Shanti Parva: Chapter 122

ಶಾಂತಿ ಪರ್ವ: ರಾಜಧರ್ಮ ಪರ್ವ

೧೨೨

ವಸುಹೋಮ-ಮಾಂಧಾತೃ ಸಂವಾದ

(ದಂಡೋತ್ಪತ್ಯುಪಾಖ್ಯಾನ)

12122001 ಭೀಷ್ಮ ಉವಾಚ|

12122001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12122001c ಅಂಗೇಷು ರಾಜಾ ದ್ಯುತಿಮಾನ್ವಸುಹೋಮ ಇತಿ ಶ್ರುತಃ||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವೊಂದನ್ನು ಉದಾಹರಿಸುತ್ತಾರೆ. ಅಂಗದೇಶದ ರಾಜರಲ್ಲಿ ದ್ಯುತಿಮಾನ್ ವಸುಹೋಮ ಎನ್ನುವವನು ಖ್ಯಾತನಾಗಿದ್ದನು.

12122002a ಸ ರಾಜಾ ಧರ್ಮನಿತ್ಯಃ ಸನ್ಸಹ ಪತ್ನ್ಯಾ ಮಹಾತಪಾಃ|

12122002c ಮುಂಜಪೃಷ್ಠಂ ಜಗಾಮಾಥ ದೇವರ್ಷಿಗಣಪೂಜಿತಮ್||

ಮಹಾತಪಸ್ವಿಯೂ ಧರ್ಮನಿತ್ಯನೂ ಆಗಿದ್ದ ಆ ರಾಜನು ಪತ್ನಿಯೊಡನೆ ದೇವರ್ಷಿಗಣಪೂಜಿತವಾದ ಮುಂಜಪೃಷ್ಠಕ್ಕೆ ಹೋದನು.

12122003a ತತ್ರ ಶೃಂಗೇ ಹಿಮವತೋ ಮೇರೌ ಕನಕಪರ್ವತೇ|

12122003c ಯತ್ರ ಮುಂಜವಟೇ ರಾಮೋ ಜಟಾಹರಣಮಾದಿಶತ್||

ಕನಕಪರ್ವತ ಮೇರುವಿನ ಸಮೀಪದ ಹಿಮಾಯಲಯ ಶಿಖರದ ಮೇಲಿದ್ದ ಆ ಮುಂಚವಟಿಯಲ್ಲಿಯೇ ರಾಮನು[1] ತನ್ನ ಜಟೆಯನ್ನು ತೆಗೆಯಲು ಆದೇಶವನ್ನಿತ್ತಿದ್ದನು.

12122004a ತದಾಪ್ರಭೃತಿ ರಾಜೇಂದ್ರ ಋಷಿಭಿಃ ಸಂಶಿತವ್ರತೈಃ|

12122004c ಮುಂಜಪೃಷ್ಠ ಇತಿ ಪ್ರೋಕ್ತಃ ಸ ದೇಶೋ ರುದ್ರಸೇವಿತಃ||

ರಾಜೇಂದ್ರ! ಅಂದಿನಿಂದ ಕಠೋರವ್ರತನಿಷ್ಠ ಋಷಿಗಳು ರುದ್ರಸೇವಿತವಾದ ಆ ಪ್ರದೇಶವನ್ನು ಮುಂಜಪೃಷ್ಠ ಎಂದೇ ಕರೆದರು.

12122005a ಸ ತತ್ರ ಬಹುಭಿರ್ಯುಕ್ತಃ ಸದಾ ಶ್ರುತಿಮಯೈರ್ಗುಣೈಃ|

12122005c ಬ್ರಾಹ್ಮಣಾನಾಮನುಮತೋ ದೇವರ್ಷಿಸದೃಶೋಽಭವತ್||

ಅವನು ಅಲ್ಲಿ ಸದಾ ಅನೇಕ ಶ್ರುತಿಮಯಗುಣಗಳಿಂದ ಯುಕ್ತನಾಗಿದ್ದ ಅವನನ್ನು ಬ್ರಾಹ್ಮಣರೂ ಗೌರವಿಸತೊಡಗಲು ಅವನು ದೇವರ್ಷಿಸದೃಶನಾದನು.

12122006a ತಂ ಕದಾ ಚಿದದೀನಾತ್ಮಾ ಸಖಾ ಶಕ್ರಸ್ಯ ಮಾನಿತಃ|

12122006c ಅಭ್ಯಾಗಚ್ಚನ್ಮಹೀಪಾಲೋ ಮಾಂಧಾತಾ ಶತ್ರುಕರ್ಶನಃ||

ಒಮ್ಮೆ ಅದೀನಾತ್ಮಾ ಶಕ್ರನ ಸಖ ಮತ್ತು ಸನ್ಮಾನಿತ ಮಹೀಪಾಲ ಶತ್ರುಕರ್ಶನ ಮಾಂಧಾತನು ಅಲ್ಲಿಗೆ ಆಗಮಿಸಿದನು.

12122007a ಸೋಽಭಿಸೃತ್ಯ ತು ಮಾಂಧಾತಾ ವಸುಹೋಮಂ ನರಾಧಿಪಮ್|

12122007c ದೃಷ್ಟ್ವಾ ಪ್ರಕೃಷ್ಟಂ ತಪಸಾ ವಿನಯೇನಾಭ್ಯತಿಷ್ಠತ||

ಮಾಂಧಾತನಾದರೋ ನರಾಧಿಪ ವಸುಹೋಮನ ಬಳಿಸಾರಿ ಅವನ ಕಷ್ಟಕರ ತಪಸ್ಸನ್ನು ನೋಡಿ ವಿನೀತನಾಗಿ ನಿಂತುಕೊಂಡನು.

12122008a ವಸುಹೋಮೋಽಪಿ ರಾಜ್ಞೋ ವೈ ಗಾಮರ್ಘ್ಯಂ ಚ ನ್ಯವೇದಯತ್|

12122008c ಅಷ್ಟಾಂಗಸ್ಯ ಚ ರಾಜ್ಯಸ್ಯ ಪಪ್ರಚ್ಚ ಕುಶಲಂ ತದಾ||

ವಸುಹೋಮನೂ ಕೂಡ ಗೋವು-ಅರ್ಘ್ಯಗಳನ್ನು ರಾಜನಿಗೆ ನಿವೇದಿಸಿ ರಾಜ್ಯದ ಅಷ್ಟಾಂಗಗಳ ಕುಶಲತೆಯ ಕುರಿತು ಪ್ರಶ್ನಿಸಿದನು.

