Shanti Parva: Chapter 102

ಶಾಂತಿ ಪರ್ವ: ರಾಜಧರ್ಮ ಪರ್ವ

೧೦೨

ವಿಭಿನ್ನ ದೇಶಗಳ ಯೋಧರ ಸ್ವಭಾವ-ರೂಪ-ಬಲ-ಆಚರಣೆ ಮತ್ತು ಲಕ್ಷಣೆಗಳ ವರ್ಣನೆ (1-20).

12102001 ಯುಧಿಷ್ಠಿರ ಉವಾಚ|

12102001a ಕಿಂಶೀಲಾಃ ಕಿಂಸಮುತ್ಥಾನಾಃ[1] ಕಥಂರೂಪಾಶ್ಚ ಭಾರತ|

12102001c ಕಿಂಸಂನಾಹಾಃ ಕಥಂಶಸ್ತ್ರಾ ಜನಾಃ ಸ್ಯುಃ ಸಂಯುಗೇ ನೃಪ||

ಯುಧಿಷ್ಠಿರನು ಹೇಳಿದನು: “ಭಾರತ! ನೃಪ! ಯಾವ ನಡತೆಯುಳ್ಳವರು, ಯಾವ ಸ್ವಭಾವದವರು, ಯಾವ ರೂಪವುಳ್ಳವರು, ಎಂತಹ ಕವಚವನ್ನು ತೊಟ್ಟವರು ಮತ್ತು ಎಂಥಹ ಶಸ್ತ್ರಗಳನ್ನು ಹಿಡಿದಿರುವವರು ಯುದ್ಧ ಸಮರ್ಥರಾಗಿರುತ್ತಾರೆ?”

12102002 ಭೀಷ್ಮ ಉವಾಚ|

12102002a ಯಥಾಚರಿತಮೇವಾತ್ರ ಶಸ್ತ್ರಪತ್ರಂ[2] ವಿಧೀಯತೇ|

12102002c ಆಚಾರಾದೇವ[3] ಪುರುಷಸ್ತಥಾ ಕರ್ಮಸು ವರ್ತತೇ||

ಭೀಷ್ಮನು ಹೇಳಿದನು: “ಅಲ್ಲಿ ಯಾವುದು ಆಚರಣೆಯಲ್ಲಿದೆಯೋ ಅದರಂತೆಯೇ ಶಸ್ತ್ರ ಮತ್ತು ವಾಹನಗಳನ್ನು ವಿಧಿಸಲಾಗಿದೆ[4]. ಪರಂಪರಾಗತವಾದ ಆಚಾರಗಳನ್ನು ಅನುಸರಿಸಿಯೇ ವೀರ ಪುರುಷರು ಕಾರ್ಯಗಳಲ್ಲಿ ತೊಡಗುತ್ತಾರೆ.

12102003a ಗಾಂಧಾರಾಃ ಸಿಂಧುಸೌವೀರಾ ನಖರಪ್ರಾಸಯೋಧಿನಃ|

12102003c ಆಭೀರವಃ ಸುಬಲಿನಸ್ತದ್ಬಲಂ ಸರ್ವಪಾರಗಮ್||

ಗಾಂಧಾರರು ಮತ್ತು ಸಿಂಧು-ಸೌವೀರರು ನಖರ-ಪ್ರಾಸಾಯುಧಗಳಿಂದ ಯುದ್ಧಮಾಡುತ್ತಾರೆ. ಅವರು ಶೂರರೂ, ಬಲಶಾಲಿಗಳೂ ಆಗಿದ್ದು ಅವರ ಸೇನೆಗಳು ಸರ್ವ ಆಯುಧಗಳಲ್ಲಿ ಪರಿಣಿತವಾದವು.

