Shanti Parva: Chapter 106

ಶಾಂತಿ ಪರ್ವ: ರಾಜಧರ್ಮ ಪರ್ವ

೧೦೬

ಕಳೆದುಹೋದ ರಾಜ್ಯಪ್ರಾಪ್ತಿಗೆ ವಿವಿಧ ಉಪಾಯಗಳ ವಿವರಣೆ  (1-24).

12106001 ಮುನಿರುವಾಚ|

12106001a ಅಥ ಚೇತ್ಪೌರುಷಂ ಕಿಂ ಚಿತ್ ಕ್ಷತ್ರಿಯಾತ್ಮನಿ ಪಶ್ಯಸಿ|

12106001c ಬ್ರವೀಮಿ ಹಂತ ತೇ ನೀತಿಂ ರಾಜ್ಯಸ್ಯ ಪ್ರತಿಪತ್ತಯೇ||

ಮುನಿಯು ಹೇಳಿದನು: “ನಿನ್ನಲ್ಲಿ ಕ್ಷತ್ರಿಯ ಪೌರುಷವು ಸ್ವಲ್ಪವಾದರೂ ಇರುವುದಾದರೆ ರಾಜ್ಯಪ್ರಾಪ್ತಿಗಾಗಿ ನಿನಗೆ ರಾಜನೀತಿಯನ್ನು ಹೇಳುತ್ತೇನೆ. ನಿಲ್ಲು.

12106002a ತಾಂ ಚೇಚ್ಚಕ್ಷ್ಯಸ್ಯನುಷ್ಠಾತುಂ ಕರ್ಮ ಚೈವ ಕರಿಷ್ಯಸಿ|

12106002c ಶೃಣು ಸರ್ವಮಶೇಷೇಣ ಯತ್ತ್ವಾಂ ವಕ್ಷ್ಯಾಮಿ ತತ್ತ್ವತಃ||

ನಾನು ಹೇಳಿದಂತೆ ನೀನು ಮಾಡಿ ಕಾರ್ಯರೂಪಕ್ಕೆ ತರುವುದಾದರೆ ನಿನಗೆ ಎಲ್ಲವನ್ನೂ ಬಿಡದಂತೆ ತತ್ತ್ವತಃ ಹೇಳುತ್ತೇನೆ. ಕೇಳು.

12106003a ಆಚರಿಷ್ಯಸಿ ಚೇತ್ಕರ್ಮ ಮಹತೋಽರ್ಥಾನವಾಪ್ಸ್ಯಸಿ|

12106003c ರಾಜ್ಯಂ ರಾಜ್ಯಸ್ಯ ಮಂತ್ರಂ ವಾ ಮಹತೀಂ ವಾ ಪುನಃ ಶ್ರಿಯಮ್|

12106003e ಯದ್ಯೇತದ್ರೋಚತೇ ರಾಜನ್ ಪುನರ್ಬ್ರೂಹಿ ಬ್ರವೀಮಿ ತೇ||

ನಾನು ಹೇಳಿದಂತೆ ಆಚರಿಸಿದರೆ ಮಹಾ ಸಂಪತ್ತನ್ನು ಪಡೆದುಕೊಳ್ಳುವೆ. ರಾಜ್ಯ, ರಾಜನ ಮಂತ್ರಿಮಂಡಲ, ಅಥವಾ ಪುನಃ ಮಹಾ ಐಶ್ವರ್ಯ ಎಲ್ಲವನ್ನೂ ಪಡೆದುಕೊಳ್ಳುವೆ. ರಾಜನ್! ಇದು ನಿನಗೆ ಇಷ್ಟವಾದರೆ ಹೇಳು. ಅದನ್ನು ಹೇಳುತ್ತೇನೆ.”

