Shanti Parva: Chapter 103

ಶಾಂತಿ ಪರ್ವ: ರಾಜಧರ್ಮ ಪರ್ವ

೧೦೩

ವಿಜಯಾಪಜಯಸೂಚಕಗಳಾದ ಶುಭಾಶುಭಲಕ್ಷಣಗಳ ವರ್ಣನೆ; ಉತ್ಸಾಹಿ ಮತ್ತು ಬಲಿಷ್ಠ ಸೈನಿಕರ ವರ್ಣನೆ; ರಾಜನ ಯುದ್ಧಸಂಬಂಧ ನೀತಿಯ ನಿರ್ದೇಶನ (1-40).

12103001 ಯುಧಿಷ್ಠಿರ ಉವಾಚ|

12103001a ಜೈತ್ರ್ಯಾ ವಾ ಕಾನಿ ರೂಪಾಣಿ ಭವಂತಿ ಪುರುಷರ್ಷಭ|

12103001c ಪೃತನಾಯಾಃ ಪ್ರಶಸ್ತಾನಿ ತಾನೀಹೇಚ್ಚಾಮಿ ವೇದಿತುಮ್||

ಯುಧಿಷ್ಠಿರನು ಹೇಳಿದನು: “ಪುರುಷರ್ಷಭ! ಜಯಿಸುವವರು ಹೇಗಿರುತ್ತಾರೆ? ಸೇನೆಗಳ ಪ್ರಶಸ್ತ ಗುಣಗಳ ಕುರಿತು ತಿಳಿಯಲು ಇಚ್ಛಿಸುತ್ತೇನೆ.”

12103002 ಭೀಷ್ಮ ಉವಾಚ|

12103002a ಜೈತ್ರ್ಯಾ ವಾ ಯಾನಿ ರೂಪಾಣಿ ಭವಂತಿ ಪುರುಷರ್ಷಭ|

12103002c ಪೃತನಾಯಾಃ ಪ್ರಶಸ್ತಾನಿ ತಾನಿ ವಕ್ಷ್ಯಾಮಿ ಸರ್ವಶಃ||

ಭೀಷ್ಮನು ಹೇಳಿದನು: “ಪುರುಷರ್ಷಭ! ಜಯಿಸುವವರು ಹೇಗಿರುತ್ತಾರೆ ಮತ್ತು ಸೇನೆಗಳ ಪ್ರಶಸ್ತಗುಣಗಳ ಕುರಿತು ಎಲ್ಲವನ್ನೂ ಹೇಳುತ್ತೇನೆ.

12103003a ದೈವಂ ಪೂರ್ವಂ ವಿಕುರುತೇ ಮಾನುಷೇ ಕಾಲಚೋದಿತೇ|

12103003c ತದ್ವಿದ್ವಾಂಸೋಽನುಪಶ್ಯಂತಿ ಜ್ಞಾನದೀರ್ಘೇಣ ಚಕ್ಷುಷಾ||

ಕಾಲವು ಮನುಷ್ಯನನ್ನು ಪ್ರಚೋದಿಸುತ್ತದೆ. ಆದುದರಿಂದ ವಿದ್ವಾಂಸರು ತಮ್ಮ ಜ್ಞಾನದ ದೀರ್ಘ ದೃಷ್ಟಿಯಿಂದ ದೈವವು ಅನುಕೂಲವಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಮೊದಲು ನಿರ್ಧರಿಸುತ್ತಾರೆ.

12103004a ಪ್ರಾಯಶ್ಚಿತ್ತವಿಧಿಂ ಚಾತ್ರ ಜಪಹೋಮಾಂಶ್ಚ ತದ್ವಿದಃ|

12103004c ಮಂಗಲಾನಿ ಚ ಕುರ್ವಂತಃ ಶಮಯಂತ್ಯಹಿತಾನ್ಯಪಿ||

ದೈವವು ಅಹಿತವಾಗಿದ್ದರೂ ಆ ವಿದುಗಳು ಜಪ-ಹೋಮಾದಿ ಮಂಗಲ ಕರ್ಮಗಳನ್ನೂ ಪ್ರಾಯಶ್ಚಿತ್ತ ವಿಧಿಗಳನ್ನೂ ನಡೆಸಿ ಆ ಅಹಿತಗಳನ್ನು ಪ್ರಶಮನಗೊಳಿಸುತ್ತಾರೆ.

12103005a ಉದೀರ್ಣಮನಸೋ ಯೋಧಾ ವಾಹನಾನಿ ಚ ಭಾರತ|

12103005c ಯಸ್ಯಾಂ ಭವಂತಿ ಸೇನಾಯಾಂ ಧ್ರುವಂ ತಸ್ಯಾಂ ಜಯಂ ವದೇತ್||

ಭಾರತ! ಯಾವ ಸೇನೆಯ ಯೋಧರೂ ವಾಹನಗಳೂ ಉತ್ಸಾಹಿತರಾಗಿರುವರೋ ಆ ಸೇನೆಗೆ ಜಯವು ನಿಶ್ಚಿತ ಎಂದು ಹೇಳುತ್ತಾರೆ.

12103006a ಅನ್ವೇನಾಂ ವಾಯವೋ ವಾಂತಿ ತಥೈವೇಂದ್ರಧನೂಂಷಿ ಚ|

12103006c ಅನುಪ್ಲವಂತೇ ಮೇಘಾಶ್ಚ ತಥಾದಿತ್ಯಸ್ಯ ರಶ್ಮಯಃ||

12103007a ಗೋಮಾಯವಶ್ಚಾನುಲೋಮಾ ವಡಾ ಗೃಧ್ರಾಶ್ಚ ಸರ್ವಶಃ|

12103007c ಆಚರೇಯುರ್ಯದಾ ಸೇನಾಂ ತದಾ ಸಿದ್ಧಿರನುತ್ತಮಾ||

ಸೇನೆಯ ಹಿಂಬಾಗದಿಂದ ಗಾಳಿಯು ಬೀಸುತ್ತಿದ್ದರೆ, ಸೇನೆಯ ಹಿಂದೆ ಕಾಮನ ಬಿಲ್ಲು ಕಂಡುಬಂಡರೆ, ಮೋಡಗಳು ನೆತ್ತಿಯ ಮೇಲೆ ಹಾಯ್ದು ಹೋಗುತ್ತಿದ್ದರೆ, ಸೂರ್ಯನ ಕಿರಣಗಳು ಬೀಳುತ್ತಿದ್ದರೆ, ಗುಳ್ಳೇನರಿ-ರಣಹದ್ದು-ಕಾಗೆಗಳು ಸೇನೆಯ ಸುತ್ತಲೂ ಇದ್ದರೆ ಆ ಸೇನೆಗೆ ಉತ್ತಮ ಸಿದ್ಧಿಯಾಗುತ್ತದೆ.

