Shanti Parva: Chapter 126

ಶಾಂತಿ ಪರ್ವ: ರಾಜಧರ್ಮ ಪರ್ವ

೧೨೬

12126001 ಭೀಷ್ಮ ಉವಾಚ|

12126001a ತತಸ್ತೇಷಾಂ ಸಮಸ್ತಾನಾಮೃಷೀಣಾಮೃಷಿಸತ್ತಮಃ|

12126001c ಋಷಭೋ ನಾಮ ವಿಪ್ರರ್ಷಿಃ ಸ್ಮಯನ್ನಿವ ತತೋಽಬ್ರವೀತ್||

ಭೀಷ್ಮನು ಹೇಳಿದನು: “ಆಗ ಆ ಸಮಸ್ತ ಋಷಿಗಳಲ್ಲಿದ್ದ ಋಷಿಸತ್ತಮ ಋಷಭ ಎಂಬ ಹೆಸರಿನ ವಿಪ್ರರ್ಷಿಯು ನಸುಗುತ್ತಾ ಹೇಳಿದನು:

12126002a ಪುರಾಹಂ ರಾಜಶಾರ್ದೂಲ ತೀರ್ಥಾನ್ಯನುಚರನ್ ಪ್ರಭೋ|

12126002c ಸಮಾಸಾದಿತವಾನ್ದಿವ್ಯಂ ನರನಾರಾಯಣಾಶ್ರಮಮ್||

“ಪ್ರಭೋ! ರಾಜಶಾರ್ದೂಲ! ಹಿಂದೆ ನಾನು ತೀರ್ಥಗಳಲ್ಲಿ ಸಂಚರಿಸುತ್ತಾ ದಿವ್ಯ ನರನಾರಾಯಣಾಶ್ರಮಕ್ಕೆ ಹೋದೆನು.

12126003a ಯತ್ರ ಸಾ ಬದರೀ ರಮ್ಯಾ ಹ್ರದೋ ವೈಹಾಯಸಸ್ತಥಾ|

12126003c ಯತ್ರ ಚಾಶ್ವಶಿರಾ ರಾಜನ್ವೇದಾನ್ಪಠತಿ ಶಾಶ್ವತಾನ್||

ರಾಜನ್! ಅಲ್ಲಿ ಬದರೀ ವೃಕ್ಷವಿದೆ. ರಮ್ಯ ವೈಹಾಯ ಸರೋವರವೂ ಇದೆ. ಅಲ್ಲಿ ಅಶ್ವಶಿರನು ಶಾಶ್ವತವಾಗಿ ವೇದಗಳನ್ನು ಪಠಿಸುತ್ತಿರುತ್ತಾನೆ.

12126004a ತಸ್ಮಿನ್ಸರಸಿ ಕೃತ್ವಾಹಂ ವಿಧಿವತ್ತರ್ಪಣಂ ಪುರಾ|

12126004c ಪಿತೄಣಾಂ ದೇವತಾನಾಂ ಚ ತತೋಽಶ್ರಮಮಿಯಾಂ ತದಾ||

ಆ ಸರಸ್ಸಿನಲ್ಲಿ ನಾನು ಮೊದಲು ವಿಧಿವತ್ತಾಗಿ ಪಿತೃಗಳಿಗೆ ಮತ್ತು ದೇವತೆಗಳಿಗೆ ತರ್ಪಣಗಳನ್ನಿತ್ತು ಆ ಆಶ್ರಮವನ್ನು ಪ್ರವೇಶಿಸಿದೆನು.

12126005a ರೇಮಾತೇ ಯತ್ರ ತೌ ನಿತ್ಯಂ ನರನಾರಾಯಣಾವೃಷೀ|

12126005c ಅದೂರಾದಾಶ್ರಮಂ ಕಂ ಚಿದ್ವಾಸಾರ್ಥಮಗಮಂ ತತಃ||

ಅಲ್ಲಿ ನರನಾರಾಯಣಋಷಿಗಳನ್ನು ಸಂದರ್ಶಿಸಿ ನಂತರ ಹತ್ತಿರದಲ್ಲಿಯೇ ಇದ್ದ ಇನ್ನೊಂದು ಅಶ್ರಮಕ್ಕೆ ಉಳಿದುಕೊಳ್ಳಲು ಹೋದೆನು.

12126006a ತತಶ್ಚೀರಾಜಿನಧರಂ ಕೃಶಮುಚ್ಚಮತೀವ ಚ|

12126006c ಅದ್ರಾಕ್ಷಮೃಷಿಮಾಯಾಂತಂ ತನುಂ ನಾಮ ತಪೋನಿಧಿಮ್||

ಅದೇ ಆಶ್ರಮಕ್ಕೆ ನಾರುಮಡಿಯನ್ನುಟ್ಟಿದ್ದ ಕೃಷ್ಣಾಜಿನವನ್ನು ಧರಿಸಿದ್ದ ಕೃಶನಾಗಿಯೂ ಅತ್ಯಂತ ಎತ್ತರನಾಗಿಯೂ ಇದ್ದ ತನು ಎಂಬ ಹೆಸರಿನ ತಪೋನಿಧಿಯನ್ನು ಕಂಡೆನು.

12126007a ಅನ್ಯೈರ್ನರೈರ್ಮಹಾಬಾಹೋ ವಪುಷಾಷ್ಟಗುಣಾನ್ವಿತಮ್|

12126007c ಕೃಶತಾ ಚಾಪಿ ರಾಜರ್ಷೇ ನ ದೃಷ್ಟಾ ತಾದೃಶೀ ಕ್ವ ಚಿತ್||

ಮಹಾಬಾಹೋ! ಅವನ ಶರೀರವು ಅನ್ಯರ ಶರೀರಕ್ಕಿಂತ ಎಂಟು ಪಟ್ಟು ಎತ್ತರವಾಗಿತ್ತು. ರಾಜರ್ಷೇ! ಅವನಷ್ಟು ತೆಳುವಾದ ಶರೀರವನ್ನು ನಾನು ನೋಡಿಯೇ ಇರಲಿಲ್ಲ.

