Shanti Parva: Chapter 110

ಶಾಂತಿ ಪರ್ವ: ರಾಜಧರ್ಮ ಪರ್ವ

೧೧೦

 ಸತ್ಯಾಸತ್ಯಗಳ ವಿವೇಚನೆ, ಧರ್ಮದ ಲಕ್ಷಣ ಮತ್ತು ವ್ಯವಹಾರನೀತಿಗಳು (1-26).

12110001 ಯುಧಿಷ್ಠಿರ ಉವಾಚ|

12110001a ಕಥಂ ಧರ್ಮೇ ಸ್ಥಾತುಮಿಚ್ಚನ್ನರೋ ವರ್ತೇತ ಭಾರತ|

12110001c ವಿದ್ವನ್ ಜಿಜ್ಞಾಸಮಾನಾಯ ಪ್ರಬ್ರೂಹಿ ಭರತರ್ಷಭ||

ಯುಧಿಷ್ಠಿರನು ಹೇಳಿದನು: “ಭಾರತ! ಭರತರ್ಷಭ! ಧರ್ಮದಲ್ಲಿಯೇ ನೆಲಸಿರಲು ಇಚ್ಛಿಸುವ ನರನು ಹೇಗೆ ವರ್ತಿಸಬೇಕು? ವಿದ್ವನ್! ಇದರ ಕುರಿತು ತಿಳಿದುಕೊಳ್ಳಬೇಕೆಂದಿರುವ ನನಗೆ ಹೇಳು.

12110002a ಸತ್ಯಂ ಚೈವಾನೃತಂ ಚೋಭೇ ಲೋಕಾನಾವೃತ್ಯ ತಿಷ್ಠತಃ|

12110002c ತಯೋಃ ಕಿಮಾಚರೇದ್ರಾಜನ್ ಪುರುಷೋ ಧರ್ಮನಿಶ್ಚಿತಃ||

ಸತ್ಯ ಮತ್ತು ಅಸತ್ಯ ಇವೆರಡೂ ಲೋಕಗಳನ್ನೇ ಆವರಿಸಿ ನಿಂತಿವೆ. ರಾಜನ್! ಧರ್ಮನಿಶ್ಚಿತನಾದ ಪುರುಷನು ಇವೆರಡರಲ್ಲಿ ಯಾವುದನ್ನು ಆಚರಿಸಬೇಕು?

12110003a ಕಿಂ ಸ್ವಿತ್ಸತ್ಯಂ ಕಿಮನೃತಂ ಕಿಂ ಸ್ವಿದ್ಧರ್ಮ್ಯಂ ಸನಾತನಮ್|

12110003c ಕಸ್ಮಿನ್ಕಾಲೇ ವದೇತ್ಸತ್ಯಂ ಕಸ್ಮಿನ್ಕಾಲೇಽನೃತಂ ವದೇತ್||

ಸತ್ಯವು ಯಾವುದು? ಅನೃತವು ಯಾವುದು? ಯಾವುದು ಸನಾತನ ಧರ್ಮ? ಯಾವ ಕಾಲದಲ್ಲಿ ಸತ್ಯವನ್ನು ಹೇಳಬೇಕು ಮತ್ತು ಯಾವ ಕಾಲದಲ್ಲಿ ಸುಳ್ಳನ್ನು ನುಡಿಯಬೇಕು?”

12110004 ಭೀಷ್ಮ ಉವಾಚ|

12110004a ಸತ್ಯಸ್ಯ ವಚನಂ ಸಾಧು ನ ಸತ್ಯಾದ್ವಿದ್ಯತೇ ಪರಮ್|

12110004c ಯದ್ಭೂಲೋಕೇ ಸುದುರ್ಜ್ಞಾತಂ ತತ್ತೇ ವಕ್ಷ್ಯಾಮಿ ಭಾರತ||

ಭೀಷ್ಮನು ಹೇಳಿದನು: “ಭಾರತ! ಸತ್ಯವನ್ನು ನುಡಿಯುವುದೇ ಸಾಧುವಾದುದು. ಸತ್ಯಕ್ಕಿಂತಲೂ ಶ್ರೇಷ್ಠವಾದುದು ಇನ್ನೊಂದಿಲ್ಲ. ಆದರೆ ಲೋಕದಲ್ಲಿ ಸತ್ಯವು ಏನೆಂದು ತಿಳಿದುಕೊಳ್ಳುವುದೇ ಕಷ್ಟ. ಅದನ್ನೇ ನಿನಗೆ ಹೇಳುತ್ತೇನೆ.

