದ ಯಾವ ಪ್ರಾಣಿಯೂ ಎಂದೂ ಭಯಪಡುವುದಿಲ್ಲವೋ ಅವನಿಗೆ ಸರ್ವಭೂತಗಳಿಂದಲೂ ಅಭಯವು ದೊರೆಯುತ್ತದೆ.

12254026a ಯಸ್ಮಾದುದ್ವಿಜತೇ ವಿದ್ವನ್ಸರ್ವಲೋಕೋ ವೃಕಾದಿವ|

12254026c ಕ್ರೋಶತಸ್ತೀರಮಾಸಾದ್ಯ ಯಥಾ ಸರ್ವೇ ಜಲೇಚರಾಃ||

ವಿದ್ವಾನ್! ನದಿಯ ತೀರಕ್ಕೆ ಬಂದು ಕೂಗಿಕೊಳ್ಳುವ ತೋಳಕ್ಕೆ ನದಿಯಲ್ಲಿರುವ ಜಲಚರಪ್ರಾಣಿಗಳು ಹೇಗೆ ಭಯಪಡುವವೋ ಹಾಗೆ ಕಠೋರಸ್ವಭಾವದವನ ಕಾರಣದಿಂದ ಸರ್ವಲೋಕವೂ ಉದ್ವೇಗಗೊಳ್ಳುತ್ತದೆ.

12254027a ಸಹಾಯವಾನ್ ದ್ರವ್ಯವಾನ್ಯಃ ಸುಭಗೋಽನ್ಯೋಽಪರಸ್ತಥಾ|

12254027c ತತಸ್ತಾನೇವ ಕವಯಃ ಶಾಸ್ತ್ರೇಷು ಪ್ರವದಂತ್ಯುತ|

12254027e ಕೀರ್ತ್ಯರ್ಥಮಲ್ಪಹೃಲ್ಲೇಖಾಃ ಪಟವಃ ಕೃತ್ಸ್ನನಿರ್ಣಯಾಃ||

ಈ ಅಭಯಾಚರವನ್ನು ಪಾಲಿಸುವವನು ಸಹಾಯಕರಿಂದ ಕೂಡಿದವನಾಗುತ್ತಾನೆ. ದ್ರವ್ಯವಂತನಾಗುತ್ತಾನೆ. ಸೌಭಾಗ್ಯಶಾಲಿಯಾಗುತ್ತಾನೆ ಮತ್ತು ಶ್ರೇಷ್ಠನೆನಿಸಿಕೊಳ್ಳುತ್ತಾನೆ. ಅವನನ್ನೇ ವಿದ್ವಾಂಸರು ಶಾಸ್ತ್ರಗಳಲ್ಲಿ ಶ್ರೇಷ್ಠನೆಂದು ಕರೆಯುತ್ತಾರೆ. ಜ್ಞಾನಪಟುಗಳು ಪೂರ್ಣರೂಪದ ಪರಬ್ರಹ್ಮದ ಪ್ರಾಪ್ತಿಗಾಗಿಯೇ ಅಭಯದಾನವ್ರತವನ್ನು ಪರಿಪಾಲಿಸುತ್ತಾರೆ.

12254028a ತಪೋಭಿರ್ಯಜ್ಞದಾನೈಶ್ಚ ವಾಕ್ಯೈಃ ಪ್ರಜ್ಞಾಶ್ರಿತೈಸ್ತಥಾ|

12254028c ಪ್ರಾಪ್ನೋತ್ಯಭಯದಾನಸ್ಯ ಯದ್ಯತ್ಫಲಮಿಹಾಶ್ನುತೇ||

ತಪಸ್ಸು, ಯಜ್ಞ, ದಾನ ಮತ್ತು ಜ್ಞಾನೋಪದೇಶಗಳ ಮೂಲಕ ಮನುಷ್ಯನು ಇಲ್ಲಿ ಯಾವ ಫಲಗಳನ್ನು ಹೊಂದುತ್ತಾನೋ ಆ ಎಲ್ಲ ಫಲಗಳನ್ನೂ ಅಭಯದಾನದಿಂದಲೇ ಪಡೆದುಕೊಳ್ಳುತ್ತಾನೆ.

