Shanti Parva: Chapter 108

ಶಾಂತಿ ಪರ್ವ: ರಾಜಧರ್ಮ ಪರ್ವ

೧೦೮

ಗಣತಂತ್ರದ ವರ್ಣನೆ ಮತ್ತು ಅದರ ರೀತಿ-ನೀತಿಗಳು (1-31).

12108001 ಯುಧಿಷ್ಠಿರ ಉವಾಚ|

12108001a ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ|

12108001c ಧರ್ಮೋ ವೃತ್ತಂ ಚ ವೃತ್ತಿಶ್ಚ ವೃತ್ತ್ಯುಪಾಯಫಲಾನಿ ಚ||

12108002a ರಾಜ್ಞಾಂ ವೃತ್ತಂ ಚ ಕೋಶಶ್ಚ ಕೋಶಸಂಜನನಂ ಮಹತ್|

12108002c ಅಮಾತ್ಯಗುಣವೃದ್ಧಿಶ್ಚ ಪ್ರಕೃತೀನಾಂ ಚ ವರ್ಧನಮ್||

12108003a ಷಾಡ್ಗುಣ್ಯಗುಣಕಲ್ಪಶ್ಚ ಸೇನಾನೀತಿಸ್ತಥೈವ ಚ|

12108003c ದುಷ್ಟಸ್ಯ ಚ ಪರಿಜ್ಞಾನಮದುಷ್ಟಸ್ಯ ಚ ಲಕ್ಷಣಮ್||

12108004a ಸಮಹೀನಾಧಿಕಾನಾಂ ಚ ಯಥಾವಲ್ಲಕ್ಷಣೋಚ್ಚಯಃ|

12108004c ಮಧ್ಯಮಸ್ಯ ಚ ತುಷ್ಟ್ಯರ್ಥಂ ಯಥಾ ಸ್ಥೇಯಂ ವಿವರ್ಧತಾ||

12108005a ಕ್ಷೀಣಸಂಗ್ರಹವೃತ್ತಿಶ್ಚ ಯಥಾವತ್ಸಂಪ್ರಕೀರ್ತಿತಾ|

12108005c ಲಘುನಾದೇಶರೂಪೇಣ ಗ್ರಂಥಯೋಗೇನ ಭಾರತ||

ಯುಧಿಷ್ಠಿರನು ಹೇಳಿದನು: “ಪರಂತಪ! ಭಾರತ! ಇದೂವರೆಗೆ ನೀನು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರ ಧರ್ಮ, ಆಚರಣೆ, ವೃತ್ತಿ, ಅವರ ವೃತ್ತಿ ಉಪಾಯ-ಫಲಗಳ ಕುರಿತು, ರಾಜರ ಆಚರಣೆ, ಕೋಶ, ಕೋಶವನ್ನು ಹೆಚ್ಚಿಸುವುದರ ಕುರಿತು, ಅಮಾತ್ಯಗುಣಗಳ ವೃದ್ಧಿ, ಪ್ರಕೃತಿಗಳ ವೃದ್ಧಿ, ಷಡ್ಗುಣಗಳ ಅರ್ಥ, ಸೇನಾನೀತಿ, ದುಷ್ಟರ ಪರಿಜ್ಞಾನ, ದುಷ್ಟರ ಲಕ್ಷಣ, ಸಮಾನರು-ಹೀನರು-ಅಧಿಕರ ಲಕ್ಷಣಗಳು, ಮಧ್ಯಮರನ್ನು ತೃಪ್ತಿಗೊಳಿಸುವ ಬಗೆ, ದುರ್ಬಲರನ್ನು ರಕ್ಷಿಸುವ ಬಗೆ, ಇವುಗಳ ಕುರಿತು ಲಘುವಾಗಿ ದೇಶ-ಗ್ರಂಥಗಳ ಅನುಸಾರವಾಗಿ ಹೇಳಿರುವೆ.

12108006a ವಿಜಿಗೀಷೋಸ್ತಥಾವೃತ್ತಮುಕ್ತಂ ಚೈವ ತಥೈವ ತೇ|

12108006c ಗಣಾನಾಂ ವೃತ್ತಿಮಿಚ್ಚಾಮಿ ಶ್ರೋತುಂ ಮತಿಮತಾಂ ವರ||

ಬುದ್ಧಿವಂತರಲ್ಲಿ ಶ್ರೇಷ್ಠ! ವಿಜಯಾಭಿಲಾಷಿಗಳ ವ್ಯವಹಾರಗಳ ಕುರಿತೂ ನೀನು ಹೇಳಿದ್ದೀಯೆ. ಈಗ ನಾನು ಗಣಗಳ ಆಚರಣೆಯ ಕುರಿತು ಕೇಳಲು ಬಯಸುತ್ತೇನೆ.

