Shanti Parva: Chapter 101

ಶಾಂತಿ ಪರ್ವ: ರಾಜಧರ್ಮ ಪರ್ವ

೧೦೧

ಸೇನಾನೀತಿವರ್ಣನೆ (1-47).

12101001 ಯುಧಿಷ್ಠಿರ ಉವಾಚ|

12101001a ಯಥಾ ಜಯಾರ್ಥಿನಃ ಸೇನಾಂ ನಯಂತಿ ಭರತರ್ಷಭ|

12101001c ಈಷದ್ಧರ್ಮಂ ಪ್ರಪೀಡ್ಯಾಪಿ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಪಿತಾಮಹ! ಜಯಾರ್ಥಿಗಳು ಹೇಗೆ ಯುದ್ಧದರ್ಮವನ್ನು ಸ್ವಲ್ಪಮಾತ್ರವೇ ಉಲ್ಲಂಘಿಸಿ ತಮ್ಮ ಸೇನೆಯನ್ನು ಮುಂದೊಯ್ಯುತ್ತಾರೆ ಎನ್ನುವುದನ್ನು ಹೇಳು.”

12101002 ಭೀಷ್ಮ ಉವಾಚ|

12101002a ಸತ್ಯೇನ ಹಿ ಸ್ಥಿತಾ ಧರ್ಮಾ ಉಪಪತ್ತ್ಯಾ ತಥಾಪರೇ|

12101002c ಸಾಧ್ವಾಚಾರತಯಾ ಕೇ ಚಿತ್ತಥೈವೌಪಯಿಕಾ ಅಪಿ|

12101002e ಉಪಾಯಧರ್ಮಾನ್ವಕ್ಷ್ಯಾಮಿ ಸಿದ್ಧಾರ್ಥಾನರ್ಥಧರ್ಮಯೋಃ||

ಭೀಷ್ಮನು ಹೇಳಿದನು: “ಕ್ಷತ್ರಿಯ ಧರ್ಮವು ಸತ್ಯದ ಮೇಲೆಯೇ ಪ್ರತಿಷ್ಠಿತವಾಗಿರುವುದೆಂದು ಕೆಲವರು ಹೇಳಿದರೆ ಯುಕ್ತಿಯ ಮೇಲೆ ಅದು ಪ್ರತಿಷ್ಠಿತವಾಗಿರುವುದೆಂದು ಇನ್ನು ಕೆಲವರು ಹೇಳುತ್ತಾರೆ. ಕೆಲವರು ಸಾಧು ಆಚಾರಗಳಿಂದ ಧರ್ಮದ ಪರಿಪಾಲನೆಯಾಗುತ್ತದೆ ಎಂದರೆ ಇನ್ನು ಕೆಲವರು ಸಾಮ-ದಾನಾದಿ ಉಪಾಯಗಳಿಂದ ಧರ್ಮದ ಪರಿಪಾಲನೆಯಾಗುತ್ತದೆ ಎನ್ನುತ್ತಾರೆ. ಈಗ ನಾನು ಅರ್ಥ-ಧರ್ಮಗಳ ಸಿದ್ಧಿಗೆ ಸಾಧಕವಾದ ಉಪಾಯ ಧರ್ಮದ ಕುರಿತು ಹೇಳುತ್ತೇನೆ.

12101003a ನಿರ್ಮರ್ಯಾದಾ ದಸ್ಯವಸ್ತು ಭವಂತಿ ಪರಿಪಂಥಿನಃ|

12101003c ತೇಷಾಂ ಪ್ರತಿವಿಘಾತಾರ್ಥಂ ಪ್ರವಕ್ಷ್ಯಾಮ್ಯಥ ನೈಗಮಮ್|

12101003e ಕಾರ್ಯಾಣಾಂ ಸಂಪ್ರಸಿದ್ಧ್ಯರ್ಥಂ ತಾನುಪಾಯಾನ್ನಿಬೋಧ ಮೇ||

ಮರ್ಯಾದೆಗಳನ್ನು ಮೀರಿದ ದಸ್ಯುಗಳು ಶತ್ರುಗಳಾದಾಗ ಅವರ ಪ್ರತಿಘಾತಾರ್ಥವಾಗಿ ಇರುವ ಶಾಸ್ತ್ರೋಕ್ತ ಉಪಾಯಗಳನ್ನು ಹೇಳುತ್ತೇನೆ. ಕಾರ್ಯಗಳ ಸಂಪ್ರಸಿದ್ಧಿಗಾಗಿ ಇರುವ ಆ ಉಪಾಯಗಳ ಕುರಿತು ಕೇಳು.

12101004a ಉಭೇ ಪ್ರಜ್ಞೇ ವೇದಿತವ್ಯೇ ಋಜ್ವೀ ವಕ್ರಾ ಚ ಭಾರತ|

12101004c ಜಾನನ್ವಕ್ರಾಂ ನ ಸೇವೇತ ಪ್ರತಿಬಾಧೇತ ಚಾಗತಾಮ್||

ಭಾರತ! ರಾಜನಾದವನು ಎರಡು ಪ್ರಕಾರದ ಬುದ್ಧಿಗಳನ್ನು – ಸರಳ ಮತ್ತು ವಕ್ರ –ತಿಳಿದಿರಬೇಕು. ತಾನಾಗಿಯೇ ವಕ್ರಬುದ್ಧಿಯನ್ನು ಬಳಸಬಾರದು. ಆದರೆ ಇತರರು ವಕ್ರಬುದ್ಧಿಯನ್ನು ಬಳಸಿದಾಗ ತಾನೂ ಅದನ್ನೇ ಬಳಸಬೇಕು.

12101005a ಅಮಿತ್ರಾ ಏವ ರಾಜಾನಂ ಭೇದೇನೋಪಚರಂತ್ಯುತ|

12101005c ತಾಂ ರಾಜಾ ನಿಕೃತಿಂ ಜಾನನ್ಯಥಾಮಿತ್ರಾನ್ ಪ್ರಬಾಧತೇ||

ಸಾಧಾರಣವಾಗಿ ಮಿತ್ರರಲ್ಲದವರೇ ಭೇದೋಪಾಯಗಳಿಂದ ರಾಜನನ್ನು ವಂಚಿಸುತ್ತಿರುತ್ತಾರೆ. ಅವರ ವಂಚನೆಯನ್ನು ತಿಳಿದುಕೊಂಡು ರಾಜನು ಅಮಿತ್ರರನ್ನು ನಾಶಗೊಳಿಸಬೇಕು.

