Shanti Parva: Chapter 121

ಶಾಂತಿ ಪರ್ವ: ರಾಜಧರ್ಮ ಪರ್ವ

೧೨೧

ರಾಜದಂಡದ ಸ್ವರೂಪ, ನಾಮ, ಲಕ್ಷಣ, ಸ್ವಭಾವ ಮತ್ತು ಪ್ರಯೋಗಗಳ ವಿವರಣೆ (೧-೫೭).

12121001 ಯುಧಿಷ್ಠಿರ ಉವಾಚ| 

12121001a ಅಯಂ ಪಿತಾಮಹೇನೋಕ್ತೋ ರಾಜಧರ್ಮಃ ಸನಾತನಃ|

12121001c ಈಶ್ವರಶ್ಚ ಮಹಾದಂಡೋ ದಂಡೇ ಸರ್ವಂ ಪ್ರತಿಷ್ಠಿತಮ್||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಈ ಸನಾತನ ರಾಜಧರ್ಮವನ್ನು ನೀನು ಹೇಳಿದ್ದೀಯೆ. ಮಹಾದಂಡವೇ ಈಶ್ವರ ಸ್ವರೂಪವಾಗಿದೆ. ದಂಡದಲ್ಲಿಯೇ ಎಲ್ಲವೂ ಪ್ರತಿಷ್ಠಿತವಾಗಿವೆ.

12121002a ದೇವತಾನಾಮೃಷೀಣಾಂ ಚ ಪಿತೄಣಾಂ ಚ ಮಹಾತ್ಮನಾಮ್|

12121002c ಯಕ್ಷರಕ್ಷಃಪಿಶಾಚಾನಾಂ ಮರ್ತ್ಯಾನಾಂ ಚ ವಿಶೇಷತಃ||

12121003a ಸರ್ವೇಷಾಂ ಪ್ರಾಣಿನಾಂ ಲೋಕೇ ತಿರ್ಯಕ್ಷ್ವಪಿ ನಿವಾಸಿನಾಮ್|

12121003c ಸರ್ವವ್ಯಾಪೀ ಮಹಾತೇಜಾ ದಂಡಃ ಶ್ರೇಯಾನಿತಿ ಪ್ರಭೋ||

ಪ್ರಭೋ! ದೇವತೆಗಳಿಗೂ, ಋಷಿಗಳಿಗೂ, ಪಿತೃಗಳಿಗೂ, ಮನುಷ್ಯರಿಗೂ, ಯಕ್ಷ-ರಾಕ್ಷಸರಿಗೂ, ಪಿಶಾಚರಿಗೂ, ಸಾಧ್ಯರಿಗೂ, ತಿರ್ಯಗ್ಯೋನಿಗಳಲ್ಲಿ ಹುಟ್ಟಿರುವ ಸಮಸ್ತ ಪಶು-ಪಕ್ಷಿಗಳಿಗೂ ಸರ್ವವ್ಯಾಪಿಯಾದ ಮತ್ತು ಮಹಾ ತೇಜಸ್ಸಿನಿಂದ ಕೂಡಿರುವ ದಂಡವೇ ಶ್ರೇಯಸ್ಸಿಗೆ ಸಾಧನಾಭೂತವಾಗಿರುವುದೆಂದು ನೀನು ಹೇಳಿದ್ದೀಯೆ.

12121004a ಇತ್ಯೇತದುಕ್ತಂ ಭವತಾ ಸರ್ವಂ ದಂಡ್ಯಂ ಚರಾಚರಮ್|

12121004c ದೃಶ್ಯತೇ ಲೋಕಮಾಸಕ್ತಂ ಸಸುರಾಸುರಮಾನುಷಮ್||

ಸುರಾಸುರಮನುಷ್ಯರಿಂದ ಕೂಡಿರುವ ಈ ಲೋಕದಲ್ಲಿರುವ ಚರಾಚರಗಳೆಲ್ಲವೂ ದಂಡದ ಮೇಲೆ ಪ್ರತಿಷ್ಠಿತವಾಗಿದೆ ಎಂದು ನೀನು ಹೇಳಿದೆ.

12121005a ಏತದಿಚ್ಚಾಮ್ಯಹಂ ಜ್ಞಾತುಂ ತತ್ತ್ವೇನ ಭರತರ್ಷಭ|

12121005c ಕೋ ದಂಡಃ ಕೀದೃಶೋ ದಂಡಃ ಕಿಂರೂಪಃ ಕಿಂಪರಾಯಣಃ||

ಭರತರ್ಷಭ! ದಂಡ ಎಂದರೆ ಏನು? ಅದು ಹೇಗಿರುತ್ತದೆ? ಅದು ಹೇಗೆ ಕಾಣುತ್ತದೆ ಮತ್ತು ಅದು ಯಾರನ್ನು ಆಶ್ರಯಿಸಿದೆ? ಇದನ್ನು ತತ್ತ್ವತಃ ತಿಳಿದುಕೊಳ್ಳಲು ಬಯಸುತ್ತೇನೆ.

12121006a ಕಿಮಾತ್ಮಕಃ ಕಥಂಭೂತಃ ಕತಿಮೂರ್ತಿಃ ಕಥಂಪ್ರಭುಃ[1]|

12121006c ಜಾಗರ್ತಿ ಸ ಕಥಂ ದಂಡಃ ಪ್ರಜಾಸ್ವವಹಿತಾತ್ಮಕಃ||

ಅದರ ಮೂಲವು ಯಾವುದು? ಅದು ಹೇಗೆ ಹುಟ್ಟಿಕೊಂಡಿತು? ಅದರ ಆಕಾರವು ಹೇಗಿರುತ್ತದೆ? ಪ್ರಜೆಗಳ ಹಿತಾತ್ಮಕವಾದ ಆ ದಂಡವು ಹೇಗೆ ಸದಾ ಜಾಗರೂಕವಾಗಿರುತ್ತದೆ?

12121007a ಕಶ್ಚ ಪೂರ್ವಾಪರಮಿದಂ ಜಾಗರ್ತಿ ಪರಿಪಾಲಯನ್|

12121007c ಕಶ್ಚ ವಿಜ್ಞಾಯತೇ ಪೂರ್ವಂ ಕೋಽಪರೋ ದಂಡಸಂಜ್ಞಿತಃ[2]|

12121007e ಕಿಂಸಂಸ್ಥಶ್ಚ ಭವೇದ್ದಂಡಃ ಕಾ ಚಾಸ್ಯ ಗತಿರಿಷ್ಯತೇ||

ಎಚ್ಚರದಿಂದಿದ್ದು ಪೂರ್ವಾಪರ ಜಗತ್ತನ್ನೂ ಅದು ಹೇಗೆ ಪರಿಪಾಲಿಸುತ್ತದೆ? ಹಿಂದೆ ಇದು ಯಾವ ಹೆಸರಿನಿಂದ ತಿಳಿಯಲ್ಪಟ್ಟಿತ್ತು? ಬೇರೆ ಯಾವುದನ್ನು ದಂಡ ಎಂದು ಕರೆಯುತ್ತಾರೆ? ದಂಡದ ಆಧಾರವು ಯಾವುದು? ಇದರ ಗತಿಯೇನೆಂದು ಹೇಳುತ್ತಾರೆ?”

