Shanti Parva: Chapter 253

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೩

ಜಾಜಲಿಯ ಘೋರ ತಪಸ್ಸು (1-19); ತಲೆಯ ಮೇಲೆ ಪಕ್ಷಿಯು ಗೂಡುಕಟ್ಟಿದುದರಿಂದ ಅವನಿಗುಂಟಾದ ಆತ್ಮಾಭಿಮಾನ (20-41); ಆಕಾಶವಾಣಿಯ ಪ್ರೇರಣೆಯಂತೆ ವೈಶ್ಯನಾದ ತುಲಾಧಾರನ ಬಳಿ ಜಾಜಲಿಯ ಆಗಮನ (42-51).

12253001 ಭೀಷ್ಮ ಉವಾಚ|

12253001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12253001c ತುಲಾಧಾರಸ್ಯ ವಾಕ್ಯಾನಿ ಧರ್ಮೇ ಜಾಜಲಿನಾ ಸಹ||

ಭೀಷ್ಮನು ಹೇಳಿದನು: ”ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಜಾಜಲಿಗೆ ತುಲಾಧಾರನು ಹೇಳಿದ ಧರ್ಮದ ಕುರಿತಾದ ಈ ಮಾತುಗಳನ್ನು ಉದಾಹರಿಸುತ್ತಾರೆ.

12253002a ವನೇ ವನಚರಃ ಕಶ್ಚಿಜ್ಜಾಜಲಿರ್ನಾಮ ವೈ ದ್ವಿಜಃ|

12253002c ಸಾಗರೋದ್ದೇಶಮಾಗಮ್ಯ ತಪಸ್ತೇಪೇ ಮಹಾತಪಾಃ||

ವನದಲ್ಲಿ ವನಚರನಾಗಿ ವಾಸಿಸುತ್ತಿದ್ದ ಮಹಾತಪಸ್ವೀ ಜಾಜಲಿ ಎಂಬ ಹೆಸರಿನ ಓರ್ವ ದ್ವಿಜನು ಸಾಗರತೀರಕ್ಕೆ ಬಂದು ತಪಸ್ಸನ್ನು ತಪಿಸಿದನು.

12253003a ನಿಯತೋ ನಿಯತಾಹಾರಶ್ಚೀರಾಜಿನಜಟಾಧರಃ|

12253003c ಮಲಪಂಕಧರೋ ಧೀಮಾನ್ಬಹೂನ್ ವರ್ಷಗಣಾನ್ಮುನಿಃ||

ಚೀರ-ಅಜಿನ-ಜಟೆಗಳನ್ನು ಧರಿಸಿದ್ದ ಆ ಧೀಮಂತ ಮುನಿಯು ನಿಯಮದಿಂದಿರುತ್ತಾ ನಿಯತಾಹಾರನಾಗಿ ಅನೇಕ ವರ್ಷಗಳ ವರೆಗೆ ಮೈಮೇಲೆ ಕೊಳೆಯನ್ನೂ ಕೆಸರನ್ನೂ ಧರಿಸಿಕೊಂಡೇ ಇದ್ದನು.

12253004a ಸ ಕದಾ ಚಿನ್ಮಹಾತೇಜಾ ಜಲವಾಸೋ ಮಹೀಪತೇ|

12253004c ಚಚಾರ ಲೋಕಾನ್ವಿಪ್ರರ್ಷಿಃ ಪ್ರೇಕ್ಷಮಾಣೋ ಮನೋಜವಃ||

ಮಹೀಪತೇ! ಒಮ್ಮೊಮ್ಮೆ ಆ ಮಹಾತೇಜಸ್ವಿ ವಿಪ್ರರ್ಷಿಯು ಮನೋವೇಗದಿಂದ ಲೋಕಗಳನ್ನು ವೀಕ್ಷಿಸುತ್ತಾ ಸಂಚರಿಸಿ ಜಲವಾಸಿಯಾಗುತ್ತಿದ್ದನು.

12253005a ಸ ಚಿಂತಯಾಮಾಸ ಮುನಿರ್ಜಲಮಧ್ಯೇ ಕದಾ ಚನ|

12253005c ವಿಪ್ರೇಕ್ಷ್ಯ ಸಾಗರಾಂತಾಂ ವೈ ಮಹೀಂ ಸವನಕಾನನಾಮ್||

ಒಮ್ಮೆ ಸಾಗರವೇ ಕೊನೆಯಾಗುಳ್ಳ ವನಕಾನನಗಳಿಂದ ಕೂಡಿದ್ದ ಮಹಿಯನ್ನು ನಿರೀಕ್ಷಿಸಿ ಜಲಮಧ್ಯೆ ಸೇರಿದ ಮುನಿಯು ಈ ರೀತಿ ಆಲೋಚಿಸಿದನು:

12253006a ನ ಮಯಾ ಸದೃಶೋಽಸ್ತೀಹ ಲೋಕೇ ಸ್ಥಾವರಜಂಗಮೇ|

12253006c ಅಪ್ಸು ವೈಹಾಯಸಂ ಗಚ್ಚೇನ್ಮಯಾ ಯೋಽನ್ಯಃ ಸಹೇತಿ ವೈ||

“ಈ ಲೋಕದ ಸ್ಥಾವರ-ಜಂಗಮಗಳಲ್ಲೆಲ್ಲ ನನ್ನ ಸದೃಶರಾದವರು ಯಾರೂ ಇಲ್ಲ. ನೀರು ಮತ್ತು ಆಕಾಶಗಳಲ್ಲಿ ನನ್ನೊಡನೆ ಸಂಚರಿಸಲು ಯಾರಿಗೆ ತಾನೇ ಸಾಧ್ಯವಿದೆ?”

