Sauptika Parva: Chapter 17

ಸೌಪ್ತಿಕಪರ್ವ: ಐಷೀಕ ಪರ್ವ

೧೭

ಅಶ್ವತ್ಥಾಮನಲ್ಲಿ ಯಾವ ಶಕ್ತಿಯಿತ್ತು ಎಂದು ಯುಧಿಷ್ಠಿರನು ಕೇಳಲು ಕೃಷ್ಣನು ಅಶ್ವತ್ಥಾಮನು ಶಿವನನ್ನು ಆರಾಧಿಸಿ ಆ ಶಕ್ತಿಯನ್ನು ಪಡೆದನೆಂದು ಹೇಳುತ್ತಾ, ಶಿವನ ಶಕ್ತಿಯ ಕುರಿತು ಹೇಳಿದುದು (೧-೨೬).

10017001 ವೈಶಂಪಾಯನ ಉವಾಚ|

10017001a ಹತೇಷು ಸರ್ವಸೈನ್ಯೇಷು ಸೌಪ್ತಿಕೇ ತೈ ರಥೈಸ್ತ್ರಿಭಿಃ|

10017001c ಶೋಚನ್ಯುಧಿಷ್ಠಿರೋ ರಾಜಾ ದಾಶಾರ್ಹಮಿದಮಬ್ರವೀತ್||

ವೈಶಂಪಾಯನನು ಹೇಳಿದನು: “ಮಲಗಿದ್ದ ಸರ್ವಸೇನೆಗಳೂ ಆ ಮೂವರು ಮಹಾರಥರಿಂದ ಹತವಾದವೆಂದು ಶೋಕಿಸುತ್ತಿದ್ದ ರಾಜಾ ಯುಧಿಷ್ಠಿರನು ದಾಶಾರ್ಹನಿಗೆ ಹೇಳಿದನು:

10017002a ಕಥಂ ನು ಕೃಷ್ಣ ಪಾಪೇನ ಕ್ಷುದ್ರೇಣಾಕ್ಲಿಷ್ಟಕರ್ಮಣಾ|

10017002c ದ್ರೌಣಿನಾ ನಿಹತಾಃ ಸರ್ವೇ ಮಮ ಪುತ್ರಾ ಮಹಾರಥಾಃ||

“ಕೃಷ್ಣ! ಅಕ್ಲಿಷ್ಟಕರ್ಮಿಗಳಾಗಿದ್ದ ನನ್ನ ಮಹಾರಥ ಪುತ್ರರೆಲ್ಲರೂ ಕ್ಷುದ್ರ ಪಾಪಿ ದ್ರೌಣಿಯಿಂದ ಹೇಗೆ ಹತರಾದರು?

10017003a ತಥಾ ಕೃತಾಸ್ತ್ರಾ ವಿಕ್ರಾಂತಾಃ ಸಹಸ್ರಶತಯೋಧಿನಃ|

10017003c ದ್ರುಪದಸ್ಯಾತ್ಮಜಾಶ್ಚೈವ ದ್ರೋಣಪುತ್ರೇಣ ಪಾತಿತಾಃ||

ಹಾಗೆಯೇ ಕೃತಾಸ್ತ್ರರಾಗಿದ್ದ, ಸಹಸ್ರಶತ ಯೋಧರೊಂದಿಗೆ ಹೋರಾಡಬಲ್ಲವರಾಗಿದ್ದ ದ್ರುಪದನ ಮಕ್ಕಳೂ ಕೂಡ ದ್ರೋಣಪುತ್ರನಿಂದ ಹತರಾದರು.