12122009a ಸದ್ಭಿರಾಚರಿತಂ ಪೂರ್ವಂ ಯಥಾವದನುಯಾಯಿನಮ್|

12122009c ಅಪೃಚ್ಚದ್ವಸುಹೋಮಸ್ತಂ ರಾಜನ್ ಕಿಂ ಕರವಾಣಿ ತೇ||

ಹಿಂದೆ ಸಾಧು-ಸತ್ಪುರುಷರು ಯಾವ ಧರ್ಮಮಾರ್ಗವನ್ನು ಅನುಸರಿಸಿ ನಡೆಯುತ್ತಿದ್ದರೋ ಅದೇ ಮಾರ್ಗದಲ್ಲಿ ಯಥಾವತ್ತಾಗಿ ನಡೆದುಕೊಳ್ಳುತ್ತಿದ್ದ ಮಾಂಧಾತನನ್ನು ವಸುಹೋಮನು ಪ್ರಶ್ನಿಸಿದನು: “ರಾಜನ್! ನಿನಗೆ ನಾನು ಯಾವ ಕಾರ್ಯವನ್ನು ಮಾಡಿಕೊಡಲಿ?”

12122010a ಸೋಽಬ್ರವೀತ್ಪರಮಪ್ರೀತೋ ಮಾಂಧಾತಾ ರಾಜಸತ್ತಮಮ್|

12122010c ವಸುಹೋಮಂ ಮಹಾಪ್ರಾಜ್ಞಮಾಸೀನಂ ಕುರುನಂದನ||

ಕುರುನಂದನ! ಪರಮಪ್ರೀತನಾದ ಮಾಂಧಾತನು ಕುಳಿತಿದ್ದ ಮಹಾಪ್ರಾಜ್ಞ ರಾಜಸತ್ತಮ ಮಸುಹೋಮನಿಗೆ ಹೇಳಿದನು:

12122011a ಬೃಹಸ್ಪತೇರ್ಮತಂ ರಾಜನ್ನಧೀತಂ ಸಕಲಂ ತ್ವಯಾ|

12122011c ತಥೈವೌಶನಸಂ ಶಾಸ್ತ್ರಂ ವಿಜ್ಞಾತಂ ತೇ ನರಾಧಿಪ||

“ರಾಜನ್! ನೀನು ಬೃಹಸ್ಪತಿಯ ಮತ ಸಕಲವನ್ನೂ ಅಧ್ಯಯನಮಾಡಿರುವೆ. ಹಾಗೆಯೇ ಔಶನಸ ಶುಕ್ರಾಚಾರ್ಯನ ಶಾಸ್ತ್ರವೂ ನಿನಗೆ ತಿಳಿದಿದೆ.

12122012a ತದಹಂ ಶ್ರೋತುಮಿಚ್ಚಾಮಿ ದಂಡ ಉತ್ಪದ್ಯತೇ ಕಥಮ್|

12122012c ಕಿಂ ವಾಪಿ ಪೂರ್ವಂ ಜಾಗರ್ತಿ ಕಿಂ ವಾ ಪರಮಮುಚ್ಯತೇ||

ಆದುದರಿಂದ ನಾನು ದಂಡದ ಉತ್ಪತ್ತಿಯು ಹೇಗಾಯಿತೆಂದು ಕೇಳಬಯಸುತ್ತೇನೆ. ಅದರ ಮೊದಲು ಯಾವುದು ಪ್ರಪಂಚದ ರಕ್ಷಣೆಗೆ ಜಾಗೃತವಾಗಿತ್ತು? ಅದನ್ನು ಪರಮ ಶ್ರೇಷ್ಠವೆಂದು ಏಕೆ ಹೇಳುತ್ತಾರೆ?

12122013a ಕಥಂ ಕ್ಷತ್ರಿಯಸಂಸ್ಥಶ್ಚ ದಂಡಃ ಸಂಪ್ರತ್ಯವಸ್ಥಿತಃ|

12122013c ಬ್ರೂಹಿ ಮೇ ಸುಮಹಾಪ್ರಾಜ್ಞ ದದಾಮ್ಯಾಚಾರ್ಯವೇತನಮ್||

ಆ ದಂಡವು ಕ್ಷತ್ರಿಯನ ಕೈಗೆ ಬಂದುದು ಹೇಗೆ? ಮಹಾಪ್ರಾಜ್ಞ! ನನಗೆ ಇದನ್ನು ಹೇಳು. ನಾನು ನಿನಗೆ ಆಚಾರ್ಯವೇತನವನ್ನು ನೀಡುತ್ತೇನೆ.”

12122014 ವಸುಹೋಮ ಉವಾಚ|

12122014a ಶೃಣು ರಾಜನ್ಯಥಾ ದಂಡಃ ಸಂಭೂತೋ ಲೋಕಸಂಗ್ರಹಃ|

12122014c ಪ್ರಜಾವಿನಯರಕ್ಷಾರ್ಥಂ ಧರ್ಮಸ್ಯಾತ್ಮಾ ಸನಾತನಃ||

ವಸುಹೋಮನು ಹೇಳಿದನು: “ರಾಜನ್! ಪ್ರಜಾವಿನಯರಕ್ಷಣೆಗಾಗಿ ಲೋಕಸಂಗ್ರಹಕಾರಕ ಸನಾತನ ಧರ್ಮದ ಆತ್ಮವಾಗಿರುವ ಈ ದಂಡವು ಹೇಗೆ ಹುಟ್ಟಿತೆನ್ನುವುದನ್ನು ಕೇಳು.

12122015a ಬ್ರಹ್ಮಾ ಯಿಯಕ್ಷುರ್ಭಗವಾನ್ಸರ್ವಲೋಕಪಿತಾಮಹಃ|

12122015c ಋತ್ವಿಜಂ ನಾತ್ಮನಾ ತುಲ್ಯಂ ದದರ್ಶೇತಿ ಹಿ ನಃ ಶ್ರುತಮ್||

ಸರ್ವಲೋಕಪಿತಾಮಹ ಭಗವಾನ್ ಬ್ರಹ್ಮನು ಯಜ್ಞಮಾಡಲು ಬಯಸಿದಾಗ ತನ್ನ ಸಮನಾನಾದ ಋತ್ವಿಜನು ಅವನಿಗೆ ಕಾಣಸಿಗಲಿಲ್ಲ ಎಂದು ನಾವು ಕೇಳಿದ್ದೇವೆ.

