Shanti Parva: Chapter 128

ಶಾಂತಿ ಪರ್ವ: ರಾಜಧರ್ಮ ಪರ್ವ

೧೨೮

12128001 ಯುಧಿಷ್ಠಿರ ಉವಾಚ|

12128001a ಮಿತ್ರೈಃ ಪ್ರಹೀಯಮಾಣಸ್ಯ ಬಹ್ವಮಿತ್ರಸ್ಯ ಕಾ ಗತಿಃ|

12128001c ರಾಜ್ಞಃ ಸಂಕ್ಷೀಣಕೋಶಸ್ಯ ಬಲಹೀನಸ್ಯ ಭಾರತ||

ಯುಧಿಷ್ಠಿರನು ಹೇಳಿದನು: “ಭಾರತ! ಮಿತ್ರರು ಬಿಟ್ಟುಹೋದವನ, ಅನೇಕ ಶತ್ರುಗಳಿರುವವನ, ಬೊಕ್ಕಸವು ಬರಿದಾಗುತ್ತಾ ಬಂದಿರುವವನ ಮತ್ತು ಬಲಹೀನನಾದ ರಾಜನ ಗತಿಯೇನು?

12128002a ದುಷ್ಟಾಮಾತ್ಯಸಹಾಯಸ್ಯ ಸ್ರುತಮಂತ್ರಸ್ಯ[1] ಸರ್ವತಃ|

12128002c ರಾಜ್ಯಾತ್ ಪ್ರಚ್ಯವಮಾನಸ್ಯ ಗತಿಮನ್ಯಾಮಪಶ್ಯತಃ||

12128003a ಪರಚಕ್ರಾಭಿಯಾತಸ್ಯ ದುರ್ಬಲಸ್ಯ ಬಲೀಯಸಾ|

12128003c ಅಸಂವಿಹಿತರಾಷ್ಟ್ರಸ್ಯ ದೇಶಕಾಲಾವಜಾನತಃ||

12128004a ಅಪ್ರಾಪ್ಯಂ ಚ ಭವೇತ್ಸಾಂತ್ವಂ ಭೇದೋ ವಾಪ್ಯತಿಪೀಡನಾತ್|

12128004c ಜೀವಿತಂ ಚಾರ್ಥಹೇತೋರ್ವಾ ತತ್ರ ಕಿಂ ಸುಕೃತಂ ಭವೇತ್||

ದುಷ್ಟ ಅಮಾತ್ಯರು ಸಹಾಯಕರಾಗಿರುವ, ಗುಟ್ಟು ಎಲ್ಲಕಡೆ ಬಯಲಾದ, ರಾಜ್ಯದಿಂದ ಭ್ರಷ್ಟನಾದ, ಯಾವ ಗತಿಯನ್ನೂ ಕಾಣದ, ದುರ್ಬಲ ಶತ್ರುವಿನೊಡನೆ ಯುದ್ಧಮಾಡುತ್ತಿರುವಾಗ ಇನ್ನೊಬ್ಬ ಬಲಶಾಲೀ ರಾಜನು ತನ್ನೊಡನೆ ಯುದ್ಧಮಾಡಲು ಬಂದಾಗ, ರಾಷ್ಟ್ರದ ರಕ್ಷಣೆಯನ್ನು ಮಾಡಲಾಗದ, ದೇಶ-ಕಾಲಗಳನ್ನು ತಿಳಿದುಕೊಂಡಿರದ  ರಾಜನಿಗೆ ಸಾಮೋಪಾಯವು ಸಿದ್ಧಿಸಲಾರದು. ತನಗೇ ಪೀಡೆಯನ್ನು ತರುವ ಭೇದೋಪಾಯವೂ ಪ್ರಯೋಜನವಾಗಲಾರದು. ಆಗ ರಾಜನು ಏನು ಮಾಡಬೇಕು? ಜೀವರಕ್ಷಣೆಗೆ ಪ್ರಯತ್ನಿಸಬೇಕೇ? ಅಥವಾ ಅರ್ಥಸಾಧನೆಗೆ ಪ್ರಯತ್ನಿಸಬೇಕೇ? ಏನನ್ನು ಮಾಡಿದರೆ ಅವನಿಗೆ ಒಳ್ಳೆಯದಾಗುತ್ತದೆ?”

12128005 ಭೀಷ್ಮ ಉವಾಚ|

12128005a ಗುಹ್ಯಂ ಮಾ ಧರ್ಮಮಪ್ರಾಕ್ಷೀರತೀವ ಭರತರ್ಷಭ|

12128005c ಅಪೃಷ್ಟೋ ನೋತ್ಸಹೇ ವಕ್ತುಂ ಧರ್ಮಮೇನಂ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಭರತರ್ಷಭ! ಯುಧಿಷ್ಠಿರ! ನೀನು ಅತ್ಯಂತ ರಹಸ್ಯವಾದ ವಿಷಯವನ್ನೇ ಕೇಳಿರುವೆ. ಇದನ್ನು ನೀನು ಕೇಳಿರದಿದ್ದರೆ ಈ ಧರ್ಮದ ಕುರಿತು ನಾನು ಹೇಳುತ್ತಿರಲಿಲ್ಲ.

12128006a ಧರ್ಮೋ ಹ್ಯಣೀಯಾನ್ವಚನಾದ್ಬುದ್ಧೇಶ್ಚ ಭರತರ್ಷಭ|

12128006c ಶ್ರುತ್ವೋಪಾಸ್ಯ ಸದಾಚಾರೈಃ ಸಾಧುರ್ಭವತಿ ಸ ಕ್ವ ಚಿತ್||

ಭರತರ್ಷಭ! ಧರ್ಮವು ಅತಿ ಸೂಕ್ಷ್ಮವಾದುದು. ಶಾಸ್ತ್ರವಚನಗಳನ್ನು ಮನನ ಮಾಡುವುದರಿಂದಲೂ ಮತ್ತು ಬುದ್ಧಿಯಿಂದಲೂ ಇದರ ರಹಸ್ಯವನ್ನು ತಿಳಿದುಕೊಳ್ಳಬಹುದು. ಶಾಸ್ತ್ರಗಳನ್ನು ಕೇಳಿ ಉಪಾಸಿಸಿ ಸದಾಚಾರಗಳಿಂದ ಮನುಷ್ಯನು ಸಾಧುವಾಗುತ್ತಾನೆ. ಆದರೆ ಅಂಥವರು ಅತಿ ವಿರಳ.