12108007a ಯಥಾ ಗಣಾಃ ಪ್ರವರ್ಧಂತೇ ನ ಭಿದ್ಯಂತೇ ಚ ಭಾರತ|

12108007c ಅರೀನ್ ಹಿ ವಿಜಿಗೀಷಂತೇ ಸುಹೃದಃ ಪ್ರಾಪ್ನುವಂತಿ ಚ||

ಭಾರತ! ಗಣಗಳು ಹೇಗೆ ವೃದ್ಧಿಸುತ್ತವೆ? ಹೇಗೆ ಒಡೆಯುವುದಿಲ್ಲ? ಶತ್ರುಗಳನ್ನು ಅವು ಹೇಗೆ ಜಯಿಸುತ್ತವೆ? ಮತ್ತು ಸುಹೃದರನ್ನು ಹೇಗೆ ಪಡೆದುಕೊಳ್ಳುತ್ತವೆ?

12108008a ಭೇದಮೂಲೋ ವಿನಾಶೋ ಹಿ ಗಣಾನಾಮುಪಲಭ್ಯತೇ|

12108008c ಮಂತ್ರಸಂವರಣಂ ದುಃಖಂ ಬಹೂನಾಮಿತಿ ಮೇ ಮತಿಃ||

ಗಣಗಳ ವಿನಾಶಕ್ಕೆ ಭೇದವೇ ಮೂಲವೆಂದು ಕಂಡುಬರುತ್ತದೆ. ಅನೇಕರಿರುವಾಗ ಮಂತ್ರಾಲೋಚನೆಗಳನ್ನು ಗುಪ್ತವಾಗಿಡುವುದು ಕಷ್ಟವೆಂದು ನನ್ನ ಅಭಿಪ್ರಾಯವಾಗಿದೆ.

12108009a ಏತದಿಚ್ಚಾಮ್ಯಹಂ ಶ್ರೋತುಂ ನಿಖಿಲೇನ ಪರಂತಪ|

12108009c ಯಥಾ ಚ ತೇ ನ ಭಿದ್ಯೇರಂಸ್ತಚ್ಚ ಮೇ ಬ್ರೂಹಿ ಪಾರ್ಥಿವ||

ಪರಂತಪ! ಪಾರ್ಥಿವ! ಇದನ್ನು ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ. ಗಣಗಳು ಒಡೆದುಹೋಗದಂತೆ ಏನು ಮಾಡಬೇಕೆನ್ನುವುದನ್ನು ನನಗೆ ಹೇಳು.”

12108010 ಭೀಷ್ಮ ಉವಾಚ|

12108010a ಗಣಾನಾಂ ಚ ಕುಲಾನಾಂ ಚ ರಾಜ್ಞಾಂ ಚ ಭರತರ್ಷಭ|

12108010c ವೈರಸಂದೀಪನಾವೇತೌ ಲೋಭಾಮರ್ಷೌ ಜನಾಧಿಪ||

ಭೀಷ್ಮನು ಹೇಳಿದನು: “ಭರತರ್ಷಭ! ಜನಾಧಿಪ! ಲೋಭ ಮತ್ತು ಅಸಹನೆ ಇವೆರಡೂ ಗಣಗಳ, ಕುಲಗಳ ಮತ್ತು ರಾಜರ ನಡುವೆ ವೈರಾಗ್ನಿಯನ್ನು ಪ್ರಜ್ವಲಿಸುತ್ತವೆ.