12122016a ಸ ಗರ್ಭಂ ಶಿರಸಾ ದೇವೋ ವರ್ಷಪೂಗಾನಧಾರಯತ್|

12122016c ಪೂರ್ಣೇ ವರ್ಷಸಹಸ್ರೇ ತು ಸ ಗರ್ಭಃ ಕ್ಷುವತೋಽಪತತ್||

ಆಗ ಆ ದೇವನು ತನ್ನ ಶಿರಸ್ಸಿನಲ್ಲಿಯೇ ಅನೇಕ ವರ್ಷಗಳ ಪರ್ಯಂತ ಗರ್ಭವನ್ನು ಧರಿಸಿದನು. ಸಹಸ್ರವರ್ಷಗಳು ತುಂಬಿದಾಗ ಬ್ರಹ್ಮನು ಶೀನಲು ಆ ಗರ್ಭವು ಕೆಳಕ್ಕೆ ಬಿದ್ದಿತು.

12122017a ಸ ಕ್ಷುಪೋ ನಾಮ ಸಂಭೂತಃ ಪ್ರಜಾಪತಿರರಿಂದಮ|

12122017c ಋತ್ವಿಗಾಸೀತ್ತದಾ ರಾಜನ್ಯಜ್ಞೇ ತಸ್ಯ ಮಹಾತ್ಮನಃ||

ರಾಜನ್! ಅರಿಂದಮ! ಅದರಿಂದ ಕ್ಷುಪ ಎಂಬ ಹೆಸರಿನ ಪ್ರಜಾಪತಿಯು ಹುಟ್ಟಿದನು. ಆ ಮಹಾತ್ಮನ ಯಜ್ಞಕ್ಕೆ ಅವನೇ ಋತ್ವಿಜನಾದನು.

12122018a ತಸ್ಮಿನ್ ಪ್ರವೃತ್ತೇ ಸತ್ರೇ ತು ಬ್ರಹ್ಮಣಃ ಪಾರ್ಥಿವರ್ಷಭ|

12122018c ಹೃಷ್ಟರೂಪಪ್ರಚಾರತ್ವಾದ್ದಂಡಃ ಸೋಽಂತರ್ಹಿತೋಽಭವತ್||

ಪಾರ್ಥಿವರ್ಷಭ! ಬ್ರಹ್ಮನ ಆ ಸತ್ರವು ನಡೆಯುತ್ತಿರಲು ಹೃಷ್ಟರೂಪಪ್ರಚಾರತ್ವ[2]ದಿಂದಾಗಿ ದಂಡವು ಅಂತರ್ಹಿತವಾಯಿತು.

12122019a ತಸ್ಮಿನ್ನಂತರ್ಹಿತೇ ಚಾಥ ಪ್ರಜಾನಾಂ ಸಂಕರೋಽಭವತ್|

12122019c ನೈವ ಕಾರ್ಯಂ ನ ಚಾಕಾರ್ಯಂ ಭೋಜ್ಯಾಭೋಜ್ಯಂ ನ ವಿದ್ಯತೇ||

ಅದು ಅಂತರ್ಹಿತವಾಗಲು ಪ್ರಜೆಗಳಲ್ಲಿ ಸಂಕರವುಂಟಾಯಿತು. ಕಾರ್ಯ-ಅಕಾರ್ಯ ಮತ್ತು ಭೋಜ್ಯ-ಅಭೋಜ್ಯಗಳ್ಯಾವುವೂ ತಿಳಿಯದಂತಾಯಿತು.

12122020a ಪೇಯಾಪೇಯಂ ಕುತಃ ಸಿದ್ಧಿರ್ಹಿಂಸಂತಿ ಚ ಪರಸ್ಪರಮ್|

12122020c ಗಮ್ಯಾಗಮ್ಯಂ ತದಾ ನಾಸೀತ್ಪರಸ್ವಂ ಸ್ವಂ ಚ ವೈ ಸಮಮ್||

ಪೇಯಾಪೇಯಾಗಳ ಕುರಿತು ಇನ್ನೇನು? ಪರಸ್ಪರರನ್ನು ಹಿಂಸಿಸತೊಡಗಿದರು. ಗಮ್ಯಾಗಮ್ಯಗಳ ವಿಚಾರವೂ ಜನರಲ್ಲಿರಲಿಲ್ಲ. ಪರರ ಐಶ್ವರ್ಯವನ್ನೂ ತಮ್ಮದೆಂದೇ ಭಾವಿಸತೊಡಗಿದರು.

12122021a ಪರಸ್ಪರಂ ವಿಲುಂಪಂತೇ ಸಾರಮೇಯಾ ಇವಾಮಿಷಮ್|

12122021c ಅಬಲಂ ಬಲಿನೋ ಜಘ್ನುರ್ನಿರ್ಮರ್ಯಾದಮವರ್ತತ||

ಮಾಂಸದ ತುಂಡಿಗೆ ಕಚ್ಚಾಡುವ ನಾಯಿಗಳಂತೆ ಪರಸ್ಪರರ ಸ್ವತ್ತನ್ನು ಅಪಹರಿಸತೊಡಗಿದರು. ಬಲಶಾಲಿಗಳು ಅಬಲರನ್ನು ಕೊಂದರು. ಮರ್ಯಾದೆಯೇ ಇಲ್ಲದ ಸ್ವೇಚ್ಛಾಚಾರವರು ಸರ್ವತ್ರ ವ್ಯಾಪಿಸಿತು.

12122022a ತತಃ ಪಿತಾಮಹೋ ವಿಷ್ಣುಂ ಭಗವಂತಂ ಸನಾತನಮ್|

12122022c ಸಂಪೂಜ್ಯ ವರದಂ ದೇವಂ ಮಹಾದೇವಮಥಾಬ್ರವೀತ್||

ಆಗ ಪಿತಾಮಹನು ಸನಾತನ ಭಗವಂತ ವಿಷ್ಣುವನ್ನು ಪೂಜಿಸಿ, ವರದ ದೇವ ಮಹಾದೇವನಿಗೆ ಇಂತೆಂದನು:

12122023a ಅತ್ರ ಸಾಧ್ವನುಕಂಪಾ ವೈ ಕರ್ತುಮರ್ಹಸಿ ಕೇವಲಮ್[3]|

12122023c ಸಂಕರೋ ನ ಭವೇದತ್ರ ಯಥಾ ವೈ ತದ್ವಿಧೀಯತಾಮ್||

“ಇಲ್ಲಿ ನೀನು ಅನುಕಂಪವನ್ನು ತೋರಿಸುವ ಕೃಪೆಮಾಡಬೇಕು. ಕೇವಲ ಸಂಕರವು ನಡೆಯದಂತೆ ಉಪಾಯವನ್ನು ತೋರಿಸಿಕೊಡಬೇಕು.”