12128007a ಕರ್ಮಣಾ ಬುದ್ಧಿಪೂರ್ವೇಣ ಭವತ್ಯಾಢ್ಯೋ ನ ವಾ ಪುನಃ|

12128007c ತಾದೃಶೋಽಯಮನುಪ್ರಶ್ನಃ ಸ ವ್ಯವಸ್ಯಸ್ತ್ವಯಾ[2] ಧಿಯಾ||

ಬುದ್ಧಿಪೂರ್ವಕ ಕರ್ಮಗಳಿಂದ ಮನುಷ್ಯನು ಧನಾಡ್ಯನಾಗಬಹುದು ಅಥವಾ ಅಗದೆಯೂ ಇರಬಹುದು. ನೀನು ಕೇಳಿದ ಪ್ರಶ್ನೆಯು ಅಂಥಹುದೇ ಆಗಿದೆ. ಇದರ ಕುರಿತು ನೀನೇ ನಿನ್ನ ಬುದ್ಧಿಯಿಂದ ವಿಚಾರಿಸಿ ನಿಶ್ಚಯಕ್ಕೆ ಬರಬಹುದು.

12128008a ಉಪಾಯಂ ಧರ್ಮಬಹುಲಂ ಯಾತ್ರಾರ್ಥಂ ಶೃಣು ಭಾರತ|

12128008c ನಾಹಮೇತಾದೃಶಂ ಧರ್ಮಂ ಬುಭೂಷೇ ಧರ್ಮಕಾರಣಾತ್||

ಭಾರತ! ಆಪತ್ಕಾಲದಲ್ಲಿ ಜೀವ ರಕ್ಷಣೆಯ ಸಲುವಾಗಿ ಮಾಡಬೇಕಾದ ಬಹಳಷ್ಟು ಧಾರ್ಮಿಕ ಉಪಾಯಗಳಿವೆ. ಆದರೆ ಧರ್ಮದ ಕಾರಣದಿಂದ ನಾನು ಅಂತಹ ಧರ್ಮವನ್ನು ಆಚರಿಸಲು ಇಚ್ಛಿಸುವುದಿಲ್ಲ.

12128008e ದುಃಖಾದಾನ ಇಹಾಢ್ಯೇಷು ಸ್ಯಾತ್ತು ಪಶ್ಚಾತ್ ಕ್ಷಮೋ ಮತಃ[3]|

12128009a ಅನುಗಮ್ಯ ಗತೀನಾಂ ಚ ಸರ್ವಾಸಾಮೇವ ನಿಶ್ಚಯಮ್||

ಆಪತ್ತಿನ ಸಮಯದಲ್ಲಿಯೂ ಪ್ರಜೆಗಳಿಗೆ ಕಷ್ಟವಾಗುವ ರೀತಿಯಲ್ಲಿ ತೆರಿಗೆಗಳನ್ನು ತೆಗೆದುಕೊಳ್ಳುವುದು ರಾಜನ ವಿನಾಶಕ್ಕೇ ಕಾರಣವಾಗುತ್ತದೆ. ಅನುಸರಿಸಲು ಯೋಗ್ಯ ಗತಿಯುಳ್ಳ ಸರ್ವರ ನಿಶ್ಚಯವೂ ಇದೇ ಆಗಿರುತ್ತದೆ.

12128009c ಯಥಾ ಯಥಾ ಹಿ ಪುರುಷೋ ನಿತ್ಯಂ ಶಾಸ್ತ್ರಮವೇಕ್ಷತೇ|

12128009e ತಥಾ ತಥಾ ವಿಜಾನಾತಿ ವಿಜ್ಞಾನಂ ಚಾಸ್ಯ ರೋಚತೇ||

ಮನುಷ್ಯನು ದಿನನಿತ್ಯವೂ ಯಾವ ಯಾವ ರೀತಿಯಲ್ಲಿ ಶಾಸ್ತ್ರಗಳನ್ನು ಅಧ್ಯಯನ ಮಾಡುವನೋ ಆಯಾಯಾ ರೀತಿಗಳಲ್ಲಿ ಅವನ ಜ್ಞಾನವು ವೃದ್ಧಿಯಾಗುತ್ತದೆ. ಇನ್ನೂ ವಿಶೇಷ ಜ್ಞಾನವನ್ನು ಪಡೆದುಕೊಳ್ಳಬೇಕೆಂಬ ಅಭಿರುಚಿಯೂ ಉಂಟಾಗುತ್ತದೆ.

12128010a ಅವಿಜ್ಞಾನಾದಯೋಗಶ್ಚ ಪುರುಷಸ್ಯೋಪಜಾಯತೇ|

12128010c ಅವಿಜ್ಞಾನಾದಯೋಗೋ ಹಿ[4] ಯೋಗೋ ಭೂತಿಕರಃ ಪುನಃ||

ಶಾಸ್ತ್ರಜ್ಞಾನವಿಲ್ಲದ ಪುರುಷನಿಗೆ ಆಪತ್ಕಾಲದಲ್ಲಿ ಪಾರಾಗುವ ಉಪಾಯವೇ ಹೊಳೆಯುವುದಿಲ್ಲ. ಅಜ್ಞಾನದಿಂದ ಅಯೋಗವುಂಟಾಗುತ್ತದೆ. ಯೋಗವೇ ವೃದ್ಧಿಗೆ ಸಾಧಕವಾಗಿದೆ.

12128011a ಅಶಂಕಮಾನೋ ವಚನಮನಸೂಯುರಿದಂ ಶೃಣು|

12128011c ರಾಜ್ಞಃ ಕೋಶಕ್ಷಯಾದೇವ ಜಾಯತೇ ಬಲಸಂಕ್ಷಯಃ||

ನನ್ನ ಮಾತನ್ನು ಶಂಕಿಸದೇ ಅಸೂಯಾರಹಿತನಾಗಿ ಕೇಳು. ರಾಜನ ಕೋಶವು ಕ್ಷಯಿಸುವುದರಿಂದ ಅವನ ಬಲವೂ ಕ್ಷಯಿಸುತ್ತದೆ.

12128012a ಕೋಶಂ ಸಂಜನಯೇದ್ರಾಜಾ ನಿರ್ಜಲೇಭ್ಯೋ ಯಥಾ ಜಲಮ್|

12128012c ಕಾಲಂ ಪ್ರಾಪ್ಯಾನುಗೃಹ್ಣೀಯಾದೇಷ ಧರ್ಮೋಽತ್ರ ಸಾಂಪ್ರತಮ್[5]||

12128013a ಉಪಾಯಧರ್ಮಂ ಪ್ರಾಪ್ಯೈನಂ ಪೂರ್ವೈರಾಚರಿತಂ ಜನೈಃ|

ಜಲವಿಲ್ಲದ ಪ್ರದೇಶದಲ್ಲಿ ಬಾವಿಯನ್ನಾದರೂ ತೋಡಿ ನೀರನ್ನು ಹೊರತೆಗೆಯುವಂತೆ ಆಪತ್ಕಾಲದಲ್ಲಿ ರಾಜನು ಹೆಚ್ಚು ಧನವಂತರಲ್ಲದ ಪ್ರಜೆಗಳಿಂದ ಸಾಧ್ಯವಾದಷ್ಟು ಧನವನ್ನು ಸಂಗ್ರಹಿಸಿ ಬೊಕ್ಕಸವನ್ನು ತುಂಬಿಸಬೇಕು. ಒಳ್ಳೆಯ ಕಾಲವು ಬಂದಾಗ ಅದೇ ಧನದಿಂದಲೇ ಪ್ರಜೆಗಳಿಗೆ ಬೇಕಾದುದನ್ನು ಮಾಡಿಕೊಟ್ಟು ಅನುಗ್ರಹಿಸಬೇಕು. ಇದೇ ಸನಾತನ ಧರ್ಮವಾಗಿದೆ. ಹಿಂದಿನ ರಾಜರೂ ಆಪತ್ಕಾಲದಲ್ಲಿ ಈ ಉಪಾಯಧರ್ಮವನ್ನೇ ಆಶ್ರಯಿಸಿ ರಾಜ್ಯಭಾರಮಾಡುತ್ತಿದ್ದರು.