12108011a ಲೋಭಮೇಕೋ ಹಿ ವೃಣುತೇ ತತೋಽಮರ್ಷಮನಂತರಮ್|

12108011c ತೌ ಕ್ಷಯವ್ಯಯಸಂಯುಕ್ತಾವನ್ಯೋನ್ಯಜನಿತಾಶ್ರಯೌ||

ಒಬ್ಬನಲ್ಲಿ ಲೋಭವುಂಟಾಗಲು ಇನ್ನೊಬ್ಬನಲ್ಲಿ ಅಸಹನೆಯು ಹುಟ್ಟುತ್ತದೆ. ಅನ್ಯೋನ್ಯರಲ್ಲಿ ಹುಟ್ಟಿದ ಇವೆರಡೂ ಸೇರಿ ಇಬ್ಬರಲ್ಲಿಯೂ ಕ್ಷಯ-ವ್ಯಯಗಳನ್ನುಂಟುಮಾಡುತ್ತದೆ[1].

12108012a ಚಾರಮಂತ್ರಬಲಾದಾನೈಃ ಸಾಮದಾನವಿಭೇದನೈಃ|

12108012c ಕ್ಷಯವ್ಯಯಭಯೋಪಾಯೈಃ ಕರ್ಶಯಂತೀತರೇತರಮ್||

ಅವರು ಪರಸ್ಪರರನ್ನು ಚಾರರು, ಗುಟ್ಟು, ಸೈನ್ಯ, ಸಾಮ-ದಾನ-ವಿಭೇದನ ಮತ್ತು ಕ್ಷಯ-ವ್ಯಯಗಳ ಉಪಾಯಗಳಿಂದ ಪೀಡಿಸುತ್ತಾರೆ.

12108013a ತತ್ರ ದಾನೇನ[2] ಭಿದ್ಯಂತೇ ಗಣಾಃ ಸಂಘಾತವೃತ್ತಯಃ|

12108013c ಭಿನ್ನಾ ವಿಮನಸಃ ಸರ್ವೇ ಗಚ್ಚಂತ್ಯರಿವಶಂ ಭಯಾತ್||

ಸಾಂಘಿಕ ಜೀವನವನ್ನು ನಡೆಸುವ ಗಣಗಳು ದಾನದಿಂದ ಒಡೆಯುತ್ತವೆ. ಒಡೆದು ವಿಮನಸ್ಕರಾಗಿ ಭಯದಿಂದ ಎಲ್ಲರೂ ಶತ್ರುಗಳ ವಶರಾಗುತ್ತಾರೆ.

12108014a ಭೇದಾದ್ಗಣಾ ವಿನಶ್ಯಂತಿ ಭಿನ್ನಾಃ ಸೂಪಜಪಾಃ ಪರೈಃ[3]|

12108014c ತಸ್ಮಾತ್ಸಂಘಾತಯೋಗೇಷು ಪ್ರಯತೇರನ್ಗಣಾಃ ಸದಾ||

ಭೇದದಿಂದಲೇ ಗಣಗಳು ವಿನಾಶವಾಗುತ್ತವೆ. ಒಡೆದುಹೋದ ಗಣಗಳನ್ನು ಶತ್ರುಗಳು ಬಹುಬೇಗ ಆಕ್ರಮಣಿಸುತ್ತಾರೆ. ಆದುದರಿಂದ ಗಣಗಳು ಸದಾ ಸಂಘಟಿತರಾಗಿರಲು ಪ್ರಯತ್ನಿಸಬೇಕು.

12108015a ಅರ್ಥಾ ಹ್ಯೇವಾಧಿಗಮ್ಯಂತೇ ಸಂಘಾತಬಲಪೌರುಷಾತ್|

12108015c ಬಾಹ್ಯಾಶ್ಚ ಮೈತ್ರೀಂ ಕುರ್ವಂತಿ ತೇಷು ಸಂಘಾತವೃತ್ತಿಷು||

ಸಂಘದ ಬಲ-ಪೌರುಷಗಳಿರುವವರು ಅನಾಯಾಸವಾಗಿ ಉದ್ದೇಶಗಳನ್ನು ಸಾಧಿಸುತ್ತಾರೆ. ಒಗ್ಗಟ್ಟಾಗಿ ಇರುವವರೊಡನೆ ಹೊರಗಿನವರೂ ಮೈತ್ರಿಯನ್ನು ಮಾಡಿಕೊಳ್ಳುತ್ತಾರೆ.