12103008a ಪ್ರಸನ್ನಭಾಃ ಪಾವಕ ಊರ್ಧ್ವರಶ್ಮಿಃ

ಪ್ರದಕ್ಷಿಣಾವರ್ತಶಿಖೋ ವಿಧೂಮಃ|

12103008c ಪುಣ್ಯಾ ಗಂಧಾಶ್ಚಾಹುತೀನಾಂ ಪ್ರವಾಂತಿ

ಜಯಸ್ಯೈತದ್ ಭಾವಿನೋ ರೂಪಮಾಹುಃ||

ಅಗ್ನ್ಯಾಗಾರದಲ್ಲಿ ಯಜ್ಞೇಶ್ವರನು ಪ್ರಸನ್ನ ಕಾಂತಿಯಿಂದ ಕೂಡಿದ್ದರೆ, ಜ್ವಾಲೆಗಳು ಊರ್ಧ್ವಮುಖವಾಗಿದ್ದರೆ, ಜ್ವಾಲೆಗಳು ಪ್ರದಕ್ಷಿಣಾಕಾರವಾಗಿ ಚಲಿಸುತ್ತಿದ್ದರೆ, ಹೊಗೆಯಿಲ್ಲದೇ ಉರಿಯುತ್ತಿದ್ದರೆ, ಪುಣ್ಯ ಗಂಧವನ್ನು ಹೊರಸೂಸುತ್ತಿದ್ದರೆ, ಅದು ಮುಂದಾಗುವ ವಿಜಯವನ್ನು ಸೂಚಿಸುತ್ತದೆ.

12103009a ಗಂಭೀರಶಬ್ದಾಶ್ಚ ಮಹಾಸ್ವನಾಶ್ಚ

ಶಂಖಾಶ್ಚ ಭೇರ್ಯಶ್ಚ ನದಂತಿ ಯತ್ರ|

12103009c ಯುಯುತ್ಸವಶ್ಚಾಪ್ರತೀಪಾ ಭವಂತಿ

ಜಯಸ್ಯೈತದ್ ಭಾವಿನೋ ರೂಪಮಾಹುಃ||

ಎಲ್ಲಿ ಗಂಭೀರ ಶಬ್ದಗಳು ಮತ್ತು ಮಹಾ ಧ್ವನಿಗಳು ಕೇಳಿಬರುತ್ತವೆಯೋ, ಎಲ್ಲಿ ಶಂಖ-ಭೇರಿಗಳು ಮೊಳಗುತ್ತವೆಯೋ, ಮತ್ತು ಎಲ್ಲಿ ಸೈನಿಕರು ಯುದ್ಧೋತ್ಸುಕರಾಗಿರುವರೋ ಅಲ್ಲಿ ವಿಜಯವು ಕಂಡುಬರುತ್ತದೆ ಎಂದು ಹೇಳುತ್ತಾರೆ.

12103010a ಇಷ್ಟಾ ಮೃಗಾಃ ಪೃಷ್ಠತೋ ವಾಮತಶ್ಚ

ಸಂಪ್ರಸ್ಥಿತಾನಾಂ ಚ ಗಮಿಷ್ಯತಾಂ ಚ|

12103010c ಜಿಘಾಂಸತಾಂ ದಕ್ಷಿಣಾಃ ಸಿದ್ಧಿಮಾಹುರ್

ಯೇ ತ್ವಗ್ರತಸ್ತೇ ಪ್ರತಿಷೇಧಯಂತಿ||

ಸೇನೆಯು ಹೊರಡುವಾಗ ಅಥವಾ ಪ್ರಯಾಣಿಸುತ್ತಿರುವಾಗ ಇಷ್ಟ ಮೃಗಗಳು ಹಿಂದಿನಿಂದ ಅಥವಾ ಎಡಭಾಗದಿಂದ ಹೋದರೆ ಇಚ್ಛಿಸಿದ ಕಾರ್ಯವು ಸಿದ್ಧಿಯಾಗುತ್ತದೆ ಎಂದು ಹೇಳುತ್ತಾರೆ. ಯುದ್ಧದ ಸಮಯದಲ್ಲಿ ಇವು ಬಲಭಾಗದಲ್ಲಿದ್ದರೆ ಅದು ವಿಜಯವನ್ನು ಸೂಚಿಸುತ್ತದೆ. ಆದರೆ ಆ ಮೃಗಗಳು ಸೇನೆಯು ಹೊರಡುವಾಗ ಎದುರಿನಿಂದ ಬಂದರೆ ಯುದ್ಧಕ್ಕೆ ಹೋಗುವುದನ್ನು ನಿಷೇಧಿಸುತ್ತಿವೆಯೆಂದು ತಿಳಿಯಬೇಕು.