12128013c ಅನ್ಯೋ ಧರ್ಮಃ ಸಮರ್ಥಾನಾಮಾಪತ್ಸ್ವನ್ಯಶ್ಚ ಭಾರತ||

12128014a ಪ್ರಾಕ್ಕೋಶಃ ಪ್ರೋಚ್ಯತೇ ಧರ್ಮೋ ಬುದ್ಧಿರ್ಧರ್ಮಾದ್ಗರೀಯಸೀ|

ಭಾರತ! ಸಮರ್ಥಶಾಲಿಗಳಿಗೇ ಒಂದು ಧರ್ಮವಿದೆ. ಆಪತ್ತಿನಲ್ಲಿರುವವರಿಗೇ ಮತ್ತೊಂದು ಧರ್ಮವಿದೆ. ಕೋಶದ ನಂತರ ಧರ್ಮಾಚರಣೆಯ ವಿಷಯವು ಬರುತ್ತದೆ. ಅರ್ಥವೇ ಇಲ್ಲದಿದ್ದರೆ ಧರ್ಮವು ಹೇಗೆ ಸಾಧ್ಯವಾಗುತ್ತದೆ? ಜೀವನ ನಿರ್ವಹಣೆಗೆ ವ್ಯವಸ್ಥೆಮಾಡಿಕೊಳ್ಳುವುದೇ ಧರ್ಮಾಚರಣೆಗಿಂತಲೂ ಶ್ರೇಷ್ಠವಾದುದು.

12128014c ಧರ್ಮಂ ಪ್ರಾಪ್ಯ ನ್ಯಾಯವೃತ್ತಿಮಬಲೀಯಾನ್ನ ವಿಂದತಿ||

12128015a ಯಸ್ಮಾದ್ಧನಸ್ಯೋಪಪತ್ತಿರೇಕಾಂತೇನ ನ ವಿದ್ಯತೇ|

12128015c ತಸ್ಮಾದಾಪದ್ಯಧರ್ಮೋಽಪಿ ಶ್ರೂಯತೇ ಧರ್ಮಲಕ್ಷಣಃ||

12128016a ಅಧರ್ಮೋ ಜಾಯತೇ ಯಸ್ಮಿನ್ನಿತಿ ವೈ ಕವಯೋ ವಿದುಃ|

ಧರ್ಮವನ್ನು ಅನುಸರಿಸಿದರೂ ದುರ್ಬಲನಿಗೆ ನ್ಯಾಯೋಚಿತ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಧರ್ಮಾಚರಣೆಯಿಂದ ಬಲವು ವೃದ್ಧಿಸುತ್ತದೆಯೆಂದು ಹೇಳಲಿಕ್ಕಾಗುವುದಿಲ್ಲ. ಆದುದರಿಂದ ಆಪತ್ಕಾಲದಲ್ಲಿ ಮಾಡುವ ಅಧರ್ಮವೂ ಧರ್ಮದ ಲಕ್ಷಣಗಳಿಂದ ಕೂಡಿರುತ್ತದೆ. ಸಾಮಾನ್ಯ ಸಮಯಗಳಲ್ಲಿ ಧರ್ಮವಾಗಿರುವುದು ಆಪತ್ಕಾಲದಲ್ಲಿ ಅಧರ್ಮವಾಗಬಹುದೆಂದು ವಿದ್ವಾಂಸರು ಹೇಳುತ್ತಾರೆ.

12128016c ಅನಂತರಃ ಕ್ಷತ್ರಿಯಸ್ಯ ಇತಿ ವೈ ವಿಚಿಕಿತ್ಸಸೇ||

12128017a ಯಥಾಸ್ಯ ಧರ್ಮೋ ನ ಗ್ಲಾಯೇನ್ನೇಯಾಚ್ಚತ್ರುವಶಂ ಯಥಾ|

12128017c ತತ್ಕರ್ತವ್ಯಮಿಹೇತ್ಯಾಹುರ್ನಾತ್ಮಾನಮವಸಾದಯೇತ್||

ಅಪತ್ಕಾಲವು ಕಳೆದುಹೋದನಂತರ ಕ್ಷತ್ರಿಯನು ಏನು ಮಾಡಬೇಕೆಂಬ ಸಂಶಯವುಂಟಾಗುತ್ತದೆ. ಇದಕ್ಕೆ ಸಮಾಧಾನವು ಹೀಗಿದೆ. ಆಪತ್ಕಾಲವು ಕಳೆದುಹೋದ ನಂತರ ರಾಜನು ಧರ್ಮಕ್ಕೆ ಹಾನಿಯಾಗದಂತೆ ವರ್ತಿಸಬೇಕು. ಪ್ರಾಯಶ್ಚಿತ್ತಾದಿಗಳನ್ನು ಮಾಡಿಕೊಳ್ಳಬೇಕು. ಯಜ್ಞಯಾಗಾದಿಗಳನ್ನು ಮಾಡಬೇಕು. ಶತ್ರುವಿಗೆ ಅಧೀನನಾಗಿರಬಾರದು.

12128018a ಸನ್ನಾತ್ಮಾ ನೈವ ಧರ್ಮಸ್ಯ ನ ಪರಸ್ಯ ನ ಚಾತ್ಮನಃ|

12128018c ಸರ್ವೋಪಾಯೈರುಜ್ಜಿಹೀರ್ಷೇದಾತ್ಮಾನಮಿತಿ ನಿಶ್ಚಯಃ||

ಆಪತ್ಕಾಲದಲ್ಲಿರುವವನು ತನ್ನ ಅಥವಾ ಇತರರ ಧರ್ಮಾಚರಣೆಯ ಕಡೆ ಲಕ್ಷ್ಯ ಕೊಡಬಾರದು. ಸರ್ವೋಪಾಯಗಳಿಂದಲೂ ತನ್ನನ್ನು ತಾನೇ ಆಪತ್ತಿನಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಬೇಕು. ಇದು ವಿದ್ವಾಂಸರ ಮತವೂ ನಿಶ್ಚಯವೂ ಆಗಿದೆ.