12101006a ಗಜಾನಾಂ ಪಾರ್ಶ್ವಚರ್ಮಾಣಿ ಗೋವೃಷಾಜಗರಾಣಿ ಚ|

12101006c ಶಲ್ಯಕಂಕಟಲೋಹಾನಿ ತನುತ್ರಾಣಿ ಮತಾನಿ ಚ||

12101007a ಶಿತಪೀತಾನಿ ಶಸ್ತ್ರಾಣಿ ಸಂನಾಹಾಃ ಪೀತಲೋಹಿತಾಃ|

12101007c ನಾನಾರಂಜನರಕ್ತಾಃ ಸ್ಯುಃ ಪತಾಕಾಃ ಕೇತವಶ್ಚ ತೇ||

12101008a ಋಷ್ಟಯಸ್ತೋಮರಾಃ ಖಡ್ಗಾ ನಿಶಿತಾಶ್ಚ ಪರಶ್ವಧಾಃ|

12101008c ಫಲಕಾನ್ಯಥ ಚರ್ಮಾಣಿ ಪ್ರತಿಕಲ್ಪ್ಯಾನ್ಯನೇಕಶಃ|

ಆನೆಗಳನ್ನು ರಕ್ಷಿಸಲು ಎತ್ತು ಮತ್ತು ಹೆಬ್ಬಾವುಗಳ ಚರ್ಮಗಳ ಕವಚಗಳನ್ನು ಅವಕ್ಕೆ ಹೊದಿಸಬೇಕು. ಶಲ್ಯ, ಕಂಟಕ, ಲೋಹ, ಕವಚ, ಚಾಮರ, ಬಿಳಿಯಾದ ಮತ್ತು ಹೊಂಬಣ್ಣದ ಶಸ್ತ್ರಗಳು, ಕೆಂಪುಬಣ್ಣದ ಮತ್ತು ಹಳದೀ ಬಣ್ಣದ ಕವಚಗಳು, ನಾನಾ ವರ್ಣದ ಪತಾಕೆಗಳು ಮತ್ತು ಧ್ವಜಗಳು, ಋಷ್ಟಿಗಳು, ತೋಮರಗಳು, ನಿಶಿತ ಖಡ್ಗಗಳು, ಗಂಡುಗೊಡಲಿಗಳು, ಫಲಕಗಳು ಮತ್ತು ಗುರಾಣಿಗಳು ಇವೆಲ್ಲವನ್ನೂ ರಾಜನು ಅಪಾರ ಸಂಖ್ಯೆಗಳಲ್ಲಿ ಸಂಗ್ರಹಿಸಬೇಕು.

12101008e ಅಭಿನೀತಾನಿ ಶಸ್ತ್ರಾಣಿ ಯೋಧಾಶ್ಚ ಕೃತನಿಶ್ರಮಾಃ||

12101009a ಚೈತ್ರ್ಯಾಂ ವಾ ಮಾರ್ಗಶೀರ್ಷ್ಯಾಂ ವಾ ಸೇನಾಯೋಗಃ ಪ್ರಶಸ್ಯತೇ|

ಶಸ್ತ್ರಗಳು ಸಿದ್ಧವಾಗಿದ್ದರೆ, ಯೋಧರೆಲ್ಲರೂ ಶತ್ರುಗಳ ಮೇಲೆ ಬೀಳುವ ದೃಢನಿಶ್ಚಯ ಮಾಡಿದ್ದರೆ, ಚೈತ್ರ ಅಥವಾ ಮಾರ್ಗಶೀರ್ಷ್ಯ ಮಾಸಗಳಲ್ಲಿ ಸೇನಾಪ್ರಸ್ಥಾನವು ಪ್ರಶಸ್ತವಾಗುತ್ತದೆ.

12101009c ಪಕ್ವಸಸ್ಯಾ ಹಿ ಪೃಥಿವೀ ಭವತ್ಯಂಬುಮತೀ ತಥಾ||

12101010a ನೈವಾತಿಶೀತೋ ನಾತ್ಯುಷ್ಣಃ ಕಾಲೋ ಭವತಿ ಭಾರತ|

ಪೃಥಿವಿಯು ಬೆಳೆದ ಸಸಿಗಳಿಂದ ತುಂಬಿರುವ, ಬೆಳೆಯು ಕಟಾವಿಗೆ ಬಂದಿರುವ, ಜಲಸಮೃದ್ಧಿಯಿರುವ, ಮತ್ತು ಅತಿಯಾದ ಶೀತ-ಉಷ್ಣಗಳಿಲ್ಲದಿರುವ ಆ ಕಾಲವು ಯುದ್ಧಕ್ಕೆ ಪ್ರಶಸ್ತವಾಗಿದೆ.

12101010c ತಸ್ಮಾತ್ತದಾ ಯೋಜಯೇತ ಪರೇಷಾಂ ವ್ಯಸನೇಷು ವಾ|

12101010e ಏತೇಷು ಯೋಗಾಃ ಸೇನಾಯಾಃ ಪ್ರಶಸ್ತಾಃ ಪರಬಾಧನೇ||

ಆದುದರಿಂದ ಆ ತಿಂಗಳುಗಳಲ್ಲಿ ಶತ್ರುವಿನೊಡನೆ ಯುದ್ಧವನ್ನು ಪ್ರಾರಂಭಿಸಬೇಕು. ಅಥವಾ ಶತ್ರುವು ತೊಂದರೆಯಲ್ಲಿದ್ದಾಗಲೂ ಯುದ್ಧವನ್ನು ಪ್ರಾರಂಭಿಸಬಹುದು. ಶತ್ರುಗಳೊಡನೆ ಹೋರಾಡಲು ಸೇನೆಗಳು ಹೊರಡುವುದಕ್ಕೆ ಇವೇ ಪ್ರಶಸ್ತ ಯೋಗಗಳೆಂದು ಹೇಳುತ್ತಾರೆ.