12102004a ಸರ್ವಶಸ್ತ್ರೇಷು ಕುಶಲಾಃ ಸತ್ತ್ವವಂತೋ[5] ಹ್ಯುಶೀನರಾಃ|

12102004c ಪ್ರಾಚ್ಯಾ ಮಾತಂಗಯುದ್ಧೇಷು ಕುಶಲಾಃ ಶಠಯೋಧಿನಃ[6]||

ಉಶೀನರರು ಸರ್ವಶಸ್ತ್ರಗಳಲ್ಲಿ ಕುಶಲಿಗಳು ಮತ್ತು ಸತ್ತ್ವವಂತರು. ಪೂರ್ವದೇಶದವರು ಆನೆಗಳ ಮೇಲೆ ಯುದ್ಧಮಾಡುವುದರಲ್ಲಿ ಕುಶಲಿಗಳು ಮತ್ತು ಶಠಯೋಧಿಗಳು.

12102005a ತಥಾ ಯವನಕಾಂಬೋಜಾ ಮಥುರಾಮಭಿತಶ್ಚ ಯೇ|

12102005c ಏತೇ ನಿಯುದ್ಧಕುಶಲಾ ದಾಕ್ಷಿಣಾತ್ಯಾಸಿಚರ್ಮಿಣಃ|[7]|

ಯವನರೂ, ಕಾಂಬೋಜರೂ ಮತ್ತು ಮಥುರೆಯ ಅಕ್ಕಪಕ್ಕದವರು ಮಲ್ಲಯುದ್ಧದಲ್ಲಿ ನಿಪುಣರು. ದಕ್ಷಿಣ ದೇಶದವರು ಖಡ್ಗ-ಗುರಾಣಿಗಳಲ್ಲಿ ಕುಶಲರು.

12102006a ಸರ್ವತ್ರ ಶೂರಾ ಜಾಯಂತೇ ಮಹಾಸತ್ತ್ವಾ ಮಹಾಬಲಾಃ|

12102006c ಪ್ರಾಯ ಏಷ ಸಮುದ್ದಿಷ್ಟೋ ಲಕ್ಷಣಾನಿ ತು ಮೇ ಶೃಣು||

ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿಯೂ ಮಹಾಸತ್ತ್ವಯುತ ಮಹಾಬಲಶಾಲಿಗಳು ಹುಟ್ಟುತ್ತಿರುತ್ತಾರೆ. ಆ ವೀರರ ಕುರಿತು ಈ ಮೊದಲೇ ಹೇಳಿಯಾಗಿದೆ[8]. ಅವರ ಲಕ್ಷಣಗಳನ್ನು ಹೇಳುತ್ತೇನೆ. ಕೇಳು.

12102007a ಸಿಂಹಶಾರ್ದೂಲವಾಙ್ನೇತ್ರಾಃ ಸಿಂಹಶಾರ್ದೂಲಗಾಮಿನಃ|

12102007c ಪಾರಾವತಕುಲಿಂಗಾಕ್ಷಾಃ ಸರ್ವೇ ಶೂರಾಃ ಪ್ರಮಾಥಿನಃ||

ಸಿಂಹ-ಶಾರ್ದೂಲಗಳಂತೆ ಧ್ವನಿ ಮತ್ತು ಕಣ್ಣುಗಳಿರುವ, ಸಿಂಹ-ಶಾರ್ದೂಲಗಳ ನಡುಗೆಯುಳ್ಳ, ಪಾರಾವತ ಪಕ್ಷಿಯ ಕಣ್ಣುಗಳುಳ್ಳ ಎಲ್ಲರೂ ಶತ್ರುಸೇನೆಯನ್ನು ಮಥಿಸುವ ಶೂರರಾಗಿರುತ್ತಾರೆ.

12102008a ಮೃಗಸ್ವರಾ ದ್ವೀಪಿನೇತ್ರಾ ಋಷಭಾಕ್ಷಾಸ್ತಥಾಪರೇ[9]|

12102008c ಪ್ರವಾದಿನಃ ಸುಚಂಡಾಶ್ಚ ಕ್ರೋಧಿನಃ ಕಿಂನರೀಸ್ವನಾಃ[10]||

ಮೃಗಸ್ವರ, ಆನೆಯ ಅಥವಾ ಗೂಳಿಯ ಕಣ್ಣುಗಳುಳ್ಳವರು, ಪ್ರವಾದಿಗಳು, ಸುಚಂಡರು ಮತ್ತು ಕಿನ್ನರೀ ಧ್ವನಿಯುಳ್ಳವರು ಕ್ರೋಧಾವಿಷ್ಟರು.