12110005a ಭವೇತ್ಸತ್ಯಂ ನ ವಕ್ತವ್ಯಂ ವಕ್ತವ್ಯಮನೃತಂ ಭವೇತ್|

12110005c ಯತ್ರಾನೃತಂ ಭವೇತ್ಸತ್ಯಂ ಸತ್ಯಂ ವಾಪ್ಯನೃತಂ ಭವೇತ್||

ಎಲ್ಲಿ ಅನೃತವು ಸತ್ಯದ ಕಾರ್ಯವನ್ನು ಮಾಡುವುದೋ ಅಲ್ಲಿ ಸುಳ್ಳನ್ನೇ ಹೇಳಬೇಕಾಗುತ್ತದೆ. ಎಲ್ಲಿ ಸತ್ಯವು ಅನೃತದ ಕಾರ್ಯವನ್ನು ಮಾಡುತ್ತದೆಯೋ ಅಲ್ಲಿ ಸತ್ಯವನ್ನು ಹೇಳಬಾರದು.

12110006a ತಾದೃಶೇ ಮುಹ್ಯತೇ ಬಾಲೋ ಯತ್ರ ಸತ್ಯಮನಿಷ್ಠಿತಮ್|

12110006c ಸತ್ಯಾನೃತೇ ವಿನಿಶ್ಚಿತ್ಯ ತತೋ ಭವತಿ ಧರ್ಮವಿತ್||

ಈ ರೀತಿ ಅನಿಷ್ಠಿತವಾದ ಸತ್ಯವನ್ನು ತಿಳಿಯದಿರುವವನು ಮೋಹಕ್ಕೊಳಗಾಗುತ್ತಾನೆ. ಸತ್ಯ-ಅನೃತಗಳನ್ನು ನಿಶ್ಚಯಿಸಿಕೊಂಡವನು ಧರ್ಮವಿದುವಾಗುತ್ತಾನೆ.

12110007a ಅಪ್ಯನಾರ್ಯೋಽಕೃತಪ್ರಜ್ಞಃ ಪುರುಷೋಽಪಿ ಸುದಾರುಣಃ|

12110007c ಸುಮಹತ್ಪ್ರಾಪ್ನುಯಾತ್ಪುಣ್ಯಂ ಬಲಾಕೋಽಂಧವಧಾದಿವ||

ಅನಾರ್ಯನೂ ಬುದ್ಧಿಶೂನ್ಯನೂ ಮತ್ತು ಮಹಾಕ್ರೂರಿ ಪುರುಷನಾಗಿದ್ದರೂ ಅಂಧ ಪ್ರಾಣಿಯನ್ನು ಕೊಂದ ವ್ಯಾಧ ಬಲಾಕನಂತೆ[1] ಮಹಾಪುಣ್ಯವನ್ನು ಪಡೆದುಕೊಳ್ಳಬಹುದು.

12110008a ಕಿಮಾಶ್ಚರ್ಯಂ ಚ ಯನ್ಮೂಢೋ ಧರ್ಮಕಾಮೋಽಪ್ಯಧರ್ಮವಿತ್|

12110008c ಸುಮಹತ್ ಪ್ರಾಪ್ನುಯಾತ್ಪಾಪಂ ಗಂಗಾಯಾಮಿವ ಕೌಶಿಕಃ||

ಎಂಥಹ ಆಶ್ಚರ್ಯವಿದು! ಧರ್ಮಮಾರ್ಗದಲ್ಲಿಯೇ ಇರಬೇಕೆಂಬ ಇಚ್ಛೆಯಿದ್ದ ಗಂಗಾತೀರದಲ್ಲಿ ವಾಸಿಸುತ್ತಿದ್ದ ಕೌಶಿಕನೆಂಬ ಮೂರ್ಖ ತಪಸ್ವಿಯು ನಿಜವನ್ನು ಹೇಳಿಯೂ ಅಧರ್ಮದ ಫಲವನ್ನು ಪಡೆಯಬೇಕಾಯಿತು[2].