12101011a ಜಲವಾಂಸ್ತೃಣವಾನ್ಮಾರ್ಗಃ ಸಮೋ ಗಮ್ಯಃ ಪ್ರಶಸ್ಯತೇ|

12101011c ಚಾರೈರ್ಹಿ ವಿಹಿತಾಭ್ಯಾಸಃ ಕುಶಲೈರ್ವನಗೋಚರೈಃ||

ಯುದ್ಧಕ್ಕೆ ಹೊರಡುವ ಮಾರ್ಗವು ನೀರು-ಹುಲ್ಲುಗಳಿಂದ ಕೂಡಿದ್ದು ಸಮತಲವಾಗಿರಬೇಕು. ಕುಶಲ ವನಗೋಚರರು ಮತ್ತು ಚಾರರು ಆ ಮಾರ್ಗದ ಕುಂದು ಕೊರತೆಗಳನ್ನು ಚೆನ್ನಾಗಿ ತಿಳಿದುಕೊಂಡಿರಬೇಕು.

12101012a ನವ್ಯಾರಣ್ಯೈರ್ನ ಶಕ್ಯೇತ ಗಂತುಂ ಮೃಗಗಣೈರಿವ|

12101012c ತಸ್ಮಾತ್ಸರ್ವಾಸು ಸೇನಾಸು ಯೋಜಯಂತಿ ಜಯಾರ್ಥಿನಃ||

ಮೃಗಗಣಗಳಂತೆ ಅರಣ್ಯಗಳಲ್ಲಿ ಆ ಸೇನೆಗಳು ಹೋಗಲು ಸಾಧ್ಯವಾಗುವುದಿಲ್ಲ. ಆದುದರಿಂದ ಜಯಾರ್ಥಿಯಾದವನು ಸೇನೆಗಳಲ್ಲಿ ಗುಪ್ತಚಾರರನ್ನು ನಿಯಮಿಸಿಕೊಂಡಿರಬೇಕು.

[1]12101013a ಆವಾಸಸ್ತೋಯವಾನ್ದುರ್ಗಃ ಪರ್ಯಾಕಾಶಃ ಪ್ರಶಸ್ಯತೇ|

12101013c ಪರೇಷಾಮುಪಸರ್ಪಾಣಾಂ ಪ್ರತಿಷೇಧಸ್ತಥಾ ಭವೇತ್||

ಮಾರ್ಗದಲ್ಲಿ ಸೇನೆಗಳು ತಂಗಲು ಎತ್ತರ ಪ್ರದೇಶದ ದುರ್ಗವನ್ನು ಆರಿಸಿಕೊಳ್ಳಬೇಕು. ಸುತ್ತಲೂ ಬಯಲು ಪ್ರದೇಶವಿರಬೇಕು. ನೀರಿನ ಸೌಲಭ್ಯವಿರಬೇಕು. ಮೇಲೆ ಹರಿದು ಬರುತ್ತಿರುವ ಶತ್ರುಗಳನ್ನು ಎದುರಿಸುವಂತಿರಬೇಕು.

12101014a ಆಕಾಶಂ ತು ವನಾಭ್ಯಾಶೇ ಮನ್ಯಂತೇ ಗುಣವತ್ತರಮ್|

12101014c ಬಹುಭಿರ್ಗುಣಜಾತೈಸ್ತು ಯೇ ಯುದ್ಧಕುಶಲಾ ಜನಾಃ[2]||

ಆಕಾಶವೇ ಚಾವಣಿಯಾಗಿರುವ ಮೈದಾನಕ್ಕಿಂತಲೂ ಅರಣ್ಯದ ಸಮೀಪದಲ್ಲಿ ತಂಗುವುದು ಉತ್ತಮವೆಂದು ಅನೇಕ ಗುಣಯುಕ್ತರಾದ ಯುದ್ಧಕುಶಲ ಜನರು ಹೇಳುತ್ತಾರೆ.

12101015a ಉಪನ್ಯಾಸೋಽಪಸರ್ಪಾಣಾಂ[3] ಪದಾತೀನಾಂ ಚ ಗೂಹನಮ್|

12101015c ಅಥ ಶತ್ರುಪ್ರತೀಘಾತಮಾಪದರ್ಥಂ ಪರಾಯಣಮ್||

ಅರಣ್ಯದ ಸಮೀಪದಲ್ಲಿ ಬಿಡಾರಮಾಡುವುದು, ಪದಾತಿಗಳನ್ನು ಅಡಗಿಸಿಟ್ಟಿರುವುದು, ನಿಗೂಢವಾಗಿದ್ದುಕೊಂಡೇ ಶತ್ರುಗಳ ಮೇಲೆ ಹಲ್ಲೆಮಾಡುವುದು ಇವು ಆಪತ್ಕಾಲದಲ್ಲಿ ಆಶ್ರಯಿಸಬೇಕಾದ ವಿಧಾನಗಳು.

12101016a ಸಪ್ತರ್ಷೀನ್ ಪೃಷ್ಠತಃ ಕೃತ್ವಾ ಯುಧ್ಯೇರನ್ನಚಲಾ ಇವ|

12101016c ಅನೇನ ವಿಧಿನಾ ರಾಜನ್ ಜಿಗೀಷೇತಾಪಿ ದುರ್ಜಯಾನ್||

ಸಪ್ತರ್ಷಿಮಂಡಲವನ್ನು ಹಿಂದಕ್ಕೆ ಬಿಟ್ಟುಕೊಂಡು ಪರ್ವತಗಳಂತೆ ಅಚಲವಾಗಿ ನಿಂತು ಯುದ್ಧಮಾಡಬೇಕು. ರಾಜನ್! ಈ ವಿಧಾನದಿಂದ ದುರ್ಜಯರನ್ನೂ ಜಯಿಸಬಹುದು.

12101017a ಯತೋ ವಾಯುರ್ಯತಃ ಸೂರ್ಯೋ ಯತಃ ಶುಕ್ರಸ್ತತೋ ಜಯಃ|

12101017c ಪೂರ್ವಂ ಪೂರ್ವಂ ಜ್ಯಾಯ ಏಷಾಂ ಸಂನಿಪಾತೇ ಯುಧಿಷ್ಠಿರ||

ಯುಧಿಷ್ಠಿರ! ಯಾವ ಸೈನ್ಯದ ಹಿಂದಿನಿಂದ ವಾಯುವು ಬೀಸುತ್ತಿರುತ್ತದೆಯೋ, ಮತ್ತು ಯಾವ ಸೇನೆಯ ಹಿಂದೆ ಸೂರ್ಯ-ಶಕ್ರರು ಪ್ರಕಾಶವಾಗಿರುವರೋ ಆ ಪಕ್ಷಕ್ಕೇ ವಿಜಯವುಂಟಾಗುತ್ತದೆ.

