Shanti Parva: Chapter 115

ಶಾಂತಿ ಪರ್ವ: ರಾಜಧರ್ಮ ಪರ್ವ

೧೧೫

ಟಿಟ್ಟಿಭಕ

ದುಷ್ಟರ ನಿಂದನೆಯನ್ನು ಸಹಿಸಿಕೊಳ್ಳುವುದು (1-20).

12115001 ಯುಧಿಷ್ಠಿರ ಉವಾಚ|

12115001a ವಿದ್ವಾನ್ಮೂರ್ಖಪ್ರಗಲ್ಭೇನ ಮೃದುಸ್ತೀಕ್ಷ್ಣೇನ ಭಾರತ|

12115001c ಆಕ್ರುಶ್ಯಮಾನಃ ಸದಸಿ ಕಥಂ ಕುರ್ಯಾದರಿಂದಮ||

ಯುಧಿಷ್ಠಿರನು ಹೇಳಿದನು: “ಅರಿಂದಮ! ಭಾರತ! ಉದ್ಧಟ ಮೂರ್ಖನು ತುಂಬಿದ ಸಭೆಯಲ್ಲಿ ವಿದ್ವಾಂಸನನ್ನು ಮೃದುವಾಗಿಯೋ ತೀಕ್ಷ್ಣವಾಗಿಯೋ ನಿಂದಿಸತೊಡಗಿದರೆ ವಿದ್ವಾಂಸನು ಏನು ಮಾಡಬೇಕು?”

12115002 ಭೀಷ್ಮ ಉವಾಚ|

12115002a ಶ್ರೂಯತಾಂ ಪೃಥಿವೀಪಾಲ ಯಥೈಷೋಽರ್ಥೋಽನುಗೀಯತೇ|

12115002c ಸದಾ ಸುಚೇತಾಃ ಸಹತೇ ನರಸ್ಯೇಹಾಲ್ಪಚೇತಸಃ||

ಭೀಷ್ಮನು ಹೇಳಿದನು: “ಪೃಥಿವೀಪಾಲ! ಇದರ ಕುರಿತು ಹಿರಿಯರು ಹೇಳಿರುವ ಮಾತನ್ನು ಕೇಳು. ಉತ್ತಮ ಚೇತನರು ಸದಾ ಅಲ್ಪಚೇತಸ ನರರನ್ನು ಸಹಿಸಿಕೊಳ್ಳುತ್ತಾರೆ.

12115003a ಅರುಷ್ಯನ್ ಕ್ರುಶ್ಯಮಾನಸ್ಯ ಸುಕೃತಂ ನಾಮ ವಿಂದತಿ|

12115003c ದುಷ್ಕೃತಂ ಚಾತ್ಮನೋ ಮರ್ಷೀ ರುಷ್ಯತ್ಯೇವಾಪಮಾರ್ಷ್ಟಿ ವೈ||

ನಿಂದಿಸುವವನ ಮೇಲೆ ಕೋಪಗೊಳ್ಳದೇ ಅವನು ಸುಕೃತನೆಂಬ ಹೆಸರನ್ನು ಪಡೆದುಕೊಳ್ಳುತ್ತಾನೆ. ಮೂರ್ಖನು ಮಾಡಿದ ನಿಂದನೆಗಳನ್ನು ಸಹಿಸಿಕೊಳ್ಳುವವನು ತನ್ನ ದುಷ್ಕೃತ-ಪಾಪಗಳನ್ನು ಕುಪಿತನಾಗಿ ನಿಂದಿಸುವ ಮೂರ್ಖನ ಮೇಲೆ ಹಾಕುತ್ತಾನೆ.

12115004a ಟಿಟ್ಟಿಭಂ ತಮುಪೇಕ್ಷೇತ ವಾಶಮಾನಮಿವಾತುರಮ್|

12115004c ಲೋಕವಿದ್ವೇಷಮಾಪನ್ನೋ ನಿಷ್ಫಲಂ ಪ್ರತಿಪದ್ಯತೇ||

ಆತುರದಿಂದ ಕಿರುಚಾಡಿಕೊಳ್ಳುವ ಟಿಟ್ಟಿಭ ಪಕ್ಷಿಯಂತೆ ಅವನನ್ನು ಉಪೇಕ್ಷಿಸಬೇಕು. ಆಗ ಆ ಮೂರ್ಖನು ಲೋಕದ ದ್ವೇಷವನ್ನು ಪಡೆದುಕೊಂಡು ನಿಷ್ಫಲನಾಗುತ್ತಾನೆ.