12103011a ಮಂಗಲ್ಯಶಬ್ದಾಃ ಶಕುನಾ ವದಂತಿ

ಹಂಸಾಃ ಕ್ರೌಂಚಾಃ ಶತಪತ್ರಾಶ್ಚ ಚಾಷಾಃ|

12103011c ಹೃಷ್ಟಾ ಯೋಧಾಃ ಸತ್ತ್ವವಂತೋ ಭವಂತಿ

ಜಯಸ್ಯೈತದ್ ಭಾವಿನೋ ರೂಪಮಾಹುಃ||

ಹಂಸ, ಕ್ರೌಂಚ, ಶತಪತ್ರ, ನವಿಲು ಮತ್ತು ಕಾಡಿನ ಕಾಗೆ ಮೊದಲಾದ ಪಕ್ಷಿಗಳು ಮಂಗಲವಾಗಿ ಕೂಗಿಕೊಳ್ಳುತ್ತಿದ್ದರೆ, ಯೋಧರು ಹೃಷ್ಟರೂ ಸತ್ತ್ವವಂತರೂ ಆಗಿದ್ದರೆ ಅವು ಮುಂದೆ ಆಗುವ ವಿಜಯವನ್ನು ಸೂಚಿಸುತ್ತವೆ ಎಂದು ಹೇಳುತ್ತಾರೆ.

12103012a ಶಸ್ತ್ರೈಃ ಪತ್ರೈಃ ಕವಚೈಃ ಕೇತುಭಿಶ್ಚ

ಸುಭಾನುಭಿರ್ಮುಖವರ್ಣೈಶ್ಚ ಯೂನಾಮ್|

12103012c ಭ್ರಾಜಿಷ್ಮತೀ ದುಷ್ಪ್ರತಿಪ್ರೇಕ್ಷಣೀಯಾ

ಯೇಷಾಂ ಚಮೂಸ್ತೇಽಭಿಭವಂತಿ ಶತ್ರೂನ್||

ಯಾರ ಸೈನ್ಯವು ಪ್ರಕಾಶಿಸುವ ನಾನಾ ವಿಧದ ಶಸ್ತ್ರ-ಕವಚ-ಯಂತ್ರ-ಧ್ವಜಗಳಿಂದ ಸುಶೋಭಿತವಾಗಿದೆಯೋ, ನವಯುವಕ ಸೈನಿಕರು ಕಾಂತಿಯುಕ್ತ ಮುಖವರ್ಣದಿಂದ ಪ್ರಕಾಶಿಸುತ್ತಿರುವರೋ, ದೇದೀಪ್ಯಮಾನವಾದ ಯಾರ ಸೈನ್ಯವನ್ನು ಶತ್ರುಗಳು ನೋಡಲೂ ಸಾಧ್ಯವಾಗುವುದಿಲ್ಲವೋ ಅಂತಹ ಸೈನ್ಯವು ಶತ್ರುಗಳನ್ನು ಪರಾಜಯಗೊಳಿಸುತ್ತದೆ.

12103013a ಶುಶ್ರೂಷವಶ್ಚಾನಭಿಮಾನಿನಶ್ಚ

ಪರಸ್ಪರಂ ಸೌಹೃದಮಾಸ್ಥಿತಾಶ್ಚ|

12103013c ಯೇಷಾಂ ಯೋಧಾಃ ಶೌಚಮನುಷ್ಠಿತಾಶ್ಚ

ಜಯಸ್ಯೈತದ್ ಭಾವಿನೋ ರೂಪಮಾಹುಃ||

ಯಾರ ಯೋಧರು ಸೇವಾಪರರೂ ಅಭಿಮಾನಿಗಳೂ ಆಗಿದ್ದು ಪರಸ್ಪರರಲ್ಲಿ ಸೌಹಾರ್ದತೆಯಿಂದ ಇರುವರೋ ಮತ್ತು ಶೌಚಾಚಾರಗಳನ್ನಿಟ್ಟುಕೊಂಡಿರುವರೋ ಅವರು ಮುಂದೆ ಬರುವ ವಿಜಯವನ್ನು ಸೂಚಿಸುತ್ತಾರೆ.

12103014a ಶಬ್ದಾಃ ಸ್ಪರ್ಶಾಸ್ತಥಾ ಗಂಧಾ ವಿಚರಂತಿ ಮನಃಪ್ರಿಯಾಃ|

12103014c ಧೈರ್ಯಂ ಚಾವಿಶತೇ ಯೋಧಾನ್ವಿಜಯಸ್ಯ ಮುಖಂ ತು ತತ್||

ಮನಃಪ್ರಿಯವಾದ ಶಬ್ಧ-ಸ್ಪರ್ಶ-ಗಂಧಗಳೊಡನೆ ಧೈರ್ಯವೂ ಯೋಧರ ಮನಸ್ಸನ್ನು ಆವರಿಸಿದರೆ ಅದು ವಿಜಯಕ್ಕೆ ಮುಖ್ಯ ದ್ವಾರವಾಗುತ್ತದೆ.

12103015a ಇಷ್ಟೋ ವಾಮಃ ಪ್ರವಿಷ್ಟಸ್ಯ ದಕ್ಷಿಣಃ ಪ್ರವಿವಿಕ್ಷತಃ|

12103015c ಪಶ್ಚಾತ್ ಸಂಸಾಧಯತ್ಯರ್ಥಂ ಪುರಸ್ತಾತ್ ಪ್ರತಿಷೇಧತಿ[1]||

ರಣರಂಗವನ್ನು ಪ್ರವೇಶಿಸುವವನ ಎಡಗಡೆಯಲ್ಲಿ ಮತ್ತು ಎದುರಾಳಿಯ ಬಲಗಡೆಯಲ್ಲಿ ಕಾಗೆಯು[2] ಬಂದರೆ ವಿಜಯವನ್ನು ಸೂಚಿಸುತ್ತದೆ. ಎದುರಿನಿಂದ ಬಂದರೆ ವಿಜಯವನ್ನು ತಡೆಯುತ್ತದೆ.

