Sauptika Parva: Chapter 13

ಸೌಪ್ತಿಕಪರ್ವ: ಐಷೀಕ ಪರ್ವ

೧೩

ಭೀಮಸೇನ ಮತ್ತು ಅವನನ್ನು ಹಿಂಬಾಲಿಸಿ ಹೋದ ಕೃಷ್ಣ-ಅರ್ಜುನ-ಯುಧಿಷ್ಠಿರರು ಅಶ್ವತ್ಥಾಮನಿದ್ದಲ್ಲಿಗೆ ಹೋದುದು (೧-೧೨). ಆಯುಧಧಾರಿಗಳಾಗಿದ್ದ ಅವರನ್ನು ಕಂಡು ವ್ಯಾಸನೊಂದಿಗಿದ್ದ ಋಷಿಗಳ ಗುಂಪಿನಲ್ಲಿದ್ದ ಅಶ್ವತ್ಥಾಮನು ಜೊಂಡುಹುಲ್ಲಿಗೆ ಬ್ರಹ್ಮಶಿರಾಸ್ತ್ರವನ್ನು ಅಭಿಮಂತ್ರಿಸಿ “ಅಪಾಂಡವಾಯ” ಎಂದು ಹೇಳಿ ಪ್ರಯೋಗಿಸಿದುದು (೧೩-೨೦).

10013001 ವೈಶಂಪಾಯನ ಉವಾಚ|

10013001a ಏವಮುಕ್ತ್ವಾ ಯುಧಾಂ ಶ್ರೇಷ್ಠಃ ಸರ್ವಯಾದವನಂದನಃ|

10013001c ಸರ್ವಾಯುಧವರೋಪೇತಮಾರುರೋಹ ಮಹಾರಥಂ|

10013001e ಯುಕ್ತಂ ಪರಮಕಾಂಬೋಜೈಸ್ತುರಗೈರ್ಹೇಮಮಾಲಿಭಿಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಯೋದ್ಧರಲ್ಲಿ ಶ್ರೇಷ್ಠ ಸರ್ವಯಾದವ ನಂದನನು ಹೇಮಮಾಲೆಗಳಿಂದ ಅಲಂಕೃತಗೊಂಡಿದ್ದ ಪರಮ ಕಾಂಬೋಜದ ತುರಗಗಳನ್ನು ಕಟ್ಟಿದ್ದ, ಸರ್ವ ಶ್ರೇಷ್ಠ ಆಯುಧಗಳಿಂದ ಭರಿತವಾಗಿದ್ದ ಮಹಾರಥವನ್ನೇರಿದನು.

10013002a ಆದಿತ್ಯೋದಯವರ್ಣಸ್ಯ ಧುರಂ ರಥವರಸ್ಯ ತು|

10013002c ದಕ್ಷಿಣಾಮವಹತ್ಸೈನ್ಯಃ ಸುಗ್ರೀವಃ ಸವ್ಯತೋಽವಹತ್|

10013002e ಪಾರ್ಷ್ಣಿವಾಹೌ ತು ತಸ್ಯಾಸ್ತಾಂ ಮೇಘಪುಷ್ಪಬಲಾಹಕೌ||

ಉದಯಿಸುವ ಸೂರ್ಯನ ಎಣೆಗೆಂಪಿನ ಬಣ್ಣದ ಆ ಶ್ರೇಷ್ಠ ರಥದ ಬಲಭಾಗಕ್ಕೆ ಸೈನ್ಯವನ್ನು ಎಡಭಾಗಕ್ಕೆ ಸುಗ್ರೀವವನ್ನೂ ಕಟ್ಟಲಾಗಿತ್ತು. ಅವುಗಳ ಹಿಂದೆ ಮೇಘಪುಷ್ಪ ಮತ್ತು ಬಲಾಹಕಗಳನ್ನು ಕಟ್ಟಲಾಗಿತ್ತು.