12101018a ಅಕರ್ದಮಾಮನುದಕಾಮಮರ್ಯಾದಾಮಲೋಷ್ಟಕಾಮ್|

12101018c ಅಶ್ವಭೂಮಿಂ ಪ್ರಶಂಸಂತಿ ಯೇ ಯುದ್ಧಕುಶಲಾ ಜನಾಃ||

ಕೆಸರಿಲ್ಲದಿರುವ, ಹಳ್ಳಗಳಿಲ್ಲದಿರುವ, ಮಣ್ಣು ಹೆಂಟೆಗಳಿಲ್ಲದಿರುವ ಸಮಪ್ರದೇಶವು ಕುದುರೆಗಳನ್ನು ತಂಗಿಸಲು ಪ್ರಶಸ್ತವಾದುದು ಎಂದು ಯುದ್ಧಕುಶಲ ಜನರು ಪ್ರಶಂಸಿಸುತ್ತಾರೆ.

12101019a ಸಮಾ ನಿರುದಕಾಕಾಶಾ ರಥಭೂಮಿಃ ಪ್ರಶಸ್ಯತೇ[4]|

12101019c ನೀಚದ್ರುಮಾ ಮಹಾಕಕ್ಷಾ ಸೋದಕಾ ಹಸ್ತಿಯೋಧಿನಾಮ್||

ಸಮನಾದ ಬಯಲು ಪ್ರದೇಶವು ರಥಗಳನ್ನು ನಿಲ್ಲಿಸಲು ಪ್ರಶಸ್ತವಾದುದು. ಕುರುಚಲು ಗಿಡಗಳಿರುವ, ವಿಶೇಷವಾಗಿ ಹುಲ್ಲು ಬೆಳೆದಿರುವ ಮತ್ತು ನೀರಿನಿಂದ ಕೂಡಿರುವ ಸ್ಥಳವು ಗಜಯೋಧಿಗಳು ಇಳಿದುಕೊಳ್ಳಲು ಅನುಕೂಲ ಸ್ಥಳವಾಗಿದೆ.

12101020a ಬಹುದುರ್ಗಾ ಮಹಾವೃಕ್ಷಾ[5] ವೇತ್ರವೇಣುಭಿರಾಸ್ತೃತಾ|

12101020c ಪದಾತೀನಾಂ ಕ್ಷಮಾ ಭೂಮಿಃ ಪರ್ವತೋಪವನಾನಿ ಚ||

ಮಹಾ ವೃಕ್ಷಗಳಿರುವ ಬಿದಿರು-ಬೆತ್ತಗಳ ಮೆಳೆಗಳಿಂದ ಕೂಡಿರುವ ಅತಿ ದುರ್ಗಮ ಪರ್ವತ-ಉಪವನಗಳು ಪದಾತಿಗಳು ತಂಗಲು ಉತ್ತಮ ಸ್ಥಳಗಳು.

12101021a ಪದಾತಿಬಹುಲಾ ಸೇನಾ ದೃಢಾ ಭವತಿ ಭಾರತ|

12101021c ರಥಾಶ್ವಬಹುಲಾ ಸೇನಾ ಸುದಿನೇಷು ಪ್ರಶಸ್ಯತೇ||

ಭಾರತ! ಪದಾತಿಗಳು ಹೆಚ್ಚಾಗಿರುವ ಸೇನೆಯು ದೃಢವಾಗಿರುತ್ತದೆ. ರಥ-ಕುದುರೆಗಳು ಹೆಚ್ಚಾಗಿರುವ ಸೇನೆಯು ಉತ್ತಮ ದಿನಗಳಲ್ಲಿ ಪ್ರಶಸ್ತವಾಗಿರುತ್ತದೆ.

12101022a ಪದಾತಿನಾಗಬಹುಲಾ ಪ್ರಾವೃಟ್ಕಾಲೇ ಪ್ರಶಸ್ಯತೇ|

12101022c ಗುಣಾನೇತಾನ್ಪ್ರಸಂಖ್ಯಾಯ ದೇಶಕಾಲೌ ಪ್ರಯೋಜಯೇತ್||

ವರ್ಷಾಕಾಲದಲ್ಲಿ ಪದಾತಿ-ಆನೆಗಳ ಅಧಿಕ್ಯವು ಪ್ರಶಸ್ತವು. ಈ ಗುಣಗಳನ್ನು ದೇಶ-ಕಾಲಗಳ ದೃಷ್ಟಿಯಿಂದ ವಿಚಾರಿಸಿ ಬಳಸಬೇಕು.

12101023a ಏವಂ ಸಂಚಿಂತ್ಯ ಯೋ ಯಾತಿ ತಿಥಿನಕ್ಷತ್ರಪೂಜಿತಃ|

12101023c ವಿಜಯಂ ಲಭತೇ ನಿತ್ಯಂ ಸೇನಾಂ ಸಮ್ಯಕ್ ಪ್ರಯೋಜಯನ್||

ಇದನ್ನು ಆಲೋಚಿಸಿ ಶ್ರೇಷ್ಠ ತಿಥಿ-ನಕ್ಷತ್ರಗಳಲ್ಲಿ ಯುದ್ಧಕ್ಕೆ ಹೊರಡುವ ಮತ್ತು ಸೇನೆಯನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳುವ ರಾಜನು ನಿತ್ಯವೂ ವಿಜಯವನ್ನು ಹೊಂದುತ್ತಾನೆ.