12102009a ಮೇಘಸ್ವನಾಃ ಕ್ರುದ್ಧಮುಖಾಃ ಕೇ ಚಿತ್ಕರಭನಿಸ್ವನಾಃ|

12102009c ಜಿಹ್ಮನಾಸಾನುಜಂಘಾಶ್ಚ ದೂರಗಾ ದೂರಪಾತಿನಃ||

ಮೇಘಗರ್ಜನೆಯುಳ್ಳ, ಕ್ರುದ್ಧಮುಖವುಳ್ಳವರು, ಒಂಟೆಯಂತೆ ನೀಳ ಕತ್ತಿರುವವರು, ವಕ್ರವಾದ ಮೂಗು-ನಾಲಿಗೆಗಳಿರುವವರು ದೂರ ಹೆಜ್ಜೆಯಿಡಬಲ್ಲರು ಮತ್ತು ಬಾಣವನ್ನು ಬಹಳ ದೂರದವರೆಗೂ ಪ್ರಹರಿಸಬಲ್ಲರು.

12102010a ಬಿಡಾಲಕುಬ್ಜಾಸ್ತನವಸ್ತನುಕೇಶಾಸ್ತನುತ್ವಚಃ|

12102010c ಶೂರಾಶ್ಚಪಲಚಿತ್ತಾಶ್ಚ[11] ತೇ ಭವಂತಿ ದುರಾಸದಾಃ||

ಬೆಕ್ಕಿನಂತೆ ಗಿಡ್ಡ ಶರೀರವುಳ್ಳವರು ಮತ್ತು ತೆಳುವಾದ ಕೇಶ-ಚರ್ಮಗಳನ್ನು ಹೊಂದಿರುವವರು ಶೂರರೂ, ಚಪಲಚಿತ್ತವುಳ್ಳವರೂ ಆಗಿದ್ದು ದುರ್ಜಯರೂ ಆಗಿರುತ್ತಾರೆ.

12102011a ಗೋಧಾನಿಮೀಲಿತಾಃ ಕೇ ಚಿನ್ಮೃದುಪ್ರಕೃತಯೋಽಪಿ ಚ|

12102011c ತುರಂಗಗತಿನಿರ್ಘೋಷಾಸ್ತೇ ನರಾಃ ಪಾರಯಿಷ್ಣವಃ||

ಯಾರ ಮುಚ್ಚಿದ ಕಣ್ಣುಗಳು ನೀರುಡದ ಮುಚ್ಚಿದ ಕಣ್ಣುಗಳಿಂತಿರುವವೋ, ಮತ್ತು ಯಾರ ಗತಿ-ಗರ್ಜನೆಗಳು ಕುದುರೆಗಳ ಗತಿ-ಗರ್ಜನೆಗಳಂತಿರುವವೋ ಆ ಮೃದುಸ್ವಭಾವದ ನರರು ಯುದ್ಧಸಾಗರವನ್ನು ದಾಟಬಲ್ಲರು.

12102012a ಸುಸಂಹತಾಃ ಪ್ರತನವೋ[12] ವ್ಯೂಢೋರಸ್ಕಾಃ ಸುಸಂಸ್ಥಿತಾಃ|

12102012c ಪ್ರವಾದಿತೇನ ನೃತ್ಯಂತಿ ಹೃಷ್ಯಂತಿ ಕಲಹೇಷು ಚ||

ಗಟ್ಟಿಮುಟ್ಟಾದ ಶರೀರವುಳ್ಳ, ಸುಂದರ ಶರೀರವುಳ್ಳ, ವಿಶಾಲ ಎದೆಯಿರುವ, ಸೌಷ್ಠವ ಅಂಗಾಂಗಗಳನ್ನುಳ್ಳವರು ಯುದ್ಧದ ಮಾತನ್ನು ಕೇಳಿದೊಡನೆಯೇ ಕುಣಿಯುತ್ತಾರೆ. ಹರ್ಷದಿಂದ ಕಾದಾಡುತ್ತಾರೆ.