12122024a ತತಃ ಸ ಭಗವಾನ್ ಧ್ಯಾತ್ವಾ ಚಿರಂ ಶೂಲಜಟಾಧರಃ|

12122024c ಆತ್ಮಾನಮಾತ್ಮನಾ ದಂಡಮಸೃಜದ್ದೇವಸತ್ತಮಃ||

ಆಗ ಸ್ವಲ್ಪ ಕಾಲ ಧ್ಯಾನಿಸಿ, ಭಗವಾನ್ ಶೂಲಜಟಾಧರ ದೇವಸತ್ತಮನು ತನ್ನಿಂದಲೇ ತನ್ನನ್ನು ದಂಡರೂಪದಲ್ಲಿ ಸೃಷ್ಟಿಸಿಕೊಂಡನು.

12122025a ತಸ್ಮಾಚ್ಚ ಧರ್ಮಚರಣಾಂ ನೀತಿಂ ದೇವೀಂ ಸರಸ್ವತೀಮ್|

12122025c ಅಸೃಜದ್ದಂಡನೀತಿಃ ಸಾ ತ್ರಿಷು ಲೋಕೇಷು ವಿಶ್ರುತಾ||

ಆ ಧರ್ಮಚರಣಗಳ ನೀತಿಯನ್ನು ದೇವೀ ಸರಸ್ವತಿಯು ರಚಿಸಿದಳು. ಅ ದಂಡನೀತಿಯು ಮೂರು ಲೋಕಗಳಲ್ಲಿಯೂ ವಿಶ್ರುತವಾಯಿತು.

12122026a ಭೂಯಃ ಸ ಭಗವಾನ್ ಧ್ಯಾತ್ವಾ ಚಿರಂ ಶೂಲವರಾಯುಧಃ|

12122026c ತಸ್ಯ ತಸ್ಯ ನಿಕಾಯಸ್ಯ ಚಕಾರೈಕೈಕಮೀಶರಮ್||

ಆ ಶೂಲವರಾಯುಧ ಭಗವಂತನು ಪುನಃ ಸ್ವಲ್ಪ ಹೊತ್ತು ಧ್ಯಾನಿಸಿ ಒಂದೊಂದು ಸಮೂಹಕ್ಕೂ ಒಬ್ಬೊಬ್ಬರನ್ನು ಈಶ್ವರರನ್ನಾಗಿ ಮಾಡಿದನು.

12122027a ದೇವಾನಾಮೀಶ್ವರಂ ಚಕ್ರೇ ದೇವಂ ದಶಶತೇಕ್ಷಣಮ್|

12122027c ಯಮಂ ವೈವಸ್ವತಂ ಚಾಪಿ ಪಿತೄಣಾಮಕರೋತ್ಪತಿಮ್||

ಸಾವಿರ ಕಣ್ಣಿನತೆ ದೇವನನ್ನು ದೇವತೆಗಳ ಈಶ್ವರನನ್ನಾಗಿ ಮಾಡಿದನು. ವೈವಸ್ವತ ಯಮನನ್ನು ಪಿತೃಗಳ ಪತಿಯನ್ನಾಗಿ ಮಾಡಿದನು.

12122028a ಧನಾನಾಂ ರಕ್ಷಸಾಂ ಚಾಪಿ ಕುಬೇರಮಪಿ ಚೇಶ್ವರಮ್|

12122028c ಪರ್ವತಾನಾಂ ಪತಿಂ ಮೇರುಂ ಸರಿತಾಂ ಚ ಮಹೋದಧಿಮ್||

ಧನಗಳ ಮತ್ತು ರಾಕ್ಷಸರ ಈಶ್ವರನನ್ನಾಗಿ ಕುಬೇರನನ್ನು, ಪರ್ವತಗಳ ಪತಿಯನ್ನಾಗಿ ಮೇರುವನ್ನು ಮತ್ತು ನದಿಗಳ ಪತಿಯನ್ನಾಗಿ ಮಹೋದಧಿಯನ್ನು ಮಾಡಿದನು.

12122029a ಅಪಾಂ ರಾಜ್ಯೇಽಸುರಾಣಾಂ ಚ ವಿದಧೇ ವರುಣಂ ಪ್ರಭುಮ್|

12122029c ಮೃತ್ಯುಂ ಪ್ರಾಣೇಶ್ವರಮಥೋ ತೇಜಸಾಂ ಚ ಹುತಾಶನಮ್||

ವರುಣನನ್ನು ನೀರು ಮತ್ತು ಅಸುರರ ರಾಜ್ಯಕ್ಕೆ ಪ್ರಭುವನ್ನಾಗಿ ಮಾಡಿದನು. ಮೃತ್ಯುವನ್ನು ಪ್ರಾಣಗಳಿಗೂ ತೇಜಸ್ಸುಗಳಿಗೆ ಯಜ್ಞೇಶ್ವರನನ್ನೂ ಅಧಿಪತಿಗಳನ್ನಾಗಿ ಮಾಡಿದನು.

12122030a ರುದ್ರಾಣಾಮಪಿ ಚೇಶಾನಂ ಗೋಪ್ತಾರಂ ವಿದಧೇ ಪ್ರಭುಃ|

12122030c ಮಹಾತ್ಮಾನಂ ಮಹಾದೇವಂ ವಿಶಾಲಾಕ್ಷಂ ಸನಾತನಮ್||

ಪ್ರಭುವು ಮಹಾತ್ಮ ಮಹಾದೇವ ವಿಶಾಲಾಕ್ಷ ಸನಾತನ ಈಶಾನನನ್ನು ರುದ್ರರ ರಕ್ಷಕನನ್ನಾಗಿ ಮಾಡಿದನು.