12103016a ಸಂಭೃತ್ಯ ಮಹತೀಂ ಸೇನಾಂ ಚತುರಂಗಾಂ ಯುಧಿಷ್ಠಿರ|

12103016c ಸಾಮ್ನೈವಾವರ್ತನೇ ಪೂರ್ವಂ ಪ್ರಯತೇಥಾಸ್ತಥೋ ಯುಧಿ||

ಯುಧಿಷ್ಠಿರ! ಮಹಾ ಚತುರಂಗ ಸೇನೆಯನ್ನು ಸಿದ್ಧಗೊಳಿಸಿದ ನಂತರವೂ ಯುದ್ಧದ ಮೊದಲು ಸಾಮನೀತಿಯಿಂದಲೇ ವರ್ತಿಸಬೇಕು. ಸಂಧಿಯ ಪ್ರಯತ್ನಗಳು ನಿಷ್ಪ್ರಯೋಜಕವಾದ ನಂತರವೇ ಯುದ್ಧವನ್ನು ಪ್ರಾರಂಭಿಸಬೇಕು.

12103017a ಜಘನ್ಯ ಏಷ ವಿಜಯೋ ಯದ್ಯುದ್ಧಂ ನಾಮ ಭಾರತ|

12103017c ಯಾದೃಚ್ಚಿಕೋ ಯುಧಿ ಜಯೋ ದೈವೋ ವೇತಿ ವಿಚಾರಣಮ್||

ಭಾರತ! ಯುದ್ಧದಲ್ಲಿ ವಿಜಯ ಯಾರಿಗುಂಟಾಗುತ್ತದೆ ಎನ್ನುವುದನ್ನು ತಿಳಿಯುವುದು ಕಷ್ಟಸಾಧ್ಯ. ವಿಜಯವು ಆಕಸ್ಮಿಕವೋ ದೈವೇಚ್ಛೆಯೋ ಎನ್ನುವುದು ವಿಚಾರಣೀಯ. ವಿಜಯವು ಇಂಥವರಿಗೇ ಲಭಿಸುವುದೆಂದು ಮೊದಲೇ ನಿಶ್ಚಯಮಾಡಿ ಹೇಳಲು ಸಾಧ್ಯವಿಲ್ಲ.

12103018a ಅಪಾಮಿವ ಮಹಾವೇಗಸ್ತ್ರಸ್ತಾ ಮೃಗಗಣಾ ಇವ|

12103018c ದುರ್ನಿವಾರ್ಯತಮಾ ಚೈವ ಪ್ರಭಗ್ನಾ ಮಹತೀ ಚಮೂಃ||

ಮಹಾವೇಗದಿಂದ ಹರಿಯುವ ನೀರನ್ನು ಮತ್ತು ಭಯಗೊಂಡ ಮೃಗಗಣಗಳನ್ನು ತಡೆಯಲು ಸಾಧ್ಯವಾಗದಂತೆ ಭಗ್ನವಾದ ಸೇನೆಯನ್ನು ತಡೆಯಲು ಸಾಧ್ಯವಿಲ್ಲ. ಆದುದರಿಂದ ದೊಡ್ಡ ಸೈನ್ಯವಿದ್ದ ಮಾತ್ರಕ್ಕೆ ಜಯವು ದೊರೆಯುತ್ತದೆಯೆಂದು ಹೇಳಲಿಕ್ಕಾಗುವುದಿಲ್ಲ.

12103019a ಭಗ್ನಾ ಇತ್ಯೇವ ಭಜ್ಯಂತೇ ವಿದ್ವಾಂಸೋಽಪಿ ನಕಾರಣಮ್|

12103019c ಉದಾರಸಾರಾ ಮಹತೀ ರುರುಸಂಘೋಪಮಾ ಚಮೂಃ||

ಜಿಂಕೆಗಳ ಹಿಂಡಿನಂತಿರುವ ಸೇನೆಯು[3] ಎಷ್ಟೇ ಬಲವತ್ತವಾಗಿದ್ದರೂ ಮತ್ತು ದೊಡ್ಡದಾಗಿದ್ದರೂ ಅವು ಓಡಲು ಪ್ರಾರಂಭಿಸಿದರೆ ವಿದ್ವಾಂಸರೂ ಅವರನ್ನು ತಡೆಯಲು ಶಕ್ಯರಾಗುವುದಿಲ್ಲ.

12103020a ಪರಸ್ಪರಜ್ಞಾಃ ಸಂಹೃಷ್ಟಾಸ್ತ್ಯಕ್ತಪ್ರಾಣಾಃ ಸುನಿಶ್ಚಿತಾಃ|

12103020c ಅಪಿ ಪಂಚಾಶತಿಃ ಶೂರಾ ಮೃದ್ನಂತಿ ಪರವಾಹಿನೀಮ್||

ಪರಸ್ಪರರನ್ನು ಚೆನ್ನಾಗಿ ತಿಳಿದುಕೊಂಡಿರುವ, ಸಂಹೃಷ್ಟರಾದ, ಪ್ರಾಣವನ್ನೂ ತೊರೆಯಲು ಸಿದ್ಧರಾಗಿರುವ, ಸುನಿಶ್ಚಿತರಾದ ಐವತ್ತು ಶೂರರು ಇದ್ದರೂ ಅವರು ಶತ್ರುಸೇನೆಯನ್ನು ಸದೆಬಡಿಯಬಲ್ಲರು.

12103021a ಅಥ ವಾ ಪಂಚ ಷಟ್ಸಪ್ತ ಸಹಿತಾಃ ಕೃತನಿಶ್ಚಯಾಃ|

12103021c ಕುಲೀನಾಃ ಪೂಜಿತಾಃ ಸಮ್ಯಗ್ವಿಜಯಂತೀಹ ಶಾತ್ರವಾನ್||

ಸತ್ಕುಲ ಪ್ರಸೂತರಾದ ಗೌರವಾನ್ವಿತರಾದ ಐದು, ಆರು ಅಥವಾ ಏಳು ಮಂದಿಯೇ ಒಟ್ಟಾಗಿ ನಿಶ್ಚಯಿಸಿ ಯುದ್ಧಮಾಡಿದರೆ ಅವರೂ ಕೂಡ ಶತ್ರುಗಳನ್ನು ಗೆದ್ದು ವಿಜಯವನ್ನು ಗಳಿಸಬಹುದು.

