Sauptika Parva: Chapter 18

ಸೌಪ್ತಿಕಪರ್ವ: ಐಷೀಕ ಪರ್ವ

೧೮

ರುದ್ರನು ಯಜ್ಞವನ್ನು ಗೆದ್ದಿದುದರ ಕಥೆಯನ್ನು ಕೃಷ್ಣನು ಯುಧಿಷ್ಠಿರನಿಗೆ ಹೇಳಿ “ಎಲ್ಲವೂ ಮಹಾದೇವನ ಪ್ರಸಾದವೆಂದು ಸ್ವೀಕರಿಸು!” ಎಂದು ಸಂತವಿಸಿದುದು (೧-೨೬)

10018001  ವಾಸುದೇವ ಉವಾಚ|

10018001a ತತೋ ದೇವಯುಗೇಽತೀತೇ ದೇವಾ ವೈ ಸಮಕಲ್ಪಯನ್|

10018001c ಯಜ್ಞಂ ವೇದಪ್ರಮಾಣೇನ ವಿಧಿವದ್ಯಷ್ಟುಮೀಪ್ಸವಃ||

ವಾಸುದೇವನು ಹೇಳಿದನು: “ದೇವಯುಗವು ಮುಗಿಯಲು ದೇವತೆಗಳು ವೇದಪ್ರಮಾಣಾನುಸಾರವಾಗಿ ವಿಧಿವತ್ತಾಗಿ ಯಜ್ಞವನ್ನು ಮಾಡಲು ಬಯಸಿ ಸಂಕಲ್ಪಗೊಂಡರು.

10018002a ಕಲ್ಪಯಾಮಾಸುರವ್ಯಗ್ರಾ ದೇಶಾನ್ಯಜ್ಞೋಚಿತಾಂಸ್ತತ|

10018002c ಭಾಗಾರ್ಹಾ ದೇವತಾಶ್ಚೈವ ಯಜ್ಞಿಯಂ ದ್ರವ್ಯಮೇವ ಚ||

ಅವ್ಯಗ್ರ ದೇವತೆಗಳು ಯಜ್ಞೋಚಿತ ಪ್ರದೇಶವನ್ನೂ, ಹವಿಸ್ಸುಗಳನ್ನೂ, ದ್ರವ್ಯಗಳನ್ನೂ, ಯಜ್ಞಸಾಧನಗಳನ್ನೂ ಸಿದ್ಧಪಡಿಸಿಕೊಂಡರು.

10018003a ತಾ ವೈ ರುದ್ರಮಜಾನಂತ್ಯೋ ಯಾಥಾತಥ್ಯೇನ ದೇವತಾಃ|

10018003c ನಾಕಲ್ಪಯಂತ ದೇವಸ್ಯ ಸ್ಥಾಣೋರ್ಭಾಗಂ ನರಾಧಿಪ||

ನರಾಧಿಪ! ದೇವತೆಗಳಿಗೆ ರುದ್ರನು ಎಲ್ಲಿರುವನೆಂದು ತಿಳಿಯದೇ ಇದ್ದುದರಿಂದ ಅವರು ದೇವ ಸ್ಥಾಣುವಿಗೆ ಹವಿರ್ಭಾಗವನ್ನು ಕಲ್ಪಿಸಲಿಲ್ಲ.

10018004a ಸೋಽಕಲ್ಪ್ಯಮಾನೇ ಭಾಗೇ ತು ಕೃತ್ತಿವಾಸಾ ಮಖೇಽಮರೈಃ|

10018004c ತರಸಾ ಭಾಗಮನ್ವಿಚ್ಚನ್ಧನುರಾದೌ ಸಸರ್ಜ ಹ||

ಹಾಗೆ ಅಮರರು ಯಜ್ಞದಲ್ಲಿ ತನಗೆ ಹವಿರ್ಭಾಗವನ್ನು ಕಲ್ಪಿಸದೇ ಇರಲು ಕೃತ್ತಿವಾಸ ಶಿವನು ಅವರನ್ನು ದಂಡಿಸಲು ಬಯಸಿ ಮೊದಲು ಧನುಸ್ಸನ್ನು ಸೃಷ್ಟಿಸಿದನು.

10018005a ಲೋಕಯಜ್ಞಃ ಕ್ರಿಯಾಯಜ್ಞೋ ಗೃಹಯಜ್ಞಃ ಸನಾತನಃ|

10018005c ಪಂಚಭೂತಮಯೋ ಯಜ್ಞೋ ನೃಯಜ್ಞಶ್ಚೈವ ಪಂಚಮಃ||

ಲೋಕಯಜ್ಞ, ಕ್ರಿಯಾಯಜ್ಞ, ಸನಾತನ ಗೃಹಯಜ್ಞ, ಪಂಚಭೂತಮಯ ಯಜ್ಞ ಮತ್ತು ಐದನೆಯದು ಮನುಷ್ಯ ಯಜ್ಞ.