12128019a ತತ್ರ ಧರ್ಮವಿದಾಂ ತಾತ ನಿಶ್ಚಯೋ ಧರ್ಮನೈಪುಣೇ|

12128019c ಉದ್ಯಮೋ ಜೀವನಂ ಕ್ಷತ್ರೇ ಬಾಹುವೀರ್ಯಾದಿತಿ ಶ್ರುತಿಃ||

ಅಯ್ಯಾ! ಧರ್ಮವಿದರ ನಿಶ್ಚಯವು ಹೇಗೆ ಅವರ ಧರ್ಮವಿಷಯಕ ನೈಪುಣ್ಯತೆಯನ್ನು ಸೂಚಿಸುತ್ತದೆಯೋ ಹಾಗೆ ಬಾಹುಬಲದಿಂದ ತನ್ನ ಔನ್ನತ್ಯಕ್ಕೆ ಕಾರ್ಯಮಾಡುವುದು ಕ್ಷತ್ರಿಯನ ನಿಪುಣತೆಯನ್ನು ಸೂಚಿಸುತ್ತದೆ.

12128020a ಕ್ಷತ್ರಿಯೋ ವೃತ್ತಿಸಂರೋಧೇ ಕಸ್ಯ ನಾದಾತುಮರ್ಹತಿ|

12128020c ಅನ್ಯತ್ರ ತಾಪಸಸ್ವಾಚ್ಚ ಬ್ರಾಹ್ಮಣಸ್ವಾಚ್ಚ ಭಾರತ||

ಭಾರತ! ಕ್ಷತ್ರಿಯನ ಜೀವಿಕೆಗೇ ತೊಂದರೆಯುಂಟಾದರೆ ಅವನು ಬ್ರಾಹ್ಮಣರ ಮತ್ತು ತಪಸ್ವಿಗಳ ಸ್ವತ್ತನ್ನು ಬಿಟ್ಟು ಬೇರೆ ಯಾರಿಂದ ತಾನೇ ತೆಗೆದುಕೊಳ್ಳಲು ಯೋಗ್ಯನಾಗುವುದಿಲ್ಲ? ಅವರನ್ನು ಬಿಟ್ಟು ಉಳಿದ ಎಲ್ಲವರಿಂದಲೂ ರಾಜ್ಯನಿರ್ವಹಣೆಗೆ ಧನವನ್ನು ಸಂಗ್ರಹಿಸಲು ರಾಜನು ಅರ್ಹನಾಗಿದ್ದಾನೆ.

12128021a ಯಥಾ ವೈ ಬ್ರಾಹ್ಮಣಃ ಸೀದನ್ನಯಾಜ್ಯಮಪಿ ಯಾಜಯೇತ್|

12128021c ಅಭೋಜ್ಯಾನ್ನಾನಿ ಚಾಶ್ನೀಯಾತ್ತಥೇದಂ ನಾತ್ರ ಸಂಶಯಃ||

ಆಪತ್ತಿನಲ್ಲಿರುವ ಬ್ರಾಹ್ಮಣನು ಹೇಗೆ ಯಜ್ಞಕ್ಕೆ ಅಧಿಕಾರವಿಲ್ಲದಿರುವವರಿಂದಲೂ ಯಜ್ಞಮಾಡಿಸಬಹುದೋ, ಪ್ರಾಣಗಳನ್ನುಳಿಸಿಕೊಳ್ಳಲು ಅಬೋಜ್ಯವಾದ ಅನ್ನವನ್ನಾದರೂ ತಿನ್ನಬಹುದೋ ಹಾಗೆ ರಾಜನು ಆಪತ್ಕಾಲದಲ್ಲಿ ಬ್ರಾಹ್ಮಣರ ಮತ್ತು ತಾಪಸರ ಧನವನ್ನು ಬಿಟ್ಟು ಯಾರಿಂದ ಬೇಕಾದರೂ ಧನವನ್ನು ಸಂಗ್ರಹಿಸಬಹುದು. ಇದರಲ್ಲಿ ಸಂಶಯವಿಲ್ಲ.

12128022a ಪೀಡಿತಸ್ಯ ಕಿಮದ್ವಾರಮುತ್ಪಥೋ ನಿಧೃತಸ್ಯ ವಾ|

12128022c ಅದ್ವಾರತಃ ಪ್ರದ್ರವತಿ ಯದಾ ಭವತಿ ಪೀಡಿತಃ||

ಪೀಡಿತನಾಗಿರುವವನಿಗೆ ಯಾವ ಮಾರ್ಗವು ತಾನೇ ಹೋಗಬಾದದ್ದು ಎಂದೆನಿಸಿಕೊಲ್ಳುತ್ತದೆ? ಯಾವಕಡೆಯಿಂದ ಓಡಿಹೋಗಲು ಸಾಧ್ಯವಾಗುವುದೋ ಅದೇ ಅವನಿಗೆ ದ್ವಾರವಾಗುತ್ತದೆ. ಬಂಧಿಸಲ್ಪಟ್ಟಿರುವವನಿಗೆ ನ್ಯಾಯವಲ್ಲದ ಮಾರ್ಗವೇ ಮಾರ್ಗವಾಗುತ್ತದೆ.

12128023a ತಸ್ಯ ಕೋಶಬಲಜ್ಯಾನ್ಯಾ ಸರ್ವಲೋಕಪರಾಭವಃ|

12128023c ಭೈಕ್ಷಚರ್ಯಾ ನ ವಿಹಿತಾ ನ ಚ ವಿಟ್ ಶೂದ್ರಜೀವಿಕಾ||

ಕೋಶ-ಸೈನ್ಯಗಳಿಗೆ ಗ್ಲಾನಿಯುಂಟಾಗಿ ಪ್ರಜೆಗಳೆಳ್ಲರೂ ಪರಾಭವರಾದಾಗ ಕ್ಷತ್ರಿಯನು ಮೇಲೆ ಹೇಳಿದ ಆಪದ್ಧರ್ಮವನ್ನೇ ಆಶ್ರಯಿಸಬೇಕು. ಕ್ಷತ್ರಿಯನಿಗೆ ಭಿಕ್ಷೆ ಬೇಡುವುದು ಉಚಿತವಲ್ಲ. ವೈಶ್ಯ-ಶೂದ್ರರ ಜೀವನವನ್ನು ನಡೆಸುವುದೂ ವಿಹಿತವಲ್ಲ.