12121008 ಭೀಷ್ಮ ಉವಾಚ|

12121008a ಶೃಣು ಕೌರವ್ಯ ಯೋ ದಂಡೋ ವ್ಯವಹಾರ್ಯೋ ಯಥಾ ಚ ಸಃ|

12121008c ಯಸ್ಮಿನ್ ಹಿ ಸರ್ವಮಾಯತ್ತಂ ಸ ದಂಡ ಇಹ ಕೇವಲಃ||

ಭೀಷ್ಮನು ಹೇಳಿದನು: “ಕೌರವ್ಯ! ದಂಡವೆಂದರೆ ಏನು ಮತ್ತು ದಂಡವು ಹೇಗೆ ವ್ಯವಹರಿಸುತ್ತದೆ ಎನ್ನುವುದನ್ನು ಕೇಳು. ಸರ್ವವೂ ಯಾವುದನ್ನು ಆಶ್ರಯಿಸಿರುವವೋ ಅದನ್ನೇ ಶ್ರೇಷ್ಠ ದಂಡ ಎಂದು ಹೇಳುತ್ತಾರೆ.

12121009a ಧರ್ಮಸ್ಯಾಖ್ಯಾ ಮಹಾರಾಜ ವ್ಯವಹಾರ ಇತೀಷ್ಯತೇ|

12121009c ತಸ್ಯ ಲೋಪಃ ಕಥಂ ನ ಸ್ಯಾಲ್ಲೋಕೇಷ್ವವಹಿತಾತ್ಮನಃ|

12121009e ಇತ್ಯರ್ಥಂ ವ್ಯವಹಾರಸ್ಯ ವ್ಯವಹಾರತ್ವಮಿಷ್ಯತೇ||

ಮಹಾರಾಜ! ವ್ಯವಹಾರ ಎನ್ನುವುದು ಧರ್ಮದ ಇನ್ನೊಂದು ಹೆಸರು. ಜಾಗರೂಕನಾಗಿರುವ ಮನುಷ್ಯನ ಧರ್ಮಕ್ಕೆ ಸ್ವಲ್ಪವೂ ಲೋಪವುಂಟಾಗದೇ ಇರಲು ದಂಡದ ಅವಶ್ಯಕತೆಯಿದೆ. ಆದುದರಿಂದ ದಂಡವು ಧರ್ಮ ವ್ಯವಹಾರದ ವ್ಯವಹಾರತ್ವವಾಗಿದೆ.

12121010a ಅಪಿ ಚೈತತ್ಪುರಾ ರಾಜನ್ಮನುನಾ ಪ್ರೋಕ್ತಮಾದಿತಃ|

12121010c ಸುಪ್ರಣೀತೇನ ದಂಡೇನ ಪ್ರಿಯಾಪ್ರಿಯಸಮಾತ್ಮನಾ|

12121010e ಪ್ರಜಾ ರಕ್ಷತಿ ಯಃ ಸಮ್ಯಗ್ಧರ್ಮ ಏವ ಸ ಕೇವಲಃ||

ರಾಜನ್! ಹಿಂದೆ ಮನುವು ಇದನ್ನೇ ಸಂಪೂರ್ಣವಾಗಿ ಹೇಳಿದ್ದನು. “ಪ್ರಿಯರನ್ನೂ ಅಪ್ರಿಯರನ್ನೂ ಸಮನಾಗಿ ಕಾಣುತ್ತಾ ಪಕ್ಷಪಾತವಿಲ್ಲದೇ ದಂಡನೀತಿಯನ್ನು ಚೆನ್ನಾಗಿ ಪ್ರಯೋಗಿಸುತ್ತಾ ಪ್ರಜೆಗಳ ರಕ್ಷಣೆಯನ್ನು ಮಾಡುವುದೇ ಶ್ರೇಷ್ಠವಾದ ರಾಜಧರ್ಮ”.

12121011a ಅಥೋಕ್ತಮೇತದ್ವಚನಂ ಪ್ರಾಗೇವ ಮನುನಾ ಪುರಾ|

12121011c ಜನ್ಮ ಚೋಕ್ತಂ ವಸಿಷ್ಠೇನ ಬ್ರಹ್ಮಣೋ ವಚನಂ ಮಹತ್||

ಈ ಮಾತನ್ನು ಈಗಾಗಲೇ ಹಿಂದೆ ಮನುವು ಹೇಳಿದ್ದನು. ಈ ಮಾತನ್ನು ಬ್ರಹ್ಮನು ವಸಿಷ್ಠನು ಹುಟ್ಟಿದಾಗಲೂ ಹೇಳಿದ್ದನು.

12121012a ಪ್ರಾಗಿದಂ ವಚನಂ ಪ್ರೋಕ್ತಮತಃ ಪ್ರಾಗ್ವಚನಂ ವಿದುಃ|

12121012c ವ್ಯವಹಾರಸ್ಯ ಚಾಖ್ಯಾನಾದ್ವ್ಯವಹಾರ ಇಹೋಚ್ಯತೇ||

ಹಿಂದಿನ ಮಾತುಗಳನ್ನು ತಿಳಿದವರು ಇದನ್ನು ಪ್ರಾಗ್ವಚನ ಎಂದು ಹೇಳುತ್ತಾರೆ. ಧರ್ಮದ ಪ್ರತಿಪಾದನೆಯಾಗಿರುವುದರಿಂದ ಇದನ್ನು ವ್ಯವಹಾರ ಎಂದೇ ಕರೆಯುತ್ತಾರೆ.

12121013a ದಂಡಾತ್ತ್ರಿವರ್ಗಃ ಸತತಂ ಸುಪ್ರಣೀತಾತ್ ಪ್ರವರ್ತತೇ|

12121013c ದೈವಂ ಹಿ ಪರಮೋ ದಂಡೋ ರೂಪತೋಽಗ್ನಿರಿವೋಚ್ಚಿಖಃ||

ಚೆನ್ನಾಗಿ ಪ್ರಯೋಗಿಸಿದ್ದೇ ಆದರೆ ದಂಡದಿಂದ ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳೂ ಸತತವಾಗಿ ಸಿದ್ಧಿಸುತ್ತವೆ. ಏಕೆಂದರೆ ದಂಡವು ಒಂದು ಪರಮ ದೇವತೆ. ಅಗ್ನಿಯ ತೇಜಸ್ಸಿಗೆ ಸಮಾನವಾದ ತೇಜೋರೂಪದಿಂದ ದಂಡವು ಪ್ರಕಟವಾಗುತ್ತದೆ.

12121014a ನೀಲೋತ್ಪಲದಲಶ್ಯಾಮಶ್ಚತುರ್ದಂಷ್ಟ್ರಶ್ಚತುರ್ಭುಜಃ|

12121014c ಅಷ್ಟಪಾನ್ನೈಕನಯನಃ ಶಂಕುಕರ್ಣೋರ್ಧ್ವರೋಮವಾನ್||

ದಂಡಪುರುಷನು ನೀಲಕಮಲದಂತೆ ಶ್ಯಾಮಲವರ್ಣದವನು. ಅವನಿಗೆ ನಾಲ್ಕು ಕೋರೆದಾಡೆಗಳೂ ನಾಲ್ಕು ಭುಜಗಳೂ ಇವೆ. ಎಂಟು ಕಾಲುಗಳೂ ಅನೇಕ ಕಣ್ಣುಗಳೂ ಇವೆ. ತೀಕ್ಷ್ಣವಾದ ಕಿವಿಗಳಿವೆ. ಶರೀರದ ರೋಮಗಳು ಊರ್ಧ್ವಮುಖವಾಗಿವೆ.