12101024a ಪ್ರಸುಪ್ತಾಂಸ್ತೃಷಿತಾನ್ ಶ್ರಾಂತಾನ್ಪ್ರಕೀರ್ಣಾನ್ನಾಭಿಘಾತಯೇತ್|

12101024c ಮೋಕ್ಷೇ ಪ್ರಯಾಣೇ ಚಲನೇ ಪಾನಭೋಜನಕಾಲಯೋಃ||

12101025a ಅತಿಕ್ಷಿಪ್ತಾನ್ ವ್ಯತಿಕ್ಷಿಪ್ತಾನ್ವಿಹತಾನ್ ಪ್ರತನೂಕೃತಾನ್|

12101025c ಸುವಿಸ್ರಂಭಾನ್ ಕೃತಾರಂಭಾನುಪನ್ಯಾಸಪ್ರತಾಪಿತಾನ್|

12101025e ಬಹಿಶ್ಚರಾನುಪನ್ಯಾಸಾನ್ ಕೃತ್ವಾ ವೇಶ್ಮಾನುಸಾರಿಣಃ||

ಮಲಗಿರುವವರನ್ನೂ, ಬಾಯಾರಿಕೆಯಿಂದ ಸಂಕಟಪಡುತ್ತಿರುವವರನ್ನೂ, ಬಳಲಿರುವವರನ್ನೂ, ಚದುರಿಹೋಗಿರುವವರನ್ನೂ ಸಂಹರಿಸಬಾರದು. ಶಸ್ತ್ರ-ಕವಚಗಳನ್ನು ಬಿಚ್ಚಿ ಪ್ರಯಾಣಿಸುತ್ತಿರುವಾಗ, ಆತ್ತಿತ್ತ ತಿರುಗಾಡುತ್ತಿರುವಾಗ, ಜಲಪಾನ-ಭೋಜನಗಳನ್ನು ಮಾಡುತ್ತಿರುವಾಗ ಯಾರನ್ನೂ ಕೊಲ್ಲಬಾರದು. ಹೀಗೆಯೇ ಬಹಳವಾಗಿ ಗಾಬರಿಗೊಂಡಿರುವವರನ್ನೂ, ಹುಚ್ಚರಾಗಿರುವವರನ್ನೂ, ಮತ್ತ್ಯಾವುದೋ ಕೆಲಸದಲ್ಲಿ ತೊಡಗಿರುವವರನ್ನು, ಗಾಯಗಳಿಂದ ಸಂತಪ್ತರಾದವರನ್ನೂ, ಶಿಬಿರದ ಹೊರಗೆ ತಿರುಗಾಡುತ್ತಿರುವವರನ್ನೂ, ಶಿಬಿರದ ಕಡೆಗೆ ಓಡುತ್ತಿರುವವರನ್ನೂ ಸಂಹರಿಸಬಾರದು.

12101026a ಪಾರಂಪರ್ಯಾಗತೇ ದ್ವಾರೇ ಯೇ ಕೇ ಚಿದನುವರ್ತಿನಃ|

12101026c ಪರಿಚರ್ಯಾವರೋದ್ಧಾರೋ ಯೇ ಚ ಕೇ ಚನ ವಲ್ಗಿನಃ||

ಪಾರಂಪರಾಗತರಾಗಿ ಇರುವ ದ್ವಾರಪಾಲಕರನ್ನೂ ಸೇವಕರನ್ನೂ, ಸಮುದಾಯಾಧಿಪತಿಗಳನ್ನೂ ಸಂಹರಿಸಬಾರದು.

12101027a ಅನೀಕಂ ಯೇ ಪ್ರಭಿಂದಂತಿ ಭಿನ್ನಂ ಯೇ ಸ್ಥಗಯಂತಿ ಚ|

12101027c ಸಮಾನಾಶನಪಾನಾಸ್ತೇ ಕಾರ್ಯಾ ದ್ವಿಗುಣವೇತನಾಃ||

ಶತ್ರುಸೇನೆಯನ್ನು ಒಡೆಯುವ ಮತ್ತು ಒಡೆದುಹೋದ ಸ್ವ-ಸೇನೆಯನ್ನು ಒಂದುಗೂಡಿಸುವರು ರಾಜೋಪಭೋಗ್ಯವಾದ ಪಾನ-ಭೋಜನಾದಿಗಳಿಗೆ ಯೋಗ್ಯರಾಗುತ್ತಾರೆ. ಅವರಿಗೆ ದ್ವಿಗುಣಿತ ವೇತನವನ್ನು ಕೊಡಬೇಕು.

12101028a ದಶಾಧಿಪತಯಃ ಕಾರ್ಯಾಃ ಶತಾಧಿಪತಯಸ್ತಥಾ|

12101028c ತೇಷಾಂ ಸಹಸ್ರಾಧಿಪತಿಂ ಕುರ್ಯಾಚ್ಚೂರಮತಂದ್ರಿತಮ್||

ಹತ್ತು ಸೈನಿಕರಿಗೆ ನಾಯಕರನ್ನೂ ಮತ್ತು ನೂರು ಸೈನಿಕರಿಗೆ ಅಧಿಪತಿಗಳನ್ನೂ ನಿಯೋಜಿಸಬೇಕು. ಅವರಲ್ಲೇ ಶೂರನೂ ಆಲಸನಲ್ಲದವನೂ ಆದವನನ್ನು ಸಹಸ್ರಾಧಿಪತಿಯನ್ನಾಗಿ ಮಾಡಿಕೊಳ್ಳಬೇಕು.

12101029a ಯಥಾಮುಖ್ಯಂ ಸಂನಿಪಾತ್ಯ ವಕ್ತವ್ಯಾಃ ಸ್ಮ ಶಪಾಮಹೇ|

12101029c ಯಥಾ ಜಯಾರ್ಥಂ ಸಂಗ್ರಾಮೇ ನ ಜಹ್ಯಾಮ ಪರಸ್ಪರಮ್||

ಅನಂತರ ಸೇನಾಪ್ರಮುಖರನ್ನು ಸೇರಿಸಿ ಅವರಿಂದ ಈ ಶಪಥವನ್ನು ಮಾಡಿಸಿಕೊಳ್ಳಬೇಕು: “ವಿಜಯಕ್ಕಾಗಿ ಸಂಗ್ರಾಮದಲ್ಲಿ ಪರಸ್ಪರರನ್ನು ಸಂಹರಿಸುವುದಿಲ್ಲ.

