Shalya Parva: Chapter 62

ಶಲ್ಯಪರ್ವ: ಗದಾಯುದ್ಧ ಪರ್ವ

೬೨

ಯುಧಿಷ್ಠಿರನು ಕೃಷ್ಣನನ್ನು ಗಾಂಧಾರಿಯ ಬಳಿ ಕಳುಹಿಸಿದುದರ ಕಾರಣ (೧-೨೮). ಹಸ್ತಿನಾಪುರವನ್ನು ತಲುಪಿ ಕೃಷ್ಣನು ಧೃತರಾಷ್ಟ್ರನಿಗಾಡಿದ ಮಾತು (೨೯-೫೪). ಕೃಷ್ಣ-ಗಾಂಧಾರಿಯರ ಸಂವಾದ (೫೫-೬೫). ರಾತ್ರಿ ಪಾಂಡವರನ್ನು ಸಂಹರಿಸುವ ಅಶ್ವತ್ಥಾಮನ ಸಂಕಲ್ಪವನ್ನು ತಿಳಿದ ಕೃಷ್ಣನು ಬೇಗನೇ ಹಸ್ತಿನಾಪುರದಿಂದ ಹೊರಟು ಪಾಂಡವರಿದ್ದಲ್ಲಿಗೆ ಹಿಂದಿರುಗಿದುದು (೬೬-೭೩).

09062001 ಜನಮೇಜಯ ಉವಾಚ

09062001a ಕಿಮರ್ಥಂ ರಾಜಶಾರ್ದೂಲೋ ಧರ್ಮರಾಜೋ ಯುಧಿಷ್ಠಿರಃ|

09062001c ಗಾಂಧಾರ್ಯಾಃ ಪ್ರೇಷಯಾಮಾಸ ವಾಸುದೇವಂ ಪರಂತಪಂ||

ಜನಮೇಜಯನು ಹೇಳಿದನು: “ರಾಜಶಾರ್ದೂಲ ಧರ್ಮರಾಜ ಯುಧಿಷ್ಠಿರನು ಯಾವಕಾರಣಕ್ಕಾಗಿ ಪರಂತಪ ವಾಸುದೇವನನ್ನು ಗಾಂಧಾರಿಯ ಬಳಿ ಕಳುಹಿಸಿದನು?

09062002a ಯದಾ ಪೂರ್ವಂ ಗತಃ ಕೃಷ್ಣಃ ಶಮಾರ್ಥಂ ಕೌರವಾನ್ಪ್ರತಿ|

09062002c ನ ಚ ತಂ ಲಬ್ಧವಾನ್ಕಾಮಂ ತತೋ ಯುದ್ಧಮಭೂದಿದಂ||

ಹಿಂದೆ ಕೃಷ್ಣನು ಸಂಧಿಗಾಗಿ ಕೌರವರ ಬಳಿ ಹೋಗಿದ್ದಾಗ ಬಯಸಿದುದನ್ನು ಪಡೆಯಲಿಲ್ಲ ಮತ್ತು ಆ ಯುದ್ಧವು ನಡೆಯಿತು.

09062003a ನಿಹತೇಷು ತು ಯೋಧೇಷು ಹತೇ ದುರ್ಯೋಧನೇ ತಥಾ|

09062003c ಪೃಥಿವ್ಯಾಂ ಪಾಂಡವೇಯಸ್ಯ ನಿಃಸಪತ್ನೇ ಕೃತೇ ಯುಧಿ||

ಆ ಯುದ್ಧದಲ್ಲಿ ಯೋಧರು ಹತರಾದರು ಮತ್ತು ಹಾಗೆಯೇ ದುರ್ಯೋಧನನೂ ಹತನಾಗಿ ಭುವಿಯಲ್ಲಿ ಪಾಂಡವೇಯನ ವೈರಿಗಳೇ ಇಲ್ಲದಂತಾಯಿತು.

09062004a ವಿದ್ರುತೇ ಶಿಬಿರೇ ಶೂನ್ಯೇ ಪ್ರಾಪ್ತೇ ಯಶಸಿ ಚೋತ್ತಮೇ|

09062004c ಕಿಂ ನು ತತ್ಕಾರಣಂ ಬ್ರಹ್ಮನ್ಯೇನ ಕೃಷ್ಣೋ ಗತಃ ಪುನಃ||

ಉಳಿದವರೂ ಪಲಾಯನಮಾಡಲಾಗಿ ಶೂನ್ಯವಾದ ಆ ಉತ್ತಮ ಶಿಬಿರವೂ ಅವನ ವಶವಾಯಿತು. ಬ್ರಹ್ಮನ್! ಇದರ ನಂತರವೂ ಯಾವ ಕಾರಣಕ್ಕಾಗಿ ಕೃಷ್ಣನು ಪುನಃ ಹಸ್ತಿನಾಪುರಕ್ಕೆ ಹೋದನು?

09062005a ನ ಚೈತತ್ಕಾರಣಂ ಬ್ರಹ್ಮನ್ನಲ್ಪಂ ವೈ ಪ್ರತಿಭಾತಿ ಮೇ|

09062005c ಯತ್ರಾಗಮದಮೇಯಾತ್ಮಾ ಸ್ವಯಮೇವ ಜನಾರ್ದನಃ||

ಬ್ರಹ್ಮನ್! ಸ್ವಯಂ ಅಮೇಯಾತ್ಮ ಜನಾರ್ದನನೇ ಅಲ್ಲಿಗೆ ಹೋದನೆಂದರೆ ಅದರ ಕಾರಣವು ಅಲ್ಪವಾದುದಲ್ಲ ಎಂದು ನನಗನ್ನಿಸುತ್ತದೆ.

09062006a ತತ್ತ್ವತೋ ವೈ ಸಮಾಚಕ್ಷ್ವ ಸರ್ವಮಧ್ವರ್ಯುಸತ್ತಮ|

09062006c ಯಚ್ಚಾತ್ರ ಕಾರಣಂ ಬ್ರಹ್ಮನ್ಕಾರ್ಯಸ್ಯಾಸ್ಯ ವಿನಿಶ್ಚಯೇ||

ಅಧ್ವರ್ಯಸತ್ತಮ! ಬ್ರಹ್ಮನ್! ಯಾವ ಕಾರಣದಿಂದಾಗಿ ಆ ಕಾರ್ಯದ ಕುರಿತು ನಿಶ್ಚಯಿಸಲಾಯಿತು ಎನ್ನುವುದನ್ನು‌ಇದ್ದಂತೆ ನನಗೆ ತಿಳಿಸು!”

09062007 ವೈಶಂಪಾಯನ ಉವಾಚ

09062007a ತ್ವದ್ಯುಕ್ತೋಽಯಮನುಪ್ರಶ್ನೋ ಯನ್ಮಾಂ ಪೃಚ್ಚಸಿ ಪಾರ್ಥಿವ|

09062007c ತತ್ತೇಽಹಂ ಸಂಪ್ರವಕ್ಷ್ಯಾಮಿ ಯಥಾವದ್ಭರತರ್ಷಭ||

ವೈಶಂಪಾಯನನು ಹೇಳಿದನು: “ಪಾರ್ಥಿವ! ಭರತರ್ಷಭ! ನೀನು ಕೇಳಿದ ಪ್ರಶ್ನೆಯು ಸಮುಚಿತವಾಗಿಯೇ ಇದೆ. ಅದರ ಕುರಿತು ನಾನು ಯಥಾವತ್ತಾಗಿ ವಿವರಿಸಿ ಹೇಳುತ್ತೇನೆ.