12115005a ಇತಿ ಸ ಶ್ಲಾಘತೇ[1] ನಿತ್ಯಂ ತೇನ ಪಾಪೇನ ಕರ್ಮಣಾ|

12115005c ಇದಮುಕ್ತೋ ಮಯಾ ಕಶ್ಚಿತ್ಸಂಮತೋ ಜನಸಂಸದಿ|

12115005e ಸ ತತ್ರ ವ್ರೀಡಿತಃ ಶುಷ್ಕೋ ಮೃತಕಲ್ಪೋಽವತಿಷ್ಠತಿ||

ಮೂರ್ಖನಾದರೋ ತನ್ನ ಪಾಪಕರ್ಮವನ್ನು ನಿತ್ಯವೂ ಹೀಗೆ ಪ್ರಶಂಸಿಸಿಕೊಳ್ಳುತ್ತಿರುತ್ತಾನೆ: “ತುಂಬಿದ ಜನಸಂಸದಿಯಲ್ಲಿ ನಾನು ಇವನ ಕುರಿತು ಹೀಗೆ ಹೇಳಿದೆ. ಆಗ ಅಲ್ಲಿ ಅವನು ನಾಚಿದನು. ಅವನ ಮುಖವು ಒಣಗಿಹೋಯಿತು. ಮೃತನಾದವನಂತೆ ಕುಳಿತಿದ್ದನು”.

12115006a ಶ್ಲಾಘನ್ನಶ್ಲಾಘನೀಯೇನ ಕರ್ಮಣಾ ನಿರಪತ್ರಪಃ|

12115006c ಉಪೇಕ್ಷಿತವ್ಯೋ ದಾಂತೇನ[2] ತಾದೃಶಃ ಪುರುಷಾಧಮಃ||

ಹೀಗೆ ಅವನು ಅಶ್ಲಾಘನೀಯವಾಗಿದ್ದ ತನ್ನ ಕರ್ಮಗಳನ್ನೇ ಪ್ರಶಂಸಿಸಿಕೊಳ್ಳುತ್ತಾ ತಾನುಮಾಡಿದ್ದುದಕ್ಕೆ ನಾಚಿಕೊಳ್ಳುವುದಿಲ್ಲ. ಅಂತಹ ಪುರುಷಾಧಮನನ್ನು ದಾಂತನು ಉಪೇಕ್ಷಿಸಬೇಕು.

12115007a ಯದ್ಯದ್ ಬ್ರೂಯಾದಲ್ಪಮತಿಸ್ತತ್ತದಸ್ಯ ಸಹೇತ್ಸದಾ|

12115007c ಪ್ರಾಕೃತೋ ಹಿ ಪ್ರಶಂಸನ್ವಾ ನಿಂದನ್ವಾ ಕಿಂ ಕರಿಷ್ಯತಿ|

12115007e ವನೇ ಕಾಕ ಇವಾಬುದ್ಧಿರ್ವಾಶಮಾನೋ ನಿರರ್ಥಕಮ್||

ಅಲ್ಪಮತಿಯು ಏನೇನು ಹೇಳುತ್ತಾನೋ ಎಲ್ಲವನ್ನೂ ಸದಾ ಸಹಿಸಿಕೊಳ್ಳಬೇಕು. ಪ್ರಾಕೃತನು ಮಾಡುವ ಪ್ರಶಂಸೆ ಅಥವಾ ನಿಂದನೆಯಿಂದ ಏನು ಮಾಡಬೇಕಾಗಿದೆ? ವನದಲ್ಲಿ ಕಾಗೆಯು ಕಾ ಕಾ ಎಂದು ಕೂಗಿಕೊಳ್ಳುವಂತೆ ಅಬುದ್ಧಿಯು ದೊಡ್ಡದಾಗಿ ಹೇಳುವುದು ನಿರರ್ಥಕವು.

12115008a ಯದಿ ವಾಗ್ಭಿಃ ಪ್ರಯೋಗಃ ಸ್ಯಾತ್ಪ್ರಯೋಗೇ ಪಾಪಕರ್ಮಣಃ|

12115008c ವಾಗೇವಾರ್ಥೋ ಭವೇತ್ತಸ್ಯ ನ ಹ್ಯೇವಾರ್ಥೋ ಜಿಘಾಂಸತಃ||

ಪಾಪ ಕರ್ಮಿಯ ಮಾತುಗಳ ಪ್ರಯೋಗಕ್ಕೆ ಪ್ರತಿಯಾಗಿ ಪ್ರಯೋಗಿಸದೇ ಇದ್ದರೆ ಹಿಂಸಿಸಲು ಬಯಸಿ ಮಾತನಾಡುತ್ತಿದ್ದ ಅವನಿಗೆ ಕೇವಲ ಕಂಠಶೋಷಣೆಯ ಪ್ರಯೋಜನವು ದೊರೆಯುತ್ತದೆ.