12101030a ಇಹೈವ ತೇ ನಿವರ್ತಂತಾಂ ಯೇ ನಃ ಕೇ ಚನ ಭೀರವಃ|

12101030c ನ ಘಾತಯೇಯುಃ ಪ್ರದರಂ[6] ಕುರ್ವಾಣಾಸ್ತುಮುಲೇ ಸತಿ||

ಹೇಡಿಗಳಾಗಿರುವವರು ಇಲ್ಲಿಂದಲೇ ಹಿಂದಿರುಗಬೇಕು. ಯುದ್ಧದಲ್ಲಿ ಶತ್ರುಪಕ್ಷದ ಪ್ರಮುಖರನ್ನು ಕೊಲ್ಲಲು ಯಾರು ಸಮರ್ಥರೋ ಅವರು ಮಾತ್ರ ಇಲ್ಲಿ ನಿಲ್ಲಲಿ.”

[7]12101031a ಆತ್ಮಾನಂ ಚ ಸ್ವಪಕ್ಷಂ ಚ ಪಲಾಯನ್[8] ಹಂತಿ ಸಂಯುಗೇ|

12101031c ದ್ರವ್ಯನಾಶೋ ವಧೋಽಕೀರ್ತಿರಯಶಶ್ಚ ಪಲಾಯನೇ||

ವೀರರು ತಮ್ಮನ್ನೂ ತಮ್ಮ ಪಕ್ಷದವರನ್ನೂ ರಕ್ಷಿಸಿ ಯುದ್ಧದಲ್ಲಿ ಶತ್ರುಗಳನ್ನು ಸಂಹರಿಸುತ್ತಾರೆ. ಪಲಾಯನದಲ್ಲಿ ದ್ರವ್ಯನಾಶ, ವಧೆ, ಅಕೀರ್ತಿ ಮತ್ತು ಅಯಶಸ್ಸು ಸೇರಿವೆ.

12101032a ಅಮನೋಜ್ಞಾಸುಖಾ ವಾಚಃ ಪುರುಷಸ್ಯ ಪಲಾಯತಃ|

12101032c ಪ್ರತಿಸ್ಪಂದೌಷ್ಠದಂತಸ್ಯ ನ್ಯಸ್ತಸರ್ವಾಯುಧಸ್ಯ ಚ||

12101033a ಹಿತ್ವಾ ಪಲಾಯಮಾನಸ್ಯ ಸಹಾಯಾನ್ ಪ್ರಾಣಸಂಶಯೇ[9]|

12101033c ಅಮಿತ್ರೈರನುಬದ್ಧಸ್ಯ ದ್ವಿಷತಾಮಸ್ತು ನಸ್ತಥಾ||

ಪುರುಷನು ಪಲಾಯನ ಮಾಡಿದರೆ ಮನಸ್ಸಿಗೆ ಸುಖವೆಂಬುದೇ ಇರುವುದಿಲ್ಲ. ಜನರು ಮಾತನಾಡಿಕೊಳ್ಳುತ್ತಾರೆ. ಹಲ್ಲುಗಳನ್ನು ಮುರಿಸಿಕೊಂಡು ಆಯುಧಗಳನ್ನು ಕೆಳಗಿಟ್ಟು ರಣವನ್ನು ಬಿಟ್ಟು ಪಲಾಯನಮಾಡುವರು ಯಾವಾಗಲೂ ನಮ್ಮ ಶತ್ರುಗಳ ಪಕ್ಷದಲ್ಲಿರಲಿ.

12101034a ಮನುಷ್ಯಾಪಸದಾ ಹ್ಯೇತೇ ಯೇ ಭವಂತಿ ಪರಾಙ್ಮುಖಾಃ|

12101034c ರಾಶಿವರ್ಧನಮಾತ್ರಾಸ್ತೇ ನೈವ ತೇ ಪ್ರೇತ್ಯ ನೋ ಇಹ||

ಪರಾಙ್ಮುಖರಾಗುವವರು ಮನುಷ್ಯಾಧಮರೇ ಸರಿ. ಅವರು ಸೈನ್ಯ ಸಂಖ್ಯೆಯನ್ನು ಹೆಚ್ಚಿಸಲು ಮಾತ್ರವೇ ಇರುತ್ತಾರೆಯೇ ವಿನಃ ಅವರಿಗೆ ಇಹವೂ ಇಲ್ಲ ಪರವೂ ಇಲ್ಲ.

12101035a ಅಮಿತ್ರಾ ಹೃಷ್ಟಮನಸಃ ಪ್ರತ್ಯುದ್ಯಾಂತಿ ಪಲಾಯಿನಮ್|

12101035c ಜಯಿನಂ ಸುಹೃದಸ್ತಾತ ವಂದನೈರ್ಮಂಗಲೇನ ಚ[10]||

ಪಲಾಯನ ಮಾಡುತ್ತಿರುವವರನ್ನು ಸಂತೋಷದಿಂದ ಶತ್ರುಗಳು ಹಿಂಬಾಲಿಸುತ್ತಾರೆ. ಅಯ್ಯಾ! ವಿಜಯಿಯಾದವರನ್ನು ಸುಹೃದರು ವಂದನ-ಮಂಗಲಗಳಿಂದ ಪೂಜಿಸುತ್ತಾರೆ.

12101036a ಯಸ್ಯ ಸ್ಮ ವ್ಯಸನೇ ರಾಜನ್ನನುಮೋದಂತಿ ಶತ್ರವಃ[11]|

12101036c ತದಸಹ್ಯತರಂ ದುಃಖಮಹಂ ಮನ್ಯೇ ವಧಾದಪಿ||

ರಾಜನ್! ವ್ಯಸನದಲ್ಲಿರುವವನ ರಾಜನನ್ನು ಶತ್ರುಗಳು ಅಪಮಾನಿಸುವುದು ಅವನಿಗೆ ಮಧೆಗಿಂತಲೂ ಹೆಚ್ಚಿನ ಅಸಹನೀಯ ದುಃಖವೆಂದು ನನಗನ್ನಿಸುತ್ತದೆ.