12122031a ವಸಿಷ್ಠಮೀಶಂ ವಿಪ್ರಾಣಾಂ ವಸೂನಾಂ ಜಾತವೇದಸಮ್|

12122031c ತೇಜಸಾಂ ಭಾಸ್ಕರಂ ಚಕ್ರೇ ನಕ್ಷತ್ರಾಣಾಂ ನಿಶಾಕರಮ್||

ವಸಿಷ್ಠನನ್ನು ವಿಪ್ರರ, ಜಾತವೇದಸನನ್ನು ವಸುಗಳ, ಭಾಸ್ಕರನನ್ನು ತೇಜಸ್ಸುಗಳು ಮತ್ತು ನಿಶಾಕರನನ್ನು ನಕ್ಷತ್ರಗಳ ಅಧಿಪತಿಗಳನ್ನಾಗಿ ಮಾಡಿದನು.

12122032a ವೀರುಧಾಮಂಶುಮಂತಂ ಚ ಭೂತಾನಾಂ ಚ ಪ್ರಭುಂ ವರಮ್|

12122032c ಕುಮಾರಂ ದ್ವಾದಶಭುಜಂ ಸ್ಕಂದಂ ರಾಜಾನಮಾದಿಶತ್||

ಅಂಶುಮಂತ ಚಂದ್ರನನ್ನು ಓಷಧಿಲತೆಗಳಿಗೆ ಅಧಿಪತಿಯನ್ನಾಗಿ ಮಾಡಿದನು. ಹನ್ನೆರಡು ಭುಜಗಳ ಶ್ರೇಷ್ಠ ಪ್ರಭು ಸ್ಕಂದ ಕುಮಾರನನ್ನು ಭೂತಗಳ ರಾಜನನ್ನಾಗಿ ಮಾಡಿದನು.

12122033a ಕಾಲಂ ಸರ್ವೇಶಮಕರೋತ್ಸಂಹಾರವಿನಯಾತ್ಮಕಮ್|

12122033c ಮೃತ್ಯೋಶ್ಚತುರ್ವಿಭಾಗಸ್ಯ ದುಃಖಸ್ಯ ಚ ಸುಖಸ್ಯ ಚ||

ಸಂಹಾರವಿನಯಾತ್ಮಕನಾದ ಸರ್ವೇಶ ಕಾಲನನ್ನು ನಾಲ್ಕುವಿಧದ ಮೃತ್ಯುಗಳಿಗೂ. ಸುಖ-ದುಃಖಗಳಿಗೂ ಅಧಿಪತಿಯನ್ನಾಗಿ ಮಾಡಿದನು.

12122034a ಈಶ್ವರಃ ಸರ್ವದೇಹಸ್ತು[4] ರಾಜರಾಜೋ ಧನಾಧಿಪಃ[5]|

12122034c ಸರ್ವೇಷಾಮೇವ ರುದ್ರಾಣಾಂ ಶೂಲಪಾಣಿರಿತಿ ಶ್ರುತಿಃ||

ಶೂಲಪಾಣಿಯು ಸರ್ವದೇಹಗಳ ಈಶ್ವರನೆಂದೂ, ರಾಜರಾಜನೆಂದೂ, ಧನಾಧಿಪನೆಂದೂ ಮತ್ತು ಸರ್ವ ರುದ್ರರ ಅಧಿಪತಿಯೆಂದೂ ಕೇಳಿದ್ದೇವೆ.

12122035a ತಮೇಕಂ[6] ಬ್ರಹ್ಮಣಃ ಪುತ್ರಮನುಜಾತಂ ಕ್ಷುಪಂ ದದೌ|

12122035c ಪ್ರಜಾನಾಮಧಿಪಂ ಶ್ರೇಷ್ಠಂ ಸರ್ವಧರ್ಮಭೃತಾಮಪಿ||

ಅವನು ಬ್ರಹ್ಮನ ಕಿರಿಯ ಪುತ್ರ ಕ್ಷುಪನನ್ನು ಎಲ್ಲ ಪ್ರಜೆಗಳಿಗೂ ಮತ್ತು ಎಲ್ಲ ಧರ್ಮಾತ್ಮರಿಗೂ ಅಧಿಪತಿಯನ್ನಾಗಿ ಮಾಡಿದನು.

12122036a ಮಹಾದೇವಸ್ತತಸ್ತಸ್ಮಿನ್ವೃತ್ತೇ ಯಜ್ಞೇ ಯಥಾವಿಧಿ|

12122036c ದಂಡಂ ಧರ್ಮಸ್ಯ ಗೋಪ್ತಾರಂ ವಿಷ್ಣವೇ ಸತ್ಕೃತಂ ದದೌ||

ಬ್ರಹ್ಮನ ಯಜ್ಞವು ಯಥಾವಿಧಿಯಾಗಿ ಸಂಪೂರ್ಣವಾಗಲು ಮಹಾದೇವನು ಧರ್ಮರಕ್ಷಕ ಮಹಾವಿಷ್ಣುವಿಗೆ ಸತ್ಕೃತವಾದ ದಂಡವನ್ನು ಕೊಟ್ಟನು.

12122037a ವಿಷ್ಣುರಂಗಿರಸೇ ಪ್ರಾದಾದಂಗಿರಾ ಮುನಿಸತ್ತಮಃ|

12122037c ಪ್ರಾದಾದಿಂದ್ರಮರೀಚಿಭ್ಯಾಂ ಮರೀಚಿರ್ಭೃಗವೇ ದದೌ||

ವಿಷ್ಣುವು ಅದನ್ನು ಅಂಗಿರಸನಿಗೆ ಕೊಟ್ಟನು. ಆ ಮುನಿಸತ್ತಮನು ಅದನ್ನು ಇಂದ್ರ ಮತ್ತು ಮರೀಚರಿಗೆ ಕೊಟ್ಟನು. ಮರೀಚಿಯು ಅದನ್ನು ಭೃಗುವಿಗೆ ಕೊಟ್ಟನು.

12122038a ಭೃಗುರ್ದದಾವೃಷಿಭ್ಯಸ್ತು ತಂ ದಂಡಂ ಧರ್ಮಸಂಹಿತಮ್|

12122038c ಋಷಯೋ ಲೋಕಪಾಲೇಭ್ಯೋ ಲೋಕಪಾಲಾಃ ಕ್ಷುಪಾಯ ಚ||

ಧರ್ಮಸಂಹಿತವಾದ ಆ ದಂಡವನ್ನು ಭೃಗುವು ಋಷಿಗಳಿಗೂ, ಋಷಿಗಳು ಲೋಕಪಾಲರಿಗೂ ಮತ್ತು ಲೋಕಪಾಲರು ಕ್ಷುಪನಿಗೂ ಕೊಟ್ಟರು.

