Sauptika Parva: Chapter 14

ಸೌಪ್ತಿಕಪರ್ವ: ಐಷೀಕ ಪರ್ವ

೧೪

ಕೃಷ್ಣನ ಸೂಚನೆಯಂತೆ ಅರ್ಜುನನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದುದು (೧-೧೦). ನಾರದ ಮತ್ತು ವ್ಯಾಸರು ಅಶ್ವತ್ಥಾಮ ಮತ್ತು ಅರ್ಜುನರು ಪ್ರಯೋಗಿಸಿದ ಅಸ್ತ್ರಗಳ ಮಧ್ಯೆ ಕಾಣಿಸಿಕೊಂಡಿದುದು (೧೧-೧೬).

10014001 ವೈಶಂಪಾಯನ ಉವಾಚ|

10014001a ಇಂಗಿತೇನೈವ ದಾಶಾರ್ಹಸ್ತಮಭಿಪ್ರಾಯಮಾದಿತಃ|

10014001c ದ್ರೌಣೇರ್ಬುದ್ಧ್ವಾ ಮಹಾಬಾಹುರರ್ಜುನಂ ಪ್ರತ್ಯಭಾಷತ||

ವೈಶಂಪಾಯನನು ಹೇಳಿದನು: “ಇಂಗಿತದಿಂದಲೇ ದ್ರೌಣಿಯ ಅಭಿಪ್ರಾಯವನ್ನು ತಿಳಿದುಕೊಂಡ ಮಹಾಬಾಹು ದಾಶಾರ್ಹನು ಅರ್ಜುನನಿಗೆ ಹೇಳಿದನು:

10014002a ಅರ್ಜುನಾರ್ಜುನ ಯದ್ದಿವ್ಯಮಸ್ತ್ರಂ ತೇ ಹೃದಿ ವರ್ತತೇ|

10014002c ದ್ರೋಣೋಪದಿಷ್ಟಂ ತಸ್ಯಾಯಂ ಕಾಲಃ ಸಂಪ್ರತಿ ಪಾಂಡವ||

“ಅರ್ಜುನ! ಅರ್ಜುನ! ಪಾಂಡವ! ದ್ರೋಣನಿಂದ ಉಪದೇಶಿಸಲ್ಪಟ್ಟ ನಿನ್ನ ಹೃದಯದಲ್ಲಿ ನೆಲೆಸಿರುವ ದಿವ್ಯಾಸ್ತ್ರದ ಸಮಯವು ಬಂದೊದಗಿದೆ!

10014003a ಭ್ರಾತೄಣಾಮಾತ್ಮನಶ್ಚೈವ ಪರಿತ್ರಾಣಾಯ ಭಾರತ|

10014003c ವಿಸೃಜೈತತ್ತ್ವಮಪ್ಯಜಾವಸ್ತ್ರಮಸ್ತ್ರನಿವಾರಣಂ||

ಭಾರತ! ಸಹೋದರರನ್ನು ಮತ್ತು ನಿನ್ನನ್ನು ರಕ್ಷಿಸಿಕೊಳ್ಳಲು ಮತ್ತು ಈ ಅಸ್ತ್ರವನ್ನು ನಿವಾರಿಸಲು ಬ್ರಹ್ಮಾಸ್ತ್ರವನ್ನು ಪ್ರಯೋಗಿಸು!”

10014004a ಕೇಶವೇನೈವಮುಕ್ತಸ್ತು ಪಾಂಡವಃ ಪರವೀರಹಾ|

10014004c ಅವಾತರದ್ರಥಾತ್ತೂರ್ಣಂ ಪ್ರಗೃಹ್ಯ ಸಶರಂ ಧನುಃ||

ಕೇಶವನು ಹೀಗೆ ಹೇಳಲು ತಕ್ಷಣವೇ ಪರವೀರಹ ಪಾಂಡವನು ಶರದೊಂದಿಗೆ ಧನುಸ್ಸನ್ನು ಹಿಡಿದು ರಥದಿಂದಿಳಿದನು.