09062008a ಹತಂ ದುರ್ಯೋಧನಂ ದೃಷ್ಟ್ವಾ ಭೀಮಸೇನೇನ ಸಂಯುಗೇ|

09062008c ವ್ಯುತ್ಕ್ರಮ್ಯ ಸಮಯಂ ರಾಜನ್ಧಾರ್ತರಾಷ್ಟ್ರಂ ಮಹಾಬಲಂ||

09062009a ಅನ್ಯಾಯೇನ ಹತಂ ದೃಷ್ಟ್ವಾ ಗದಾಯುದ್ಧೇನ ಭಾರತ|

09062009c ಯುಧಿಷ್ಠಿರಂ ಮಹಾರಾಜ ಮಹದ್ಭಯಮಥಾವಿಶತ್||

ಭಾರತ! ಮಹಾರಾಜ! ಸಂಯುಗದ ಗದಾಯುದ್ಧದಲ್ಲಿ ಭೀಮಸೇನನು ಒಪ್ಪಂದವನ್ನು ಮುರಿದು ಧಾರ್ತರಾಷ್ಟ್ರ ಮಹಾಬಲ ದುರ್ಯೋಧನನನ್ನು ಅನ್ಯಾಯವಾತಿ ಸಂಹರಿಸಿದುದನ್ನು ನೋಡಿ ಯುಧಿಷ್ಠಿರನಿಗೆ ಮಹಾ ಭಯವು ಆವರಿಸಿತು.

09062010a ಚಿಂತಯಾನೋ ಮಹಾಭಾಗಾಂ ಗಾಂಧಾರೀಂ ತಪಸಾನ್ವಿತಾಂ|

09062010c ಘೋರೇಣ ತಪಸಾ ಯುಕ್ತಾಂ ತ್ರೈಲೋಕ್ಯಮಪಿ ಸಾ ದಹೇತ್||

ಘೋರ ತಪಸ್ಸಿನಿಂದ ಯುಕ್ತಳಾಗಿ ಮೂರು ಲೋಕಗಳನ್ನೂ ದಹಿಸಬಲ್ಲವಳಾಗಿದ್ದ ತಪಸಾನ್ವಿತೆ ಮಹಾಭಾಗೆ ಗಾಂಧಾರಿಯ ಕುರಿತು ಅವನು ಚಿಂತಿಸಿದನು.

09062011a ತಸ್ಯ ಚಿಂತಯಮಾನಸ್ಯ ಬುದ್ಧಿಃ ಸಮಭವತ್ತದಾ|

09062011c ಗಾಂಧಾರ್ಯಾಃ ಕ್ರೋಧದೀಪ್ತಾಯಾಃ ಪೂರ್ವಂ ಪ್ರಶಮನಂ ಭವೇತ್||

ಹೀಗೆ ಚಿಂತಿಸುತ್ತಿರುವಾಗ ಗಾಂಧಾರಿಯ ಭುಗಿಲೇಳುವ ಕೋಪವನ್ನು ಮೊದಲೇ ಪ್ರಶಮನಗೊಳಿಸಬೇಕು ಎಂದು ಅವನ ಬುದ್ಧಿಗೆ ಹೊಳೆಯಿತು.

09062012a ಸಾ ಹಿ ಪುತ್ರವಧಂ ಶ್ರುತ್ವಾ ಕೃತಮಸ್ಮಾಭಿರೀದೃಶಂ|

09062012c ಮಾನಸೇನಾಗ್ನಿನಾ ಕ್ರುದ್ಧಾ ಭಸ್ಮಸಾನ್ನಃ ಕರಿಷ್ಯತಿ||

“ಈ ರೀತಿಯಲ್ಲಿ ನಾವು ಅವಳ ಪುತ್ರನನ್ನು ವಧಿಸಿದೆವೆನ್ನುವುದನ್ನು ಕೇಳಿ ಕ್ರುದ್ಧಮನಸ್ಸಿನಿಂದಲೇ ಉದ್ಭವಿಸಿದ ಅಗ್ನಿಯಿಂದ ಅವಳು ನಮ್ಮನ್ನು ಭಸ್ಮಮಾಡಿಬಿಡುತ್ತಾಳೆ!

09062013a ಕಥಂ ದುಃಖಮಿದಂ ತೀವ್ರಂ ಗಾಂಧಾರೀ ಪ್ರಸಹಿಷ್ಯತಿ|

09062013c ಶ್ರುತ್ವಾ ವಿನಿಹತಂ ಪುತ್ರಂ ಚಲೇನಾಜಿಹ್ಮಯೋಧಿನಂ||

ನ್ಯಾಯಮಾರ್ಗದಲ್ಲಿ ಯುದ್ಧಮಾಡುತ್ತಿದ್ದ ತನ್ನ ಮಗನನ್ನು ಅನ್ಯಾಯಮಾರ್ಗದಿಂದ ಕೊಲ್ಲಲಾಯಿತೆನ್ನುವುದನ್ನು ಕೇಳಿ ಆ ತೀವ್ರ ದುಃಖವನ್ನು ಗಾಂಧಾರಿಯು ಹೇಗೆ ಸಹಿಸಿಕೊಳ್ಳುವಳು?”

09062014a ಏವಂ ವಿಚಿಂತ್ಯ ಬಹುಧಾ ಭಯಶೋಕಸಮನ್ವಿತಃ|

09062014c ವಾಸುದೇವಮಿದಂ ವಾಕ್ಯಂ ಧರ್ಮರಾಜೋಽಭ್ಯಭಾಷತ||

ಹೇಗೆ ಬಹಳವಾಗಿ ಚಿಂತಿಸಿ ಭಯಶೋಕಸಮನ್ವಿತನಾದ ಧರ್ಮರಾಜನು ವಾಸುದೇವನಿಗೆ ಈ ಮಾತನ್ನಾಡಿದನು:

09062015a ತವ ಪ್ರಸಾದಾದ್ಗೋವಿಂದ ರಾಜ್ಯಂ ನಿಹತಕಂಟಕಂ|

09062015c ಅಪ್ರಾಪ್ಯಂ ಮನಸಾಪೀಹ ಪ್ರಾಪ್ತಮಸ್ಮಾಭಿರಚ್ಯುತ||

“ಗೋವಿಂದ! ಮನಸ್ಸಿನಿಂದಲೂ ಪಡೆದುಕೊಳ್ಳಲು ಅಸಾಧ್ಯವಾಗಿದ್ದ ಈ ನಿಷ್ಕಂಟಕ ರಾಜ್ಯವನ್ನು ನಾವು ನಿನ್ನ ಅನುಗ್ರಹದಿಂದಲೇ ಪಡೆದುಕೊಂಡಿದ್ದೇವೆ.

09062016a ಪ್ರತ್ಯಕ್ಷಂ ಮೇ ಮಹಾಬಾಹೋ ಸಂಗ್ರಾಮೇ ರೋಮಹರ್ಷಣೇ|

09062016c ವಿಮರ್ದಃ ಸುಮಹಾನ್ಪ್ರಾಪ್ತಸ್ತ್ವಯಾ ಯಾದವನಂದನ||

ಮಹಾಬಾಹೋ! ಯಾದವನಂದನ! ರೋಮಹರ್ಷಣ ಸಂಗ್ರಾಮದಲ್ಲಿ ಪ್ರತ್ಯಕ್ಷ ನೀನೇ ಮಹಾ ಪ್ರಹಾರಗಳಿಗೆ ಈಡಾದೆ!

09062017a ತ್ವಯಾ ದೇವಾಸುರೇ ಯುದ್ಧೇ ವಧಾರ್ಥಮಮರದ್ವಿಷಾಂ|

09062017c ಯಥಾ ಸಾಹ್ಯಂ ಪುರಾ ದತ್ತಂ ಹತಾಶ್ಚ ವಿಬುಧದ್ವಿಷಃ||

09062018a ಸಾಹ್ಯಂ ತಥಾ ಮಹಾಬಾಹೋ ದತ್ತಮಸ್ಮಾಕಮಚ್ಯುತ|

09062018c ಸಾರಥ್ಯೇನ ಚ ವಾರ್ಷ್ಣೇಯ ಭವತಾ ಯದ್ಧೃತಾ ವಯಂ||

ಮಹಾಬಾಹೋ! ಅಚ್ಯುತ! ವಾರ್ಷ್ಣೇಯ! ಹಿಂದೆ ದೇವಾಸುರ ಯುದ್ಧದಲ್ಲಿ ಅಮರದ್ವೇಷಿಗಳ ವಧೆಗಾಗಿ ಹೇಗೆ ಸಹಾಯವನ್ನಿತ್ತು ಅಮರದ್ವೇಷಿಗಳನ್ನು ಸಂಹರಿಸಿದೆಯೋ ಹಾಗೆ ನಮಗೂ ಸಾರಥ್ಯದ ಸಹಾಯವನ್ನಿತ್ತು ನಮ್ಮನ್ನು ರಕ್ಷಿಸಿದೆ.