12102013a ಗಂಭೀರಾಕ್ಷಾ ನಿಃಸೃತಾಕ್ಷಾಃ ಪಿಂಗಲಾ ಭ್ರುಕುಟೀಮುಖಾಃ|

12102013c ನಕುಲಾಕ್ಷಾಸ್ತಥಾ ಚೈವ ಸರ್ವೇ ಶೂರಾಸ್ತನುತ್ಯಜಃ||

ಗಂಭೀರ ಕಣ್ಣುಗಳುಳ್ಳ, ಕಣ್ಣುಗುಡ್ಡೆಗಳು ಮೇಲೆದ್ದು ಕಾಣುವ, ಪಿಂಗಲ ವರ್ಣದ ಕಣ್ಣುಗಳುಳ್ಳ, ಹುಬ್ಬು-ಗಟ್ಟಿಕ್ಕಿದ ಮುಖವಿರುವ, ಮುಂಗಿಸಿಯಂಥಹ ಕಣ್ಣುಗಳುಳ್ಳ ಎಲ್ಲರೂ ಶೂರರೂ, ಪ್ರಾಣಗಳನ್ನೇ ಒತ್ತೆಯಾಗಿಟ್ಟು ಹೋರಾಡುವವರೂ ಆಗಿರುತ್ತಾರೆ.

12102014a ಜಿಹ್ಮಾಕ್ಷಾಃ ಪ್ರಲಲಾಟಾಶ್ಚ ನಿರ್ಮಾಂಸಹನವೋಽಪಿ ಚ|

12102014c ವಕ್ರಬಾಹ್ವಂಗುಲೀಸಕ್ತಾಃ ಕೃಶಾ ಧಮನಿಸಂತತಾಃ||

12102015a ಪ್ರವಿಶಂತ್ಯತಿವೇಗೇನ ಸಂಪರಾಯೇಽಭ್ಯುಪಸ್ಥಿತೇ|

12102015c ವಾರಣಾ ಇವ ಸಂಮತ್ತಾಸ್ತೇ ಭವಂತಿ ದುರಾಸದಾಃ||

ವಕ್ರ ಕಣ್ಣುಗಳುಳ್ಳ, ಹಣೆಯು ಉಬ್ಬಿರುವ, ಗಲ್ಲವು ಚಪ್ಪಟೆಯಾಗಿರುವ, ಭುಜಗಳ ಮೇಲೆ ವಜ್ರದ ಚಿಹ್ನೆಯುಳ್ಳ, ಬೆರಳುಗಳಲ್ಲಿ ಚಕ್ರದ ಚಿಹ್ನೆಯುಳ್ಳ, ಕೃಶರಾಗಿರುವ, ಮತ್ತು ನರನಾಡಿಗಳು ಎದ್ದು ಕಾಣುವವರು ಯುದ್ಧವು ಪ್ರಾರಂಭವಾದೊಡನೆ ಅತಿ ವೇಗದಿಂದ ರಣವನ್ನು ಪ್ರವೇಶಿಸುತ್ತಾರೆ. ಮದಗಜಗಳಂತೆ ಹೋರಾಡುವಇ ವರು ದುರಾಸದರೂ ಆಗಿರುತ್ತಾರೆ.