12106004 ರಾಜಪುತ್ರ ಉವಾಚ|

12106004a ಬ್ರವೀತು ಭಗವಾನ್ನೀತಿಮುಪಪನ್ನೋಽಸ್ಮ್ಯಹಂ ಪ್ರಭೋ|

12106004c ಅಮೋಘಮಿದಮದ್ಯಾಸ್ತು ತ್ವಯಾ ಸಹ ಸಮಾಗತಮ್||

ರಾಜಪುತ್ರನು ಹೇಳಿದನು: “ಭಗವನ್! ಪ್ರಭೋ! ನಿನ್ನೊಡನೆ ಆದ ಈ ಸಮಾಗಮವು ಅಮೋಘವಾದುದು. ಇಂದು ನಾನು ನಿನ್ನ ಶರಣು ಬಂದಿದ್ದೇನೆ. ಅವಶ್ಯವಾಗಿ ರಾಜನೀತಿಯನ್ನು ಹೇಳು.”

12106005 ಮುನಿರುವಾಚ|

12106005a ಹಿತ್ವಾ ಸ್ತಂಭಂ[1] ಚ ಮಾನಂ[2] ಚ ಕ್ರೋಧಹರ್ಷೌ ಭಯಂ ತಥಾ|

12106005c ಪ್ರತ್ಯಮಿತ್ರಂ ನಿಷೇವಸ್ವ[3] ಪ್ರಣಿಪತ್ಯ ಕೃತಾಂಜಲಿಃ||

ಮುನಿಯು ಹೇಳಿದನು: “ದಂಭ, ಮಾನ , ಕ್ರೋಧ, ಹರ್ಷ, ಮತ್ತು ಭಯವನ್ನು ತೊರೆದು ಕೈಮುಗಿದು ನಮಸ್ಕರಿಸುತ್ತಾ ಶತ್ರುವಿನ ಸೇವೆಮಾಡು.

12106006a ತಮುತ್ತಮೇನ ಶೌಚೇನ ಕರ್ಮಣಾ ಚಾಭಿರಾಧಯ|

12106006c ದಾತುಮರ್ಹತಿ ತೇ ವೃತ್ತಿಂ[4] ವೈದೇಹಃ ಸತ್ಯಸಂಗರಃ||

ಉತ್ತಮ ಶೌಚ ಕರ್ಮಗಳಿಂದ ಸತ್ಯಸಂಗರ ವಿದೇಹರಾಜನನ್ನು ಆರಾಧಿಸು. ಅವನು ನಿನಗೆ ವೃತ್ತಿಯನ್ನು ನೀಡಬಹುದು.

12106007a ಪ್ರಮಾಣಂ ಸರ್ವಭೂತೇಷು ಪ್ರಗ್ರಹಂ ಚ ಗಮಿಷ್ಯಸಿ|

12106007c ತತಃ ಸಹಾಯಾನ್ಸೋತ್ಸಾಹಾಽಲ್ಲಪ್ಸ್ಯಸೇಽವ್ಯಸನಾನ್ಶುಚೀನ್||

ಆಗ ನೀನು ಸರ್ವಭೂತಗಳಿಗೂ ಪ್ರಮಾಣಭೂತನಾಗುವೆ. ಎಲ್ಲರಿಗೂ ಆಶ್ರಯನಾಗುವೆ. ಆಗ ನಿನಗೆ ಶುದ್ಧಹೃದಯರಾದ, ದುರ್ವ್ಯಸನಗಳಿಂದ ರಹಿತರಾದ ಉತ್ಸಾಹಶಾಲೀ ಸಹಾಯಕರು ಲಭಿಸುತ್ತಾರೆ.