12110009a ತಾದೃಶೋಽಯಮನುಪ್ರಶ್ನೋ ಯತ್ರ ಧರ್ಮಃ ಸುದುರ್ವಚಃ[3]|

12110009c ದುಷ್ಕರಃ ಪ್ರತಿಸಂಖ್ಯಾತುಂ ತರ್ಕೇಣಾತ್ರ[4] ವ್ಯವಸ್ಯತಿ||

ನೀನು ಕೇಳಿದ ಪ್ರಶ್ನೆಯೂ ಹೀಗೆಯೇ ಇದೆ. ಧರ್ಮವನ್ನು ತಿಳಿಸಿಹೇಳುವುದು ಕಷ್ಟ. ಇದನ್ನು ಪ್ರತಿಪಾದಿಸುವುದೂ ದುಷ್ಕರವೇ ಆಗಿದೆ. ಅದು ತರ್ಕಕ್ಕೆ ಮಾತ್ರ ಸಿಲುಕುತ್ತದೆ.

12110010a ಪ್ರಭಾವಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಮ್|

12110010c ಯತ್ ಸ್ಯಾದಹಿಂಸಾಸಂಯುಕ್ತಂ[5] ಸ ಧರ್ಮ ಇತಿ ನಿಶ್ಚಯಃ||

ಜೀವಿಗಳ ಅಭಿವೃದ್ಧಿಗಾಗಿ ಧರ್ಮಪ್ರವಚನವು ಮಾಡಲ್ಪಟ್ಟಿದೆ. ಯಾವುದು ಅಹಿಂಸಾಸಂಯುಕ್ತವಾಗಿದೆಯೋ ಅದೇ ಧರ್ಮ ಎಂದು ನಿಶ್ಚಯಿಸಲ್ಪಟ್ಟಿದೆ.

12110011a ಧಾರಣಾದ್ಧರ್ಮ ಇತ್ಯಾಹುರ್ಧರ್ಮೇಣ ವಿಧೃತಾಃ ಪ್ರಜಾಃ|

12110011c ಯತ್ ಸ್ಯಾದ್ಧಾರಣಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ||

ಧಾರಣೆಯಿಂದಾಗಿ ಧರ್ಮ ಎಂದು ಹೇಳುತ್ತಾರೆ. ಧರ್ಮದಿಂದ ಪ್ರಜೆಗಳು ಮೇಲಕ್ಕೆತ್ತಲ್ಪಡುತ್ತಾರೆ. ಯಾವುದು ಧಾರಣಾ-ಪೋಷಣಾಯುಕ್ತವಾದುದೋ ಅದೇ ಧರ್ಮ ಎಂದು ನಿಶ್ಚಯಿಸಲ್ಪಟ್ಟಿದೆ.

[6]12110012a ಶ್ರುತಿಧರ್ಮ ಇತಿ ಹ್ಯೇಕೇ ನೇತ್ಯಾಹುರಪರೇ ಜನಾಃ|

12110012c ನ ತು ತತ್ ಪ್ರತ್ಯಸೂಯಾಮೋ ನ ಹಿ ಸರ್ವಂ ವಿಧೀಯತೇ||

ವೇದದಲ್ಲಿ ಹೇಳಿರುವುದೇ ಧರ್ಮವೆಂದು ಕೆಲವರ ಅಭಿಪ್ರಾಯ. ಆದರೆ ಇನ್ನು ಕೆಲವರು ಇದನ್ನು ಒಪ್ಪುವುದಿಲ್ಲ. ನಾವು ಇವೆರಡು ಅಭಿಪ್ರಾಯಗಳನ್ನೂ ದೂಷಿಸುವುದಿಲ್ಲ. ವೇದವು ಎಲ್ಲವನ್ನೂ ಹೇಳಿರುವುದಿಲ್ಲ.

12110013a ಯೇಽನ್ಯಾಯೇನ ಜಿಹೀರ್ಷಂತೋ ಧನಮಿಚ್ಚಂತಿ ಕರ್ಹಿ ಚಿತ್|

12110013c ತೇಭ್ಯಸ್ತನ್ನ ತದಾಖ್ಯೇಯಂ ಸ ಧರ್ಮ ಇತಿ ನಿಶ್ಚಯಃ||

ಅನ್ಯಾಯದಿಂದ ಯಾರೋ ಒಬ್ಬನ ಧನವನ್ನು ಕಿತ್ತುಕೊಳ್ಳಲು ಬಯಸಿದವರಿಗೆ ಅದು ಎಲ್ಲಿದೆ ಎಂದು ಹೇಳದೇ ಇರುವುದು ಧರ್ಮವೆಂದು ನಿಶ್ಚಿತವಾಗಿದೆ.