10013003a ವಿಶ್ವಕರ್ಮಕೃತಾ ದಿವ್ಯಾ ನಾನಾರತ್ನವಿಭೂಷಿತಾ|

10013003c ಉಚ್ಚ್ರಿತೇವ ರಥೇ ಮಾಯಾ ಧ್ವಜಯಷ್ಟಿರದೃಶ್ಯತ||

ಆ ರಥದ ಮೇಲೆ ವಿಶ್ವಕರ್ಮನಿಂದ ನಿರ್ಮಿತವಾದ ನಾನಾರತ್ನವಿಭೂಷಿತ ದಿವ್ಯ ಮಾಯಾ ಧ್ವಜವು ಮೇಲೆದ್ದು ಕಾಣುತ್ತಿತ್ತು.

10013004a ವೈನತೇಯಃ ಸ್ಥಿತಸ್ತಸ್ಯಾಂ ಪ್ರಭಾಮಂಡಲರಶ್ಮಿವಾನ್|

10013004c ತಸ್ಯ ಸತ್ಯವತಃ ಕೇತುರ್ಭುಜಗಾರಿರದೃಶ್ಯತ||

ಆ ಧ್ವಜದಲ್ಲಿ ಪ್ರಭಾಮಂಡಲರಶ್ಮಿವಂತ, ಸರ್ಪಗಳ ಶತ್ರು ಸತ್ಯವತ ವೈನತೇಯನು ಪ್ರಕಾಶಿಸುತ್ತಿದ್ದನು.

10013005a ಅನ್ವಾರೋಹದ್ಧೃಷೀಕೇಶಃ ಕೇತುಃ ಸರ್ವಧನುಷ್ಮತಾಂ|

10013005c ಅರ್ಜುನಃ ಸತ್ಯಕರ್ಮಾ ಚ ಕುರುರಾಜೋ ಯುಧಿಷ್ಠಿರಃ||

ಸರ್ವಧನುಷ್ಮತರ ಕೇತುಪ್ರಾಯನಾದ ಹೃಷೀಕೇಶ, ಸತ್ಯಕರ್ಮಿ ಅರ್ಜುನ ಮತ್ತು ಕುರುರಾಜ ಯುಧಿಷ್ಠಿರರು ಆ ರಥವನ್ನೇರಿದರು.

10013006a ಅಶೋಭೇತಾಂ ಮಹಾತ್ಮಾನೌ ದಾಶಾರ್ಹಮಭಿತಃ ಸ್ಥಿತೌ|

10013006c ರಥಸ್ಥಂ ಶಾಂಙ್ರಧನ್ವಾನಮಶ್ವಿನಾವಿವ ವಾಸವಂ||

ರಥಸ್ಥನಾಗಿದ್ದ ಶಾಂಙ್ರಧನ್ವಿ ದಾಶಾರ್ಹನ ಎರಡೂ ಕಡೆಗಳಲ್ಲಿ ಕುಳಿತಿದ್ದ ಆ ಇಬ್ಬರು ಮಹಾತ್ಮರು ವಾಸವನ ಪಕ್ಕಗಳಲ್ಲಿದ್ದ ಅಶ್ವಿನೀ ಕುಮಾರರಂತೆ ತೋರಿದರು.

10013007a ತಾವುಪಾರೋಪ್ಯ ದಾಶಾರ್ಹಃ ಸ್ಯಂದನಂ ಲೋಕಪೂಜಿತಂ|

10013007c ಪ್ರತೋದೇನ ಜವೋಪೇತಾನ್ಪರಮಾಶ್ವಾನಚೋದಯತ್||

ಅವರಿಬ್ಬರನ್ನೂ ಕುಳ್ಳಿರಿಸಿಕೊಂಡು ದಾಶಾರ್ಹನು ಆ ಲೋಕಪೂಜಿತ ರಥಕ್ಕೆ ಹೂಡಿದ್ದ ವೇಗಶಾಲೀ ಶ್ರೇಷ್ಠ ಕುದುರೆಗಳನ್ನು ತಿವಿದು ಪ್ರಚೋದಿಸಿದನು.