10014005a ಪೂರ್ವಮಾಚಾರ್ಯಪುತ್ರಾಯ ತತೋಽನಂತರಮಾತ್ಮನೇ|

10014005c ಭ್ರಾತೃಭ್ಯಶ್ಚೈವ ಸರ್ವೇಭ್ಯಃ ಸ್ವಸ್ತೀತ್ಯುಕ್ತ್ವಾ ಪರಂತಪಃ||

10014006a ದೇವತಾಭ್ಯೋ ನಮಸ್ಕೃತ್ಯ ಗುರುಭ್ಯಶ್ಚೈವ ಸರ್ವಶಃ|

10014006c ಉತ್ಸಸರ್ಜ ಶಿವಂ ಧ್ಯಾಯನ್ನಸ್ತ್ರಮಸ್ತ್ರೇಣ ಶಾಮ್ಯತಾಂ||

ಮೊದಲು ಆಚಾರ್ಯಪುತ್ರನಿಗೆ ತದನಂತರ ತನಗೆ, ಸಹೋದರರಿಬ್ಬರಿಗೆ ಮತ್ತು ಸರ್ವರಿಗೂ ಸ್ವಸ್ತಿ ಎಂದು ಹೇಳಿ ಪರಂತಪನು ದೇವತೆಗಳಿಗೂ ಗುರುಗಳೆಲ್ಲರಿಗೂ ನಮಸ್ಕರಿಸಿ ಶಿವನನ್ನು ಧ್ಯಾನಿಸಿ ಅಸ್ತ್ರವನ್ನು ಶಾಮ್ಯಗೊಳಿಸುವ ಅಸ್ತ್ರವನ್ನು ಪ್ರಯೋಗಿಸಿದನು.

10014007a ತತಸ್ತದಸ್ತ್ರಂ ಸಹಸಾ ಸೃಷ್ಟಂ ಗಾಂಡೀವಧನ್ವನಾ|

10014007c ಪ್ರಜಜ್ವಾಲ ಮಹಾರ್ಚಿಷ್ಮದ್ಯುಗಾಂತಾನಲಸಂನಿಭಂ||

ಗಾಂಡೀವಧನ್ವಿಯು ಸೃಷ್ಟಿಸಿದ ಅಸ್ತ್ರವು ಕೂಡಲೇ ಯುಗಾಂತದ ಅಗ್ನಿಯೋಪಾದಿಯಲ್ಲಿ ಮಹಾಜ್ವಾಲೆಗಳಿಂದ ಪ್ರಜ್ವಲಿಸಿತು.

10014008a ತಥೈವ ದ್ರೋಣಪುತ್ರಸ್ಯ ತದಸ್ತ್ರಂ ತಿಗ್ಮತೇಜಸಃ|

10014008c ಪ್ರಜಜ್ವಾಲ ಮಹಾಜ್ವಾಲಂ ತೇಜೋಮಂಡಲಸಂವೃತಂ||

ಹಾಗೆಯೇ ತಿಗ್ಮತೇಜಸ್ಸಿದ್ದ ದ್ರೋಣಪುತ್ರನ ಅಸ್ತ್ರವೂ ತೇಜೋಮಂಡಲದೊಡನೆ ಮಹಾಜ್ವಾಲೆಯೊಂದಿಗೆ ಪ್ರಜ್ವಲಿಸಿತು.

10014009a ನಿರ್ಘಾತಾ ಬಹವಶ್ಚಾಸನ್ಪೇತುರುಲ್ಕಾಃ ಸಹಸ್ರಶಃ|

10014009c ಮಹದ್ಭಯಂ ಚ ಭೂತಾನಾಂ ಸರ್ವೇಷಾಂ ಸಮಜಾಯತ||

ಅನೇಕ ನಿರ್ಘಾತಗಳಾದವು. ಸಹಸ್ರಾರು ಉಲ್ಕೆಗಳು ಬಿದ್ದವು. ಸರ್ವಭೂತಗಳಲ್ಲಿ ಮಹಾಭಯವು ಹುಟ್ಟಿಕೊಂಡಿತು.

10014010a ಸಶಬ್ದಮಭವದ್ವ್ಯೋಮ ಜ್ವಾಲಾಮಾಲಾಕುಲಂ ಭೃಶಂ|

10014010c ಚಚಾಲ ಚ ಮಹೀ ಕೃತ್ಸ್ನಾ ಸಪರ್ವತವನದ್ರುಮಾ||

ಭಯಂಕರ ಶಬ್ಧಗಳಿಂದ ತುಂಬಿಹೋಗಿದ್ದ ಆಕಾಶವು ಜ್ವಾಲೆಗಳ ಪಂಕ್ತಿಗಳಿಂದ ಆವೃತವಾಯಿತು. ಪರ್ವತ-ವನ-ವೃಕ್ಷಗಳೊಂದಿಗೆ ಇಡೀ ಭೂಮಿಯು ನಡುಗಿತು.

10014011a ತೇ ಅಸ್ತ್ರೇ ತೇಜಸಾ ಲೋಕಾಂಸ್ತಾಪಯಂತೀ ವ್ಯವಸ್ಥಿತೇ|

10014011c ಮಹರ್ಷೀ ಸಹಿತೌ ತತ್ರ ದರ್ಶಯಾಮಾಸತುಸ್ತದಾ||

ಅಸ್ತ್ರಗಳ ತೇಜಸ್ಸಿನಿಂದ ಲೋಕಗಳು ಸುಡುತ್ತಿರಲು ಇಬ್ಬರು ಮಹರ್ಷಿಗಳು ಒಟ್ಟಿಗೇ ಅಲ್ಲಿ ಕಾಣಿಸಿಕೊಂಡರು.