12121015a ಜಟೀ ದ್ವಿಜಿಹ್ವಸ್ತಾಮ್ರಾಸ್ಯೋ ಮೃಗರಾಜತನುಚ್ಚದಃ|

12121015c ಏತದ್ರೂಪಂ ಬಿಭರ್ತ್ಯುಗ್ರಂ ದಂಡೋ ನಿತ್ಯಂ ದುರಾವರಃ||

ಜಟೆಯನ್ನು ಧರಿಸಿರುವ ಅವನಿಗೆ ಎರಡು ನಾಲಿಗೆಗಳಿವೆ. ಮುಖವು ಕೆಂಪಾಗಿದೆ. ಮೃಗರಾಜ ಸಿಂಹದ ಚರ್ಮವನ್ನು ಹೊದೆದುಕೊಂಡಿದ್ದಾನೆ. ದುರ್ದರ್ಷ ದಂಡನು ಹೀಗೆ ನಿತ್ಯವೂ ಭಯಂಕರ ಉಗ್ರರೂಪವನ್ನೇ ಧರಿಸಿರುತ್ತಾನೆ.

12121016a ಅಸಿರ್ಗದಾ ಧನುಃ ಶಕ್ತಿಸ್ತ್ರಿಶೂಲಂ ಮುದ್ಗರಃ ಶರಃ|

12121016c ಮುಸಲಂ ಪರಶುಶ್ಚಕ್ರಂ ಪ್ರಾಸೋ ದಂಡರ್ಷ್ಟಿತೋಮರಾಃ||

12121017a ಸರ್ವಪ್ರಹರಣೀಯಾನಿ ಸಂತಿ ಯಾನೀಹ ಕಾನಿ ಚಿತ್|

12121017c ದಂಡ ಏವ ಹಿ ಸರ್ವಾತ್ಮಾ ಲೋಕೇ ಚರತಿ ಮೂರ್ತಿಮಾನ್||

ಖಡ್ಗ, ಧನುಸ್ಸು, ಗದೆ, ಶಕ್ತಿ, ತ್ರಿಶೂಲ, ಮುದ್ಗರ, ಶರ, ಮುಸಲ, ಪರಶು, ಚಕ್ರ, ಪ್ರಾಸ, ದಂಡ, ಋಷ್ಟಿ, ತೋಮರ - ಈ ಎಲ್ಲ ಪ್ರಹಾರಯುಕ್ತ ಅಸ್ತ್ರ-ಶಸ್ತ್ರಗಳಲ್ಲಿ ಮೂರ್ತಿಮತ್ತಾಗಿ ಸರ್ವಾತ್ಮ ದಂಡನು ಲೋಕದಲ್ಲಿ ಸಂಚರಿಸುತ್ತಿರುತ್ತಾನೆ.

12121018a ಭಿಂದಂಶ್ಚಿಂದನ್ರುಜನ್ ಕೃಂತನ್ದಾರಯನ್ಪಾಟಯಂಸ್ತಥಾ|

12121018c ಘಾತಯನ್ನಭಿಧಾವಂಶ್ಚ ದಂಡ ಏವ ಚರತ್ಯುತ||

ಅಪರಾಧಿಗಳನ್ನು ಭೇದಿಸುತ್ತಾ, ತುಂಡರಿಸುತ್ತಾ, ಪೀಡಿಸುತ್ತಾ, ಕತ್ತರಿಸುತ್ತಾ, ಸೀಳುತ್ತಾ, ಅಪ್ಪಳಿಸುತ್ತಾ, ಸಂಹರಿಸುತ್ತಾ, ಮತ್ತು ಓಡಿಸುತ್ತಾ ದಂಡವು ಸರ್ವತ್ರ ಸಂಚರಿಸುತ್ತಿರುತ್ತದೆ.

12121019a ಅಸಿರ್ವಿಶಸನೋ ಧರ್ಮಸ್ತೀಕ್ಷ್ಣವರ್ತ್ಮಾ ದುರಾಸದಃ[3]|

12121019c ಶ್ರೀಗರ್ಭೋ ವಿಜಯಃ ಶಾಸ್ತಾ ವ್ಯವಹಾರಃ ಪ್ರಜಾಗರಃ||

12121020a ಶಾಸ್ತ್ರಂ ಬ್ರಾಹ್ಮಣಮಂತ್ರಶ್ಚ ಶಾಸ್ತಾ ಪ್ರಾಗ್ವಚನಂ ಗತಃ[4]|

12121020c ಧರ್ಮಪಾಲೋಽಕ್ಷರೋ ದೇವಃ ಸತ್ಯಗೋ ನಿತ್ಯಗೋ ಗ್ರಹಃ||

12121021a ಅಸಂಗೋ ರುದ್ರತನಯೋ ಮನುಜ್ಯೇಷ್ಠಃ ಶಿವಂಕರಃ|

12121021c ನಾಮಾನ್ಯೇತಾನಿ ದಂಡಸ್ಯ ಕೀರ್ತಿತಾನಿ ಯುಧಿಷ್ಠಿರ||

ಯುಧಿಷ್ಠಿರ! ಅಸಿ, ವಿಶಸನ, ಧರ್ಮ, ತೀಕ್ಷ್ಣವರ್ತ್ಮಾ, ದುರಾಸದ, ಶ್ರೀಗರ್ಭ, ವಿಜಯ, ಶಾಸ್ತಾ, ವ್ಯವಹಾರ, ಪ್ರಜಾಗರ, ಶಾಸ್ತ್ರ, ಬ್ರಾಹ್ಮಣ, ಮಂತ್ರ, ಶಾಸ್ತಾ, ಪ್ರಾಗ್ವಚನ, ಧರ್ಮಪಾಲ, ಅಕ್ಷರ, ದೇವ, ಸತ್ಯಗ, ನಿತ್ಯಗ, ಗ್ರಹ, ಅಸಂಗ, ರುದ್ರತನಯ, ಮನುಜ್ಯೇಷ್ಠ, ಶಿವಂಕರ – ಈ ನಾಮಗಳಿಂದ ದಂಡನು ಕೀರ್ತಿತನಾಗಿದ್ದಾನೆ.

12121022a ದಂಡೋ ಹಿ ಭಗವಾನ್ವಿಷ್ಣುರ್ಯಜ್ಞೋ[5] ನಾರಾಯಣಃ ಪ್ರಭುಃ|

12121022c ಶಶ್ವದ್ರೂಪಂ ಮಹದ್ಬಿಭ್ರನ್ಮಹಾಪುರುಷ ಉಚ್ಯತೇ||

ದಂಡವು ಭಗವಾನ್ ವಿಷ್ಣು, ಯಜ್ಞ ಮತ್ತು ಪ್ರಭು ನಾರಾಯಣ. ಅವನನ್ನು ಶಾಶ್ವತರೂಪ, ಮಹಾತೇಜಸ್ವೀ, ಮಹಾಪುರುಷ ಎಂದೂ ಕರೆಯುತ್ತಾರೆ.