12122039a ಕ್ಷುಪಸ್ತು ಮನವೇ ಪ್ರಾದಾದಾದಿತ್ಯತನಯಾಯ ಚ|

12122039c ಪುತ್ರೇಭ್ಯಃ ಶ್ರಾದ್ಧದೇವಸ್ತು ಸೂಕ್ಷ್ಮಧರ್ಮಾರ್ಥಕಾರಣಾತ್|

12122039e ತಂ ದದೌ ಸೂರ್ಯಪುತ್ರಸ್ತು ಮನುರ್ವೈ ರಕ್ಷಣಾತ್ಮಕಮ್||

ಕ್ಷುಪನಾದರೋ ಅದನ್ನು ಆದಿತ್ಯ ತನಯ ಮನು ಶ್ರಾದ್ಧದೇವನಿಗೂ ಶ್ರಾದ್ಧದೇವನು ಸೂಕ್ಷ್ಮಧರ್ಮಾರ್ಥಕಾರಣಗಳಿಂದ ತನ್ನ ಪುತ್ರರಿಗೂ  ನೀಡಿದನು. ಸೂರ್ಯಪುತ್ರನು ರಕ್ಷಣಾತ್ಮಕವಾದ ಅದನ್ನು ಮನುವಿಗೆ ನೀಡಿದನು.

12122040a ವಿಭಜ್ಯ ದಂಡಃ ಕರ್ತವ್ಯೋ ಧರ್ಮೇಣ ನ ಯದೃಚ್ಚಯಾ|

12122040c ದುರ್ವಾಚಾ ನಿಗ್ರಹೋ ಬಂಧೋ[7] ಹಿರಣ್ಯಂ ಬಾಹ್ಯತಃಕ್ರಿಯಾ||

ಧರ್ಮಾನುಸಾರವಾಗಿ ನ್ಯಾಯಾನ್ಯಾಯಗಳನ್ನು ವಿಚಾರಿಸಿಯೇ ದಂಡವನ್ನು ಉಪಯೋಗಿಸಬೇಕು. ಮನಬಂದಂತೆ ದಂಡವನ್ನು ಉಪಯೋಗಿಸಬಾರದು. ದುಷ್ಟರನ್ನು ನಿಗ್ರಹಿಸುವುದೇ ದಂಡದ ಮುಖ್ಯ ಉದ್ದೇಶ. ಹಿರಣ್ಯದಿಂದ ಬೊಕ್ಕಸವನ್ನು ತೊಂಬುವುದಕ್ಕಾಗಿ ಅಲ್ಲ. ಅದೊಂದು ಬಾಹ್ಯಕ್ರಿಯೆಯು ಮಾತ್ರ.

12122041a ವ್ಯಂಗತ್ವಂ ಚ ಶರೀರಸ್ಯ ವಧೋ ವಾ ನಾಲ್ಪಕಾರಣಾತ್|

12122041c ಶರೀರಪೀಡಾಸ್ತಾಸ್ತಾಸ್ತು ದೇಹತ್ಯಾಗೋ ವಿವಾಸನಮ್||

ಅಲ್ಪಕಾರಣಕ್ಕಾಗಿ ಪ್ರಜೆಗಳನ್ನು ಅಂಗವಿಕಲರನ್ನಾಗಿ ಮಾಡಬಾರದು, ಮರಣ ದಂಡನೆಯನ್ನು ನೀಡಬಾರದು, ಶರೀರ ಪೀಡೆಗಳನ್ನು ಕೊಡಬಾರದು, ದೇಹತ್ಯಾಗಮಾಡುವಂತೆ ಮಾಡಬಾರದು, ಮತ್ತು ದೇಶದಿಂದ ಹೊರಹಾಕಲೂ ಬಾರದು.

12122042a ಆನುಪೂರ್ವ್ಯಾ ಚ ದಂಡೋಽಸೌ ಪ್ರಜಾ ಜಾಗರ್ತಿ ಪಾಲಯನ್|

12122042c ಇಂದ್ರೋ ಜಾಗರ್ತಿ ಭಗವಾನಿಂದ್ರಾದಗ್ನಿರ್ವಿಭಾವಸುಃ||

ಈ ದಂಡವು ಅನುಕ್ರಮವಾಗಿ ಪ್ರಜೆಗಳನ್ನು ರಕ್ಷಿಸುತ್ತಾ ಜಾಗೃತವಾಗಿರುತ್ತದೆ. ಇಂದ್ರನು ಜಾಗೃತನಾಗಿರುತ್ತಾನೆ. ಭಗವಾನ್ ಇಂದ್ರನಿಂದ ವಿಭಾವಸು ಅಗ್ನಿಯು ಜಾಗೃತನಾಗಿರುತ್ತಾನೆ.

12122043a ಅಗ್ನೇರ್ಜಾಗರ್ತಿ ವರುಣೋ ವರುಣಾಚ್ಚ ಪ್ರಜಾಪತಿಃ|

12122043c ಪ್ರಜಾಪತೇಸ್ತತೋ ಧರ್ಮೋ ಜಾಗರ್ತಿ ವಿನಯಾತ್ಮಕಃ||

ಅಗ್ನಿಯಿಂದ ವರುಣನೂ, ವರುಣನಿಂದ ಪ್ರಜಾಪತಿಯೂ, ಪ್ರಜಾಪತಿಯಿಂದ ವಿನಯಾತ್ಮಕ ಧರ್ಮನೂ ಜಾಗೃತರಾಗಿರುತ್ತಾರೆ.

12122044a ಧರ್ಮಾಚ್ಚ ಬ್ರಹ್ಮಣಃ ಪುತ್ರೋ ವ್ಯವಸಾಯಃ ಸನಾತನಃ|

12122044c ವ್ಯವಸಾಯಾತ್ತತಸ್ತೇಜೋ ಜಾಗರ್ತಿ ಪರಿಪಾಲಯನ್||

ಧರ್ಮನಿಂದ ಅದು ಬ್ರಹ್ಮನ ಪುತ್ರ ಸನಾತನ ವ್ಯವಸಾಯನಿಗೆ ಹೋಯಿತು. ವ್ಯವಸಾಯನಿಂದ ತೇಜಸ್ಸು ಅದನ್ನು ಪಡೆದುಕೊಂಡು ಜಾಗೃತವಾಗಿ ಪ್ರಜೆಗಳನ್ನು ಪರಿಪಾಲಿಸುತ್ತದೆ.

