Shanti Parva: Chapter 129

||ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೨೯

12129001 ಯುಧಿಷ್ಠಿರ ಉವಾಚ|

12129001a ಕ್ಷೀಣಸ್ಯ ದೀರ್ಘಸೂತ್ರಸ್ಯ ಸಾನುಕ್ರೋಶಸ್ಯ ಬಂಧುಷು|

12129001c ವಿರಕ್ತಪೌರರಾಷ್ಟ್ರಸ್ಯ ನಿರ್ದ್ರವ್ಯನಿಚಯಸ್ಯ ಚ||

12129002a ಪರಿಶಂಕಿತಮುಖ್ಯಸ್ಯ ಸ್ರುತಮಂತ್ರಸ್ಯ ಭಾರತ|

12129002c ಅಸಂಭಾವಿತಮಿತ್ರಸ್ಯ ಭಿನ್ನಾಮಾತ್ಯಸ್ಯ ಸರ್ವಶಃ||

12129003a ಪರಚಕ್ರಾಭಿಯಾತಸ್ಯ ದುರ್ಬಲಸ್ಯ ಬಲೀಯಸಾ|

12129003c ಆಪನ್ನಚೇತಸೋ ಬ್ರೂಹಿ ಕಿಂ ಕಾರ್ಯಮವಶಿಷ್ಯತೇ||

ಯುಧಿಷ್ಠಿರನು ಹೇಳಿದನು: “ಸೇನೆ-ಧನ-ಸಂಪತ್ತುಗಳು ಕ್ಷೀಣವಾಗಿರುವ, ಆಲಸ್ಯನಾಗಿರುವ, ಬಂಧು-ಬಾಂಧವರ ಮೇಲಿನ ಅಧಿಕ ದಯದಿಂದ ಅವರ ನಾಶದ ಶಂಕೆಯಿಂದ ಅವರನ್ನು ಕೂಡಿಕೊಂಡು ಶತ್ರುಗಳೊಡನೆ ಯುದ್ಧಮಾಡದಿರುವ, ಮಂತ್ರಿಮೊದಲಾದವರ ಮೇಲೆ ಶಂಕಿಸುವ ಅಥವಾ ಅವರ ಚರಿತ್ರವೇ ಸಂಶಯಾಸ್ಪದವಾಗಿರುವ, ಮಂತ್ರಾಲೋಚನೆಯು ಗುಪ್ತವಾಗಿರದ, ಮಂತ್ರಾಲೋಚನೆಯನ್ನು ಇತರರು ಕೇಳಿಬಿಟ್ಟಿರುವ, ರಾಷ್ಟ್ರವನ್ನು ಒಡೆದು ಶತ್ರುಗಳು ತಮ್ಮದಾಗಿಸಿಕೊ, ಯಾರ ಬೊಕ್ಕಸವು ಬರಿದಾಗಿದೆಯೋ, ಯಾರಿಗೆ ಸಂಭಾವಿತ ಮಿತ್ರರ್ಯಾರೂ ಇಲ್ಲವೋ, ಯಾರ ಅಮಾತ್ಯರನ್ನು ಶತೃಗಳು ಭೇದೋಪಾಯದಿಂದ ವಶಪಡಿಸಿಕೊಂಡಿರುವರೋ, ಯಾರು ಶತ್ರುಗಳಿಂದ ಆಕ್ರಮಿಸಲ್ಪಟ್ಟಿರುವನೋ, ಯಾವ ದುರ್ಬಲನು ಬಲಿಷ್ಠನಿಂದ ಆಪತ್ತಿಗೊಳಗಾಗಿದ್ದಾನೋ ಅಂತವನಿಗೆ ಇನ್ನೂ ಮಾಡಬೇಕಾದ ಕಾರ್ಯಗಳು ಯಾವುದಿರುತ್ತವೆ?”