12121023a ಯಥೋಕ್ತಾ ಬ್ರಹ್ಮಕನ್ಯೇತಿ ಲಕ್ಷ್ಮೀರ್ನೀತಿಃ ಸರಸ್ವತೀ|

12121023c ದಂಡನೀತಿರ್ಜಗದ್ಧಾತ್ರೀ ದಂಡೋ ಹಿ ಬಹುವಿಗ್ರಹಃ||

ಹಾಗೆಯೇ ದಂಡನೀತಿಯು ಬ್ರಹ್ಮಕನ್ಯೆಯೆಂದೂ, ಲಕ್ಷ್ಮೀ, ನೀತಿ, ಸರಸ್ವತಿ, ಜಗದ್ಧಾತ್ರಿಯೆಂದೂ ಕರೆಯುತ್ತಾರೆ. ಹೀಗೆ ದಂಡಕ್ಕೆ ಅನೇಕ ರೂಪಗಳಿವೆ.

12121024a ಅರ್ಥಾನರ್ಥೌ ಸುಖಂ ದುಃಖಂ ಧರ್ಮಾಧರ್ಮೌ ಬಲಾಬಲೇ|

12121024c ದೌರ್ಭಾಗ್ಯಂ ಭಾಗಧೇಯಂ ಚ ಪುಣ್ಯಾಪುಣ್ಯೇ ಗುಣಾಗುಣೌ||

12121025a ಕಾಮಾಕಾಮಾವೃತುರ್ಮಾಸಃ ಶರ್ವರೀ ದಿವಸಃ ಕ್ಷಣಃ|

12121025c ಅಪ್ರಸಾದಃ ಪ್ರಸಾದಶ್ಚ ಹರ್ಷಃ ಕ್ರೋಧಃ ಶಮೋ ದಮಃ||

12121026a ದೈವಂ ಪುರುಷಕಾರಶ್ಚ ಮೋಕ್ಷಾಮೋಕ್ಷೌ ಭಯಾಭಯೇ|

12121026c ಹಿಂಸಾಹಿಂಸೇ ತಪೋ ಯಜ್ಞಃ ಸಂಯಮೋಽಥ ವಿಷಾವಿಷಮ್||

12121027a ಅಂತಶ್ಚಾದಿಶ್ಚ ಮಧ್ಯಂ ಚ ಕೃತ್ಯಾನಾಂ ಚ ಪ್ರಪಂಚನಮ್|

12121027c ಮದಃ ಪ್ರಮಾದೋ ದರ್ಪಶ್ಚ ದಂಭೋ ಧೈರ್ಯಂ ನಯಾನಯೌ||

12121028a ಅಶಕ್ತಿಃ ಶಕ್ತಿರಿತ್ಯೇವ ಮಾನಸ್ತಂಭೌ ವ್ಯಯಾವ್ಯಯೌ|

12121028c ವಿನಯಶ್ಚ ವಿಸರ್ಗಶ್ಚ ಕಾಲಾಕಾಲೌ ಚ ಭಾರತ||

12121029a ಅನೃತಂ ಜ್ಞಾಜ್ಞತಾ ಸತ್ಯಂ ಶ್ರದ್ಧಾಶ್ರದ್ಧೇ ತಥೈವ ಚ|

12121029c ಕ್ಲೀಬತಾ ವ್ಯವಸಾಯಶ್ಚ ಲಾಭಾಲಾಭೌ ಜಯಾಜಯೌ||

12121030a ತೀಕ್ಷ್ಣತಾ ಮೃದುತಾ ಮೃತ್ಯುರಾಗಮಾನಾಗಮೌ ತಥಾ|

12121030c ವಿರಾದ್ಧಿಶ್ಚೈವ ರಾದ್ಧಿಶ್ಚ ಕಾರ್ಯಾಕಾರ್ಯೇ ಬಲಾಬಲೇ||

12121031a ಅಸೂಯಾ ಚಾನಸೂಯಾ ಚ ಧರ್ಮಾಧರ್ಮೌ ತಥೈವ ಚ|

12121031c ಅಪತ್ರಪಾನಪತ್ರಪೇ ಹ್ರೀಶ್ಚ ಸಂಪದ್ವಿಪಚ್ಚ ಹ||

12121032a ತೇಜಃ ಕರ್ಮಣಿ ಪಾಂಡಿತ್ಯಂ ವಾಕ್ಶಕ್ತಿಸ್ತತ್ತ್ವಬುದ್ಧಿತಾ|

12121032c ಏವಂ ದಂಡಸ್ಯ ಕೌರವ್ಯ ಲೋಕೇಽಸ್ಮಿನ್ಬಹುರೂಪತಾ||

ಕೌರವ್ಯ! ಅರ್ಥ-ಅನರ್ಥ, ಸುಖ-ದುಃಖ, ಧರ್ಮ-ಅಧರ್ಮ, ಬಲ-ಅಬಲ, ದೌರ್ಭಾಗ್ಯ-ಸೌಭಾಗ್ಯ, ಪುಣ್ಯ-ಪಾಪ, ಗುಣ-ಅವಗುಣ, ಕಾಮ-ಅಕಾಮ, ಋತು-ಮಾಸ, ದಿನ-ರಾತ್ರಿ, ಕ್ಷಣ, ಪ್ರಮಾದ-ಅಪ್ರಮಾದ, ಹರ್ಷ-ಕ್ರೋಧ, ಶಮ-ದಮ, ದೈವ-ಪುರುಷಕಾರ, ಬಂಧ-ಮೋಕ್ಷ, ಭಯ-ಅಭಯ, ಹಿಂಸೆ-ಅಹಿಂಸೆ, ತಪಸ್ಸು-ಯಜ್ಞ, ಸಂಯಮ, ವಿಷ-ಅವಿಷ, ಆದಿ-ಅಂತ-ಮಧ್ಯ, ಕಾರ್ಯವಿಸ್ತಾರ, ಮದ, ಅಸಾವಧಾನತೆ, ದರ್ಪ, ದಂಭ, ಧೈರ್ಯ, ನೀತಿ-ಅನೀತಿ, ಶಕ್ತಿ-ಅಶಕ್ತಿ, ಮಾನ, ಸ್ತಬ್ಧತೆ, ವ್ಯಯ-ಅವ್ಯಯ, ವಿನಯ, ದಾನ, ಕಾಲ-ಅಕಾಲ, ಸತ್ಯ-ಅಸತ್ಯ, ಜ್ಞಾನ, ಶ್ರದ್ಧೆ-ಅಶ್ರದ್ಧೆ, ಅಕರ್ಮಣ್ಯತೆ-ಉದ್ಯೋಗ, ಲಾಭ-ಹಾನಿ, ಜಯ-ಪರಾಜಯ, ತೀಕ್ಷ್ಣತೆ-ಮೃದುತ್ವ, ಮೃತ್ಯು, ಆಗಮ-ಅನಾಗಮ, ವಿರೋಧ-ಅವಿರೋಧ, ಕರ್ತ್ಯವ್ಯ-ಅಕರ್ತವ್ಯ, ಸಬಲತೆ-ನಿರ್ಬಲತೆ, ಅಸೂಯೆ-ಅನಸೂಯತೆ, ಧರ್ಮ-ಅಧರ್ಮ, ಲಜ್ಜೆ-ನಿರ್ಲಜ್ಜೆ, ಸಂಪತ್ತಿ-ವಿಪತ್ತಿ, ಸ್ಥಾನ, ತೇಜಸ್ಸು, ಕರ್ಮ, ಪಾಂಡಿತ್ಯ, ವಾಕ್ಶಕ್ತಿ ಮತ್ತುತ ತ್ತ್ವಬೋಧೆ- ಈ  ಎಲ್ಲವೂ ದಂಡದ ಅನೇಕ ನಾಮಧೇಯಗಳೂ ರೂಪಗಳೂ ಆಗಿವೆ. ಹೀಗೆ ದಂಡಕ್ಕೆ ವಿಶ್ವದಲ್ಲಿ ಬಹುರೂಪಗಳಿವೆ.