12126008a ಶರೀರಮಪಿ ರಾಜೇಂದ್ರ ತಸ್ಯ ಕಾನಿಷ್ಠಿಕಾಸಮಮ್|

12126008c ಗ್ರೀವಾ ಬಾಹೂ ತಥಾ ಪಾದೌ ಕೇಶಾಶ್ಚಾದ್ಭುತದರ್ಶನಾಃ||

ರಾಜೇಂದ್ರ! ಅವನ ಶರೀರವು ಕಿರುಬೆರಳಿನಷ್ಟು ತೆಳ್ಳಗಾಗಿತ್ತು. ಅವನ ಕುತ್ತಿಗೆ, ಬಾಹುಗಳು, ಪಾದಗಳು ಮತ್ತು ಕೂದಲು ಅದ್ಭುತವಾಗಿ ತೋರುತ್ತಿದ್ದವು.

12126009a ಶಿರಃ ಕಾಯಾನುರೂಪಂ ಚ ಕರ್ಣೌ ನೇತ್ರೇ ತಥೈವ ಚ|

12126009c ತಸ್ಯ ವಾಕ್ಚೈವ ಚೇಷ್ಟಾ ಚ ಸಾಮಾನ್ಯೇ ರಾಜಸತ್ತಮ||

ರಾಜಸತ್ತಮ! ಅವನ ತಲೆ, ಕಿವಿಗಳು ಮತ್ತು ಕಣ್ಣುಗಳು ಕಾಯಕ್ಕೆ ಅನುರೂಪವಾಗಿದ್ದವು. ಅವನ ಮಾತು ಮತ್ತು ಚೇಷ್ಟೆಗಳು ಸಾಮಾನ್ಯವಾಗಿದ್ದವು.

12126010a ದೃಷ್ಟ್ವಾಹಂ ತಂ ಕೃಶಂ ವಿಪ್ರಂ ಭೀತಃ ಪರಮದುರ್ಮನಾಃ|

12126010c ಪಾದೌ ತಸ್ಯಾಭಿವಾದ್ಯಾಥ ಸ್ಥಿತಃ ಪ್ರಾಂಜಲಿರಗ್ರತಃ||

ಆ ಕೃಶ ವಿಪ್ರನನ್ನು ಕಂಡು ಭೀತನೂ ಪರಮ ದುರ್ಮನನೂ ಆಗಿ ಅವ ಪಾದಗಳಿಗೆರಗಿ ಕೈಮುಗಿದು ಅವನ ಎದಿರು ನಿಂತುಕೊಂಡೆನು.

12126011a ನಿವೇದ್ಯ ನಾಮ ಗೋತ್ರಂ ಚ ಪಿತರಂ ಚ ನರರ್ಷಭ|

12126011c ಪ್ರದಿಷ್ಟೇ ಚಾಸನೇ ತೇನ ಶನೈರಹಮುಪಾವಿಶಮ್||

ನರರ್ಷಭ! ನನ್ನ ನಾಮಗೋತ್ರಗಳನ್ನೂ ತಂದೆಯ ಹೆಸರನ್ನೂ ನಿವೇದಿಸಿಕೊಂಡು ಅವನು ತೋರಿಸಿದ ಆಸನದಲ್ಲಿ ಮೆಲ್ಲನೇ ಕುಳಿತುಕೊಂಡೆನು.

12126012a ತತಃ ಸ ಕಥಯಾಮಾಸ ಕಥಾ ಧರ್ಮಾರ್ಥಸಂಹಿತಾಃ|

12126012c ಋಷಿಮಧ್ಯೇ ಮಹಾರಾಜ ತತ್ರ ಧರ್ಮಭೃತಾಂ ವರಃ||

ಮಹಾರಾಜ! ಆಗ ಅಲ್ಲಿ ಋಷಿಗಳ ಮಧ್ಯದಲ್ಲಿ ಆ ಧರ್ಮಭೃತರಲ್ಲಿ ಶ್ರೇಷ್ಠನು ಧರ್ಮಾರ್ಥಸಂಹಿತ ಕಥೆಗಳನ್ನು ಹೇಳತೊಡಗಿದನು.

12126013a ತಸ್ಮಿಂಸ್ತು ಕಥಯತ್ಯೇವ ರಾಜಾ ರಾಜೀವಲೋಚನಃ|

12126013c ಉಪಾಯಾಜ್ಜವನೈರಶ್ವೈಃ ಸಬಲಃ ಸಾವರೋಧನಃ||

ಅವನು ಕಥೆಗಳನ್ನು ಹೇಳುತ್ತಿರುವಾಗಲೇ ಓರ್ವ ರಾಜೀವಲೋಚನ ರಾಜನು ಸೈನ್ಯ ಸಮೇತನಾಗಿ ತನ್ನ ಅಂತಃಪುರದ ಸ್ತ್ರೀಯರೊಡನೆ ವೇಗವಾದ ಕುದುರೆಗಳನ್ನೇರಿ ಅಲ್ಲಿಗೆ ಬಂದನು.

12126014a ಸ್ಮರನ್ ಪುತ್ರಮರಣ್ಯೇ ವೈ ನಷ್ಟಂ ಪರಮದುರ್ಮನಾಃ|

12126014c ಭೂರಿದ್ಯುಮ್ನಪಿತಾ ಧೀಮಾನ್ರಘುಶ್ರೇಷ್ಠೋ ಮಹಾಯಶಾಃ||

ಅರಣ್ಯದಲ್ಲಿ ಕಳೆದುಹೋಗಿದ್ದ ಪುತ್ರನನ್ನು ಸ್ಮರಿಸಿಕೊಳ್ಳುತ್ತಾ ಪರಮ ದುಃಖಿತನಾಗಿದ ಅವನು ಭೂರಿದ್ಯುಮ್ನನ ಪಿತ ಧೀಮಾನ್ ಮಹಾಯಶಸ್ವೀ ರಘುಶ್ರೇಷ್ಠನಾಗಿದ್ದನು.