12129004 ಭೀಷ್ಮ ಉವಾಚ|

12129004a ಬಾಹ್ಯಶ್ಚೇದ್ವಿಜಿಗೀಷುಃ ಸ್ಯಾದ್ಧರ್ಮಾರ್ಥಕುಶಲಃ ಶುಚಿಃ|

12129004c ಜವೇನ ಸಂಧಿಂ ಕುರ್ವೀತ ಪೂರ್ವಾನ್ಪೂರ್ವಾನ್ವಿಮೋಕ್ಷಯನ್||

ಭೀಷ್ಮನು ಹೇಳಿದನು: “ವಿಜಯವನ್ನು ಬಯಸಿ ಆಕ್ರಮಣಮಾಡಿರುವ ರಾಜನು ಹೊರಗಿನವನಾಗಿದ್ದು ಧರ್ಮಾರ್ಥಕುಶಲನೂ ಆಚಾರ-ವಿಚಾರಗಳಲ್ಲಿ ಪರಿಶುದ್ಧನೂ ಆಗಿದ್ದರೆ ತ್ವರೆಮಾಡಿ ಅವನೊಡನೆ ಸಂಧಿಯನ್ನು ಮಾಡಿಕೊಂಡು ಪೂರ್ವಜರ ಸ್ವಾಧೀನವನ್ನು ಬಿಡಿಸಿಕೊಳ್ಳ ಬೇಕು.

12129005a ಅಧರ್ಮವಿಜಿಗೀಷುಶ್ಚೇದ್ಬಲವಾನ್ಪಾಪನಿಶ್ಚಯಃ|

12129005c ಆತ್ಮನಃ ಸಂನಿರೋಧೇನ ಸಂಧಿಂ ತೇನಾಭಿಯೋಜಯೇತ್||

ವಿಜಯವನ್ನು ಬಯಸಿ ಆಕ್ರಮಣ ಮಾಡಿರುವ ಶತ್ರುರಾಜನು ಅಧರ್ಮಿಷ್ಠನಾಗಿದ್ದರೆ, ಬಲಿಷ್ಠನಾಗಿದ್ದರೂ ಪಾಪಸಂಕಲ್ಪನಾಗಿದ್ದರೆ ತನ್ನದನ್ನು ಸ್ವಲ್ಪ ಕೊಟ್ಟು ಸಂಧಿಯನ್ನು ಪ್ರಯತ್ನಿಸಬೇಕು.

12129006a ಅಪಾಸ್ಯ ರಾಜಧಾನೀಂ ವಾ ತರೇದನ್ಯೇನ ವಾಪದಮ್|

12129006c ತದ್ಭಾವಭಾವೇ ದ್ರವ್ಯಾಣಿ ಜೀವನ್ಪುನರುಪಾರ್ಜಯೇತ್||

ರಾಜಧಾನಿಯನ್ನು ಬಿಟ್ಟು ಪಲಾಯನ ಮಾಡಬೇಕು. ಅಥವಾ ಇನ್ಯಾವುದೇ ಉಪಾಯವನ್ನು ಬಳಸಿ, ದ್ರವ್ಯಗಳನ್ನು ಕೊಟ್ಟಾದರೂ, ಆಪತ್ತಿನಿಂದ ಪಾರಾಗಬೇಕು. ಬದುಕಿದ್ದರೆ ಪುನಃ ಧನವನ್ನು ಗಳಿಸಬಹುದು.

12129007a ಯಾಸ್ತು ಸ್ಯುಃ ಕೇವಲತ್ಯಾಗಾಚ್ಚಕ್ಯಾಸ್ತರಿತುಮಾಪದಃ|

12129007c ಕಸ್ತತ್ರಾಧಿಕಮಾತ್ಮಾನಂ ಸಂತ್ಯಜೇದರ್ಥಧರ್ಮವಿತ್||

ಕೋಶ-ಸೈನ್ಯಗಳನ್ನು ತ್ಯಜಿಸಿಯಾದರೂ ಆಪತ್ತುಗಳನ್ನು ದಾಟುವ ಸಾಧ್ಯವಿದ್ದಾಗ ಅವುಗಳಿಗಿಂದಲೂ ಅಧಿಕವಾದ ತನ್ನ ಶರೀರವನ್ನೇ ಯಾವ ಧರ್ಮವಿದುವು ತ್ಯಜಿಸಿಯಾನು?