09062019a ಯದಿ ನ ತ್ವಂ ಭವೇನ್ನಾಥಃ ಫಲ್ಗುನಸ್ಯ ಮಹಾರಣೇ|

09062019c ಕಥಂ ಶಕ್ಯೋ ರಣೇ ಜೇತುಂ ಭವೇದೇಷ ಬಲಾರ್ಣವಃ||

ಒಂದುವೇಳೆ ನೀನು ಮಹಾರಣದಲ್ಲಿ ಫಲ್ಗುನನ ನಾಥನಾಗಿರದಿದ್ದರೆ ಈ ಸೇನಾಸಮುದ್ರವನ್ನು ನಾವು ರಣದಲ್ಲಿ ಗೆಲ್ಲಲು ಹೇಗೆ ಶಕ್ಯರಾಗುತ್ತಿದ್ದೆವು?

09062020a ಗದಾಪ್ರಹಾರಾ ವಿಪುಲಾಃ ಪರಿಘೈಶ್ಚಾಪಿ ತಾಡನಂ|

09062020c ಶಕ್ತಿಭಿರ್ಭಿಂಡಿಪಾಲೈಶ್ಚ ತೋಮರೈಃ ಸಪರಶ್ವಧೈಃ||

09062021a ವಾಚಶ್ಚ ಪರುಷಾಃ ಪ್ರಾಪ್ತಾಸ್ತ್ವಯಾ ಹ್ಯಸ್ಮದ್ಧಿತೈಷಿಣಾ|

09062021c ತಾಶ್ಚ ತೇ ಸಫಲಾಃ ಸರ್ವಾ ಹತೇ ದುರ್ಯೋಧನೇಽಚ್ಯುತ||

ಅಚ್ಯುತ! ನಮ್ಮ ಹಿತೈಷಿಯಾಗಿದ್ದುಕೊಂಡು ನೀನು ವಿಪುಲ ಗದಾಪ್ರಹಾರಗಳನ್ನೂ, ಪರಿಘ-ಶಕ್ತಿ-ಭಿಂಡಿಪಾಲ-ತೋಮರ-ಪರಶುಗಳ ಪೆಟ್ಟುಗಳನ್ನೂ ಸಹಿಸಿಕೊಂಡಿರುವೆ ಮತ್ತು ಕಠೋರ ಮಾತುಗಳ ನಿಂದನೆಗಳನ್ನೂ ಪಡೆದಿರುವೆ. ದುರ್ಯೋಧನನು ಹತನಾಗಿ ಅವೆಲ್ಲವುಗಳೂ ಸಫಲವಾದಂತಾದವು,

09062022a ಗಾಂಧಾರ್ಯಾ ಹಿ ಮಹಾಬಾಹೋ ಕ್ರೋಧಂ ಬುಧ್ಯಸ್ವ ಮಾಧವ|

09062022c ಸಾ ಹಿ ನಿತ್ಯಂ ಮಹಾಭಾಗಾ ತಪಸೋಗ್ರೇಣ ಕರ್ಶಿತಾ||

ಮಹಾಬಾಹೋ! ಮಾಧವ! ನಿತ್ಯವೂ ಉಗ್ರತಪಸ್ಸಿನಿಂದ ಕೃಶಳಾಗಿರುವ ಆ ಮಹಾಭಾಗೆ ಗಾಂಧಾರಿಯ ಕ್ರೋಧವನ್ನು ನೀನು ತಿಳಿದಿರುವೆ!

09062023a ಪುತ್ರಪೌತ್ರವಧಂ ಶ್ರುತ್ವಾ ಧ್ರುವಂ ನಃ ಸಂಪ್ರಧಕ್ಷ್ಯತಿ|

09062023c ತಸ್ಯಾಃ ಪ್ರಸಾದನಂ ವೀರ ಪ್ರಾಪ್ತಕಾಲಂ ಮತಂ ಮಮ||

ಮಕ್ಕಳು ಮೊಮ್ಮಕ್ಕಳ ವಧೆಯನ್ನು ಕೇಳಿ ನಿಶ್ಚಯವಾಗಿಯೂ ಅವಳು ನಮ್ಮನ್ನು ಸುಟ್ಟುಬಿಡುತ್ತಾಳೆ! ವೀರ! ಅವಳನ್ನು ಪ್ರಸನ್ನಗೊಳಿಸುವ ಕಾಲವು ಬಂದೊದಗಿದೆಯೆಂದು ನನಗನ್ನಿಸುತ್ತದೆ.

09062024a ಕಶ್ಚ ತಾಂ ಕ್ರೋಧದೀಪ್ತಾಕ್ಷೀಂ ಪುತ್ರವ್ಯಸನಕರ್ಶಿತಾಂ|

09062024c ವೀಕ್ಷಿತುಂ ಪುರುಷಃ ಶಕ್ತಸ್ತ್ವಾಂ ಋತೇ ಪುರುಷೋತ್ತಮ||

ಪುರುಷೋತ್ತಮ! ಪುತ್ರವ್ಯಸನದಿಂದ ಬೆಂದು ಕ್ರೋಧದಿಂದ ಉರಿಯುವ ದೃಷ್ಟಿಯುಳ್ಳ ಅವಳನ್ನು ನೋಡಲು ನೀನಲ್ಲದೇ ಬೇರೆ ಯಾವ ಪುರುಷನಿಗೆ ಶಕ್ಯ?

09062025a ತತ್ರ ಮೇ ಗಮನಂ ಪ್ರಾಪ್ತಂ ರೋಚತೇ ತವ ಮಾಧವ|

09062025c ಗಾಂಧಾರ್ಯಾಃ ಕ್ರೋಧದೀಪ್ತಾಯಾಃ ಪ್ರಶಮಾರ್ಥಮರಿಂದಮ||

ಮಾಧವ! ಅರಿಂದಮ! ಕ್ರೋಧದಿಂದ ಉರಿಯುತ್ತಿರುವ ಗಾಂಧಾರಿಯನ್ನು ಪ್ರಶಮನಗೊಳಿಸಲು ನೀನು ಅಲ್ಲಿಗೆ ಹೋಗಬೇಕೆಂದು ನನಗನ್ನಿಸುತ್ತದೆ.

09062026a ತ್ವಂ ಹಿ ಕರ್ತಾ ವಿಕರ್ತಾ ಚ ಲೋಕಾನಾಂ ಪ್ರಭವಾಪ್ಯಯಃ|

09062026c ಹೇತುಕಾರಣಸಮ್ಯುಕ್ತೈರ್ವಾಕ್ಯೈಃ ಕಾಲಸಮೀರಿತೈಃ||

ನೀನೇ ಲೋಕಗಳ ಹುಟ್ಟು ಮತ್ತು ಅಂತ್ಯ, ಕರ್ತ ಮತ್ತು ವಿಕರ್ತ. ಯುಕ್ತಿ ಮತ್ತು ಕಾರಣಗಳ ಸಂಯುಕ್ತವಾದ ಮತ್ತು ಸಮಯೋಚಿತ ಮಾತುಗಳನ್ನು ಬಲ್ಲೆ!

09062027a ಕ್ಷಿಪ್ರಮೇವ ಮಹಾಪ್ರಾಜ್ಞ ಗಾಂಧಾರೀಂ ಶಮಯಿಷ್ಯಸಿ|

09062027c ಪಿತಾಮಹಶ್ಚ ಭಗವಾನ್ ಕೃಷ್ಣಸ್ತತ್ರ ಭವಿಷ್ಯತಿ||

ಮಹಾಪ್ರಾಜ್ಞ! ಬೇಗನೇ ನೀನು ಗಾಂಧಾರಿಯನ್ನು ಶಾಂತಗೊಳಿಸಬಲ್ಲೆ! ಅಲ್ಲಿ ಪಿತಾಮಹ ಭಗವಾನ್ ಕೃಷ್ಣ ವ್ಯಾಸನೂ ಇದ್ದಾನೆ.