12254029a ಲೋಕೇ ಯಃ ಸರ್ವಭೂತೇಭ್ಯೋ ದದಾತ್ಯಭಯದಕ್ಷಿಣಾಮ್|

12254029c ಸ ಸರ್ವಯಜ್ಞೈರೀಜಾನಃ ಪ್ರಾಪ್ನೋತ್ಯಭಯದಕ್ಷಿಣಾಮ್|

12254029e ನ ಭೂತಾನಾಮಹಿಂಸಾಯಾ ಜ್ಯಾಯಾನ್ಧರ್ಮೋಽಸ್ತಿ ಕಶ್ಚನ||

ಲೋಕದಲ್ಲಿ ಯಾರು ಸರ್ವಭೂತಗಳಿಗೂ ಅಭಯವೆಂಬ ದಕ್ಷಿಣೆಯನ್ನು ನೀಡುತ್ತಾನೋ ಅವನು ಸರ್ವಯಜ್ಞಗಳನ್ನು ಮಾಡಿದ ಪುಣ್ಯವನ್ನು ಪಡೆದುಕೊಳ್ಳುತ್ತಾನೆ ಮತ್ತು ಇತರರಿಂದ ಅಭಯದಕ್ಷಿಣೆಯನ್ನು ಪಡೆದುಕೊಳ್ಳುತ್ತಾನೆ. ಪ್ರಾಣಿಗಳಿಗೆ ಹಿಂಸೆಯನ್ನು ಮಾಡದೇ ಇರುವುದಕ್ಕಿಂತ ಹೆಚ್ಚಿನ ಧರ್ಮವು ಬೇರೆ ಯಾವುದೂ ಇಲ್ಲ.

12254030a ಯಸ್ಮಾನ್ನೋದ್ವಿಜತೇ ಭೂತಂ ಜಾತು ಕಿಂ ಚಿತ್ಕಥಂ ಚನ|

12254030c ಸೋಽಭಯಂ ಸರ್ವಭೂತೇಭ್ಯಃ ಸಂಪ್ರಾಪ್ನೋತಿ ಮಹಾಮುನೇ||

ಮಹಾಮುನೇ! ಯಾರು ಯಾರಿಗೂ ಯಾವ ಕಾಲದಲ್ಲಿಯೂ ಯಾವುದೇ ರೀತಿಯ ಉದ್ವೇಗಗಳನ್ನು ಉಂಟುಮಾಡುವುದಿಲ್ಲವೋ ಅವನು ಸರ್ವಭೂತಗಳಿಂದಲೂ ಅಭಯವನ್ನು ಹೊಂದುತ್ತಾನೆ.

12254031a ಯಸ್ಮಾದುದ್ವಿಜತೇ ಲೋಕಃ ಸರ್ಪಾದ್ವೇಶ್ಮಗತಾದಿವ|

12254031c ನ ಸ ಧರ್ಮಮವಾಪ್ನೋತಿ ಇಹ ಲೋಕೇ ಪರತ್ರ ಚ||

ಮನೆಗೆ ಹೊಕ್ಕಿರುವ ಸರ್ಪದಿಂದ ಹೇಗೋ ಹಾಗೆ ಯಾರಿಂದ ಈ ಲೋಕವು ಉದ್ವಿಗ್ನಗೊಳ್ಳುವುದೋ ಅವನು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಕೂಡ ಧರ್ಮವನ್ನು ಹೊಂದುವುದಿಲ್ಲ.

12254032a ಸರ್ವಭೂತಾತ್ಮಭೂತಸ್ಯ ಸಮ್ಯಗ್ ಭೂತಾನಿ ಪಶ್ಯತಃ|

12254032c ದೇವಾಪಿ ಮಾರ್ಗೇ ಮುಹ್ಯಂತಿ ಅಪದಸ್ಯ ಪದೈಷಿಣಃ||

ಎಲ್ಲವಕ್ಕೂ ಆತ್ಮನಾಗಿರುವ, ಎಲ್ಲವನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿರುವ ಪರಮಾತ್ಮನ ಪದವನ್ನು ಹೊಂದುವಾಗ ಆ ಪದವನ್ನು ಬಯಸುವ ದೇವತೆಗಳೂ ಮೋಹಗೊಳ್ಳುತ್ತಾರೆ.