12108016a ಜ್ಞಾನವೃದ್ಧಾನ್ ಪ್ರಶಂಸಂತಃ ಶುಶ್ರೂಷಂತಃ ಪರಸ್ಪರಮ್|

12108016c ವಿನಿವೃತ್ತಾಭಿಸಂಧಾನಾಃ ಸುಖಮೇಧಂತಿ ಸರ್ವಶಃ||

ಪರಸ್ಪರ ಶುಶ್ರೂಷೆಮಾಡುವ ಸಂಘಜೀವನವನ್ನು ಜ್ಞಾನವೃದ್ಧರು ಪ್ರಶಂಸಿಸುತ್ತಾರೆ. ಅವರು ಪರಸ್ಪರರೊಡನೆ ವಿನೀತರಾಗಿದ್ದುಕೊಂಡು ಸರ್ವಶಃ ಸುಖದಿಂದ ಇರುತ್ತಾರೆ.

12108017a ಧರ್ಮಿಷ್ಠಾನ್ ವ್ಯವಹಾರಾಂಶ್ಚ ಸ್ಥಾಪಯಂತಶ್ಚ ಶಾಸ್ತ್ರತಃ|

12108017c ಯಥಾವತ್ಸಂಪ್ರವರ್ತಂತೋ[4] ವಿವರ್ಧಂತೇ ಗಣೋತ್ತಮಾಃ||

ಉತ್ತಮ ಗಣಗಳು ಶಾಸ್ತ್ರತಃ ಧರ್ಮಿಷ್ಠ ವ್ಯವಹಾರಗಳನ್ನು ಸ್ಥಾಪಿಸಿಕೊಳ್ಳುತ್ತವೆ. ಯಥೋಚಿತವಾಗಿ ನಡೆದುಕೊಂಡು ಅಭಿವೃದ್ಧಿ ಹೊಂದುತ್ತಾರೆ.

12108018a ಪುತ್ರಾನ್ ಭ್ರಾತೃನ್ನಿಗೃಹ್ಣಂತೋ ವಿನಯೇ ಚ ಸದಾ ರತಾಃ|

12108018c ವಿನೀತಾಂಶ್ಚ ಪ್ರಗೃಹ್ಣಂತೋ ವಿವರ್ಧಂತೇ ಗಣೋತ್ತಮಾಃ||

ಉತ್ತಮ ಗಣಗಳು ಪುತ್ರರನ್ನೂ-ತಮ್ಮಂದಿರನ್ನೂ ಸದಾ ವಿನಯದಿಂದಿರುವಂತೆ ನಿಯಂತ್ರಿಸಿ ತಿದ್ದುತ್ತಿರುತ್ತಾರೆ. ವಿನೀತರಾದವರನ್ನು ಸ್ವೀಕರಿಸುತ್ತಾರೆ ಮತ್ತು ಅಭಿವೃದ್ಧಿಹೊಂದುತ್ತಾರೆ.

12108019a ಚಾರಮಂತ್ರವಿಧಾನೇಷು ಕೋಶಸಂನಿಚಯೇಷು ಚ|

12108019c ನಿತ್ಯಯುಕ್ತಾ ಮಹಾಬಾಹೋ ವರ್ಧಂತೇ ಸರ್ವತೋ ಗಣಾಃ||

ಮಹಾಬಾಹೋ! ಗಣಗಳು ಚಾರಮಂತ್ರವಿಧಾನಗಳಲ್ಲಿ ಮತ್ತು ಕೋಶ ಸಂಗ್ರಹದಲ್ಲಿ ನಿತ್ಯವೂ ಯುಕ್ತವಾಗಿದ್ದುಕೊಂಡು ಸರ್ವತೋಮುಖವಾಗಿ ವರ್ಧಿಸುತ್ತವೆ.

12108020a ಪ್ರಾಜ್ಞಾನ್ ಶೂರಾನ್ಮಹೇಷ್ವಾಸಾನ್ಕರ್ಮಸು ಸ್ಥಿರಪೌರುಷಾನ್|

12108020c ಮಾನಯಂತಃ ಸದಾ ಯುಕ್ತಾ ವಿವರ್ಧಂತೇ ಗಣಾ ನೃಪ||

ನೃಪ! ಪ್ರಾಜ್ಞರನ್ನೂ, ಶೂರರನ್ನೂ, ಮಹೇಷ್ವಾಸರನ್ನೂ, ಕರ್ಮಗಳಲ್ಲಿ ನಿರತರಾದವರನ್ನೂ, ಸ್ಥಿರಪೌರುಷರನ್ನೂ ಸದಾ ಗೌರವಿಸುತ್ತಾ ಗಣಗಳು ಅಭಿವೃದ್ಧಿಹೊಂದುತ್ತವೆ.