12128024a ಸ್ವಧರ್ಮಾನಂತರಾ ವೃತ್ತಿರ್ಯಾನ್ಯಾನನುಪಜೀವತಃ|

12128024c ವಹತಃ ಪ್ರಥಮಂ ಕಲ್ಪಮನುಕಲ್ಪೇನ ಜೀವನಮ್||

ಸ್ವಧರ್ಮಾಸಾರವಾಗಿ ಜೀವನನಿರ್ವಹಣೆಯನ್ನು ಮಾಡಲು ಸಾಧ್ಯವಾಗದಿದ್ದರೆ ಸ್ವಧರ್ಮವಲ್ಲದ ವೃತ್ತಿಯಿಂದಾದರೂ ಜೀವನವನ್ನು ನಡೆಸಬೇಕೆಂದು ಹೇಳಿದೆ. ಆಪತ್ಕಾಲದಲ್ಲಿ ಸ್ವಧರ್ಮವಾದ ಮೊದಲನೆಯ ಕಲ್ಪವನ್ನು ಬಳಸಲಿಕ್ಕಾಗದಿದ್ದಲ್ಲಿ ತನಗಿಂತಲೂ ಕೆಳಗಿನ ವರ್ಣದವರ ವೃತ್ತಿಯನ್ನೂ ಅವಲಂಬಿಸಿ ಜೀವನವನ್ನೂ ನಡೆಸಬಹುದು.

12128025a ಆಪದ್ಗತೇನ ಧರ್ಮಾಣಾಮನ್ಯಾಯೇನೋಪಜೀವನಮ್|

12128025c ಅಪಿ ಹ್ಯೇತದ್ ಬ್ರಾಹ್ಮಣೇಷು ದೃಷ್ಟಂ ವೃತ್ತಿಪರಿಕ್ಷಯೇ||

ಆಪತ್ತಿನಲ್ಲಿರುವವನು ಧರ್ಮಕ್ಕೆ ವಿಪರೀತವಾಗಿ ಉಪಜೀವನ ಮಾಡಬೇಕಾಗುತ್ತದೆ. ಆಪತ್ಕಾಲದಲ್ಲಿ ತಮ್ಮ ವೃತ್ತಿಯನ್ನು ತೊರೆದು ಕೆಳಗಿನ ವರ್ಣದವರ ವೃತ್ತಿಯನ್ನು ಮಾಡುವುದು ಬ್ರಾಹ್ಮಣರಲ್ಲಿಯೂ ಕಂಡುಬರುತ್ತದೆ.

12128026a ಕ್ಷತ್ರಿಯೇ ಸಂಶಯಃ ಕಃ ಸ್ಯಾದಿತ್ಯೇತನ್ನಿಶ್ಚಿತಂ ಸದಾ|

12128026c ಆದದೀತ ವಿಶಿಷ್ಟೇಭ್ಯೋ ನಾವಸೀದೇತ್ಕಥಂ ಚನ||

ಹಾಗಿರುವಾಗ ಕ್ಷತ್ರಿಯರ ಕುರಿತು ಸಂಶಯವೇಕೆ? ಸದಾ ಹೀಗೆಯೇ ನಡೆದುಕೊಳ್ಳಬೇಕೆಂದು ನಿಶ್ಚಯವಾಗಿದೆ. ಧನವಂತರಿಂದ ಬಲಾತ್ಕಾರದಿಂದಾದರೂ ಧನವನ್ನು ಸಂಗ್ರಹಿಸಬೇಕು. ಧನದ ಅಭಾವದಿಂದ ನಾಶಹೊಂದಬಾರದು.

12128027a ಹಂತಾರಂ ರಕ್ಷಿತಾರಂ ಚ ಪ್ರಜಾನಾಂ ಕ್ಷತ್ರಿಯಂ ವಿದುಃ|

12128027c ತಸ್ಮಾತ್ಸಂರಕ್ಷತಾ ಕಾರ್ಯಮಾದಾನಂ ಕ್ಷತ್ರಬಂಧುನಾ||

ಕ್ಷತ್ರಿಯನು ಪ್ರಜೆಗಳ ಹಂತಾರನೂ ಮತ್ತು ರಕ್ಷಿತನೂ ಎಂದು ತಿಳಿಯುತ್ತಾರೆ. ಆದುದರಿಂದ ಕ್ಷತ್ರಬಂಧುವು ಪ್ರಜೆಗಳನ್ನು ಸಂರಕ್ಷಿಸುತ್ತಿರುವಾಗಲೇ ಅವರಿಂದ ಧನವನ್ನು ಸಂಗ್ರಹಿಸಬೇಕು.

12128028a ಅನ್ಯತ್ರ ರಾಜನ್ ಹಿಂಸಾಯಾ ವೃತ್ತಿರ್ನೇಹಾಸ್ತಿ ಕಸ್ಯ ಚಿತ್|

12128028c ಅಪ್ಯರಣ್ಯಸಮುತ್ಥಸ್ಯ ಏಕಸ್ಯ ಚರತೋ ಮುನೇಃ||

ರಾಜನ್! ಈ ಲೋಕದಲ್ಲಿ ಯಾರೊಬ್ಬರ ಜೀವನವೃತ್ತಿಯೂ ಹಿಂಸೆಯಿಂದ ರಹಿತವಾಗಿಲ್ಲ. ಅರಣ್ಯದಲ್ಲಿ ಏಕಾಂಗಿಯಾಗಿ ಸಂಚರಿಸುವ ಮುನಿಯ ವೃತ್ತಿಯೂ ಹಿಂಸೆಯಿಂದ ರಹಿತವಾಗಿಲ್ಲವೆಂದಮೇಲೆ ಬೇರೆಯವರ ವಿಷಯದಲ್ಲಿ ಹೇಳುವುದೇನಿದೆ?

12128029a ನ ಶಂಖಲಿಖಿತಾಂ ವೃತ್ತಿಂ ಶಕ್ಯಮಾಸ್ಥಾಯ ಜೀವಿತುಮ್|

12128029c ವಿಶೇಷತಃ ಕುರುಶ್ರೇಷ್ಠ ಪ್ರಜಾಪಾಲನಮೀಪ್ಸತಾ||

ಕುರುಶ್ರೇಷ್ಠ! ಹಣೆಯಲ್ಲಿ ಬರೆದುದ್ದುದು ಆಗುತ್ತದೆ ಎಂಬ ಭಾವನೆಯನ್ನಿಟ್ಟುಕೊಂಡು ಜೀವನವನ್ನು ನಿರ್ವಹಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ವಿಶೇಷವಾಗಿ ಪ್ರಜೆಗಳನ್ನು ಪಾಲಿಸುವ ಇಚ್ಛೆಯುಳ್ಳ ರಾಜನು ಅದೃಷ್ಟವನ್ನೇ ನಿರೀಕ್ಷಿಸುತ್ತಾ ಜೀವನವನ್ನು ನಿರ್ವಹಿಸಲು ಖಂಡಿತಾ ಸಾಧ್ಯವಿಲ್ಲ.