10018006a ಲೋಕಯಜ್ಞೇನ ಯಜ್ಞೈಷೀ ಕಪರ್ದೀ ವಿದಧೇ ಧನುಃ|

10018006c ಧನುಃ ಸೃಷ್ಟಮಭೂತ್ತಸ್ಯ ಪಂಚಕಿಷ್ಕುಪ್ರಮಾಣತಃ||

ಯಜ್ಞೈಷೀ ಕಪರ್ದಿಯು ಲೋಕಯಜ್ಞದಿಂದ ಧನುಸ್ಸನ್ನು ನಿರ್ಮಿಸಿದನು. ಅವನು ಸೃಷ್ಟಿಸಿದ ಧನುಸ್ಸು ಐದು ಮಾರುಗಳಷ್ಟು ಉದ್ದವಾಗಿತ್ತು.

10018007a ವಷಟ್ಕಾರೋಽಭವಜ್ಜ್ಯಾ ತು ಧನುಷಸ್ತಸ್ಯ ಭಾರತ|

10018007c ಯಜ್ಞಾಂಗಾನಿ ಚ ಚತ್ವಾರಿ ತಸ್ಯ ಸಂಹನನೇಽಭವನ್||

ಭಾರತ! ವಷಟ್ಕಾರವೇ ಅವನ ಧನುಸ್ಸಿನ ಮೌರ್ವಿಯಾಯಿತು. ನಾಲ್ಕು ಯಜ್ಞಾಂಗಗಳು ಅವನ ಕವಚಗಳಾದವು.

10018008a ತತಃ ಕ್ರುದ್ಧೋ ಮಹಾದೇವಸ್ತದುಪಾದಾಯ ಕಾರ್ಮುಕಂ|

10018008c ಆಜಗಾಮಾಥ ತತ್ರೈವ ಯತ್ರ ದೇವಾಃ ಸಮೀಜಿರೇ||

ಆಗ ಕ್ರುದ್ಧನಾದ ಮಹಾದೇವನು ಕಾರ್ಮುಕವನ್ನೆತ್ತಿಕೊಂಡು ದೇವತೆಗಳು ಎಲ್ಲಿ ಸೇರಿದ್ದರೋ ಅಲ್ಲಿಗೆ ಬಂದನು.

10018009a ತಮಾತ್ತಕಾರ್ಮುಕಂ ದೃಷ್ಟ್ವಾ ಬ್ರಹ್ಮಚಾರಿಣಮವ್ಯಯಮ್|

10018009c ವಿವ್ಯಥೇ ಪೃಥಿವೀ ದೇವೀ ಪರ್ವತಾಶ್ಚ ಚಕಂಪಿರೇ||

ಬ್ರಹ್ಮಚಾರಿ ಅವ್ಯಯನು ಹಿಡಿದ ಕಾರ್ಮುಕವನ್ನು ನೋಡಿ ದೇವೀ ಪೃಥ್ವಿಯು ವ್ಯಥೆಪಟ್ಟಳು ಮತ್ತು ಪರ್ವತಗಳು ನಡುಗಿದವು.

10018010a ನ ವವೌ ಪವನಶ್ಚೈವ ನಾಗ್ನಿರ್ಜಜ್ವಾಲ ಚೈಧಿತಃ|

10018010c ವ್ಯಭ್ರಮಚ್ಚಾಪಿ ಸಂವಿಗ್ನಂ ದಿವಿ ನಕ್ಷತ್ರಮಂಡಲಮ್||

ಪವನನು ಬೀಸಲಿಲ್ಲ. ಅಗ್ನಿಯು ಪ್ರಜ್ವಲಿಸಲಿಲ್ಲ. ಆಕಾಶದಲ್ಲಿ ನಕ್ಷತ್ರಮಂಡಲವು ಸಂವಿಗ್ನಗೊಂಡು ಸುತ್ತತೊಡಗಿತು.