12102016a ದೀಪ್ತಸ್ಫುಟಿತಕೇಶಾಂತಾಃ ಸ್ಥೂಲಪಾರ್ಶ್ವಹನೂಮುಖಾಃ|

12102016c ಉನ್ನತಾಂಸಾಃ ಪೃಥುಗ್ರೀವಾ ವಿಕಟಾಃ ಸ್ಥೂಲಪಿಂಡಿಕಾಃ||

12102017a ಉದ್ವೃತ್ತಾಶ್ಚೈವ[13] ಸುಗ್ರೀವಾ ವಿನತಾ ವಿಹಗಾ ಇವ|

12102017c ಪಿಂಡಶೀರ್ಷಾಹಿವಕ್ತ್ರಾಶ್ಚ ವೃಷದಂಶಮುಖಾ ಇವ||

12102018a ಉಗ್ರಸ್ವನಾ ಮನ್ಯುಮಂತೋ ಯುದ್ಧೇಷ್ವಾರಾವಸಾರಿಣಃ|

12102018c ಅಧರ್ಮಜ್ಞಾವಲಿಪ್ತಾಶ್ಚ ಘೋರಾ ರೌದ್ರಪ್ರದರ್ಶಿನಃ||

ಹೊಳೆಯುತ್ತಿರುವ ಮತ್ತು ಹರಡಿಕೊಂಡಿರುವ ಕೂದಲುಗಳುಳ್ಳ, ವಿಶಾಲ ಪಕ್ಕೆಗಳೂ, ಉದ್ದ ದವಡೆಗಳೂ ಇರುವ, ಉನ್ನತ ಭುಜಗಳಿರುವ, ದೊಡ್ಡ ಕತ್ತಿರುವ, ವಿಕಟರಾಗಿರುವ, ಮೊಣಕಾಲಿನ ಹಿಂಭಾಗವು ಸ್ಥೂಲವಾಗಿರುವ, ಗರುಡನಂತೆ ವೇಗಶಾಲಿಯೂ ಪರಾಕ್ರಮಿಯೂ ಆಗಿರುವ, ತಲೆ ದುಂಡು ಮತ್ತು ಮುಖವು ವಿಶಾಲವಾಗಿರುವ, ಬೆಕ್ಕಿನಂತೆ ಅಗಲ ಮುಖವುಳ್ಳ, ಕಠೋರ ಧ್ವನಿಯುಳ್ಳ, ಮತ್ತು ಕೋಪಿಷ್ಟರಾಗಿರುವವರು ಯುದ್ಧದಲ್ಲಿ ಗರ್ಜಿಸುತ್ತಾ ಸಂಚರಿಸುತ್ತಾರೆ. ಅವರಿಗೆ ಧರ್ಮವೇನೆಂದೇ ತಿಳಿದಿರುವುದಿಲ್ಲ, ಅಹಂಕಾರದಿಂದ ಕೊಬ್ಬಿರುತ್ತಾರೆ. ನೋಡರು ಘೋರರೂ ರೌದ್ರರೂ ಆಗಿರುತ್ತಾರೆ.

12102019a ತ್ಯಕ್ತಾತ್ಮಾನಃ ಸರ್ವ ಏತೇ ಅಂತ್ಯಜಾ ಹ್ಯನಿವರ್ತಿನಃ|

12102019c ಪುರಸ್ಕಾರ್ಯಾಃ ಸದಾ ಸೈನ್ಯೇ ಹನ್ಯಂತೇ ಘ್ನಂತಿ ಚಾಪಿ ತೇ||

ಇವರೆಲ್ಲರೂ ಅಂತ್ಯಜರು[14]. ಪ್ರಾಣವನ್ನೇ ಪಣವನಾಗಿಟ್ಟು ಯುದ್ಧಮಾಡುವವರು. ಇವರಲ್ಲಿ ಯಾರೂ ಯುದ್ಧಭೂಮಿಯಿಂದ ಹಿಂದಿರುಗುವವರಲ್ಲ. ಇಂಥವರನ್ನು ಸದಾ ಪುರಸ್ಕರಿಸಬೇಕು. ಇವರು ಶತ್ರುಗಳಿಂದ ಹತರಾಗುತ್ತಾರೆ. ಆದರೆ ಅವರನ್ನೂ ಇವರು ಸಂಹರಿಸುತ್ತಾರೆ.