12128030a ಪರಸ್ಪರಾಭಿಸಂರಕ್ಷಾ ರಾಜ್ಞಾ ರಾಷ್ಟ್ರೇಣ ಚಾಪದಿ|

12128030c ನಿತ್ಯಮೇವೇಹ ಕರ್ತವ್ಯಾ ಏಷ ಧರ್ಮಃ ಸನಾತನಃ||

ಆಪತ್ಕಾಲದಲ್ಲಿ ರಾಜ ಮತ್ತು ಪ್ರಜೆಗಳು ಪರಸ್ಪರರನ್ನು ಸಂರಕ್ಷಿಸುತ್ತಿರಬೇಕು. ನಿತ್ಯವೂ ಇದು ಮಾಡಬೇಕಾದ ಕರ್ತವ್ಯವು. ಇದೇ ಸನಾತನ ಧರ್ಮವು.

12128031a ರಾಜಾ ರಾಷ್ಟ್ರಂ ಯಥಾಪತ್ಸು ದ್ರವ್ಯೌಘೈಃ ಪರಿರಕ್ಷತಿ|

12128031c ರಾಷ್ಟ್ರೇಣ ರಾಜಾ ವ್ಯಸನೇ ಪರಿರಕ್ಷ್ಯಸ್ತಥಾ ಭವೇತ್||

ಪ್ರಜೆಗಳು ಸಂಕಟದಲ್ಲಿದ್ದಾಗ ರಾಜನು ಹೇಗೆ ಧನದ ರಾಶಿಗಳನ್ನೇ ವ್ಯಯಮಾಡಿ ಅವರನ್ನು ರಕ್ಷಿಸುವನೋ ಹಾಗೆ ಪ್ರಜೆಗಳೂ ಕೂಡ ರಾಜನು ಆಪತ್ತಿನಲ್ಲಿರುವಾಗ ಅವನನ್ನು ರಕ್ಷಿಸಬೇಕು.

12128032a ಕೋಶಂ ದಂಡಂ ಬಲಂ ಮಿತ್ರಂ ಯದನ್ಯದಪಿ ಸಂಚಿತಮ್|

12128032c ನ ಕುರ್ವೀತಾಂತರಂ ರಾಷ್ಟ್ರೇ ರಾಜಾ ಪರಿಗತೇ ಕ್ಷುಧಾ||

ರಾಜನು ಹಸಿವಿನಿಂದ ಪೀಡಿತನಾಗಿ ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದರೂ ಕೋಶ, ರಾಜದಂದ, ಸೈನ್ಯ, ಮಿತ್ರರು ಮತ್ತು ಸಂಗ್ರಹಿಸ ವಸ್ತುಗಳನ್ನು ಯಾವುದೇ ಕಾರಣಕ್ಕೂ ದೂರಮಾಡಬಾರದು.

12128033a ಬೀಜಂ ಭಕ್ತೇನ ಸಂಪಾದ್ಯಮಿತಿ ಧರ್ಮವಿದೋ ವಿದುಃ|

12128033c ಅತ್ರೈತಚ್ಚಂಬರಸ್ಯಾಹುರ್ಮಹಾಮಾಯಸ್ಯ ದರ್ಶನಮ್||

ತಾನು ತಿನ್ನುವ ಧಾನ್ಯದಿಂದಲಾದರೂ ಬೀಜವನ್ನು ಉಳಿಸಿಕೊಳ್ಳಬೇಕು ಎನ್ನುವುದು ಧರ್ಮವನ್ನು ತಿಳಿದವರ ಅಭಿಪ್ರಾಯವಾಗಿದೆ. ಈ ವಿಷಯದಲ್ಲಿ ಮಹಾಮಾಯಾವಿ ಶಂಬರಾಸುರನ ಅಭಿಪ್ರಾಯವನ್ನು ಉದಾಹರಿಸುತ್ತಾರೆ.

12128034a ಧಿಕ್ತಸ್ಯ ಜೀವಿತಂ ರಾಜ್ಞೋ ರಾಷ್ಟ್ರೇ ಯಸ್ಯಾವಸೀದತಿ|

12128034c ಅವೃತ್ತ್ಯಾಂತ್ಯಮನುಷ್ಯೋಽಪಿ ಯೋ ವೈ ವೇದ ಶಿಬೇರ್ವಚಃ||

“ಯಾವ ರಾಜನ ರಾಜ್ಯದ ಪ್ರಜೆಗಳೂ ಮತ್ತು ಅಲ್ಲಿಗೆ ಆಗಮಿಸಿದ ವಿದೇಶೀಯರೂ ಜೀವನಿರ್ವಹಣೆಗೆ ಮಾರ್ಗವೇ ಇಲ್ಲದೇ ಕಷ್ಟಪಡುವರೋ ಅಂತಹ ರಾಜನ ಜೀವನಕ್ಕೆ ಧಿಕ್ಕಾರವಿರಲಿ!”

12128035a ರಾಜ್ಞಃ ಕೋಶಬಲಂ ಮೂಲಂ ಕೋಶಮೂಲಂ ಪುನರ್ಬಲಮ್|

12128035c ತನ್ಮೂಲಂ ಸರ್ವಧರ್ಮಾಣಾಂ ಧರ್ಮಮೂಲಾಃ ಪುನಃ ಪ್ರಜಾಃ||

ರಾಜನಿಗೆ ಕೋಶಬಲವೇ ಮೂಲವು. ಪುನಃ ಕೋಶವು ಸೈನ್ಯದ ಮೂಲವು. ಸರ್ವಧರ್ಮಗಳಿಗೆ ಸೇನೆಯು ಮೂಲ. ಧರ್ಮವು ಪುನಃ ಪ್ರಜೆಗಳಿಗೆ ಮೂಲವಾಗಿದೆ.

12128036a ನಾನ್ಯಾನಪೀಡಯಿತ್ವೇಹ ಕೋಶಃ ಶಕ್ಯಃ ಕುತೋ ಬಲಮ್|

12128036c ತದರ್ಥಂ ಪೀಡಯಿತ್ವಾ ಚ ದೋಷಂ ನ ಪ್ರಾಪ್ತುಮರ್ಹತಿ||

ಇತರರನ್ನು ಪೀಡಿಸದೆಯೇ ಧನಸಂಗ್ರಹವು ಸಾಧ್ಯವಾಗುವುದಿಲ್ಲ. ಧನಸಂಗ್ರಹವಿಲ್ಲದಿದ್ದರೆ ಸೈನ್ಯಸಂಗ್ರಹವು ಹೇಗೆ ತಾನೇ ಸಾಧ್ಯವಾಗುತ್ತದೆ? ಆದುದರಿಂದ ಆಪತ್ಕಾಲದಲ್ಲಿ ರಾಜನು ಪ್ರಜೆಗಳನ್ನು ಪೀಡಿಸಿದರೂ ಪ್ರಜಾಪೀಡನ ದೋಷಕ್ಕೆ ಭಾಗಿಯಾಗುವುದಿಲ್ಲ.