10018011a ನ ಬಭೌ ಭಾಸ್ಕರಶ್ಚಾಪಿ ಸೋಮಃ ಶ್ರೀಮುಕ್ತಮಂಡಲಃ|

10018011c ತಿಮಿರೇಣಾಕುಲಂ ಸರ್ವಮಾಕಾಶಂ ಚಾಭವದ್ವೃತಮ್||

ಭಾಸ್ಕರನು ಹೊಳೆಯಲಿಲ್ಲ. ಚಂದ್ರನು ತನ್ನ ಮಂಡಲವನ್ನೇ ಬಿಟ್ಟು ಬಂದನು. ಸರ್ವ ಆಕಾಶವೂ ಕತ್ತಲೆಯಿಂದ ತುಂಬಿಕೊಂಡಿತು.

10018012a ಅಭಿಭೂತಾಸ್ತತೋ ದೇವಾ ವಿಷಯಾನ್ನ ಪ್ರಜಜ್ಞಿರೇ|

10018012c ನ ಪ್ರತ್ಯಭಾಚ್ಚ ಯಜ್ಞಸ್ತಾನ್ವೇದಾ ಬಭ್ರಂಶಿರೇ ತದಾ||

ಉದ್ವಿಗ್ನರಾದ ದೇವತೆಗಳಿಗೆ ವಿಷಯವೇನೆಂದೇ ತಿಳಿಯಲಿಲ್ಲ. ಅವರಿಗೆ ಯಜ್ಞವೇ ಕಾಣುತ್ತಿರಲಿಲ್ಲ. ವೇದಗಳು ಹೊಳೆಯಲಿಲ್ಲ.

10018013a ತತಃ ಸ ಯಜ್ಞಂ ರೌದ್ರೇಣ ವಿವ್ಯಾಧ ಹೃದಿ ಪತ್ರಿಣಾ|

10018013c ಅಪಕ್ರಾನ್ತಸ್ತತೋ ಯಜ್ಞೋ ಮೃಗೋ ಭೂತ್ವಾ ಸಪಾವಕಃ||

ಆಗ ರುದ್ರನು ಯಜ್ಞದ ಹೃದಯಕ್ಕೆ ಬಾಣದಿಂದ ಹೊಡೆದನು. ಯಜ್ಞನಾದರೋ ಜಿಂಕೆಯ ರೂಪತಾಳಿ ಅಗ್ನಿಯೊಂದಿಗೆ ಪಲಾಯನಮಾಡಿದನು.

10018014a ಸ ತು ತೇನೈವ ರೂಪೇಣ ದಿವಂ ಪ್ರಾಪ್ಯ ವ್ಯರೋಚತ|

10018014c ಅನ್ವೀಯಮಾನೋ ರುದ್ರೇಣ ಯುಧಿಷ್ಠಿರ ನಭಸ್ತಲೇ||

ಯುಧಿಷ್ಠಿರ! ಅವನು ಅದೇರೂಪದಿಂದ ಆಕಾಶವನ್ನು ಸೇರಿ ಪ್ರಕಾಶಿಸಿದನು. ರುದ್ರನೂ ನಭಸ್ತಲದಲ್ಲಿ ಅದನ್ನು ಹಿಂಬಾಲಿಸಿ ಹೋದನು.

10018015a ಅಪಕ್ರಾಂತೇ ತತೋ ಯಜ್ಞೇ ಸಂಜ್ಞಾ ನ ಪ್ರತ್ಯಭಾತ್ಸುರಾನ್|

10018015c ನಷ್ಟಸಂಜ್ಞೇಷು ದೇವೇಷು ನ ಪ್ರಜ್ಞಾಯತ ಕಿಂಚನ||

ಯಜ್ಞನು ಹೊರಟುಹೋಗಲು ಏನೂ ತಿಳಿಯದ ಸುರರು ಸಂಜ್ಞಾಹೀನರಾದರು. ಸಂಜ್ಞೆಗಳನ್ನು ಕಳೆದುಕೊಂಡ ದೇವತೆಗಳಿಗೆ ಏನೂ ತಿಳಿಯದಾಯಿತು.

10018016a ತ್ರ್ಯಂಬಕಃ ಸವಿತುರ್ಬಾಹೂ ಭಗಸ್ಯ ನಯನೇ ತಥಾ|

10018016c ಪೂಷ್ಣಶ್ಚ ದಶನಾನ್ಕ್ರುದ್ಧೋ ಧನುಷ್ಕೋಟ್ಯಾ ವ್ಯಶಾತಯತ್||

ಕ್ರುದ್ಧ ತ್ರ್ಯಂಬಕನು ಧನುಸ್ಸಿನ ತುದಿಯಿಂದ ಸವಿತುವಿನ ಬಾಹುಗಳನ್ನೂ, ಭಗನ ಕಣ್ಣುಗಳನ್ನೂ, ಪೂಷ್ಣನ ಹಲ್ಲುಗಳನ್ನೂ ಕಿತ್ತುಹಾಕಿದನು.