12254033a ದಾನಂ ಭೂತಾಭಯಸ್ಯಾಹುಃ ಸರ್ವದಾನೇಭ್ಯ ಉತ್ತಮಮ್|

12254033c ಬ್ರವೀಮಿ ತೇ ಸತ್ಯಮಿದಂ ಶ್ರದ್ದಧಸ್ವ ಚ ಜಾಜಲೇ||

ಜಾಜಲೇ! ಪ್ರಾಣಿಗಳಿಗೆ ಅಭಯದಾನಮಾಡುವುದು ಎಲ್ಲ ದಾನಕ್ಕಿಂತಲೂ ಉತ್ತಮವೆಂದು ಹೇಳುತ್ತಾರೆ. ಈ ಸತ್ಯವನ್ನು ನಾನು ನಿನಗೆ ಹೇಳುತ್ತಿದ್ದೇನೆ. ಇದರಲ್ಲಿ ಶ್ರದ್ಧೆಯನ್ನಿಡು.

12254034a ಸ ಏವ ಸುಭಗೋ ಭೂತ್ವಾ ಪುನರ್ಭವತಿ ದುರ್ಭಗಃ|

12254034c ವ್ಯಾಪತ್ತಿಂ ಕರ್ಮಣಾಂ ದೃಷ್ಟ್ವಾ ಜುಗುಪ್ಸಂತಿ ಜನಾಃ ಸದಾ||

ಅವರೇ ಸುಭಗರಾಗಿ ಪುನಃ ದುರ್ಭಗರಾಗುವರು. ಆದುದರಿಂದ ಕರ್ಮಫಲಗಳು ಕ್ರಮೇಣ ನಷ್ಟವಾಗುವುದನ್ನು ನೋಡಿ ವಿದ್ವಾಂಸರು ಕಾಮ್ಯ ಕರ್ಮಗಳನ್ನು ಜುಗುಪ್ಸೆಯಿಂದ ನೋಡುತ್ತಾರೆ.

12254035a ಅಕಾರಣೋ ಹಿ ನೇಹಾಸ್ತಿ ಧರ್ಮಃ ಸೂಕ್ಷ್ಮೋಽಪಿ ಜಾಜಲೇ|

12254035c ಭೂತಭವ್ಯಾರ್ಥಮೇವೇಹ ಧರ್ಮಪ್ರವಚನಂ ಕೃತಮ್||

ಜಾಜಲೇ! ಧರ್ಮವು ಸೂಕ್ಷ್ಮವಾಗಿದ್ದರೂ ಅದು ನಿಷ್ಪ್ರಯೋಜಕವಾದುದಲ್ಲ. ಇರುವವುಗಳ ಮಂಗಳಕ್ಕಾಗಿಯೇ ಧರ್ಮದ ಕುರಿತು ಹೇಳಲಾಗಿದೆ.

12254036a ಸೂಕ್ಷ್ಮತ್ವಾನ್ನ ಸ ವಿಜ್ಞಾತುಂ ಶಕ್ಯತೇ ಬಹುನಿಹ್ನವಃ|

12254036c ಉಪಲಭ್ಯಾಂತರಾ ಚಾನ್ಯಾನಾಚಾರಾನವಬುಧ್ಯತೇ||

ಸೂಕ್ಷ್ಮತ್ವದಿಂದಾಗಿ ಅನೇಕರಿಗೆ ಧರ್ಮವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಅನೇಕ ರೀತಿಯಲ್ಲಿ ಅದು ಅಡಗಿಕೊಂಡಿರುತ್ತದೆ. ಅನ್ಯರ ಆಚಾರದಿಂದಲೇ ಅದನ್ನು ತಿಳಿದುಕೊಳ್ಳಬಹುದು.