12253007a ಸ ದೃಶ್ಯಮಾನೋ ರಕ್ಷೋಭಿರ್ಜಲಮಧ್ಯೇಽವದತ್ತತಃ|

12253007c ಅಬ್ರುವಂಶ್ಚ ಪಿಶಾಚಾಸ್ತಂ ನೈವಂ ತ್ವಂ ವಕ್ತುಮರ್ಹಸಿ||

ಜಲಮಧ್ಯದಲ್ಲಿ ಈ ರೀತಿ ಹೇಳುತ್ತಿದ್ದ ಅವನನ್ನು ರಾಕ್ಷಸರು ನೋಡಿದರು. ಆಗ ಪಿಶಾಚರು ಅವನಿಗೆ “ಹೀಗೆ ಹೇಳುವುದು ಸರಿಯಲ್ಲ” ಎಂದರು.

12253008a ತುಲಾಧಾರೋ ವಣಿಗ್ಧರ್ಮಾ ವಾರಾಣಸ್ಯಾಂ ಮಹಾಯಶಾಃ|

12253008c ಸೋಽಪ್ಯೇವಂ ನಾರ್ಹತೇ ವಕ್ತುಂ ಯಥಾ ತ್ವಂ ದ್ವಿಜಸತ್ತಮ||

“ದ್ವಿಜಸತ್ತಮ! ವಾರಾಣಸಿಯಲ್ಲಿ ಮಹಾಯಶೋವಂತನಾದ ವೈಶ್ಯಧರ್ಮವನ್ನು ಪಾಲಿಸುತ್ತಿರುವ ತುಲಾಧಾರನೂ ಕೂಡ ನೀನು ಹೇಳಿದಂತೆ ಹೇಳುವವನಲ್ಲ.”

12253009a ಇತ್ಯುಕ್ತೋ ಜಾಜಲಿರ್ಭೂತೈಃ ಪ್ರತ್ಯುವಾಚ ಮಹಾತಪಾಃ|

12253009c ಪಶ್ಯೇಯಂ ತಮಹಂ ಪ್ರಾಜ್ಞಂ ತುಲಾಧಾರಂ ಯಶಸ್ವಿನಮ್||

ಭೂತಗಳು ಹೀಗೆ ಹೇಳಲು ಮಹಾತಪಸ್ವೀ ಜಾಜಲಿಯು ಅವರಿಗೆ ಪ್ರತ್ಯುತ್ತರಿಸಿದನು: “ಯಶಸ್ವಿನೀ ಪ್ರಾಜ್ಞ ತುಲಾಧಾರನನ್ನು ನಾನು ಈಗಲೇ ಸಂದರ್ಶಿಸುತ್ತೇನೆ.”

12253010a ಇತಿ ಬ್ರುವಾಣಂ ತಮೃಷಿಂ ರಕ್ಷಾಂಸ್ಯುದ್ಧೃತ್ಯ ಸಾಗರಾತ್|

12253010c ಅಬ್ರುವನ್ ಗಚ್ಚ ಪಂಥಾನಮಾಸ್ಥಾಯೇಮಂ ದ್ವಿಜೋತ್ತಮ||

ಹೀಗೆ ಹೇಳಿದ ಆ ಋಷಿಯನ್ನು ರಾಕ್ಷಸರು ಸಾಗರದಿಂದ ಮೇಲಕ್ಕೆತ್ತಿ ಹೇಳಿದರು: “ದ್ವಿಜೋತ್ತಮ! ಈ ಮಾರ್ಗವನ್ನೇ ಹಿಡಿದು ಹೋಗು!”

12253011a ಇತ್ಯುಕ್ತೋ ಜಾಜಲಿರ್ಭೂತೈರ್ಜಗಾಮ ವಿಮನಾಸ್ತದಾ|

12253011c ವಾರಾಣಸ್ಯಾಂ ತುಲಾಧಾರಂ ಸಮಾಸಾದ್ಯಾಬ್ರವೀದ್ವಚಃ||

ಭೂತಗಳಿಂದ ಇದನ್ನು ಕೇಳಿದ ಜಾಜಲಿಯು ವಿಮನಸ್ಕನಾಗಿಯೇ ವಾರಾಣಸಿಯ ತುಲಾಧಾರನ ಬಳಿಸಾರಿ ಅವನಿಗೆ ಹೀಗೆ ಹೇಳಿದನು.”

12253012 ಯುಧಿಷ್ಠಿರ ಉವಾಚ|

12253012a ಕಿಂ ಕೃತಂ ಸುಕೃತಂ ಕರ್ಮ ತಾತ ಜಾಜಲಿನಾ ಪುರಾ|

12253012c ಯೇನ ಸಿದ್ಧಿಂ ಪರಾಂ ಪ್ರಾಪ್ತಸ್ತನ್ನೋ ವ್ಯಾಖ್ಯಾತುಮರ್ಹಸಿ||

ಯುಧಿಷ್ಠಿರನು ಹೇಳಿದನು: “ತಂದೆಯೇ! ಅಂಥಹ ಪರಮ ಸಿದ್ಧಿಯನ್ನು ಪಡೆಯಲು ಜಾಜಲಿಯು ಹಿಂದೆ ಯಾವ ಸುಕೃತ ಕರ್ಮವನ್ನು ಮಾಡಿದ್ದನು? ಅದನ್ನು ನನಗೆ ಹೇಳಬೇಕು.”

12253013 ಭೀಷ್ಮ ಉವಾಚ|

12253013a ಅತೀವ ತಪಸಾ ಯುಕ್ತೋ ಘೋರೇಣ ಸ ಬಭೂವ ಹ|

12253013c ನದ್ಯುಪಸ್ಪರ್ಶನರತಃ ಸಾಯಂ ಪ್ರಾತರ್ಮಹಾತಪಾಃ||

ಭೀಷ್ಮನು ಹೇಳಿದನು: “ಅವನು ಅತೀವ ಘೋರ ತಪಸ್ಸಿನಲ್ಲಿ ನಿರತನಾಗಿದ್ದನು. ಆ ಮಹಾತಪಸ್ವಿಯು ಪ್ರಾತಃ-ಸಾಯಂ ಸಮಯಗಳಲ್ಲಿ ಸ್ನಾನಮಾಡಿ ಸಂಧ್ಯಾವಂದನೆಗಳನ್ನು ಮಾಡುತ್ತಿದ್ದನು.