12115009a ನಿಷೇಕಂ ವಿಪರೀತಂ ಸ ಆಚಷ್ಟೇ ವೃತ್ತಚೇಷ್ಟಯಾ|

12115009c ಮಯೂರ ಇವ ಕೌಪೀನಂ ನೃತ್ಯನ್ಸಂದರ್ಶಯನ್ನಿವ||

ತಾನು ಚೆನ್ನಾಗಿ ಕಾಣುತ್ತಿದ್ದೇನೆಂದು ನವಿಲು ತನ್ನ ಕೌಪೀನವನ್ನೂ ತೋರಿಸಿಕೊಳ್ಳುತ್ತಾ ಕುಣಿಯುವಂತೆ ತನ್ನ ಹೇಯವರ್ತನಗಳನ್ನು ಪ್ರಕಟಿಸಿಕೊಳ್ಳುವ ಮಾತನಾಡುತ್ತಾನೆ ಮತ್ತು ದುರುಕ್ತಿಗಳನ್ನಾಡಿದ ತನ್ನ ಆತ್ಮಪ್ರಶಂಸೆಯನ್ನೂ ಮಾಡಿಕೊಳ್ಳುತ್ತಾನೆ.

12115010a ಯಸ್ಯಾವಾಚ್ಯಂ ನ ಲೋಕೇಽಸ್ತಿ ನಾಕಾರ್ಯಂ ವಾಪಿ ಕಿಂ ಚನ|

12115010c ವಾಚಂ ತೇನ ನ ಸಂದಧ್ಯಾಚ್ಚುಚಿಃ ಸಂಕ್ಲಿಷ್ಟಕರ್ಮಣಾ||

ಅವನ ಶಬ್ದ -ಲೋಕದಲ್ಲಿ ಆಡಬಾರದ ಶಬ್ದಗಳೇ ಇಲ್ಲ. ಅಂಥವನಿಗೆ ಮಾಡಬಾರದು ಎನ್ನುವುದು ಯಾವುದೂ ಇರುವುದಿಲ್ಲ. ಶುಚಿಯಾದವನು ಅತ್ಯಂತ ಸಂದಿಗ್ಧ ಕರ್ಮವಾದರೂ ಅವನ ಮಾತನ್ನು ಸಹಿಸಿಕೊಳ್ಳಬೇಕು.

12115011a ಪ್ರತ್ಯಕ್ಷಂ ಗುಣವಾದೀ ಯಃ ಪರೋಕ್ಷಂ ತು ವಿನಿಂದಕಃ|

12115011c ಸ ಮಾನವಃ ಶ್ವವಲ್ಲೋಕೇ ನಷ್ಟಲೋಕಪರಾಯಣಃ[3]||

ಪ್ರತ್ಯಕ್ಷದಲ್ಲಿ ಗುಣಗಾನಮಾಡುವವನು ಮತ್ತು ಪರೋಕ್ಷದಲ್ಲಿ ನಿಂದಿಸುವ ಮಾನವನು ಲೋಕದಲ್ಲಿ ನಾಯಿಗಳಂತೆ ಇಹ-ಪರಗಳನ್ನು ಕಳೆದುಕೊಳ್ಳುತ್ತಾನೆ.

12115012a ತಾದೃಗ್ಜನಶತಸ್ಯಾಪಿ ಯದ್ದದಾತಿ ಜುಹೋತಿ ಚ|

12115012c ಪರೋಕ್ಷೇಣಾಪವಾದೇನ ತನ್ನಾಶಯತಿ ಸ ಕ್ಷಣಾತ್||

ಪರೋಕ್ಷದಲ್ಲಿ ಅಪವಾದ-ನಿಂದನೆಗಳನ್ನು ಹೇಳುವವನು ಎಷ್ಟೇ ಯಾಗಗಳನ್ನು ಮಾಡಿದ್ದರೂ ದಾನಗಳನ್ನು ನೀಡಿದ್ದರೂ ಅವು ಕ್ಷಣದಲ್ಲಿಯೇ ನಾಶವಾಗುತ್ತವೆ.