10013008a ತೇ ಹಯಾಃ ಸಹಸೋತ್ಪೇತುರ್ಗೃಹೀತ್ವಾ ಸ್ಯಂದನೋತ್ತಮಂ|

10013008c ಆಸ್ಥಿತಂ ಪಾಂಡವೇಯಾಭ್ಯಾಂ ಯದೂನಾಮೃಷಭೇಣ ಚ||

ಪಾಂಡವರಿಬ್ಬರು ಮತ್ತು ಯದುಗಳ ಋಷಭನು ಕುಳಿತಿದ್ದ ಆ ಉತ್ತಮ ಸ್ಯಂದನವನ್ನು ಕುದುರೆಗಳು ಎಳೆಯುತ್ತಾ ಹಾರಿ-ಕುಪ್ಪಳಿಸಿ ಓಡತೊಡಗಿದವು.

10013009a ವಹತಾಂ ಶಾಂಙ್ರಧನ್ವಾನಮಶ್ವಾನಾಂ ಶೀಘ್ರಗಾಮಿನಾಂ|

10013009c ಪ್ರಾದುರಾಸೀನ್ಮಹಾನ್ ಶಬ್ದಃ ಪಕ್ಷಿಣಾಂ ಪತತಾಮಿವ||

ಶಾಂಙ್ರಧನ್ವಿಯನ್ನು ಎತ್ತಿಕೊಂಡು ಹೋಗುತ್ತಿದ್ದ ಆ ಶೀಘ್ರಗಾಮೀ ಕುದುರೆಗಳ ಖುರಪುಟಗಳಿಂದ ಪರ್ವತಗಳು ಬೀಳುತ್ತಿರುವವೋ ಎನ್ನುವಂತೆ ಮಹಾಶಬ್ಧವುಂಟಾಯಿತು.

10013010a ತೇ ಸಮಾರ್ಚನ್ನರವ್ಯಾಘ್ರಾಃ ಕ್ಷಣೇನ ಭರತರ್ಷಭ|

10013010c ಭೀಮಸೇನಂ ಮಹೇಷ್ವಾಸಂ ಸಮನುದ್ರುತ್ಯ ವೇಗಿತಾಃ||

ಭರತರ್ಷಭ! ಆ ನರವ್ಯಾಘ್ರರು ವೇಗದಿಂದ ಹೋಗಿ ಕ್ಷಣದಲ್ಲಿಯೇ ಮಹೇಷ್ವಾಸ ಭೀಮಸೇನನನ್ನು ಸಮೀಪಿಸಿದರು.

10013011a ಕ್ರೋಧದೀಪ್ತಂ ತು ಕೌಂತೇಯಂ ದ್ವಿಷದರ್ಥೇ ಸಮುದ್ಯತಂ|

10013011c ನಾಶಕ್ನುವನ್ವಾರಯಿತುಂ ಸಮೇತ್ಯಾಪಿ ಮಹಾರಥಾಃ||

ಕೋಪದಿಂದ ಉರಿಯುತ್ತಾ ಶತ್ರುವಿಗಾಗಿ ಮುನ್ನುಗ್ಗುತ್ತಿದ್ದ ಕೌಂತೇಯನನ್ನು ತಡೆಯಲು ಆ ಮಹಾರಥರಿಗೆ ಸಾಧ್ಯವಾಗಲಿಲ್ಲ.

10013012a ಸ ತೇಷಾಂ ಪ್ರೇಕ್ಷತಾಮೇವ ಶ್ರೀಮತಾಂ ದೃಢಧನ್ವಿನಾಂ|

10013012c ಯಯೌ ಭಾಗಿರಥೀಕಚ್ಚಂ ಹರಿಭಿರ್ಭೃಶವೇಗಿತೈಃ|

10013012e ಯತ್ರ ಸ್ಮ ಶ್ರೂಯತೇ ದ್ರೌಣಿಃ ಪುತ್ರಹಂತಾ ಮಹಾತ್ಮನಾಂ||

ಶ್ರೀಮಂತ ದೃಢಧನ್ವಿ ಕೃಷ್ಣ-ಅರ್ಜುನ-ಯುಧಿಷ್ಠಿರರು ನೋಡುತ್ತಿದ್ದಂತೆಯೇ ಭೀಮಸೇನನು ಅತ್ಯಂತವೇಗವಾಗಿ ಕುದುರೆಗಳನ್ನು ಓಡಿಸುತ್ತಾ ಮಹಾತ್ಮರ ಪುತ್ರಹಂತಕ ದ್ರೌಣಿಯು ಎಲ್ಲಿ ಇರುವನೆಂದು ಕೇಳಿದ್ದನೋ ಭಾಗೀರಥೀತೀರವನ್ನು ತಲುಪಿದನು.