12129008a ಅವರೋಧಾಜ್ಜುಗುಪ್ಸೇತ ಕಾ ಸಪತ್ನಧನೇ ದಯಾ|

12129008c ನ ತ್ವೇವಾತ್ಮಾ ಪ್ರದಾತವ್ಯಃ ಶಕ್ಯೇ ಸತಿ ಕಥಂ ಚನ||

ಶತ್ರುವು ಆಕ್ರಮಿಸಿದೊಡನೆಯೇ ಮೊದಲು ಮುಖ್ಯವಾಗಿ ತನ್ನ ಅಂತಃಪುರದ ಸ್ತ್ರೀಯರನ್ನು ರಕ್ಷಿಸಬೇಕು. ಒಂದುವೇಳೆ ಅದರಲ್ಲಿ ಅಸಮರ್ಥನಾದರೆ ಪರಿವಾರದವರ ಮತ್ತು ಧನದ ಮೇಲಿನ ಆಸೆಯನ್ನು ದೂರಮಾಡಬೇಕು. ಸಾಧ್ಯವಾದರೆ ಎಂದೂ ತನ್ನನ್ನು ಶತ್ರುವಶನಾಗುವಂತೆ ಮಾಡಿಕೊಳ್ಳಬಾರದು.”

12129009 ಯುಧಿಷ್ಠಿರ ಉವಾಚ|

12129009a ಆಭ್ಯಂತರೇ ಪ್ರಕುಪಿತೇ ಬಾಹ್ಯೇ ಚೋಪನಿಪೀಡಿತೇ|

12129009c ಕ್ಷೀಣೇ ಕೋಶೇ ಸ್ರುತೇ ಮಂತ್ರೇ ಕಿಂ ಕಾರ್ಯಮವಶಿಷ್ಯತೇ||

ಯುಧಿಷ್ಠಿರನು ಹೇಳಿದನು: “ಒಳಗಿರುವ ಅಮಾತ್ಯರೇ ಕುಪಿತರಾದಾಗ, ಶತ್ರುಗಳು ಪೀಡಿಸುತ್ತಿರುವಾಗ, ಕೋಶವು ಬರಿದಾದಾಗ, ಮತ್ತು ರಹಸ್ಯಗಳು ಬಯಲಾದಾಗ ರಾಜನಿಗೆ ಮಾಡುವ ಕಾರ್ಯಗಳು ಯಾವುದು ಉಳಿದಿರುತ್ತವೆ?”

12129010 ಭೀಷ್ಮ ಉವಾಚ|

12129010a ಕ್ಷಿಪ್ರಂ ವಾ ಸಂಧಿಕಾಮಃ ಸ್ಯಾತ್ ಕ್ಷಿಪ್ರಂ ವಾ ತೀಕ್ಷ್ಣವಿಕ್ರಮಃ|

12129010c ಪದಾಪನಯನಂ ಕ್ಷಿಪ್ರಮೇತಾವತ್ಸಾಂಪರಾಯಿಕಮ್||

ಭೀಷ್ಮನು ಹೇಳಿದನು: “ಬೇಗನೆ ಸಂಧಿಮಾಡಿಕೊಳ್ಳಬೇಕು. ಅಥವಾ ಕ್ಷಿಪ್ರವಾಗಿ ಪಲಾಯನ ಮಾಡಿಕೊಳ್ಳಬೇಕು. ಅಥವಾ ಕ್ಷಿಪ್ರವಾಗಿ ತೀಕ್ಷ್ಣವಿಕ್ರಮದಿಂದ ಹೋರಾಡಬೇಕು. ಯುದ್ಧದಲ್ಲಿ ಮರಣವುಂಟಾದರೆ ಪುಣ್ಯಲೋಕವು ದೊರೆಯುತ್ತದೆ.