10014012a ನಾರದಃ ಸ ಚ ಧರ್ಮಾತ್ಮಾ ಭರತಾನಾಂ ಪಿತಾಮಹಃ|

10014012c ಉಭೌ ಶಮಯಿತುಂ ವೀರೌ ಭಾರದ್ವಾಜಧನಂಜಯೌ||

ನಾರದ ಮತ್ತು ಭರತರ ಪಿತಾಮಹ ಧರ್ಮಾತ್ಮಾ ವ್ಯಾಸ ಇಬ್ಬರೂ ಭಾರದ್ವಾಜ ಮತ್ತು ಧನಂಜಯರನ್ನು ಶಾಂತಗೊಳಿಸಲು ಕಾಣಿಸಿಕೊಂಡರು.

10014013a ತೌ ಮುನೀ ಸರ್ವಧರ್ಮಜ್ಞೌ ಸರ್ವಭೂತಹಿತೈಷಿಣೌ|

10014013c ದೀಪ್ತಯೋರಸ್ತ್ರಯೋರ್ಮಧ್ಯೇ ಸ್ಥಿತೌ ಪರಮತೇಜಸೌ||

ಸರ್ವಭೂತಹಿತೈಷಿಣಿಯರಾದ ಸರ್ವಧರ್ಮಜ್ಞರಾದ ಅವರಿಬ್ಬರು ಮುನಿಗಳೂ ಪರಮತೇಜಸ್ಸಿನಿಂದ ಉರಿಯುತ್ತಿದ್ದ ಎರಡು ಅಸ್ತ್ರಗಳ ಮಧ್ಯೆ ನಿಂತುಕೊಂಡರು.

10014014a ತದಂತರಮನಾಧೃಷ್ಯಾವುಪಗಮ್ಯ ಯಶಸ್ವಿನೌ|

10014014c ಆಸ್ತಾಮೃಷಿವರೌ ತತ್ರ ಜ್ವಲಿತಾವಿವ ಪಾವಕೌ||

ಇಬ್ಬರು ಯಶಸ್ವೀ ಋಷಿವರರೂ ಎರಡು ಮಹಾಸ್ತ್ರಗಳ ನಡುವೆ ಪ್ರಜ್ವಲಿಸುತ್ತಿರುವ ಅಗ್ನಿಗಳಂತೆ ಕಂಡರು.

10014015a ಪ್ರಾಣಭೃದ್ಭಿರನಾಧೃಷ್ಯೌ ದೇವದಾನವಸಂಮತೌ|

10014015c ಅಸ್ತ್ರತೇಜಃ ಶಮಯಿತುಂ ಲೋಕಾನಾಂ ಹಿತಕಾಮ್ಯಯಾ||

ಯಾವುದೇ ಪ್ರಾಣಿಗಳಿಂದಲು ಕೆಣಕಲು ಅಸಾಧ್ಯರಾಗಿದ್ದ, ದೇವದಾನವರಿಂದ ಗೌರವಿಸಲ್ಪಟ್ಟಿದ್ದ ಅವರಿಬ್ಬರೂ ಲೋಕಗಳ ಹಿತವನ್ನು ಬಯಸಿ ಅಸ್ತ್ರಗಳ ತೇಜಸ್ಸನ್ನು ತಣಿಸಲು ಬಂದಿದ್ದರು.

10014016 ಋಷೀ ಊಚತುಃ|

10014016a ನಾನಾಶಸ್ತ್ರವಿದಃ ಪೂರ್ವೇ ಯೇಽಪ್ಯತೀತಾ ಮಹಾರಥಾಃ|

10014016c ನೈತದಸ್ತ್ರಂ ಮನುಷ್ಯೇಷು ತೈಃ ಪ್ರಯುಕ್ತಂ ಕಥಂ ಚನ||

ಋಷಿಗಳು ಹೇಳಿದರು: “ಈ ಹಿಂದೆ ಆಗಿಹೋಗಿದ್ದ ನಾನಾಶಸ್ತ್ರಗಳನ್ನು ತಿಳಿದುಕೊಂಡಿದ್ದ ಮಹಾರಥರು ಈ ಅಸ್ತ್ರವನ್ನು ಮನುಷ್ಯರ ಮೇಲೆ ಎಂದೂ ಪ್ರಯೋಗಿಸಿರಲಿಲ್ಲ!””

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಅರ್ಜುನಾಸ್ತ್ರತ್ಯಾಗೇ ಚತುರ್ದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಅರ್ಜುನಾಸ್ತ್ರತ್ಯಾಗ ಎನ್ನುವ ಹದಿನಾಲ್ಕನೇ ಅಧ್ಯಾಯವು.

Comments are closed.