12254037a ಯೇ ಚ ಚಿಂದಂತಿ ವೃಷಣಾನ್ಯೇ ಚ ಭಿಂದಂತಿ ನಸ್ತಕಾನ್|

12254037c ವಹಂತಿ ಮಹತೋ ಭಾರಾನ್ ಬಧ್ನಂತಿ ದಮಯಂತಿ ಚ||

12254038a ಹತ್ವಾ ಸತ್ತ್ವಾನಿ ಖಾದಂತಿ ತಾನ್ಕಥಂ ನ ವಿಗರ್ಹಸೇ|

12254038c ಮಾನುಷಾ ಮಾನುಷಾನೇವ ದಾಸಭೋಗೇನ ಬುಂಜತೇ||

ಕೆಲವರು ಹೋರಿಗಳ ಬೀಜಗಳನ್ನು ಒಡೆಯುತ್ತಾರೆ. ಮೂಗಿನ ಹೊಳ್ಳೆಗಳನ್ನು ಒಡೆದು ಮೂಗುದಾರವನ್ನು ಹಾಕುತ್ತಾರೆ. ಗಾಡಿಗಳಿಗೆ ಕಟ್ಟಿ ಅದರ ಮೇಲೆ ಭಾರವನ್ನು ಹೊರಿಸುತ್ತಾರೆ. ನೇಗಿಲಿಗೆ ಕಟ್ಟಿ ಹೂಳುತ್ತಾರೆ. ಹೊಡೆದು ನಿಯಂತ್ರಿಸುತ್ತಾರೆ. ಕೆಲವರು ಪ್ರಾಣಿಗಳನ್ನು ಕೊಂದು ತಿನ್ನುತ್ತಾರೆ. ಮನುಷ್ಯರು ಮನುಷ್ಯರನ್ನೇ ಗುಲಾಮರನ್ನಾಗಿರಿಸಿಕೊಂಡು ಭೋಗಿಸುತ್ತಾರೆ. ಅವರನ್ನು ನೀನು ಏಕೆ ನಿಂದಿಸುವುದಿಲ್ಲ?

12254039a ವಧಬಂಧವಿರೋಧೇನ ಕಾರಯಂತಿ ದಿವಾನಿಶಮ್|

12254039c ಆತ್ಮನಾ ಚಾಪಿ ಜಾನಾಸಿ ಯದ್ದುಃಖಂ ವಧತಾಡನೇ||

ಹಿಂಸೆ ಮತ್ತು ಬಂಧನಗಳಿಂದ ತಮಗಾಗುವ ದುಃಖವನ್ನು ತಿಳಿದುಕೊಂಡಿದ್ದರೂ ಹಗಲು-ರಾತ್ರಿ ಇತರರನ್ನು ಹಿಂಸೆಗೊಳಿಸಿ ಬಂಧನದಲ್ಲಿಟ್ಟು ದುಡಿಮೆಮಾಡಿಸಿಕೊಳ್ಳುವವರನ್ನು ನೀನೇಕೆ ನಿಂದಿಸುತ್ತಿಲ್ಲ?

12254040a ಪಂಚೇಂದ್ರಿಯೇಷು ಭೂತೇಷು ಸರ್ವಂ ವಸತಿ ದೈವತಮ್|

12254040c ಆದಿತ್ಯಶ್ಚಂದ್ರಮಾ ವಾಯುರ್ಬ್ರಹ್ಮಾ ಪ್ರಾಣಃ ಕ್ರತುರ್ಯಮಃ||

ಎಲ್ಲ ಪ್ರಾಣಿಗಳ ಪಂಚೇಂದ್ರಿಯಗಳಲ್ಲಿ ಆದಿತ್ಯ, ಚಂದ್ರ, ವಾಯು, ಬ್ರಹ್ಮ, ಪ್ರಾಣ, ಯಜ್ಞ ಮತ್ತು ಯಮರಾಜ – ಈ ದೇವತೆಗಳು ವಾಸಿಸುತ್ತಾರೆ.