12110014a ಅಕೂಜನೇನ ಚೇನ್ಮೋಕ್ಷೋ ನಾತ್ರ ಕೂಜೇತ್ಕಥಂ ಚನ|

12110014c ಅವಶ್ಯಂ ಕೂಜಿತವ್ಯಂ ವಾ ಶಂಕೇರನ್ವಾಪ್ಯಕೂಜನಾತ್||

12110015a ಶ್ರೇಯಸ್ತತ್ರಾನೃತಂ ವಕ್ತುಂ ಸತ್ಯಾದಿತಿ ವಿಚಾರಿತಮ್|

ಮಾತನಾಡದೇ ಇದ್ದರೆ ಕಳ್ಳರಿಂದ ಬಿಡುಗಡೆಯಾಗುವುದಾದರೆ ಯಾವುದೇ ಮಾತನ್ನೂ ಆಡಬಾರದು. ಮಾತನಾಡಲೇ ಬೇಕಾಗಿ ಬಂದರೆ ಮತ್ತು ಕಳ್ಳರು ಶಂಕಿತರಾಗುವುದಾದರೆ ಆಗ ಸತ್ಯಕ್ಕಿಂತಲೂ ಸುಳ್ಳನ್ನು ಹೇಳುವುದೇ ಶ್ರೇಯಸ್ಕರ ಎಂಬ ವಿಚಾರವಿದೆ.

12110015c ಯಃ ಪಾಪೈಃ ಸಹ ಸಂಬಂಧಾನ್ಮುಚ್ಯತೇ ಶಪಥಾದಿತಿ||

12110016a ನ ಚ ತೇಭ್ಯೋ ಧನಂ ದೇಯಂ ಶಕ್ಯೇ ಸತಿ ಕಥಂ ಚನ|

12110016c ಪಾಪೇಭ್ಯೋ ಹಿ ಧನಂ ದತ್ತಂ ದಾತಾರಮಪಿ ಪೀಡಯೇತ್||

ಅಸತ್ಯ ಶಪಥಗಳಿಂದಲಾದರೂ ಪಾಪಿಗಳಿಂದ ಬಿಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಮಟ್ಟಿಗೆ ಅವರಿಗೆ ಧನವು ದೊರಕದಂತೆ ಮಾಡಬೇಕು. ಪಾಪಿಷ್ಠರಿಗೆ ಕೊಡುವ ಧನವು ಕೊಡುವವನನ್ನೇ ಪೀಡಿಸುತ್ತದೆ.

12110017a ಸ್ವಶರೀರೋಪರೋಧೇನ ವರಮಾದಾತುಮಿಚ್ಚತಃ|

12110017c ಸತ್ಯಸಂಪ್ರತಿಪತ್ತ್ಯರ್ಥಂ ಯೇ ಬ್ರೂಯುಃ ಸಾಕ್ಷಿಣಃ ಕ್ವ ಚಿತ್|

12110017e ಅನುಕ್ತ್ವಾ ತತ್ರ ತದ್ವಾಚ್ಯಂ ಸರ್ವೇ ತೇಽನೃತವಾದಿನಃ||

ಜೀತದಿಂದ ಸಾಲವನ್ನು ತೀರಿಸಲು ಪ್ರಯತ್ನಿಸುತ್ತಿರುವವನಿಗೆ ಸಾಲವು ತೀರಿತೇ ಇಲ್ಲವೇ ಎಂದು ತೀರ್ಮಾನಿಸಲು ಸಾಕ್ಷಿಗಳನ್ನು ಕರೆಸಿದಾಗ ಅಲ್ಲಿ ಅವರು ಸತ್ಯವನ್ನು ಹೇಳದೇ ಇದ್ದರೆ ಅವರೆಲ್ಲರೂ ಸುಳ್ಳುಹೇಳುವವರೇ ಆಗುತ್ತಾರೆ.