10017004a ಯಸ್ಯ ದ್ರೋಣೋ ಮಹೇಷ್ವಾಸೋ ನ ಪ್ರಾದಾದಾಹವೇ ಮುಖಂ|

10017004c ತಂ ಜಘ್ನೇ ರಥಿನಾಂ ಶ್ರೇಷ್ಠಂ ಧೃಷ್ಟದ್ಯುಮ್ನಂ ಕಥಂ ನು ಸಃ||

ರಣದಲ್ಲಿ ಮಹೇಷ್ವಾಸ ದ್ರೋಣನು ಯಾರ ಕಡೆ ಮುಖವನ್ನು ಕೂಡ ತಿರುಗಿಸುತ್ತಿರಲಿಲ್ಲವೋ ಅಂತಹ ರಥಶ್ರೇಷ್ಠ ಧೃಷ್ಟದ್ಯುಮ್ನನನ್ನು ಅವನು ಹೇಗೆ ಸಂಹರಿಸಿದನು?

10017005a ಕಿಂ ನು ತೇನ ಕೃತಂ ಕರ್ಮ ತಥಾಯುಕ್ತಂ ನರರ್ಷಭ|

10017005c ಯದೇಕಃ ಶಿಬಿರಂ ಸರ್ವಮವಧೀನ್ನೋ ಗುರೋಃ ಸುತಃ||

ನರರ್ಷಭ! ಏಕಾಂಗಿಯಾಗಿ ಶಿಬಿರದಲ್ಲಿದ್ದ ಎಲ್ಲರನ್ನೂ ವಧಿಸಿದ ಆ ಗುರುಸುತನು ಯಾವ ಕರ್ಮವನ್ನು ಮಾಡಿ ಆ ಶಕ್ತಿಯನ್ನು ಪಡೆದನು?”

10017006 ವಾಸುದೇವ ಉವಾಚ|

10017006a ನೂನಂ ಸ ದೇವದೇವಾನಾಮೀಶ್ವರೇಶ್ವರಮವ್ಯಯಂ|

10017006c ಜಗಾಮ ಶರಣಂ ದ್ರೌಣಿರೇಕಸ್ತೇನಾವಧೀದ್ಬಹೂನ್||

ವಾಸುದೇವನು ಹೇಳಿದನು: “ದ್ರೌಣಿಯು ದೇವದೇವನಿಗೂ ಈಶ್ವರನಾದ ಅವ್ಯಯನನ್ನು ಶರಣು ಹೋದನು. ಅದರಿಂದಾಗಿ ಅವನೊಬ್ಬನೇ ಅನೇಕರನ್ನು ಸಂಹರಿಸಬಲ್ಲವನಾದನು.

10017007a ಪ್ರಸನ್ನೋ ಹಿ ಮಹಾದೇವೋ ದದ್ಯಾದಮರತಾಮಪಿ|

10017007c ವೀರ್ಯಂ ಚ ಗಿರಿಶೋ ದದ್ಯಾದ್ಯೇನೇಂದ್ರಮಪಿ ಶಾತಯೇತ್||

ಮಹಾದೇವನು ಪ್ರಸನ್ನನಾದರೆ ಅಮೃತತ್ವವನ್ನೂ ದಯಪಾಲಿಸುವನು. ಗಿರೀಶನು ಇಂದ್ರನನ್ನೂ ಸೋಲಿಸುವಂತಹ ವೀರ್ಯವನ್ನು ಕೊಡುತ್ತಾನೆ.

10017008a ವೇದಾಹಂ ಹಿ ಮಹಾದೇವಂ ತತ್ತ್ವೇನ ಭರತರ್ಷಭ|

10017008c ಯಾನಿ ಚಾಸ್ಯ ಪುರಾಣಾನಿ ಕರ್ಮಾಣಿ ವಿವಿಧಾನ್ಯುತ||

ಭರತರ್ಷಭ! ನಾನು ಮಹಾದೇವನನ್ನು ತತ್ತ್ವಶಃ ತಿಳಿದುಕೊಂಡಿದ್ದೇನೆ. ಹಿಂದೆ ಅವನು ಮಾಡಿದ ಅನೇಕ ಕರ್ಮಗಳೂ ನನಗೆ ತಿಳಿದಿವೆ.