12254041a ತಾನಿ ಜೀವಾನಿ ವಿಕ್ರೀಯ ಕಾ ಮೃತೇಷು ವಿಚಾರಣಾ|

[7]12254041c ಕಾ ತೈಲೇ ಕಾ ಘೃತೇ ಬ್ರಹ್ಮನ್ಮಧುನ್ಯಪ್ಸ್ವೌಷಧೇಷು ವಾ||

ಜೀವಿತಪ್ರಾಣಿಗಳನ್ನು ಮಾರಿ ಜೀವಿಸುವವನಿಗೆ ಪಾಪವುಂಟಾಗುತ್ತದೆ ಇನ್ನು ಸತ್ತ ಪ್ರಾಣಿಗಳನ್ನು ಮಾರಿ ಜೀವಿಸುವವನ ಕುರಿತು ಹೇಳುವುದೇನಿದೆ? ಬ್ರಹ್ಮನ್! ಎಣ್ಣೆ, ತುಪ್ಪ, ಜೇನುತುಪ್ಪ ಮತ್ತು ಔಷಧಿಗಳನ್ನು ವಿಕ್ರಯಿಸುವುದರಿಂದ ಯಾವ ಹಾನಿಯಿದೆ?

12254042a ಅದಂಶಮಶಕೇ ದೇಶೇ ಸುಖಂ ಸಂವರ್ಧಿತಾನ್ ಪಶೂನ್|

12254042c ತಾಂಶ್ಚ ಮಾತುಃ ಪ್ರಿಯಾನ್ಜಾನನ್ನಾಕ್ರಮ್ಯ ಬಹುಧಾ ನರಾಃ|

12254042e ಬಹುದಂಶಕುಶಾನ್ ದೇಶಾನ್ನಯಂತಿ ಬಹುಕರ್ದಮಾನ್||

ಸೊಳ್ಳೆ-ಕಾಡುನೊಣಗಳು ಇಲ್ಲದಿರುವ ದೇಶಗಳಲ್ಲಿ ಸುಖದಿಂದ ಬೆಳೆದ ಹಸುವಿನ ಕರುಗಳನ್ನು  - ಅವುಗಳಿಗೆ ತಾಯಿಯು ಪ್ರಿಯಳಾದವಳೆಂದು ತಿಳಿದೂ - ಕ್ರೂರಿ ಜನರು ಆಕ್ರಮಿಸಿ ಎಳೆದುಕೊಂಡು ಸೊಳ್ಳೆ-ಕಾಡುನೊಣಗಳು ಇರುವ ಪ್ರದೇಶಗಳಿಗೆ ಒಯ್ಯುತ್ತಾರೆ.

12254043a ವಾಹಸಂಪೀಡಿತಾ ಧುರ್ಯಾಃ ಸೀದಂತ್ಯವಿಧಿನಾಪರೇ|

12254043c ನ ಮನ್ಯೇ ಭ್ರೂಣಹತ್ಯಾಪಿ ವಿಶಿಷ್ಟಾ ತೇನ ಕರ್ಮಣಾ||

ಅವುಗಳನ್ನು ನೀತಿ-ನಿಯಮಗಳಲ್ಲಿದ ಗಾಡಿಗಳಿಗೆ ಅಥವಾ ನೇಗಿಲುಗಳಿಗೆ ಕಟ್ಟಿ ಬಹಳವಾಗಿ ಪೀಡಿಸುತ್ತಾರೆ. ಹೀಗೆ ಅತಿ ಭಾರವನ್ನು ಹೊರುವ ಹೋರಿಗಳು ಬಹಳ ಬೇಗ ವಿನಾಶಹೊಂದುತ್ತವೆ. ಇಂಥಹ ಕರ್ಮಕ್ಕಿಂತ ಭ್ರೂಣಹತ್ಯೆಯೂ ಹೆಚ್ಚು ಪಾಪದ್ದು ಎಂದು ನನಗನಿಸುವುದಿಲ್ಲ.