12102020a ಅಧಾರ್ಮಿಕಾ ಭಿನ್ನವೃತ್ತಾಃ ಸಾಧ್ವೇವೈಷಾಂ[15] ಪರಾಭವಃ|

12102020c ಏವಮೇವ ಪ್ರಕುಪ್ಯಂತಿ ರಾಜ್ಞೋಽಪ್ಯೇತೇ ಹ್ಯಭೀಕ್ಷ್ಣಶಃ||

ಇವರು  ಎಲ್ಲರೂ ಅಧಾರ್ಮಿಕರು. ಭಿನ್ನ ನಡತೆಯುಳ್ಳವರು.  ಸಾಧುತ್ವದಿಂದಲೇ ಅವರನ್ನು ಗೆಲ್ಲಬಹುದು. ಅವರ ರಾಜನ ಮೇಲೆಯೂ ಇವರು ಪದೇ ಪದೇ ಕೋಪಿಸಿಕೊಳ್ಳುತ್ತಿರುತ್ತಾರೆ. ಇವರು ಒಳ್ಳೆಯಮಾತಿಗೆ ಬಗ್ಗುವವರೇ ಹೊರತು ಗಡುಸಿನ ಆಜ್ಞೆಗೆ ಎಂದೂ ಮಣಿಯುವವರಲ್ಲ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಿಜಿಗೀಷಮಾಣವೃತ್ತೇ ದ್ವ್ಯಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ವಿಜಿಗೀಷಮಾಣವೃತ್ತ ಎನ್ನುವ ನೂರಾಎರಡನೇ ಅಧ್ಯಾಯವು.

Aesthetic Transparent White Flower Gardening Flower - Transparent Aesthetic  Flower Png Transparent PNG - 800x491 - Free Download on NicePNG

[1] ಕಿಂಸಮಾಚಾರಾಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಶಸ್ತ್ರಂ ಪತ್ರಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಆಚಾರಾದ್ವೀರ ಎಂಬ ಪಾಠಾಂತರವಿದೆ.

[4] ಯುದ್ಧಕ್ಕೆ ಸಂಬಂಧಿಸಿದ ಆಚಾರ-ವಿಚಾರಗಳು ದೇಶ-ಕಾಲಗಳನ್ನು ಅನುಸರಿಸಿರುತ್ತವೆ.

[5] ತತ್ತ್ವವಂತೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಕೂಟಯೋಧಿನಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ದಕ್ಷಿಣಾತ್ಯಾಸಿಪಾಣಯಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[8] ಈ ಮೊದಲು ಯಾವ ಸಂದರ್ಭದಲ್ಲಿ ಇದನ್ನು ಹೇಳಿಯಾಗಿದೆ ಎನ್ನುವುದು ಅರ್ಥವಾಗುತ್ತಿಲ್ಲ...?

[9] ಋಷಭಾಕ್ಷಾಸ್ತರಸ್ವಿನಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[10] ಕಿಂಕಿಣೀಸ್ವನಾಃ|| ಎಂಬ ಪಾಠಾಂತರವಿದೆ (ಭಾರತ ದರ್ಶನ).

[11] ಶೀಘ್ರಾಶ್ಚಪಲವೃತ್ತಾಶ್ಚ ಎಂಬ ಪಾಠಾಂತರವಿದೆ (ಭಾರತ ದರ್ಶನ).

[12] ಸುತನವೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

[13] ಉದ್ಧತಾ ಇವ ಎಂಬ ಪಾಠಾಂತರವಿದೆ (ಭಾರತ ದರ್ಶನ).

[14] ಗಡಿಯ ಪ್ರಾಂತ್ಯದಲ್ಲಿ ಹುಟ್ಟಿದವರು. ಕೈವರ್ತ-ದಾರ-ಧೀವರಾದಿಗಳು (ಭಾರತ ದರ್ಶನ).

[15] ಸಾಂತ್ವೇನೈಷಾಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.