12108021a ದ್ರವ್ಯವಂತಶ್ಚ ಶೂರಾಶ್ಚ ಶಸ್ತ್ರಜ್ಞಾಃ ಶಾಸ್ತ್ರಪಾರಗಾಃ|

12108021c ಕೃಚ್ಚ್ರಾಸ್ವಾಪತ್ಸು ಸಂಮೂಢಾನ್ಗಣಾನುತ್ತಾರಯಂತಿ ತೇ||

ದ್ರವ್ಯವಂತರೂ, ಶೂರರೂ, ಶಸ್ತ್ರಜ್ಞರೂ, ಶಾಸ್ತ್ರಪಾರಗರೂ ಆದ ಗಣದ ಸದಸ್ಯರು ಕಷ್ಟಕರ ಆಪತ್ತನ್ನು ಹೊಂದಿ ಸಮ್ಮೂಢರಾಗುವವರನ್ನು ಉದ್ಧರಿಸುತ್ತಾರೆ.

12108022a ಕ್ರೋಧೋ ಭೇದೋ ಭಯೋ ದಂಡಃ ಕರ್ಶನಂ ನಿಗ್ರಹೋ ವಧಃ|

12108022c ನಯಂತ್ಯರಿವಶಂ ಸದ್ಯೋ ಗಣಾನ್ ಭರತಸತ್ತಮ||

ಭರತಸತ್ತಮ! ಗಣದಲ್ಲಿ ಕ್ರೋಧ, ಭೇದ, ಭಯ, ದಂಡ, ಕರ್ಶನ, ನಿಗ್ರಹ ಮತ್ತು ವಧೆಗಳಾದರೆ ಅವು ಸದ್ಯದಲ್ಲಿಯೇ ಗಣವನ್ನು ವೈರಿವಶವನ್ನಾಗಿ ಮಾಡುತ್ತದೆ.

12108023a ತಸ್ಮಾನ್ಮಾನಯಿತವ್ಯಾಸ್ತೇ ಗಣಮುಖ್ಯಾಃ ಪ್ರಧಾನತಃ|

12108023c ಲೋಕಯಾತ್ರಾ ಸಮಾಯತ್ತಾ ಭೂಯಸೀ ತೇಷು ಪಾರ್ಥಿವ||

ಪಾರ್ಥಿವ! ಆದುದರಿಂದ ಗಣದಲ್ಲಿ ಮುಖ್ಯರಾದವರನ್ನು ಪ್ರಧಾನಕೊಟ್ಟು ಸಮ್ಮಾನಿಸುತ್ತಿರಬೇಕು. ಏಕೆಂದರೆ ಲೋಕವ್ಯವಹಾರಗಳು ಒಟ್ಟಿಗೇ ಅವರ ಮೇಲೆ ನಿಂತಿವೆ.

12108024a ಮಂತ್ರಗುಪ್ತಿಃ ಪ್ರಧಾನೇಷು ಚಾರಶ್ಚಾಮಿತ್ರಕರ್ಶನ|

12108024c ನ ಗಣಾಃ ಕೃತ್ಸ್ನಶೋ ಮಂತ್ರಂ ಶ್ರೋತುಮರ್ಹಂತಿ ಭಾರತ||

ಭಾರತ! ಅಮಿತ್ರಕರ್ಶನ! ಮಂತ್ರಾಲೋಚನೆ ಮತ್ತು ಚಾರರ ವಿಷಯಗಳು ಪ್ರಧಾನರಲ್ಲಿ ಮಾತ್ರ ಇರುತ್ತವೆ. ಗಣದ ಎಲ್ಲರೂ ಮಂತ್ರಾಲೋಚನೆಗಳನ್ನು ಕೇಳಲು ಅರ್ಹರಿರುವುದಿಲ್ಲ.