09062028a ಸರ್ವಥಾ ತೇ ಮಹಾಬಾಹೋ ಗಾಂಧಾರ್ಯಾಃ ಕ್ರೋಧನಾಶನಂ|

09062028c ಕರ್ತವ್ಯಂ ಸಾತ್ವತಶ್ರೇಷ್ಠ ಪಾಂಡವಾನಾಂ ಹಿತೈಷಿಣಾ||

ಮಹಾಬಾಹೋ! ಸಾತ್ವತಶ್ರೇಷ್ಠ! ಗಾಂಧಾರಿಯ ಕ್ರೋಧವನ್ನು ಕಡೆಗಾಣಿಸುವುದು ಪಾಂಡವರ ಹಿತೈಷಿಯಾದ ನಿನ್ನ ಸರ್ವಥಾ ಕರ್ತವ್ಯವೂ ಆಗಿರುತ್ತದೆ!”

09062029a ಧರ್ಮರಾಜಸ್ಯ ವಚನಂ ಶ್ರುತ್ವಾ ಯದುಕುಲೋದ್ವಹಃ|

09062029c ಆಮಂತ್ರ್ಯ ದಾರುಕಂ ಪ್ರಾಹ ರಥಃ ಸಜ್ಜೋ ವಿಧೀಯತಾಂ||

ಧರ್ಮರಾಜನ ಮಾತನ್ನು ಕೇಳಿ ಯದುಕುಲೋದ್ವಹನು ದಾರುಕನನ್ನು ಕರೆದು ರಥವನ್ನು ಸಜ್ಜುಗೊಳಿಸಿ ತರುವಂತೆ ಹೇಳಿದನು.

09062030a ಕೇಶವಸ್ಯ ವಚಃ ಶ್ರುತ್ವಾ ತ್ವರಮಾಣೋಽಥ ದಾರುಕಃ|

09062030c ನ್ಯವೇದಯದ್ರಥಂ ಸಜ್ಜಂ ಕೇಶವಾಯ ಮಹಾತ್ಮನೇ||

ಕೇಶವನ ಮಾತನ್ನು ಕೇಳಿ ದಾರುಕನು ತ್ವರೆಮಾಡಿ ರಥವನ್ನು ಸಜ್ಜುಗೊಳಿಸಿ ಮಹಾತ್ಮ ಕೇಶವನಿಗೆ ರಥವನ್ನು ತಂದು ನಿವೇದಿಸಿದನು.

09062031a ತಂ ರಥಂ ಯಾದವಶ್ರೇಷ್ಠಃ ಸಮಾರುಹ್ಯ ಪರಂತಪಃ|

09062031c ಜಗಾಮ ಹಾಸ್ತಿನಪುರಂ ತ್ವರಿತಃ ಕೇಶವೋ ವಿಭುಃ||

ಆ ರಥವನ್ನು ಏರಿ ಯಾದವಶ್ರೇಷ್ಠ ಪರಂತಪ ವಿಭು ಕೇಶವನು ತ್ವರೆಮಾಡಿ ಹಸ್ತಿನಾಪುರಕ್ಕೆ ತೆರಳಿದನು.

09062032a ತತಃ ಪ್ರಾಯಾನ್ಮಹಾರಾಜ ಮಾಧವೋ ಭಗವಾನ್ರಥೀ|

09062032c ನಾಗಸಾಹ್ವಯಮಾಸಾದ್ಯ ಪ್ರವಿವೇಶ ಚ ವೀರ್ಯವಾನ್||

ಮಹಾರಾಜ! ಪ್ರಯಾಣದ ನಂತರ ಭಗವಾನ್ ರಥೀ ವೀರ್ಯವಾನ್ ಮಾಧವನು ನಾಗಸಾಹ್ವಯವನ್ನು ತಲುಪಿ ಪ್ರವೇಶಿಸಿದನು.

09062033a ಪ್ರವಿಶ್ಯ ನಗರಂ ವೀರೋ ರಥಘೋಷೇಣ ನಾದಯನ್|

09062033c ವಿದಿತೋ ಧೃತರಾಷ್ಟ್ರಸ್ಯ ಸೋಽವತೀರ್ಯ ರಥೋತ್ತಮಾತ್||

ರಥಘೋಷದಿಂದ ದಿಕ್ಕುಗಳನ್ನು ಮೊಳಗಿಸುತ್ತಾ ಆ ವೀರನು ನಗರವನ್ನು ಪ್ರವೇಶಿಸಿ ಧೃತರಾಷ್ಟ್ರನಿಗೆ ತಿಳಿಸಿ ಉತ್ತಮ ರಥದಿಂದ ಕೆಳಗಿಳಿದನು.

09062034a ಅಭ್ಯಗಚ್ಚದದೀನಾತ್ಮಾ ಧೃತರಾಷ್ಟ್ರನಿವೇಶನಂ|

09062034c ಪೂರ್ವಂ ಚಾಭಿಗತಂ ತತ್ರ ಸೋಽಪಶ್ಯದೃಷಿಸತ್ತಮಂ||

ಆ ಅಧೀನಾತ್ಮನು ಧೃತರಾಷ್ಟ್ರನ ಅರಮನೆಯನ್ನು ಪ್ರವೇಶಿಸಿ ಮೊದಲೇ ಅಲ್ಲಿಗೆ ಆಗಮಿಸಿದ್ದ ಋಷಿಸತ್ತಮ ವ್ಯಾಸನನ್ನು ನೋಡಿದನು.

09062035a ಪಾದೌ ಪ್ರಪೀಡ್ಯ ಕೃಷ್ಣಸ್ಯ ರಾಜ್ಞಶ್ಚಾಪಿ ಜನಾರ್ದನಃ|

09062035c ಅಭ್ಯವಾದಯದವ್ಯಗ್ರೋ ಗಾಂಧಾರೀಂ ಚಾಪಿ ಕೇಶವಃ||

ಅವ್ಯಗ್ರ ಕೇಶವ ಜನಾರ್ದನನು ಕೃಷ್ಣ ದ್ವೈಪಾಯನನ ಮತ್ತು ರಾಜನ ಪಾದಗಳಿಗೆ ನಮಸ್ಕರಿಸಿ ಗಾಂಧಾರಿಯನ್ನೂ ಅಭಿವಂದಿಸಿದನು.

09062036a ತತಸ್ತು ಯಾದವಶ್ರೇಷ್ಠೋ ಧೃತರಾಷ್ಟ್ರಮಧೋಕ್ಷಜಃ|

09062036c ಪಾಣಿಮಾಲಂಬ್ಯ ರಾಜ್ಞಃ ಸ ಸಸ್ವರಂ ಪ್ರರುರೋದ ಹ||

ಬಳಿಕ ಯಾದವಶ್ರೇಷ್ಠ ಅಧೋಕ್ಷಜನು ರಾಜ ಧೃತರಾಷ್ಟ್ರನ ಕೈಗಳನ್ನು ಹಿಡಿದು ಜೋರಾಗಿ ಅಳತೊಡಗಿದನು.

09062037a ಸ ಮುಹೂರ್ತಮಿವೋತ್ಸೃಜ್ಯ ಬಾಷ್ಪಂ ಶೋಕಸಮುದ್ಭವಂ|

09062037c ಪ್ರಕ್ಷಾಲ್ಯ ವಾರಿಣಾ ನೇತ್ರೇ ಆಚಮ್ಯ ಚ ಯಥಾವಿಧಿ||

09062037e ಉವಾಚ ಪ್ರಶ್ರಿತಂ ವಾಕ್ಯಂ ಧೃತರಾಷ್ಟ್ರಮರಿಂದಮಃ||

ಮುಹೂರ್ತಕಾಲ ಶೋಕದಿಂದ ಕಂಬನಿಯನ್ನು ಸುರಿಸಿ ನೀರಿನಿಂದ ಕಣ್ಣುಗಳನ್ನು ಒರೆಸಿಕೊಂಡು ಯಥಾವಿಧಿಯಾಗಿ ಆಚಮನವನ್ನು ಮಾಡಿ ಅರಿಂದಮನು ಧೃತರಾಷ್ಟ್ರನಿಗೆ ಸಮಯೋಚಿತವಾದ ಈ ಮಾತನ್ನಾಡಿದನು:

09062038a ನ ತೇಽಸ್ತ್ಯವಿದಿತಂ ಕಿಂ ಚಿದ್ಭೂತಭವ್ಯಸ್ಯ ಭಾರತ|

09062038c ಕಾಲಸ್ಯ ಚ ಯಥಾ ವೃತ್ತಂ ತತ್ತೇ ಸುವಿದಿತಂ ಪ್ರಭೋ||

“ಪ್ರಭೋ! ಭಾರತ! ನಿನಗೆ ತಿಳಿಯದೇ ಇರುವ ನಡೆದುಹೋದ ಮತ್ತು ನಡೆಯಲಿರುವ ವಿಷಯಗಳೇ ಇಲ್ಲ! ಕಾಲವು ಹೇಗೆ ನಡೆದುಕೊಳ್ಳುತ್ತದೆ ಎನ್ನುವುದೂ ನಿನಗೆ ಚೆನ್ನಾಗಿ ತಿಳಿದಿದೆ.