12126015a ಇಹ ದ್ರಕ್ಷ್ಯಾಮಿ ತಂ ಪುತ್ರಂ ದ್ರಕ್ಷ್ಯಾಮೀಹೇತಿ ಪಾರ್ಥಿವಃ|

12126015c ಏವಮಾಶಾಕೃತೋ ರಾಜಂಶ್ಚರನ್ವನಮಿದಂ ಪುರಾ||

ರಾಜನ್! “ಪುತ್ರನನ್ನು ಇಲ್ಲಿ ಕಾಣುತ್ತೇನೆ! ಇಲ್ಲಿ ನೋಡುತ್ತೇನೆ!” ಎಂಬ ಆಶೆಯನ್ನಿತ್ತುಕೊಂಡು ಆ ಪಾರ್ಥಿವನು ಈ ವನದಲ್ಲೆಲ್ಲಾ ಅಲೆಯುತ್ತಿದ್ದನು.

12126016a ದುರ್ಲಭಃ ಸ ಮಯಾ ದ್ರಷ್ಟುಂ ನೂನಂ ಪರಮಧಾರ್ಮಿಕಃ|

12126016c ಏಕಃ ಪುತ್ರೋ ಮಹಾರಣ್ಯೇ ನಷ್ಟ ಇತ್ಯಸಕೃತ್ತದಾ||

“ಪರಮಧಾರ್ಮಿಕನಾಗಿದ್ದ ಅವನು ನನಗೆ ಕಾಣಲೂ ದುರ್ಲಭವಾಗಿಬಿಟ್ಟನಲ್ಲ! ನನ್ನ ಓರ್ವನೇ ಪುತ್ರನು ಮಹಾರಣ್ಯದಲ್ಲಿ ಕಳೆದುಹೋದನಲ್ಲಾ!” ಎಂದು ವಿಲಪಿಸುತ್ತಿದ್ದನು.

12126017a ದುರ್ಲಭಃ ಸ ಮಯಾ ದ್ರಷ್ಟುಮಾಶಾ ಚ ಮಹತೀ ಮಮ|

12126017c ತಯಾ ಪರೀತಗಾತ್ರೋಽಹಂ ಮುಮೂರ್ಷುರ್ನಾತ್ರ ಸಂಶಯಃ||

“ದುರ್ಲಭವಾಗಿದ್ದರೂ ಅವನನ್ನು ನೋಡಲೇ ಬೇಕೆಂದು ನನಗೆ ಮಹಾ ಆಶೆಯುಂಟಾಗಿದೆ. ಆ ಆಶೆಯು ನನ್ನ ಶರೀರವನ್ನು ಸಂಪೂರ್ಣವಾಗಿ ವ್ಯಾಪಿಸಿದೆ. ಅವನನ್ನು ಕಾಣದಿದ್ದರೆ ಮೃತ್ಯುವನ್ನೇ ಅಪ್ಪುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”

12126018a ಏತಚ್ಚ್ರುತ್ವಾ ಸ ಭಗವಾಂಸ್ತನುರ್ಮುನಿವರೋತ್ತಮಃ|

12126018c ಅವಾಕ್ಶಿರಾ ಧ್ಯಾನಪರೋ ಮುಹೂರ್ತಮಿವ ತಸ್ಥಿವಾನ್||

ಇದನ್ನು ಕೇಳಿ ಭಗವಾನ್ ತನು ಮುನಿವರೋತ್ತಮನು ತಲೆತಗ್ಗಿಸಿ ಧ್ಯಾನಪರನಾಗಿ ಮುಹೂರ್ತಕಾಲ ಕುಳಿತನು.

12126019a ತಮನುಧ್ಯಾಂತಮಾಲಕ್ಷ್ಯ ರಾಜಾ ಪರಮದುರ್ಮನಾಃ|

12126019c ಉವಾಚ ವಾಕ್ಯಂ ದೀನಾತ್ಮಾ ಮಂದಂ ಮಂದಮಿವಾಸಕೃತ್||

ಅವನು ಧ್ಯಾನಾಸಕ್ತನಾದುದನ್ನು ನೋಡಿ ಪರಮ ದುಃಖಿತನಾದ ದೀನಾತ್ಮ ರಾಜನು ಮೆಲ್ಲ ಮೆಲ್ಲನೇ ಈ ಮಾತನ್ನಾಡಿದನು:

12126020a ದುರ್ಲಭಂ ಕಿಂ ನು ವಿಪ್ರರ್ಷೇ ಆಶಾಯಾಶ್ಚೈವ ಕಿಂ ಭವೇತ್|

12126020c ಬ್ರವೀತು ಭಗವಾನೇತದ್ಯದಿ ಗುಹ್ಯಂ ನ ತನ್ಮಯಿ||

“ವಿಪ್ರರ್ಷೇ! ಯಾವುದು ದುರ್ಲಭವಾದುದು? ಆಶೆಗಿಂತಲೂ ದೊಡ್ಡದು ಯಾವುದು? ಭಗವಾನ್! ಗುಹ್ಯವಾಗಿಲ್ಲದಿದ್ದರೆ ಇದನ್ನು ನನಗೆ ಹೇಳಬೇಕು.”

12126021a ಮಹರ್ಷಿರ್ಭಗವಾಂಸ್ತೇನ ಪೂರ್ವಮಾಸೀದ್ವಿಮಾನಿತಃ|

12126021c ಬಾಲಿಶಾಂ ಬುದ್ಧಿಮಾಸ್ಥಾಯ ಮಂದಭಾಗ್ಯತಯಾತ್ಮನಃ||

ತನುವು ಹೇಳಿದನು: “ನಿನ್ನ ಈ ಮಗನು ಹಿಂದೆ ಮೂರ್ಖಬುದ್ಧಿಯನ್ನಾಶ್ರಯಿಸಿ ತನ್ನ ದೌರ್ಭಾಗ್ಯದ ಕಾರಣದಿಂದ ಪೂಜನೀಯ ಮಹರ್ಷಿಯೋರ್ವನನ್ನು ಅಪಮಾನಿಸಿದ್ದನು.