12103022a ಸಂನಿಪಾತೋ ನ ಗಂತವ್ಯಃ ಶಕ್ಯೇ ಸತಿ ಕಥಂ ಚನ|

12103022c ಸಾಂತ್ವಭೇದಪ್ರದಾನಾನಾಂ ಯುದ್ಧಮುತ್ತರಮುಚ್ಯತೇ||

ಬೇರೆ ಯಾವುದೇ ಉಪಾಯದಿಂದಲೂ ಸಾಧ್ಯವಾದರೆ ಯುದ್ಧಕ್ಕೆ ಹೋಗಬಾರದು. ಸಾಮ-ಭೇದ-ದಾನೋಪಾಯಗಳು ಸಿದ್ಧಿಯಾಗದಿದ್ದರೆ ಮಾತ್ರ ಕಟ್ಟಕಡೆಯದಾಗಿ ಯುದ್ಧವನ್ನು ಆಶ್ರಯಿಸಬೇಕೆಂದು ಹೇಳುತ್ತಾರೆ.

12103023a ಸಂಸರ್ಪಣಾದ್ಧಿ[4] ಸೇನಾಯಾ ಭಯಂ ಭೀರೂನ್ ಪ್ರಬಾಧತೇ|

12103023c ವಜ್ರಾದಿವ ಪ್ರಜ್ವಲಿತಾದಿಯಂ ಕ್ವ ನು ಪತಿಷ್ಯತಿ||

ಸೇನೆಯು ಹತ್ತಿರ ಹರಿದು ಬಂದಂತೆಯೇ “ಪ್ರಜ್ವಲಿಸುವ ವಜ್ರದಂತಿರುವ ಈ ಸೇನೆಯು ಯಾರ ಮೇಲೆ ಬೀಳುತ್ತದೆ?” ಎಂಬ ಭಯವು ಹೇಡಿಗಳನ್ನು ಬಾಧಿಸುತ್ತದೆ.

12103024a ಅಭಿಪ್ರಯಾತಾಂ ಸಮಿತಿಂ ಜ್ಞಾತ್ವಾ ಯೇ ಪ್ರತಿಯಾಂತ್ಯಥ|

12103024c ತೇಷಾಂ ಸ್ಪಂದಂತಿ ಗಾತ್ರಾಣಿ ಯೋಧಾನಾಂ ವಿಷಯಸ್ಯ[5] ಚ||

ಸೇನೆಯು ಆಕ್ರಮಣಿಸಲು ಸಿದ್ಧವಾಗಿದೆಯೆಂದು ತಿಳಿದು ಯುದ್ಧಮಾಡುವ ಉತ್ಸಾಹದಿಂದ ಅದನ್ನು ಎದುರಿಸಲು ಹೋಗುವ ಯೋಧರ ಶರೀರಗಳೂ, ಅವರು ನಿಂತಿರುವ ಪ್ರದೇಶವೂ ಸ್ಪಂದಿಸುತ್ತವೆ.

12103025a ವಿಷಯೋ ವ್ಯಥತೇ ರಾಜನ್ ಸರ್ವಃ ಸಸ್ಥಾಣುಜಂಗಮಃ|

12103025c ಶಸ್ತ್ರಪ್ರತಾಪತಪ್ತಾನಾಂ ಮಜ್ಜಾ ಸೀದತಿ ದೇಹಿನಾಮ್||

ರಾಜನ್! ಯುದ್ಧವು ಉಪಸ್ಥಿತವಾಯಿತೆಂದರೆ ದೇಶದಲ್ಲಿರುವ ಸ್ಥಾವರ-ಜಂಗಮಗಳ ಸಮೇತವಾಗಿ ಎಲ್ಲವೂ ದುಃಖಪಡುತ್ತವೆ. ಆ ರಾಜನ ಪ್ರತಾಪದಿಂದ ಸಂತಪ್ತರಾದವರ ಮಜ್ಜೆಯೂ ಕರಗಿ ಹೋಗುತ್ತದೆ.

12103026a ತೇಷಾಂ ಸಾಂತ್ವಂ ಕ್ರೂರಮಿಶ್ರಂ ಪ್ರಣೇತವ್ಯಂ ಪುನಃ ಪುನಃ|

12103026c ಸಂಪೀಡ್ಯಮಾನಾ ಹಿ ಪರೇ ಯೋಗಮಾಯಾಂತಿ ಸರ್ವಶಃ||

ಅವರೊಂದಿಗೆ ಕ್ರೂರಮಿಶ್ರವಾದ ಸಾಂತ್ವನ ಮಾತುಗಳನ್ನು ಪುನಃ ಪುನಃ ಹೇಳುತ್ತಿರಬೇಕು. ಇಲ್ಲವಾದರೆ ಪೀಡಿತರಾದ ಅವರು ಎಲ್ಲರೂ ಶತ್ರುಗಳ ಪಕ್ಷವನ್ನು ಸೇರಿಕೊಳ್ಳುತ್ತಾರೆ.

12103027a ಅಂತರಾಣಾಂ ಚ ಭೇದಾರ್ಥಂ ಚಾರಾನಭ್ಯವಚಾರಯೇತ್|

12103027c ಯಶ್ಚ ತಸ್ಮಾತ್ಪರೋ ರಾಜಾ ತೇನ ಸಂಧಿಃ ಪ್ರಶಸ್ಯತೇ||

ಶತ್ರುಗಳಿಗೂ ಮತ್ತು ಅವರ ಮಿತ್ರರಿಗೂ ಭೇದವನ್ನುಂಟುಮಾಡಲು ಚಾರರನ್ನು ಬಳಸಬೇಕು. ಶತ್ರುವು ತನಗಿಂತಲೂ ಬಲಿಷ್ಠ ರಾಜನಾಗಿದ್ದರೆ ಅವನೊಡನೆ ಸಂಧಿ ಮಾಡಿಕೊಳ್ಳುವುದೇ ಪ್ರಶಸ್ತವಾಗುತ್ತದೆ.