12254044a ಕೃಷಿಂ ಸಾಧ್ವಿತಿ ಮನ್ಯಂತೇ ಸಾ ಚ ವೃತ್ತಿಃ ಸುದಾರುಣಾ|

12254044c ಭೂಮಿಂ ಭೂಮಿಶಯಾಂಶ್ಚೈವ ಹಂತಿ ಕಾಷ್ಠಮಯೋಮುಖಮ್|

12254044e ತಥೈವಾನಡುಹೋ ಯುಕ್ತಾನ್ಸಮವೇಕ್ಷಸ್ವ ಜಾಜಲೇ||

ಕೆಲವರು ಕೃಷಿಮಾಡುವುದೇ ಒಳ್ಳೆಯದು ಎಂದು ಅಭಿಪ್ರಾಯಪಡುತ್ತಾರೆ. ಆದರೆ ಆ ವೃತ್ತಿಯೂ ದಾರುಣವಾದದ್ದೇ. ಕಬ್ಬಿಣದ ಮೊನಚಾದ ನೇಗಿಲು ಭೂಮಿಯನ್ನು ಪೀಡಿಸುವುದಲ್ಲದೇ ಭೂಮಿಯೊಳಗಿರುವ ಹುಳು-ಹುಪ್ಪಟೆಗಳನ್ನೂ ಕೊಲ್ಲುತ್ತದೆ. ಇನ್ನು ಅದಕ್ಕೆ ಕಟ್ಟಿದ ಎತ್ತುಗಳ ಪಾಡೇನೋ!

12254045a ಅಘ್ನ್ಯಾ ಇತಿ ಗವಾಂ ನಾಮ ಕ ಏನಾನ್ ಹಂತುಮರ್ಹತಿ|

12254045c ಮಹಚ್ಚಕಾರಾಕುಶಲಂ ಪೃಷಧ್ರೋ ಗಾಲಭನ್ನಿವ||

“ಅಘ್ನ್ಯಾ” ಅರ್ಥಾತ್ ಕೊಲ್ಲಲ್ಪಡತಕ್ಕವುಗಳಲ್ಲ ಎಂಬ ಹೆಸರೂ ಗೋವಿಗಳಿರುವಾಗ ಇವುಗಳನ್ನು ಯಾರು ತಾನೇ ಕೊಲ್ಲಬಹುದು? ಹಸುವನ್ನಾಗಲೀ ಎತ್ತನ್ನಾಗಲೀ ಕೊಲ್ಲುವವರು ಮಹಾ ಅಶುಭಕರ ಪಾಪವನ್ನೇ ಮಾಡಿದವರಾಗಿತ್ತಾರೆ.

12254046a ಋಷಯೋ ಯತಯೋ ಹ್ಯೇತನ್ನಹುಷೇ ಪ್ರತ್ಯವೇದಯನ್|

12254046c ಗಾಂ ಮಾತರಂ ಚಾಪ್ಯವಧೀರ್ವೃಷಭಂ ಚ ಪ್ರಜಾಪತಿಮ್|

12254046e ಅಕಾರ್ಯಂ ನಹುಷಾಕಾರ್ಷೀರ್ಲಪ್ಸ್ಯಾಮಸ್ತ್ವತ್ಕೃತೇ ಭಯಮ್||

ಋಷಿಗಳು ಮತ್ತು ಯತಿಗಳು ನಹುಷನಿಗೆ ಇದನ್ನು ಹೇಳಿದ್ದರು: “ನೀನು ತಾಯಿಯಾದ ಗೋವನ್ನೂ ಪ್ರಜಾಪತಿಯಾದ ಎತ್ತನ್ನೂ ಕೊಂದಿರುವೆ. ನಹುಷ! ಇದರಿಂದಾಗಿ ನೀನು ಮಾಡಬಾರದ ಪಾಪಕಾರ್ಯವನ್ನು ಮಾಡಿರುವೆ. ಕುತ್ಸಿತವಾದ ಈ ನಿನ್ನ ಕರ್ಮದಿಂದ ನಾವು ಭಯಪಟ್ಟಿದ್ದೇವೆ.”