09062039a ಯದಿದಂ ಪಾಂಡವೈಃ ಸರ್ವೈಸ್ತವ ಚಿತ್ತಾನುರೋಧಿಭಿಃ|

09062039c ಕಥಂ ಕುಲಕ್ಷಯೋ ನ ಸ್ಯಾತ್ತಥಾ ಕ್ಷತ್ರಸ್ಯ ಭಾರತ||

ನಿನ್ನ ಚಿತ್ತಾನುವರ್ತಿಗಳಾದ ಸರ್ವ ಪಾಂಡವರೂ ಈ ಕುಲಕ್ಷಯ ಮತ್ತು ಕ್ಷತ್ರಿಯರ ನಾಶವಾಗಬಾರದೆಂದು ಪ್ರಯತ್ನಿಸಿದರು.

09062040a ಭ್ರಾತೃಭಿಃ ಸಮಯಂ ಕೃತ್ವಾ ಕ್ಷಾಂತವಾನ್ಧರ್ಮವತ್ಸಲಃ|

09062040c ದ್ಯೂತಚ್ಚಲಜಿತೈಃ ಶಕ್ತೈರ್ವನವಾಸೋಽಭ್ಯುಪಾಗತಃ||

ತಾಳ್ಮೆಯಿಂದ ಧರ್ಮವತ್ಸಲ ಯುಧಿಷ್ಠಿರನು ಸಹೋದರರೊಂದಿಗೆ ನಿಬಂಧನೆಯನ್ನು ಮಾಡಿಕೊಂಡು ವಂಚನೆಯ ದ್ಯೂತದಲ್ಲಿ ಸೋತು ವನವಾಸವನ್ನು ಅನುಭವಿಸಿದನು.

09062041a ಅಜ್ಞಾತವಾಸಚರ್ಯಾ ಚ ನಾನಾವೇಶಸಮಾವೃತೈಃ|

09062041c ಅನ್ಯೇ ಚ ಬಹವಃ ಕ್ಲೇಶಾಸ್ತ್ವಶಕ್ತೈರಿವ ನಿತ್ಯದಾ||

ನಾನಾವೇಷಗಳಿಂದ ತಮ್ಮನ್ನು ಅಡಗಿಸಿಕೊಂಡು ಅಜ್ಞಾತವಾಸವನ್ನೂ ನಡೆಸಿದರು. ದುರ್ಬಲರಂತೆ ಅವರು ನಿತ್ಯವೂ ಇನ್ನೂ ಅನ್ಯ ಅನೇಕ ಕ್ಲೇಶಗಳನ್ನು ಅನುಭವಿಸಿದರು.

09062042a ಮಯಾ ಚ ಸ್ವಯಮಾಗಮ್ಯ ಯುದ್ಧಕಾಲ ಉಪಸ್ಥಿತೇ|

09062042c ಸರ್ವಲೋಕಸ್ಯ ಸಾಂನಿಧ್ಯೇ ಗ್ರಾಮಾಂಸ್ತ್ವಂ ಪಂಚ ಯಾಚಿತಃ||

ಯುದ್ಧಕಾಲವು ಬಂದಾಗ ಸ್ವತಃ ನಾನೇ ಬಂದು ಸರ್ವಲೋಕಗಳ ಸಾನ್ನಿಧ್ಯದಲ್ಲಿ ಐದು ಗ್ರಾಮಗಳನ್ನು ನಿನ್ನಿಂದ ಯಾಚಿಸಿದೆ.

09062043a ತ್ವಯಾ ಕಾಲೋಪಸೃಷ್ಟೇನ ಲೋಭತೋ ನಾಪವರ್ಜಿತಾಃ|

09062043c ತವಾಪರಾಧಾನ್ನೃಪತೇ ಸರ್ವಂ ಕ್ಷತ್ರಂ ಕ್ಷಯಂ ಗತಂ||

ಕಾಲಪ್ರೇರಿತನಾದ ನೀನು ಲೋಭದಿಂದ ಅವುಗಳನ್ನು ಬಿಟ್ಟುಕೊಡಲಿಲ್ಲ. ನೃಪತೇ! ನಿನ್ನ ಅಪರಾಧದಿಂದಾಗಿ ಸರ್ವ ಕ್ಷತ್ರಿಯರೂ ನಾಶಹೊಂದಿದ್ದಾರೆ.

09062044a ಭೀಷ್ಮೇಣ ಸೋಮದತ್ತೇನ ಬಾಹ್ಲೀಕೇನ ಕೃಪೇಣ ಚ|

09062044c ದ್ರೋಣೇನ ಚ ಸಪುತ್ರೇಣ ವಿದುರೇಣ ಚ ಧೀಮತಾ||

09062044e ಯಾಚಿತಸ್ತ್ವಂ ಶಮಂ ನಿತ್ಯಂ ನ ಚ ತತ್ಕೃತವಾನಸಿ||

ಭೀಷ್ಮ, ಸೋಮದತ್ತ, ಬಾಹ್ಲೀಕ, ಕೃಪ, ಮಗನೊಂದಿಗೆ ದ್ರೋಣ, ಮತ್ತು ಧೀಮತ ವಿದುರ ಇವರು ನಿತ್ಯವೂ ನಿನ್ನಿಂದ ಶಾಂತಿಯನ್ನು ಯಾಚಿಸುತ್ತಿದ್ದರು. ಅದನ್ನೂ ನೀನು ಮಾಡಲಿಲ್ಲ.

09062045a ಕಾಲೋಪಹತಚಿತ್ತೋ ಹಿ ಸರ್ವೋ ಮುಹ್ಯತಿ ಭಾರತ|

09062045c ಯಥಾ ಮೂಢೋ ಭವಾನ್ಪೂರ್ವಮಸ್ಮಿನ್ನರ್ಥೇ ಸಮುದ್ಯತೇ||

ಭಾರತ! ಕಾಲದ ಪ್ರಭಾವದಿಂದ ಬುದ್ಧಿಯನ್ನು ಕಳೆದುಕೊಂಡಿರುವವರೆಲ್ಲರೂ ಮೋಹಪರವಶರಾಗುತ್ತಾರೆ. ಹಾಗೆಯೇ ಹಿಂದೆ ಇದರ ಕುರಿತು ನಿರ್ಧರಿಸಬೇಕಾಗಿರುವಾಗ ನೀನು ಮೂಢನಾಗಿದ್ದೆ.

09062046a ಕಿಮನ್ಯತ್ಕಾಲಯೋಗಾದ್ಧಿ ದಿಷ್ಟಮೇವ ಪರಾಯಣಂ|

09062046c ಮಾ ಚ ದೋಷಂ ಮಹಾರಾಜ ಪಾಂಡವೇಷು ನಿವೇಶಯ||

ಇದು ಕಾಲದ ಪ್ರಭಾವವಲ್ಲದೇ ಮತ್ತೇನು? ಎಲ್ಲವೂ ದೈವದ ಅಧೀನವಾಗಿದೆ. ಮಹಾರಾಜ! ಈ ದೋಷವನ್ನು ಪಾಂಡವರ ಮೇಲೆ ಹೊರಿಸಬೇಡ!