12128037a ಅಕಾರ್ಯಮಪಿ ಯಜ್ಞಾರ್ಥಂ ಕ್ರಿಯತೇ ಯಜ್ಞಕರ್ಮಸು|

12128037c ಏತಸ್ಮಾತ್ಕಾರಣಾದ್ರಾಜಾ ನ ದೋಷಂ ಪ್ರಾಪ್ತುಮರ್ಹತಿ||

ಯಜ್ಞಕರ್ಮಗಳಲ್ಲಿ ಸಿದ್ಧಿಗಾಗಿ ಯೋಗ್ಯವಲ್ಲದ ಕಾರ್ಯಗಳನ್ನೂ ಮಾಡಬೇಕಾಗುತ್ತದೆ. ಆದರೆ ಅದನ್ನು ದೋಷವೆಂದು ಯಾರೂ ಪರಿಗಣಿಸುವುದಿಲ್ಲ. ಹೀಗೆಯೇ ಆಪತ್ಕಾಲದಲ್ಲಿ ರಾಜನು ದೋಷಗಳಿಗೆ ಭಾಗಿಯಾಗುವುದಿಲ್ಲ.

12128038a ಅರ್ಥಾರ್ಥಮನ್ಯದ್ಭವತಿ ವಿಪರೀತಮಥಾಪರಮ್|

12128038c ಅನರ್ಥಾರ್ಥಮಥಾಪ್ಯನ್ಯತ್ತತ್ಸರ್ವಂ ಹ್ಯರ್ಥಲಕ್ಷಣಮ್|

12128038e ಏವಂ ಬುದ್ಧ್ಯಾ ಸಂಪ್ರಪಶ್ಯೇನ್ಮೇಧಾವೀ ಕಾರ್ಯನಿಶ್ಚಯಮ್||

ಆಪತ್ಕಾಲದಲ್ಲಿ ಪ್ರಜಾಪೀಡನವು ಅರ್ಥಸಂಗ್ರಹಕ್ಕಾಗಿರುವುದರಿಂದ ಅರ್ಥಕಾರಿಯಾಗುತ್ತದೆ. ಪರ್ಥಸಂಗ್ರಹಣ ಮಾಡದಿರುವುದೇ ರಾಜನಿಗೆ ಅನರ್ಥಕವಾಗುತ್ತದೆ. ಹೀಗೆಯೇ ಅನರ್ಥಕಾರಿಗಳೆಂದೆನಿಸುವ ಸೈನ್ಯ ಸಂಗ್ರಹಾದಿಗಳು ಯುದ್ಧವು ಸನ್ನಿಹಿತವಾದಾಗ ಅರ್ಥಕಾರಿಗಳಾಗುತ್ತವೆ. ಬುದ್ಧಿವಂತನು ಹೀಗೆ ಬುದ್ಧಿಯಿಂದ ವಿಚಾರಿಸಿ ಕರ್ತವ್ಯವನ್ನು ನಿಶ್ಚಯಿಸಬೇಕು.

12128039a ಯಜ್ಞಾರ್ಥಮನ್ಯದ್ಭವತಿ ಯಜ್ಞೇ ನಾರ್ಥಸ್ತಥಾಪರಃ|

12128039c ಯಜ್ಞಸ್ಯಾರ್ಥಾರ್ಥಮೇವಾನ್ಯತ್ತತ್ಸರ್ವಂ ಯಜ್ಞಸಾಧನಮ್||

ಯಜ್ಞಾರ್ಥಕ್ಕಾಗಿ ಮಾಡಿದ ಎಲ್ಲವೂ ಯಜ್ಞವೇ ಆಗುತ್ತದೆ. ಅಲ್ಲಿ ಅನರ್ಥಕಾರಿಯಾದುದು ಯಾವುದೂ ಇಲ್ಲ.

12128040a ಉಪಮಾಮತ್ರ ವಕ್ಷ್ಯಾಮಿ ಧರ್ಮತತ್ತ್ವಪ್ರಕಾಶಿನೀಮ್|

12128040c ಯೂಪಂ ಚಿಂದಂತಿ ಯಜ್ಞಾರ್ಥಂ ತತ್ರ ಯೇ ಪರಿಪಂಥಿನಃ||

12128041a ದ್ರುಮಾಃ ಕೇ ಚನ ಸಾಮಂತಾ ಧ್ರುವಂ ಚಿಂದಂತಿ ತಾನಪಿ|

12128041c ತೇ ಚಾಪಿ ನಿಪತಂತೋಽನ್ಯಾನ್ನಿಘ್ನಂತಿ ಚ ವನಸ್ಪತೀನ್||

ಧರ್ಮತತ್ತ್ವಪ್ರಕಾಶಕವಾದ ಉಪಮೆಯೊಂದನ್ನು ಹೇಳುತ್ತೇನೆ. ಯಜ್ಞದ ಯೂಪಕ್ಕಾಗಿ ವೃಕ್ಷವನ್ನು ಕಡಿಯುತ್ತಾರೆ. ಹಾಗೆ ಕಡಿಯುವಾಗ ಅದರ ಹತ್ತಿರದಲ್ಲಿರುವ ವನಸ್ಪತಿಗಳೂ ನಾಶವಾಗುತ್ತವೆ.

12128042a ಏವಂ ಕೋಶಸ್ಯ ಮಹತೋ ಯೇ ನರಾಃ ಪರಿಪಂಥಿನಃ|

12128042c ತಾನಹತ್ವಾ ನ ಪಶ್ಯಾಮಿ ಸಿದ್ಧಿಮತ್ರ ಪರಂತಪ||

ಪರಂತಪ! ಹೀಗೆ ಕೋಶಸಂಗ್ರಹದಲ್ಲಿ ಅಡ್ಡಿಯನ್ನುಂಟುಮಾಡುವವರನ್ನು ಸಂಹರಿಸದೇ ಕೋಶಸಂಗ್ರಹಕಾರ್ಯವು ಸಫಲವಾಗಿರುವುದನ್ನು ನಾನು ಎಲ್ಲಿಯೂ ಕಂಡಿಲ್ಲ.

12128043a ಧನೇನ ಜಯತೇ ಲೋಕಾವುಭೌ ಪರಮಿಮಂ ತಥಾ|

12128043c ಸತ್ಯಂ ಚ ಧರ್ಮವಚನಂ ಯಥಾ ನಾಸ್ತ್ಯಧನಸ್ತಥಾ||

ಧನದಿಂದ ಮನುಷ್ಯನು ಇಹಲೋಕ-ಪರಲೋಕಗಳೆರಡನ್ನೂ ಜಯಿಸುತ್ತಾನೆ. ಸತ್ಯಧರ್ಮಗಳನ್ನು ಸಾಧಿಸುತ್ತಾನೆ. ಆದರೆ ನಿರ್ಧನನಿಗೆ ಅವು ಸಾಧ್ಯವಾಗುವುದಿಲ್ಲ.