12254047a ಶತಂ ಚೈಕಂ ಚ ರೋಗಾಣಾಂ ಸರ್ವಭೂತೇಷ್ವಪಾತಯನ್|

12254047c ಋಷಯಸ್ತೇ ಮಹಾಭಾಗಾಃ ಪ್ರಜಾಸ್ವೇವ ಹಿ ಜಾಜಲೇ|

12254047e ಭ್ರೂಣಹಂ ನಹುಷಂ ತ್ವಾಹುರ್ನ ತೇ ಹೋಷ್ಯಾಮಹೇ ಹವಿಃ||

ಜಾಜಲೇ! ಆ ಮಹಾಭಾಗ ಋಷಿಗಳು ನಂತರ ಅವನ ಪಾಪವನ್ನು ನೂರಾಒಂದು ರೋಗಗಳನ್ನಾಗಿ ಪರಿವರ್ತಿಸಿ ಎಲ್ಲ ಪ್ರಾಣಿಗಳ ಮೇಲೂ ಹಾಕಿಬಿಟ್ಟರು. ನಹುಷನನ್ನು ಭ್ರೂಣಹತೆಯನ್ನು ಮಾಡಿದವನೆಂದು ನಿಂದಿಸಿ “ನೀನು ಮಾಡುವ ಯಜ್ಞಗಳಲ್ಲಿ ನಾವು ಹವಿಸ್ಸನ್ನು ಹಾಕುವುದಿಲ್ಲ” ಎಂದರು.

12254048a ಇತ್ಯುಕ್ತ್ವಾ ತೇ ಮಹಾತ್ಮಾನಃ ಸರ್ವೇ ತತ್ತ್ವಾರ್ಥದರ್ಶಿನಃ|

12254048c ಋಷಯೋ ಯತಯಃ ಶಾಂತಾಸ್ತರಸಾ ಪ್ರತ್ಯವೇದಯನ್||

ಹೀಗೆ ಹೇಳಿ ಆ ಮಹಾತ್ಮ ತತ್ತ್ವಾರ್ಥದರ್ಶಿ ಋಷಿಗಳೂ ಯತಿಗಳೂ ಆ ಕೃತ್ಯವು ಅವನಿಂದ ಅಜ್ಞಾನದ ಕಾರಣದಿಂದ ನಡೆದು ಹೋಯಿತೆಂದು ತಿಳಿದು ಶಾಂತರಾದರು.

12254049a ಈದೃಶಾನಶಿವಾನ್ಘೋರಾನಾಚಾರಾನಿಹ ಜಾಜಲೇ|

12254049c ಕೇವಲಾಚರಿತತ್ವಾತ್ತು ನಿಪುಣಾನ್ನಾವಬುಧ್ಯಸೇ||

ಜಾಜಲೇ! ಇಂತಹ ಅಮಂಗಳಕರ ಘೋರ ಆಚಾರಗಳು ಇಲ್ಲಿ ನಡೆಯುತ್ತಿದ್ದರೂ ನಿನ್ನ ನಿಪುಣ ಬುದ್ಧಿಯು ಇವುಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ.

12254050a ಕಾರಣಾದ್ಧರ್ಮಮನ್ವಿಚ್ಚೇನ್ನ ಲೋಕಚರಿತಂ ಚರೇತ್|

12254050c ಯೋ ಹನ್ಯಾದ್ಯಶ್ಚ ಮಾಂ ಸ್ತೌತಿ ತತ್ರಾಪಿ ಶೃಣು ಜಾಜಲೇ||

12254051a ಸಮೌ ತಾವಪಿ ಮೇ ಸ್ಯಾತಾಂ ನ ಹಿ ಮೇ ಸ್ತಃ ಪ್ರಿಯಾಪ್ರಿಯೇ|

12254051c ಏತದೀದೃಶಕಂ ಧರ್ಮಂ ಪ್ರಶಂಸಂತಿ ಮನೀಷಿಣಃ||

ಜಾಜಲೇ! ಸಕಾರಣವಾಗಿ ಧರ್ಮವನ್ನು ತಿಳಿದುಕೊಳ್ಳಬೇಕು. ಲೋಕವು ಆಚರಿಸುತ್ತದೆ ಎಂದು ಆಚರಿಸಲು ಹೋಗಬಾರದು. ನನ್ನ ಕುರಿತು ಕೇಳು. ನನ್ನನ್ನು ಹಿಂಸಿಸುವವನು ಮತ್ತು ಸ್ತುತಿಸುವವನು ಇಬ್ಬರೂ ನನಗೆ ಸಮಾನರೇ ಸರಿ. ಅವರಲ್ಲಿ ಹಿಂಸಿಸುವವನು ಅಪ್ರಿಯನೆಂದೂ ಮತ್ತು ಪ್ರಶಂಸಿಸುವವನು ಪ್ರಿಯನೆಂದೂ ಭಾವಿಸುವುದಿಲ್ಲ. ಇಂತಹ ಸಮದೃಷ್ಟಿಯನ್ನೇ ವಿದ್ವಾಂಸರು ಧರ್ಮ ಎಂದು ಪ್ರಶಂಸಿಸುತ್ತಾರೆ.