12122045a ಓಷಧ್ಯಸ್ತೇಜಸಸ್ತಸ್ಮಾದೋಷಧಿಭ್ಯಶ್ಚ ಪರ್ವತಾಃ|

12122045c ಪರ್ವತೇಭ್ಯಶ್ಚ ಜಾಗರ್ತಿ ರಸೋ ರಸಗುಣಾತ್ತಥಾ||

12122046a ಜಾಗರ್ತಿ ನಿರೃತಿರ್ದೇವೀ ಜ್ಯೋತೀಂಷಿ ನಿರೃತೇರಪಿ|

12122046c ವೇದಾಃ ಪ್ರತಿಷ್ಠಾ ಜ್ಯೋತಿರ್ಭ್ಯಸ್ತತೋ ಹಯಶಿರಾಃ ಪ್ರಭುಃ||

ತೇಜಸ್ಸಿನಿಂದ ಓಷಧಿಗಳೂ, ಓಷಧಿಗಳಿಂದ ಪರ್ವತಗಳೂ, ವರ್ವತಗಳಿಂದ ರಸಗಳೂ, ಪರ್ವತಗಳಿಂದ ರಸಗಳೂ ಜಾಗೃತಗೊಂಡವು. ರಸಗುಣಗಳಿಂದ ನಿರೃತಿದೇವಿಯೂ, ನಿರೃತಿಯಿಂದ ಜ್ಯೋತಿಸ್ಸುಗಳೂ ದಂಡವನ್ನು ಪಡೆದು ಜಾಗೃತವಾದವು. ಜ್ಯೋತಿಸ್ಸುಗಳಿಂದ ದಂಡವನ್ನು ಪಡೆದುಕೊಂಡು ವೇದಗಳು ಪ್ರತಿಷ್ಠಿತವಾದವು. ವೇದಗಳಿಂದ ಪ್ರಭು ಹಯಶಿರನು ಅದನ್ನು ಪಡೆದುಕೊಂಡನು.

12122047a ಬ್ರಹ್ಮಾ ಪಿತಾಮಹಸ್ತಸ್ಮಾಜ್ಜಾಗರ್ತಿ ಪ್ರಭುರವ್ಯಯಃ|

12122047c ಪಿತಾಮಹಾನ್ಮಹಾದೇವೋ ಜಾಗರ್ತಿ ಭಗವಾನ್ ಶಿವಃ||

ಹಯಶಿರನಿಂದ ಪ್ರಭು ಅವ್ಯಯ ಪಿತಾಮಹ ಬ್ರಹ್ಮನು ಜಾಗೃತಗೊಂಡನು. ಪಿತಾಮಹನಿಂದ ಮಹಾದೇವ ಭಗವಾನ್ ಶಿವನು ಜಾಗೃತಗೊಂಡನು.

12122048a ವಿಶ್ವೇದೇವಾಃ ಶಿವಾಚ್ಚಾಪಿ ವಿಶ್ವೇಭ್ಯಶ್ಚ ತಥರ್ಷಯಃ|

12122048c ಋಷಿಭ್ಯೋ ಭಗವಾನ್ಸೋಮಃ ಸೋಮಾದ್ದೇವಾಃ ಸನಾತನಾಃ||

12122049a ದೇವೇಭ್ಯೋ ಬ್ರಾಹ್ಮಣಾ ಲೋಕೇ ಜಾಗ್ರತೀತ್ಯುಪಧಾರಯ|

ಶಿವನಿಂದ ವಿಶ್ವೇದೇವತೆಗಳೂ, ವಿಶ್ವೇದೇವತೆಗಳಿಂದ ಋಷಿಗಳೂ, ಋಷಿಗಳಿಂದ ಭಗವಾನ್ ಸೋಮನೂ, ಸೋಮನಿಂದ ಸನಾತನ ದೇವತೆಗಳೂ, ದೇವತೆಗಳಿಂದ ಬ್ರಾಹ್ಮಣರೂ ಆ ದಂಡವನ್ನು ಅನುಕ್ರಮವಾಗಿ ಪಡೆದುಕೊಂಡು ಲೋಕದ ರಕ್ಷಣೆಯಲ್ಲಿ ಜಾಗರೂಕರಾಗಿರುತ್ತಾರೆ.

12122049c ಬ್ರಾಹ್ಮಣೇಭ್ಯಶ್ಚ ರಾಜನ್ಯಾ ಲೋಕಾನ್ರಕ್ಷಂತಿ ಧರ್ಮತಃ|

12122049e ಸ್ಥಾವರಂ ಜಂಗಮಂ ಚೈವ ಕ್ಷತ್ರಿಯೇಭ್ಯಃ ಸನಾತನಮ್||

ರಾಜರು ಬ್ರಾಹ್ಮಣರಿಂದ ದಂಡವನ್ನು ಪಡೆದುಕೊಂಡು ಕ್ಷತ್ರಿಯ ಧರ್ಮಾನುಸಾರವಾಗಿ ಲೋಕವನ್ನು ರಕ್ಷಿಸುತ್ತಿದ್ದಾರೆ. ಕ್ಷತ್ರಿಯರಿಂದಲೇ ಸನಾತನ ಸ್ಥಾವರ-ಜಂಗಮಗಳೂ ರಕ್ಷಿಸಲ್ಪಟ್ಟಿವೆ.

12122050a ಪ್ರಜಾ ಜಾಗ್ರತಿ ಲೋಕೇಽಸ್ಮಿನ್ದಂಡೋ ಜಾಗರ್ತಿ ತಾಸು ಚ|

12122050c ಸರ್ವಸಂಕ್ಷೇಪಕೋ ದಂಡಃ ಪಿತಾಮಹಸಮಃ ಪ್ರಭುಃ[8]||

ಈ ಲೋಕದಲ್ಲಿ ಪ್ರಜೆಗಳು ಜಾಗೃತವಾಗಿರುತ್ತಾರೆ. ಅವರಲ್ಲಿ ದಂಡವು ಜಾಗೃತವಾಗಿರುತ್ತದೆ. ಪಿತಮಾಹಸಮ ಪ್ರಭು ದಂಡವು ಸರ್ವವನ್ನೂ ಮರ್ಯಾದೆಯೊಳಗೆ ಇಡುತ್ತದೆ.