10018017a ಪ್ರಾದ್ರವಂತ ತತೋ ದೇವಾ ಯಜ್ಞಾಂಗಾನಿ ಚ ಸರ್ವಶಃ|

10018017c ಕೇ ಚಿತ್ತತ್ರೈವ ಘೂರ್ಣಂತೋ ಗತಾಸವ ಇವಾಭವನ್||

ಆಗ ಎಲ್ಲ ದೇವತೆಗಳೂ ಯಜ್ಞಾಂಗಗಳೂ ಓಡಿ ಹೋದರು. ಕೆಲವರು ಅಲ್ಲಿಯೇ ತಲೆತಿರುಗಿ ಪ್ರಾಣಹೋದವರಂತೆ ಬಿದ್ದರು.

10018018a ಸ ತು ವಿದ್ರಾವ್ಯ ತತ್ಸರ್ವಂ ಶಿತಿಕಂಠೋಽವಹಸ್ಯ ಚ|

10018018c ಅವಷ್ಟಭ್ಯ ಧನುಷ್ಕೋಟಿಂ ರುರೋಧ ವಿಬುಧಾಂಸ್ತತಃ||

ಓಡಿಹೋಗುತ್ತಿದ್ದ ಅವರೆಲ್ಲರನ್ನೂ ಶಿತಿಕಂಠನು ಅವಹೇಳನ ಮಾಡುತ್ತಾ ಧನುಸ್ಸಿನ ತುದಿಯನ್ನು ಮುಂದೆ ಚಾಚಿ ದೇವತೆಗಳನ್ನು ತಡೆದನು.

10018019a ತತೋ ವಾಗಮರೈರುಕ್ತಾ ಜ್ಯಾಂ ತಸ್ಯ ಧನುಷೋಽಚ್ಚಿನತ್|

10018019c ಅಥ ತತ್ಸಹಸಾ ರಾಜಂಶ್ಚಿನ್ನಜ್ಯಂ ವಿಸ್ಫುರದ್ಧನುಃ||

ಆಗ ಅಮರರಿಂದ ಪ್ರೇರಿತಳಾದ ವಾಣಿಯು ಧನುಸ್ಸಿನ ಮೌರ್ವಿಯನ್ನು ಕತ್ತರಿಸಿದಳು. ರಾಜನ್! ಮೌರ್ವಿಯು ತುಂಡಾಗಲು ಧನುಸ್ಸು ಒಡನೆಯೇ ಮೇಲಕ್ಕೆ ಚಿಮ್ಮಿ ನೆಟ್ಟನೆ ನಿಂತಿತು.

10018020a ತತೋ ವಿಧನುಷಂ ದೇವಾ ದೇವಶ್ರೇಷ್ಠಮುಪಾಗಮನ್|

10018020c ಶರಣಂ ಸಹ ಯಜ್ಞೇನ ಪ್ರಸಾದಂ ಚಾಕರೋತ್ಪ್ರಭುಃ||

ಧನುಸ್ಸಿನಿಂದ ವಿಹೀನನಾದ ದೇವಶ್ರೇಷ್ಠನನ್ನು ಆಗ ದೇವತೆಗಳು ಯಜ್ಞನೊಂದಿಗೆ ಶರಣು ಹೊಕ್ಕರು. ಪ್ರಭುವು ಅವರನ್ನು ಕ್ಷಮಿಸಿದನು.

10018021a ತತಃ ಪ್ರಸನ್ನೋ ಭಗವಾನ್ಪ್ರಾಸ್ಯತ್ಕೋಪಂ ಜಲಾಶಯೇ|

10018021c ಸ ಜಲಂ ಪಾವಕೋ ಭೂತ್ವಾ ಶೋಷಯತ್ಯನಿಶಂ ಪ್ರಭೋ||

ಆಗ ಪ್ರಸನ್ನನಾದ ಭಗವಾನನು ತನ್ನ ಕೋಪವನ್ನು ಜಲಾಶಯದಲ್ಲಿ ಬಿಸುಟನು. ಪ್ರಭೋ! ಅದು ಬಡವಾಗ್ನಿಯಾಗಿ ನಿತ್ಯವೂ ಸಮುದ್ರವನ್ನು ಒಣಗಿಸುತ್ತಿರುತ್ತದೆ.