12101037a ಶ್ರಿಯಂ[12] ಜಾನೀತ ಧರ್ಮಸ್ಯ ಮೂಲಂ ಸರ್ವಸುಖಸ್ಯ ಚ|

12101037c ಸಾ[13] ಭೀರೂಣಾಂ ಪರಾನ್ಯಾತಿ[14] ಶೂರಸ್ತಾಮಧಿಗಚ್ಚತಿ||

ಸಂಪತ್ತು ಧರ್ಮದ ಮತ್ತು ಸರ್ವಸುಖದ ಮೂಲವೆಂದು ತಿಳಿಯಬೇಕು. ಶ್ರೀಯು ಹೇಡಿಗಳನ್ನು ತೊರೆಯುತ್ತಾಳೆ ಮತ್ತು ಶೂರರ ಬಳಿಸಾರುತ್ತಾಳೆ.

12101038a ತೇ ವಯಂ ಸ್ವರ್ಗಮಿಚ್ಚಂತಃ ಸಂಗ್ರಾಮೇ ತ್ಯಕ್ತಜೀವಿತಾಃ|

12101038c ಜಯಂತೋ ವಧ್ಯಮಾನಾ ವಾ ಪ್ರಾಪ್ತುಮರ್ಹಾಮ[15] ಸದ್ಗತಿಮ್||

ನಾವು ಕ್ಷತ್ರಿಯರು ಸ್ವರ್ಗವನ್ನು ಬಯಸಿ ಜೀವಿತದ ಆಶೆಯನ್ನೂ ಬಿಟ್ಟು ಹೋರಾಡುತ್ತೇವೆ. ಜಯವಾಗಲಿ ಅಥವಾ ಹತರಾಗಲಿ ಮಹಾ ಸದ್ಗತಿಯನ್ನು ಪಡೆದುಕೊಳ್ಳುತ್ತೇವೆ.

12101039a ಏವಂ ಸಂಶಪ್ತಶಪಥಾಃ ಸಮಭಿತ್ಯಕ್ತಜೀವಿತಾಃ|

12101039c ಅಮಿತ್ರವಾಹಿನೀಂ ವೀರಾಃ ಸಂಪ್ರಗಾಹಂತ್ಯಭೀರವಃ||

ಈ ರೀತಿಯ ಶಪಥವನ್ನು ಮಾಡಿ ಜೀವದ ಹಂಗನ್ನೂ ತೊರೆದು ಧೈರ್ಯಶಾಲೀ ವೀರರು ಶತ್ರುಸೈನ್ಯದ ಮಧ್ಯೆ ನುಗ್ಗಿಹೋಗುತ್ತಾರೆ.

12101040a ಅಗ್ರತಃ ಪುರುಷಾನೀಕಮಸಿಚರ್ಮವತಾಂ ಭವೇತ್|

12101040c ಪೃಷ್ಠತಃ ಶಕಟಾನೀಕಂ ಕಲತ್ರಂ ಮಧ್ಯತಸ್ತಥಾ||

ಸೇನೆಗಳು ಹೋಗುವಾಗ ಎದಿರು ಕವಚ-ಖಡ್ಗಗಳನ್ನು ಧರಿಸಿದ ಪದಾತಿಗಳಿರಬೇಕು. ಹಿಂದಿನಿಂದ ರಥಸೇನೆಯಿರಬೇಕು. ರಾಜಸ್ತ್ರೀಯರು ಮಧ್ಯದಲ್ಲಿರಬೇಕು.

12101041a ಪರೇಷಾಂ ಪ್ರತಿಘಾತಾರ್ಥಂ ಪದಾತೀನಾಂ ಚ ಗೂಹನಮ್[16]|

12101041c ಅಪಿ ಹ್ಯಸ್ಮಿನ್ಪರೇ ಗೃದ್ಧಾ[17] ಭವೇಯುರ್ಯೇ ಪುರೋಗಮಾಃ||

 

12101042a ಯೇ ಪುರಸ್ತಾದಭಿಮತಾಃ ಸತ್ತ್ವವಂತೋ ಮನಸ್ವಿನಃ|

12101042c ತೇ ಪೂರ್ವಮಭಿವರ್ತೇರಂಸ್ತಾನನ್ವಗಿತರೇ[18] ಜನಾಃ||

ಹಿಂದೆಯೇ ಸತ್ತ್ವವಂತರೆಂದೂ ಜಿತೇಂದ್ರಿಯರೆಂದೂ ಪ್ರಸಿದ್ಧರಾಗಿದ್ದವರೇ ಸೈನ್ಯದ ಮುಂಭಾಗದಲ್ಲಿರಬೇಕು. ಉಳಿದವರು ಅವರನ್ನು ಅನುಸರಿಸಿ ಹೋಗಬೇಕು.

12101043a ಅಪಿ ಚೋದ್ಧರ್ಷಣಂ ಕಾರ್ಯಂ ಭೀರೂಣಾಮಪಿ ಯತ್ನತಃ|

12101043c ಸ್ಕಂಧದರ್ಶನಮಾತ್ರಂ ತು ತಿಷ್ಠೇಯುರ್ವಾ ಸಮೀಪತಃ||

ಹೇಡಿಗಳನ್ನೂ ಕೂಡ ಪ್ರಯತ್ನಪೂರ್ವಕವಾಗಿ ಯುದ್ಧಮಾಡಲು ಪ್ರೋತ್ಸಾಹಿಸಬೇಕು ಅಥವಾ ಸೈನ್ಯದ ಬಾಹುಬಲವನ್ನು ತೋರಿಸುವುದಕ್ಕಾಗಿ ಅವರು ಸಮೀಪದಲ್ಲಾದರೂ ಇರಬೇಕು.

12101044a ಸಂಹತಾನ್ಯೋಧಯೇದಲ್ಪಾನ್ಕಾಮಂ ವಿಸ್ತಾರಯೇದ್ಬಹೂನ್|

12101044c ಸೂಚೀಮುಖಮನೀಕಂ ಸ್ಯಾದಲ್ಪಾನಾಂ ಬಹುಭಿಃ ಸಹ||

ಅಲ್ಪಸಂಖ್ಯೆಯಲ್ಲಿದ್ದರೆ ಒಟ್ಟಾಗಿ ಯುದ್ಧಮಾಡಲು ಪ್ರಯತ್ನಿಸಬೇಕು. ಬಹುಸಂಖ್ಯಾತರಾಗಿದ್ದರೆ ವಿಸ್ತಾರ ಸ್ಥಳದಲ್ಲಿ ಇಚ್ಛಾನುಸಾರ ಯುದ್ಧಮಾಡಲು ಬಿಡಬೇಕು. ಅಲ್ಪಸಂಖ್ಯಾತರು ಬಹುಸಂಖ್ಯಾತರೊಂದಿಗೆ ಯುದ್ಧಮಾಡುವಾಗ ಸೂಚೀಮುಖ ವ್ಯೂಹವನ್ನು ರಚಿಸಿಕೊಳ್ಳಬೇಕು.