12106008a ವರ್ತಮಾನಃ ಸ್ವಶಾಸ್ತ್ರೇ ವೈ ಸಂಯತಾತ್ಮಾ ಜಿತೇಂದ್ರಿಯಃ|

12106008c ಅಭ್ಯುದ್ಧರತಿ ಚಾತ್ಮಾನಂ ಪ್ರಸಾದಯತಿ ಚ ಪ್ರಜಾಃ||

ಶಾಸ್ತ್ರಗಳಂತೆ ನಡೆದುಕೊಂಡು ಸಂಯತಾತ್ಮನೂ ಜಿತೇಂದ್ರಿಯನೂ ಆಗಿರುವವನು ತನ್ನನ್ನು ತಾನೇ ಅಭಿವೃದ್ಧಿಗೊಳಿಸಿಕೊಳ್ಳುತ್ತಾನೆ ಮತ್ತು ಪ್ರಜೆಗಳನ್ನೂ ಸಂತೋಷಗೊಳಿಸುತ್ತಾನೆ.

12106009a ತೇನೈವ ತ್ವಂ ಧೃತಿಮತಾ ಶ್ರೀಮತಾ ಚಾಭಿಸತ್ಕೃತಃ|

12106009c ಪ್ರಮಾಣಂ ಸರ್ವಭೂತೇಷು ಗತ್ವಾ ಪ್ರಗ್ರಹಣಂ ಮಹತ್||

ಆ ದೃತಿಮತ ಶ್ರೀಮಂತ ಜನಕನಿಂದ ಸತ್ಕೃತನಾದ ನೀನು ಸರ್ವಭೂತಗಳ ವಿಶ್ವಾಸಕ್ಕೆ ಪಾತ್ರನಾಗುವೆ ಮತ್ತು ಎಲ್ಲರೂ ನಿನ್ನನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತಾರೆ.

12106010a ತತಃ ಸುಹೃದ್ಬಲಂ ಲಬ್ಧ್ವಾ ಮಂತ್ರಯಿತ್ವಾ ಸುಮಂತ್ರಿತಮ್|

12106010c ಅಂತರೈರ್ಭೇದಯಿತ್ವಾರೀನ್ಬಿಲ್ವಂ ಬಿಲ್ವೇನ ಶಾತಯ|

12106010e ಪರೈರ್ವಾ ಸಂವಿದಂ ಕೃತ್ವಾ ಬಲಮಪ್ಯಸ್ಯ ಘಾತಯ||

ಅನಂತರ ಸುಹೃದಯರ ಬಲವನ್ನು ಪಡೆದು, ಉತ್ತಮ ಸಲಹೆಗಾರರಿಂದ ಸಲಹೆಗಳನ್ನು ಪಡೆದುಕೊಂಡು ಅಂತರಂಗದ ವ್ಯಕ್ತಿಗಳ ಮೂಲಕವೇ ಶತ್ರುಗಳನ್ನು ಭೇದಿಸಬೇಕು. ಬಿಲ್ವದ ಕಾಯನ್ನು ಬಿಲ್ವದ ಕಾಯಿಯಿಂದಲೇ ಒಡೆಯುವಂತೆ ಶತ್ರುಗಳ ಸಹಯೋಗದಿಂದಲೇ ಶತ್ರುಗಳನ್ನು ನಾಶಮಾಡು. ಶತ್ರುವಿನ ಶತ್ರುವಿನೊಡನೆ ಒಪ್ಪಂದಮಾಡಿಕೊಂಡಾದರೂ ನಿನ್ನ ಶತ್ರುವಿನ ಬಲವನ್ನು ಧ್ವಂಸಮಾಡು.