12126022a ಅರ್ಥಯನ್ಕಲಶಂ ರಾಜನ್ಕಾಂಚನಂ ವಲ್ಕಲಾನಿ ಚ|

12126022c ನಿರ್ವಿಣ್ಣಃ ಸ ತು ವಿಪ್ರರ್ಷಿರ್ನಿರಾಶಃ ಸಮಪದ್ಯತ||

ರಾಜನ್! ಕಾಂಚನ ಕಲಶವನ್ನೂ ವಲ್ಕಲಗಳನ್ನೂ ಕೇಳಿ ಬಂದಿದ್ದ ವಿಪ್ರರ್ಷಿಯನ್ನು ಅವನು ನಿರ್ವಿಣ್ಣನನ್ನಾಗಿಯೂ ನಿರಾಶನನ್ನಾಗಿಯೂ ಮಾಡಿದ್ದನು.”

12126023a ಏವಮುಕ್ತ್ವಾಭಿವಾದ್ಯಾಥ ತಮೃಷಿಂ ಲೋಕಪೂಜಿತಮ್|

12126023c ಶ್ರಾಂತೋ ನ್ಯಷೀದದ್ಧರ್ಮಾತ್ಮಾ ಯಥಾ ತ್ವಂ ನರಸತ್ತಮ||

ನರಸತ್ತಮ! ಹೀಗೆ ಹೇಳಲು ಆ ಧರ್ಮಾತ್ಮನು ಲೋಕಪೂಜಿತನಾದ ಆ ಋಷಿಯನ್ನು ಅಭಿವಂದಿಸಿ ನಿನ್ನಹಾಗೆಯೇ ಬಳಲಿ ಕುಳಿತಿಕೊಂಡನು.

12126024a ಅರ್ಘ್ಯಂ ತತಃ ಸಮಾನೀಯ ಪಾದ್ಯಂ ಚೈವ ಮಹಾನೃಷಿಃ|

12126024c ಆರಣ್ಯಕೇನ ವಿಧಿನಾ ರಾಜ್ಞೇ ಸರ್ವಂ ನ್ಯವೇದಯತ್||

ಆಗ ಆ ಮಹಾನೃಷಿಯು ಅರ್ಘ್ಯ-ಪಾದ್ಯಗಳನ್ನು ತರಿಸಿ ಆರಣ್ಯಕ ವಿಧಿಯಂತೆ ಎಲ್ಲವನ್ನೂ ರಾಜನಿಗೆ ನಿವೇದಿಸಿದನು.

12126025a ತತಸ್ತೇ ಮುನಯಃ ಸರ್ವೇ ಪರಿವಾರ್ಯ ನರರ್ಷಭಮ್|

12126025c ಉಪಾವಿಶನ್ಪುರಸ್ಕೃತ್ಯ ಸಪ್ತರ್ಷಯ ಇವ ಧ್ರುವಮ್||

ಆಗ ಮುನಿಗಳೆಲ್ಲರೂ ಆ ನರರ್ಷಭನನ್ನು ಸಪ್ತರ್ಷಿಗಳು ಧ್ರುವನನ್ನು ಹೇಗೋ ಹಾಗೆ ಸುತ್ತುವರೆದು ಕುಳಿತುಕೊಂಡರು.

12126026a ಅಪೃಚ್ಚಂಶ್ಚೈವ ತೇ ತತ್ರ ರಾಜಾನಮಪರಾಜಿತಮ್|

12126026c ಪ್ರಯೋಜನಮಿದಂ ಸರ್ವಮಾಶ್ರಮಸ್ಯ ಪ್ರವೇಶನಮ್||

ಆ ರಾಜ ಅಪರಜಿತನನ್ನು ಅವರಿ ಕೇಳಿದರು: “ಈ ಆಶ್ರಮಕ್ಕೆ ಪ್ರವೇಶಿಸಿದುದರ ಕಾರಣವೇನು?”

12126027 ರಾಜೋವಾಚ|

12126027a ವೀರದ್ಯುಮ್ನ ಇತಿ ಖ್ಯಾತೋ ರಾಜಾಹಂ ದಿಕ್ಷು ವಿಶ್ರುತಃ|

12126027c ಭೂರಿದ್ಯುಮ್ನಂ ಸುತಂ ನಷ್ಟಮನ್ವೇಷ್ಟುಂ ವನಮಾಗತಃ||

ರಾಜನು ಹೇಳಿದನು: “ದಿಕ್ಕುಗಳಲ್ಲಿ ವಿಶ್ರುತನಾದ ವೀರದ್ಯುಮ್ನ ಎಂಬ ಖ್ಯಾತ ರಾಜನು ನಾನು. ಕಳೆದುಹೋದ ನನ್ನ ಸುತ ಭೂರಿದ್ಯುಮ್ನನನ್ನು ಹುಡುಕಿಕೊಂಡು ವನಕ್ಕೆ ಬಂದಿದ್ದೇನೆ.

12126028a ಏಕಪುತ್ರಃ ಸ ವಿಪ್ರಾಗ್ರ್ಯ ಬಾಲ ಏವ ಚ ಸೋಽನಘ|

12126028c ನ ದೃಶ್ಯತೇ ವನೇ ಚಾಸ್ಮಿಂಸ್ತಮನ್ವೇಷ್ಟುಂ ಚರಾಮ್ಯಹಮ್||

ವಿಪ್ರ್ಯಾಗ್ರರೇ! ಅವನು ನನ್ನ ಓರ್ವನೇ ಪುತ್ರನು. ಅನಘನೂ ಕೂಡ. ಈ ವನದಲ್ಲಿ ಅವನು ನನಗೆ ಕಾಣಲಿಲ್ಲ. ಆವನನ್ನು ಹುಡುಕುತ್ತಲೇ ನಾನು ಸಂಚರಿಸುತ್ತಿದ್ದೇನೆ.””