09062047a ಅಲ್ಪೋಽಪ್ಯತಿಕ್ರಮೋ ನಾಸ್ತಿ ಪಾಂಡವಾನಾಂ ಮಹಾತ್ಮನಾಂ|

09062047c ಧರ್ಮತೋ ನ್ಯಾಯತಶ್ಚೈವ ಸ್ನೇಹತಶ್ಚ ಪರಂತಪ||

ಪರಂತಪ! ಧರ್ಮದಲ್ಲಿಯಾಗಲೀ, ನ್ಯಾಯದಲ್ಲಿಯಾಗಲೀ ಮತ್ತು ಸ್ನೇಹದಲ್ಲಿಯಾಗಲೀ ಮಹಾತ್ಮ ಪಾಂಡವರು ಸ್ವಲ್ಪವೂ ಗಡಿಯನ್ನು ದಾಟಿಲ್ಲ.

09062048a ಏತತ್ಸರ್ವಂ ತು ವಿಜ್ಞಾಯ ಆತ್ಮದೋಷಕೃತಂ ಫಲಂ|

09062048c ಅಸೂಯಾಂ ಪಾಂಡುಪುತ್ರೇಷು ನ ಭವಾನ್ಕರ್ತುಮರ್ಹತಿ||

ಇವೆಲ್ಲವೂ ನಿನ್ನದೇ ದೋಷಗಳ ಫಲವೆಂದು ತಿಳಿದುಕೊಂಡು ನೀನು ಪಾಂಡುಪುತ್ರರ ಮೇಲೆ ಅಸೂಯೆಪಡಬಾರದು!

09062049a ಕುಲಂ ವಂಶಶ್ಚ ಪಿಂಡಶ್ಚ ಯಚ್ಚ ಪುತ್ರಕೃತಂ ಫಲಂ|

09062049c ಗಾಂಧಾರ್ಯಾಸ್ತವ ಚೈವಾದ್ಯ ಪಾಂಡವೇಷು ಪ್ರತಿಷ್ಠಿತಂ||

ನಿನಗೆ ಮತ್ತು ಗಾಂಧಾರಿಗೆ ಇಂದು ಪುತ್ರಕೃತ ಫಲಗಳಾದ ಕುಲ, ವಂಶ ಮತ್ತು ಪಿಂಡಗಳು ಪಾಂಡವರಿಂದಲೇ ನಡೆಯಬೇಕಾಗಿದೆ.

09062050a ಏತತ್ಸರ್ವಮನುಧ್ಯಾತ್ವಾ ಆತ್ಮನಶ್ಚ ವ್ಯತಿಕ್ರಮಂ|

09062050c ಶಿವೇನ ಪಾಂಡವಾನ್ಧ್ಯಾಹಿ ನಮಸ್ತೇ ಭರತರ್ಷಭ||

ಭರತರ್ಷಭ! ಈ ಎಲ್ಲ ವಿಷಯಗಳನ್ನೂ ಸಮಾಲೋಚಿಸಿ, ನಿನ್ನ ತಪ್ಪುಗಳನ್ನು ಮನಗಂಡು ಶುಭಭಾವನೆಗಳಿಂದ ಪಾಂಡವರ ಕುರಿತು ಯೋಚಿಸು. ನಿನಗೆ ನಮಸ್ಕರಿಸುತ್ತೇನೆ.

09062051a ಜಾನಾಸಿ ಚ ಮಹಾಬಾಹೋ ಧರ್ಮರಾಜಸ್ಯ ಯಾ ತ್ವಯಿ|

09062051c ಭಕ್ತಿರ್ಭರತಶಾರ್ದೂಲ ಸ್ನೇಹಶ್ಚಾಪಿ ಸ್ವಭಾವತಃ||

ಮಹಾಬಾಹೋ! ಭರತಶಾರ್ದೂಲ! ಧರ್ಮರಾಜನಲ್ಲಿ ನಿನ್ನ ಮೇಲೆ ಸ್ವಭಾವತಃ ಭಕ್ತಿ ಮತ್ತು ಸ್ನೇಹಭಾವಗಳೇ ಇವೆ ಎನ್ನುವುದು ನಿನಗೆ ತಿಳಿದೇ ಇದೆ.

09062052a ಏತಚ್ಚ ಕದನಂ ಕೃತ್ವಾ ಶತ್ರೂಣಾಮಪಕಾರಿಣಾಂ|

09062052c ದಹ್ಯತೇ ಸ್ಮ ದಿವಾರಾತ್ರಂ ನ ಚ ಶರ್ಮಾಧಿಗಚ್ಚತಿ||

ತನಗೆ ಅಪಕಾರಗಳನ್ನೆಸಗಿದ ಶತ್ರುಗಳೊಂದಿಗೆ ಕದನವನ್ನಾಡಿ ಹಗಲೂ ರಾತ್ರಿ ಅವನು ಸುಡುತ್ತಿದ್ದಾನೆ. ಅವನಿಗೆ ಸುಖವೆಂಬುದೇ ಇಲ್ಲವಾಗಿದೆ.

09062053a ತ್ವಾಂ ಚೈವ ನರಶಾರ್ದೂಲ ಗಾಂಧಾರೀಂ ಚ ಯಶಸ್ವಿನೀಂ|

09062053c ಸ ಶೋಚನ್ಭರತಶ್ರೇಷ್ಠ ನ ಶಾಂತಿಮಧಿಗಚ್ಚತಿ||

ಭರತಶ್ರೇಷ್ಠ! ನರಶಾರ್ದೂಲ! ನಿನ್ನ ಮತ್ತು ಯಶಸ್ವಿನೀ ಗಾಂಧಾರಿಯ ಕುರಿತೂ ಚಿಂತಿಸುತ್ತಿರುವ ಅವನಿಗೆ ಶಾಂತಿಯೆಂಬುದೇ ಇಲ್ಲವಾಗಿದೆ.

09062054a ಹ್ರಿಯಾ ಚ ಪರಯಾವಿಷ್ಟೋ ಭವಂತಂ ನಾಧಿಗಚ್ಚತಿ|

09062054c ಪುತ್ರಶೋಕಾಭಿಸಂತಪ್ತಂ ಬುದ್ಧಿವ್ಯಾಕುಲಿತೇಂದ್ರಿಯಂ||

ಪುತ್ರಶೋಕದಿಂದ ಸಂತಪ್ತರಾಗಿರುವ, ಮತ್ತು ಬುದ್ಧಿ-ಇಂದ್ರಿಯಗಳು ವ್ಯಾಕುಲಗೊಂಡಿರುವ ನಿಮ್ಮನ್ನು ಸಂದರ್ಶಿಸಲು ಅತ್ಯಂತ ನಾಚಿಕೊಂಡ ಅವನು ಇಲ್ಲಿಗೆ ಈಗ ಬಂದಿರುವುದಿಲ್ಲ.”

09062055a ಏವಮುಕ್ತ್ವಾ ಮಹಾರಾಜ ಧೃತರಾಷ್ಟ್ರಂ ಯದೂತ್ತಮಃ|

09062055c ಉವಾಚ ಪರಮಂ ವಾಕ್ಯಂ ಗಾಂಧಾರೀಂ ಶೋಕಕರ್ಶಿತಾಂ||

ಮಹಾರಾಜ! ಧೃತರಾಷ್ಟ್ರನಿಗೆ ಹೀಗೆ ಹೇಳಿ ಯದೂತ್ತಮನು ಶೋಕಕರ್ಶಿತ ಗಾಂಧಾರಿಗೆ ಈ ಪರಮ ವಾಕ್ಯಗಳನ್ನಾಡಿದನು:

09062056a ಸೌಬಲೇಯಿ ನಿಬೋಧ ತ್ವಂ ಯತ್ತ್ವಾಂ ವಕ್ಷ್ಯಾಮಿ ಸುವ್ರತೇ|

09062056c ತ್ವತ್ಸಮಾ ನಾಸ್ತಿ ಲೋಕೇಽಸ್ಮಿನ್ನದ್ಯ ಸೀಮಂತಿನೀ ಶುಭೇ||

“ಸೌಬಲೇಯಿ! ಸುವ್ರತೇ! ಸೀಮಂತಿನೀ! ಶುಭೇ! ನಾನು ಏನನ್ನು ಹೇಳಲಿರುವೆನೋ ಅದನ್ನು ಮನಸ್ಸಿಟ್ಟು ಕೇಳು! ಇಂದು ಈ ಲೋಕದಲ್ಲಿ ನಿನ್ನ ಸಮನಾಗಿರುವವರು ಯಾರೂ ಇಲ್ಲ.