10017009a ಆದಿರೇಷ ಹಿ ಭೂತಾನಾಂ ಮಧ್ಯಮಂತಶ್ಚ ಭಾರತ|

10017009c ವಿಚೇಷ್ಟತೇ ಜಗಚ್ಚೇದಂ ಸರ್ವಮಸ್ಯೈವ ಕರ್ಮಣಾ||

ಭಾರತ! ಭೂತಗಳ ಆದಿ, ಮಧ್ಯ ಮತ್ತು ಅಂತ್ಯಗಳು ಅವನೇ! ಅವನಿಂದಲೇ ಜಗತ್ತೆಲ್ಲವೂ ಕರ್ಮಗಳಲ್ಲಿ ತೊಡಗಿವೆ.

10017010a ಏವಂ ಸಿಸೃಕ್ಷುರ್ಭೂತಾನಿ ದದರ್ಶ ಪ್ರಥಮಂ ವಿಭುಃ|

10017010c ಪಿತಾಮಹೋಽಬ್ರವೀಚ್ಚೈನಂ ಭೂತಾನಿ ಸೃಜ ಮಾಚಿರಂ||

ಪಿತಾಮಹ ವಿಭುವು ಭೂತಗಳನ್ನು ಸೃಷ್ಟಿಸಲು ಇಚ್ಛಿಸಿದಾಗ ಪ್ರಪ್ರಥಮವಾಗಿ ಇವನನ್ನೇ ನೋಡಿ “ಕೂಡಲೇ ಭೂತಗಳನ್ನು ಸೃಷ್ಟಿಸು!” ಎಂದು ಹೇಳಿದ್ದನು.

10017011a ಹರಿಕೇಶಸ್ತಥೇತ್ಯುಕ್ತ್ವಾ ಭೂತಾನಾಂ ದೋಷದರ್ಶಿವಾನ್|

10017011c ದೀರ್ಘಕಾಲಂ ತಪಸ್ತೇಪೇ ಮಗ್ನೋಽಮ್ಭಸಿ ಮಹಾತಪಾಃ||

ಮಹಾತಪಸ್ವಿ ಹರಿಕೇಶನು ಹಾಗೆಯೇ ಆಗಲೆಂದು ಹೇಳಿ ತಾನು ಸೃಷ್ಟಿಸಿದ ಭೂತಗಳಲ್ಲಿ ದೋಷಗಳನ್ನೇ ಕಂಡು ನೀರಿನಲ್ಲಿ ಮುಳುಗಿ ದೀರ್ಘಕಾಲ ತಪಸ್ಸನ್ನು ತಪಿಸಿದನು.

10017012a ಸುಮಹಾಂತಂ ತತಃ ಕಾಲಂ ಪ್ರತೀಕ್ಷ್ಯೈನಂ ಪಿತಾಮಹಃ|

10017012c ಸ್ರಷ್ಟಾರಂ ಸರ್ವಭೂತಾನಾಂ ಸಸರ್ಜ ಮನಸಾಪರಂ||

ಮಹಾಕಾಲದವರೆಗೆ ಪ್ರತೀಕ್ಷೆಯಲ್ಲಿದ್ದ ಪಿತಾಮಹನು ಇನ್ನೊಬ್ಬ ಸರ್ವಭೂತಗಳ ಸೃಷ್ಟಾರನನ್ನು ಮನಸ್ಸಿನಿಂದಲೇ ಸೃಷ್ಟಿಸಿದನು.