12126029 ಋಷಭ ಉವಾಚ|

12126029a ಏವಮುಕ್ತೇ ತು ವಚನೇ ರಾಜ್ಞಾ ಮುನಿರಧೋಮುಖಃ|

12126029c ತೂಷ್ಣೀಮೇವಾಭವತ್ತತ್ರ ನ ಚ ಪ್ರತ್ಯುಕ್ತವಾನ್ನೃಪಮ್||

ಋಷಭನು ಹೇಳಿದನು: “ರಾಜನು ಹೀಗೆ ಹೇಳಲು ಮುನಿಯು ಅಧೋಮುಖನಾಗಿ ಕುಳಿತನು. ಬಹಳ ಹೊತ್ತು ಸುಮ್ಮನೇ ಇದ್ದನು. ರಾಜನಿಗೆ ಏನನ್ನೂ ಹೇಳಲಿಲ್ಲ.

12126030a ಸ ಹಿ ತೇನ ಪುರಾ ವಿಪ್ರೋ ರಾಜ್ಞಾ ನಾತ್ಯರ್ಥಮಾನಿತಃ|

12126030c ಆಶಾಕೃಶಂ ಚ ರಾಜೇಂದ್ರ ತಪೋ ದೀರ್ಘಂ ಸಮಾಸ್ಥಿತಃ||

ಹಿಂದ ಅದೇ ರಾಜನೇ ಆ ವಿಪ್ರನಿಗೆ ವಿಶೇಷ ಮರ್ಯಾದೆಯನ್ನು ತೋರಿಸಿರಲಿಲ್ಲ. ರಾಜೇಂದ್ರ! ಅವನಿಂದ ಆಶಾಕೃಶನಾಗಿದ್ದ ಅವನು ದೀರ್ಘ ತಪಸ್ಸಿನಲ್ಲಿ ತೊಡಗಿದ್ದನು.

12126031a ಪ್ರತಿಗ್ರಹಮಹಂ ರಾಜ್ಞಾಂ ನ ಕರಿಷ್ಯೇ ಕಥಂ ಚನ|

12126031c ಅನ್ಯೇಷಾಂ ಚೈವ ವರ್ಣಾನಾಮಿತಿ ಕೃತ್ವಾ ಧಿಯಂ ತದಾ||

ಆಗ ಅವನು ಯಾವ ರಾಜರಿಂದಲೂ ಅನ್ಯ ವರ್ಣದವರಿಂದಲೂ ಯಾವ ದಾನವನ್ನೂ ಸ್ವೀಕರಿಸುವುದಿಲ್ಲ ಎಂದು ನಿಶ್ಚಯಿಸಿದ್ದನು.

12126032a ಆಶಾ ಹಿ ಪುರುಷಂ ಬಾಲಂ ಲಾಲಾಪಯತಿ ತಸ್ಥುಷೀ|

12126032c ತಾಮಹಂ ವ್ಯಪನೇಷ್ಯಾಮಿ ಇತಿ ಕೃತ್ವಾ ವ್ಯವಸ್ಥಿತಃ||

ಬಹಳಕಾಲದವರೆಗೆ ಇರುವ ಆಶೆಯೇ ಪುರುಷನು ಮೂಢನಂತೆ ಲಾಪಾಪಿಸುವಂತೆ ಮಾಡುತ್ತದೆ. ನಾನು ಅದನ್ನು ಕಿತ್ತುಹಾಕುತ್ತೇನೆ ಎಂದು ಅವನು ತಪೋನಿಷ್ಠನಾಗಿದ್ದನು.

12126033 ರಾಜೋವಾಚ|

12126033a ಆಶಾಯಾಃ ಕಿಂ ಕೃಶತ್ವಂ ಚ ಕಿಂ ಚೇಹ ಭುವಿ ದುರ್ಲಭಮ್|

12126033c ಬ್ರವೀತು ಭಗವಾನೇತತ್ತ್ವಂ ಹಿ ಧರ್ಮಾರ್ಥದರ್ಶಿವಾನ್||

ರಾಜನು ಹೇಳಿದನು: “ಭಗವನ್! ನೀನು ಧರ್ಮಾರ್ಥದರ್ಶಿಯಾಗಿರುವೆ. ಆಶೆಗಿಂತಲೂ ಬಲವಾದ ದುರ್ಬಲತೆಯೂ ಯಾವುದಿದೆ? ಈ ಭುವಿಯಲ್ಲಿ ದುರ್ಲಭವಾದುದು ಯಾವುದು? ಇದರ ಕುರಿತು ತತ್ತ್ವತಃ ನನಗೆ ಹೇಳಬೇಕು.””

12126034 ಋಷಭ ಉವಾಚ|

12126034a ತತಃ ಸಂಸ್ಮೃತ್ಯ ತತ್ಸರ್ವಂ ಸ್ಮಾರಯಿಷ್ಯನ್ನಿವಾಬ್ರವೀತ್|

12126034c ರಾಜಾನಂ ಭಗವಾನ್ವಿಪ್ರಸ್ತತಃ ಕೃಶತನುಸ್ತನುಃ||

ಋಷಭನು ಹೇಳಿದನು: “ಆಗ ಕೃಶಶರೀರೀ ಭಗವಾನ್ ತನುವು ಹಿಂದೆ ನಡೆದುದೆಲ್ಲವನ್ನು ಸ್ಮರಿಸಿಕೊಳ್ಳುತ್ತಾ ಮತ್ತು ರಾಜನಿಗೂ ಸ್ಮರಣೆಗೆ ತಂದುಕೊಡುತ್ತಾ ಹೇಳಿದನು:

12126035a ಕೃಶತ್ವೇ ನ ಸಮಂ ರಾಜನ್ನಾಶಾಯಾ ವಿದ್ಯತೇ ನೃಪ|

12126035c ತಸ್ಯಾ ವೈ ದುರ್ಲಭತ್ವಾತ್ತು ಪ್ರಾರ್ಥಿತಾಃ ಪಾರ್ಥಿವಾ ಮಯಾ||

“ರಾಜನ್! ನೃಪ! ಆಶೆಗೆ ಸಮಾನ ದುರ್ಬಲತೆಯು ಬೇರೆ ಯಾವುದೂ ಇಲ್ಲ. ಪಾರ್ಥಿವ!  ನನ್ನ ಆಶೆಯು ದುರ್ಲಭವಾಗಿದ್ದುದರಿಂದಲೇ ನಾನು ನಿನ್ನನ್ನು ಪ್ರಾರ್ಥಿಸಿದ್ದೆನು.”