12128044a ಸರ್ವೋಪಾಯೈರಾದದೀತ ಧನಂ ಯಜ್ಞಪ್ರಯೋಜನಮ್|

12128044c ನ ತುಲ್ಯದೋಷಃ ಸ್ಯಾದೇವಂ ಕಾರ್ಯಾಕಾರ್ಯೇಷು ಭಾರತ||

ಯಜ್ಞ ಪ್ರಯೋಜಕ ವಸ್ತುಗಳನ್ನು ಸರ್ವೋಪಾಯಗಳಿಂದ ಸಂಗ್ರಹಿಸಬೇಕು. ಭಾರತ! ಕಾರ್ಯ ಮತ್ತು ಅಕಾರ್ಯಗಳಲ್ಲಿ ದೋಷವು ಒಂದೇ ಸಮನಾಗಿರುವುದಿಲ್ಲ.

12128045a ನೈತೌ ಸಂಭವತೋ ರಾಜನ್ಕಥಂ ಚಿದಪಿ ಭಾರತ|

12128045c ನ ಹ್ಯರಣ್ಯೇಷು ಪಶ್ಯಾಮಿ ಧನವೃದ್ಧಾನಹಂ ಕ್ವ ಚಿತ್||

ರಾಜನ್! ಭಾರತ! ಧನಸಂಗ್ರಹ ಮತು ಧನದ ತ್ಯಾಗ ಇವೆರಡೂ ಒಂದೇ ವ್ಯಕ್ತಿಯಲ್ಲಿ ಒಟ್ಟಿಗೇ ಇರಲು ಸಾಧ್ಯವಿಲ್ಲ. ಅರಣ್ಯದಲ್ಲಿರುವವರಲ್ಲಿಯೂ ಧನವೃದ್ಧರಾದವಎಅನ್ನು ನಾನು ಇದೂವರೆಗೂ ಕಂಡಿಲ್ಲ.

12128046a ಯದಿದಂ ದೃಶ್ಯತೇ ವಿತ್ತಂ ಪೃಥಿವ್ಯಾಮಿಹ ಕಿಂ ಚನ|

12128046c ಮಮೇದಂ ಸ್ಯಾನ್ಮಮೇದಂ ಸ್ಯಾದಿತ್ಯಯಂ ಕಾಂಕ್ಷತೇ ಜನಃ||

ಈ ಪೃಥ್ವಿಯಲ್ಲಿರುವ ಐಶ್ವರ್ಯವನ್ನು ಜನರು ಇದು ನನ್ನದಾಗಲಿ ಎಂದೇ ಆಶೆಪಡುತ್ತಿರುತ್ತಾರೆ.

12128047a ನ ಚ ರಾಜ್ಯಸಮೋ ಧರ್ಮಃ ಕಶ್ಚಿದಸ್ತಿ ಪರಂತಪ|

12128047c ಧರ್ಮಂ ಶಂಸಂತಿ ತೇ ರಾಜ್ಞಾಮಾಪದರ್ಥಮಿತೋಽನ್ಯಥಾ||

ಪರಂತಪ! ರಾಜನಿಗೆ ರಾಜ್ಯರಕ್ಷಣೆಗೆ ಸಮನಾದ ಬೇರೆ ಯಾವ ಧರ್ಮವೂ ಇಲ್ಲ. ಈಗ ಹೇಳಿರುವ ಈ ಧರ್ಮವು ರಾಜನು ಆಪತ್ತಿನಲ್ಲಿರುವಾಗ ಪಾಲಿಸಬೇಕಾದ ಧರ್ಮ. ಸಾಮಾನ್ಯಕಾಲಗಳಲ್ಲಿ ಅನುಸರಿಸಬೇಕಾದ ಧರ್ಮವಿದಲ್ಲ.

12128048a ದಾನೇನ ಕರ್ಮಣಾ ಚಾನ್ಯೇ ತಪಸಾನ್ಯೇ ತಪಸ್ವಿನಃ|

12128048c ಬುದ್ಧ್ಯಾ ದಾಕ್ಷ್ಯೇಣ ಚಾಪ್ಯನ್ಯೇ ಚಿನ್ವಂತಿ[6] ಧನಸಂಚಯಾನ್||

ದಾನದಿಂದ, ಕರ್ಮಗಳಿಂದ, ಅನ್ಯ ತಪಸ್ವಿಗಳು ತಪಸ್ಸಿನಿಂದ, ಬುದ್ಧಿಯಿಂದ, ಮತ್ತು ಅನ್ಯರು ದಕ್ಷತೆಯಿಂದ ಧನವನ್ನು ಸಂಗ್ರಹಿಸುತ್ತಾರೆ.

12128049a ಅಧನಂ ದುರ್ಬಲಂ ಪ್ರಾಹುರ್ಧನೇನ ಬಲವಾನ್ ಭವೇತ್|

12128049c ಸರ್ವಂ ಧನವತಃ ಪ್ರಾಪ್ಯಂ ಸರ್ವಂ ತರತಿ ಕೋಶವಾನ್|

12128049e ಕೋಶಾದ್ಧರ್ಮಶ್ಚ ಕಾಮಶ್ಚ ಪರೋ ಲೋಕಸ್ತಥಾಪ್ಯಯಮ್||

ನಿರ್ಧನನನ್ನು ದುರ್ಬಲನೆಂದು ಹೇಳುತ್ತಾರೆ. ಧನದಿಂದ ಬಲವಾನನಾಗುತ್ತಾನೆ. ಧನವಂತನಿಗೆ ಎಲ್ಲವೂ ಪ್ರಾಪ್ತವಾಗುತ್ತದೆ. ಕೋಶವಂತನು ಎಲ್ಲ ಕಷ್ಟಗಳನ್ನೂ ಪಾರುಮಾಡುತಾನೆ. ಕೋಶದಿಂದ ಧರ್ಮ-ಕಾಮಗಳೂ ಇಹ-ಪರಗಳೂ ದೊರೆಯುತ್ತವೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಅಷ್ಟವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ನೂರಾಇಪ್ಪತ್ತೆಂಟನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವವು|

ಇದೂವರೆಗಿನ ಒಟ್ಟು ಮಹಾಪರ್ವಗಳು – ೧೧/೧೮, ಉಪಪರ್ವಗಳು-೮೪/೧೦೦, ಅಧ್ಯಾಯಗಳು-೧೪೫೬/೧೯೯೫, ಶ್ಲೋಕಗಳು-೫೪೫೨೦/೭೩೭೮೪

Colorful flowers bouquet isolated on ... | Stock image | Colourbox

[1] ಚ್ಯುತಮಂತ್ರಸ್ಯ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಸಂವ್ಯವಸ್ಯಃ ಸ್ವಯಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ದುಃಖಾದಾನ ಇಹ ಹ್ಯೇಷ ಸ್ಯಾತ್ತು ಪಶ್ಚಾತ್ ಕ್ಷಯೋಪಮಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ವಿಜ್ಞಾನಾದಪಿ ಯೋಗಶ್ಚ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಏಷ ಧರ್ಮಃ ಸನಾತನಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ವಿಂದಂತಿ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.