12121033a ನ ಸ್ಯಾದ್ಯದೀಹ ದಂಡೋ ವೈ ಪ್ರಮಥೇಯುಃ ಪರಸ್ಪರಮ್|

12121033c ಭಯಾದ್ದಂಡಸ್ಯ ಚಾನ್ಯೋನ್ಯಂ ಘ್ನಂತಿ ನೈವ[6] ಯುಧಿಷ್ಠಿರ||

ಯುಧಿಷ್ಠಿರ! ಈ ದಂಡವಿಲ್ಲದಿದ್ದಿದ್ದರೆ ಪರಸ್ಪರ ಧ್ವಂಸಮಾಡುತ್ತಿದ್ದರು. ದಂಡದ ಭಯದ ಕಾರಣದಿಂದ ಮಾತ್ರ ಅನ್ಯೋನ್ಯರನ್ನು ಸಂಹರಿಸುತ್ತಿಲ್ಲ.

12121034a ದಂಡೇನ ರಕ್ಷ್ಯಮಾಣಾ ಹಿ ರಾಜನ್ನಹರಹಃ ಪ್ರಜಾಃ|

12121034c ರಾಜಾನಂ ವರ್ಧಯಂತೀಹ ತಸ್ಮಾದ್ದಂಡಃ ಪರಾಯಣಮ್||

ರಾಜನ್! ದಂಡದಿಂದ ರಕ್ಷಿಸಲ್ಪಟ್ಟ ಪ್ರಜೆಗಳು ನಿತ್ಯವೂ ರಾಜನನ್ನು ವರ್ಧಿಸುತ್ತಾರೆ. ಆದುದರಿಂದ ದಂಡವೇ ಎಲ್ಲರಿಗೂ ಆಶ್ರಯಭೂತವಾಗಿದೆ.

12121035a ವ್ಯವಸ್ಥಾಪಯತಿ ಕ್ಷಿಪ್ರಮಿಮಂ ಲೋಕಂ ನರೇಶ್ವರ|

12121035c ಸತ್ಯೇ ವ್ಯವಸ್ಥಿತೋ ಧರ್ಮೋ ಬ್ರಾಹ್ಮಣೇಷ್ವವತಿಷ್ಠತೇ||

ನರೇಶ್ವರ! ದಂಡವೇ ಈ ಲೋಕವನ್ನು ಕ್ಷಿಪ್ರವಾಗಿ ಸತ್ಯದಲ್ಲಿ[7] ಪ್ರತಿಷ್ಠಾಪಿಸುತ್ತದೆ. ಸತ್ಯದಲ್ಲಿ ಧರ್ಮವು ಸುವ್ಯವಸ್ಥಿತವಾಗಿದೆ. ಅಂಥಹ ಧರ್ಮವು ಬ್ರಾಹ್ಮಣರಲ್ಲಿ ಪ್ರತಿಷ್ಠಿತವಾಗಿದೆ.

12121036a ಧರ್ಮಯುಕ್ತಾ ದ್ವಿಜಾಃ ಶ್ರೇಷ್ಠಾ ವೇದಯುಕ್ತಾ ಭವಂತಿ ಚ|

12121036c ಬಭೂವ ಯಜ್ಞೋ ವೇದೇಭ್ಯೋ ಯಜ್ಞಃ ಪ್ರೀಣಾತಿ ದೇವತಾಃ||

12121037a ಪ್ರೀತಾಶ್ಚ ದೇವತಾ ನಿತ್ಯಮಿಂದ್ರೇ ಪರಿದದತ್ಯುತ|

12121037c ಅನ್ನಂ ದದಾತಿ ಶಕ್ರಶ್ಚಾಪ್ಯನುಗೃಹ್ಣನ್ನಿಮಾಃ ಪ್ರಜಾಃ||

12121038a ಪ್ರಾಣಾಶ್ಚ ಸರ್ವಭೂತಾನಾಂ ನಿತ್ಯಮನ್ನೇ ಪ್ರತಿಷ್ಠಿತಾಃ|

12121038c ತಸ್ಮಾತ್ ಪ್ರಜಾಃ ಪ್ರತಿಷ್ಠಂತೇ ದಂಡೋ ಜಾಗರ್ತಿ ತಾಸು ಚ||

ದಂಡದ ಪ್ರಭಾವದಿಂದಲೇ ದ್ವಿಜರು ಧರ್ಮಯುಕ್ತರೂ ಶ್ರೇಷ್ಠ ವೇದಯುಕ್ತರೂ ಆಗುತ್ತಾರೆ. ವೇದಗಳಿಂದ ಯಜ್ಞಗಳಾಗುವವು ಮತ್ತು ಯಜ್ಞವು ದೇವತೆಗಳನ್ನು ಪ್ರೀತಗೊಳಿಸುತ್ತವೆ. ಪ್ರೀತರಾದ ದೇವತೆಗಳು ನಿತ್ಯವೂ ಇಂದ್ರನನ್ನು ಮಳೆಸುರಿಸು ಎಂದು ಹೇಳುತ್ತಿರುತ್ತಾರೆ. ಶಕ್ರನು ಈ ಪ್ರಜೆಗಳಿಗೆ ಅನ್ನವನ್ನಿತ್ತು ಅನುಗ್ರಹಿಸುತ್ತಾನೆ. ಸರ್ವಭೂತಗಳ ಪ್ರಾಣಗಳೂ ನಿತ್ಯವೂ ಅನ್ನವನ್ನೇ ಅವಲಂಬಿಸಿವೆ. ಆದುದರಿಂದ ಪ್ರಜೆಗಳ ರಕ್ಷಣೆಗಾಗಿ ಸದಾ ದಂಡವು ಎಚ್ಚೆತ್ತಿರುತ್ತದೆ.

12121039a ಏವಂಪ್ರಯೋಜನಶ್ಚೈವ ದಂಡಃ ಕ್ಷತ್ರಿಯತಾಂ ಗತಃ|

12121039c ರಕ್ಷನ್ ಪ್ರಜಾಃ ಪ್ರಜಾಗರ್ತಿ ನಿತ್ಯಂ ಸುವಿಹಿತೋಽಕ್ಷರಃ||

ಹೀಗೆ ಪ್ರಯೋಜನಕಾರಿಯಾದ ದಂಡವು ಕ್ಷತ್ರಿಯತ್ವವನ್ನು ಪಡೆದುಕೊಂಡಿತು. ಅವಿನಾಶಿಯಾಗಿರುವ ಕಾರಣದಿಂದ ಅದು ಸರ್ವಕಾಲದಲ್ಲಿಯೂ ಸಾವಧಾನದಿಂದಿರುತ್ತದೆ. ಎಚ್ಚರದಿಂದಿದ್ದು ಪ್ರಜೆಗಳನ್ನು ರಕ್ಷಿಸುತ್ತಿರುತ್ತದೆ.