12103028a ನ ಹಿ ತಸ್ಯಾನ್ಯಥಾ ಪೀಡಾ ಶಕ್ಯಾ ಕರ್ತುಂ ತಥಾವಿಧಾ|

12103028c ಯಥಾ ಸಾರ್ಧಮಮಿತ್ರೇಣ ಸರ್ವತಃ ಪ್ರತಿಬಾಧನಮ್||

ಶತ್ರುವಿಗಿಂತಲೂ ಬಲಿಷ್ಠನಾದ ಶತ್ರುವಿನ ಶತ್ರುವಿನೊಡನೆ ಸಂಧಿಮಾಡಿಕೊಂಡರೆ ಶತ್ರುವಿಗೆ ಹೆಚ್ಚು ಪೀಡೆಯುಂಟಾಗುತ್ತದೆ. ಅವನಿಗೆ ಅದಕ್ಕಿಂತಲೂ ಹೆಚ್ಚಿನ ಪೀಡೆಯು ಬೇರೊಂದಿರುವುದಿಲ್ಲ. ಶತ್ರುಪಕ್ಷವು ಎಲ್ಲ ಕಡೆಗಳಿಂದಲೂ ಸಂಕಟದಲ್ಲಿರುವಂತೆ ಮಾಡಿ ನಂತರ ಯುದ್ಧಮಾಡಬೇಕು.

12103029a ಕ್ಷಮಾ ವೈ ಸಾಧುಮಾಯಾ ಹಿ ನ ಹಿ ಸಾಧ್ವಕ್ಷಮಾ ಸದಾ[6]|

12103029c ಕ್ಷಮಾಯಾಶ್ಚಾಕ್ಷಮಾಯಾಶ್ಚ ವಿದ್ಧಿ ಪಾರ್ಥ ಪ್ರಯೋಜನಮ್||

ಕ್ಷಮೆಯು ಸಾಧುಜನರ ಗುಣವು. ಸಾಧುಜನರು ಎಂದೂ ಅಕ್ಷಮರಾಗಿರುವುದಿಲ್ಲ. ಪಾರ್ಥ! ಕ್ಷಮೆ ಮತ್ತು ಅಕ್ಷಮೆ ಇವುಗಳ ಪ್ರಯೋಜನವನ್ನು ತಿಳಿದುಕೋ.

12103030a ವಿಜಿತ್ಯ ಕ್ಷಮಮಾಣಸ್ಯ ಯಶೋ ರಾಜ್ಞೋಽಭಿವರ್ಧತೇ|

12103030c ಮಹಾಪರಾಧಾ ಹ್ಯಪ್ಯಸ್ಮಿನ್ ವಿಶ್ವಸಂತಿ ಹಿ ಶತ್ರವಃ||

ಗೆದ್ದು ಕ್ಷಮಿಸುವ ರಾಜನ ಯಶಸ್ಸು ಹೆಚ್ಚಾಗುತ್ತದೆ. ಅವನು ಮಹಾ ಅಪರಾಧವನ್ನು ಮಾಡಿದ್ದರೂ ಶತ್ರುಗಳು ಅವನ ಮೇಲೆ ವಿಶ್ವಾಸವನ್ನಿಡುತ್ತಾರೆ.

12103031a ಮನ್ಯತೇ ಕರ್ಶಯಿತ್ವಾ ತು ಕ್ಷಮಾ ಸಾಧ್ವಿತಿ ಶಂಬರಃ|

12103031c ಅಸಂತಪ್ತಂ ತು ಯದ್ದಾರು ಪ್ರತ್ಯೇತಿ ಪ್ರಕೃತಿಂ ಪುನಃ||

ಶಂಬರನ ಅಭಿಪ್ರಾಯವು ಹೀಗಿದೆ: ಮೊದಲು ಶತ್ರುವನ್ನು ಪೀಡಿಸಿ ನಂತರ ಕ್ಷಮಿಸುವುದು ಒಳ್ಳೆಯದು. ಆಗಲೇ ಶತ್ರುವು ವಿನೀತನಾಗುತ್ತಾನೆ. ಬೆತ್ತವನ್ನು ಕಾಯಿಸದೇ ಬಗ್ಗಿಸಿದರೆ ಅದು ಪುನಃ ಹಿಂದಿನಂತೆಯೇ ಋಜುವಾಗಿ ನಿಲ್ಲುತ್ತದೆ.

12103032a ನೈತತ್ ಪ್ರಶಂಸಂತ್ಯಾಚಾರ್ಯಾ ನ ಚ ಸಾಧು ನಿದರ್ಶನಮ್|

12103032c ಅಕ್ಲೇಶೇನಾವಿನಾಶೇನ[7] ನಿಯಂತವ್ಯಾಃ ಸ್ವಪುತ್ರವತ್||

ಆದರೆ ಇದು ಸಾಧುಪುರುಷರ ನಿದರ್ಶನವಲ್ಲವೆಂದು ಆಚಾರ್ಯರು ಇದನ್ನು ಪ್ರಶಂಸಿಸುವುದಿಲ್ಲ. ಸೋತವನನ್ನು ಪೀಡಿಸದೆಯೇ ಮತ್ತು ವಿನಾಶಗೊಳಿಸದೆಯೇ ತನ್ನ ಪುತ್ರನಂತೆಯೇ ನಿಯಂತ್ರಿಸಬೇಕು.

12103033a ದ್ವೇಷ್ಯೋ ಭವತಿ ಭೂತಾನಾಮುಗ್ರೋ ರಾಜಾ ಯುಧಿಷ್ಠಿರ|

12103033c ಮೃದುಮಪ್ಯವಮನ್ಯಂತೇ ತಸ್ಮಾದುಭಯಭಾಗ್ ಭವೇತ್||

ಯುಧಿಷ್ಠಿರ! ರಾಜನು ಉಗ್ರನಾಗಿದ್ದರೆ ಅವನು ಎಲ್ಲ ಪ್ರಾಣಿಗಳ ದ್ವೇಷಕ್ಕೀಡಾಗುತ್ತಾನೆ. ಅತ್ಯಂತ ಮೃದುವಾಗಿದ್ದರೂ ಅವನನ್ನು ಅನಾದರಣೆ ಮಾಡುತ್ತಾರೆ. ಆದುದರಿಂದ ರಾಜನೂ ಎರಡೂ ಆಗಿರಬೇಕು.