12115013a ತಸ್ಮಾತ್ ಪ್ರಾಜ್ಞೋ ನರಃ ಸದ್ಯಸ್ತಾದೃಶಂ ಪಾಪಚೇತಸಮ್|

12115013c ವರ್ಜಯೇತ್ಸಾಧುಭಿರ್ವರ್ಜ್ಯಂ ಸಾರಮೇಯಾಮಿಷಂ ಯಥಾ||

ಆದುದರಿಂದ ಪ್ರಾಜ್ಞ ನರನು ಅಂತಹ ಪಾಪಚೇತಸನನ್ನು – ಸಾಧುಜನರು ನಾಯಿಯ ಮಾಂಸವನ್ನು ವರ್ಜಿಸುವಂತೆ - ಒಡನೆಯೇ ವರ್ಜಿಸಬೇಕು.

12115014a ಪರಿವಾದಂ ಬ್ರುವಾಣೋ ಹಿ ದುರಾತ್ಮಾ ವೈ ಮಹಾತ್ಮನೇ|

12115014c ಪ್ರಕಾಶಯತಿ ದೋಷಾನ್ ಸ್ವಾನ್ಸರ್ಪಃ ಫಣಮಿವೋಚ್ಚ್ರಿತಮ್||

ಮಹಾತ್ಮನ ನಿಂದೆಯನ್ನು ಮಾಡುವ ದುರಾತ್ಮನು ತನ್ನ ಹೆಡೆಯನ್ನೇ ಎತ್ತಿ ತೋರಿಸುವ ಸರ್ಪದಂತೆ ತನ್ನದೇ ದೋಷಗಳನ್ನು ಎತ್ತಿ ತೋರಿಸುತ್ತಾನೆ.

12115015a ತಂ ಸ್ವಕರ್ಮಾಣಿ ಕುರ್ವಾಣಂ ಪ್ರತಿಕರ್ತುಂ ಯ ಇಚ್ಚತಿ|

12115015c ಭಸ್ಮಕೂಟ ಇವಾಬುದ್ಧಿಃ ಖರೋ ರಜಸಿ ಮಜ್ಜತಿ||

ತನ್ನದೇ ಕರ್ಮದಲ್ಲಿ ತೊಡಗಿರುವ ಆ ಮೂರ್ಖನಿಗೆ ಪ್ರತೀಕಾರವನ್ನು ಮಾಡಬಯಸುವವನು ಬೂದಿಯ ಗುಡ್ಡೆಯಮೇಲೆ ಹೊರಳಾಡುವ ಮೂರ್ಖ ಕತ್ತೆಯಂತೆ ಧೂಳಿನಲ್ಲಿ ಮುಳುಗಿಹೋಗುತ್ತಾನೆ.

12115016a ಮನುಷ್ಯಶಾಲಾವೃಕಮಪ್ರಶಾಂತಂ

ಜನಾಪವಾದೇ ಸತತಂ ನಿವಿಷ್ಟಮ್|

12115016c ಮಾತಂಗಮುನ್ಮತ್ತಮಿವೋನ್ನದಂತಂ

ತ್ಯಜೇತ ತಂ ಶ್ವಾನಮಿವಾತಿರೌದ್ರಮ್||

ಸತತವೂ ಜನಾಪವಾದದಲ್ಲಿ ತೊಡಗಿರುವವನು ಮನುಷ್ಯಶರೀರದಲ್ಲಿ ವಾಸಿಸುವ ತೋಳದಂತೆ ಸದಾ ಅಶಾಂತಿಯಿಂದಿರುತ್ತಾನೆ. ಮದಿಸಿದ ಆನೆಯಂತೆ ಯಾವಾಗಲೂ ಕಿರುಚಿತ್ತಿರುತ್ತಾನೆ. ರೌದ್ರ ನಾಯಿಯಂತೆ ಯಾವಾಗಲೂ ಯಾರನ್ನಾದರೂ ಕಚ್ಚಲು ಓಡುತ್ತಲೇ ಇರುತ್ತಾನೆ. ಅಂಥವನನ್ನು ಸರ್ವದಾ ತ್ಯಜಿಸಬೇಕು.