10017013a ಸೋಽಬ್ರವೀತ್ಪಿತರಂ ದೃಷ್ಟ್ವಾ ಗಿರಿಶಂ ಮಗ್ನಮಮ್ಭಸಿ|

10017013c ಯದಿ ಮೇ ನಾಗ್ರಜಸ್ತ್ವನ್ಯಸ್ತತಃ ಸ್ರಕ್ಷ್ಯಾಮ್ಯಹಂ ಪ್ರಜಾಃ||

ನೀರಿನಲ್ಲಿ ಮಗ್ನನಾಗಿರುವ ಗಿರೀಶನನ್ನು ನೋಡಿ ಅವನು ತಂದೆಗೆ “ನನಗೆ ಅಗ್ರಜನಾದವನು ಅನ್ಯನಿದ್ದರೆ ನಾನು ಪ್ರಜೆಗಳನ್ನು ಸೃಷ್ಟಿಸುವುದಿಲ್ಲ!” ಎಂದನು.

10017014a ತಮಬ್ರವೀತ್ಪಿತಾ ನಾಸ್ತಿ ತ್ವದನ್ಯಃ ಪುರುಷೋಽಗ್ರಜಃ|

10017014c ಸ್ಥಾಣುರೇಷ ಜಲೇ ಮಗ್ನೋ ವಿಸ್ರಬ್ಧಃ ಕುರು ವೈ ಕೃತಿಂ||

ಅವನಿಗೆ ಪಿತನು “ನಿನ್ನ ಅಗ್ರಜನಾಗಿ ಇನ್ನೊಬ್ಬ ಪುರುಷನಿಲ್ಲ. ಸ್ಥಾಣುವಾದರೋ ಜಲದಲ್ಲಿ ಮಗ್ನನಾಗಿದ್ದಾನೆ. ನಿಶ್ಚಿಂತೆಯಿಂದ ಸೃಷ್ಟಿಯನ್ನು ಮಾಡು!” ಎಂದನು.

10017015a ಸ ಭೂತಾನ್ಯಸೃಜತ್ಸಪ್ತ ದಕ್ಷಾದೀಂಸ್ತು ಪ್ರಜಾಪತೀನ್|

10017015c ಯೈರಿಮಂ ವ್ಯಕರೋತ್ಸರ್ವಂ ಭೂತಗ್ರಾಮಂ ಚತುರ್ವಿಧಂ||

ಅವನು ಏಳುಪ್ರಕಾರದ ಭೂತಗಳನ್ನೂ, ದಕ್ಷಾದಿ ಪ್ರಜಾಪತಿಗಳನ್ನೂ ಸೃಷ್ಟಿಸಿ ಎಲ್ಲವನ್ನೂ ನಾಲ್ಕು ಪ್ರಕಾರವಾಗಿ ವಿಂಗಡಿಸಿದನು.

10017016a ತಾಃ ಸೃಷ್ಟಮಾತ್ರಾಃ ಕ್ಷುಧಿತಾಃ ಪ್ರಜಾಃ ಸರ್ವಾಃ ಪ್ರಜಾಪತಿಂ|

10017016c ಬಿಭಕ್ಷಯಿಷವೋ ರಾಜನ್ಸಹಸಾ ಪ್ರಾದ್ರವಂಸ್ತದಾ||

ರಾಜನ್! ಪ್ರಜೆಗಳೆಲ್ಲವೂ ಸೃಷ್ಟಿಯಾದೊಡನೆಯೇ ಹಸಿದು ಪ್ರಜಾಪತಿಯನ್ನೇ ತಿನ್ನಲು ಬಯಸಿ ಧಾವಿಸಿದವು.

10017017a ಸ ಭಕ್ಷ್ಯಮಾಣಸ್ತ್ರಾಣಾರ್ಥೀ ಪಿತಾಮಹಮುಪಾದ್ರವತ್|

10017017c ಆಭ್ಯೋ ಮಾಂ ಭಗವಾನ್ಪಾತು ವೃತ್ತಿರಾಸಾಂ ವಿಧೀಯತಾಂ||

ಭಕ್ಷಣೆಯಾಗುವೆನೆಂಬ ಭಯದಿಂದ ಶರಣಾರ್ಥಿಯಾಗಿ ಅವನು ಪಿತಾಮಹನ ಬಳಿಸಾರಿ “ಭಗವಾನ್! ಇವರಿಂದ ನನ್ನನ್ನು ರಕ್ಷಿಸಬೇಕು ಮತ್ತು ಇವುಗಳಿಗೆ ವೃತ್ತಿಗಳನ್ನು ವಿಧಿಸಬೇಕು” ಎಂದು ಕೇಳಿಕೊಂಡನು.