12121040a ಈಶ್ವರಃ ಪುರುಷಃ ಪ್ರಾಣಃ ಸತ್ತ್ವಂ ವಿತ್ತಂ[8] ಪ್ರಜಾಪತಿಃ|

12121040c ಭೂತಾತ್ಮಾ ಜೀವ ಇತ್ಯೇವ ನಾಮಭಿಃ ಪ್ರೋಚ್ಯತೇಽಷ್ಟಭಿಃ||

ದಂಡವು ಈಶ್ವರ, ಪುರುಷ, ಪ್ರಾಣ, ಸತ್ತ್ವ, ವಿತ್ತ, ಪ್ರಜಾಪತಿ, ಭೂತಾತ್ಮಾ, ಮತ್ತು ಜೀವ ಎಂಬ ಈ ಎಂಟು ಹೆಸರುಗಳಿಂದಲೂ ಕರೆಯಲ್ಪಡುತ್ತದೆ.

12121041a ಅದದದ್ದಂಡ ಏವಾಸ್ಮೈ ಧ್ರುವಮೈಶ್ವರ್ಯಮೇವ ಚ|

12121041c ಬಲೇ ನಯಶ್ಚ ಸಂಯುಕ್ತಃ ಸದಾ ಪಂಚವಿಧಾತ್ಮಕಃ||

ಸದಾ ಬಲ, ಪಂಚವಿಧಾತ್ಮಕ[9] ನ್ಯಾಯ ಮತ್ತು ಐಶ್ವರ್ಯವು ನಿಶ್ಚಿತವಾಗಿರುವವೋ ಅವನಿಗೇ[10] ದಂಡವನ್ನು ಕೊಡಲಾಯಿತು.

12121042a ಕುಲಬಾಹುಧನಾಮಾತ್ಯಾಃ[11] ಪ್ರಜ್ಞಾ ಚೋಕ್ತಾ ಬಲಾನಿ ಚ|

12121042c ಆಹಾರ್ಯಂ ಚಾಷ್ಟಕೈರ್ದ್ರವ್ಯೈರ್ಬಲಮನ್ಯದ್ಯುಧಿಷ್ಠಿರ||

ಯುಧಿಷ್ಠಿರ! ಉತ್ತಮ ಕುಲ, ಬಾಹುಬಲ, ಧನ, ಅಮಾತ್ಯರು ಮತ್ತು ಪ್ರಜ್ಞೆ ಇವುಗಳನ್ನೇ ಬಲಗಳೆಂದು[12] ಹೇಳುತ್ತಾರೆ. ಆಹಾರ್ಯ ಬಲವು ಎಂಟು ದ್ರವ್ಯಗಳಿಂದ ಕೂಡಿರುತ್ತದೆ.

12121043a ಹಸ್ತಿನೋಽಶ್ವಾ ರಥಾಃ ಪತ್ತಿರ್ನಾವೋ ವಿಷ್ಟಿಸ್ತಥೈವ ಚ|

12121043c ದೈಶಿಕಾಶ್ಚಾರಕಾಶ್ಚೈವ ತದಷ್ಟಾಂಗಂ ಬಲಂ ಸ್ಮೃತಮ್||

ಆನೆಗಳು, ಕುದುರೆಗಳು, ರಥಗಳು, ಕಾಲಾಳು, ನೌಕೆ, ಸಶ್ರಮ ಶಿಕ್ಷೆಗೆ ಗುರಿಯಾಗಿ ಕೆಲಸಮಾಡುವವರು, ದೇಶದ ಪ್ರಜೆಗಳು, ಕುರಿಯೇ ಮೊದಲಾದ ಪ್ರಾಣಿಗಳು – ಇವು ಅಷ್ಟಾಂಗ ಬಲಗಳು[13].

12121044a ಅಷ್ಟಾಂಗಸ್ಯ ತು ಯುಕ್ತಸ್ಯ ಹಸ್ತಿನೋ ಹಸ್ತಿಯಾಯಿನಃ|

12121044c ಅಶ್ವಾರೋಹಾಃ ಪದಾತಾಶ್ಚ ಮಂತ್ರಿಣೋ ರಸದಾಶ್ಚ ಯೇ||

12121045a ಭಿಕ್ಷುಕಾಃ ಪ್ರಾಡ್ವಿವಾಕಾಶ್ಚ ಮೌಹೂರ್ತಾ ದೈವಚಿಂತಕಾಃ|

12121045c ಕೋಶೋ ಮಿತ್ರಾಣಿ ಧಾನ್ಯಂ ಚ ಸರ್ವೋಪಕರಣಾನಿ ಚ||

12121046a ಸಪ್ತಪ್ರಕೃತಿ ಚಾಷ್ಟಾಂಗಂ ಶರೀರಮಿಹ ಯದ್ವಿದುಃ|

12121046c ರಾಜ್ಯಸ್ಯ ದಂಡ ಏವಾಂಗಂ ದಂಡಃ ಪ್ರಭವ ಏವ ಚ||

ರಥಿಕರು, ಗಜಾರೋಹಿಗಳು, ಅಶ್ವಾರೋಹಿಗಳು, ಪದಾತಿಗಳಿಂದೊಡಗೂಡಿದ ಸುಸಜ್ಜಿತ ಸೈನ್ಯ, ಮಂತ್ರಿಗಳು, ವೈದ್ಯರು, ಭಿಕ್ಷುಕರು, ನ್ಯಾಯವಾದಿಗಳು ಜ್ಯೋತಿಷಿಗಳು, ದೈವಜ್ಞರು, ಕೋಷ, ಮಿತ್ರರು, ಧಾನ್ಯ, ಸಕಲವಿಧದ ಉಪಕರಣಗಳು, ಸ್ವಾಮೀ-ಅಮಾತ್ಯ-ಸುಹೃತ್-ಕೋಶ-ರಾಷ್ಟ್ರ-ದುರ್ಗ-ಸೈನ್ಯ ಈ ಸಪ್ತ ಪ್ರಕೃತಿಗಳು, ಮೇಲೆ ಹೇಳೀದ ಅಷ್ಟಾಂಗಯುಕ್ತವಾದ ಸೇನೆ ಇವೆಲ್ಲವುಗಳನ್ನೂ ಸೇರಿಸಿ ರಾಜ್ಯದ ಶರೀರ ಎನ್ನುತ್ತಾರೆ. ಇವೆಲ್ಲವಕ್ಕೂ ಪ್ರಧಾನ ಅಂಗವೇ ದಂಡ. ಏಕೆಂದರೆ ಇವೆಲ್ಲವುಗಳ ಕಾರಣವೂ ದಂಡವೇ ಆಗಿರುವುದು.

12121047a ಈಶ್ವರೇಣ ಪ್ರಯತ್ನೇನ ಧಾರಣೇ ಕ್ಷತ್ರಿಯಸ್ಯ ಹಿ|

12121047c ದಂಡೋ ದತ್ತಃ ಸಮಾನಾತ್ಮಾ ದಂಡೋ ಹೀದಂ ಸನಾತನಮ್||

ಈಶ್ವರನು ಪ್ರಯತ್ನಪೂರ್ವಕವಾಗಿ ಧರ್ಮರಕ್ಷಣಾರ್ಥವಗಿ ಕ್ಷತ್ರಿಯನ ಕೈಯಲ್ಲಿ ಅವನದೇ ಜಾತಿಯ ದಂಡವನ್ನು ಕೊಟ್ಟಿದ್ದಾನೆ. ಆದುದರಿಂದ ದಂಡವು ಸನಾತನವಾದುದು.