12106011a ಅಲಭ್ಯಾ ಯೇ ಶುಭಾ ಭಾವಾಃ ಸ್ತ್ರಿಯಶ್ಚಾಚ್ಚಾದನಾನಿ ಚ|

12106011c ಶಯ್ಯಾಸನಾನಿ ಯಾನಾನಿ ಮಹಾರ್ಹಾಣಿ ಗೃಹಾಣಿ ಚ||

12106012a ಪಕ್ಷಿಣೋ ಮೃಗಜಾತಾನಿ ರಸಾ ಗಂಧಾಃ ಫಲಾನಿ ಚ|

12106012c ತೇಷ್ವೇವ ಸಜ್ಜಯೇಥಾಸ್ತ್ವಂ ಯಥಾ ನಶ್ಯೇತ್ ಸ್ವಯಂ ಪರಃ||

ಅಥವಾ ಅಲಭ್ಯವಾದ ಸುಂದರ ಸ್ತ್ರೀಯರು, ಚಾದರಗಳು, ಶಯ್ಯಾಸನಗಳು, ಮಹಾಬೆಲೆಬಾಳುವ ಸೌಧಗಳು, ಪಕ್ಷಿ-ಮೃಗಗಳಿಂದ ಹುಟ್ಟಿದ ರಸ-ಗಂಧ-ಫಲಗಳು ಇವೇ ಮೊದಲಾದವುಗಳಿಂದ ಶತ್ರುವಿನ ಮನಸ್ಸನ್ನು ಆಕರ್ಷಿಸಿ ಆಸಕ್ತನಾದ ಶತ್ರುವನ್ನು ತಾನೇ ಸಂಹರಿಸಬೇಕು.

12106013a ಯದ್ಯೇವ ಪ್ರತಿಷೇದ್ಧವ್ಯೋ ಯದ್ಯುಪೇಕ್ಷಣಮರ್ಹತಿ|

12106013c ನ ಜಾತು ವಿವೃತಃ ಕಾರ್ಯಃ ಶತ್ರುರ್ವಿನಯಮಿಚ್ಚತಾ||

ಮಿತ್ರನ ಸೋಗನ್ನು ಹಾಕಿಕೊಂಡು ವ್ಯಸನಕ್ಕೆ ಸಿಕ್ಕಿಹಾಕಿಕೊಳ್ಳಬಾರದೆಂದು ಅವನನ್ನು ತಡೆಯಲೂ ಪ್ರಯತ್ನಿಸಬೇಕು. ಸಂದರ್ಭಾನುಸಾರವಾಗಿ ಅವನಿಗೆ ಯಾವರೀತಿಯ ಸಂಶಯವೂ ಬರದ ರೀತಿಯಲ್ಲಿ ಇದನ್ನು ಮಾಡಬೇಕು. ಕೆಲವೊಮ್ಮೆ ಉದಾಸೀನನಾಗಿಯೂ ಇದ್ದುಬಿಡಬಬೇಕು. ಉಪೇಕ್ಷೆ ಮಾಡಬೇಕು. ಶತ್ರುವಿಗೆ ವಿನಯನಾಗಿಯೇ ನಡೆದುಕೊಳ್ಳಬೇಕು.

12106014a ವಸಸ್ವ[5] ಪರಮಾಮಿತ್ರವಿಷಯೇ ಪ್ರಾಜ್ಞಸಂಮತೇ|

12106014c ಭಜಸ್ವ ಶ್ವೇತಕಾಕೀಯೈರ್ಮಿತ್ರಾಧಮಮನರ್ಥಕೈಃ||

ನೀನು ಬುದ್ಧಿವಂತರ ವಿಶ್ವಾಸಕ್ಕೆ ಪಾತ್ರನಾಗಿ ಪರಮಶತ್ರುವಿನ ರಾಜ್ಯದಲ್ಲಿ ಕಾಗೆಯು ಬೆಳ್ಳಗಿದೆ[6] ಎಂದು ಹೇಳುವಂತೆ ಒಳ್ಳೆಯದನ್ನು ಕೆಟ್ಟದ್ದೆಂದೂ ಕೆಟ್ಟದ್ದನ್ನು ಒಳ್ಳೆಯದೆಂದೂ ಹೇಳುತ್ತಾ ಅನರ್ಥಕಾರೀ ಕಾರ್ಯಗಳನ್ನು ಪ್ರಯೋಜನಕಾರಿಗಳೆಂದು ಹೇಳುತ್ತಾ ಮಿತ್ರನಂತೆಯೇ ವಾಸಿಸು.