10017018a ತತಸ್ತಾಭ್ಯೋ ದದಾವನ್ನಮೋಷಧೀಃ ಸ್ಥಾವರಾಣಿ ಚ|

10017018c ಜಂಗಮಾನಿ ಚ ಭೂತಾನಿ ದುರ್ಬಲಾನಿ ಬಲೀಯಸಾಂ||

ಆಗ ಅವನು ಅವುಗಳಿಗೆ ಅನ್ನ, ಔಷಧಿಗಳನ್ನು, ಸ್ಥಾವಿರ ಪದಾರ್ಥಗಳನ್ನು ಮತ್ತು ಬಲಶಾಲೀ ಜಂಗಮ ಪ್ರಾಣಿಗಳಿಗೆ ದುರ್ಬಲ ಪ್ರಾಣಿಗಳನ್ನೂ ವಿಧಿಸಿದನು.

10017019a ವಿಹಿತಾನ್ನಾಃ ಪ್ರಜಾಸ್ತಾಸ್ತು ಜಗ್ಮುಸ್ತುಷ್ಟಾ ಯಥಾಗತಂ|

10017019c ತತೋ ವವೃಧಿರೇ ರಾಜನ್ಪ್ರೀತಿಮತ್ಯಃ ಸ್ವಯೋನಿಷು||

ರಾಜನ್! ಅನ್ನಗಳನ್ನು ಪಡೆದ ಪ್ರಜೆಗಳು ತುಷ್ಟರಾಗಿ ಹಿಂದಿರುಗಿ, ಪ್ರೀತಿಮತ್ತರಾಗಿ ತಮ್ಮ ತಮ್ಮ ಯೋನಿಗಳಲ್ಲಿ ವೃದ್ಧಿಸಿದರು.

10017020a ಭೂತಗ್ರಾಮೇ ವಿವೃದ್ಧೇ ತು ತುಷ್ಟೇ ಲೋಕಗುರಾವಪಿ|

10017020c ಉದತಿಷ್ಠಜ್ಜಲಾಜ್ಜ್ಯೇಷ್ಠಃ ಪ್ರಜಾಶ್ಚೇಮಾ ದದರ್ಶ ಸಃ||

ಪ್ರಜಾಸಂಕುಲಗಳು ವೃದ್ಧಿಸುತ್ತಿರಲು ಮತ್ತು ಲೋಕಗುರುವು ತುಷ್ಟನಾಗಿರಲು ಜ್ಯೇಷ್ಠನು ನೀರಿನಿಂದ ಮೇಲೆದ್ದು ಪ್ರಜಾಗಣಗಳನ್ನು ನೋಡಿದನು.

10017021a ಬಹುರೂಪಾಃ ಪ್ರಜಾ ದೃಷ್ಟ್ವಾ ವಿವೃದ್ಧಾಃ ಸ್ವೇನ ತೇಜಸಾ|

10017021c ಚುಕ್ರೋಧ ಭಗವಾನ್ರುದ್ರೋ ಲಿಂಗಂ ಸ್ವಂ ಚಾಪ್ಯವಿಧ್ಯತ||

ಬಹುರೂಪೀ ಪ್ರಜೆಗಳು ತಮ್ಮದೇ ತೇಜಸ್ಸಿನಿಂದ ವೃದ್ಧಿಸುತ್ತಿರುವುದನ್ನು ನೋಡಿ ಭಗವಾನ್ ರುದ್ರನು ಕ್ರೋಧದಿಂದ ತನ್ನ ಲಿಂಗವನ್ನು ಕಿತ್ತು ಬಿಸುಟನು.