12110018a ಪ್ರಾಣಾತ್ಯಯೇ ವಿವಾಹೇ ಚ ವಕ್ತವ್ಯಮನೃತಂ ಭವೇತ್|

12110018c ಅರ್ಥಸ್ಯ ರಕ್ಷಣಾರ್ಥಾಯ ಪರೇಷಾಂ ಧರ್ಮಕಾರಣಾತ್|

ಪ್ರಾಣಾಪಾಯದ ಸಮಯದಲ್ಲಿ, ವಿವಾಹದ ಸಮಯದಲ್ಲಿ, ಇತರರ ಧನವನ್ನು ರಕ್ಷಿಸುವ ಸಲುವಾಗಿ ಮತ್ತು ಧರ್ಮದ ಕಾರಣದಿಂದ ಸುಳ್ಳನ್ನು ಹೇಳಬಹುದು. ಅದಕ್ಕೆ ದೋಷವಿಲ್ಲ.

12110018e ಪರೇಷಾಂ ಧರ್ಮ[7]ಮಾಕಾಂಕ್ಷನ್ನೀಚಃ ಸ್ಯಾದ್ಧರ್ಮಭಿಕ್ಷುಕಃ||

12110019a ಪ್ರತಿಶ್ರುತ್ಯ ತು ದಾತವ್ಯಂ ಶ್ವಃಕಾರ್ಯಸ್ತು ಬಲಾತ್ಕೃತಃ|

ಬೇರೊಬ್ಬನಿಗೆ ಧರ್ಮವನ್ನೆಸಗಲು ಬಯಸಿ ನೀಚನೋರ್ವನು ಭಿಕ್ಷೆಯನ್ನು ಬೇಡಿದರೆ ಕೊಡುತ್ತೇನೆ ಎಂದು ಹೇಳಿದ ನಂತರ ಭಿಕ್ಷೆಯನ್ನು ಕೊಡಲೇ ಬೇಕು. ಹಾಗೆ ಭಿಕ್ಷೆಯನ್ನು ಪಡೆದವನು ಸ್ವಾರ್ಥಕ್ಕಾಗಿ ಅದನ್ನು ಉಪಯೋಗಿಸಿಕೊಂಡರೆ ಅವನು ದಂಡ್ಯನೇ ಆಗುತ್ತಾನೆ.

12110019c ಯಃ ಕಶ್ಚಿದ್ಧರ್ಮಸಮಯಾತ್ ಪ್ರಚ್ಯುತೋಽಧರ್ಮಮಾಸ್ಥಿತಃ||

[8]12110020a ಶಠಃ ಸ್ವಧರ್ಮಮುತ್ಸೃಜ್ಯ ತಮಿಚ್ಚೇದುಪಜೀವಿತುಮ್|

12110020c ಸರ್ವೋಪಾಯೈರ್ನಿಹಂತವ್ಯಃ ಪಾಪೋ ನಿಕೃತಿಜೀವನಃ||

12110021a ಧನಮಿತ್ಯೇವ ಪಾಪಾನಾಂ ಸರ್ವೇಷಾಮಿಹ ನಿಶ್ಚಯಃ|

ಧರ್ಮಸಾಧನದಿಂದ ಚ್ಯುತನಾಗಿ ಅಧರ್ಮವನ್ನು ಆಶ್ರಯಿಸಿದ ಮತ್ತು ಸ್ವಧರ್ಮವನ್ನು ಪರಿತ್ಯಜಿಸಿ ಪಾಪಕಾರ್ಯದಿಂದ ಜೀವನವನ್ನು ನಡೆಸುವವನನ್ನು ಸರ್ವೋಪಾಯಗಳಿಂದ ಸಂಹರಿಸಬೇಕು. ಮೋಸದಿಂದ ಜೀವಿಸುವುದು ಪಾಪವೆಂದು ತಿಳಿದರೆ ಧನವೇ ಎಲ್ಲಕ್ಕಿಂತಲೂ ಶ್ರೇಷ್ಠವೆನ್ನುವುದು ಪಾಪಿಷ್ಠರ ನಿಶ್ಚಯವಾಗಿರುತ್ತದೆ.