12108025a ಗಣಮುಖ್ಯೈಸ್ತು ಸಂಭೂಯ ಕಾರ್ಯಂ ಗಣಹಿತಂ ಮಿಥಃ|

12108025c ಪೃಥಗ್ಗಣಸ್ಯ ಭಿನ್ನಸ್ಯ ವಿಮತಸ್ಯ ತತೋಽನ್ಯಥಾ|

12108025e ಅರ್ಥಾಃ ಪ್ರತ್ಯವಸೀದಂತಿ ತಥಾನರ್ಥಾ ಭವಂತಿ ಚ||

ಗಣದ ಹಿತಕ್ಕಾಗಿ ಗಣಮುಖ್ಯರು ಕಲೆತು ಕಾರ್ಯಗಳನ್ನು ಮಾಡಬೇಕು. ಹಾಗೆ ಮಾಡದೇ ಪ್ರತ್ಯೇಕ ಪ್ರತ್ಯೇಕವಾಗಿ ಕಾರ್ಯಮಾಡುತ್ತಿದ್ದರೆ ಮತ್ತು ಭಿನ್ನ ಮತಗಳಿದ್ದರೆ ಕಾರ್ಯಗಳು ಕೆಟ್ಟುಹೋಗುತ್ತವೆ ಮತ್ತು ಅನರ್ಥಗಳಾಗುತ್ತವೆ.

12108026a ತೇಷಾಮನ್ಯೋನ್ಯಭಿನ್ನಾನಾಂ ಸ್ವಶಕ್ತಿಮನುತಿಷ್ಠತಾಮ್|

12108026c ನಿಗ್ರಹಃ ಪಂಡಿತೈಃ ಕಾರ್ಯಃ ಕ್ಷಿಪ್ರಮೇವ ಪ್ರಧಾನತಃ||

ಅನ್ಯೋನ್ಯ ಭಿನ್ನಾಭಿಪ್ರಾಯಗಳಿದ್ದು ಗಣದಿಂದ ಹೊರಬಂದು ಸ್ವಶಕ್ತಿಯಿಂದ ನಿಲ್ಲುವವವರನ್ನು ಪಂಡಿತರು ಬೇಗನೇ ನಿಗ್ರಹಿಸಬೇಕು. ಇದು ಪ್ರಧಾನ ಕಾರ್ಯವಾಗಿರುತ್ತದೆ.

12108027a ಕುಲೇಷು ಕಲಹಾ ಜಾತಾಃ ಕುಲವೃದ್ಧೈರುಪೇಕ್ಷಿತಾಃ|

12108027c ಗೋತ್ರಸ್ಯ ರಾಜನ್ಕುರ್ವಂತಿ[5] ಗಣಸಂಭೇದಕಾರಿಕಾಮ್||

ರಾಜನ್! ಕುಲದಲ್ಲಿ ಹುಟ್ಟಿದ ಕಲಹಗಳನ್ನು ಕುಲವೃದ್ಧರು ಉಪೇಕ್ಷಿಸಿದರೆ ಅದು ಗೋತ್ರದ ಮತ್ತು ಗಣದ ಭೇದಕ್ಕೆ ಕಾರಣವಾಗುತ್ತದೆ.

12108028a ಆಭ್ಯಂತರಂ ಭಯಂ ರಕ್ಷ್ಯಂ ಸುರಕ್ಷ್ಯಂ ಬಾಹ್ಯತೋ ಭಯಮ್|

12108028c ಅಭ್ಯಂತರಾದ್ಭಯಂ ಜಾತಂ[6] ಸದ್ಯೋ ಮೂಲಂ ನಿಕೃಂತತಿ||

ಗಣವನ್ನು ಆಂತರಿಕ ಭಯದಿಂದ ರಕ್ಷಿಸಿದರೆ ಅದು ಬಾಹ್ಯ ಭಯದಿಂದ ಸುರಕ್ಷಿತವಾಗಿರುತ್ತದೆ. ಆಂತರಿಕ ಭಯವು ಗಣದ ಮೂಲವನ್ನೇ ಕತ್ತರಿಸಿಹಾಕುತ್ತದೆ.

12108029a ಅಕಸ್ಮಾತ್ಕ್ರೋಧಲೋಭಾದ್ವಾ ಮೋಹಾದ್ವಾಪಿ ಸ್ವಭಾವಜಾತ್|

12108029c ಅನ್ಯೋನ್ಯಂ ನಾಭಿಭಾಷಂತೇ ತತ್ಪರಾಭವಲಕ್ಷಣಮ್||

ಅಕಾಸ್ಮಾತ್ತಾದ ಕ್ರೋಧ-ಲೋಭಗಳಿಂದ ಮತ್ತು ಸ್ವಭಾವಜ ಮೋಹದ ಕಾರಣಗಳಿಂದ ಅನ್ಯೋನ್ಯರು ಮಾತನಾಡದೇ ಇದ್ದರೆ ಅದು ಗಣದ ಪರಾಭವವನ್ನು ಸೂಚಿಸುತ್ತದೆ.