12103034a ಪ್ರಹರಿಷ್ಯನ್ ಪ್ರಿಯಂ ಬ್ರೂಯಾತ್ ಪ್ರಹರನ್ನಪಿ ಭಾರತ|

12103034c ಪ್ರಹೃತ್ಯ ಚ ಕೃಪಾಯೇತ ಶೋಚನ್ನಿವ ರುದನ್ನಿವ||

ಭಾರತ! ಪ್ರಹರಿಸುವ ಮೊದಲು ಮತ್ತು ಪ್ರಹರಿಸುವಾಗ ಶತ್ರುವಿನೊಂದಿಗೆ ಪ್ರಿಯವಾಗಿಯೇ ಮಾತನಾಡಬೇಕು. ಪ್ರಹರಿಸಿದ ನಂತರ ಕೃಪೆತೋರಿಸಿ ಶೋಕವನ್ನೂ ರೋದನವನ್ನೂ ಪ್ರಕಟಿಸಬೇಕು.

12103035a ನ ಮೇ ಪ್ರಿಯಂ ಯತ್ಸ ಹತಃ ಸಂಪ್ರಾಹೈವಂ ಪುರೋ ವಚಃ[8]|

12103035c ನ ಚಕರ್ಥ ಚ[9] ಮೇ ವಾಕ್ಯಮುಚ್ಯಮಾನಃ ಪುನಃ ಪುನಃ||

“ಅವರನ್ನು ಕೊಲ್ಲಬೇಡಿ ಎಂದು ನಾನು ಪುನಃ ಪುನಃ ಹೇಳುತ್ತಿದ್ದರೂ ಯುದ್ಧದಲ್ಲಿ ನೀವು ಹತರಾದುದು ನನಗೆ ಪ್ರಿಯವಾದುದಲ್ಲ.

12103036a ಅಹೋ ಜೀವಿತಮಾಕಾಂಕ್ಷೇ ನೇದೃಶೋ ವಧಮರ್ಹತಿ|

12103036c ಸುದುರ್ಲಭಾಃ ಸುಪುರುಷಾಃ ಸಂಗ್ರಾಮೇಷ್ವಪಲಾಯಿನಃ||

ಅಯ್ಯೋ! ಜೀವಿತದಲ್ಲಿ ಆಕಾಂಕ್ಷೆಯನ್ನಿಟ್ಟಿದ್ದ ಅವರನ್ನು ವಧಿಸಬಾರದಾಗಿತ್ತು. ಯುದ್ಧದಲ್ಲಿ ಪಲಾಯನ ಮಾಡದಿರುವ ಸತ್ಪುರುಷರು ದುರ್ಲಭರು.

12103037a ಕೃತಂ ಮಮಾಪ್ರಿಯಂ ತೇನ ಯೇನಾಯಂ ನಿಹತೋ ಮೃಧೇ|

12103037c ಇತಿ ವಾಚಾ ವದನ್ ಹಂತೃನ್ ಪೂಜಯೇತ ರಹೋಗತಃ||

ಯುದ್ಧದಲ್ಲಿ ಅವರನ್ನು ಸಂಹರಿಸಿ ನಮ್ಮ ಯೋಧರು ನನಗೆ ಅಪ್ರಿಯವಾದುದನ್ನೇ ಮಾಡಿದ್ದಾರೆ.” ಶತ್ರುಗಳಿಗೆ ಕೇಳುವಂತೆ ಈ ರೀತಿಯ ಮಾತುಗಳನ್ನಾಡುತ್ತಾ ರಹಸ್ಯದಲ್ಲಿ ಶತ್ರುಗಳನ್ನು ಸಂಹರಿಸಿದವರನ್ನು ಪ್ರಶಂಸಿಸಬೇಕು.

12103038a ಹಂತೃಣಾಂ ಚಾಹತಾನಾಂ ಚ ಯತ್ಕುರ್ಯುರಪರಾಧಿನಃ|

12103038c ಕ್ರೋಶೇದ್ಬಾಹುಂ ಪ್ರಗೃಹ್ಯಾಪಿ ಚಿಕೀರ್ಷಂಜನಸಂಗ್ರಹಮ್||

ಹಾಗೆಯೇ ತನ್ನ ಪಕ್ಷದಲ್ಲಿ ಅಳಿದುಳಿದಿರುವ ಯೋಧರ ಮುಂದೆ ಅಳಿದು ಹೋಗಿರುವವರ ವಿಷಯವಾಗಿ ಅಪರಾಧಿಯು ಹೇಗೆ ಪಶ್ಚಾತ್ತಾಪವನ್ನು ಪ್ರಕಟಿಸುವನೋ ಹಾಗೆ ಪ್ರಶ್ಚಾತ್ತಾಪವನ್ನು ಪ್ರಕಟಿಸಬೇಕು. ಜನರ ಒಲುಮೆಯನ್ನು ಸಂಪಾದಿಸಲು ಬಾಹುಗಳನ್ನು ಮೇಲೆತ್ತಿ ಯುದ್ದದಲ್ಲಿ ಸತ್ತವರ ಸಲುವಾಗಿ ರೋದಿಸಬೇಕು.