12106015a ಆರಂಭಾಂಶ್ಚಾಸ್ಯ ಮಹತೋ ದುಷ್ಕರಾಂಸ್ತ್ವಂ ಪ್ರಯೋಜಯ|

12106015c ನದೀಬಂಧವಿರೋಧಾಂಶ್ಚ ಬಲವದ್ಭಿರ್ವಿರುಧ್ಯತಾಮ್||

ದುಷ್ಕರವಾದ ಮಹಾಕಾರ್ಯವನ್ನು ಪ್ರಾರಂಭಿಸುವಂತೆ ಒತ್ತಾಯಿಸಬೇಕು. ಬಲವಂತ ಶತ್ರುಗಳನ್ನು ನದೀಬಂಧದಂತೆ ವಿರೋಧಿಸಲು ಸಲಹೆ ನೀಡಬೇಕು.

12106016a ಉದ್ಯಾನಾನಿ ಮಹಾರ್ಹಾಣಿ ಶಯನಾನ್ಯಾಸನಾನಿ ಚ|

12106016c ಪ್ರತಿಭೋಗಸುಖೇನೈವ ಕೋಶಮಸ್ಯ ವಿರೇಚಯ||

ರಾಜಕೋಶವನ್ನು ಉದ್ಯಾನಗಳು, ಮಹಾವೆಚ್ಚದ ಶಯನ-ಆಸನಗಳು ಮೊದಲಾದ ಭೋಗಸುಖಗಳಿಗೇ ವ್ಯಯವಾಗುವಂತೆ ಮಾಡಬೇಕು.

12106017a ಯಜ್ಞದಾನಪ್ರಶಂಸಾಸ್ಮೈ ಬ್ರಾಹ್ಮಣೇಷ್ವನುವರ್ಣ್ಯತಾಮ್|

12106017c ತೇ ತ್ವತ್ಪ್ರಿಯಂ ಕರಿಷ್ಯಂತಿ ತಂ ಚೇಷ್ಯಂತಿ ವೃಕಾ ಇವ||

ಬ್ರಾಹ್ಮಣರನ್ನು ಪ್ರಶಂಸಿಸಿ ಅವರ ಮೂಲಕ ಅವನು ದೊಡ್ಡ-ದೊಡ್ಡ ಯಜ್ಞ-ದಾನಗಳಲ್ಲಿ ತೊಡಗುವಂತೆ ಮಾಡಬೇಕು. ಅವರಿಗೆ ಪ್ರಿಯವಾದುದನ್ನು ಮಾಡಿದರೆ ಆ ಬ್ರಾಹ್ಮಣರು ತೋಳಗಳಂತೆ ಅವನ ಐಶ್ವರ್ಯವನ್ನು ಕಬಳಿಸುತ್ತಾರೆ.

12106018a ಅಸಂಶಯಂ ಪುಣ್ಯಶೀಲಃ ಪ್ರಾಪ್ನೋತಿ ಪರಮಾಂ ಗತಿಮ್|

12106018c ತ್ರಿವಿಷ್ಟಪೇ ಪುಣ್ಯತಮಂ ಸ್ಥಾನಂ ಪ್ರಾಪ್ನೋತಿ ಪಾರ್ಥಿವಃ|

12106018e ಕೋಶಕ್ಷಯೇ ತ್ವಮಿತ್ರಾಣಾಂ ವಶಂ ಕೌಸಲ್ಯ ಗಚ್ಚತಿ||

ಪುಣ್ಯಶೀಲನು ಪರಮ ಗತಿಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಕೌಸಲ್ಯ! ರಾಜಕೋಶವು ಬರಿದಾಗಲು ಅವನು ಶತ್ರುಗಳ ವಶನಾಗುತ್ತಾನೆ.