12110021c ಯೇಽವಿಷಹ್ಯಾ ಹ್ಯಸಂಭೋಜ್ಯಾ ನಿಕೃತ್ಯಾ ಪತನಂ ಗತಾಃ||

12110022a ಚ್ಯುತಾ ದೇವಮನುಷ್ಯೇಭ್ಯೋ ಯಥಾ ಪ್ರೇತಾಸ್ತಥೈವ ತೇ|

ಇಂತಹ ನೀಚಪುರುಷರನ್ನು ಸತ್ಪುರುಷರು ಸಹಿಸಲಾರರು. ಅಂಥವರು ಭೋಜನಮಾಡಿಸಲೂ ಯೋಗ್ಯರಲ್ಲದವರಾಗುತ್ತಾರೆ. ವಂಚನೆಯಿಂದ ಅವರು ಪತಿತರಾಗುತ್ತಾರೆ. ಯಜ್ಞ-ತಪಸ್ಸುಗಳಿಂದ ಹೀನರಾದ ಅವರು ದೇವ-ಮನುಷ್ಯಲೋಕಗಳೆರಡರಿಂದಲೂ ಚ್ಯುತರಾಗಿ ಪ್ರೇತಗಳಂತೆ ಇರುತ್ತಾರೆ.

[9]12110022c ಧನಾದಾನಾದ್ದುಃಖತರಂ[10] ಜೀವಿತಾದ್ವಿಪ್ರಯೋಜನಮ್||

12110023a ಅಯಂ ವೋ ರೋಚತಾಂ ಧರ್ಮ ಇತಿ ವಾಚ್ಯಃ ಪ್ರಯತ್ನತಃ|

ಧನನಾಶಕ್ಕಿಂತಲೂ ದುಃಖತರವಾದುದು ಜೀವನದ ವಿನಾಶ. ಆದುದರಿಂದ ಧನದ ಮೇಲಿನ ಹಂಬಲವನ್ನು ತೊರೆಯಿರಿ. ಈ ಧರ್ಮವು ನಿಮಗೆ ಇಷ್ಟವಾಗಲಿ.” ಹೀಗೆ ಪ್ರಯತ್ನಪಟ್ಟು ಹೇಳಬೇಕು.

12110023c ನ ಕಶ್ಚಿದಸ್ತಿ ಪಾಪಾನಾಂ ಧರ್ಮ ಇತ್ಯೇಷ ನಿಶ್ಚಯಃ||

12110024a ತಥಾಗತಂ ಚ ಯೋ ಹನ್ಯಾನ್ನಾಸೌ ಪಾಪೇನ ಲಿಪ್ಯತೇ|

ಧರ್ಮವೆನ್ನುವುದೇ ಇಲ್ಲ ಎನ್ನುವುದು ಪಾಪಿಷ್ಠರ ನಿಶ್ಚಯ. ಅಂಥವರನ್ನು ಕೊಲ್ಲುವವನಿಗೆ ಪಾಪವು ಅಂಟಿಕೊಳ್ಳುವುದಿಲ್ಲ.

12110024c ಸ್ವಕರ್ಮಣಾ ಹತಂ ಹಂತಿ ಹತ ಏವ ಸ ಹನ್ಯತೇ|

12110024e ತೇಷು ಯಃ ಸಮಯಂ ಕಶ್ಚಿತ್ಕುರ್ವೀತ ಹತಬುದ್ಧಿಷು||

ಪಾಪಿಗಳು ತಮ್ಮದೇ ಕರ್ಮಗಳಿಂದ ಹತರಾಗುತ್ತಾರೆ. ಅಂಥವರನ್ನು ಕೊಂದರೂ ಪಾಪವು ಅಂಟುವುದಿಲ್ಲ. ಹತಬುದ್ಧಿಯ ಪಾಪಿಷ್ಠರನ್ನು ಕೊಲ್ಲುವ ಪ್ರತಿಜ್ಞೆಮಾಡುವವನೇ ಧರ್ಮಾತ್ಮನು.

12110025a ಯಥಾ ಕಾಕಶ್ಚ ಗೃಧ್ರಶ್ಚ ತಥೈವೋಪಧಿಜೀವಿನಃ|

12110025c ಊರ್ಧ್ವಂ ದೇಹವಿಮೋಕ್ಷಾಂತೇ ಭವಂತ್ಯೇತಾಸು ಯೋನಿಷು||

ಕಾಗೆ ಹದ್ದುಗಳಂತೆ ವಂಚನೆಯಿಂದ ಜೀವಿಸುವವರು ಮರಣಾನಂತರ ಆ ಯೋನಿಗಳಲ್ಲಿಯೇ ಜನ್ಮತಾಳುತ್ತಾರೆ.