12101045a ಸಂಪ್ರಯುದ್ಧೇ ಪ್ರಹೃಷ್ಟೇ ವಾ ಸತ್ಯಂ ವಾ ಯದಿ ವಾನೃತಮ್|

12101045c ಪ್ರಗೃಹ್ಯ ಬಾಹೂನ್ ಕ್ರೋಶೇತ ಭಗ್ನಾ ಭಗ್ನಾಃ ಪರಾ ಇತಿ||

12101046a ಆಗತಂ ನೋ ಮಿತ್ರಬಲಂ ಪ್ರಹರಧ್ವಮಭೀತವತ್|

ಯುದ್ಧಮಾಡುತ್ತಿರುವಾಗ ತನ್ನ ಸೈನ್ಯದಲ್ಲಿ ಉತ್ಸಾಹವಿರಲಿ ಅಥವಾ ಇಲ್ಲದಿರಲಿ, ಸತ್ಯವಾಗಿರಲಿ ಅಥವಾ ಸುಳ್ಳಾಗಿರಲಿ, ಬಾಹುಗಳನ್ನು ಮೇಲಕ್ಕೆತ್ತಿ “ಶತ್ರುಗಳು ಭಗ್ನರಾಗಿ ಹೋದರು! ಮಿತ್ರಬಲವು ನಮ್ಮ ಸಹಾಯಕ್ಕೆ ಬಂದಿದೆ. ಭಯವಿಲ್ಲದೇ ಪ್ರಹರಿಸಿ!” ಎಂದು ಕೂಗುತ್ತಿರಬೇಕು.

12101046c ಶಬ್ದವಂತೋಽನುಧಾವೇಯುಃ ಕುರ್ವಂತೋ ಭೈರವಂ ರವಮ್||

12101047a ಕ್ಷ್ವೇಡಾಃ ಕಿಲಕಿಲಾಃ ಶಂಖಾಃ ಕ್ರಕಚಾ ಗೋವಿಷಾಣಿಕಾನ್|

12101047c ಭೇರೀಮೃದಂಗಪಣವಾನ್ನಾದಯೇಯುಶ್ಚ ಕುಂಜರಾನ್||

ಈ ಶಬ್ದವನ್ನು ಕೇಳಿದೊಡನೆಯೇ  ಅವರು ಭೈರವ ಕೂಗನ್ನು ಕೂಗುತ್ತಾ ಶತ್ರುಗಳ ಮೇಲೆ ಬೀಳುತ್ತಾರೆ. ಸೈನ್ಯದ ಮುಂಭಾಗದಲ್ಲಿರುವವರು ಗರ್ಜನ-ತರ್ಜನಗಳನ್ನು ಮಾಡುತ್ತಲೇ ಇರಬೇಕು. ವೀರಗರ್ಜನೆಗಳೊಂದಿಗೆ ಕ್ರಕಚ, ಕೊಂಬು, ಭೇರೀ, ಮೃದಂಗ, ನಗಾರಿ – ಮೊದಲಾದ ವಾದ್ಯಗಳನ್ನು ಬಾರಿಸುವ ವ್ಯವಸ್ಥೆಯಿರಬೇಕು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಸೇನಾನೀತಿಕಥನೇ ಏಕಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಸೇನಾನೀತಿಕಥನ ಎನ್ನುವ ನೂರಾಒಂದನೇ ಅಧ್ಯಾಯವು.

Yellow Flower White Background HD Stock Images | Shutterstock

[1] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಅಗ್ರತಃ ಪುರುಷಾನೀಕಂ ಶಕ್ತಂ ಚಾಪಿ ಕುಲೋದ್ಭವಮ್|

[2] ಭಾರತ ದರ್ಶನದಲ್ಲಿ ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ಉಪನ್ಯಾಸೋ ಭವೇತ್ತತ್ರ ಬಲಾನಾಂ ನಾತಿದೂರತಃ||

[3] ಉಪನ್ಯಾಸಾವತರಣಂ ಎಂಬ ಪಠಾಂತರವಿದೆ (ಭಾರತ ದರ್ಶನ).

[4] ಅಪಂಕಾ ಗರ್ತರಹಿತಾ ರಥಭೂಮಿಃ ಪ್ರಶಸ್ಯತೇ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಮಹಾಕಕ್ಷಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಪ್ರವರಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ನ ಸಂನಿಪಾತೇ ಪ್ರದರಂ ವಧಂ ವಾ ಕುರ್ಯುರೀದೃಶಾಃ|

[8] ಪಾಲಯನ್ ಎಂಬ ಪಾಠಾಂತರವಿದೆ (ಭಾರತ ದರ್ಶನ).

[9] ಈ ಶ್ಲೋಕಾರ್ಧವು ಭಾರತ ದರ್ಶನದಲ್ಲಿಲ್ಲ.

[10] ಜಯಿನಸ್ತು ನರಾಸ್ತಾತ ಚಂದನೈರ್ಮಂಡನೇನ ಚ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[11] ಯಸ್ಯ ಸ್ಮ ಸಂಗ್ರಾಮಗತಾ ಯಶೋ ವೈ ಘ್ನಂತಿ ಶತ್ರವಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[12] ಜಯಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[13] ಯಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[14] ಪರಾ ಗ್ಲಾನಿಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[15] ಪ್ರಾಪ್ನುಯಾಮ ಚ ಎಂಬ ಪಾಠಾಂತರವಿದೆ (ಭಾರತ ದರ್ಶನ).

[16] ಬೃಂಹಣಮ್ ಎಂಬ ಪಾಠಾಂತರವಿದೆ (ಭಾರತ ದರ್ಶನ).

[17] ತಸ್ಮಿನ್ಪುರೇ ವೃದ್ಧಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[18] ಪೂರ್ವವಭಿವರೇರಂಶ್ಚೈತಾನೇವೇತರೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.