12253014a ಅಗ್ನೀನ್ ಪರಿಚರನ್ ಸಮ್ಯಕ್ ಸ್ವಾಧ್ಯಾಯಪರಮೋ ದ್ವಿಜಃ|

12253014c ವಾನಪ್ರಸ್ಥವಿಧಾನಜ್ಞೋ ಜಾಜಲಿರ್ಜ್ವಲಿತಃ ಶ್ರಿಯಾ||

ವಿಧಿಪೂರ್ವಕವಾಗಿ ಅಗ್ನಿಕಾರ್ಯಗಳನ್ನು ಮಾಡುತ್ತಿದ್ದನು ಮತ್ತು ಆ ಪರಮ ದ್ವಿಜನು ಸ್ವಾಧ್ಯಾಯಪರನಾಗಿದ್ದನು. ವಾನಪ್ರಸ್ಥವಿಧಾನಗಳನ್ನು ತಿಳಿದಿದ್ದ ಜಾಜಲಿಯು ಕಾಂತಿಯಿಂದ ಬೆಳಗುತ್ತಿದ್ದನು.

12253015a ಸತ್ಯೇ ತಪಸಿ ತಿಷ್ಠನ್ಸ ನ ಚ ಧರ್ಮಮವೈಕ್ಷತ|

12253015c ವರ್ಷಾಸ್ವಾಕಾಶಶಾಯೀ ಸ ಹೇಮಂತೇ ಜಲಸಂಶ್ರಯಃ||

ಸತ್ಯ ತಪಸ್ಸಿನಲ್ಲಿ ನಿರತನಾಗಿದ್ದ ಅವನು ಧರ್ಮವನ್ನು ಎಂದೂ ಕಡೆಗಾಣಲಿಲ್ಲ. ಮಳೆಗಾಲದಲ್ಲಿ ಅವನು ಆಕಾಶವನ್ನೇ ಹೊದಿಕೆಯನ್ನಾಗಿ ಮಾಡಿಕೊಂಡು ಮಲಗುತ್ತಿದ್ದನು. ಹೇಮಂತ ಋತುವಿನಲ್ಲಿ ನೀರಿನೊಳಗೆ ಕುಳಿತು ತಪಸ್ಸನ್ನಾಚರಿಸುತ್ತಿದ್ದನು.

12253016a ವತಾತಪಸಹೋ ಗ್ರೀಷ್ಮೇ ನ ಚ ಧರ್ಮಮವಿಂದತ|

12253016c ದುಃಖಶಯ್ಯಾಶ್ಚ ವಿವಿಧಾ ಭೂಮೌ ಚ ಪರಿವರ್ತನಮ್||

ಗ್ರೀಷ್ಮದಲ್ಲಿ ಗಾಳಿ-ಬಿಸಿಲುಗಳನ್ನು ಸಹಿಸಿಕೊಳ್ಳುತ್ತಿದ್ದನು. ಆದರೂ ಅವನಿಗೆ ಧರ್ಮವು ಏನೆಂದು ಅರ್ಥವಾಗಲಿಲ್ಲ. ಅವನು ಭೂಮಿಯ ಮೇಲೆ ಹೊರಳಾಡುತ್ತಿದ್ದನು. ದುಃಖವನ್ನುಂಟುಮಾಡುವ ವಿವಿಧ ಮುಳ್ಳಿನ ಹಾಸಿಗೆಗಳ ಮೇಲೆ ಮಲಗುತ್ತಿದ್ದನು.

12253017a ತತಃ ಕದಾ ಚಿತ್ಸ ಮುನಿರ್ವರ್ಷಾಸ್ವಾಕಾಶಮಾಸ್ಥಿತಃ|

12253017c ಅಂತರಿಕ್ಷಾಜ್ಜಲಂ ಮೂರ್ಧ್ನಾ ಪ್ರತ್ಯಗೃಹ್ಣಾನ್ಮುಹುರ್ಮುಹುಃ||

ಅನಂತರ ಒಮ್ಮೆ ವರ್ಷಾಕಾಲದಲ್ಲಿ ಆ ಮುನಿಯು ಆಕಾಶದ ಕೆಳಗೆ ನಿಂತನು. ಅಂತರಿಕ್ಷದಿಂದ ಮಳೆಯು ಅವನ ನೆತ್ತಿಯಮೇಲೆ ಮತ್ತೆ ಮತ್ತೆ ಬೀಳುತ್ತಿರಲು ಅದನ್ನು ಅವನು ಸಹಿಸಿಕೊಳ್ಳುತ್ತಿದ್ದನು.

12253018a ಅಥ ತಸ್ಯ ಜಟಾಃ ಕ್ಲಿನ್ನಾ ಬಭೂವುರ್ಗ್ರಥಿತಾಃ ಪ್ರಭೋ|

12253018c ಅರಣ್ಯಗಮನಾನ್ನಿತ್ಯಂ ಮಲಿನೋ ಮಲಸಂಯುತಾಃ||

ಪ್ರಭೋ! ಆಗ ಅವನ ಜಟೆಯು ಸಂಪೂರ್ಣ ಒದ್ದೆಯಾಗಿ ಕೂದಲುಗಳು ಜಡೆಗಟ್ಟಿಕೊಂಡವು. ನಿತ್ಯವೂ ಅರಣ್ಯದಲ್ಲಿ ತಿರುಗುತ್ತಿದ್ದುದರಿಂದ ಅವನ ಜಡೆಯು ಧೂಳಿನಿಂದ ತುಂಬಿ ಮಲಿನವಾಗಿತ್ತು.

12253019a ಸ ಕದಾ ಚಿನ್ನಿರಾಹಾರೋ ವಾಯುಭಕ್ಷೋ ಮಹಾತಪಾಃ|

12253019c ತಸ್ಥೌ ಕಾಷ್ಠವದವ್ಯಗ್ರೋ ನ ಚಚಾಲ ಚ ಕರ್ಹಿ ಚಿತ್||

ಎಷ್ಟೋ ಸಮಯ ಆ ಮಹಾತಪಸ್ವಿಯು ವಾಯುಭಕ್ಷಕನಾಗಿ ನಿರಾಹಾರನಾಗಿ ಕಟ್ಟಿಗೆಯಂತೆ ಅವ್ಯಗ್ರನಾಗಿ ನಿಂತು ಸ್ವಲ್ಪವೂ ಚಲಿಸುತ್ತಿರಲಿಲ್ಲ.