12122051a ಜಾಗರ್ತಿ ಕಾಲಃ ಪೂರ್ವಂ ಚ ಮಧ್ಯೇ ಚಾಂತೇ ಚ ಭಾರತ|

12122051c ಈಶ್ವರಃ ಸರ್ವಲೋಕಸ್ಯ ಮಹಾದೇವಃ ಪ್ರಜಾಪತಿಃ||

ಭಾರತ! ಸರ್ವಲೋಕದ ಈಶ್ವರ ಮಹಾದೇವ ಪ್ರಜಾಪತಿ ಕಾಲನ ಸಮನಾದ ದಂಡವು ಮೊದಲೂ, ಮಧ್ಯದಲ್ಲಿಯೂ ಮತ್ತು ಅಂತ್ಯದಲ್ಲಿಯೂ ಜಾಗೃತವಾಗಿಯೇ ಇರುತ್ತದೆ.

12122052a ದೇವದೇವಃ ಶಿವಃ ಶರ್ವೋ ಜಾಗರ್ತಿ ಸತತಂ ಪ್ರಭುಃ|

12122052c ಕಪರ್ದೀ ಶಂಕರೋ ರುದ್ರೋ ಭವಃ ಸ್ಥಾಣುರುಮಾಪತಿಃ||

ದೇವದೇವ ಶಿವ ಶರ್ವ ಪ್ರಭು ಕಪರ್ದೀ ಶಂಕರ ರುದ್ರ ಭವ ಸ್ಥಾಣು ಉಮಾಪತಿಯು ಸತತವೂ ದಂಡರೂಪದಲ್ಲಿ ಜಾಗೃತನಾಗಿರುತ್ತಾನೆ.

12122053a ಇತ್ಯೇಷ ದಂಡೋ ವಿಖ್ಯಾತ ಆದೌ ಮಧ್ಯೇ ತಥಾವರೇ|

12122053c ಭೂಮಿಪಾಲೋ ಯಥಾನ್ಯಾಯಂ ವರ್ತೇತಾನೇನ ಧರ್ಮವಿತ್||

ಹೀಗೆ ದಂದವು ಆದಿಮಧ್ಯಾಂತ್ಯಗಳಲ್ಲಿಯೂ ವಿಖ್ಯಾತವಾಗಿದೆ. ಧರ್ಮವಿದು ಭೂಮಿಪಾಲನು ದಂಡವನ್ನು ಬಳಸಿ ಯಥಾನ್ಯಾಯವಾಗಿ ವ್ಯವಹರಿಸಬೇಕು.””

12122054 ಭೀಷ್ಮ ಉವಾಚ|

12122054a ಇತೀದಂ ವಸುಹೋಮಸ್ಯ ಶೃಣುಯಾದ್ಯೋ ಮತಂ ನರಃ|

12122054c ಶ್ರುತ್ವಾ ಚ ಸಮ್ಯಗ್ವರ್ತೇತ ಸ ಕಾಮಾನಾಪ್ನುಯಾನ್ನೃಪಃ||

ಭೀಷ್ಮನು ಹೇಳಿದನು: “ಯಾವ ನೃಪನು ವಸುಹೋಮನ ಈ ಅಭಿಪ್ರಾಯವನ್ನು ಕೇಳುವನೋ ಮತ್ತು ಆಚರಣೆಗೆ ತರುವನೋ ಅವನು ಸಕಲವಿಧದ ಕಾಮನೆಗಳನ್ನು ಪಡೆದುಕೊಳ್ಳುತ್ತಾನೆ.

12122055a ಇತಿ ತೇ ಸರ್ವಮಾಖ್ಯಾತಂ ಯೋ ದಂಡೋ ಮನುಜರ್ಷಭ|

12122055c ನಿಯಂತಾ ಸರ್ವಲೋಕಸ್ಯ ಧರ್ಮಾಕ್ರಾಂತಸ್ಯ ಭಾರತ||

ಮನುಜರ್ಷಭ! ಭಾರತ! ಧರ್ಮಾಕ್ರಾಂತವಾಗಿರುವ ಸರ್ವಲೋಕಗಳನ್ನು ನಿಯಂತ್ರಿಸುವ ದಂಡದ ಕುರಿತು ಎಲ್ಲವನ್ನೂ ನಿನಗೆ ಹೇಳಿದ್ದೇನೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ದಂಡೋತ್ಪತ್ತ್ಯುಪಾಖ್ಯಾನೇ ದ್ವಾವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ದಂಡೋತ್ಪತ್ತ್ಯುಪಾಖ್ಯಾನ ಎನ್ನುವ ನೂರಾಇಪ್ಪತ್ತೆರಡನೇ ಅಧ್ಯಾಯವು.

Cornflower Like Pink And Purple Flower Isolated On White Background Stock Photo, Picture And Royalty Free Image. Image 11690631.

[1] ಪರಶುರಾಮ.

[2] ಹೃಷ್ಟರೂಪಪ್ರಚಾರತ್ವ ಎಂದರೆ ಏನು? ಯಜ್ಞವು ಪ್ರತ್ಯಕ್ಷದರ್ಶನ ಪ್ರಧಾನವಾಗಿದ್ದುದರಿಂದ ದಂಡವು ಅಂತರ್ಹಿತವಾಯಿತು. ಬ್ರಹ್ಮನು ದೃಷ್ಟರೂಪವಾದ ಯಜ್ಞದೀಕ್ಷೆಯನ್ನು ವಹಿಸಿರುವುದರಿಂದ ಯಜ್ಞವೇ ಬ್ರಹ್ಮನಿಗೆ ಪ್ರಧಾನಕಾರ್ಯವಾಗಿದ್ದುದರಿಂದ, ಪ್ರಜಾನಿಯಮರೂಪವಾದ ಅವನಲ್ಲಿದ್ದ ದಂಡಧರ್ಮವು ಲುಪ್ತವಾಯಿತು (ಭಾರತ ದರ್ಶನ).

[3] ಶಂಕರ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಸರ್ವದೇವಸ್ತು ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಧನಾಧಿಪಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ತಮೇನಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ದಂಡೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

[8] ಸರ್ವಂ ಸಂಕ್ಷಿಪತೇ ದಂಡಃ ಪಿತಾಮಹಸಮಪ್ರಭಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.