12106019a ಉಭಯತ್ರ ಪ್ರಸಕ್ತಸ್ಯ ಧರ್ಮೇ ಚಾಧರ್ಮ ಏವ ಚ|

12106019c ಬಲಾರ್ಥಮೂಲಂ ವ್ಯುಚ್ಚಿದ್ಯೇತ್ತೇನ ನಂದಂತಿ ಶತ್ರವಃ||

ರಾಜಕೋಶವನ್ನು ಧರ್ಮ-ಅಧರ್ಮ ಕಾರ್ಯಗಳೆರಡಕ್ಕೂ ಬಳಸಿ ಬರಿದುಮಾಡಿದರೆ ಬಲವು ಬೊಕ್ಕಸವನ್ನು ಅವಲಂಬಿಸಿರುವುದರಿಂದ ಶತ್ರುಗಳು ಹರ್ಷಿತರಾಗುತ್ತಾರೆ.

12106020a ನಿಂದ್ಯಾಸ್ಯ ಮಾನುಷಂ ಕರ್ಮ ದೈವಮಸ್ಯೋಪವರ್ಣಯ|

12106020c ಅಸಂಶಯಂ ದೈವಪರಃ ಕ್ಷಿಪ್ರಮೇವ ವಿನಶ್ಯತಿ||

ಸೇನೆಗಳನ್ನು ಒಟ್ಟುಗೂಡಿಸುವಂತಹ ಮಾನುಷ ಕರ್ಮಗಳನ್ನು ನಿಂದಿಸುತ್ತಾ ಯಜ್ಞ-ಯಾಗಾದಿ ದೇವಕಾರ್ಯಗಳಿಗೇ ರಾಜಕೋಶವನ್ನು ಬಳಸುವಂತೆ ಸಲಹೆನೀಡಬೇಕು. ದೇವಕಾರ್ಯಗಳಿಗೆ ವೆಚ್ಚಮಾಡಿ ಅವನು ಬೇಗನೇ ವಿನಾಶಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

12106021a ಯಾಜಯೈನಂ ವಿಶ್ವಜಿತಾ ಸರ್ವಸ್ವೇನ ವಿಯುಜ್ಯತಾಮ್|

12106021c ತತೋ ಗಚ್ಚತ್ವಸಿದ್ಧಾರ್ಥಃ ಪೀಡ್ಯಮಾನೋ ಮಹಾಜನಮ್||

12106022a ತ್ಯಾಗಧರ್ಮವಿದಂ ಮುಂಡಂ ಕಂ ಚಿದಸ್ಯೋಪವರ್ಣಯ|

12106022c ಅಪಿ ತ್ಯಾಗಂ ಬುಭೂಷೇತ ಕಚ್ಚಿದ್ಗಚ್ಚೇದನಾಮಯಮ್||

ಅವನು ಸರ್ವವನ್ನೂ ಬಳಸಿ ವಿಶ್ವಜಿತು ಯಜ್ಞವನ್ನು ಮಾಡುವಂತೆ ಪ್ರೇರೇಪಿಸಬೇಕು. ಅನಂತರ ನೀನು ಅರ್ಥಸಿದ್ಧಿಯನ್ನು ಪಡೆದುಕೊಳ್ಳುತ್ತೀಯೆ. ಆಗ ನೀನು ಕಷ್ಟದಲ್ಲಿರುವ ಮಹಾತ್ಮ, ತ್ಯಾಗಧರ್ಮವಿದು, ಸಂನ್ಯಾಸಿಯ ಕುರಿತು ವರ್ಣಿಸಬೇಕು. ಅವನ ಉಪದೇಶದಂತೆ ರಾಜನು ರಾಜ್ಯವನ್ನು ತ್ಯಜಿಸಿ ಅನಾಮಯನಾಗಬಹುದು.