12253020a ತಸ್ಯ ಸ್ಮ ಸ್ಥಾಣುಭೂತಸ್ಯ ನಿರ್ವಿಚೇಷ್ಟಸ್ಯ ಭಾರತ|

12253020c ಕುಲಿಂಗಶಕುನೌ ರಾಜನ್ನೀಡಂ ಶಿರಸಿ ಚಕ್ರತುಃ||

ಭಾರತ! ರಾಜನ್! ಹಾಗೆ ನಿರ್ವಿಚೇಷ್ಟನಾಗಿ ಸ್ಥಾಣುವಂತೆ ನಿಂತಿದ್ದ ಅವನ ತಲೆಯ ಮೇಲೆ ಎರಡು ಗುಬ್ಬಚ್ಚಿಗಳು ಗೂಡನ್ನು ಕಟ್ಟಿಕೊಂಡವು.

12253021a ಸ ತೌ ದಯಾವಾನ್ವಿಪ್ರರ್ಷಿರುಪಪ್ರೈಕ್ಷತ ದಂಪತೀ|

12253021c ಕುರ್ವಾಣಂ ನೀಡಕಂ ತತ್ರ ಜಟಾಸು ತೃಣತಂತುಭಿಃ||

ಆ ಪಕ್ಷಿ ದಂಪತಿಗಳು ಹುಲ್ಲು-ಹಣಬೆಗಳನ್ನು ತಂದು ತನ್ನ ತಲೆಯ ಮೇಲೆ ಗೂಡುಕಟ್ಟಿಕೊಳ್ಳುತ್ತಿದ್ದರೂ ದಯಾವಂತನಾದ ಆ ವಿಪ್ರರ್ಷಿಯು ಅದನ್ನು ಉಪೇಕ್ಷಿಸಿದನು.

12253022a ಯದಾ ಸ ನ ಚಲತ್ಯೇವ ಸ್ಥಾಣುಭೂತೋ ಮಹಾತಪಾಃ|

12253022c ತತಸ್ತೌ ಪರಿವಿಶ್ವಸ್ತೌ ಸುಖಂ ತತ್ರೋಷತುಸ್ತದಾ||

ಸ್ಥಾಣುಭೂತನಾದ ಆ ಮಹಾತಪಸ್ವಿಯು ಚಲಿಸಲೇ ಇಲ್ಲ. ಆಗ ಆ ಗುಬ್ಬಚ್ಚಿಗಳಿಗೆ ವಿಶ್ವಾಸವುಂಟಾಗಿ ಅಲ್ಲಿಯೇ ಸುಖವಾಗಿ ವಾಸಿಸತೊಡಗಿದವು.

12253023a ಅತೀತಾಸ್ವಥ ವರ್ಷಾಸು ಶರತ್ಕಾಲ ಉಪಸ್ಥಿತೇ|

12253023c ಪ್ರಾಜಾಪತ್ಯೇನ ವಿಧಿನಾ ವಿಶ್ವಾಸಾತ್ಕಾಮಮೋಹಿತೌ||

ವರ್ಷಾಕಾಲವು ಮುಗಿದು ಶರತ್ಕಾಲವು ಪ್ರಾರಂಭವಾಗಲು ವಿಶ್ವಾಸದಿಂದ ಕಾಮಮೋಹಿತ ಪಕ್ಷಿದಂಪತಿಗಳು ಸಂತಾನೋತ್ಪತ್ತಿಯ ವಿಧಿಯಿಂದ ಪರಸ್ಪರ ಸಮಾಗಮ ಮಾಡಿದವು.

12253024a ತತ್ರಾಪಾತಯತಾಂ ರಾಜನ್ ಶಿರಸ್ಯಂಡಾನಿ ಖೇಚರೌ|

12253024c ತಾನ್ಯಬುಧ್ಯತ ತೇಜಸ್ವೀ ಸ ವಿಪ್ರಃ ಸಂಶಿತವ್ರತಃ||

ರಾಜನ್! ಆ ಪಕ್ಷಿಗಳು ಅವನ ತಲೆಯಮೇಲಿನ ಗೂಡಿನಲ್ಲಿಯೇ ಮೊಟ್ಟೆಗಳನ್ನಿಟ್ಟವು. ಸಂಶಿತವ್ರತ ತೇಜಸ್ವೀ ವಿಪ್ರನು ಅದನ್ನೂ ತಿಳಿದುಕೊಂಡನು.

12253025a ಬುದ್ಧ್ವಾ ಚ ಸ ಮಹಾತೇಜಾ ನ ಚಚಾಲೈವ ಜಾಜಲಿಃ|

12253025c ಧರ್ಮೇ ಧೃತಮನಾ ನಿತ್ಯಂ ನಾಧರ್ಮಂ ಸ ತ್ವರೋಚಯತ್||

ಅದನ್ನು ತಿಳಿದೂ ಆ ಮಹಾತೇಜಸ್ವೀ ಜಾಜಲಿಯು ಹಂದಾಡಲಿಲ್ಲ. ನಿತ್ಯವೂ ಧರ್ಮದಲ್ಲಿ ಧೃತಮನಸ್ಕನಾಗಿದ್ದ ಅವನು ಅಧರ್ಮವನ್ನೆಸಗಲು ಬಯಸಲಿಲ್ಲ.

12253026a ಅಹನ್ಯಹನಿ ಚಾಗಮ್ಯ ತತಸ್ತೌ ತಸ್ಯ ಮೂರ್ಧನಿ|

12253026c ಆಶ್ವಾಸಿತೌ ವೈ ವಸತಃ ಸಂಪ್ರಹೃಷ್ಟೌ ತದಾ ವಿಭೋ||

ವಿಭೋ! ಅನುದಿನವೂ ಹೊರಗೆ ಹೋಗಿ ಅವನ ಜಟೆಗೆ ಹಿಂದಿರುಗುತ್ತಿದ್ದ ಆ ಪಕ್ಷಿಗಳು ಆಶ್ವಾಸಿತರಾಗಿ ಸಂಪ್ರಹೃಷ್ಟರಾಗಿ ಅಲ್ಲಿಯೇ ವಾಸಮಾಡಿಕೊಂಡಿದ್ದವು.