12129011a ಅನುರಕ್ತೇನ ಪುಷ್ಟೇನ ಹೃಷ್ಟೇನ ಜಗತೀಪತೇ|

12129011c ಅಲ್ಪೇನಾಪಿ ಹಿ ಸೈನ್ಯೇನ ಮಹೀಂ ಜಯತಿ ಪಾರ್ಥಿವಃ||

ಜಗತೀಪತೇ! ಅನುರಕ್ತರಾದ, ಪುಷ್ಟ-ಹೃಷ್ಟ ಅಲ್ಪಸೇನೆಯೀಮ್ದಲೂ ಕೂಡ ಪಾರ್ಥಿವನು ಮಹಿಯನ್ನು ಜಯಿಸಬಲ್ಲನು.

12129012a ಹತೋ ವಾ ದಿವಮಾರೋಹೇದ್ವಿಜಯೀ ಕ್ಷಿತಿಮಾವಸೇತ್|

12129012c ಯುದ್ಧೇ ತು ಸಂತ್ಯಜನ್ಪ್ರಾಣಾನ್ಶಕ್ರಸ್ಯೈತಿ ಸಲೋಕತಾಮ್||

ಹತನಾದರೆ ದಿವವನ್ನು ಏರುತ್ತಾನೆ. ವಿಜಯಿಯಾದರೆ ಭೂಮಿಯಲ್ಲಿ ವಾಸಿಸುತ್ತಾನೆ. ಯುದ್ಧದಲ್ಲಿ ಪ್ರಾಣಗಳನ್ನು ತೊರೆದವರು ಇಂದ್ರನ ಲೋಕಕ್ಕೆ ಹೋಗುತ್ತಾರೆ.

12129013a ಸರ್ವಲೋಕಾಗಮಂ ಕೃತ್ವಾ ಮೃದುತ್ವಂ ಗಂತುಮೇವ ಚ|

12129013c ವಿಶ್ವಾಸಾದ್ವಿನಯಂ ಕುರ್ಯಾದ್ವ್ಯವಸ್ಯೇದ್ವಾಪ್ಯುಪಾನಹೌ||

ತಾನು ದುರ್ಬಲನಾಗಿದ್ದರೆ ಶತ್ರುಗಳ ಸರ್ವ ಜನರ ಪ್ರೀತಿಯನ್ನೂ ಸಂಪಾದಿಸಿ ಮೃದುತ್ವವನ್ನು ತಾಳಬೇಕು. ವಿನಯವನ್ನು ವಿಶ್ವಾಸವನ್ನೂ ತೋರಿಸಬೇಕು. ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸಬೇಕು.

12129014a ಅಪಕ್ರಮಿತುಮಿಚ್ಚೇದ್ವಾ ಯಥಾಕಾಮಂ ತು ಸಾಂತ್ವಯೇತ್|

12129014c ವಿಲಿಂಗಮಿತ್ವಾ ಮಿತ್ರೇಣ ತತಃ ಸ್ವಯಮುಪಕ್ರಮೇತ್||

ಅಥವಾ ಯಥಾಕಾಮವಾಗಿ ಸಾಂತ್ವನಗೈದು ಪಲಾಯನಮಾಡಲು ನೋಡಬೇಕು. ಮಿತ್ರರೊಡನೆ ವಿಚಾರಿಸಿ ಕಳೆದುಕೊಂಡಿದ್ದುದನ್ನು ಪುನಃ ಪಡೆಯಲು ಪ್ರಯತ್ನಿಸಬೇಕು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಏಕೋನತ್ರಿಂಶಾತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ನೂರಾಇಪ್ಪತ್ತೊಂಭತ್ತನೇ ಅಧ್ಯಾಯವು.

20 Easy Quilt Patterns for Beginning Quilters

Comments are closed.