12126036 ರಾಜೋವಾಚ|

12126036a ಕೃಶಾಕೃಶೇ ಮಯಾ ಬ್ರಹ್ಮನ್ ಗೃಹೀತೇ ವಚನಾತ್ತವ|

12126036c ದುರ್ಲಭತ್ವಂ ಚ ತಸ್ಯೈವ ವೇದವಾಕ್ಯಮಿವ ದ್ವಿಜ||

ರಾಜನು ಹೇಳಿದನು: “ಬ್ರಹ್ಮನ್! ದ್ವಿಜ! ನಿನ್ನ ಮಾತಿನಿಂದ ಆಶೆಯಿಂದ ಬಂಧಿಸಲ್ಪಟ್ಟಿರುವವರು ದುರ್ಬಲರು ಎಂದು ತಿಳಿದುಕೊಂಡಿದ್ದೇನೆ. ಯಾವುದರ ಕುರಿತು ಆಶೆಯಿರುವುದೋ ಅದೇ ದುರ್ಲಭವು. ಇದನ್ನೇ ವೇದವಾಕ್ಯವೆಂದು ತಿಳಿಯುತ್ತೇನೆ.

12126037a ಸಂಶಯಸ್ತು ಮಹಾಪ್ರಾಜ್ಞ ಸಂಜಾತೋ ಹೃದಯೇ ಮಮ|

12126037c ತನ್ಮೇ ಸತ್ತಮ ತತ್ತ್ವೇನ ವಕ್ತುಮರ್ಹಸಿ ಪೃಚ್ಚತಃ||

ಮಹಪ್ರಾಜ್ಞ! ನನ್ನ ಹೃದಯದಲ್ಲಿ ಸಂಶಯವೊಂದು ಹುಟ್ಟಿಕೊಂಡಿದೆ. ಸತ್ತಮ! ಕೇಳುತ್ತರುವ ನನಗೆ ತತ್ತ್ವತಃ ಅದನ್ನು ಹೇಳಬೇಕು.

12126038a ತ್ವತ್ತಃ ಕೃಶತರಂ ಕಿಂ ನು ಬ್ರವೀತು ಭಗವಾನಿದಮ್|

12126038c ಯದಿ ಗುಹ್ಯಂ ನ ತೇ ವಿಪ್ರ ಲೋಕೇಽಸ್ಮಿನ್ಕಿಂ ನು ದುರ್ಲಭಮ್||

ಬಗವನ್! ನಿನಗಿಂತಲೂ ಕೃಶವಾಗಿರುವುದು ಏನಿದೆ? ವಿಪ್ರ! ಇದು ರಹಸ್ಯವಾಗಿಲ್ಲದಿದ್ದರೆ – ಈ ಲೋಕದಲ್ಲಿ ದುರ್ಲಭವಾದುದು ಏನಿದೆ?”

12126039 ಕೃಶತನುರುವಾಚ|

12126039a ದುರ್ಲಭೋಽಪ್ಯಥ ವಾ ನಾಸ್ತಿ ಯೋಽರ್ಥೀ ಧೃತಿಮಿವಾಪ್ನುಯಾತ್|

12126039c ಸುದುರ್ಲಭತರಸ್ತಾತ ಯೋಽರ್ಥಿನಂ ನಾವಮನ್ಯತೇ||

ಕೃಶತನುವು ಹೇಳಿದನು: “ಅಯ್ಯಾ! ತಾನು ಅತಿಯಾಗಿ ಅಪೇಕ್ಷಿಸಿದುದನ್ನು ಯಾಚಿಸದೇ ಇರುವ ಧೈರ್ಯವಂತನು ದುರ್ಲಭ ಅಥವಾ ಅಂತವನು ಇಲ್ಲವೇ ಇಲ್ಲ ಎಂದು ಹೇಳಬಹುದು.

12126040a ಸಂಶ್ರುತ್ಯ ನೋಪಕ್ರಿಯತೇ ಪರಂ ಶಕ್ತ್ಯಾ ಯಥಾರ್ಹತಃ|

12126040c ಸಕ್ತಾ ಯಾ ಸರ್ವಭೂತೇಷು ಸಾಶಾ ಕೃಶತರೀ ಮಯಾ||

ಯಾಚಕನನ್ನು ಕೇಳಿ ಅವನಲ್ಲಿ ಆಶೆಯನ್ನು ಹುಟ್ಟಿಸಿ ಪರಮ ಶಕ್ತಿಯನ್ನುಪಯೋಗಿಸಿ ಯಥಾರ್ಹವಾಗಿ ಯಾಚಿಸಿದುದನ್ನು ಕೊಡದೇ ಇದ್ದಾಗ ಸರ್ವಭೂತಗಳಲ್ಲಿ ಯಾವ ಆಶೆಯರುವುದೋ ಅದು ನನಗಿಂತಲೂ ಕೃಶವಾಗಿರುತ್ತದೆ.

[1]12126041a ಏಕಪುತ್ರಃ ಪಿತಾ ಪುತ್ರೇ ನಷ್ಟೇ ವಾ ಪ್ರೋಷಿತೇ ತಥಾ|

12126041c ಪ್ರವೃತ್ತಿಂ ಯೋ ನ ಜಾನಾತಿ ಸಾಶಾ ಕೃಶತರೀ ಮಯಾ||

ಒಬ್ಬನೇ ಪುತ್ರನಿರುವ ಪಿತನು ತನ್ನ ಪುತ್ರನು ನಷ್ಟವಾದರೆ ಅಥವಾ ದೂರಹೋದವನ ಕುರಿತಾದ ಯಾವ ಸಮಾಚಾರವೂ ದೊರೆಯದೇ ಇದ್ದಾಗ ಅವನನ್ನು ಕಾಣಬೇಕೆಂಬ ಯಾವ ಆಶೆಯು ತಂದೆಯಲ್ಲಿ ಉಂಟಾಗುತ್ತದೆಯೋ ಅದು ನನಗಿಂತಲೂ ಕೃಶವಾಗಿರುತ್ತದೆ.