12115017a ಅಧೀರಜುಷ್ಟೇ ಪಥಿ ವರ್ತಮಾನಂ

ದಮಾದಪೇತಂ ವಿನಯಾಚ್ಚ ಪಾಪಮ್|

12115017c ಅರಿವ್ರತಂ ನಿತ್ಯಮಭೂತಿಕಾಮಂ

ಧಿಗಸ್ತು ತಂ ಪಾಪಮತಿಂ ಮನುಷ್ಯಮ್||

ಹೇಡಿಗಳ ಪಥದಲ್ಲಿ ನಡೆಯುವ, ಜಿತೇಂದ್ರಿಯನಲ್ಲದ, ಅವಿನತನೂ ಪಾಪಿಷ್ಟನೂ ಆದ ನಿತ್ಯವೂ ಇತರರ ಅವನತಿಯನ್ನೇ ಬಯಸುವ ಅರಿವ್ರತ ಪಾಪಮತಿ ಮನುಷ್ಯನಿಗೆ ಧಿಕ್ಕಾರವಿರಲಿ!

12115018a ಪ್ರತ್ಯುಚ್ಯಮಾನಸ್ತು ಹಿ ಭೂಯ ಏಭಿರ್

ನಿಶಾಮ್ಯ ಮಾ ಭೂಸ್ತ್ವಮಥಾರ್ತರೂಪಃ|

12115018c ಉಚ್ಚಸ್ಯ ನೀಚೇನ ಹಿ ಸಂಪ್ರಯೋಗಂ

ವಿಗರ್ಹಯಂತಿ ಸ್ಥಿರಬುದ್ಧಯೋ ಯೇ||

ಇಂತಹ ದುಷ್ಟನಿಗೆ ಪ್ರತಿಯಾಗಿ ಮಾತನಾಡಲು ಹೊರಟವನನ್ನು ನೋಡಿ ಹೇಳಬೇಕು: “ಸ್ಥಿರಬುದ್ಧಿಯು ನೀಚಪುರುಷನೊಡನೆ ವಾಗ್ವಿವಾದದಲ್ಲಿ ತೊಡಗುವುದನ್ನು ನಿಂದಿಸುತ್ತಾರೆ.”

12115019a ಕ್ರುದ್ಧೋ ದಶಾರ್ಧೇನ ಹಿ ತಾಡಯೇದ್ವಾ

ಸ ಪಾಂಸುಭಿರ್ವಾಪಕಿರೇತ್ತುಷೈರ್ವಾ|

12115019c ವಿವೃತ್ಯ ದಂತಾಂಶ್ಚ ವಿಭೀಷಯೇದ್ವಾ

ಸಿದ್ಧಂ ಹಿ ಮೂರ್ಖೇ ಕುಪಿತೇ ನೃಶಂಸೇ||

ಮೂರ್ಖನು ಕ್ರುದ್ಧನಾದರೆ ಮುಷ್ಟಿಯಿಂದ ಪ್ರಹರಿಸಬಹುದು. ಧೂಳನ್ನು ಎರಚಬಹುದು. ಬಾಯನ್ನಗಲಿಸಿ ಹಲ್ಲುಬಿಗಿದು ಹೆದರಿಸಬಹುದು. ಆದುದರಿಂದ ಸತ್ಪುರುಷರು ಅಂತವನೊಂದಿಗೆ ವಾಗ್ಯುದ್ದಕ್ಕೆ ತೊಡಗಬಾರದು.

12115020a ವಿಗರ್ಹಣಾಂ ಪರಮದುರಾತ್ಮನಾ ಕೃತಾಂ

ಸಹೇತ ಯಃ ಸಂಸದಿ ದುರ್ಜನಾನ್ನರಃ|

12115020c ಪಠೇದಿದಂ ಚಾಪಿ ನಿದರ್ಶನಂ ಸದಾ

ನ ವಾಙ್ಮಯಂ ಸ ಲಭತಿ ಕಿಂ ಚಿದಪ್ರಿಯಮ್||

ತುಂಬಿದ ಸಭೆಯಲ್ಲಿ ದುರಾತ್ಮನು ಮಾಡಿದ ನಿಂದನೆಯನ್ನು ಸಹಿಸಿಕೊಂಡು ಆ ದೃಷ್ಟಾಂತವನ್ನು ಸದಾ ಹೇಳಿಕೊಳ್ಳುವ ಸತ್ಪುರುಷನು ದುಷ್ಟರ ನಿಂದನೆಯಿಂದ ದುಃಖಿತರಾಗುವುದಿಲ್ಲ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಟಿಟ್ಟಿಭಕಂ ನಾಮ ಪಂಚದಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಟಿಟ್ಟಿಭಕಂ ಎನ್ನುವ ನೂರಾಹದಿನೈದನೇ ಅಧ್ಯಾಯವು.

Dahlia Flower White Background - Best Flower Wallpaper

[1] ಇತಿ ಸಂಶ್ಲಾಘತೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಯತ್ನೇನ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ನಷ್ಟಲೋಕಪರಾವರಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.