10017022a ತತ್ಪ್ರವಿದ್ಧಂ ತದಾ ಭೂಮೌ ತಥೈವ ಪ್ರತ್ಯತಿಷ್ಠತ|

10017022c ತಮುವಾಚಾವ್ಯಯೋ ಬ್ರಹ್ಮಾ ವಚೋಭಿಃ ಶಮಯನ್ನಿವ||

ಹಾಗೆ ಬಿಸುಟ ಲಿಂಗವು ಭೂಮಿಯಲ್ಲಿಯೇ ಪ್ರತಿಷ್ಠಿತವಾಯಿತು. ಅವನನ್ನು ಶಾಂತಗೊಳಿಸಲೋಸುಗ ಅವ್ಯಯ ಬ್ರಹ್ಮನು ಮಾತನ್ನಾಡಿದನು:

10017023a ಕಿಂ ಕೃತಂ ಸಲಿಲೇ ಶರ್ವ ಚಿರಕಾಲಂ ಸ್ಥಿತೇನ ತೇ|

10017024c ಪ್ರಜಾಃ ಸೃಷ್ಟಾಃ ಪರೇಣೇಮಾಃ ಕಿಂ ಕರಿಷ್ಯಾಮ್ಯನೇನ ವೈ||

“ಶರ್ವ! ಬಹಳಕಾಲ ನೀರಿನಲ್ಲಿದ್ದುಕೊಂಡು ನೀನು ಏನು ಮಾಡಿದೆ?” “ಇನ್ನೊಬ್ಬನಿಂದ ಈ ಪ್ರಜೆಗಳು ಸೃಷ್ಟಿಸಲ್ಪಟ್ಟಿದ್ದಾರೆ. ಈಗ ಇದರಿಂದ ನಾನೇನು ಮಾಡಲಿ?

10017025a ತಪಸಾಧಿಗತಂ ಚಾನ್ನಂ ಪ್ರಜಾರ್ಥಂ ಮೇ ಪಿತಾಮಹ|

10017025c ಓಷಧ್ಯಃ ಪರಿವರ್ತೇರನ್ಯಥೈವ ಸತತಂ ಪ್ರಜಾಃ||

ಪಿತಾಮಹ! ಪ್ರಜೆಗಳಿಗೋಸ್ಕರವಾಗಿ ನಾನು ತಪಸ್ಸುಮಾಡಿ ಅನ್ನವನ್ನು ಪಡೆದುಕೊಂಡೆನು. ಪ್ರಜೆಗಳು ಸತತವಾಗಿ ಪರಿವರ್ತನೆಗೊಳ್ಳುವಂತೆ ಔಷಧಿಗಳೂ ಪರಿವರ್ತಿಸುತ್ತಿರುತ್ತವೆ.”

10017026a ಏವಮುಕ್ತ್ವಾ ತು ಸಂಕ್ರುದ್ಧೋ ಜಗಾಮ ವಿಮನಾ ಭವಃ|

10017026c ಗಿರೇರ್ಮುಂಜವತಃ ಪಾದಂ ತಪಸ್ತಪ್ತುಂ ಮಹಾತಪಾಃ||

ಕೋಪದಿಂದ ಹೀಗೆ ಹೇಳಿ ಮಹಾತಪಸ್ವಿ ಭವನು ವಿಮನಸ್ಕನಾಗಿ  ತಪಸ್ಸನ್ನು ತಪಿಸಲು ಮುಂಜವಂತ ಗಿರಿಯ ತಪ್ಪಲಿಗೆ ಹೊರಟು ಹೋದನು.”

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಯುಧಿಷ್ಠಿರಕೃಷ್ಣಸಂವಾದೇ ಸಪ್ತದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಯುಧಿಷ್ಠಿರಕೃಷ್ಣಸಂವಾದ ಎನ್ನುವ ಹದಿನೇಳನೇ ಅಧ್ಯಾಯವು.

Comments are closed.