12126042a ಪ್ರಸವೇ ಚೈವ ನಾರೀಣಾಂ ವೃದ್ಧಾನಾಂ ಪುತ್ರಕಾರಿತಾ|

12126042c ತಥಾ ನರೇಂದ್ರ ಧನಿನಾಮಾಶಾ ಕೃಶತರೀ ಮಯಾ[2]||

ಮಕ್ಕಳಿಲ್ಲದ ಸ್ತ್ರೀಯರಿಗೆ ವೃದ್ಧಾಪ್ಯದಲ್ಲಾದರೂ ಮಕ್ಕಳನ್ನು ಹಡೆಯಬೇಕೆಂಬ ಯಾವ ಆಶೆಯಿರುವುದೋ, ಧನಿಕರಿಗೆ ಇನ್ನೂ ಹೆಚ್ಚು ಧನವನ್ನು ಕೂಡಿದಬೇಕೆಂಬ ಯಾವ ಆಶೆಯಿರುವುದೋ ಅದು ನನಗಿಂತಲೂ ಕೃಶವಾಗಿರುತ್ತದೆ.””

12126043 ಋಷಭ ಉವಾಚ|

12126043a ಏತಚ್ಚ್ರುತ್ವಾ ತತೋ ರಾಜನ್ಸ ರಾಜಾ ಸಾವರೋಧನಃ|

12126043c ಸಂಸ್ಪೃಶ್ಯ ಪಾದೌ ಶಿರಸಾ ನಿಪಪಾತ ದ್ವಿಜರ್ಷಭೇ||

ಋಷಭನು ಹೇಳಿದನು: “ರಾಜನ್! ಇದನ್ನು ಕೇಳಿ ರಾಜನು ತನ ರಾಣಿಯೊಡನೆ ದ್ವಿಜರ್ಷಭನ ಪಾದಗಳನ್ನು ಮುಟ್ಟಿ ಶಿರಸಾ ಅಡ್ಡಬಿದ್ದನು.”

12126044 ರಾಜೋವಾಚ|

12126044a ಪ್ರಸಾದಯೇ ತ್ವಾ ಭಗವನ್ ಪುತ್ರೇಣೇಚ್ಚಾಮಿ ಸಂಗತಿಮ್[3]|

[4]12126044c ವೃಣೀಷ್ವ ಚ ವರಂ ವಿಪ್ರ ಯಮಿಚ್ಚಸಿ ಯಥಾವಿಧಿ||

ರಾಜನು ಹೇಳಿದನು: “ಭಗವನ್! ನೀನು ಪ್ರಸನ್ನನಾಗಬೇಕು. ಪುತ್ರನೊಂದಿಗೆ ಸಮಾಗಮವನ್ನು ಬಯಸುತ್ತೇನೆ. ವಿಪ್ರ! ಬಯಸಿದ ವರವನ್ನು ಯಥಾವಿಧಿಯಾಗಿ ಕೇಳಿಕೋ!””

12126045 ಋಷಭ ಉವಾಚ|

12126045a ಅಬ್ರವೀಚ್ಚ ಹಿ ತಂ ವಾಕ್ಯಂ ರಾಜಾ ರಾಜೀವಲೋಚನಃ|

12126045c ಸತ್ಯಮೇತದ್ಯಥಾ ವಿಪ್ರ ತ್ವಯೋಕ್ತಂ ನಾಸ್ತ್ಯತೋ ಮೃಷಾ||

ಋಷಭನು ಹೇಳಿದನು: “ಅದನ್ನು ಹೇಳಿ ರಾಜೀವಲೋಚನ ರಾಜನು ಈ ಮಾತನ್ನೂ ಹೇಳಿದನು: “ವಿಪ್ರ! ನೀನು ಹೇಳಿದುದೆಲ್ಲವೂ ಸತ್ಯವದುದು. ಅದರಲ್ಲಿ ಸುಳ್ಳೆಂಬುದು ಯಾವುದೂ ಇಲ್ಲ.”

12126046a ತತಃ ಪ್ರಹಸ್ಯ ಭಗವಾಂಸ್ತನುರ್ಧರ್ಮಭೃತಾಂ ವರಃ|

12126046c ಪುತ್ರಮಸ್ಯಾನಯತ್ ಕ್ಷಿಪ್ರಂ ತಪಸಾ ಚ ಶ್ರುತೇನ ಚ||

ಆಗ ಆ ಧರ್ಮಭೃತರಲ್ಲಿ ಶ್ರೇಷ್ಠ ಭಗವಾನನು ತನ್ನ ತಪಸ್ಸು ಮತ್ತು ವಿದ್ಯೆಯ ಮೂಲಕ ಕ್ಷಿಪ್ರವಾಗಿ ಅವನ ಪುತ್ರನಲ್ಲು ಅಲ್ಲಿಗೇ ಬರುವಂತೆ ಮಾಡಿದನು.

12126047a ತಂ ಸಮಾನಾಯ್ಯ ಪುತ್ರಂ ತು ತದೋಪಾಲಭ್ಯ ಪಾರ್ಥಿವಮ್|

12126047c ಆತ್ಮಾನಂ ದರ್ಶಯಾಮಾಸ ಧರ್ಮಂ ಧರ್ಮಭೃತಾಂ ವರಃ||

ಆ ಪುತ್ರನನ್ನು ಅಲ್ಲಿಗೇ ಕರೆಯಿಸಿಕೊಂಡು ಅವನು ರಾಜನಿಗೆ ದೊರಕುವಂತೆ ಮಾಡಿ ಆ ಧರ್ಮಭೃತರಲ್ಲಿ ಶ್ರೇಷ್ಠನು ತನ್ನ ಧರ್ಮಸ್ವರೂಪವನ್ನು ತೋರಿಸಿಕೊಟ್ಟನು.