12253027a ಅಂಡೇಭ್ಯಸ್ತ್ವಥ ಪುಷ್ಟೇಭ್ಯಃ ಪ್ರಜಾಯಂತ ಶಕುಂತಕಾಃ|

12253027c ವ್ಯವರ್ಧಂತ ಚ ತತ್ರೈವ ನ ಚಾಕಂಪತ ಜಾಜಲಿಃ||

ಅಷ್ಟರಲ್ಲಿಯೇ ಮೊಟ್ಟೆಗಳು ಬಲಿದು ಅವುಗಳಿಂದ ಪುಟ್ಟ ಪಕ್ಷಿಗಳು ಹುಟ್ಟಿಕೊಂಡು ಬೆಳೆಯತೊಡಗಿದವು. ಆಗಲೂ ಜಾಜಲಿಯು ಹಂದಾಡಲಿಲ್ಲ.

12253028a ಸ ರಕ್ಷಮಾಣಸ್ತ್ವಂಡಾನಿ ಕುಲಿಂಗಾನಾಂ ಯತವ್ರತಃ|

12253028c ತಥೈವ ತಸ್ಥೌ ಧರ್ಮಾತ್ಮಾ ನಿರ್ವಿಚೇಷ್ಟಃ ಸಮಾಹಿತಃ||

ಗುಬ್ಬಚ್ಚಿಗಳ ಆ ಮೊಟ್ಟೆಗಳನ್ನು ರಕ್ಷಿಸುತ್ತಾ ಆ ಯತವ್ರತ ಧರ್ಮಾತ್ಮಾ ಜಾಜಲಿಯು ಸಮಾಹಿತನಾಗಿ ಹಾಗೆಯೇ ನಿಂತುಕೊಂಡಿದ್ದನು.

12253029a ತತಸ್ತು ಕಾಲಸಮಯೇ ಬಭೂವುಸ್ತೇಽಥ ಪಕ್ಷಿಣಃ|

12253029c ಬುಬುಧೇ ತಾಂಶ್ಚ ಸ ಮುನಿರ್ಜಾತಪಕ್ಷಾನ್ ಶಕುಂತಕಾನ್||

ಅನಂತರ ಕಾಲಬಂದಹಾಗೆ ಗುಬ್ಬಚ್ಚಿಯ ಮರಿಗಳಿಗೆ ರೆಕ್ಕೆಗಳು ಮೂಡಿದವು. ಅದನ್ನೂ ಕೂಡ ಮುನಿಯು ತಿಳಿದುಕೊಂಡನು.

12253030a ತತಃ ಕದಾ ಚಿತ್ತಾಂಸ್ತತ್ರ ಪಶ್ಯನ್ಪಕ್ಷೀನ್ಯತವ್ರತಃ|

12253030c ಬಭೂವ ಪರಮಪ್ರೀತಸ್ತದಾ ಮತಿಮತಾಂ ವರಃ||

ಆಗ ಒಮ್ಮೆ ಆ ಪಕ್ಷಿಗಳೂ ಕೂಡ ಹಾರಾಡುತ್ತಾ ತನ್ನ ಬಳಿಗೆ ಬರುತ್ತಿರುವುದನ್ನು ಕಂಡು ಯತವ್ರತ ಮತಿಮಂತರಲ್ಲಿ ಶ್ರೇಷ್ಠ ಜಾಜಲಿಯು ಪರಮಪ್ರೀತನಾದನು.

12253031a ತಥಾ ತಾನಭಿಸಂವೃದ್ಧಾನ್ದೃಷ್ಟ್ವಾ ಚಾಪ್ನುವತಾಂ ಮುದಮ್|

12253031c ಶಕುನೌ ನಿರ್ಭಯೌ ತತ್ರ ಊಷತುಶ್ಚಾತ್ಮಜೈಃ ಸಹ||

ಹಾಗೆಯೇ ತಮ್ಮ ಮರಿಗಳು ದೊಡ್ಡವಾದುದನ್ನು ನೋಡಿ ಪಕ್ಷಿಗಳೂ ಸಂತಸಗೊಂಡವು. ನಿರ್ಭಯರಾಗಿ ಆ ಪಕ್ಷಿಗಳೆರಡೂ ತಮ್ಮ ಮರಿಗಳೊಂದಿಗೆ ಅಲ್ಲಿ  ವಾಸಮಾಡಿಕೊಂಡಿದ್ದವು.

12253032a ಜಾತಪಕ್ಷಾಂಶ್ಚ ಸೋಽಪಶ್ಯದುಡ್ಡೀನಾನ್ಪುನರಾಗತಾನ್|

12253032c ಸಾಯಂ ಸಾಯಂ ದ್ವಿಜಾನ್ವಿಪ್ರೋ ನ ಚಾಕಂಪತ ಜಾಜಲಿಃ||

ಮರಿಗಳೂ ಕೂಡ ರೆಕ್ಕೆಹೊಂದಿ ದೊಡ್ಡ ಪಕ್ಷಿಗಳಂತೆ ಬೆಳಿಗ್ಗೆ ಹೊರಹೋಗಿ ಸಾಯಂಕಾಲ ಹಿಂದಿರುಗಿ ಬರುತ್ತಿದ್ದುದನ್ನು ನೋಡಿದನು. ಅದರೂ ಆ ವಿಪ್ರ ಜಾಜಲಿಯು ಹಂದಾಡಲಿಲ್ಲ.