12254052a ಉಪಪತ್ತ್ಯಾ ಹಿ ಸಂಪನ್ನೋ ಯತಿಭಿಶ್ಚೈವ ಸೇವ್ಯತೇ|

12254052c ಸತತಂ ಧರ್ಮಶೀಲೈಶ್ಚ ನೈಪುಣ್ಯೇನೋಪಲಕ್ಷಿತಃ||

ವಿವೇಚನಾ ಸಂಪನ್ನವಾದ ಈ ಸಮತ್ವನೈಪುಣ್ಯದಿಂದ ಕೂಡಿದ ಈ ಧರ್ಮವು ಯತಿಗಳಿಗೂ ಮತ್ತು ಧರ್ಮಶೀಲರಿಗೂ ಹಿಡಿಸುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ತುಲಾಭಾರಜಾಜಲಿಸಂವಾದೇ ಚತುರ್ಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ತುಲಾಭಾರಜಾಜಲಿಸಂವಾದ ಎನ್ನುವ ಇನ್ನೂರಾಐವತ್ನಾಲ್ಕನೇ ಅಧ್ಯಾಯವು.

Lavender Flowers White Background Free Stock Photo - Public Domain Pictures

[1] ಒಂದು ಮೂಲಿಕೆ.

[2] ಸುರಹೊನ್ನೇಮರದ ತೊಗಟೆ.

[3] ಆಕಾಶದಲ್ಲಿರುವ ವಿಚಿತ್ರತರವಾದ ಗ್ರಹ-ನಕ್ಷತ್ರಗಳಂತೆ ಲೋಕದಲ್ಲಿ ನಡೆಯುವ ವಿಚಿತ್ರತರ ಸಂಗತಿಗಳನ್ನು ನೋಡುತ್ತಾ ಇರುವ ನಾನು ಇತರರು ಮಾಡಿದ ಕಾರ್ಯಗಳನ್ನು ಪ್ರಶಂಸೆಮಾಡುವುದೂ ಇಲ್ಲ. ನಿಂದಿಸುವುದೂ ಇಲ್ಲ. ಆಕಾಶದಂತೆ ನಿರ್ಲಿಪ್ತನಾಗಿರುತ್ತೇನೆ (ಭಾರತದರ್ಶನ).

[4] ನಾನು ನೋಡುತ್ತಿರುವವನಂತೆ ಕಂಡರೂ ಹುಟ್ಟು ಕುರುಡನಂತೆ ಯಾರನ್ನೂ ನೋಡುತ್ತಿರುವುದಿಲ್ಲ. ಇನ್ನೊಬ್ಬರು ಹೇಳುವುದನ್ನು ಕೇಳುವವನಂತೆ ಕಂಡರೂ ಹುಟ್ಟು ಕಿವುಡನಂತೆ ಯಾರ ಮಾತನ್ನೂ ಕೇಳುತ್ತಿರುವುದಿಲ್ಲ. ಹುಚ್ಚನಂತೆ ಯಾವಾಗಲೂ ಆಧ್ಯಾತ್ಮದಲ್ಲಿಯೇ ಆಸಕ್ತನಾಗಿರುತ್ತೇನೆ.

[5] ಯಾರು ಜ್ಞಾನದಿಂದ ತನ್ನ ಸಂಚಿತ, ಆಗಮ ಮತ್ತು ಪ್ರಾರಬ್ಧ ಕರ್ಮಗಳನ್ನು ಸುಟ್ಟುಹಾಕಿರುವನೋ ಅವನು.

[6] ಧರ್ಮಸ್ತ್ವನಾಚಾರೇಣ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಜೋಽಗ್ನಿರ್ವರುಣೋ ಮೇಷಃ ಸೂರ್ಯೋಽಶ್ಚಃ ಪೃಥಿವೀ ವಿರಾಟ್| ಧೇನುರ್ವತ್ಸಶ್ಚ ಸೋಮೋ ವೈ ವಿಕ್ರೀಯೈತನ್ನ ಸಿಧ್ಯತಿ||

Comments are closed.