12108030a ಜಾತ್ಯಾ ಚ ಸದೃಶಾಃ ಸರ್ವೇ ಕುಲೇನ ಸದೃಶಾಸ್ತಥಾ|

12108030c ನ ತು ಶೌರ್ಯೇಣ ಬುದ್ಧ್ಯಾ ವಾ ರೂಪದ್ರವ್ಯೇಣ ವಾ ಪುನಃ||

12108031a ಭೇದಾಚ್ಚೈವ ಪ್ರಮಾದಾಚ್ಚ[7] ನಾಮ್ಯಂತೇ ರಿಪುಭಿರ್ಗಣಾಃ|

12108031c ತಸ್ಮಾತ್ಸಂಘಾತಮೇವಾಹುರ್ಗಣಾನಾಂ ಶರಣಂ ಮಹತ್||

ಸಮಾನಜಾತಿಯವರೆಲ್ಲರೂ ಮತ್ತು ಒಂದೇ ಕುಲದವರೆಲ್ಲರೂ ಸಂಘಟಿತರಾಗಿರಲು ಸಾಧ್ಯವಿದೆ. ಆದರೆ ಶೌರ್ಯ, ಬುದ್ಧಿ, ರೂಪ ಮತ್ತು ಸಂಪತ್ತಿನಲ್ಲಿ ಸಮಾನರಾಗಿರುವುದು ಸಾಧ್ಯವಿಲ್ಲ. ಈ ಭೇದಗಳ ಕಾರಣದಿಂದಲೇ ಶತ್ರುಗಳು ಪ್ರಮಾದಗೊಳಿಸಿ ಸಂಘಟನೆಯನ್ನು ಮುರಿಯಲು ಪ್ರಯತ್ನಿಸುತ್ತಾರೆ. ಆದುದರಿಂದ ಗಣಗಳು ಮಹಾ  ಸಂಘಜೀವನವನ್ನೇ ಆಶ್ರಯಿಸಬೇಕು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಗಣವೃತ್ತೇ ಅಷ್ಟಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಗಣವೃತ್ತ ಎನ್ನುವ ನೂರಾಎಂಟನೇ ಅಧ್ಯಾಯವು.

Beautiful pink cosmos flowers on white background Vector Image

[1] ಈ ಶ್ಲೋಕಕ್ಕೆ ಈ ರೀತಿಯ ವ್ಯಾಖ್ಯಾನವಿದೆ: “ಏಕೋ ರಾಜಾ ಲೋಭಂ ವೃಣತೇ| ಗಣಸ್ತದಾ ಅಸ್ಮಭ್ಯಂ ನ ದದಾತೀತಿ ಆಮರ್ಷಂ ವೃಣುತೇ||” ಅರ್ಥಾತ್: ರಾಜನು ಲೋಭಿಯಾಗಿ ಪ್ರಜೆಗಳಿಗೆ ತನ್ನ ಐಶ್ವರ್ಯವನ್ನು ಕೊಡುವುದಿಲ್ಲ. ಜನಸಮೂಹವು ಅದನ್ನು ಸಹಿಸುವುದಿಲ್ಲ. ಪರಸ್ಪರ ಘರ್ಷಣೆಯಾಗುತ್ತದೆ. ಜನ-ಧನಗಳೆರಡೂ ವಿನಾಶಹೊಂದುತ್ತವೆ. ಕಡೆಗೆ ರಾಜನೂ ವಿನಾಶಹೊಂದುತ್ತಾನೆ. ಪ್ರಜೆಗಳೂ ವಿನಾಶಹೊಂದುತ್ತಾರೆ. (ಭಾರತ ದರ್ಶನ).

[2] ತತ್ರಾದಾನೇನ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಭೇದೇ ಗಣಾ ವಿನೇಶುರ್ಹಿ ಭಿನ್ನಾಸ್ತು ಸುಜಯಾಃ ಪರೈಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಯಥಾವತ್ ಪ್ರತಿಪಶ್ಯಂತೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ನಾಶಂ ಕುರ್ವಂತಿ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ರಾಜನ್ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಪ್ರದಾನಾಚ್ಚ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.