12253033a ಕದಾ ಚಿತ್ಪುನರಭ್ಯೇತ್ಯ ಪುನರ್ಗಚ್ಚಂತಿ ಸಂತತಮ್|

12253033c ತ್ಯಕ್ತಾ ಮಾತೃಪಿತೃಭ್ಯಾಂ ತೇ ನ ಚಾಕಂಪತ ಜಾಜಲಿಃ||

ಒಮ್ಮೊಮ್ಮೆ ತಾಯಿ-ತಂದೆ ಪಕ್ಷಿಗಳು ಮರಿಗಳನ್ನು ಗೂಡಿನಲ್ಲಿಯೇ ಬಿಟ್ಟು ಹೋಗುತ್ತಿದ್ದವು. ಒಮ್ಮೊಮ್ಮೆ ಮರಿಗಳೂ ಹೊರ ಹೋಗುತ್ತಿದ್ದವು. ಹೀಗೆ ಹೋಗುವ ಮತ್ತು ಬರುವ ಕೋಲಾಹಲಗಳು ನಡೆಯುತ್ತಿದ್ದರೂ ಜಾಜಲಿಯು ಹಂದಾಡಲಿಲ್ಲ.

12253034a ಅಥ ತೇ ದಿವಸಂ ಚಾರೀಂ ಗತ್ವಾ ಸಾಯಂ ಪುನರ್ನೃಪ|

12253034c ಉಪಾವರ್ತಂತ ತತ್ರೈವ ನಿವಾಸಾರ್ಥಂ ಶಕುಂತಕಾಃ||

ನೃಪ! ಆ ಪಕ್ಷಿಗಳು ದಿವಸವಿಡೀ ಹೊರಗೆ ಹೋಗಿ ಸಾಯಂಕಾಲ ವಾಸಮಾಡಲು ಪುನಃ ತಮ್ಮ ಗೂಡಿಗೆ ಹಿಂದಿರುಗುತ್ತಿದ್ದವು.

12253035a ಕದಾ ಚಿದ್ದಿವಸಾನ್ಪಂಚ ಸಮುತ್ಪತ್ಯ ವಿಹಂಗಮಾಃ|

12253035c ಷಷ್ಠೇಽಹನಿ ಸಮಾಜಗ್ಮುರ್ನ ಚಾಕಂಪತ ಜಾಜಲಿಃ||

ಕೆಲವೊಮ್ಮೆ ಆ ಪಕ್ಷಿಗಳು ಐದು ದಿನಗಳ ವರೆಗೆ ಹೊರಗಿದ್ದು ಆರನೆಯ ದಿನ ಗೂಡಿಗೆ ಹಿಂದಿರುಗುತ್ತಿದ್ದವು. ಆಗಲೂ ಜಾಜಲಿಯು ಹಂದಾಡಲಿಲ್ಲ.

12253036a ಕ್ರಮೇಣ ಚ ಪುನಃ ಸರ್ವೇ ದಿವಸಾನಿ ಬಹೂನ್ಯಪಿ|

12253036c ನೋಪಾವರ್ತಂತ ಶಕುನಾ ಜಾತಪ್ರಾಣಾಃ ಸ್ಮ ತೇ ಯದಾ||

ಕ್ರಮೇಣವಾಗಿ ಬಲಿಷ್ಟವಾದ ಆ ಪಕ್ಷಿಗಳು ಎಲ್ಲವೂ ಅನೇಕದಿನಗಳಾದರೂ ಪುನಃ ಹಿಂದಿರುಗುತ್ತಿರಲಿಲ್ಲ.

12253037a ಕದಾ ಚಿನ್ಮಾಸಮಾತ್ರೇಣ ಸಮುತ್ಪತ್ಯ ವಿಹಂಗಮಾಃ|

12253037c ನೈವಾಗಚ್ಚಂಸ್ತತೋ ರಾಜನ್ ಪ್ರಾತಿಷ್ಠತ ಸ ಜಾಜಲಿಃ||

ರಾಜನ್! ಒಮ್ಮೆ ಆ ಪಕ್ಷಿಗಳು ಗೂಡಿನಿಂದ ಹಾರಿಹೋಗಿ ಒಂದು ತಿಂಗಳು ಹಿಂದಿರುಗಲೇ ಇಲ್ಲ. ಆಗ ಜಾಜಲಿಯು ತನ್ನ ಸ್ಥಳದಿಂದ ಚಲಿಸಿದನು.

12253038a ತತಸ್ತೇಷು ಪ್ರಲೀನೇಷು ಜಾಜಲಿರ್ಜಾತವಿಸ್ಮಯಃ|

12253038c ಸಿದ್ಧೋಽಸ್ಮೀತಿ ಮತಿಂ ಚಕ್ರೇ ತತಸ್ತಂ ಮಾನ ಆವಿಶತ್||

ತನ್ನ ತಲೆಯ ಮೇಲೆ ಗೂಡುಮಾಡಿಕೊಂಡಿದ್ದ ಪಕ್ಷಿಗಳೆಲ್ಲವೂ ಅದೃಶ್ಯವಾಗಿ ಹೋದನಂತರ ಜಾಜಲಿಯು ವಿಸ್ಮಿತನಾದನು. ತಾನು ಸಿದ್ಧಪುರುಷನೆಂದೇ ಭಾವಿಸಿಕೊಂಡನು. ಆಗ ಅವನಲ್ಲಿ ಅಹಂಕಾರವು ಪ್ರವೇಶಿಸಿತು.

12253039a ಸ ತಥಾ ನಿರ್ಗತಾನ್ ದೃಷ್ಟ್ವಾ ಶಕುಂತಾನ್ನಿಯತವ್ರತಃ|

12253039c ಸಂಭಾವಿತಾತ್ಮಾ ಸಂಭಾವ್ಯ ಭೃಶಂ ಪ್ರೀತಸ್ತದಾಭವನ್||

ಆ ಪಕ್ಷಿಗಳು ಹೊರಟುಹೋದುದನ್ನು ನೋಡಿ ಆ ನಿಯತಾತ್ಮನು ತಾನು ಸಂಭಾವಿತನು ಎಂದು ತಿಳಿದುಕೊಂಡು ಹರ್ಷಿತನಾದನು.