12121047e ರಾಜ್ಞಾಂ ಪೂಜ್ಯತಮೋ ನಾನ್ಯೋ ಯಥಾಧರ್ಮಪ್ರದರ್ಶನಃ|

12121048a ಬ್ರಹ್ಮಣಾ ಲೋಕರಕ್ಷಾರ್ಥಂ ಸ್ವಧರ್ಮಸ್ಥಾಪನಾಯ ಚ||

ಲೋಕರಕ್ಷಣೆಗಾಗಿ ಮತ್ತು ಧರ್ಮಸ್ಥಾಪನೆಗಾಗಿ ಬ್ರಹ್ಮನು ತೋರಿಸಿಕೊಟ್ಟ ಧರ್ಮವೇ ದಂಡ. ರಾಜನಾದವನಿಗೆ ಇದಕ್ಕಿಂತಲೂ ಪೂಜ್ಯವಾದುದು ಬೇರೊಂದಿಲ್ಲ.

12121048c ಭರ್ತೃಪ್ರತ್ಯಯ ಉತ್ಪನ್ನೋ ವ್ಯವಹಾರಸ್ತಥಾಪರಃ|

12121048e ತಸ್ಮಾದ್ಯಃ ಸಹಿತೋ ದೃಷ್ಟೋ ಭರ್ತೃಪ್ರತ್ಯಯಲಕ್ಷಣಃ||

ಸ್ವಾಮಿಯ ಮೇಲಿನ ವಿಶ್ವಾಸದಿಂದ ಉತ್ಪನ್ನವಾಗುವ ಧರ್ಮವು ವಾದಿ-ಪ್ರತಿವಾದಿಗಳ ವ್ಯವಹಾರಕ್ಕಿಂತಲೂ ಭಿನ್ನವಾದುದು. ಭ್ರರ್ತೃಪ್ರತ್ಯಯಲಕ್ಷಣವೆಂಬ ಈ ವ್ಯವಹಾರವು ಸಂಪೂರ್ಣ ಜಗತ್ತಿಗೂ ಹಿತಕರವಾದುದು[14].

12121049a ವ್ಯವಹಾರಸ್ತು ವೇದಾತ್ಮಾ ವೇದಪ್ರತ್ಯಯ ಉಚ್ಯತೇ|

12121049c ಮೌಲಶ್ಚ ನರಶಾರ್ದೂಲ ಶಾಸ್ತ್ರೋಕ್ತಶ್ಚ ತಥಾಪರಃ||

ನರಶರ್ದೂಲ! ವೇದವೇ ಆತ್ಮವಾಗುಳ್ಳ ವ್ಯವಹಾರವು ಪ್ರತ್ಯಯವ್ಯವಹಾರವೆಂದು ಹೇಳಲ್ಪಟ್ಟಿದೆ. “ಮೌಲ[15]” ಎಂಬ ಶಾಸ್ತ್ರೋಕ್ತವಾದ ಇನ್ನೊಂದು ವ್ಯವಹಾರವೂ ಇರುವುದು.

12121050a ಉಕ್ತೋ ಯಶ್ಚಾಪಿ ದಂಡೋಽಸೌ ಭರ್ತೃಪ್ರತ್ಯಯಲಕ್ಷಣಃ|

12121050c ಜ್ಞೇಯೋ ನ ಸ ನರೇಂದ್ರಸ್ಥೋ ದಂಡಪ್ರತ್ಯಯ ಏವ ಚ||

ಹಿಂದೆ ಹೇಳಿದ ಭರ್ತೃಪ್ರತ್ಯಯಲಕ್ಷಣವೆಂಬ ದಂಡವು ನಮ್ಮಂತರ ನರೇಂದ್ರರಲ್ಲಿಯೇ ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ದಂಡ ಮತ್ತು ವಿಶ್ವಾಸ ಇವೆರಡೂ ರಾಜನನ್ನೇ ಅವಲಂಬಿಸಿವೆ.

12121051a ದಂಡಪ್ರತ್ಯಯದೃಷ್ಟೋಽಪಿ ವ್ಯವಹಾರಾತ್ಮಕಃ ಸ್ಮೃತಃ|

12121051c ವ್ಯವಹಾರಃ ಸ್ಮೃತೋ ಯಶ್ಚ ಸ ವೇದವಿಷಯಾತ್ಮಕಃ||

ದಂಡಪ್ರತ್ಯಯವನ್ನು ವ್ಯವಹಾರಾತ್ಮಕವೆಂದು ಹೇಳಲಾಗಿದೆ. ವೇದವಿಷಯಾತ್ಮಕವಾಗಿರುವುದರಿಂದ ಅದು ವ್ಯವಹಾರವೆಂದು ಹೇಳಲ್ಪಟ್ಟಿದೆ.

12121052a ಯಶ್ಚ ವೇದಪ್ರಸೂತಾತ್ಮಾ ಸ ಧರ್ಮೋ ಗುಣದರ್ಶಕಃ|

12121052c ಧರ್ಮಪ್ರತ್ಯಯ ಉತ್ಪನ್ನೋ[16] ಯಥಾಧರ್ಮಃ ಕೃತಾತ್ಮಭಿಃ||

ವೇದದ ಆತ್ಮದಿಂದ ಹುಟ್ಟಿರುವುದೇ ಗುಣದರ್ಶಕ ಧರ್ಮವು. ಕೃತಾತ್ಮರ ಧರ್ಮದಿಂದಲೇ ಧರ್ಮಪ್ರತ್ಯಯವು ಉತ್ಪನ್ನವಾಯಿತು.

12121053a ವ್ಯವಹಾರಃ ಪ್ರಜಾಗೋಪ್ತಾ ಬ್ರಹ್ಮದಿಷ್ಟೋ ಯುಧಿಷ್ಠಿರ|

12121053c ತ್ರೀನ್ಧಾರಯತಿ ಲೋಕಾನ್ವೈ ಸತ್ಯಾತ್ಮಾ ಭೂತಿವರ್ಧನಃ||

ಯುಧಿಷ್ಠಿರ! ಬ್ರಹ್ಮನು ಉಪದೇಶಿಸಿದ ಪ್ರಜಾರಕ್ಷಣೆಯ ವ್ಯವಹಾರವು ಮೂರು ಲೋಕಗಳನ್ನೂ ಧರಿಸಿದೆ. ಏಕೆಂದರು ಅದೇ ಸತ್ಯಾತ್ಮಾ ಮತ್ತು ಲೋಕಗಳನ್ನು ಅದು ವರ್ಧಿಸುತ್ತಲೇ ಇರುತ್ತದೆ.

12121054a ಯಶ್ಚ ದಂಡಃ ಸ ದೃಷ್ಟೋ ನೋ ವ್ಯವಹಾರಃ ಸನಾತನಃ|

12121054c ವ್ಯವಹಾರಶ್ಚ ಯೋ ದೃಷ್ಟಃ ಸ ಧರ್ಮ ಇತಿ ನಃ ಶ್ರುತಃ[17]||

ನನ್ನ ಪ್ರಕಾರ ದಂಡವೆನ್ನುವುದು ಒಂದು ಸನಾತನ ವ್ಯವಹಾರವಾಗಿದೆ. ವ್ಯವಹಾರದಂತೆ ಕಾಣುವುದು ಧರ್ಮವೇ ಎಂದು ನಾನು ಕೇಳಿದ್ದೇನೆ.