12103039a ಏವಂ ಸರ್ವಾಸ್ವವಸ್ಥಾಸು ಸಾಂತ್ವಪೂರ್ವಂ ಸಮಾಚರನ್|

12103039c ಪ್ರಿಯೋ ಭವತಿ ಭೂತಾನಾಂ ಧರ್ಮಜ್ಞೋ ವೀತಭೀರ್ನೃಪಃ||

ಹೀಗೆ ರಾಜನು ಸರ್ವಾವಸ್ಥೆಗಳಲ್ಲಿ ಸಾಂತ್ವಪೂರ್ವಕವಾಗಿಯೇ ವರ್ತಿಸಬೇಕು. ಧರ್ಮಜ್ಞ ನಿರ್ಭಯನಾದ ರಾಜನು ಹೀಗೆ ಮಾಡುವುದರಿಂದ ಎಲ್ಲರ ಪ್ರೀತಿಪಾತ್ರನಾಗುತ್ತಾನೆ.

12103040a ವಿಶ್ವಾಸಂ ಚಾತ್ರ ಗಚ್ಚಂತಿ ಸರ್ವಭೂತಾನಿ ಭಾರತ|

12103040c ವಿಶ್ವಸ್ತಃ ಶಕ್ಯತೇ ಭೋಕ್ತುಂ ಯಥಾಕಾಮಮುಪಸ್ಥಿತಃ||

ಭಾರತ! ಎಲ್ಲರೂ ಅಂತಹ ರಾಜನಲ್ಲಿ ವಿಶ್ವಾಸವನ್ನಿಡುತ್ತಾರೆ. ಪ್ರಜೆಗಳ ವಿಶ್ವಾಸಕ್ಕೆ ಪಾತ್ರನಾದ ರಾಜನು ತನಗಿಷ್ಟಬಂದಂತೆ ಭೋಗಿಸಲು ಶಕ್ಯನಾಗುತ್ತಾನೆ.

12103041a ತಸ್ಮಾದ್ವಿಶ್ವಾಸಯೇದ್ರಾಜಾ ಸರ್ವಭೂತಾನ್ಯಮಾಯಯಾ|

12103041c ಸರ್ವತಃ ಪರಿರಕ್ಷೇಚ್ಚ ಯೋ ಮಹೀಂ ಭೋಕ್ತುಮಿಚ್ಚತಿ||

ಆದುದರಿಂದ ರಾಜನು ಮೋಸ-ಕಪಟಗಳಿಲ್ಲದೇ ಎಲ್ಲರ ವಿಶ್ವಾಸವನ್ನೂ ಗಳಿಸಬೇಕು. ಮಹಿಯನ್ನು ಭೋಗಿಸಲು ಬಯಸುವವನು ಎಲ್ಲರನ್ನೂ ರಕ್ಷಿಸುತ್ತಿರಬೇಕು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಸೇನಾನೀತಿಕಥನೇ ತ್ರ್ಯಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಸೇನಾನೀತಿಕಥನ ಎನ್ನುವ ನೂರಾಮೂರನೇ ಅಧ್ಯಾಯವು.

cherryblossom #aesthetic #tumblr #vaporwave - Sakura Flower Transparent  Background, HD Png Download , Transparent Png Image - PNGitem

[1] ಪುರಸ್ತಾಶ್ಚ ನಿಷೇಧತಿ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಈ ಶ್ಲೋಕದಲ್ಲಿ ಕಾಗೆಯ ಕುರಿತಾದ ಶಬ್ಧದ ಬಳಕೆಯಿಲ್ಲದಿದ್ದರೂ ಇದು ಕಾಗೆಯ ಕುರಿತಾಗಿದೆ ಎಂದು ವ್ಯಾಖ್ಯಾನಕಾರರು ಸೂಚಿಸಿದ್ದಾರೆ (ಭಾರತ ದರ್ಶನ).

[3] ವಿಶಾಲ ಸೇನೆಯು ಜಿಂಕೆಗಳ ಹಿಂಡಿನಂತೆಯೇ ಇರುತ್ತದೆ. ಮುಂದಿರುವ ಒಂದು ಮೃಗವು ಓಡಲು ಪ್ರಾರಂಭಿಸಿದರೆ ಇತರ ಮೃಗಗಳೂ ಯುಕ್ತಾಯುಕ್ತ ವಿವೇಚನೆಯಿಲ್ಲದೇ ನಾಗಾಲೋಟದಿಂದ ಓಡಿ ಹೋಗುವಂತೆ ಸೈನ್ಯವು ಎಷ್ಟೇ ಬಲವತ್ತರವಾಗಿದ್ದರೂ ಚಮೂ ಮಧ್ಯದಲ್ಲಿರುವ ಒಬ್ಬ ಪದಾತಿಯು ಯಾವುದೋ ಕಾರಣದಿಂದ ಓಡಿ ಹೋಗಲು ಪ್ರಾರಂಭಿಸಿದರೆ ಅವನು ಓಡಿ ಹೋಗುವುದಕ್ಕೆ ಕಾರಣವನ್ನು ತಿಳಿಯುವ ಗೋಜಿಗೆ ಹೋಗದೇ ಉಳಿದವರೂ ಅವನನ್ನೇ ಹಿಂಬಾಲಿಸಿ ಓಡುತ್ತಾರೆ. “ಸೇನೆಯು ಭಗ್ನವಾಯಿತು” ಎಂಬ ಒಂದು ಕಿಂವದಂತಿಯಿಂದಲೇ ಸೈನ್ಯವು ಭಗ್ನವಾಗಿ ಹೋಗಬಲ್ಲದು (ಭಾರತ ದರ್ಶನ).

[4] ಸಂದರ್ಶೇನೈವ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ವಿಜಯಸ್ಯ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಕ್ಷಮಾ ವೈ ಸಾಧುಮಾಯಾತಿ ನ ಹ್ಯಸಾಧೂನ್ ಕ್ಷಮಾ ಸದಾ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಅಕ್ರೋಧೇನಾವಿನಾಶೇನ ಎಂಬ ಪಾಠಾಂತರವಿದೆ (ಭಾರತ ದರ್ಶನ).

[8] ನ ಮೇ ಪ್ರಿಯಂ ಯನ್ನಿಹತಾಃ ಸಂಗ್ರಾಮೇ ಮಾಮಕೈರ್ನರೈಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[9] ನ ಚ ಕುರ್ವಂತಿ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.