10013013a ಸ ದದರ್ಶ ಮಹಾತ್ಮಾನಮುದಕಾಂತೇ ಯಶಸ್ವಿನಂ|

10013013c ಕೃಷ್ಣದ್ವೈಪಾಯನಂ ವ್ಯಾಸಮಾಸೀನಮೃಷಿಭಿಃ ಸಹ||

ಅಲ್ಲಿ ನದೀತೀರದಲ್ಲಿ ಋಷಿಗಳೊಂದಿಗೆ ಕುಳಿತಿದ್ದ ಯಶಸ್ವಿ, ಮಹಾತ್ಮ, ಕೃಷ್ಣದ್ವೈಪಾಯನ ವ್ಯಾಸನನ್ನು ಕಂಡನು.

10013014a ತಂ ಚೈವ ಕ್ರೂರಕರ್ಮಾಣಂ ಘೃತಾಕ್ತಂ ಕುಶಚೀರಿಣಂ|

10013014c ರಜಸಾ ಧ್ವಸ್ತಕೇಶಾಂತಂ ದದರ್ಶ ದ್ರೌಣಿಮಂತಿಕೇ||

ಅಲ್ಲೇ ಹತ್ತಿರದಲ್ಲಿ ತುಪ್ಪವನ್ನು ಬಳಿದುಕೊಂಡಿದ್ದ, ಕುಶಚೀರಣವನ್ನು ಧರಿಸಿದ್ದ, ಧೂಳಿನಿಂದ ತುಂಬಿಕೊಂಡಿದ್ದ, ಕೆದರಿದ ಕೂದಲಿದ್ದ ಕ್ರೂರಕರ್ಮಿ ದ್ರೌಣಿಯನ್ನು ನೋಡಿದನು.

10013015a ತಮಭ್ಯಧಾವತ್ಕೌಂತೇಯಃ ಪ್ರಗೃಹ್ಯ ಸಶರಂ ಧನುಃ|

10013015c ಭೀಮಸೇನೋ ಮಹಾಬಾಹುಸ್ತಿಷ್ಠ ತಿಷ್ಠೇತಿ ಚಾಬ್ರವೀತ್||

ಶರವನ್ನು ಹೂಡಿದ ಧನುಸ್ಸನ್ನು ಹಿಡಿದು ಮಹಾಬಾಹು ಕೌಂತೇಯ ಭೀಮಸೇನನು ಅವನನ್ನು ಎದುರಿಸಿ ನಿಲ್ಲು ನಿಲ್ಲೆಂದು ಕೂಗಿ ಹೇಳಿದನು.

10013016a ಸ ದೃಷ್ಟ್ವಾ ಭೀಮಧನ್ವಾನಂ ಪ್ರಗೃಹೀತಶರಾಸನಂ|

10013016c ಭ್ರಾತರೌ ಪೃಷ್ಠತಶ್ಚಾಸ್ಯ ಜನಾರ್ದನರಥೇ ಸ್ಥಿತೌ|

10013016e ವ್ಯಥಿತಾತ್ಮಾಭವದ್ದ್ರೌಣಿಃ ಪ್ರಾಪ್ತಂ ಚೇದಮಮನ್ಯತ||

ಬಾಣವನ್ನು ಹೂಡಿ ಧನುಸ್ಸನ್ನು ಹಿಡಿದಿದ್ದ ಭೀಮನನ್ನು ಮತ್ತು ಹಿಂದೆ ರಥದಲ್ಲಿ ನಿಂತಿದ್ದ ಸಹೋದರರೀರ್ವರು ಮತ್ತು ಜನಾರ್ದನರನ್ನು ನೋಡಿ ದ್ರೌಣಿಯು ವ್ಯಥಿತಾತ್ಮನಾಗಿ ಕಾಲವು ಸನ್ನಿಹಿತಯಿತೆಂದು ಭಾವಿಸಿದನು.