12121054e ಯಶ್ಚ ವೇದಃ ಸ ವೈ ಧರ್ಮೋ ಯಶ್ಚ ಧರ್ಮಃ ಸ ಸತ್ಪಥಃ|

12121055a ಬ್ರಹ್ಮಾ ಪ್ರಜಾಪತಿಃ ಪೂರ್ವಂ ಬಭೂವಾಥ ಪಿತಾಮಹಃ||

ವೇದವೇ ಧರ್ಮ. ಧರ್ಮವೇ ಸತ್ಪಥ, ಹಿಂದೆ ಪಿತಾಮಹ ಪ್ರಜಾಪತಿ ಬ್ರಹ್ಮನೋರ್ವನೇ ಇದ್ದನು.

12121055c ಲೋಕಾನಾಂ ಸ ಹಿ ಸರ್ವೇಷಾಂ ಸಸುರಾಸುರರಕ್ಷಸಾಮ್|

12121055e ಸಮನುಷ್ಯೋರಗವತಾಂ ಕರ್ತಾ ಚೈವ ಸ ಭೂತಕೃತ್||

ಅವನೇ ಸುರಾಸುರರಾಕ್ಷರೂ ಮನುಷ್ಯ-ಉರುಗರೂ ಇರುವ ಈ ಎಲ್ಲ ಲೋಕಗಳನ್ನೂ ಮಾಡಿದನು. ಅವನೇ ಸರ್ವಭೂತಗಳ ಸೃಷ್ಟಿಕರ್ತ.

12121056a ತತೋ ನೋ ವ್ಯವಹಾರೋಽಯಂ ಭರ್ತೃಪ್ರತ್ಯಯಲಕ್ಷಣಃ|

12121056c ತಸ್ಮಾದಿದಮವೋಚಾಮ ವ್ಯವಹಾರನಿದರ್ಶನಮ್||

ಅನಂತರ ಬರ್ತೃಪ್ರತ್ಯಯಲಕ್ಷಣವೆಂಬ ನಮ್ಮ ಈ ವ್ಯವಹಾರವನ್ನು ಸೃಷ್ಟಿಸಿ ಆ ವ್ಯವಹಾರದ ನಿದರ್ಶನಾರ್ಥವಾಗಿ ಇದನ್ನು ಹೇಳಿದನು:

12121057a ಮಾತಾ ಪಿತಾ ಚ ಭ್ರಾತಾ ಚ ಭಾರ್ಯಾ ಚಾಥ ಪುರೋಹಿತಃ|

12121057c ನಾದಂಡ್ಯೋ ವಿದ್ಯತೇ ರಾಜ್ಞಾಂ ಯಃ ಸ್ವಧರ್ಮೇ ನ ತಿಷ್ಠತಿ||

“ರಾಜನಾದವನು ತನ್ನ ತಂದೆ, ತಾಯಿ, ಸೋದರ, ಭಾರ್ಯೆ, ಪುರೋಹಿತ – ಇವರಲ್ಲಿ ಯಾರೇ ಆದರೂ ಸ್ವಧರ್ಮನಿರತರಾಗಿ ಇರದಿದ್ದರೆ ಅವರನ್ನೂ ಕೂಡ ದಂಡಿಸಬೇಕು. ರಾಜನಿಗೆ ಅದಂಡ್ಯರು ಎನ್ನುವವರು ಯಾರೂ ಇಲ್ಲ.””

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ದಂಡಸ್ವರೂಪಾದಿಕಥನೇ ಏಕವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ದಂಡಸ್ವರೂಪಾದಿಕಥನ ಎನ್ನುವ ನೂರಾಇಪ್ಪತ್ತೊಂದನೇ ಅಧ್ಯಾಯವು.

Purple flowers on a white background | Stock image | Colourbox

[1] ಕಥಂ ಮೂರ್ತಿಃ ಕಥಂ ಪ್ರಭೋ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಕೋ ವರೋ ದಂಡ ಸಂಜ್ಞಿತಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ತೀಕ್ಷ್ಣವರ್ಮಾ ದುರಾಧರಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಪ್ರಾಗ್ವದತಾಂ ವರಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಭಗವಾನ್ವಿಷ್ಣುರ್ದಂಡೋ ನಾರಾಯಣಃ ಪ್ರಭುಃ| ಎಂಬ ಪಠಾಂತರವಿದೆ (ಭಾರತ ದರ್ಶನ).

[6] ಚೈವ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಸತ್ಯಯುಗದಲ್ಲಿ ಎಂದೂ ಆಗಬಹುದು. ಏಕೆಂದರೆ ಸತ್ಯಯುಗದಲ್ಲಿಯೇ ಧರ್ಮವು ಸುವ್ಯವಸ್ಥಿತವಾಗಿ ಅಂದರೆ ತನ್ನ ನಾಲ್ಕೂ ಕಾಲುಗಳ ಮೇಲೆ ನಿಲ್ಲುತ್ತಾನೆ. ಬಹುಷಃ ಸತ್ಯಯುಗವೆಂದರೆ ಎಲ್ಲ ಲೋಕಗಳಲ್ಲಿಯೂ (ಭೂಃ, ಭುವಃ, ಸುವಃ, ಮೊದಲಾದ ೧೪ ಲೋಕಗಳಲ್ಲಿಯೂ) ದಂಡ ಅಂದರೆ ಶಿಕ್ಷೆ (punishment) ಅಂದರೆ ನ್ಯಾಯ (Justice or Rule of Law) ಸಂಪೂರ್ಣವಾಗಿ ಇರುತ್ತದೆ.

[8] ಚಿತ್ತಂ ಎಂಬ ಪಠಾಂತರವಿದೆ (ಭಾರತ ದರ್ಶನ).

[9] ಧರ್ಮ, ವ್ಯವಹಾರ, ದಂಡ, ಈಶ್ವರ ಮತ್ತು ಜೀವ (ಭಾರತ ದರ್ಶನ).

[10] ರಾಜನಿಗೇ

[11] ಕುಲಂ ಬಹುಧನಾಮಾತ್ಯಾಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[12] ಬಲಗಳಲ್ಲಿ ಎರಡು ವಿಧ – ಪ್ರಾಕೃತ ಮತ್ತು ಆಹಾರ್ಯ. ಕುಲ, ಬಲ, ಧನ, ಅಮಾತ್ಯರು ಮತ್ತು ಪ್ರಜ್ಞೆ ಇವು ಪ್ರಾಕೃತ ಬಲಗಳು (ಭಾರತ ದರ್ಶನ).

[13] ಆಹಾರ್ಯ ಬಲಗಳು.

[14] ವಾದಿ-ಪ್ರತಿವ್ಯಾದಿಗಳ ನಡುವೆ ಇರುವ ವ್ಯವಹಾರವು ಭರ್ತ್ಯುಪ್ರತ್ಯಯವ್ಯವಹಾರವು. ಇದು ಒಬ್ಬನಲ್ಲಿರುವ ನಂಬಿಕೆಯಿಂದ ನಿರ್ಣಿತವಾಗುವ ವ್ಯವಹಾರ. ಇದು ಹಿತಕರವಾದುದು (ಭಾರತ ದರ್ಶನ).

[15] ಕುಲಾಚಾರಕ್ಕೆ ಸಂಬಂಧಿಸಿದುದು (ಭಾರತ ದರ್ಶನ).

[16] ಉದ್ದಿಷ್ಟೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

[17] ವ್ಯವಹಾರಶ್ಚ ದೃಷ್ಟೋ ಯಃ ಸ ವೇದ ಇತಿ ನಿಶ್ಚಿತಮ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.