10018022a ಭಗಸ್ಯ ನಯನೇ ಚೈವ ಬಾಹೂ ಚ ಸವಿತುಸ್ತಥಾ|

10018022c ಪ್ರಾದಾತ್ಪೂಷ್ಣಶ್ಚ ದಶನಾನ್ಪುನರ್ಯಜ್ಞಂ ಚ ಪಾಂಡವ||

ಪಾಂಡವ! ಭಾರತ! ಅವನು ಭಗನ ಕಣ್ಣುಗಳನ್ನೂ, ಸವಿತುವಿನ ಬಾಹುಗಳನ್ನೂ, ಪೂಷ್ಣನ ಹಲ್ಲುಗಳನ್ನೂ ಮತ್ತು ಯಜ್ಞನನ್ನೂ ಹಿಂದಿರುಗಿಸಿದನು.

10018023a ತತಃ ಸರ್ವಮಿದಂ ಸ್ವಸ್ಥಂ ಬಭೂವ ಪುನರೇವ ಹ|

10018023c ಸರ್ವಾಣಿ ಚ ಹವೀಂಷ್ಯಸ್ಯ ದೇವಾ ಭಾಗಮಕಲ್ಪಯನ್||

ಅನಂತರ ಸರ್ವವೂ ಪುನಃ ಸ್ವಸ್ಥವಾಯಿತು. ಎಲ್ಲ ಯಜ್ಞಗಳಲ್ಲಿಯೂ ದೇವತೆಗಳು ಮಹಾದೇವನಿಗೆ ಹವಿಸ್ಸಿನ ಭಾಗವನ್ನು ಕಲ್ಪಿಸಿದರು.

10018024a ತಸ್ಮಿನ್ಕ್ರುದ್ಧೇಽಭವತ್ಸರ್ವಮಸ್ವಸ್ಥಂ ಭುವನಂ ವಿಭೋ|

10018024c ಪ್ರಸನ್ನೇ ಚ ಪುನಃ ಸ್ವಸ್ಥಂ ಸ ಪ್ರಸನ್ನೋಽಸ್ಯ ವೀರ್ಯವಾನ್||

ವಿಭೋ! ಅವನು ಕ್ರುದ್ಧನಾದರೆ ಸರ್ವ ಭುವನಗಳೂ ಅಸ್ವಸ್ಥವಾಗುತ್ತವೆ. ಅವನು ಪ್ರಸನ್ನನಾದರೆ ಪುನಃ ಸ್ವಸ್ಥವಾಗುತ್ತವೆ. ವೀರ್ಯವಾನ್ ದ್ರೌಣಿಯ ಮೇಲೆ ಅವನು ಪ್ರಸನ್ನನಾಗಿದ್ದನು.

10018025a ತತಸ್ತೇ ನಿಹತಾಃ ಸರ್ವೇ ತವ ಪುತ್ರಾ ಮಹಾರಥಾಃ|

10018025c ಅನ್ಯೇ ಚ ಬಹವಃ ಶೂರಾಃ ಪಾಂಚಾಲಾಶ್ಚ ಸಹಾನುಗಾಃ||

ಆದುದರಿಂದಲೇ ನಿನ್ನ ಮಹಾರಥ ಪುತ್ರರೆಲ್ಲರೂ, ಅನ್ಯ ಅನೇಕ ಶೂರರೂ, ಅನುಯಾಯಿಗಳೊಂದಿಗೆ ಪಾಂಚಾಲರೂ ಅವನಿಂದ ಹತರಾದರು.

10018026a ನ ತನ್ಮನಸಿ ಕರ್ತವ್ಯಂ ನ ಹಿ ತದ್ದ್ರೌಣಿನಾ ಕೃತಮ್|

10018026c ಮಹಾದೇವಪ್ರಸಾದಃ ಸ ಕುರು ಕಾರ್ಯಮನಂತರಮ್||

ದ್ರೌಣಿಯು ತನ್ನ ಪರಾಕ್ರಮದಿಂದ ಇದನ್ನು ಮಾಡಲಿಲ್ಲ. ಆದುದರಿಂದ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ. ಮಹಾದೇವನ ಪ್ರಸಾದವೆಂದು ತಿಳಿದು ಅನಂತರದ ಕಾರ್ಯಗಳನ್ನು ಮಾಡು!””

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಅಷ್ಟಾದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಹದಿನೆಂಟನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವವು.

ಇತಿ ಶ್ರೀ ಮಹಾಭಾರತೇ ಸೌಪ್ತಿಕಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಸೌಪ್ತಿಕಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೧೦/೧೮, ಉಪಪರ್ವಗಳು-೭೯/೧೦೦, ಅಧ್ಯಾಯಗಳು-೧೩೦೧/೧೯೯೫, ಶ್ಲೋಕಗಳು-೪೯೨೮೦/೭೩೭೮೪

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Comments are closed.