12253040a ಸ ನದ್ಯಾಂ ಸಮುಪಸ್ಪೃಶ್ಯ ತರ್ಪಯಿತ್ವಾ ಹುತಾಶನಮ್|

12253040c ಉದಯಂತಮಥಾದಿತ್ಯಮಭ್ಯಗಚ್ಚನ್ಮಹಾತಪಾಃ||

ಆ ಮಹಾತಪಸ್ವಿಯು ನದಿಯಲ್ಲಿ ಸ್ನಾನಮಾಡಿ ತರ್ಪಣಗಳನ್ನಿತ್ತು ಹುತಾಶನನನ್ನು ಹೊತ್ತಿಸಿ ಉದಯಿಸುತ್ತಿರುವ ಆದಿತ್ಯನನ್ನು ಧ್ಯಾನಿಸಿದನು.

12253041a ಸಂಭಾವ್ಯ ಚಟಕಾನ್ಮೂರ್ಧ್ನಿ ಜಾಜಲಿರ್ಜಪತಾಂ ವರಃ|

12253041c ಆಸ್ಫೋಟಯತ್ತದಾಕಾಶೇ ಧರ್ಮಃ ಪ್ರಾಪ್ತೋ ಮಯೇತಿ ವೈ||

ತನ್ನ ತಲೆಯ ಮೇಲೆ ಗೂಡು ಕಟ್ಟಿ ವಾಸಿಸುತ್ತಿದ್ದ ಗುಬ್ಬಚ್ಚಿಗಳನ್ನೇ ಸ್ಮರಿಸುತ್ತಾ ತನ್ನನ್ನು ಮಹಾಧರ್ಮಾತ್ಮನೆಂದು ಭಾವಿಸಿಕೊಂಡು ಆ ಜಪಿಗಳಲ್ಲಿ ಶ್ರೇಷ್ಠ ಜಾಜಲಿಯು “ನನಗೆ ಧರ್ಮವು ಪ್ರಾಪ್ತವಾಯಿತು!” ಎಂದು ಆಕಾಶದಲ್ಲಾದ ಅಸ್ಫೋಟದಂತೆ ಕೂಗಿಕೊಂಡನು.

12253042a ಅಥಾಂತರಿಕ್ಷೇ ವಾಗಾಸೀತ್ತಾಂ ಸ ಶುಶ್ರಾವ ಜಾಜಲಿಃ|

12253042c ಧರ್ಮೇಣ ನ ಸಮಸ್ತ್ವಂ ವೈ ತುಲಾಧಾರಸ್ಯ ಜಾಜಲೇ||

ಆಗ ಅಂತರಿಕ್ಷದ ವಾಣಿಯನ್ನು ಜಾಜಲಿಯು ಕೇಳಿದನು: “ಜಾಜಲೇ! ಧರ್ಮದಲ್ಲಿ ನೀನು ತುಲಾಧಾರನ ಸಮನಲ್ಲ!

12253043a ವಾರಾಣಸ್ಯಾಂ ಮಹಾಪ್ರಾಜ್ಞಸ್ತುಲಾಧಾರಃ ಪ್ರತಿಷ್ಠಿತಃ|

12253043c ಸೋಽಪ್ಯೇವಂ ನಾರ್ಹತೇ ವಕ್ತುಂ ಯಥಾ ತ್ವಂ ಭಾಷಸೇ ದ್ವಿಜ||

ದ್ವಿಜ! ವಾರಾಣಸಿಯ ಮಹಾಪ್ರಾಜ್ಞ ಪ್ರತಿಷ್ಠಿತ ತುಲಾಧಾರನೂ ಕೂಡ ನಿನ್ನಂತೆ ಹೇಳಿಕೊಳ್ಳುವುದಿಲ್ಲ.”

12253044a ಸೋಽಮರ್ಷವಶಮಾಪನ್ನಸ್ತುಲಾಧಾರದಿದೃಕ್ಷಯಾ|

12253044c ಪೃಥಿವೀಮಚರದ್ರಾಜನ್ಯತ್ರಸಾಯಂಗೃಹೋ ಮುನಿಃ||

ರಾಜನ್! ಅದನ್ನು ಕೇಳಿ ಜಾಜಲಿಯು ಕ್ರೋಧವಶನಾದನು. ತುಲಾಧಾರನನ್ನು ಸಂದರ್ಶಿಸುವ ಇಚ್ಛೆಯಿಂದ ಪ್ರಯಾಣಹೊರಟ ಮುನಿಯು ಸಾಯಂಕಾಲದವರೆಗೂ ನಡೆದು ಆ ವೇಳೆಗೆ ಸಿಕ್ಕಿದ ಗ್ರಾಮದಲ್ಲಿ ರಾತ್ರಿ ತಂಗುತ್ತಾ ಪುನಃ ಬೆಳಗಾದೊಡನೆಯೇ ಹೊರಟು ಭೂಮಿಯಲ್ಲಿ ಸುತ್ತಾಡಿದನು.

12253045a ಕಾಲೇನ ಮಹತಾಗಚ್ಚತ್ಸ ತು ವಾರಾಣಸೀಂ ಪುರೀಮ್|

12253045c ವಿಕ್ರೀಣಂತಂ ಚ ಪಣ್ಯಾನಿ ತುಲಾಧಾರಂ ದದರ್ಶ ಸಃ||

ದೀರ್ಘಕಾಲದ ನಂತರ ಅವನು ವಾರಾಣಸೀ ಪುರಿಯನ್ನು ತಲುಪಿ ಅಲ್ಲಿ ಪದಾರ್ಥಗಳನ್ನು ಮಾರಾಟಮಾಡುತ್ತಿದ್ದ ತುಲಾಧಾರನನ್ನು ನೋಡಿದನು.