09062057a ಜಾನಾಮಿ ಚ ಯಥಾ ರಾಜ್ಞಿ ಸಭಾಯಾಂ ಮಮ ಸಂನಿಧೌ|

09062057c ಧರ್ಮಾರ್ಥಸಹಿತಂ ವಾಕ್ಯಮುಭಯೋಃ ಪಕ್ಷಯೋರ್ಹಿತಂ||

09062057e ಉಕ್ತವತ್ಯಸಿ ಕಲ್ಯಾಣಿ ನ ಚ ತೇ ತನಯೈಃ ಶ್ರುತಂ||

ರಾಣಿ! ಕಲ್ಯಾಣೀ! ನನ್ನ ಸನ್ನಿಧಿಯಲ್ಲಿ ಸಭೆಯಲ್ಲಿ ಎರಡೂ ಪಕ್ಷಗಳಿಗೆ ಹಿತಕರವಾದ ಧರ್ಮಾರ್ಥಸಹಿತ ಮಾತುಗಳನ್ನು ನೀನು ಆಡಿದ್ದುದು ಮತ್ತು ಅದನ್ನು ನಿನ್ನ ಮಕ್ಕಳು ಕೇಳದೇ ಇದ್ದುದು ನನಗೆ ತಿಳಿದಿದೆ.

09062058a ದುರ್ಯೋಧನಸ್ತ್ವಯಾ ಚೋಕ್ತೋ ಜಯಾರ್ಥೀ ಪರುಷಂ ವಚಃ|

09062058c ಶೃಣು ಮೂಢ ವಚೋ ಮಹ್ಯಂ ಯತೋ ಧರ್ಮಸ್ತತೋ ಜಯಃ||

ಆಗ ಜಯಾರ್ಥಿಯಾದ ದುರ್ಯೋಧನನಿಗೆ ನೀನು ಕಠಿಣವಾದ ಈ ಮಾತನ್ನಾಡಿದ್ದೆ: “ಮೂಢ! ನನ್ನ ಮಾತನ್ನು ಕೇಳು! ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ!”

09062059a ತದಿದಂ ಸಮನುಪ್ರಾಪ್ತಂ ತವ ವಾಕ್ಯಂ ನೃಪಾತ್ಮಜೇ|

09062059c ಏವಂ ವಿದಿತ್ವಾ ಕಲ್ಯಾಣಿ ಮಾ ಸ್ಮ ಶೋಕೇ ಮನಃ ಕೃಥಾಃ||

09062059e ಪಾಂಡವಾನಾಂ ವಿನಾಶಾಯ ಮಾ ತೇ ಬುದ್ಧಿಃ ಕದಾ ಚನ||

ನೃಪಾತ್ಮಜೇ! ಕಲ್ಯಾಣೀ! ಇಗೋ! ನೀನು ಹೇಳಿದಂತೆಯೇ ನಡೆದುಹೋಯಿತು! ಇದನ್ನು ತಿಳಿದು ನೀನು ಮನಸ್ಸಿಗೆ ಶೋಕವನ್ನು ಹಚ್ಚಿಸಿಕೊಳ್ಳಬೇಡ! ಪಾಂಡವರ ವಿನಾಶಕ್ಕಾಗಿ ಎಂದೂ ನಿನ್ನ ಬುದ್ಧಿಯನ್ನು ತೊಡಗಿಸಬೇಡ!

09062060a ಶಕ್ತಾ ಚಾಸಿ ಮಹಾಭಾಗೇ ಪೃಥಿವೀಂ ಸಚರಾಚರಾಂ|

09062060c ಚಕ್ಷುಷಾ ಕ್ರೋಧದೀಪ್ತೇನ ನಿರ್ದಗ್ಧುಂ ತಪಸೋ ಬಲಾತ್||

ಮಹಾಭಾಗೇ! ತಪಸ್ಸಿನ ಬಲದಿಂದ ನೀನು ಕ್ರೋಧದಿಂದ ಉರಿಯುವ ದೃಷ್ಟಿಯಿಂದ ಸಚರಾಚರ ಭೂಮಿಯನ್ನೇ ಭಸ್ಮಮಾಡಲು ಶಕ್ತಳಾಗಿರುವೆ!”

09062061a ವಾಸುದೇವವಚಃ ಶ್ರುತ್ವಾ ಗಾಂಧಾರೀ ವಾಕ್ಯಮಬ್ರವೀತ್|

09062061c ಏವಮೇತನ್ಮಹಾಬಾಹೋ ಯಥಾ ವದಸಿ ಕೇಶವ||

ವಾಸುದೇವನ ಮಾತನ್ನು ಕೇಳಿ ಗಾಂಧಾರಿಯು ಹೀಗೆ ಹೇಳಿದಳು: “ಮಹಾಬಾಹೋ! ಕೇಶವ! ನೀನು ಹೇಳಿದುದು ಸರಿ!

09062062a ಆಧಿಭಿರ್ದಹ್ಯಮಾನಾಯಾ ಮತಿಃ ಸಂಚಲಿತಾ ಮಮ|

09062062c ಸಾ ಮೇ ವ್ಯವಸ್ಥಿತಾ ಶ್ರುತ್ವಾ ತವ ವಾಕ್ಯಂ ಜನಾರ್ದನ||

ಜನಾರ್ದನ! ಸುಟ್ಟುಬಿಡುವ ಕಡೆಗೇ ನನ್ನ ಬುದ್ಧಿಯು ಹರಿಯುತ್ತಿತ್ತು. ನಿನ್ನ ಮಾತನ್ನು ಕೇಳಿ ಅದು ಸ್ಥಿರಗೊಂಡಿತು.

09062063a ರಾಜ್ಞಸ್ತ್ವಂಧಸ್ಯ ವೃದ್ಧಸ್ಯ ಹತಪುತ್ರಸ್ಯ ಕೇಶವ|

09062063c ತ್ವಂ ಗತಿಃ ಸಹ ತೈರ್ವೀರೈಃ ಪಾಂಡವೈರ್ದ್ವಿಪದಾಂ ವರ||

ಕೇಶವ! ಮನುಷ್ಯ ಶ್ರೇಷ್ಠ! ಪುತ್ರರನ್ನು ಕಳೆದುಕೊಂಡ ಈ ಅಂಧವೃದ್ಧ ರಾಜನಿಗೆ ಆ ವೀರಪಾಂಡವರೊಂದಿಗೆ ನೀನೇ ಗತಿಯಾಗು!”

09062064a ಏತಾವದುಕ್ತ್ವಾ ವಚನಂ ಮುಖಂ ಪ್ರಚ್ಚಾದ್ಯ ವಾಸಸಾ|

09062064c ಪುತ್ರಶೋಕಾಭಿಸಂತಪ್ತಾ ಗಾಂಧಾರೀ ಪ್ರರುರೋದ ಹ||

ಹೀಗೆ ಹೇಳಿ ಸೀರೆಯ ಸೆರಗಿನಿಂದ ಮುಖವನ್ನು ಮುಚ್ಚಿಕೊಂಡು ಪುತ್ರಶೋಕದಿಂದ ಸಂತಪ್ತಳಾಗಿದ್ದ ಗಾಂಧಾರಿಯು ಜೋರಾಗಿ ರೋದಿಸಿದಳು.

09062065a ತತ ಏನಾಂ ಮಹಾಬಾಹುಃ ಕೇಶವಃ ಶೋಕಕರ್ಶಿತಾಂ|

09062065c ಹೇತುಕಾರಣಸಮ್ಯುಕ್ತೈರ್ವಾಕ್ಯೈರಾಶ್ವಾಸಯತ್ಪ್ರಭುಃ||

ಹೀಗೆ ಶೋಕಕರ್ಶಿತಳಾದ ಅವಳನ್ನು ಪ್ರಭು ಮಹಾಬಾಹು ಕೇಶವನು ಯುಕ್ತಿಯುಕ್ತ ಮಾತುಗಳಿಂದ ಸಮಾಧಾನಪಡಿಸಿದನು.