12126048a ಸಂದರ್ಶಯಿತ್ವಾ ಚಾತ್ಮಾನಂ ದಿವ್ಯಮದ್ಭುತದರ್ಶನಮ್|

12126048c ವಿಪಾಪ್ಮಾ ವಿಗತಕ್ರೋಧಶ್ಚಚಾರ ವನಮಂತಿಕಾತ್||

ತನ್ನ ದಿವ್ಯ ಅದ್ಭುತದರ್ಶನವನ್ನು ತೋರಿಸಿ ಆ ಪಾಪರಹಿತ ವಿಗತಕ್ರೋಧನು ವನದೆಡೆಗೆ ಹೊರಟು ಹೋದನು.

12126049a ಏತದ್ದೃಷ್ಟಂ ಮಯಾ ರಾಜಂಸ್ತತಶ್ಚ ವಚನಂ ಶ್ರುತಮ್|

12126049c ಆಶಾಮಪನಯಸ್ವಾಶು ತತಃ ಕೃಶತರೀಮಿಮಾಮ್||

ರಾಜನ್! ಇದನ್ನು ನಾನು ನೋಡಿದೆ. ಅವನ ಮಾತುಗಳನ್ನೂ ನಾನು ಕೇಳಿದೆ. ನೀನೂ ಕೂಡ ಶರೀರವನ್ನು ಕೃಶಗೊಳಿಸುವ ಆಶೆಯನ್ನು ತೊರೆ.””

12126050 ಭೀಷ್ಮ ಉವಾಚ|

12126050a ಸ ತತ್ರೋಕ್ತೋ ಮಹಾರಾಜ ಋಷಭೇಣ ಮಹಾತ್ಮನಾ|

12126050c ಸುಮಿತ್ರೋಽಪನಯತ್ ಕ್ಷಿಪ್ರಮಾಶಾಂ ಕೃಶತರೀಂ ತದಾ||

ಭೀಷ್ಮನು ಹೇಳಿದನು: “ಮಹಾರಾಜ! ಮಹಾತ್ಮ ಋಷಭನು ಹೀಹೆ ಹೇಳಲು ಸುಮಿತ್ರನು ಬೇಗನೇ ಅತ್ಯಂತ ದುರ್ಬಲವಾದ ಆಶೆಯನ್ನು ತೊರೆದನು.

12126051a ಏವಂ ತ್ವಮಪಿ ಕೌಂತೇಯ ಶ್ರುತ್ವಾ ವಾಣೀಮಿಮಾಂ ಮಮ|

12126051c ಸ್ಥಿರೋ ಭವ ಯಥಾ ರಾಜನ್ ಹಿಮವಾನಚಲೋತ್ತಮಃ||

ಕೌಂತೇಯ! ಈ ರೀತಿ ನೀನೂ ಕೂಡ ನನ್ನ ಈ ಮಾತನ್ನು ಕೇಳಿ ಅಚಲೋತ್ತಮ ಹಿಮವಾನನಂತೆ ಸ್ಥಿರನಾಗು.

12126052a ತ್ವಂ ಹಿ ದ್ರಷ್ಟಾ ಚ ಶ್ರೋತಾ ಚ ಕೃಚ್ಚ್ರೇಷ್ವರ್ಥಕೃತೇಷ್ವಿಹ|

12126052c ಶ್ರುತ್ವಾ ಮಮ ಮಹಾರಾಜ ನ ಸಂತಪ್ತುಮಿಹಾರ್ಹಸಿ||

ಮಹಾರಾಜ! ಇಂಥಹ ಕಷ್ಟಪರಿಸ್ಥಿಯಿಯಲ್ಲಿಯೂ ನೀನು ಸರಿಯಾದ ಪ್ರಶ್ನೆಗಳನ್ನೇ ಕೇಳುತ್ತಿರುವೆ. ನನ್ನನ್ನು ಕೇಳಿಯೂ ಕೂಡ ನೀನು ಸಂಪಪಿಸಬಾರದು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಋಷಭಗೀತಾಸು ಷಡ್ವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಋಷಭಗೀತಾ ಎನ್ನುವ ನೂರಾಇಪ್ಪತ್ತಾರನೇ ಅಧ್ಯಾಯವು.

Single Orange Gerbera Flower Isolated On White Background Stock Photo,  Picture And Royalty Free Image. Image 20695778.

[1] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕವಿದೆ: ಕೃತಘ್ನೇಷು ಚ ಯಾ ಸಕ್ತಾ ನೃಶಂಸೇಷ್ವಲಸೇಷು ಚ| ಅಪಕಾರಿಷು ಚಾಸಕ್ತಾ ಸಾಶಾ ಕೃತಸ್ತರೀ ಮಯಾ||

[2] ಭಾರತ ದರ್ಶನದಲ್ಲಿ ಇದರ ನಂತರ ಈ ಒಂದು ಶ್ಲೋಕವಿದೆ: ಪ್ರದಾನಾಕಾಂಕ್ಷಿಣೀನಾಂ ಚ ಕನ್ಯಾಯಾಂ ವಯಸಿ ಸ್ಥಿತೇ| ಶ್ರುತ್ವಾ ಕಥಾಸ್ತಥಾಯುಕ್ತಾಃ ಸಾಶಾ ಕೃಶತರೀ ಮಯಾ||

[3] ಸಂಗತಿಮ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಭಾರತ ದರ್ಶನದಲ್ಲಿ ಈ ಶ್ಲೋಕಕ್ಕೆ ಬದಲಾಗಿ ಇನ್ನೊಂದು ಶ್ಲೋಕವಿದೆ: ಯದೇತದುಕ್ತಂ ಭವತಾ ಸಂಪ್ರತಿ ದ್ವಿಜಸತ್ತಮ| ಸತ್ಯಮೇತನ್ನ ಸಂದೇಹೋ ಯದೇತದ್ವ್ಯಾಹೃತಂ ಮಯಾ||

Comments are closed.