12106023a ಸಿದ್ಧೇನೌಷಧಯೋಗೇನ ಸರ್ವಶತ್ರುವಿನಾಶಿನಾ|

12106023c ನಾಗಾನಶ್ವಾನ್ಮನುಷ್ಯಾಂಶ್ಚ ಕೃತಕೈರುಪಘಾತಯ||

ಅದೂ ಸಾಧ್ಯವಾಗದಿದ್ದಲ್ಲಿ ಸರ್ವಶತ್ರುವಿನಾಶಕವೆಂಬ ಸಿದ್ಧೌಷದಿಯನ್ನು ಪ್ರಯೋಗಿಸಿ ಅವನಲ್ಲಿರುವ ಆನೆ-ಕುದುರೆ-ಪಾದತಿಗಳೆಲ್ಲವನ್ನೂ ವಂಚಿಸಿ ಕೊಲ್ಲಬೇಕು.

12106024a ಏತೇ ಚಾನ್ಯೇ ಚ ಬಹವೋ ದಂಭಯೋಗಾಃ ಸುನಿಶ್ಚಿತಾಃ|

12106024c ಶಕ್ಯಾ ವಿಷಹತಾ ಕರ್ತುಂ ನಕ್ಲೀಬೇನ ನೃಪಾತ್ಮಜ||

ನೃಪಾತ್ಮಜ! ಅಧರ್ಮವನ್ನೆಸಗಲು ಹಿಂಜರಿಯದ ಮನುಷ್ಯನಿಗಾಗಿ ಇವೇ ಮೊದಲಾದ ಅನೇಕ ವಂಚನಾಯುಕ್ತ ಉಪಾಯಗಳನ್ನು ಹೇಳಿದ್ದಾರೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕಾಲಕವೃಕ್ಷೀಯೇ ಷಡಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಕಾಲಕವೃಕ್ಷೀಯ ಎನ್ನುವ ನೂರಾಆರನೇ ಅಧ್ಯಾಯವು.

Pink flower jpg | Pink flower — Stock Photo © Rawlik #6354967

[1] ದಂಭಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಕಾಮಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಅಪ್ಯಮಿತ್ರಾಣಿ ಸೇವಸ್ಯ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ವಿತ್ತಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ರಮಸ್ವ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ವ್ಯಾಖ್ಯಾನಕಾರರು ಶ್ವಾಚ ಏತಶ್ಚ ಕಾಕಶ್ಚ ತೇಷಾಮಿಮೀ ಧರ್ಮಾಃ ಶ್ವೇತಕಾಕೀಯಾಃ| ಎಂದು ನಿರ್ವಚನ ಮಾಡಿ ಹೀಗೆ ಅರ್ಥೈಸಿರುತ್ತಾರೆ: ನಾಯಿಯು ಪರಕೀಯರ ವಿಷಯದಲ್ಲಿ ಜಾಗರೂಕವಾಗಿರುವಂತೆ ಶತ್ರುಗಳ ವಿಷಯದಲ್ಲಿ ಜಾಗರೂಕನಾಗಿರುತ್ತಾ, ಜಿಂಕೆಯು ಸ್ವಲ್ಪವೇ ಶಬ್ದವಾದರೂ ಭಯಗೊಳ್ಳುವಂತೆ ಶತ್ರುವಿನ ವಿಷಯದಲ್ಲಿ ಭಯದಿಂದಿರುತ್ತಾ ಕಾಗೆಯು ಒಂದೆಡೆ ಕುಳಿತು ಎಲ್ಲವನ್ನೂ ವೀಕ್ಷಿಸುವಂತೆ ರಾಜ್ಯದ ಪರಿಸ್ಥಿತಿಯನ್ನು ಸೂಕ್ಷ್ಮದೃಷ್ಟಿಯಿಂದ ಅಡಿಗಡಿಗೂ ಅವಲೋಕಿಸುತ್ತಾ, ಅರ್ಥಶೂನ್ಯ ಮಾತುಗಳಿಂದ ರಾಜನೊಡನೆ ಮಿತ್ರಧರ್ಮವನ್ನು ಪಾಲಿಸುತ್ತಾ ಕಾಲಕಳೆಯುತ್ತಿರು (ಭಾರತ ದರ್ಶನ).

Comments are closed.