09062066a ಸಮಾಶ್ವಾಸ್ಯ ಚ ಗಾಂಧಾರೀಂ ಧೃತರಾಷ್ಟ್ರಂ ಚ ಮಾಧವಃ|

09062066c ದ್ರೌಣೇಃ ಸಂಕಲ್ಪಿತಂ ಭಾವಮನ್ವಬುಧ್ಯತ ಕೇಶವಃ||

ಗಾಂಧಾರೀ ಮತ್ತು ಧೃತರಾಷ್ಟ್ರರನ್ನು ಸಮಾಧಾನಗೊಳಿಸುತ್ತಿದ್ದ ಮಾಧವ ಕೇಶವನು ದ್ರೌಣಿ ಅಶ್ವತ್ಥಾಮನ ಸಂಕಲ್ಪಭಾವವನ್ನು ಅರಿತುಕೊಂಡನು.

09062067a ತತಸ್ತ್ವರಿತ ಉತ್ಥಾಯ ಪಾದೌ ಮೂರ್ಧ್ನಾ ಪ್ರಣಮ್ಯ ಚ|

09062067c ದ್ವೈಪಾಯನಸ್ಯ ರಾಜೇಂದ್ರ ತತಃ ಕೌರವಮಬ್ರವೀತ್||

ರಾಜೇಂದ್ರ! ಅವನು ಕೂಡಲೇ ಮೇಲೆದ್ದು ದ್ವೈಪಾಯನನ ಪಾದಗಳಿಗೆ ತಲೆಬಾಗಿ ನಮಸ್ಕರಿಸಿ ರಾಜೇಂದ್ರ ಕೌರವನಿಗೆ ಹೀಗೆಂದನು:

09062068a ಆಪೃಚ್ಚೇ ತ್ವಾಂ ಕುರುಶ್ರೇಷ್ಠ ಮಾ ಚ ಶೋಕೇ ಮನಃ ಕೃಥಾಃ|

09062068c ದ್ರೌಣೇಃ ಪಾಪೋಽಸ್ತ್ಯಭಿಪ್ರಾಯಸ್ತೇನಾಸ್ಮಿ ಸಹಸೋತ್ಥಿತಃ||

09062068e ಪಾಂಡವಾನಾಂ ವಧೇ ರಾತ್ರೌ ಬುದ್ಧಿಸ್ತೇನ ಪ್ರದರ್ಶಿತಾ||

“ಕುರುಶ್ರೇಷ್ಠ! ನಿನ್ನ ಅನುಮತಿಯನ್ನು ಕೇಳುತ್ತೇನೆ. ಮನಸ್ಸನ್ನು ಶೋಕದಲ್ಲಿ ತೊಡಗಿಸಿಕೊಳ್ಳಬೇಡ. ದ್ರೌಣಿಯಲ್ಲಿ ಪಾಪಕಾರೀ ಅಭಿಪ್ರಾಯವು ಹುಟ್ಟಿಕೊಂಡಿರುವುದರಿಂದ ನಾನು ಬೇಗನೆ ಮೇಲೆದ್ದು ಹೊರಟಿದ್ದೇನೆ. ರಾತ್ರಿಯಲ್ಲಿ ಪಾಂಡವರನ್ನು ವಧಿಸುವ ಬುದ್ಧಿಯು ಅವನಲ್ಲಿದೆ ಎಂದು ನನಗೆ ಕಾಣುತ್ತಿದೆ.”

09062069a ಏತಚ್ಚ್ರುತ್ವಾ ತು ವಚನಂ ಗಾಂಧಾರ್ಯಾ ಸಹಿತೋಽಬ್ರವೀತ್|

09062069c ಧೃತರಾಷ್ಟ್ರೋ ಮಹಾಬಾಹುಃ ಕೇಶವಂ ಕೇಶಿಸೂದನಂ||

ಆ ಮಾತನ್ನು ಕೇಳಿದ ಗಾಂಧಾರೀ ಸಹಿತನಾದ ಮಹಾಬಾಹು ಧೃತರಾಷ್ಟ್ರನು ಕೇಶಿಸೂದನ ಕೇಶವನಿಗೆ ಹೇಳಿದನು:

09062070a ಶೀಘ್ರಂ ಗಚ್ಚ ಮಹಾಬಾಹೋ ಪಾಂಡವಾನ್ಪರಿಪಾಲಯ|

09062070c ಭೂಯಸ್ತ್ವಯಾ ಸಮೇಷ್ಯಾಮಿ ಕ್ಷಿಪ್ರಮೇವ ಜನಾರ್ದನ||

09062070e ಪ್ರಾಯಾತ್ತತಸ್ತು ತ್ವರಿತೋ ದಾರುಕೇಣ ಸಹಾಚ್ಯುತಃ||

“ಶೀಘ್ರವಾಗಿ ಹೋಗು! ಪಾಂಡವರನ್ನು ಪರಿಪಾಲಿಸು! ಜನಾರ್ದನ! ಬೇಗನೆ ನಾನು ನಿನ್ನೊಂದಿಗೆ ಮತ್ತೆ ಭೇಟಿಯಾಗುತ್ತೇನೆ. ಅಚ್ಯುತ! ದಾರುಕನೊಡನೆ ತ್ವರೆಮಾಡಿ ಅಲ್ಲಿಗೆ ಪ್ರಯಾಣಮಾಡು!”

09062071a ವಾಸುದೇವೇ ಗತೇ ರಾಜನ್ಧೃತರಾಷ್ಟ್ರಂ ಜನೇಶ್ವರಂ|

09062071c ಆಶ್ವಾಸಯದಮೇಯಾತ್ಮಾ ವ್ಯಾಸೋ ಲೋಕನಮಸ್ಕೃತಃ||

ರಾಜನ್! ವಾಸುದೇವನು ಹೊರಟುಹೋದ ನಂತರ ಅಮೇಯಾತ್ಮ ಲೋಕನಮಸ್ಕೃತ ವ್ಯಾಸನು ಜನೇಶ್ವರ ಧೃತರಾಷ್ಟ್ರನನ್ನು ಸಮಾಧಾನಗೊಳಿಸತೊಡಗಿದನು.

09062072a ವಾಸುದೇವೋಽಪಿ ಧರ್ಮಾತ್ಮಾ ಕೃತಕೃತ್ಯೋ ಜಗಾಮ ಹ|

09062072c ಶಿಬಿರಂ ಹಾಸ್ತಿನಪುರಾದ್ದಿದೃಕ್ಷುಃ ಪಾಂಡವಾನ್ನೃಪ||

ನೃಪ! ಕೃತಕೃತ್ಯನಾದ ಧರ್ಮಾತ್ಮ ವಾಸುದೇವನೂ ಕೂಡ ಪಾಂಡವರನ್ನು ರಕ್ಷಿಸಲೋಸುಗ ಹಸ್ತಿನಾಪುರದಿಂದ ಶಿಬಿರದ ಕಡೆ ಪ್ರಯಾಣಿಸಿದನು.

09062073a ಆಗಮ್ಯ ಶಿಬಿರಂ ರಾತ್ರೌ ಸೋಽಭ್ಯಗಚ್ಚತ ಪಾಂಡವಾನ್|

09062073c ತಚ್ಚ ತೇಭ್ಯಃ ಸಮಾಖ್ಯಾಯ ಸಹಿತಸ್ತೈಃ ಸಮಾವಿಶತ್||

ರಾತ್ರಿಯಲ್ಲಿ ಶಿಬಿರವನ್ನು ತಲುಪಿ ಪಾಂಡವರನ್ನು ಕಂಡು ಅವರಿಗೆ ನಡೆದುದೆಲ್ಲವನ್ನೂ ಹೇಳಿ ಅವರೊಂದಿಗೆ ಸಾವಧಾನದಿಂದಿದ್ದನು.

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಧೃತರಾಷ್ಟ್ರಗಾಂಧಾರೀಸಮಾಶ್ವಾಸನೇ ದ್ವಿಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಧೃತರಾಷ್ಟ್ರಗಾಂಧಾರೀಸಮಾಶ್ವಾಸನ ಎನ್ನುವ ಅರವತ್ತೆರಡನೇ ಅಧ್ಯಾಯವು.

Comments are closed.