10013017a ಸ ತದ್ದಿವ್ಯಮದೀನಾತ್ಮಾ ಪರಮಾಸ್ತ್ರಮಚಿಂತಯತ್|

10013017c ಜಗ್ರಾಹ ಚ ಸ ಚೈಷೀಕಾಂ ದ್ರೌಣಿಃ ಸವ್ಯೇನ ಪಾಣಿನಾ|

10013017e ಸ ತಾಮಾಪದಮಾಸಾದ್ಯ ದಿವ್ಯಮಸ್ತ್ರಮುದೀರಯತ್||

ಅದೀನಾತ್ಮ ದ್ರೌಣಿಯು ದಿವ್ಯ ಪರಮಾಸ್ತ್ರವನ್ನು ಧ್ಯಾನಿಸಿ, ಎಡಗೈಯಿಂದ ಜೊಂಡುಹುಲ್ಲನ್ನು ಹಿಡಿದುಕೊಂಡು ಅದರ ಮೇಲೆ ದಿವ್ಯಾಸ್ತ್ರವನ್ನು ಮಂತ್ರಿಸಿ ಪ್ರಯೋಗಿಸಿದನು.

10013018a ಅಮೃಷ್ಯಮಾಣಸ್ತಾನ್ ಶೂರಾನ್ದಿವ್ಯಾಯುಧಧರಾನ್ ಸ್ಥಿತಾನ್|

10013018c ಅಪಾಂಡವಾಯೇತಿ ರುಷಾ ವ್ಯಸೃಜದ್ದಾರುಣಂ ವಚಃ||

ದಿವ್ಯಾಯುಧಧಾರಿಗಳಾಗಿ ನಿಂತಿರುವ ಆ ಶೂರರನ್ನು ಸಹಿಸಿಕೊಳ್ಳಲಾರದೇ ಅಶ್ವತ್ಥಾಮನು ರೋಷದಿಂದ “ಅಪಾಂಡವಾಯ!” ಎಂಬ ದಾರುಣ ವಚನವನ್ನು ಹೇಳಿ ಅದನ್ನು ಪ್ರಯೋಗಿಸಿದನು.

10013019a ಇತ್ಯುಕ್ತ್ವಾ ರಾಜಶಾರ್ದೂಲ ದ್ರೋಣಪುತ್ರಃ ಪ್ರತಾಪವಾನ್|

10013019c ಸರ್ವಲೋಕಪ್ರಮೋಹಾರ್ಥಂ ತದಸ್ತ್ರಂ ಪ್ರಮುಮೋಚ ಹ||

ರಾಜಶಾರ್ದೂಲ! ಹೀಗೆ ಹೇಳಿ ಪ್ರತಾಪವಾನ್ ದ್ರೋಣಪುತ್ರನು ಸರ್ವಲೋಕವನ್ನು ಪ್ರಮೋಹಗೊಳಿಸಲು ಅಸ್ತ್ರವನ್ನು ಪ್ರಯೋಗಿಸಿದನು.

10013020a ತತಸ್ತಸ್ಯಾಮಿಷೀಕಾಯಾಂ ಪಾವಕಃ ಸಮಜಾಯತ|

10013020c ಪ್ರಧಕ್ಷ್ಯನ್ನಿವ ಲೋಕಾಂಸ್ತ್ರೀನ್ಕಾಲಾಂತಕಯಮೋಪಮಃ||

ಆಗ ಆ ಜೊಂಡುಹುಲ್ಲಿನಲ್ಲಿ ಅಗ್ನಿಯು ಹುಟ್ಟಿಕೊಂಡಿತು. ಕಾಲಾಂತಕಯಮನಿಗೆ ಸಮಾನ ಆ ಅಗ್ನಿಯು ಮೂರು ಲೋಕಗಳನ್ನೂ ದಹಿಸಿಬಿಡುವುದೋ ಎಂಬಂತೆ ಕಾಣುತ್ತಿತ್ತು.”

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ಬ್ರಹ್ಮಶಿರೋಸ್ತ್ರತ್ಯಾಗೇ ತ್ರಯೋದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ಬ್ರಹ್ಮಶಿರೋಸ್ತ್ರತ್ಯಾಗ ಎನ್ನುವ ಹದಿಮೂರನೇ ಅಧ್ಯಾಯವು.

Comments are closed.