12110026a ಯಸ್ಮಿನ್ಯಥಾ ವರ್ತತೇ ಯೋ ಮನುಷ್ಯಸ್

ತಸ್ಮಿಂಸ್ತಥಾ ವರ್ತಿತವ್ಯಂ ಸ ಧರ್ಮಃ|

12110026c ಮಾಯಾಚಾರೋ ಮಾಯಯಾ ವರ್ತಿತವ್ಯಃ

ಸಾಧ್ವಾಚಾರಃ ಸಾಧುನಾ ಪ್ರತ್ಯುದೇಯಃ||

ಯಾರು, ಯಾರಲ್ಲಿ ಹೇಗೆ ವ್ಯವಹರಿಸುವನೋ ಅದಕ್ಕೆ ಅನುಸಾರವಾಗಿಯೇ ಆ ಮನುಷ್ಯನೊಂದಿಗೆ ಹಾಗೆಯೇ ವ್ಯವಹರಿಸಬೇಕು. ಅದೇ ಧರ್ಮ. ಕಪಟಿಯನ್ನು ಕಪಟದಿಂದಲೇ ಬಾಧಿಸಬೇಕು. ಸದಾಚಾರಿಯನ್ನು ಸದ್ವ್ಯವಹಾರಗಳಿಂದಲೇ ಪರಿಗ್ರಹಿಸಬೇಕು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಸತ್ಯಾನೃತಕವಿಭಾಗೇ ದಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಸತ್ಯಾನೃತಕವಿಭಾಗ ಎನ್ನುವ ನೂರಾಹತ್ತನೇ ಅಧ್ಯಾಯವು.

Premium Photo | Watercolor painting of leaves and flower, on white  background

[1] ಕೃಷ್ಣನು ಅರ್ಜುನ-ಯುಧಿಷ್ಠಿರನಿಗೆ ಹೇಳಿದ ವ್ಯಾಧ ಬಲಾಕನ ಕಥೆಯು ಕರ್ಣಪರ್ವದ 49ನೇ ಅಧ್ಯಾಯದಲ್ಲಿ ಬಂದಿದೆ.

[2] ಕೌಶಿಕನ ಕಥೆಯೂ ಕೃಷ್ಣನು ಅರ್ಜುನ-ಯುಧಿಷ್ಠಿರರಿಗೆ ಹೇಳಿರುವಂತೆ ಕರ್ಣಪರ್ವದ 49ನೇ ಅಧ್ಯಾಯದಲ್ಲಿ ಬಂದಿದೆ.

[3] ಸುದುರ್ಲಭಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ತತ್ಕೇನಾತ್ರ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಯಃ ಸ್ಯಾತ್ಪ್ರಭವಸಂಯುಕ್ತಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕವಿದೆ: ಅಹಿಂಸಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಂ| ಯಃ ಸ್ಯಾದಹಿಂಸಾಸಂಪೃಕ್ತಃ ಸ ಧರ್ಮ ಇತಿ ನಿಶ್ಚಿತಃ||

[7] ಸಿದ್ಧಿ ಎಂಬ ಪಾಠಾಂತರವಿದೆ (ಭಾರತ ದರ್ಶನ).

[8] ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಶ್ಲೋಕವಿದೆ: ದಂಡೇನೈವ ಸ ಹಂತವ್ಯಸ್ತಂ ಪಂಥಾನಂ ಸಮಾಶ್ರಿತಃ| ಚ್ಯುತಃ ಸದೈವ ಧರ್ಮೇಭ್ಯೋಽಮಾನವಂ ಧರ್ಮಮಾಸ್ಥಿತಃ||

[9] ನಿರ್ಯಜ್ಞಾಸ್ತಪಸಾ ಹೀನಾ ಮಾ ಸ್ಮ ತೈಃ ಸಹ ಸಂಗಮಃ| ಎಂಬ ಶ್ಲೋಕಾರ್ಧವು ಭಾರತ ದರ್ಶನದಲ್ಲಿದೆ.

[10] ಧನನಾಶಾದ್ದುಃಖತರಂ ಎಂಬ ಪಾಠಾಂತರವಿದೆ (ಭಾರತ ದರ್ಶನ). ಧನದಾನಾದ್ದುಃಖತರಂ ಎನ್ನುವುದು ಇಲ್ಲಿ ಸರಿಯಾಗಿ ಕಾಣುತ್ತಿಲ್ಲ.

Comments are closed.