12253046a ಸೋಽಪಿ ದೃಷ್ಟ್ವೈವ ತಂ ವಿಪ್ರಮಾಯಾಂತಂ ಭಾಂಡಜೀವನಃ|

12253046c ಸಮುತ್ಥಾಯ ಸುಸಂಹೃಷ್ಟಃ ಸ್ವಾಗತೇನಾಭ್ಯಪೂಜಯತ್||

ವಿವಿಧ ವಸ್ತುಗಳನ್ನು ಮಾರಾಟಮಾಡಿ ಜೀವಿಸುತ್ತಿದ್ದ ತುಲಾಧಾರನಾದರೋ ಆಗಮಿಸುತ್ತಿದ್ದ ವಿಪ್ರನನ್ನು ನೋಡಿದೊಡನೆಯೇ ಹೃಷ್ಟನಾಗಿ ಮೇಲೆದ್ದು ಸ್ವಾಗತಿಸಿ ಪೂಜಿಸಿದನು.

12253047 ತುಲಾಧಾರ ಉವಾಚ|

12253047a ಆಯಾನೇವಾಸಿ ವಿದಿತೋ ಮಮ ಬ್ರಹ್ಮನ್ನ ಸಂಶಯಃ|

12253047c ಬ್ರವೀಮಿ ಯತ್ತು ವಚನಂ ತಚ್ಚೃಣುಷ್ವ ದ್ವಿಜೋತ್ತಮ||

ತುಲಾಧಾರನು ಹೇಳಿದನು: “ಬ್ರಹ್ಮನ್! ದ್ವಿಜೋತ್ತಮ! ನೀನು ನಿಸ್ಸಂಶಯವಾಗಿಯೂ ಇಲ್ಲಿಗೆ ಬರುತ್ತೀಯೆಂದು ನನಗೆ ಮೊದಲೇ ತಿಳಿದಿತ್ತು. ನಾನು ಈಗ ಹೇಳುವ ಮಾತನ್ನು ಕೇಳುವವನಾಗು.

12253048a ಸಾಗರಾನೂಪಮಾಶ್ರಿತ್ಯ ತಪಸ್ತಪ್ತಂ ತ್ವಯಾ ಮಹತ್|

12253048c ನ ಚ ಧರ್ಮಸ್ಯ ಸಂಜ್ಞಾಂ ತ್ವಂ ಪುರಾ ವೇತ್ಥ ಕಥಂ ಚನ||

ಹಿಂದೆ ನೀನು ಸಾಗರದ ನೀರನ್ನು ಆಶ್ರಯಿಸಿ ಮಹಾ ತಪಸ್ಸನ್ನು ತಪಿಸಿದೆ. ಆದರೂ ನಿನಗೆ ಧರ್ಮದ ಸಂಜ್ಞೆಯು ದೊರಕಲಿಲ್ಲ.

12253049a ತತಃ ಸಿದ್ಧಸ್ಯ ತಪಸಾ ತವ ವಿಪ್ರ ಶಕುಂತಕಾಃ|

12253049c ಕ್ಷಿಪ್ರಂ ಶಿರಸ್ಯಜಾಯಂತ ತೇ ಚ ಸಂಭಾವಿತಾಸ್ತ್ವಯಾ||

ವಿಪ್ರ! ಅನಂತರ ಸಿದ್ಧನಾಗಿ ನೀನು ತಪಸ್ಸನ್ನಾಚರಿಸುತ್ತಿರಲು ಕ್ಷಿಪ್ರವಾಗಿ ನಿನ್ನ ತಲೆಯ ಮೇಲೆ ಗೂಡುಕಟ್ಟಿದ ಪಕ್ಷಿಗಳನ್ನು ನೀನು ರಕ್ಷಿಸಿದೆ.

12253050a ಜಾತಪಕ್ಷಾ ಯದಾ ತೇ ಚ ಗತಾಶ್ಚಾರೀಮಿತಸ್ತತಃ|

12253050c ಮನ್ಯಮಾನಸ್ತತೋ ಧರ್ಮಂ ಚಟಕಪ್ರಭವಂ ದ್ವಿಜ|

12253050e ಖೇ ವಾಚಂ ತ್ವಮಥಾಶ್ರೌಷೀರ್ಮಾಂ ಪ್ರತಿ ದ್ವಿಜಸತ್ತಮ||

ದ್ವಿಜ! ಆ ಗೂಡಿನಲ್ಲಿ ಹುಟ್ಟಿದ ಪಕ್ಷಿಗಳು ಹೊರಹೋಗಿ ಬರಲು ತೊಡಗಿದಾಗ ನೀನು ನಿನ್ನ ತಲೆಯಮೇಲೆ ಕಟ್ಟಿದ್ದ ಗೂಡನ್ನು ರಕ್ಷಿಸಿದುದರಿಂದ ನೀನು ಧರ್ಮಕಾರ್ಯವೆನ್ನೆಸಗಿದೆ ಎಂದು ತಿಳಿದುಕೊಂಡೆ. ದ್ವಿಜಸತ್ತಮ! ಆಗ ನನ್ನ ಬಳಿ ಹೋಗೆಂಬ ಆಕಾಶವಾಣಿಯನ್ನು ನೀನು ಕೇಳಿದೆ.

12253051a ಅಮರ್ಷವಶಮಾಪನ್ನಸ್ತತಃ ಪ್ರಾಪ್ತೋ ಭವಾನಿಹ|

12253051c ಕರವಾಣಿ ಪ್ರಿಯಂ ಕಿಂ ತೇ ತದ್ಬ್ರೂಹಿ ದ್ವಿಜಸತ್ತಮ||

ದ್ವಿಜಸತ್ತಮ!  ಅದರಿಂದ ಕ್ರೋಧವಶನಾಗಿ ನೀನು ನನ್ನ ಬಳಿ ಬಂದಿರುವೆ. ನಿನಗೆ ಪ್ರಿಯವಾದ ಏನನ್ನು ಮಾಡಲಿ? ಹೇಳು.””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ತುಲಾಭಾರಜಾಜಲಿಸಂವಾದೇ ತ್ರಿಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ತುಲಾಭಾರಜಾಜಲಿಸಂವಾದ ಎನ್ನುವ ಇನ್ನೂರಾಐವತ್ಮೂರನೇ ಅಧ್ಯಾಯವು.

Light pink flower of Eustoma isolated on white background | Light pink  flowers, White background, Pink flowers

Comments are closed.